ಸ್ವಾಂತಂತ್ರ್ಯ ದಿನದಂದು ಪ್ಲಾಸ್ಟಿಕ್ ಬಾವುಟಗಳನ್ನು ದೂರವಿಡಿ
ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬಂದಂತೆ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಾವುಟಗಳು ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತವೆ. ಟ್ರಾಫಿಕ್ ಸಿಗ್ನಲ್ ಗಳ ಬಳಿ ದಿನಪತ್ರಿಕೆಗಳನ್ನೋ ಮತ್ತೇನನ್ನೋ ಮಾರುವ ಹುಡುಗರ ಕೈಯಲ್ಲಿ ಪ್ಲಾಸ್ಟಿಕ್ ಬಾವುಟಗಳು ಮಾರಾಟಕ್ಕೆಂದು ರಾರಾಜಿಸುತ್ತವೆ. ಕೆಲೆವೆಡೆ ಪೆಟ್ರೋಲ್ ಬಂಕುಗಳ ಬಳಿಯೂ ಹಿಡಿದು ನಿಂತಿರುತ್ತಾರೆ. ಚಿಣ್ಣರಿಗೆ ಇದು ಬೇಕೇ ಬೇಕು!
ಭಾರತೀಯರಲ್ಲಿ ದೇಶಪ್ರೇಮ ಆಗಸ್ಟ್ ೧೫ ಕ್ಕೆ ಅತಿ ಹೆಚ್ಚಿನ ತೀವ್ರತೆ ತಾಳುತ್ತದಷ್ಟೆ. ದೇಶಪ್ರೇಮವೆಂದುಕೊಂಡು 'ಪ್ಲಾಸ್ಟಿಕ್ ಆದರೇನು' ಎಂದು ಬಾವುಟಗಳನ್ನು ಖರೀದಿ ಮಾಡಿಯೇ ಬಿಡುತ್ತಾರೆ. ಕೆಲವರು ಹಿರಿಯರು ಕೂಡ ಇದರ 'ಮಜಾ' ಪಡೆಯಲು ಖರೀದಿ ಮಾಡಿ ತಮ್ಮ ಗಾಡಿಗೋ, ಮನೆಯ ಗೇಟಿಗೋ ಬಾವುಟವನ್ನು ಸಿಕ್ಕಿಸಿ 'ಭಾರತ್ ಮಾತಾ ಕಿ ಜೈ' ಎಂದು ಹೇಳಿ ಮರೆತುಬಿಡುತ್ತಾರೆ.
ಹಿರಿಯರ ಕಥೆಯೇ ಹೀಗಾದರೆ ಸಣ್ಣ ಮಕ್ಕಳಿಗೆ ಏನು ಹೇಳಬೇಕು? ಅಂದಿನ ರಜಾ ದಿನದಂದು ಸ್ನೇಹಿತರೊಂದಿಗೆ ಪ್ಲಾಸ್ಟಿಕ್ ಬಾವುಟ ಹಿಡಿದು ಆಟವಾಡಿ ಕೊನೆಗೆ ಅಲ್ಲೇ ಎಲ್ಲೋ ಬಿಸುಟಾಗಲೋ ಅಥವಾ ಮನೆಯ ಮೂಲೆಯೊಂದಕ್ಕೆ ಸೇರಿಸಿದಾಗಲೋ ಮುಗಿಯಿತು 'ಸ್ವಾತಂತ್ರ್ಯದಿನೋತ್ಸವ'. ಎಲ್ಲೆಯಿಲ್ಲದ ಉತ್ಸಾಹದಿಂದ ಮನೆಗೆ ಬಂದ ಬಾವುಟ ಕಸದ ಬುಟ್ಟಿ ಸೇರುತ್ತದೆ. ಇನ್ನು ಆಗಸ್ಟ್ ೧೫ ಆದ ನಂತರದ ವಾರ ರೋಡಿನಲ್ಲಿ, ಕಸದ ಬುಟ್ಟಿಗಳಲ್ಲಿ ಕೊನೆಗೆ ಕಸವನ್ನು ಹೊತ್ತೊಯ್ಯುವ ಬಿ ಎಮ್ ಪಿ ವ್ಯಾನ್ ಗಳಲ್ಲಿ ಅಲ್ಲಲ್ಲಿ ಕಸದ ರಾಶಿಯಲ್ಲಿ ನೇತಾಡುತ್ತಾ ನಮ್ಮ ರಾಷ್ಟ್ರದ ಬಾವುಟ ರಾರಾಜಿಸುತ್ತದೆ! ರೋಡಿನಲ್ಲಿ ಹರಿಬಿಟ್ಟ ಜಾನುವಾರು ಪಾಪ 'ಪ್ಲಾಸ್ಟಿಕ್ ತಿನ್ನುವ ವಸ್ತುವಲ್ಲ' ಎಂಬುದನ್ನು ತಿಳಿಯದೆಯೆ ಕಬಳಿಸಿದಾಗ ಬಾವುಟಗಳು ಅವುಗಳ ಹೊಟ್ಟೆ ಸೇರುವುದೂ ಉಂಟು. ಪುಣ್ಯವಂತಳಲ್ಲವೇ ನಮ್ಮ ಭಾರತ ಮಾತೆ?
ಭಾರತ ಮಾತೆಗೆ ಆಗುವ ಅವಮಾನದ ವೈಖರಿ ಇರಲಿ, ಭೂತಾಯಿಗಾಗುವ ಮಾಲಿನ್ಯ ಹಾಗೂ ಗಲೀಜು ಜನರ ಅರಿವಿಗೆ ಬರುವುದೂ ಕಡಿಮೆಯೇ. ಪ್ಲಾಸ್ಟಿಕ್ ಬಟ್ಟೆಯಂತೆ ಗೊಬ್ಬರವಾಗುವುದಿಲ್ಲ. ನೂರಾರು ವರ್ಷಗಳು ಕಳೆದರೂ ಕೊಳೆಯುವುದಿಲ್ಲ! ಹೊಟ್ಟೆಗೆ ಸೇರಿಸಿಕೊಂಡ ಜಾನುವರಗಳ ಗತಿ ದೇವರಿಗೇ ತಿಳಿದದ್ದು. ಹಸುಗಳಿಗೆ 'ಕಾಮಧೇನು', ದೇವರು ಎಂದು ಪೂಜಿಸುವವರಲ್ಲವೇ ನಾವುಗಳು? ದೇವರು ಕವರ್ ತಿಂದರೆ ಏನು ಆಗುವುದಿಲ್ಲವೆಂಬುದು ನಮ್ಮಗಳ ಲೆಕ್ಕಾಚಾರವೆ?
ಹೀಗೆ ಪ್ಲಾಸ್ಟಿಕ್ ಬಾವುಟಗಳನ್ನು ಅಲ್ಲಲ್ಲಿ ಬಿಸುಟು 'ಸಾರೆ ಜಹಾ ಸೆ ಅಚ್ಚಾ' ಎಂದು ಹೇಳಿ ಭಾರತವನ್ನು, ಕೊನೆಗೆ ನಮ್ಮ ಬೆಂಗಳೂರನ್ನು ಕಚ್ಛಡಾ ಎಬ್ಬಿಸುತ್ತೇವೆ!
'ಮಹಾತ್ಮ'ರೆನಿಸಿಕೊಂಡ ಬಾಪೂಜಿಯವರು ಜಗತ್ತಿಗೆ ಪರಿಚಯಿಸಿದ 'ಖಾದಿ' ನಮಗೆ ತುಟ್ಟಿಯೇ? ಪ್ಲಾಸ್ಟಿಕ್ ಬಾವುಟದ ಬದಲು ಖಾದಿಯ ಪುಟ್ಟ ಬಾವುಟಗಳನ್ನೇ ಬಳಸಬಾರದೇಕೆ? ಮುಂದಿನ ಸಾರಿ ಒಮ್ಮೆ ಒಗೆದು ಉಪಯೋಗಿಸಿದರಾಯಿತು! ಪ್ಲಾಸ್ಟಿಕ್ ಬಾವುಟದಂತೆ ಇಟ್ಟುಕೊಳ್ಳಲಾಗಲೀ, ತೆಗೆದಿಡುವುದರಲ್ಲಾಗಲೀ ರೇಜಿಗೆಯಾಗುವುದಿಲ್ಲ.
ಈ ಬಾರಿ ಸ್ವಾತಂತ್ರ್ಯೋತ್ಸವಕ್ಕೆ ನಿಮಗಾಗಲಿ ನಿಮ್ಮ ಪುಟ್ಟ ಮಕ್ಕಳಿಗಾಗಲಿ, ಪ್ಲಾಸ್ಟಿಕ್ ಬಾವುಟಗಳನ್ನು ಕೊಳ್ಳದಿರಿ. ಆಚರಣೆಗೆ ಬಾವುಟವು ಬೇಕೇ ಬೇಕು ಎಂದಾದರೆ ಖಾದಿಯ ಒಂದು ಬಾವುಟವನ್ನು ಕೊಂಡು ತನ್ನಿ.
- ಹರಿ ಪ್ರಸಾದ್ ನಾಡಿಗ್
Comments
ಬಾವುಟಗಳು , ಚಿಹ್ನೆಗಳಿ೦ದ(ಪಾರ್ಟಿಗಳು)
ಸರಿಯಾಗಿ ಹೇಳಿದ್ದೀರಿ