ಸೊಸೆ (ತಂದ) ಸೌಭಾಗ್ಯ

ಸೊಸೆ (ತಂದ) ಸೌಭಾಗ್ಯ

ಮನೆಯ ಮುಂದೆ ಅಂಗಳದಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತು, ಬೆಳಗಿನ ಸೂರ್ಯನ ಹಿತವಾದ ಬಿಸಿಯನ್ನು ಅನುಭವಿಸುವುದೆಂದರೆ, ಅವರಿಗೆ ಸಂತೋಷ ತರುವ ನಿತ್ಯ ಕಾಯಕದಲ್ಲಿ ಹೆಚ್ಚು ಸಂತೋಷ ಕೊಡುವ ಕಾಯಕ, ಹಾಗಾಗಿ ಈ ದಿನವೂ ಮನೆಯಮುಂದೆ ನೆಮ್ಮದಿಯಾಗಿ ಕುಳಿತು ದಿನ ಪತ್ರಿಕೆಯನ್ನು ತಿರುವಿ ಹಾಕುತ್ತಿದ್ದಾರೆ ಸುಬ್ಬರಾಯ ಭಟ್ಟರು. ನಿಧಾನವಾಗಿ ಪತ್ರಿಕೆಯನ್ನು ಗ್ರಹಿಸುತ್ತಿದ್ದರೂ ಅವರ ಮನಸ್ಸು ಮಾತ್ರ ಆರು ತಿಂಗಳ ಹಿಂದಿನ ದಿನಗಳನ್ನು ಮೆಲುಕು ಹಾಕುತ್ತಿದೆ.

ಚೆನ್ನಾಗಿ ನೆನಪಿದೆ ಭಟ್ಟರಿಗೆ, ೩೧ ವರ್ಷವಾಯ್ತು ಇರುವ ಒಬ್ಬ ಮಗನಿಗೆ, ಆದರೂ ಇನ್ನು ಹೆಣ್ಣು ಸಿಕ್ಕಲಿಲ್ಲವಲ್ಲ ಎಂಬ ಕೊರಗಿನ ಆ ದಿನಗಳು. ಬೆಂಗಳೂರಿನಲ್ಲಿ ತಮ್ಮ ಸ್ನೇಹಿತನ ಮಗನ ಮದುವೆಗೆಂದು ಹೋದಾಗ ಅಲ್ಲಿ ಪರಿಚಯವಾಯ್ತು ಮದುವೆ ಭ್ರೋಕರ್ ಎಂದು ಪರಿಚಯ ಮಾಡಿಕೊಂಡ ವರದರಾಜನದು.

ಮದುವೆ ಮುಗಿಸಿ ಊರಿಗೆ ವಾಪಸ್ಸಾದ ಭಟ್ಟರಿಗೆ ಎರಡು ದಿನದ ನಂತರ ಮನೆಯ ದೂರವಾಣಿಗೆ ಕರೆ ಬಂತು. ‘ಭಟ್ಟರೆ ನಿಮ್ಮ ಹುಡಗನಿಗೆ ಹೆಣ್ಣು ನೋಡ್ತಾ ಇದ್ರಲ್ಲ, ಇಲ್ಲಿ ಹನುಮಂತ ನಗರದಲ್ಲಿ ಒಂದು ಪರಿಚಯದ ಹುಡುಗಿ ಸಿಕ್ಕಿದೆ, ಆದ್ರೆ ಅವರು ಅಂಥ
ಸ್ಥಿತಿವಂತರಲ್ಲ ಹುಡುಗಿಯ ಅಣ್ಣ ಯಾವುದೋ ಪ್ರೈವೇಟ್ ಕೆಲ್ಸ ಮಾಡ್ತಿದ್ದಾನೆ, ಒಳ್ಳೆ ಜನ ನೀವು ಒಪ್ಪಿಗೆ ಕೊಟ್ರೆ ಮುಂದುವರಿಯತ್ತೇನೆ‘ -ಅಂದ ವರದರಾಜು. -‘ನೋಡಿ ವರದರಾಜ್ ಮತ್ತೊಮ್ಮೆ ಸರಿಯಾಗಿ ವಿಚಾರಿಸಿ ಫೋನ್ ಮಾಡಿ ಅಷ್ಟರಲ್ಲಿ ನಮ್ಮ ಮನೆಯಲ್ಲೂ ನಾನು ಮಾತನಾಡುತ್ತೇನೆ, ಜೊತೆಗೆ ಬೆಂಗಳೂರಿನ ಹುಡುಗಿ ಇಲ್ಲಿ ಮಲೆನಾಡಿನ ನಮ್ಮ ಹಳ್ಳಿಯ ವಾತಾವರಣಕ್ಕೆ ಒಗ್ಗುತ್ತಾಳಾ? ಹೇಗೆ.. ಅವರ ಅಣ್ಣನನ್ನೂ ಕೇಳಿನೋಡಿ, ಎಲ್ಲಾ ಸರಿ ಹೋದರೆ ಮುಂದುವರೆಯೋಣ ‘ - ಅಂದ್ರು ಸುಬ್ಬರಾಯ ಭಟ್ಟರು. ನಾನು ಮತ್ತೆ ಕರೆ ಮಾಡುತ್ತೀನಿ ಎಂದ ವರದರಾಜು ಫ಼ೋನ ಕಟ್ ಮಾಡಿದ.

‘ಲೇ ಲಕ್ಷ್ಮಿ ನೋಡೆ ಬೆಂಗಳೂರಿನ ಹುಡುಗಿ ಅಂತೆ, ಇನ್ನೊಮ್ಮೆ ವಿಚಾರಿಸಲಿಕ್ಕೆ ಹೇಳಿದ್ದೇನೆ, ಎಲ್ಲಾ ಸರಿಹೋದ್ರೆ ನಿಂಗೆ ಸೊಸೆ ಸಿಕ್ಕೋದು ಗ್ಯಾರಂಟಿ.‘ - ‘ಅಲ್ಲಾರಿ ಯಾವ ಹುಡ್ಗಿನೋ? ಹುಡುಕಿ ಕೋಡ್ತಾ ಇರೋರು ಯಾರೋ? ನೋಡಿ ಆಮೇಲೆ ಆತ್ರ ಬಿದ್ದು ಗೋತ್ರ ಕೆಡಿಸ್ಕೊಂಡ್ರು ಅನ್ನೋಹಾಗಾಗ್ಬಾರ್ದು. ಈಗಿನ ಕಾಲದಲ್ಲಿ ತುಂಬಾ ಕಷ್ಟ, ಇರೊ ಒಬ್ಬ ಮಗ, ನೋಡಿ ಕೇಳಿದ ಕಡೆ ತಂದ್ರೆ ಒಳ್ಳೇದು ಅನ್ಸುತ್ತೆ. ಇಷ್ಟು ದಿನಾನೆ ಕಾಯ್ದಿದ್ದೀವಿ ನಾಳೆ ಹೆಚ್ಚು ಕಡಿಮೆ ಆಗ್ಬಾರ್ದು ಅಲ್ವಾ‘- ‘ಅದಕ್ಕೆ ಅಲ್ವೆ ಮತ್ತೊಮ್ಮೆ ವಿಚಾರ್ಸ್ಲಿಕ್ಕೆ
ಹೇಳಿರೋದು. ಅದೂ ಅಲ್ದೆ ಆ ವರದರಾಜೂನೆ ನನ್ನ ಸ್ನೇಹಿತನ ಮಗನಿಗೂ ಹೆಣ್ಣು ಹುಡುಕಿ ಕೊಟ್ಟಿದ್ದಂತೆ, ಅಂದಹಾಗೆ ನರಸಿಂಹ ಎಲ್ಹೋದ ಕಾಣ್ತಾನೇ ಇಲ್ಲ‘
- ‘ಬೆಳಿಗ್ಗೇನೇ ಎದ್ದು ತೋಟಕ್ಕೆ ಹೋಗ್ಬರ್ತಿನಿ ಅಂತ ಹೋಗಿದೆ ಮುಂಡೇದು. ನೋಡಿ ಅವ್ನಿಗೆ ತೋಟ, ಬೆಟ್ಟ, ಹಸಿರು ಅಂದ್ರೆ ಪ್ರಾಣ ಅವನ ಸ್ನೇಹಿತರೆಲ್ಲಾ ಓದಿ ಕೆಲ್ಸ ಮಾಡ್ತಿವಿ ಅಂತ ಪೇಟೆ ಸೇರ್ಕೋಂಡ್ರೂ ಇವ್ನು ಮಾತ್ರ ಡಿಗ್ರಿ ಮುಗ್ಸಿದ್ರೂ ನನ್ನ ಜೀವನ ಇಲ್ಲೇ ರೂಪಿಸ್ಕೋತಿನಿ ಅಂತ ನಿಂತಿದ್ದಾನೆ. ಏನೊ ಒಂದು ಮದ್ವೆ ಅಂತ ಆಗಿ ಒಳ್ಳೆ ಹೇಂಡ್ತಿ ಬಂದು, ನಾನು ಕಣ್ಣು ಮುಚ್ಚೋದ್ರಲ್ಲಿ ಮೊಮ್ಮಗುನ ತೊಡೆ ಮೇಲೆ ಹಾಕೊಂಡು ನಾಲ್ಕು ದಿನ ಆಡಿಸ್ಬಿಟ್ರೆ ಸಾಕು ರಿ.‘ - ‘ಆಗುತ್ತೆ ಬಿಡೆ ನಾಲ್ಕು ದಿನ ಯಾಕೆ? ಈಗ ನಿಂಗೆ ಆಗಿರೊ ವಯಸ್ಸು ಏನ್ಮಹ, ನಲ್ವತ್ತು ವರ್ಷ ಆಡ್ಸೋವಿಯಂತೆ‘ -

ಮತ್ತೆ ನಾಲ್ಕನೇ ದಿನ ವರದರಾಜುವಿನ ಫ಼ೋನ್ -‘ ಭಟ್ರೆ ನಾನು ವರದ, ನೀವು ಹೇಳಿದ ಹಾಗೆ ಎಲ್ಲಾ ಮಾಹಿತಿ ಕಲೆ ಹಾಕಿದ್ದೇನೆ ಆಯ್ತಾ, ಅವ್ರು ಅಣ್ಣ ತಂಗಿ ಬಂದು ಹಾಸನದ ಹೊಳೆನರಸಿಪುರ ಇದ್ಯಲ್ಲ ಅದರ ಹತ್ರ ಯಾವ್ದೊ ಹಳ್ಳಿಯವರಂತೆ. ಅವರ ಅಪ್ಪ ದೇವಸ್ಥಾನದ ಪೌರೋಹಿತ್ಯ ಮಾಡ್ತಿದ್ರಂತೆ. ಇವ್ರು ಚಿಕ್ಕ ವಯಸ್ಸಿನಲ್ಲೆ ಅಪ್ಪ ಅಮ್ಮನ್ನ ಕಳ್ಕೊಂಡ್ಬಿಟ್ಟಿದ್ದಾರೆ, ಆಮೇಲೆ ಅಣ್ಣನೇ ಕಷ್ಟಬಿದ್ದು ತಂಗೀನ ಬೆಳ್ಸಿದ್ದಾನೆ.
ಹೊಟ್ಟಪಾಡು ಹೇಗೋ ನಡೆಸ್ಕೊಂಡು ಹೋಗ್ತಿದ್ದಾರೆ. ಸ್ಥಿತಿವಂತರಲ್ಲ, ಮದುವೆ ಕೂಡ ಸಾಲಮಾಡೇ ಮಾಡ್ಬೇಕು, ಹಾಗಾಗಿ ಇವರಿಗೆ ಸರಿಯಾದ ಗಂಡು ಸಿಕ್ಕಿಲ್ಲ. ಇನ್ನು ನಿಮ್ಮ ಮಗನ ವಿಷಯ ಎಲ್ಲ ನೀವು ಹೇಳಿದಂತೆ ಯತಾವತ್ತಾಗಿ ಅದೆ, ಹುಡ್ಗ ನಿಮ್ಮೂರು ಬಿಟ್ಟು ಬರಲ್ಲ, ಹುಡ್ಗಿ ಹಳ್ಳೀಲೇ ಇರ್ಬೇಕು ಜೊತೆಗೆ ವಯಸ್ಸಾದ ತಂದೆ ತಾಯಿ ಇದ್ದಾರೆ
ಅವರನ್ನು ನೋಡ್ಕೋಬೇಕು, ನೀವು ಹೇಳಿದಾಹಾಗೆ ಹೇಳಿದ್ದೇನೆ,‘ - ‘ಸರಿ ಅದಕ್ಕೆ ಹುಡ್ಗಿ ಅಣ್ಣ ಏನಂದ್ರು?‘- ‘ಬಂದೆ ಅದೇ ವಿಷ್ಯಕ್ಕೆ ಬಂದೆ ಭಟ್ರೆ, ಆ ಹುಡ್ಗ ಇದ್ಕೋಂಡು ಅಯ್ಯೊ ಹಳ್ಳಿಯಿಂದ್ಲೇ ನಾವೂ ಬಂದಿರೋದು, ಅಲ್ಲದೆ ನನ್ನ ತಂಗೀಗೂ ಕೂಡ ಹಳ್ಳಿ ಹಸಿರು ಅಂದ್ರೆ ತುಂಬ ಇಷ್ಟ, ಹೇಗೋ ನನ್ನ ತಂಗಿಗೆ ಒಂದು ನೆಮ್ಮದಿಯ ಬಾಳು ಸಿಕ್ರೆ ಸಾಕು, ಇಷ್ಟು ದಿನ ನನ್ನ ಕೈಲಾದ ಮಟ್ಟಿಗೆ ಅವಳನ್ನು ಸಾಕಿದ್ದೇನೆ, ಅಣ್ಣನಾಗಿ ಅವಳ ಮದ್ವೆ ಒಂದು ಮಾಡಿ ಒಳ್ಳೆ ಮನೆ ಸೇರ್ಸಿದ್ರೆ ನನ್ನ ಕರ್ತವ್ಯ ಮುಗೀತು ಅನ್ಕೋತೀನಿ. ಇನ್ನು ನಮ್ಮ ಚಿಕ್ಕವಯಸ್ಸಿನಲ್ಲೆ ನಮ್ಮ ತಂದೆ ತಾಯೀನ ಕಳ್ಕೊಂಡಿದ್ದೀವಿ ಈಗ್ಲಾದ್ರೂ ಅತ್ತೆ ಮಾವನ ರೂಪದಲ್ಲಿ ಸೇವೆ ಮಾಡುವ ಭಾಗ್ಯ ದೊರೆತರೆ ನಮ್ಮ ಪುಣ್ಯ ಅಂದ ಭಟ್ರೆ‘-
‘ಹಾಗಾದ್ರೆ ಒಂದು ಕೆಲ್ಸ ಮಾಡೋಣ ವರದರಾಜ್, ಒಳ್ಳೆ ದಿನ ನೋಡಿ ಹುಡ್ಗೀನ ನೋಡೋಕ್ಕೆ ಅವರ ಮನೆಗೆ ಬರ್ತಿವಿ ಅಂತ ತಿಳ್ಸಿ, ನಮಗೂ ಹೇಳಿ, ಋಣಾನುಬಂಧ ಇದ್ರೆ, ಹುಡ್ಗ ಹುಡ್ಗಿ ಒಪ್ತಾರೆ ಅಲ್ವೆ‘ - ‘ ಭಟ್ರೆ ಆಯ್ತು ಬಿಡಿ ನಾನು ವಿಚಾರಿಸಿ ಮುಂದಿನ ಕಾರ್ಯಕ್ರಮ ಸಿದ್ದ ಪಡಿಸ್ತೀನಿ‘-.

ಮದುವೆಯೂ ಮುಗೀತು, ಸೊಸೆ ಮನೆಗೆ ಬಂದು ೪ ತಿಂಗಳೂ ಕಳೀತು. ಈಗ ಮನೆ ತುಂಬ ಗೆಜ್ಜೆ ನಾದ ಬಳೆ ಸದ್ದು, ಸೌಭಾಗ್ಯ ಅಂತು ರಾಯರ ಮೆಚ್ಚಿನ ಸೊಸೆ. ಆದರೂ ಭಟ್ಟರ ಹೆಂಡತಿಗೆ ಪೂರ್ತಿ ಸಮಾಧಾನವಿಲ್ಲ.

 ಯೋಚನೆಯ ಆಳದಲ್ಲಿದ್ದ ಭಟ್ಟರಿಗೆ ಅರ್ಧಾಂಗಿಯ ಕೂಗಿನಿಂದ ಎಚ್ಚರವಾಯ್ತು.

‘-ಏನೂ ಅಂದ್ರೆ ಸ್ವಲ್ಪ ಒಳಗೆ ಬನ್ನಿ ಬೇಗ‘- ಕುರ್ಚಿಯಿಂದೆದ್ದ ಭಟ್ಟರು ‘ಯಾಕೇ ಏನಾಯ್ತು ಅಷ್ಟೊಂದು ಗಾಬರಿ?, ಇಗೋ ಬಂದೆ‘-

ಒಳ ಕೊಣೆಗೆ ಬಂದ ಭಟ್ಟರಿಗೆ ಮಾತೇ ಹೊರಡಲಿಲ್ಲ, ಮಗ ನರಸಿಂಹ ಭಟ್ಟ ಮಂಚದಮೇಲೆ ಅಂಗಾತ ಮಲಗಿದ್ದಾನೆ ಕೈಕಾಲುಗಳಲ್ಲಿ ಚಲನೆ ಇಲ್ಲ. ಹತ್ತಿರ ಬಂದ ಸುಬ್ಬರಾಯ ಭಟ್ಟರು ಮಗನ ಮುಖದ ಗಲ್ಲ ಹಿಡಿದು ಅಲ್ಲಾಡಿಸುತ್ತಾ ‘ನರಸಿಂಹ ನರಸಿಂಹ ಏಳಪ್ಪ ಕಣ್ಣು ಬೀಡೊ ಏನಾಯ್ತು ಹೇಳಪ್ಪ‘- ಅಂದ್ರೂ ಈ ಕಡೆ ಅರಿವೇ ಇಲ್ಲ. -‘ ಸೌಭಾಗ್ಯ ಎಲ್ಲಿ?‘- ‘ಗೊತ್ತಿಲ್ಲ ರಿ ಬೆಳಿಗ್ಗೆಯಿಂದ ಎಲ್ಲೂ ಕಾಣ್ಲಿಲ್ಲ, ರೂಮಿನ ಬಾಗ್ಲು ಮುಂದಕ್ಕೆ ಹಾಕೇ ಇತ್ತು, ಎಲ್ಲೂ ಗಂಡಹೆಂಡ್ತಿ ಇನ್ನೂ ಎದ್ದಿಲ್ಲ ಅಂತ ನಾನೂ ಸುಮ್ನಿದ್ದೆ, ಇಷ್ಟೊತ್ತಾಯತಲ್ಲ ನೋಡೋಣ ಅಂತ ಬಾಗಿಲು ತಟ್ಟಿ ಮುಂದೆ ಸರಿಸಿ ನೋಡಿದ್ರೆ ಒಳಗೆ ಈ ಪರಿಸ್ಥಿತಿ, ಗಾಬರಿಯಾಯ್ತು ನಿಮ್ಮನ್ನ ಕೂಗ್ದೆ‘
-‘ಸೌಭಾಗ್ಯ ಎಲ್ಲಿಹೋದ್ಲು? ಏನೋ ಒಂದು ಸರಿಯಾಗಿ ಅರ್ಥ ಆಗ್ತಿಲ್ಲ, ನೀನು ಆ ಚಂದ್ರಶೇಖರನನ್ನು ಕರಿ, ಕಾರ್ ತರೋಕ್ಕೆ ಹೇಳು‘ - ಅಂದವರೆ ತಮಗೆ ತಿಳಿದ ವೈದ್ಯ ಮಾಡಲಿಕ್ಕೆ ತಯಾರಿ ನಡೆಸಿದ್ರು ಭಟ್ರು.

ಸೀದ ಒಳ ಕೋಣೆಗೆ ಬಂದ ಭಟ್ಟರ ತಮ್ಮನ ಮಗ ಚಂದ್ರಶೇಖರ ‘ಅರೆ ಇದ್ದಕ್ಕಿದ್ದಹಾಗೆ ಏನಾಯ್ತು ನೆನ್ನೆ ಸಂಜೆ ಸಿಕ್ಕಿದ್ದ, ಗಣಪತಿ ದೇವಸ್ಥಾನದ ಹತ್ರ ಎಷ್ಟೊತ್ತು ಮಾತಾಡಿದಿವಿ‘- ಅಂದವನೆ - ‘ಹತ್ತಿರ ಕುಳಿತು ನರಸಿಂಹ ಏಳೋ ನಾನು ಬಂದಿದೀನಿ, ಏನಾಯ್ತು ಏಳೊ ಕಣ್ಣುಬಿಡೊ‘ - ಅಂತ ಜೋರಾಗಿ ಕೂಗಿದ. ಸುಬ್ಬರಾಯರು ಕಲಿತ ಮಂತ್ರ ವಿದ್ಯೆಯೋ, ದೇವರ ಕೃಪೆಯೋ ನರಸಿಂಹ ಸ್ವಲ್ಪವೇ ಕಣ್ಣು ತೆರೆದು ಕ್ಷೀಣ ದ್ವನಿಯಲ್ಲಿ ನರಳಿದ. ಇನ್ನು ತಡಮಾಡುವುದು ಒಳಿತಲ್ಲವಲ್ಲವೆಂದರಿತ ಭಟ್ಟರು ಚಂದ್ರಶೇಖರ ತಂದಿದ್ದ ಕಾರಿನಲ್ಲಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದರು.

ಆಸ್ಪತ್ರೆಯಲ್ಲಿ.

‘ಅಲ್ಲ ದೊಡ್ಡಪ್ಪ, ಇದು ಹೇಗಾಯ್ತು? ಅವನ ಹೆಂಡ್ತಿ ಎಲ್ಲಿ? ಅಂದಾಗ -‘ ಲೇ ಲಕ್ಷ್ಮಿ ಸೌಭಾಗ್ಯ ಎಲ್ಹೋದ್ಲು? ಬೆಳಿಗ್ಗೆಯಿಂದ ನೋಡೇ ಇಲ್ಲ್ವಾ?‘ - ‘ಇಲ್ಲಾ ರಿ ನಾನು ಬೆಳಗಿನಜಾವ ಎದ್ದು ಹಿತ್ತಲಿಗೆ ಹೋದಾಗ ಹಿಂದಿನ ಬಾಗಿಲು ತೆರೆದಿತ್ತು, ಹಾಗೂ ಅನ್ಕೋಂಡೆ ಯಾರಿದು ಹಿತ್ತಲ ಬಾಗಿಲು ಹೀಗೆ ಹಾರು  ಹೊಡೆದಿದ್ದಾರೆ, ರಾತ್ರಿ ಮಲಗುವಾಗ, ಪ್ರತಿ ದಿನದಂತೆ ನಾನೆ ಹಾಕಿ ಮಲಗಿದ್ದೆ, ಎಲ್ಲೋ ಒಂದುಹೊತ್ತಿನಲ್ಲಿ ಯಾರಾದರೂ ಹಿತ್ತಲಿಗೆ ಹೋಗಿ ನಿದ್ದೆಗಣ್ಣಿನಲ್ಲಿ ಮರೆತಿರಬಹುದೆಂದು ಸುಮ್ಮನಾದೆ‘-
‘ ಹಿತ್ತಲ ಬಾಗಿಲಾ? ನಾನು ರಾತ್ರಿ ಎದ್ದೇ ಇಲ್ಲ ಇನ್ನು ನರಸಿಂಹನ ಈ ಸ್ಥಿತಿ ನೋಡಿದರೆ ಅವನೂ ಎದ್ದ ಹಾಗೆ ಕಾಣೋಲ್ಲ, ಸೊಸೆ ಕಾಣ್ತಾಇಲ್ಲ ಏನೋ ಎಲ್ಲ ಅಯೋಮಯವಾಗಿದೆ‘ - ಅನ್ನುತ್ತಿದ್ದ ಭಟ್ಟರ ಮಾತಿಗೆ ಅಡ್ಡಬಂದ ಡಾಕ್ಟರ್ ರಿ ಚಂದ್ರಶೇಖರ್ ಹೀಗೆ ಬನ್ನಿ ಅಂದ್ರು. ಹತ್ತಿರ ಬಂದ ಚಂದ್ರು ಹಾಗೂ ಭಟ್ಟರನ್ನು ನೋಡಿ - ‘ಹೆವಿ ಸ್ಲೀಪಿಂಗ್ ಡೋಸ್ ಇನ್ಜೆಕ್ಟ್ ಆಗಿದೆ ಟ್ರೀಟ್ಮೆಂಟ್ ಕೊಟ್ಟಿದ್ದೇವೆ, ಸಂಜೆ ಹೋತ್ಗೆ ಸರಿಹೋಗ್ತಾರೆ, ಗಾಬ್ರಿ ಆಗ್ಬೇಡಿ, ಆದ್ರೆ.. ಇದು ಎಮ್ ಎಲ್ ಸಿ ಕೇಸ್ ಪೋಲೀಸ್ಗೆ ಇನ್ಫ಼ರ್ಮ್ ಮಾಡ್ಬೇಕಾಗುತ್ತೆ‘ - ಅಂದ್ರು. ‘ಸಾರ್ ಪೋಲೀಸ್ ಗೀಲೀಸ್ ಎಲ್ಲ ಯಾಕೆ? ಏನೋ ಸ್ವಲ್ಪ ಸಮಸ್ಯೆ ಇದೆ, ಸರಿಮಾಡ್ಕೋತೀವಿ, ಜೊತೆಗೆ ಇದು ಮನೆ ಮರ್ಯಾದೆ ಪ್ರಶ್ನೆ. ದಯವಿಟ್ಟು ಅರ್ಥಮಾಡ್ಕೊಳ್ಳಿ ಸಾರ್‘ - ಅಂದ ಚಂದ್ರಶೇಖರ. - ‘ ಸರಿಬಿಡಿ ಭಟ್ರು ನಂಗೆ ಗೊತ್ತಿರೋರೆ, ಆಯ್ತು ಅವೆಲ್ಲ ಏನೂ ಬೇಡ, ಬಟ್ ಪೇಷ್ಂಟ್ ಒಂದು ಎರಡು ದಿನ ಇಲ್ಲೇ ಇರ್ಲಿ, ಅಬ್ಸರ್ವ್ ಮಾಡಿ ಡಿಸ್ಚಾರ್ಜ್ ಮಾಡ್ತಿನಿ‘ ಅಂದ್ರು ಡಾಕ್ಟರ್.- ‘ಸರಿ ಸ್ವಾಮಿ ಹಾಗೇ ಆಗ್ಲಿ ಆದ್ರೆ ಮಗನಿಗೆ ಬೇರೆ ಏನೂ ತೊಂದ್ರೆ ಇಲ್ವಲ್ಲ, ದೇವರ ದಯೆ ಅಷ್ಟು ಸಾಕು‘- ಅಂದ್ರು ಭಟ್ಟರು.

....ಮುಂದುವರಿಯುವುದು   

 

Rating
No votes yet

Comments