ಹಕ್ಕಿಯೊಂದು ಗೂಡು ಕಟ್ಟಿತ್ತು...
ನಾನು ಹೈದರಾಬಾದಿನಲ್ಲಿ ವಾಸವಿದ್ದ ಕೆಲವೇ ತಿಂಗಳುಗಳಲ್ಲಿ ನಾನು ನನ್ನ ಜೀವನದ ಪುಟಗಳಲ್ಲಿ ಮರೆಯೋದಕ್ಕೇ ಸಾಧ್ಯವಾಗದೇ ಇರೋ ಅಂಥಾ ಕೆಲವು ಸುಂದರ ನೆನಪುಗಳು ನನ್ನಲ್ಲಿ ಮನೆಮಾಡಿವೆ. ನಾನು ಪ್ರತೀದಿನ ನನ್ನ ಕೆಲಸವನ್ನ ಮುಗಿಸಿಕೊಂಡು ಮಧ್ಯಾನ್ನ ಅಲ್ಲೇ ಇದ್ದ ಒಂದು ಉಡುಪಿ ಹೋಟೇಲಿನಲ್ಲಿ ಊಟ ಮುಗಿಸಿ ಸಂಜೆ ಎಲ್ಲಿ ಟ್ರಾಫಿಕ್ ಪೋಲೀಸು ನನ್ನ ನೋಡಿ ನನ್ನ ಬೈಕನ್ನ ಹಿಡಿದುಬಿಡುತ್ತಾನೋ ಅನ್ನೋ ಭಯದಿಂದ ಮನೆಕಡೆ ಹೋಗುತ್ತಿದ್ದೆ.
ಆ ಟ್ರಾಫಿಕ್ಕೋ, ಅಲ್ಲಿಯ ಜನರೋ !!! ಅಭ್ಭಾ !!! ಬಲಗಡೆಯ ಇಂಡಿಕೇಟರ್ ಹಾಕಿ ಎಡಕ್ಕೆ ತಿರುಗುವ ಮಹಾನುಭಾವರು. ಪುರುಷ, ಮಹಿಳೆಯ ತಾರತಮ್ಯ ಅಲ್ಲಿ ಕಾಣೋದಿಲ್ಲ. ಜೀವ ಕೈನಲ್ಲಿ ಹಿಡಿದುಕೊಂಡು ಗಾಡಿ ಓಡಿಸಿಕೊಂಡು ಮನೆ ತಲುಪಿದರೆ ನನ್ನಲ್ಲೇ ಏನೋ ಒಂದು ಯುದ್ದದಲ್ಲಿ ಗೆಲುವು ಸಾಧಿಸಿದ ಹಾಗೆ ಸಂತಸ. ದಾರಿಮಧ್ಯೆ ಏನಾದರೂ ಕರ್ನಾಟಕದ ನೊಂದಣಿಯ ಯಾರಾದರೂ ಸಿಕ್ಕಿಬಿಟ್ಟರೆ ಅದಕ್ಕಿಂತಾ ಸಂತಸ ಮತ್ತೊಂದಿಲ್ಲ. ಹೇಗಾದರೂ ನಾನು ಅವರ ಮುಂದೆ ಹೋಗಿ ನಾನೂ ಕರುನಾಡಿನವನೇ ಎಂದು ಅವರಿಗೆ ಕಾಣಿಸುವಹಾಗೆ ನನ್ನ ಗಾಡಿಯನ್ನ ಅವರ ಮುಂದೆ ಕೊಂಡೊಯ್ದು ಅದರ ಕನ್ನಡಿಯಲ್ಲಿ ತಿರುಗಿನೋಡ್ತಾ ಇದ್ದೆ. ನನ್ನ ಹಾಗೇ ಅವರೂ ಕರ್ನಾಟಕದ ನೊಂದಣಿಯ ವಾಹನದ ನಿರೀಕ್ಷೆಮಾಡ್ತಾ ಇದ್ರೆ !!! ಅವರಿಗೂ ಸಮಾಧಾನ ಸಿಕ್ಕಲಿ ಅನ್ನೋ ಭಾವನೆ.
ನಾನಿದ್ದ ಮನೆಯಲ್ಲಿ ನನ್ನ ಮನೆಯ ಮುಂದೆ ಕೆಲವು ಗಿಡಗಳಿದ್ದರೆ ಮನೆಯ ಕಾಂಪೌಂಡಿನ ಮೂಲೆಯಲ್ಲಿ ಒಂದು ಸೀತಾಫಲದ ಮರ ಇತ್ತು. ಯಾವುದೋ ಕಾರಣಕ್ಕಾಗಿ ಅದನ್ನ ಕತ್ತರಿಸಿಹಾಕಿದ್ದರೂ ಅದು ಮತ್ತೆ ಚಿಗುರಿ ನಾನು ಸೋಲುವುದಿಲ್ಲವೆಂಬಂತೆ ಬೆಳೆಯುತ್ತಿತ್ತು. ಪ್ರತಿಸಂಜೆ, ಬೆಳಗಿನ ಹೊತ್ತಿನಲ್ಲಿ ಮತ್ತೆ ರಜೆಯದಿವಸ ನಾನು ಆ ಮರವನ್ನ ನೋಡ್ತಾ ಇರ್ತಿದ್ದೆ. ನನ್ನ ಮನೆಇದ್ದ ಜಾಗದಲ್ಲಿ ಸ್ವಲ್ಪ ಪ್ರಶಾಂತತೆ ನೆಲಸಿತ್ತು. ಅದು ಮುಖ್ಯರಸ್ತೆಗಿಂತಲೂ ಸ್ವಲ್ಪ ದೂರದಲ್ಲಿ ಇದ್ದದ್ದರಿಂದ ಅಲ್ಲಿ ಪಕ್ಷಿಗಳ ಕಲರವ ಆಗಾಗ ಕೇಳಿಬರುತ್ತಲಿತ್ತು. ಅಂದೊಂದು ದಿನ ನಾನು ನಮ್ಮ ಸೀತಾಫಲದಮರದಲ್ಲಿ ಕೆಲವು ಪುಟ್ಟ ಪುಟ್ಟ ಪಕ್ಷಿಗಳು ಹಾರಿ ಬಂದು ಕುಳಿತು ತಮ್ಮಲ್ಲೇ ಏನೋ ಮಾತನಾಡಿಕೊಳ್ಳುತ್ತಿರುವುದನ್ನ ಕಂಡೆ. ಅದಾದ ಕೆಲವು ದಿನಗಳ ನಂತರ ಅದೇ ಮರದಲ್ಲಿ ಆ ಎರಡೂ ಪಕ್ಷಿಗಳು ತಮ್ಮ ಪುಟ್ಟ ಗೂಡೊಂದನ್ನ ಕಟ್ಟಲು ಪ್ರಾರಂಭಿಸಿದವು. ದೂರದಿಂದ ಹೆಕ್ಕಿತರುತ್ತಲಿದ್ದ ಆ ಕಸ ಕಡ್ಡಿಗಳನ್ನ ನಾಜೂಕಾಗಿ ಜೋಡಿಸಿ ತಮ್ಮ ಗೂಡನ್ನ ಸಿಂಗರಿಸತೊಡಗಿದವು. ಅದನ್ನು ನೋಡುವುದೇ ಒಂದು ಖುಷಿ.
ದಿನದಿಂದ ದಿನಕ್ಕೆ ಆ ಜೋಡಿಗಳು ಕಟ್ಟುತ್ತಿದ್ದ ಪುಟ್ಟ ಗೂಡು ಪೂರ್ಣವಾಗ್ತಾ ಬಂದಿತ್ತು. ನಾನು ಆ ಪುಟ್ಟ ಗೂಡಿನಲ್ಲಿ ಪುಟಾಣಿ ಮರಿಗಳ ಕಲರವ ಕೇಳಿಬರಬಹುದು ಅದರ ಫೋಟೋ ತೆಗಿಯಬಹುದು ಅಂತೆಲ್ಲಾ ಲೆಕ್ಕಾಚಾರ ಹಾಕ್ತಾಇದ್ದೆ. ಅಪರೂಪಕ್ಕೆಂದು ಆಗಸದಿಂದ ಸುರಿದ ಮಳೆ ಎಲ್ಲಿ ಆ ಪುಟ್ಟ ಗೂಡನ್ನ ನುಚ್ಚು ನೂರುಮಾಡಿರತ್ತೋ ಅಂತ ಆತಂಕದಿಂದ ಅಂದು ಸಂಜೆ ನನ್ನ ಆಫೀಸಿನಿಂದ ಮನೆಗೆ ಬಂದೆ. ಬಂದವನೇ ಆ ಸೀತಾಫಲದ ಮರದಬಳಿ ಹೋಗಿ ನೋಡಿದಾಗ ಅಲ್ಲಿ ಮುದ್ದಾದ ಕೆಮ್ಮಣ್ಣಿನಬಣ್ಣದ ೪ ಮೊಟ್ಟೆಗಳನ್ನ ಚೆಂದವಾಗಿ ಜೋಡಿಸಿಟ್ಟ ಹಕ್ಕಿ ಮೇಲಿನ ಕೇಬಲ್ಲಿನಲ್ಲಿ ಕುಳಿತು ಜೋರಾಗಿ ಕೂಗಲಾರಂಭಿಸಿತು. ಅದಕ್ಕೆ ತೊಂದರೆ ಮಾಡಬಾರದೆಂಬ ಕಾರಣದಿಂದ ನಾನು ಒಂದು ಛಾಯ ಚಿತ್ರವನ್ನ ಸೆರೆ ಹಿಡಿದು ಮರಳಿ ನನ್ನ ಗೂಡಿಗೆ ಸೇರ್ಕೊಂಡೆ.
ಈ ಘಟನೆಯಾದ ೨ದಿನದ ನಂತರ ನನಗೆ ಆ ಹಕ್ಕಿಗಳ ಕಲರವವಾಗಲೀ, ಅವುಗಳ ಹಾರಾಟವಾಗಲೀ ಆ ಮರದ ಹತ್ತಿರ ಕಾಣಲಿಲ್ಲ. ಏನಾಗಿರಬಹುದೆಂಬ ಗೊಂದಲದೊಂದಿಗೇ ನಾನು ಗೂಡಿನತ್ತ ಹೊರಟೆ. ಅಲ್ಲಿದ್ದ ಆ ಮೊಟ್ಟೆಗಳು ಬರಿದಾಗಿತ್ತು. ಖಾಲಿಯಾಗಿದ್ದ ಆ ಗೂಡಿನಲ್ಲಿ ಹಕ್ಕಿಗಳು ಹೇಗೆತಾನೆ ಇದ್ದಾವು ??? ಆ ಗೂಡಿನಿಂದ ಕೊಂಚ ದೂರದಲ್ಲಿ ಅದರ ಒಡೆದ ಒಂದು ಮೊಟ್ಟೆ ಕಾಣಿಸಿತು.
ಮನೆಯ ಮುಂದಿನ ಪುಂಡ ಹುಡುಗರು ಆ ಗೂಡಿನೊಳಗಿನಿಂದ ಆ ಮೊಟ್ಟೆಗಳನ್ನು ಹೊರತೆಗೆದು ಅದನ್ನು ಒಡೆದು ಹಾಕಿದ್ದರು. ಪುಟ್ಟ ಪುಟ್ಟ ಮರಿಗಳೊಂದಿಗೆ ಹಾರಬೇಕಿದ್ದ ಆ ಪಕ್ಷಿಯ ಸಂಸಾರ ಅಂದು ಬರಿದಾಗಿತ್ತು, ಮನುಷ್ಯನ ಕ್ರೂರತನಕ್ಕೆ ಮೂಕ ಸಾಕ್ಷಿಯಾಗಿತ್ತು.