ಸೊಸೆ(ತಂದ) ಸೌಭಾಗ್ಯ -ಮುಂದುವರೆದ ಭಾಗ

ಸೊಸೆ(ತಂದ) ಸೌಭಾಗ್ಯ -ಮುಂದುವರೆದ ಭಾಗ

ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ನರಸಿಂಹ ನಿಧಾನವಾಗಿ ಅಂದಿನ ದಿನವನ್ನು ನೆನಪಿಸಿಕೊಂಡ...

ಹೌದು ಆದಿನ ಸಂಜೆ ಚಂದ್ರಶೇಖರನೊಂದಿಗೆ ಗಣಪತಿ ದೇವಸ್ಥಾನದ ಬಳಿ ಬಹಳ ಹೊತ್ತು ಮಾತನಾಡಿ ಮನೆಗೆ ಬಂದೆ. ತೋಟದಲ್ಲಿ ಮಾಮೂಲಿಗಿಂತ ಸ್ವಲ್ಪ ಹೆಚ್ಚಿನ ಓಡಾಟವೇ ಇದ್ದಿದ್ದರಿಂದಲೋ ಏನೋ ಕಣ್ಣುಗಳು ಎಳೆದುಕೊಂಡು ಹೋಗುತ್ತಿದ್ದವು. ಮಾಮೂಲಾಗಿ ಮಲಗುವ ಮುಂಚೆ ಯಾವುದಾದ್ರೂ ಕತೆ ಪುಸ್ತಕವನ್ನು ತಿರುವಿ ಹಾಕಿ ಮಲಗುತ್ತಿದ್ದವನು ಅಂದು ಆಯಾಸವೆನಿಸಿ ೯ ವರೆಗೆಲ್ಲಾ ಮಲಗಲು ಮುಂದಾದೆ. ಸೌಭಾಗ್ಯ ಹಾಲು ತಂದು ಕೊಟ್ಟಳು...., ಹೌದು ಆ ಹಾಲು ಕುಡಿದ ೫-೧೦ ನಿಮಿಷದ ಒಳಗೆ ನನಗೆ ಏನೋ ಒಂದು ತರ ಮುಂಪುರೆನಿಸಿತು.... ಆಮೇಲೆ ಸ್ವಲ್ಪಹೊತ್ತಿನಲ್ಲೆ ನನ್ನ ಬಲಗೈ ತೋಳಿಗೆ ಎರಡು ಸಾರಿ ಏನೋ ಚುಚ್ಚಿದ ಅನುಭವ.... ಹೌದು ಮುಂದೇನಾಯಿತೋ ನನಗೆ ತಿಳಿಯದು, ನಂತರ ಎಚ್ಚರವಾದಗ ಛಾಯಾ ಆಸ್ಪತ್ರೆಯಲ್ಲಿದ್ದೆ. ತನ್ನ ಬಲಗೈ ತೋಳನ್ನು ಸವರಿ ನೋಡಿಕೊಂಡ ನರಸಿಂಹ. ಚುಚ್ಚಿದ ಗುರುತಿನ ಜೊತೆಗೆ ಸ್ವಲ್ಪ ನೋವಿನ ಅನುಭವವೂ ಆಯಿತು.

ಆಚೆ ಕಡೆ ಚಂದ್ರಶೇಖರ ಅಮ್ಮ ಅಪ್ಪನೊಂದಿಗೆ ಮಾತನಾಡುವುದು ಕೇಳಿಸಿತು. ಮಂಚದಿಂದ ಇಳಿದು ಹೊರಬಂದ ನರಸಿಂಹ.

‘ಏಕೆ ಓಡಾಡ್ತಿಯ ನರಸಿಂಹ ಸ್ವಲ್ಪ ವಿಶ್ರಾಂತಿ ತಗೊ‘ - ‘ಇಲ್ಲಮ್ಮ ಈಗ ಸ್ವಲ್ಪ ಪರ್ವಾಗಿಲ್ಲ, ಅಂದಹಾಗೆ ಸೌಭಾಗ್ಯ ಎಲ್ಲಿ ಅವಳು ಏಕೆ ನನ್ನ ವಿಚಾರ್ಸ್ಲಿಕ್ಕೆ ಒಮ್ಮೆಯೂ ಬಂದಿಲ್ಲ‘. ನರಸಿಂಹನ ಅಪ್ಪ ಅಮ್ಮ ಮುಖ ಮುಖ ನೋಡ್ಕೊಂಡ್ರು. ‘ಅಪ್ಪ ನಂಗೆ ಗೊತ್ತು ಏನೋ ವ್ಯತ್ಯಾಸವಾಗಿದೆ ಅದೇನೂ ಅಂತ ಸರಿಯಾಗಿ ಹೇಳಿ? ಏ ಚಂದ್ರ ನೀನಾದ್ರೂ ಹೇಳೊ‘ - ಚಂದ್ರಶೇಖರ ತನ್ನ ದೊಡ್ಡಪ್ಪನ ಕಡೆ ನೋಡಿದ ಏನು ಮಾಡಲಿ ಎನ್ನುವಂತಿತ್ತು ಅವನ ನೋಟ. ಹೇಳು ಎಂದು ಕಣ್ಣಿನಲ್ಲೇ ಸನ್ನೆ ಮಾಡಿದರು ಸುಬ್ಬರಾಯ ಭಟ್ಟರು. ‘ ಬಾ ಕೂತ್ಕೋ ನರಸಿಂಹ ಅದು ಏನಾಯ್ತು ಅಂದ್ರೆ ಅದೆ ಆವತ್ತು ನಿನ್ನ ಹಾಸ್ಪೆಟಲ್ಗೆ ಕರ್ಕೊಂಡು ಹೋದ್ವಲ್ಲ, ಬೆಳಿಗ್ಗೇನೇ ದೊಡ್ಡಮ್ಮ ಫ಼ೋನ್ ಮಾಡಿ ತಕ್ಷಣ ಹೊರಟು ಬಾ ಅಂದ್ರು, ಇಲ್ಲಿ ಬಂದ್ರೆ ನಿಂಗೆ ಈ ಕಡೆ ಪ್ರಗ್ನೇನೇ ಇರ್ಲಿಲ್ಲ, ತಕ್ಷಣ ಆಸ್ಪತ್ರೆಗೆ ಕರ್ಕೊಂಡು ಹೋಗಿ ಅಡ್ಮಿಟ್ ಮಾಡಿದ್ವು. ಡಾಕ್ಟರ್ ಇದ್ಗೊಂಡು ಹೆವಿ ಸ್ಲೀಪಿಂಗ್ ಡೋಸ್ ಇಂಜೆಕ್ಟ್ ಆಗಿದೆ ಅಂದ್ರು. ಜೊತೆಗೆ ನಿನ್ನ ಹೆಂಡ್ತಿ ಅವತ್ತಿನಿಂದ ಕಾಣಿಸ್ತಿಲ್ಲ ಕಣೊ‘ - ಅಂದ ಚಂದ್ರಶೇಖರ. ‘ಅದರ ಜೊತೆಗೆ ಇನ್ನೊಂದು ವಿಷ್ಯ ಮನೇಲಿದ್ದ ಮದುವೆಗೆ ಮಾಡಿಸಿದ್ದ ವಡವೆಗಳು, ನಮ್ಮಮನ ಮನೆಯಿಂದ ನನಗೆ ಕೊಟ್ಟಿದ್ದ ಹಳೆ ಕಾಲದ ಎಲ್ಲಾ ವಡವೆಗಳೂ ಕಾಣಿಸ್ತಿಲ್ಲ ನರಸಿಂಹ‘ - ಭಟ್ಟರು ಹೆಂಡತಿಯನ್ನು ಸೂಕ್ಷ್ಮವಾಗಿ ನೋಡಿದರು. ಎಲ್ಲಾ ಈಗ್ಲೇ ಯಾಕೆ ಹೇಳ್ತೀಯ ಅನ್ನುವಂತಿತ್ತು ಅವರ ನೋಟ.

ಏನೂ ಮಾತನಾಡಲಾಗದ ಪರಿಸ್ಥಿತಿಯಲ್ಲಿದ್ದ ನರಸಿಂಹ ಭಟ್ಟ. ಮಮತಾಮಯಿ ಮಾತಾ ಪಿತೃಗಳಿಗೆ ನನ್ನವರು ಎನಿಸಿಕೊಂಡವರಿಂದ ಹೀಗಾಯಿತಲ್ಲ ಎಂಬ ವ್ಯಥೆ ಒಂದೆಡೆ, ಮುಗ್ದ ಸೌಂದರ್ಯದ ಜೊತೆ ಎಂತಹ ಅಮಾನವೀಯ ನಡವಳಿಕೆ,ಎಂಬ ವೇದನೆ, ಹಾಗೆಯೆ ಅದನ್ನು  ಬಿಡಬಾರದು ಎಂಬ ಕ್ರೋಧ, ಮತ್ತೊಂದೆಡೆ.

‘ಈಗಾಗ್ಲೆ ೪ ದಿನ ಆಯ್ತು ಅವಳ ಬಗ್ಗೆ ಸುಳಿವಿಲ್ಲ ಅನ್ನುತ್ತಿದ್ದೀರ, ಇಲ್ಲ ಏನಾದರೂ ತೊಂದರೆ ಇದ್ದರೆ ಮನೆಗ ಫ಼ೋನ್ ಆದ್ರೂ ಬರ್ಬೇಕಿತ್ತು, ಅದೂ ಇಲ್ಲ ಹ್ಯಾಗೆ ಮಾಡೋದು, ಒಂದು ಕೆಲಸ ಮಾಡ್ತಿನಿ ನಾನು ಬೆಂಗಳೂರಿಗೆ ಹೋಗಿ ಅವರ ಅಣ್ಣನನ್ನು ಭೇಟಿ ಮಾಡಿ ವಿಚಾರ್ಸ್ತೀನಿ‘ - ಅಂದ ನರಸಿಂಹ. ‘ನಾನು ಹೊಡ್ಕೊಂಡೆ ಇವರ ಕೈಲಿ, ನೆಲ ಸೋಸಿ ಜಲ ತೆಗಿಬೇಕು, ಕುಲ ಸೋಸಿ ಹೆಣ್ಣು ತರಬೇಕು, ಸರಿಯಾಗಿ ನೋಡಿ ಮಾಡಿ ಹೆಣ್ಣು ತರೋಣ, ನಂಗೆ ಏನೋ ಅನುಮಾನ ಅಂತ, ನನ್ನ ಮಾತಿಗೆ ಎಲ್ಲಿದೆ ಬೆಲೆ‘ - ‘ಲೇ ನೀನು ಸುಮ್ಮನಿರೆ ಏನೂ ಆಗೋಲ್ಲ, ಎಲ್ಲವುದನ್ನು ಅನುಮಾನದ ದೃಷ್ಟೀಲಿ ನೋಡ್ಬೇಡ ನನ್ನ ಮನಸ್ಸು ಈಗಲೂ ದೃಡವಾಗಿ ಹೇಳ್ತಿದೆ, ಮನೆ ಸೊಸೆ ಏನೋ ತೊಂದ್ರೆಲಿದಾಳೆ ಅಂತ‘- ‘ಹೌದು ಏನೂ ಆಗಿಲ್ಲ, ಈಗ ಆಗಿರೋದು ಸಾಲ್ದಾ, ನಮ್ಮ ಮಗನನ್ನು ನಿದ್ರೆಗೆ ತಳ್ಳಿ ಇರೊಬರೊದ್ನೆಲ್ಲಾ ಎತ್ಕೊಂಡು ಹೋಗಿದಾಳೆ, ಅವ್ರಣ್ಣನ್ನ ನೋಡ್ದಾಗಲೇ ಹೇಳ್ದೆ ಅವನ ನಯ ವಿನಯ ನೋಡಿ ಅತಿ ವಿನಯಮ್ ದೂರ್ತ ಲಕ್ಷಣಂ ಅಂತ. ಅಣ್ಣ ತಂಗಿ ಇಬ್ರೂ ಸರ್ಯಾಗಿದಾರೆ.‘ - ‘ಬೇಡ ಲಕ್ಷ್ಮೀ ನಂಬಿಕೆ ಭರವಸೆ ಹಾಗೆಲ್ಲಾ ಕಳ್ಕೋಬಾರ್ದು‘- ‘ಏನೇ ಹೇಳಿ ಯಾವುದನ್ನೂ ನಾನು ಅಷ್ಟು ಬೇಗ ನಂಬಲು ಸಿದ್ದಳಿಲ್ಲ, ಒಳ್ಳೇದಾಗ್ಲಿ ಅದು ಬೇರೆ ವಿಷಯ‘- ಅಂದ್ರು ಮನೆಯೊಡತಿ. - ‘ನೀನು ಬಿಡು ಮನೆ ಒಳಗಡೆ ಓಡಾಡೊ ಇರುವೇನ ತೋರ್ಸಿ ನೋಡ್ರಿ ಹೇಗೆ ಆ ಕಡೆ ಈ ಕಡೆ ನೋಡ್ಕೋಂಡು ಒಳ್ಳೆ ಕಳ್ಳ ಬಂದಹಾಗೆ ಬರ್ತಿದೆ ಅಂತ ಅನುಮಾನ ಪಡ್ತಿಯ. ಸರಿ ಅದು ಹಾಗಿರ್ಲಿ, ನರಸಿಂಹ ನೀನು ಚಂದ್ರುನ ಕರ್ಕೋಂಡು ಬೆಂಗ್ಳೂರ್ಗೆ ಹೊರಡು, ನಾನು ಇಲ್ಲಿ ಈ ವಿಷಯದ ಬಗ್ಗೆ ಏನ್ಮಾಡ್ಬೇಕೊ ಅದನ್ನ ನೋಡ್ಕೋತೀನಿ‘ - ಅಂದ್ರು ಸುಬ್ಬರಾಯ ಭಟ್ರು. -  ‘ಇಲ್ಲಮ್ಮ ನನಗೂ ಅಪ್ಪ ಹೇಳೋದು ಸರಿ ಅನ್ಸುತ್ತೆ, ಏಕೇಂದ್ರೆ ಈಗ ಒಂದು ೧೫ ದಿನದಿಂದ ಸೌಭಾಗ್ಯ ಸ್ವಲ್ಪ ಸಪ್ಪಗೆ ಇದ್ಲು, ಮೊದಲೆ ಮಾತು ಕಡ್ಮೆ, ಇನ್ನೂ ಹೊಂದ್ಕೋಬೇಕೇನೊ ಅಂತ ಅನ್ಕೋಂಡೆ, ಜೊತೆಗೆ ನಾನು ಏಕೆ ಹಿಗ್ಗಿದ್ದೀಯ ಅಂತ ಕೇಳಿದ್ರೂ ಏನಿಲ್ಲ ಬಿಡಿ ಅಂತ ಕಣ್ಣೀರು ಹಾಕಿದ್ಲು ಅಷ್ಟೆ‘. ಅಂದ ನರಸಿಂಹ. ‘ಹೌದಾ ನೀನು ನನ್ನ ಗಮನಕ್ಕೆ ಯಾಕೆ ತರಲಿಲ್ಲ, ಛೇ.. ಛೇ.. ಎಂಥ ಕೆಲ್ಸ ಮಾಡ್ಬಿಟ್ಟೆ ನರಸಿಂಹ‘ - ‘ಅವಳ ಬಗ್ಗೆ ಈಗ ಕೆಲವ ಕ್ಷಣಗಳ ಹಿಂದೆ ಮನಸ್ಸಿನಲ್ಲಿ ನಾನು ಅನುಮಾನ ಪಟ್ಟೆ, ಯಾವುದೂ ಸರಿಯಾಗಿ ತಿಳಿಯದೆ ಅನುಮಾನ ಪಡಬಾರದು ಎಂಬ ನಿಮ್ಮ ತತ್ವ ಸರಿ ಅನ್ನಿಸುತ್ತದೆ ಅಪ್ಪ, ಅದೇ ರೀತಿ ಯಾವುದನ್ನೂ ಅತಿ ಬೇಗ ನಂಬಲೂಬಾರದು. ಇರಲಿ ದೇವರಮೇಲೆ ನಂಬಿಕೆ ಇಟ್ಟು ನಮ್ಮ ಪ್ರಯತ್ನ ನಾವು ಮಾಡೋಣ‘ - ಅಂದ ನರಸಿಂಹ. ‘ಇದು ಸರಿಯಾದ ಯೋಚನೆ, ಸರಿ ಇನ್ನು ನೀವು ಬೆಂಗಳೂರಿಗೆ ಹೊರಡುವ ಸಿದ್ದತೆ ಮಾಡ್ಕೊಳಿ, ಜೋಪಾನ ಯಾವುದಕ್ಕೂ ಮನೆಗೆ ಫ಼ೋನ ಮಾಡಿ ವಿಷಯ ತಿಳಿಸ್ತಿರಿ. ಲಕ್ಷ್ಮೀ,  ಬೆಳೆಗ್ಗೆ ಮುಂಚೇನೆ ಎದ್ದು ನಾನು ಮನೆ ದೇವರು ನರಸಿಂಹ ದೇವರ ಪೂಜೆಗೆ ಕೂತ್ಕೋತೀನಿ ಯಾವುದೇ ವಿಘ್ನ ಬರದಹಾಗೆ ನೋಡ್ಕೋಳ್ಳೊಡೂ ನಿನ್ನ ಜವಾಬ್ದಾರಿ. ಹಾಗೆಯೆ ಇನ್ನೊಂದು ವಿಷಯ ಈ ವಿಚಾರ ನಮ್ಮ ನಮ್ಮಲ್ಲೇ ಇರಲಿ, ಊರಲ್ಲಿ ಪ್ರಚಾರವಾಗದ ಹಾಗೆ ನೋಡ್ಕೋಬೇಕು, ನಿಮ್ಮ ಮನೇಲೂ ಸೂಕ್ಷ್ಮವಾಗಿ ತಿಳಿಸಪ್ಪ ಚಂದ್ರು, ನಾನು ನಿಮ್ಮಪ್ಪನ ಕೈಲಿ ಆಗ್ಲೇ ಮಾತಾನಾಡಿದ್ದೇನೆ‘ - ಅಂದ್ರು ಭಟ್ರು.

ಬೆಳಿಗ್ಗೆ ಬೇಗನೆದ್ದು ನರಸಿಂಹ ಮತ್ತು ಚಂದ್ರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರೆ, ಸುಬ್ಬರಾಯ ಭಟ್ರು ತಮ್ಮ ಪೂಜಾ ಕೈಕಾರ್ಯದಲ್ಲಿ ತೊಡಗಿಕೊಂಡರು.

.........ಕಥೆ ವೇಗಕ್ಕೆ ಸಿಲುಕಿ ಓಡುತ್ತಿದೆ ಅಂತ ನಾನು ಅನ್ಕೋಂಡ್ರೆ ಇಲ್ಲಿ ನಮ್ಮ ಬಾಸ್ ನನ್ನ ಕರೀತಾ ಇದಾರೆ ಅಂತ ಫ಼ೋನ್ ಬಂದಿದೆ..... ಅಲ್ಲಿಗೆ ಹೋಗಿ ಅವರಿಗೆ ಹೇಳ್ಬೇಕಾದ ಕಥೆ ಹೇಳಿ ಮತ್ತೆ ಬರ್ತಿನಿ ಆಯ್ತಾ......

............ಮುಂದುವರೆಯುವುದು    


 

Rating
No votes yet

Comments