ಸ್ತ್ರೀಯರ ಮೇಲಿನ ದಾಳಿಗಳು !

ಸ್ತ್ರೀಯರ ಮೇಲಿನ ದಾಳಿಗಳು !

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಎಲ್ಲೆಯೇ ಇಲ್ಲವೇ? ಮಂಗಳೂರಿನ ಪಬ್ ಗಲಾಟೆ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಈಗ ಬೆಂಗಳೂರಿನಂತಹ ಮಹಾನಗರದಲ್ಲೂ ಕೂಡ ಹಲವಾರು ಮಹಿಳೆಯರ ಮೇಲೆ ಹಲ್ಲೆ ಪ್ರಕರಣಗಳು ನಡೆದಿವೆ.

ಫೆಬ್ರವರಿ 17 ನೇ ತಾರೀಖಿನಂದು, ಇಂದಿರಾನಗರದಲ್ಲಿ ಒಬ್ಬ ಮಹಿಳೆ ತನ್ನ ಕಾರನ್ನು ಓಡಿಸುತ್ತಿದ್ದಾಗ, ಬೈಕಿನಲ್ಲಿ ಇಬ್ಬರು ವ್ಯಕ್ತಿಗಳು ಆಕೆಯನ್ನು ಹಿಂಬಾಲಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಅವಳನ್ನು ಥಳಿಸಲು ಮುಂದಾದರು. ಇದರಿಂದಾಗಿ ಹೆದರಿದ ಆಕೆ ತನ್ನ ರಕ್ಷಣೆಗಾಗಿ ತನಗೆ ಗೊತ್ತಿದ್ದ ಅಪಾರ್ಟ್ ಮೆಂಟ್ ಒಂದರಲ್ಲಿ ಸಹಾಯಕ್ಕಾಗಿ ಓಡಿದಳು. ಅಷ್ಟೊರೊಳಗೆ ಅವಳ ಕಾರಿನ ಬಳಿಯೇ ಮುತ್ತಿಗೆ ಹಾಕಿದ ಒಬ್ಬ ವ್ಯಕ್ತಿಯೊಡನೆ ಹೊಡೆದಾಟವು ನಡೆದು, ಕೊನೆಗೂ ತಪ್ಪಿಸಿಕೊಂಡ ಆಕೆ ಆ ಬಿಲ್ಡಿಂಗ್ ನಲ್ಲಿ ಬಚ್ಚಿಟ್ಟುಕೊಂಡಳು. ಆತಂಕಗೊಂಡಿದ್ದ ಆಕೆಗೆ ಗಾಡಿಯ ನಂಬರ್ ಅನ್ನು ಸಹ ಬರೆದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ.

ಕಳೆದ ಮಂಗಳವಾರ ಬೆಳಿಗ್ಗೆ ಅಲಸೂರಿನಲ್ಲಿ, ಒಬ್ಬ ತರುಣಿಯ ಮೇಲೆ ಹೋಂಡಾ ಕಾರಿನಲ್ಲಿ ಬಂದ 4 ಮಂದಿಗಳಿದ್ದ ಗುಂಪೊಂದು ದಾಳಿ ಮಾಡಿದರು. ಅವಳ ಬ್ಯಾಗ್ ನ್ನು ಪರಿಶೀಲಿಸಿ, ಆಕೆ ಧರಿಸಿದ್ದ ಪಾಶ್ಛಾತ್ಯ ಉಡುಗೆಗೆ ಕನ್ನಡದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ ಆಕೆಯ ಕಿವಿ, ಕತ್ತಿಗೆ ಪರಚುವಂತಹ ಅಮಾನುಷ ಕೃತ್ಯವನ್ನೆಸಗಿದರು. ಸೇನೆಯಲ್ಲಿ ಕೆಲಸ ಮಾಡುವ ಕೆಲವು ವ್ಯಕ್ತಿಗಳು ಆಕೆಯನ್ನು ರಕ್ಷಿಸಿಲ್ಲದಿದ್ದರೆ, ಇನ್ನೇನಾಗುತ್ತಿತ್ತೋ ಆ ಬಡಪಾಯಿ ತರುಣಿಗೆ? ಅದೇ ದಿನ, ರಾತ್ರಿ 9 ಘಂಟೆ ಸಮಯದಲ್ಲಿ, ಮೌಂಟ್ ಕಾರ್ಮೆಲ್ ಕಾಲೇಜಿನ ಹತ್ತಿರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಚಿತ್ರ ನಿರ್ಮಾಪಕಿಯೊಬ್ಬಳನ್ನು 4 ವ್ಯಕ್ತಿಗಳ ಗುಂಪೊಂದು ಥಳಿಸಿದೆ. ಇಲ್ಲಿಯೂ ಕೂಡ ಆಕೆ ಧರಿಸಿದ್ದ ಪಾಶ್ಚಾತ್ಯ ಉಡುಗೆಯೇ ಕಾರಣವಾಗಿತ್ತು ಎಂದಾಕೆ ಹೇಳಿರುವುದು ನಿಜಕ್ಕೂ ದಿಗ್ಬ್ರಮೆಯನ್ನುಂಟು ಮಾಡಿದೆ.

ರೆಸ್ಟ್ ಹೌಸ್ ರಸ್ತೆಯ ಗಝಲರ್ಸ್ ಎಂಬ ಪಬ್ ಬಳಿ ನಿಂತಿದ್ದ ಮಹಿಳೆಯರು ಅತಿವೇಗವಾಗಿ, ನಿರ್ಲಕ್ಷ್ಯತನದಿಂದ ಬರುತ್ತಿದ್ದ ಹೋಂಡಾ ಕಾರಿನವರನ್ನು (KA-51 TR-2767) ಪ್ರಶ್ನಿಸಿದ್ದಕ್ಕೆ, ಕಾರಿನಲ್ಲಿದ್ದ 4-5 ಪುರುಷರು ಈ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಮಹಿಳೆಯರಲ್ಲಿ ಒಬ್ಬರಾದ ರಶ್ಮಿ ಸಮಾಕ(40) ಹೇಳಿದ್ದೇನೆಂದರೆ “ನಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ, ನಮ್ಮ ಕೂದಲನ್ನು ಹಿಡಿದೆಳೆದು, ನಮ್ಮನ್ನು ಹಿಡಿಯಲು ಪ್ರಯತ್ನ ಮಾಡಿದರು. ಜೊತೆಯಲ್ಲಿದ್ದ ನನ್ನ ಗಂಡ (ಅರವಿಂದ್) ಮತ್ತು ಇತರ ಪುರುಷರ ವಿರೋಧವನ್ನು ಲೆಕ್ಕಿಸದೆ ನಮ್ಮ ಮೇಲೆ ಹಲ್ಲೆ ಮಾಡಿದರು. ಮಹಿಳೆಯರ ಮೇಲೆ ದಾಳಿ ಮಾಡುವುದೇ ಅವರ ಉದ್ದೇಶದಂತಿತ್ತು”. ಇದೇ ಪ್ರಕರಣದಲ್ಲಿ , ತುಂಬಾ ಹಲ್ಲೆಗೊಳಗಾದ ಮಹಿಳೆ, ಪ್ರಿಯಾ ಜಾರ್ಜ್ (38) ಹೇಳಿದ್ದೇನೆಂದರೆ “ನನಗೆ ಹೇಳಲಿಕ್ಕೆ ಮುಜುಗರವಾಗುವಂತಹ ಭಾಗಗಳಿಗೆ ಪೆಟ್ಟು ಬಿದ್ದಿದೆ ಹಾಗೂ ಅವರ ಉದ್ದೇಶವೇ ಮಹಿಳೆಯರ ಮೇಲಿನ ಹಲ್ಲೆಯಾಗಿತ್ತು”. ಇನ್ನೊಬ್ಬ ಪ್ರತ್ಯಕ್ಷದರ್ಶಿಯಾದ ಅಲನ್ ಡೇವಿಡ್ ರಿಚಿ ಹೇಳಿದ್ದೇನೆಂದರೆ "ಗುಂಪಿನಲ್ಲಿ ಇತರ ಗಂಡಸರು ವಿರೋಧಿಸಿದರೂ ಈ ಗೂಂಡಗಳ ಶಕ್ತಿಯ ಮುಂದೆ ಅವರು ತಲೆ ಬಾಗಲೇ ಬೇಕಾಯಿತು. ಹಾಗೆಯೇ ವೀಕ್ಷಿಸುತ್ತಿದ್ದ ಮಂದಿಯೂ ಕೂಡ ಯಾರೂ ನೆರವಿಗೆ ಧಾವಿಸಲು ಸಾಧ್ಯವಾಗಲಿಲ್ಲ. ಮೊದಲಿಗೆ ನಾಲ್ಕೇ ಮಂದಿಯಿದ್ದ ಆ ತಂಡದಲ್ಲಿ ಸ್ವಲ್ಪ ಹೊತ್ತಿನಲ್ಲಿ ಬಹು ಜನರು ಸೇರಿದರು. ಹಾಗಾಗಿ ಎಲ್ಲರೂ ಅಸಹಾಯಕ ಸ್ಥಿತಿಯಲ್ಲಿದ್ದರು. ಹಲ್ಲೆ ನಡೆಸಲು ನಿಶ್ಚಯಿಸಿದ್ದ ಈ ಗೂಂಡಾಗಳು ಯಾವುದು ಸಿಗುತ್ತದೆಯೋ ಅಂದರೆ ಕಲ್ಲುಗಳನ್ನೆಲ್ಲಾ ಮಂದಿಯನ್ನು ಥಳಿಸಲು ಉಪಯೋಗಿಸಿದ್ದಾರೆ. ಅವರ ಗುರಿ ಮಾತ್ರ ಮಹಿಳೆಯರೇ ಆಗಿದ್ದರು". ಪಾಪ ಆ ಕರಾಳ ರಾತ್ರಿಯನ್ನು ಈ ದುರ್ದೈವಿಗಳಿಗೆ (೧೨ ಮಂದಿಗಳಿದ್ದ ಗುಂಪು) ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ರವಿ ಎನ್ನುವ ಕಾರ್ ಮಾಲೀಕನನ್ನು ಗುರುತಿಸಲಾಗಿದ್ದು, ಈತ ಯಾವುದೋ ಫನ್ ಝೋನ್ ನ ಮಾಲೀಕನಂತೆ. ಈ ವ್ಯಕ್ತಿ ಯ ಮೇಲೆ ದೂರನ್ನು ಕಬ್ಬನ್ ಪಾರ್ಕ ಪೋಲಿಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಪೋಲಿಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದಲ್ಲದೆ, ಕಳೆದ ಶನಿವಾರ ರಾತ್ರಿ 10.30 ಗಂಟೆಗೆ ಸಂಜನಾ (28) ಎಂಬ ಮಹಿಳಾ ಪತ್ರಕರ್ತೆಯೊಬ್ಬಳು ವಸಂತ ನಗರದಲ್ಲಿ ಆಟೋರಿಕ್ಷಾವನ್ನು ಹತ್ತುತ್ತಿದ್ದಾಗ ಹಿಂದಿನಿಂದ ಬೈಕಿನಲ್ಲಿ ಬಂದ ಇಬ್ಬರು ಪುರುಷರು ಆಕೆಯ ಗಲ್ಲಕ್ಕೆ ಗುದ್ದಿ ದವಡೆಯನ್ನು ಘಾಸಿಗೊಳಿಸಿದ್ದಾರೆ. ಆಕೆ ಈ ದುರ್ಘಟನೆಯಿಂದ ಎಚ್ಚೆತ್ತುಕೊಂಡು ಆ ಬೈಕಿನ ಸಂಖ್ಯೆಯನ್ನು ಬರೆದುಕೊಳ್ಳುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಮಹಿಳೆಯು ಕೆಲಸದಿಂದ ಹಿಂತಿರುಗುತ್ತಿದ್ದಾಗ ನಡೆದ ಘಟನೆ ಇದಾಗಿದೆ. ಆಕೆಯಿಂದ ಏನನ್ನೂ ಕದ್ದೊಯ್ಯಲು ಈ ಆರೋಪಿಗಳು ಪ್ರಯತ್ನಿಸಿಲ್ಲ ಹಾಗೂ ಹಲ್ಲೆ ನಡೆಸಿದ ಕಾರಣವೂ ಗೊತ್ತಿಲ್ಲ. ಈಗ ಈ ಮಹಿಳೆಯು ಸಹ ಹೈ ಗ್ರೌಂಡ್ಸ್ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ.

ನಮ್ಮ ದೇಶಕ್ಕೆ ಏನಾಗಿದೆ? ಸ್ತ್ರೀಯರೆಂದರೆ ಗೌರವಿಸುತ್ತಿದ್ದ ಈ ನಾಡಿಗೇನಾಗಿದೆ? ನಮಗೆಲ್ಲ ಭದ್ರತೆ ಬೇಡವೇ? ಸಮಾನತೆಯ ಮಾತಿರಲಿ, ಸುರಕ್ಷತೆಯು ಇಲ್ಲವೆಂದರೆ ಮಹಿಳೆಯರು ಓಡಾಡುವುದಾದರೂ ಹೇಗೆ? ಜೊತೆಯಲ್ಲಿ ಪುರುಷರಿದ್ದು, ೧೨ ಮಂದಿಗಳ ಗುಂಪಿಗೆ ಹೀಗಾದರೆ, ನಾವೊಬ್ಬರೇ ಸುರಕ್ಷಿತವಾಗಿ ಎಲ್ಲಿಗಾದರೂ ಹೋಗಿ ಬರಲು ಸಾಧ್ಯವೇ?

ನಾಗರಾಜ್ ರವರು ನಿರ್ಭಯ ಕರ್ನಾಟಕ campaign ಬಗ್ಗೆ ನಮ್ಮ ಬ್ಲಾಗಿನಲ್ಲಿ ಹೇಳಿದಾಗ ಯಾರೂ ಅಷ್ಟಾಗಿ ಸಕರಾತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ :-( ಒಂದಿಬ್ಬರನ್ನು ಬಿಟ್ಟರೆ. ಇದು ಅಷ್ಟು ಚಿಂತಾನಾರ್ಹದ ವಿಷಯವಲ್ಲವೇ ಹಾಗಾದರೆ? ಸಂಪದಿಗರೇ, ದಯವಿಟ್ಟು ಉತ್ತರಿಸುವಿರಾ?

ಕೃಪೆ : ಡೆಕ್ಕನ್ ಹೆರಾಲ್ಡ್, ಮತ್ತಿತ್ತರ ದಿನಪತ್ರಿಕೆಗಳು

Rating
No votes yet

Comments