ಹಣೆಯಲಿ ಕುಂಕುಮ ಅರಳಿದೆ !

ಹಣೆಯಲಿ ಕುಂಕುಮ ಅರಳಿದೆ !

 
’ಕಪ್ಪು ಕುಂಕುಮ ಕೆಂಪು ಕುಂಕುಮ’ ಎಂಬ ನಾಲಿಗೆ ತಿರುಚುವ (ಟಂಗ್ ಟ್ವಿಸ್ಟರ್) ಭಾಷೆಯ ಬಗ್ಗೆ ನಾನು ಹೇಳಹೊರಟಿಲ್ಲ ! 
 
ಇತ್ತೀಚೆಗಿನ ದಿನಗಳಲ್ಲಿ ಹೆಂಗಳು ಕುಂಕುಮ ಹಚ್ಚುವುದನ್ನೇ ಬಿಟ್ಟಿದ್ದಾರೆ ಎಂಬ ವಿವಾದ ಸೃಷ್ಟಿಸುತ್ತಿಲ್ಲ!! 
 
ಬಿಂದಿ ಹಚ್ಚೋದ್ರಿಂದ ಋಣಾತ್ಮಕ ವಿಚಾರಗಳು ಉದ್ಭವವಾಗುತ್ತದೆ, ಕುಂಕುಮ ಹಚ್ಚುವುದರಿಂದ ಆದ್ನ್ಯ ಚಕ್ರದ ಮೂಲಕ ಶರೀರದಲ್ಲಿ ತರಂಗಗಳು ಏಳುತ್ತವೆ ಎಂದೂ ನುಡಿಯುತ್ತಿಲ್ಲ!!!
 
ಹಾಗಾದ್ರೆ ನಾ ಹೇಳುತ್ತಿರೋದ್ರಾದ್ರೂ ಏನು? ನೋಡೋಣ, ತಡ್ಕೊಳ್ಳಿ ...
 
ಮಲ್ಲೇಶ್ವರದ ಎಂಟನೇ ಕ್ರಾಸಿನಲ್ಲಿರುವ ಕುಂಕುಮದ ಅಂಗಡಿಗಳು ನನಗೆ ಎಂದೆಂದೂ ಪ್ರಿಯ. ಈ ಬಾರಿ ಅಲ್ಲಿಗೆ ಬಂದಿದ್ದಾಗ, ಅಂಗಡಿ ಮುಂದೆ ನಿಂತು ಸೆಲ್ಫೀ ತೆಗೆದುಕೊಳ್ಳೋಣ ಎನ್ನಿಸಿತು. ಹಾಗೆ ಮಾಡೋದ್ರಿಂದ ಟೋಪಿ ಹಾಕುವವರ ಕೈಯಲ್ಲಿ ತಲೆ ಕೊಟ್ಟ ಹಾಗೆ ಆಗುತ್ತೆ ಅಂತ ತೆಪ್ಪಗಿದ್ದೆ. ಗೋಪುರಾಕಾರದ ವಿವಿಧ ಬಣ್ಣದ ಕುಂಕುಮಗಳನ್ನು ನೋಡಲೇ ಖುಷಿ. ’ಬಣ್ಣಾ ನನ್ನ ಒಲವಿನ ಬಣ್ಣಾ’ ಹಾಡಿನಲ್ಲಿ ತೋರಿಸುವಂತೆ ತಟ್ಟೆಯ ಕುಂಕುಮವನ್ನು ಚಿಮ್ಮೋಣ ಎನ್ನಿಸುತ್ತದೆ. ಹಾಗೆ ಮಾಡಿದಲ್ಲಿ ನನ್ನ ಮುಂದಿನ ಸ್ಟಾಪ್ ಮಲ್ಲೇಶ್ವರದ ಪೋಲೀಸ್ ಠಾಣೆ ಎಂದುಕೊಂಡು ಸುಮ್ಮನಿರುತ್ತೇನೆ.
 
ಚಿಕ್ಕವನಿದ್ದಾಗ ಒಂದು ಡೌಟ್ ಇತ್ತು. ಕುಂಕುಮ ಎಲ್ಲಿಂದ ಬರುತ್ತೆ? ಮನೆಯಲ್ಲಿ ಅರಿಶಿಣದ ಬೇರುಗಳನ್ನ ಕಂಡಿದ್ದೆ. ಅರಿಶಿಣದ ಬೇರನ್ನು ಪುಡಿ ಮಾಡಿದರೆ ಅರಿಷಿಣ ಆಗುತ್ತದೆ ಎಂದು ಗೊತ್ತಿತ್ತು. ಆದರೆ ಎಂದೂ ಕುಂಕುಮದ ಬೇರನ್ನು ಕಂಡಿರಲಿಲ್ಲ, ಕೇಳಿರಲಿಲ್ಲ. ಹಾಗಿದ್ರೆ ಕುಂಕುಮ ಎಲ್ಲಿಂದ ಬರುತ್ತೆ ಅನ್ನೋದು ತಿಳಿದಿರದ ವಿಷಯವಾಗಿತ್ತು. ಈಗಿನಂತೆ ಅಂದು ಗೂಗಲ್ ಇರಲಿಲ್ಲ, ಬಾಯಿಬಿಟ್ಟು ಯಾರನ್ನಾದರೂ ಕೇಳಲು ಬಿಗುಮಾನ ಅಲಿಯಾಸ್ ಎಲ್ಲಿ ದಡ್ಡ ಎಂದುಕೊಳ್ಳುತ್ತಾರೋ ಎಂಬ ಭಯ. ಹೀಗಾಗಿಯೇ ಇನ್ನೂ ಜೀವನದಲ್ಲಿ ಉದ್ದಾರ ಆಗಿಲ್ಲ, ಬಿಡಿ!
 
ಇಂದು ನನಗೆ ಗೊತ್ತಿರುವಂತೆ ಅರಿಶಿಣವೇ ಕುಂಕುಮದ ತಾಯಿ! ಕೆಲವರದ್ದು ಒಂದು ಜಿಜ್ಞ್ನಾಸೆ. ಅರಿಶಿನ ದೊಡ್ಡದೋ ಕುಂಕುಮ ದೊಡ್ಡದೋ ಅಂತ. ಕೆಲವು ಮನೆಗಳಲ್ಲಿ ಗೆಜ್ಜೆವಸ್ತ್ರಕ್ಕೆ ಅರಿಶಿನ ಲೇಪಿಸಿತ್ತಾರೆ. ಮಂತ್ರಾಕ್ಷತೆ ಹಳದೀ ಬಣ್ಣ ಇರುತ್ತದೆ. ಹಲವು ಮನೆಗಳಲ್ಲಿ ಕೆಂಪು ಹಚ್ಚಿದ ವಸ್ತ್ರ, ಕೆಂಪು ಮಂತ್ರಾಕ್ಷತೆ. ’ಕಾರಣ ಇದು ಕಣ್ರೀ’ ಅಂತ ಸಂಪ್ರದಾಯ, ವಾಡಿಕೆ, ಶ್ರೇಷ್ಟತೆ ಅಂತ ಯಾವ ಲೇಬಲ್ ಆದರೂ ಹಚ್ಚಿ, ನನಗೇನೂ ಅಡ್ಡಿಯಿಲ್ಲ. ನನಗೆ ಅನ್ನಿಸುವಂತೆ ದೇವತಾರ್ಚನೆಗೆ ಅರಿಶಿನ-ಕುಂಕುಮ ಎರಡೂ ಶ್ರೇಷ್ಟ. ಅದಕ್ಕೇ ಕನ್ನಡ ತಾಯಿ ಎರಡನ್ನೂ ತನ್ನ ಧ್ವಜದಲ್ಲಿ ಏರಿಸಿಕೊಂಡಿದ್ದಾಳೆ. ದೈವಕ್ಕೆ ಎರಡೂ ಒಂದೇ, ಮಠದ ರಾಜಕೀಯಕ್ಕೆ ಬೇರೆ ಬೇರೆ ಅಷ್ಟೇ!
 
ಸಾಮಾನ್ಯವಾಗಿ ಕುಂಕುಮವನ್ನು ಭ್ರೂಗಳ ಮಧ್ಯೆ ಅಂದರೆ ಮೂರನೇ ಕಣ್ಣಿನ ಸ್ಥಾನದಲ್ಲಿ ಹಚ್ಚಿಕೊಳ್ಳುತ್ತಾರೆ. ಕಂಡೂ ಕಾಣದಂಥಹ ಚಿಕ್ಕ ಬೊಟ್ಟಿನ ಅಳತೆಯಿಂದ ಹಿಡಿದು ಇಡೀ ಹಣೆಯ ಪ್ರದೇಶವನ್ನೇ ಮುಚ್ಚಿಕೊಳ್ಳುವ ವಿವಿಧ ಶೈಲಿಯಲ್ಲಿ ಕುಂಕುಮವನ್ನು ಇಡುವ ಜನರನ್ನು ಕಂಡಿದ್ದೇನೆ, ಮತ್ತು ಅವರ ಬಗ್ಗೆ ಕೇಳಿದ್ದೇನೆ. 
 
ಬಹುತೇಕ ಮನೆಗಳಲ್ಲಿ ಕನ್ನಡಿಗೂ ಹಚ್ಚುತ್ತಾರೆ, ಅದು ಬೇರೆ ವಿಷಯ! ಒಮ್ಮೆ ನಮ್ಮ ಬಂಧುಗಳೊಬ್ಬರ ಮನೆಗೆ ಹೋಗಿದ್ದೆ. ಮನೆಯಾತ ಕನ್ನಡಿಯ ಮೇಲಿನ ಬಿಂದಿಗಳ ನಡುವೆ ಜಾಗ ಹುಡುಕಿಕೊಂಡು ನೋಡಿಕೊಳ್ಳುತ್ತ ತಮ್ಮ ಗಡ್ಡ ಕೆರೆದುಕೊಳ್ಳುತ್ತಿದ್ದರು. ಬಿಂದಿ ಜರುಗಿಸಿಡುವ ಸ್ವಾತಂತ್ರ್ಯವೂ ಅವರಿಗೆ ಇರಲಿಲ್ಲ ಅಂತ ಅಂದು ನನಗೆ ಅರ್ಥವಾಗಿದ್ರೆ ತಾನೇ? ಹೋಗ್ಲಿ ಬಿಡಿ ...
 
ಕುಂಕುಮ ಹಚ್ಚಿಕೊಳ್ಳುವುದಾದರೂ ಏಕೆ? ಯಾರೋ ಹೇಳಿದ ವಿಷಯ ಹೀಗಿದೆ. ಒಂದು ಕಾಲದಲ್ಲಿ ಮಾಯಾಮಾಟ ಮಾಡುವವರು ಹೆಣ್ಣಿನ ಭ್ರೂಗಳ ಮಧ್ಯೆ ದಿಟ್ಟಿಸಿ ನೋಡಿ ವಶೀಕರಿಸಿ ಬಲಿ ಕೊಡಲು ಎತ್ತಿಕೊಂಡು ಹೋಗುತ್ತಿದ್ದರಂತೆ. ಅದರಿಂದ ತಪ್ಪಿಸಿಕೊಳ್ಳಲು ಕುಂಕುಮ ಇಡುವ ಪದ್ದತಿ ಬಂತಂತೆ. ನಿಜವೋ ಸುಳ್ಳೋ ಗೊತ್ತಿಲ್ಲ, ಆದರೆ ಕುಂಕುಮ ಇಟ್ಟುಕೊಳ್ಳುವುದು ಒಳ್ಳೆಯದಕ್ಕೆ ಅನ್ನೋದು ಸಂಪ್ರದಾಯಸ್ತ ಕುಟುಂಬದವನಾದ ನನಗೆ ವಂಶಪಾರಂಪರ್ಯದಿಂದ ತಿಳಿದು ಬಂದಿರುವ ವಿಚಾರ.
 
ಕುಂಕುಮ ಹಚ್ಚುವುದು ಒಳ್ಳೆಯದಕ್ಕೆ ಎಂದ ಮೇಲೆ ಅದು ಹೆಂಗಳಿಗೇ ಏಕೆ ಮೀಸಲು? ಎಂದು ಒಬ್ಬರು ಕುಹಕವಾಡಿದರು! ಜಗತ್ತನ್ನೇ ಅರಿಯದ ಜನ ಈ ರೀತಿ ನುಡಿದಾರು ಅಲ್ಲವೇ... ಕದ್ರಿ ಗೋಪಾಲನಾಥ್, ಇಳಯರಾಜ, ಪುಟ್ಟಣ್ಣ ಕಣಗಾಲ್, ಹರಿಪ್ರಸಾದ್ ಚೌರಾಸಿಯಾ, ಕುನ್ನಕ್ಕುಡಿ ವೈದ್ಯನಾಥನ್, ಬಾಲಮುರಳಿ ಕೃಷ್ಣ, ಆರ್.ಕೆ.ಶ್ರೀಕಂಠನ್  .. ಒಬ್ಬರೇ ಇಬ್ಬರೇ ... ಇವರುಗಳ ಹೆಸರನ್ನು ಓದುತ್ತಿದ್ದಂತೆಯೇ ನಿಮ್ಮ ಮನದಲ್ಲಿ ಅವರ ಚಿತ್ರ ಕುಂಕುಮದ ಜೊತೆ ತಾನೇ ಕಂಡಿದ್ದು? 
 
ಕುಂಕುಮ ಹಚ್ಚಿದರೇನೇ ಕಳೆ ಕಣ್ರೀ ಅನ್ನುತ್ತಾರೆ ಹಲವರು. ಇಲ್ಲ ಎನ್ನಲಾರೆ ಆದರೆ ಭೀಮಸೇನ್ ಜೋಷಿ, ಏಸುದಾಸ್ ಅವರುಗಳಿಗೆ ಕಳೆ ಇಲ್ಲವೇ? ಹಚ್ಚಿದರೇ ಕಳೆ ಅಲ್ಲಾ ಆದರೆ ಹಚ್ಚಿದರೆ ಕಳೆ ಹೆಚ್ಚು ಅನ್ನಬಹುದೇನೋ?
 
ಸಾಮಾನ್ಯ ಜನ ಆಲಿಯಾಸ್ ಗಂಡಸರು ದಿನ ನಿತ್ಯದಲ್ಲಿ ಹಣೆಗೆ ಕುಂಕುಮ ಇಡದಿದ್ದರೂ ಹಬ್ಬದ ದಿನ ಅಥವಾ ದೇವಸ್ಥಾನಕ್ಕೆ ವಿಸಿಟ್ ಮಾಡಿದಾಗ ಕುಂಕುಮ ಇಟ್ಟುಕೊಳ್ಳೋದು ಹೆಚ್ಚು ಕಮ್ಮಿ ಗ್ಯಾರಂಟಿ. ಮಾನವನಿಗೂ ದೈವಕ್ಕೂ ಇರುವ ಮಾಧ್ಯಮ ಈ ಕುಂಕುಮ ಎನ್ನುತ್ತಾರೆ ಹಲವರು.
 
ಕುಂಕುಮದ ಕಥೆ ಇಷ್ಟಾದರೆ ಈ ಬರಹಕ್ಕೆ ಪ್ರೇರಣೆ ಏನು? ನನ್ನ ಪ್ರಶ್ನೆಗಳು ಏನು? ಎಂದು ಅಕಸ್ಮಾತ್ ನಿಮಗೆ ಅನ್ನಿಸಿದ್ದರೆ ಅವು ಹೀಗಿವೆ ...
 
ವಾರಾಂತ್ಯದ ಸ್ಪೆಷಲ್ ಅಂದರೆ ಕದ್ರಿ ಗೋಪಾಲನಾಥ್ ಅವರ ಅಯ್ಯಪ್ಪ ಸ್ವಾಮಿ ಸುಪ್ರಭಾತದ ಆಡಿಯೋ/ವಿಡಿಯೋ! ವಾಟ್ಸಾಪ್’ನಲ್ಲಿ ಎಲ್ಲೆಲ್ಲೂ ಓಡಾಡುತ್ತಿದ್ದುದು. ಅದೇ ಈ ಬರಹಕ್ಕೆ ಪ್ರೇರಣೆ. 
 
ಅರ್ಧಚಂದ್ರಾಕಾರದ ಕುಂಕುಮದ ಮೇಲೆ ದುಂಡನೆಯ ಕುಂಕುಮ ಅವರ ಹಣೆಯ ಮೇಲೆ. ಮೃದಂಗ ಬಾರಿಸುತ್ತಿದ್ದವರ ಹಣೆಯಲ್ಲಿ ಉದ್ದನೆಯ ಕುಂಕುಮ. ವಯೋಲಿನ್ ನುಡಿಸುತ್ತಿರುವವರ ಹಣೆಯಲ್ಲಿ ತಿಲಕ ಸ್ವರೂಪಿ ಕುಂಕುಮ. ಮೌತ್ ಆರ್ಗನ್ ನುಡಿಸುವವರ ಹಣೆಯಲ್ಲಿ ದುಂಡನೆಯ ದೊಡ್ಡ ಕುಂಕುಮದ ಬೊಟ್ಟು ಅದರ ಮೇಲೆ ಚಿಕ್ಕ ಸೈಜಿನ ಬೊಟ್ಟು. ಹಿಂದೆ ಕುಳಿತ ತಾಳ ಹಾಕುವವರ ಹುಬ್ಬುಗಳ ನಡುವೆ ದುಂಡನೆಯ ಸಿಂಗಲ್ ಬೊಟ್ಟು. ಹೀಗೇ ವಿವಿಧ ರೀತಿಯ ಕುಂಕುಮದ ಶೈಲಿಗಳು. ತಕ್ಷಣ ನೆನಪಾದವರು ಕುನ್ನಕ್ಕುಡಿ ವೈದ್ಯನಾಥನ್. ಅತಿವಿಶಿಷ್ಟ ಶೈಲಿ ಅವರದ್ದು.
 
ಹೀಗೆ ಹತ್ತು ಹಲವು ಶೈಲಿಯ ಕುಂಕುಮಧಾರಣೆಯ ಚಿತ್ರಗಳನ್ನು ಅವಲೋಕಿಸಿ ನಾಲ್ಕು ಸಾಲು ಬರೆದ ಮೇಲೆ ಅನ್ನಿಸಿದ್ದು ಕುಂಕುಮ ಧರಿಸಲು ಯಾವುದೇ ಒಂದು ನಿಯಮ ಇಲ್ಲ. ಬದಲಿಗೆ ಹಣೆಬರಹದ ಮೈದಾನ ಇರುವುದೇ ನಿಮ್ಮಿಚ್ಚೆಯಂತೆ ಕುಂಕುಮ ಧರಿಸಲು ಎಂದು! ಖಾಲೀ ಬಿಡಬೇಡಿ. ಕುಂಕುಮ, ವಿಭೂತಿ, ಅಂಗಾರ-ಅಕ್ಷತೆ, ಗಂಧ ಏನಾದರೂ ಅಡ್ಡಿಯಿಲ್ಲ. ನಿಮ್ಮ ನಾಮ ಫಲಕವನ್ನು ತಂಪಾಗಿರಿಸಿಕೊಂಡು ಆರೋಗ್ಯವಂತರಾಗಿರಿ ಅಂತ ಎಳ್ಳು-ಬೆಲ್ಲ ತಿಂದ ಬಾಯಿ ಒಳ್ಳೇ ಮಾತಾಡುತ್ತಿದೆ.
 
ನಿಮ್ಮ ಅನಿಸಿಕೆ ಏನು? ಏನೂ ಹೇಳಲ್ಲ ಅಂದ್ರೆ, ಚಿತ್ರದಲ್ಲಿರೋ ಕುಂಕುಮಗಳ ಹಣೆಯ ಒಡೆಯರನ್ನು ಗುರುತಿಸಿ ಸಾಕು ....
 

Rating
No votes yet

Comments

Submitted by Iynanda Prabhukumar Tue, 02/07/2017 - 20:50

"ಮನೆಯಾತ ಕನ್ನಡಿಯ ಮೇಲಿನ ... ಗಡ್ಡ ಕೆರೆದುಕೊಳ್ಳುತ್ತಿದ್ದರು", ಅಂತ‌ ಓದಿದಾಗ‌ ಗುಂಡಿ(pot hole)ಗಳ‌ ನಡುವೆ ರಸ್ತೆಯನ್ನು ಹುಡುಕಿಕೊಂಡು ವಾಹನವನ್ನು ಓಡಿಸುವದರ‌ ನೆನಪಾಯಿತು.
"ಕನ್ನಡ ತಾಯಿ ಎರಡನ್ನೂ ತನ್ನ ಧ್ವಜದಲ್ಲಿ ಏರಿಸಿಕೊಂಡಿದ್ದಾಳೆ", ಅಂತನ್ನುವದಕ್ಕಿಂತ‌ 'ಅರಶಿನ‍-ಕುಂಕುಮದ‌ ವರ್ಣ‌ಸಂಕೇತವನ್ನು ಬಳಸಿಕೊಂಡು ಕನ್ನಡದ‌ ಬಾವುಟವನ್ನು ರಚಿಸಿದ್ದಾರೆ', ಅಂತ‌ ಹೇಳೋದು ಸಮಂಜಸ‌.
ಇರಲಿ ಬಿಡಿ. ಬರೆಹವಂತೂ ಸೊಗಸಾಗಿದೆ.