ಸ್ವಲ್ಪಾದ್ರೂ ಸೀರಿಯಸ್ ಆಗಿ
(ಕುಶ್ವಂತ್ ಸಿಂಗ್ ಜೋಕ್ಸ್ ಪುಸ್ತಕದಿಂದ ಆಯ್ದದ್ದು)
ನಿನಗದರ ಅಭ್ಯಾಸವಿದೆ
ಹಷೀಮ್ ಅಲಿ ಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಈ ಕೆಳಗಿನ ದಂತ ಕತೆಯೊಂದನ್ನು ಹೇಳಿದಾಗ ಸಭಿಕರಲ್ಲಿ ಒಡಕು ಕಾಣಿಸಿತು:
ಒಬ್ಬ ಉಪಕುಲಪತಿ ತೀರಿಕೊಂಡ. ಅವನ ವಿಧಿ ನಿರ್ಣಯವಾಗುವ ಮೊದಲೇ ಸ್ವರ್ಗದ ಬಾಗಿಲ ಬಳಿ ಪ್ರಶ್ನೋತ್ತರಕ್ಕಾಗಿ ಕರೆತರಲಾಯಿತು. “ನೀನು ಜೀವಿಸಿದ್ದಾಗ ಏನು ಮಾಡುತ್ತಿದ್ದೆ?” ಧರ್ಮರಾಜ ಕೇಳಿದ.
“ನಾನು ವಿಶ್ವವಿದ್ಯಾನಿಲಯವೊಂದರ ಉಪಕುಲಪತಿಯಾಗಿದ್ದೆ.”
“ಓಕೆ, ನೀನು ನರಕದ ಯಾತನೆಗಳನ್ನು ಭೂಲೋಕದಲ್ಲಿಯೇ ಅನುಭವಿಸಿದ್ದಿ. ನಿನಗೆ ಸ್ವರ್ಗಲೋಕದ ಅಗತ್ಯವಿದೆ.” ಹೇಳಿದ ಧರ್ಮರಾಜ.
ಮುಂದೆ ಬಂದ ಒಬ್ಬನಿಗೂ ಇದೇ ಪ್ರಶ್ನೆ ಹಾಕಲಾಯಿತು.
“ನಾನು ಮೂರು ಬಾರಿ ವಿಶ್ವವಿದ್ಯಾನಿಲಯವೊಂದರ ಉಪಕುಲಪತಿಯಾಗಿದ್ದೆ.” ಅವನು ಉತ್ತರಿಸಿದ.
ಧರ್ಮರಾಜ, “ಇವನನ್ನು ನರಕಕ್ಕೆ ಒಯ್ಯಿರಿ. ಇವನಿಗೆ ಅದು ಅಭ್ಯಾಸವಾಗಿ ಹೋಗಿದೆ.” ಎಂದು ಆಜ್ಞೆ ಮಾಡಿದ.
***
ಸ್ವರ್ಗದ ಗೋಡೆ
ದೇವರು ಮತ್ತು ಸೈತಾನ ಇವರಿಬ್ಬರಲ್ಲಿ ಸ್ವರ್ಗ ಮತ್ತು ನರಕಗಳನ್ನು ವಿಭಾಗಿಸುವ ಗೋಡೆಯ ದುರಸ್ತಿ ಮಾಡಿಸುವಲ್ಲಿ ವಾದ ಉಂಟಾಯಿತು. ದೇವರು ಹೇಳಿದ: “ಗೋಡೆ ಮುರಿದುಬಿದ್ದುದೆಲ್ಲ ನರಕದಲ್ಲಿನ ಜನರಿಂದ, ಆದುದರಿಂದ ಸೈತಾನನೇ ದುರಸ್ತಿಯ ಖರ್ಚು ವಹಿಸಲಿ.”
ಸೈತಾನ ವಜ್ರ ಹೃದಯಿ, ಕಠೋರ ವ್ಯಕ್ತಿ. ಖರ್ಚನ್ನು ದೇವರೇ ವಹಿಸಿಕೊಳ್ಳಲಿ ಎಂದ. ವಾದಕ್ಕೆ ಪರಿಹಾರ ಸಿಕ್ಕಲಿಲ್ಲ. ಕಡೆಗೆ ಸೈತಾನ್, “ನಾವು ಮಧ್ಯಸ್ಥರೊಬ್ಬರನ್ನು ನೇಮಕ ಮಾಡಿಕೊಳ್ಳೋಣ ನಮ್ಮ ವಕೀಲರು ನಮಗಾಗಿ ವಾದ ಮಾಡಲಿ” ಎಂದು ಹೇಳಿದ.
ದೇವರು ಉತ್ತರಿಸುತ್ತ, “ಮಧ್ಯಸ್ಥನಿಟ್ಟುಕೊಳ್ಳಲು ನನ್ನದೇನೂ ಆಕ್ಷೇಪವಿಲ್ಲ. ಆದರೆ ನಿಮಗೆ ಇದರಿಂದ ಒಂದು ಅನುಕೂಲವಿದೆ. ಸ್ವರ್ಗದಲ್ಲಿ ನನಗೆ ಯಾರೂ ವಕೀಲರಿಲ್ಲ. ಅವರೆಲ್ಲ ನಿಮ್ಮ ಕಡೆಯೇ ಇದ್ದಾರೆ” ಎಂದ.
***
ಅವರು ಜನಸೇವಕರು
ಭಾರತವನ್ನು ಸಂದರ್ಶಿಸಲೆಂದು ಬಂದ ಅಮೆರಿಕನ್ ನಿಯೋಗವೊಂದಕ್ಕೆ ರಾಜಧಾನಿಯ ಸುತ್ತ ತೋರಿಸಲಾಗುತ್ತಿತ್ತು. ಸಂಜೆ ವಿಧಾನಸೌಧದ ಬಳಿ ಸುತ್ತುನೋಟದ ವೀಕ್ಷಣೆಗಾಗಿ ಸೆಕ್ರೆಟರಿಯೇಟ್ ಬಳಿಗೆ ಕರೆದೊಯ್ಯಲಾಯಿತು. ಕಛೇರಿ ಮುಗಿಯುವ ವೇಳೆ. ಸಾವಿರಾರು ಗುಮಾಸ್ತರು ತಮ್ಮ ಕಛೇರಿಗಳಿಂದ ಹೊರಗೆ ಬಂದರು. ಇಡೀ ಸ್ಥಳ ಬೈಸಿಕಲ್ಗಳು ಹಾಗೂ ಪಾದಚಾರಿಗಳಿಂದ ತುಂಬಿಹೋಯ್ತು.
“ಈ ಜನರೆಲ್ಲ ಯಾರು?” ಎಂದು ಅಮೇರಿಕನ್ ನಿಯೋಗ ಕೇಳಿತು.
“ಇವರೆಲ್ಲ ಭಾರತದ ಜನ ಸಾಮಾನ್ಯರು. ದೇಶವನ್ನು ನಿಜವಾಗಿ ಆಳುವವರು.” ಭಾರಿ ಜಂಬದಿಂದ ಮಂತ್ರಿವರ್ಯರು ಸಂದರ್ಶಕರಿಗೆ ಹೇಳಿದರು.
ಕೆಲವು ನಿಮಿಷದ ನಂತರ ಮೋಟರ್ ಬೈಕುಗಳ ಮೇಲೆ ಕುಳಿತ ಪೈಲಟ್ಗಳು, ಸಶಸ್ತ್ರಧಾರಿಗಳಾದ ಪೋಲೀಸರಿಂದ ತುಂಬಿದ್ದ ಜೀಪುಗಳ ರಕ್ಷಣೆಯೊಂದಿಗೆ ಧ್ವಜ ಹೊತ್ತು ಬಂಡಿಗಳ ಸೇನೆಯೇ ಬಂದಿತು. ಅಮೇರಿಕನ್, “ಇದರಲ್ಲಿರುವವರೆಲ್ಲ ಯಾರು?” ಎಂದು ಕೇಳಿದ.
ಮಂತ್ರಿವರ್ಯರು ಅದೇ ಜಂಬದಿಂದ ಉತ್ತರಿಸಿದರು, “ಇವರೆಲ್ಲ ನಾವೇ. ಜನರ ಸೇವಕರು.”
***
ನನಗೇನು ಗೊತ್ತು?
ಒಬ್ಬ ಶ್ರೀಮಂತ ಮಾರವಾಡಿ ಗೆಳೆಯನೊಬ್ಬನಿಗೆ ತನ್ನ ಹೆಂಡತಿಯ ದುಂದು ವೆಚ್ಚದ ಅಭ್ಯಾಸಗಳ ಬಗ್ಗೆ ಹೇಳುತ್ತಿದ್ದ: “ಒಂದು ದಿನ ಅವಳು ನನ್ನನ್ನು ಹತ್ತು ರುಪಾಯಿ ಕೇಳಿದಳು. ಮರುದಿನ ಇಪ್ಪತ್ತು ರೂಪಾಯಿ ಕೇಳಿದಳು. ಈ ದಿನ ಬೆಳಗ್ಗೆ ಇಪ್ಪತ್ತೈದು ಕೇಳುತ್ತಾಳೆ.”
ಗೆಳೆಯ, “ಹೌದು, ಆ ಹಣದಿಂದ ಅವಳೇನಯ್ಯ ಮಾಡ್ತಾಳೆ?” ಕೇಳಿದ.
“ನನಗೇನು ಗೊತ್ತು? ನಾನವಳಿಗೆ ಯಾವತ್ತೂ ಹಣವನ್ನು ಕೊಟ್ಟೇ ಇಲ್ಲ.” ಮಾರವಾಡಿ ಉತ್ತರಿಸಿದ.
***
ಕೆನ್ನೆಗೆ ಏಟು
ಗಂಡಾಳು ಅಳುತ್ತ ಯಜಮಾನರೆಡೆಗೆ ಬಂದು, “ಸಾಹೇಬರೇ, ಅಮ್ಮಾವರು ಕೆನ್ನೆಗೆ ಹೊಡೆದರು” ಎಂದು ಹೇಳಿದ.
ಯಜಮಾನ, “ಅದಕ್ಕೇನೀಗ? ನಾನೆಂದಾದರೂ ಅಳುವುದನ್ನು ನೋಡಿದ್ದೀಯೋ?” ಎನ್ನಬೇಕೆ?
Comments
ಉ: ಸ್ವಲ್ಪಾದ್ರೂ ಸೀರಿಯಸ್ ಆಗಿ
In reply to ಉ: ಸ್ವಲ್ಪಾದ್ರೂ ಸೀರಿಯಸ್ ಆಗಿ by palachandra
ಉ: ಸ್ವಲ್ಪಾದ್ರೂ ಸೀರಿಯಸ್ ಆಗಿ