ಸೋಸಲೆ ಸ್ವಾಮೀಜಿ ಮತ್ತು ಚಿನ್ನದ ತಟ್ಟೆ

ಸೋಸಲೆ ಸ್ವಾಮೀಜಿ ಮತ್ತು ಚಿನ್ನದ ತಟ್ಟೆ

 ಸೋಸಲೆ ಸ್ವಾಮೀಜಿಯೆಂಬ ಓರ್ವ ಆರೋಪಿ, ಮಠದ ಒಂದು ಕೆ. ಜಿ. ಚಿನ್ನದ ತಟ್ಟೆ ಗಿರವಿಯಿಟ್ಟು ಮೈಸೂರು ಲಕ್ಷ್ಮೀಪುರ ಪೊಲೀಸರ ತನಿಖೆಗೆ ಬಿದ್ದಿರುವುದು ವರದಿಯಾಗಿದೆ. ’ಸುವರ್ಣ ಪ್ರಜ್ಞೆಯ’ ಶಿಷ್ಯರೊಬ್ಬರು ದೂರು ದಾಖಲಿಸಿದ್ದರಿಂದ ಪ್ರಕರಣ ಬೆಳಕು ಕಂಡಿತು. ವ್ಯಾಸರಾಜ ಮಠದ ಈ ’೧೦೮ ಶ್ರೀ’ಗೆ ನ್ಯಾಯಸುಧಾ, ನ್ಯಾಯಾಮೃತ, ಚಂದ್ರಿಕಾ, ಭಾಷ್ಯದೀಪಿಕಾದಿಗಳು ಗೊತ್ತಿಲ್ಲದಿದ್ದರಿಂದ, ಅಥವಾ ಅದಕ್ಕೆ ಮಾರವಾಡಿ ಅಂಗಡಿಯಲ್ಲಿ ಸಾಲ ಸಿಕ್ಕದ್ದರಿಂದ ’ಆಂಟಿಕ್ ಮೌಲ್ಯ’ದ ಚಿನ್ನಕ್ಕೆ ಕೈಯಿಕ್ಕಬೇಕಾಯಿತೇನೋ!
 ವ್ಯಾಸರಾಜ ಸ್ವಾಮಿಗಳು, ಕಂಬಾಲೂರು ರಾಮಚಂದ್ರತೀರ್ಥರು, ಭಾಷ್ಯದೀಪಿಕೆಯ ಜಗನ್ನಾಥತೀರ್ಥರು, ವಿದ್ಯಾಕಾಂತತೀರ್ಥರು ಮುಂತಾದವರಿಗೆ ಆಯಾ ಕಾಲದ ನಾಯಕರು, ಪಾಳೇಗಾರರು, ಮೈಸೂರಿನ ಮುಮ್ಮಡಿ ಕೃಷ್ಣರಾಜರಾದಿಯಾಗಿ ಬೇರೆ ಒಡೆಯರುಗಳೆಲ್ಲಾ ಚಿನ್ನ, ಬೆಳ್ಳಿ, ವೈಢೂರ್ಯಗಳನ್ನೇ ಅಲ್ಲದೆ, ಕಾರ್ನಾಟಕ, ಆಂಧ್ರ, ತಮಿಳುನಾಡುಗಳಲ್ಲಿ ಬೇಕಾದಷ್ಟು ಸ್ಥಿರಾಸ್ತಿಯ ಉಂಬಳಿ ಕೊಟ್ಟಿದ್ದೂ ಇದೆ. (ಈಗ ಬಹುಶಃ ’ಇತ್ತು’ ಆಗಿದೆ!)
 ಕಳ್ಳತನ, ಸುಲಿಗೆ, ಕೊಲೆ ಆರೋಪದ ಬೇರೆ ಗುರುವರೇಣ್ಯರುಗಳೂ ಇಂದು ವಿವಿಧ ಪೀಠಗಳಲ್ಲಿ ವಿರಾಜಮಾನರಾಗಿದ್ದಾರೆ. ಚಂದ್ರಶೇಖರೇಂದ್ರ ಸರಸ್ವತಿ, ವಿದ್ಯಾಪ್ರಸನ್ನತೀರ್ಥರು ಮುಂತಾದವರ ಅವಸಾನದೊಂದಿಗೆ ಮಠ ಪರಂಪರೆಯ ಕೊಂಡಿಯೇ ಕಳಚಿ, ಈಗ ಸೋಪು, ಸೆಂಟು, ’ಗಡ್ಡಕ್ಕೆ ಬೇರೆ ಶ್ಯಾಂಪೂ’ಗಳ ಆಧುನಿಕ ಪರಿವ್ರಾಜಕರೇ ನಮ್ಮ ಅಧ್ಯಾತ್ಮಕ್ಕೆ ಗತಿಯಾಗಿದ್ದಾರೊ ಏನೋ?!

 

Rating
No votes yet

Comments