ಹಣ್ಣೆಲೆ ಚಿಗುರಿದಾಗ :

ಹಣ್ಣೆಲೆ ಚಿಗುರಿದಾಗ :

 

ತ್ರಿವೇಣಿಯವರ ಹಣ್ಣೆಲೆ ಚಿಗುರಿದಾಗ ಒಂದು ಸಾಮಾಜಿಕ, ಸಾಂಸಾರಿಕ ಕಾದಂಬರಿ.  ಇಡೀ ಕಾದಂಬರಿ ಒಂದು ಸಂಸಾರದಲ್ಲಿ ನಡೆಯುವ ಘಟನೆಗಳ ಮತ್ತು ಸಂಸಾರದ ಸದಸ್ಯರ ಸ್ವಭಾವದ ಸುತ್ತಲೂ ಹೆಣೆಯಲ್ಪಟ್ಟಿದೆ. 

ಮನೆಯ ಯಜಮಾನ “ರಾಯರು” ತಮ್ಮಮರೆಗುಳಿತನದಿಂದಾಗಿ ಯಾವಾಗಲೂ ಮನೆಯವರಿಂದ ಅಪಹಾಸ್ಯಕ್ಕೊಳಗಾಗುತ್ತಿರುತ್ತಾರೆ.  ಇಡೀ ಕಥೆಯಲ್ಲಿ ಈ ರಾಯರ ಪಾತ್ರ ತುಂಬಾ ಮುಖ್ಯ ಕೊಂಡಿಯಾಗಿದೆ.  ಬೇರೆಲ್ಲಾ ಪಾತ್ರಗಳಿಗೂ ಮತ್ತು  ಅವರ ಮಗುವಿನಂತಹ ಮೊಂಡು ಸ್ವಭಾವದಿಂದಲೂ, ಮರೆವಿನಿಂದಲೂ ನಡೆಯುವ ಘಟನೆಗಳು ಓದುಗರನ್ನು ನಗೆಯ ಕಡಲಲ್ಲಿ ತೇಲಿಸುತ್ತದೆ.  ರಾಯರ ವ್ಯಕ್ತಿತ್ವದ ಜೊತೆ ಇಷ್ಟು ಹಾಸ್ಯ ಬೆರೆತಿದ್ದರೂ ಕೂಡ ಅವರು ತುಂಬಾ ತೂಕದ, ಅಪರೂಪದ ವ್ಯಕ್ತಿಯಾಗಿ ನಮ್ಮ ನೆನಪಲ್ಲಿ ಉಳಿಯುತ್ತಾರೆ.  ನಿವೃತ್ತಿ ಹೊಂದಿ ಮನೆಯಲ್ಲಿರುವ ರಾಯರು ಎಲ್ಲರ ಗಮನ ತಮ್ಮ ಕಡೆ ಸೆಳೆಯುವ ಪ್ರಯತ್ನ ಪುಟ್ಟ ಮಗುವಿನಂತೆ ಯಾವಾಗಲೂ ಅವರು ಮಾಡುತ್ತಲೇ ಇರುತ್ತಾರೆ.  ಪ್ರತಿಯೊಂದಕ್ಕೂ ಲೆಕ್ಕ ಹಾಕುತ್ತಾ ತಮ್ಮ ಜಿಹ್ವಾ ಚಾಪಲ್ಯವನ್ನು ಹಿಡಿತದಲ್ಲಿಡಲಾರದೆ, ಬೇಕು ಬೇಕೆಂದ ತಿಂಡಿಗಳನ್ನೂ, ಅಡುಗೆಯನ್ನೂ ಮಾಡಿಕೊಡುವಂತೆ ತಮ್ಮ ಪತ್ನಿ ರಾಜಮ್ಮನನ್ನು ಗೋಳಾಡಿಸುತ್ತಾ, ಸೊಸೆಯಂದಿರ ಹಾಸ್ಯಕ್ಕೂ ಗುರಿಯಾಗುತ್ತಿರುತ್ತಾರೆ ರಾಯರು.  ಎಲೆ ಆದಿಕೆ ಹಾಕಿಕೊಳ್ಳಲು ಶುರು ಮಾಡಿದರೆಂದರೆ, ಮನೆ ಮಂದಿಗೆಲ್ಲಾ ಸಂತಸದ ಸಮಯ ಏಕೆಂದರೆ ಪತ್ನಿ ರಾಜಮ್ಮನವರು ಎಲೆ ಮಡಿಸಿ ಕೊಡುತ್ತಿದ್ದರೆ, ಒಂದಾದ ಮೇಲೊಂದರಂತೆ ಲೆಕ್ಕವಿಲ್ಲದೆ ಮೆಲ್ಲುತ್ತಾ ಕುಳಿತಿರುತ್ತಾರೆ.  ಆಗ ಯಾವುದೇ ಕಾರಣಕ್ಕೂ ಸಿಟ್ಟು ಮಾಡಿಕೊಳ್ಳದೇ ತಾಂಬೂಲದ ಸ್ವಾದವನ್ನು ಮೆಲ್ಲುತ್ತಾ, ಅಮಲಿನಲ್ಲಿ ಮೈ ಮರೆತಿರುತ್ತಾರೆ. 

ತಮಗೆ ಸಕ್ಕರೆ ಖಾಯಿಲೆ ಇದೆಯೆಂದು ಗೊತ್ತಾದ ದಿನ, ಆಕಾಶ ಭೂಮಿ ಒಂದು ಮಾಡುತ್ತಾ... ಮುಸುಕೆಳೆದು ಮಲಗಿ ಬಿಡುತ್ತಾರೆ ರಾಯರು.  ವೈದ್ಯನಾದ ಮಗ ಮಾಧವ ತಂದೆಯ ಖಾಯಿಲೆ ಕೇಳಿ ನಕ್ಕು ಬಿಟ್ಟಾಗ, ರೇಗುತ್ತಾ “ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತ್ತದೆ” ಎನ್ನುತ್ತಾರೆ.  “ಹಣ್ಣೆಲೆಗಳು ಚಿಗುರತೊಡಗಿದರೆ ಚಿಗುರೆಲೆಗಳ ಗತಿಯೇನು” ಎಂದ ಮಗನ ಮೇಲೆ ಉರಿದು ಬೀಳುತ್ತಾರೆ.  ರಾಯರು ಸಾವಿಗೆ ಅತೀವ ಹೆದರುತ್ತಿದ್ದರಾದ್ದರಿಂದ ಚಿಕ್ಕ ಪುಟ್ಟ ನೆಗಡಿಯಂತಹ ಖಾಯಿಲೆಗೂ ಮನೆಯವರೆಲ್ಲರ ಕೈ ಕಾಲು ಕೆಡಿಸಿ ಬಿಡುತ್ತಿರುತ್ತಾರೆ.

ಒಬ್ಬಳೇ ಮಗಳು ಮಾಲತಿಗೆ ಗಂಡು ನೋಡಲು ಮೈಸೂರಿಗೆ ರೈಲಿನಲ್ಲಿ ಹೊರಟು, ನಿದ್ದೆ ಮಾತ್ರೆ ತಗೊಂಡು ಎಚ್ಚರವೇ ಆಗದೆ, ಮತ್ತೆ ಅದೇ ರೈಲಿನಲ್ಲಿ ಬೆಂಗಳೂರಿಗೆ ವಾಪಸ್ಸು ಬಂದಿರುತ್ತಾರೆ.  ಹೀಗೆ ಹಾಸ್ಯ ಘಟನೆಗಳ ಸರಮಾಲೆಯ ಜೊತೆ ಜೊತೆಗೇ ರಾಯರ ವ್ಯಕ್ತಿತ್ವ, ಗೌರವಯುತವಾಗಿ ಚಿತ್ರಿಸಲ್ಪಟ್ಟಿದೆ.  ನಮ್ಮದೇ ಮನೆಯ ಹಿರಿಯರೊಬ್ಬರ ಗಲಾಟೆಗಳೇನೋ ಎನ್ನುವಷ್ಟು ಆತ್ಮೀಯವಾಗಿ ಬಿಡತ್ವೆ ಘಟನೆಗಳೂ, ರಾಯರ ಸಂಸಾರವೂ...

ರಾಯರಿಗೆ ೫ ಜನ ಗಂಡು ಮಕ್ಕಳು ಮತ್ತು ಒಬ್ಬಳೇ ಮಗಳು ಮಾಲತಿ.  ಹೆಚ್ಚು ಓದಿದರೆ ನವೆಯುತ್ತಾಳೆಂದು SSLCಗೇ ಓದು ಬಿಡಿಸಿ ಬಿಡುತ್ತಾರೆ.  ೫ ಜನ ಅಣ್ಣಂದಿರ ಮುದ್ದಿನ ತಂಗಿಯಾಗಿ, ಮಗುವಿನಂತೆಯೇ ಒಂದೂ ಕಷ್ಟ ತಿಳಿಯದೆ ಬೆಳೆಯುತ್ತಾಳೆ ಮಾಲತಿ.  ಅದ್ಧೂರಿಯಾಗಿ.. ಖರ್ಚು ಹೆಚ್ಚಾಯಿತೆಂದು ಕೂಗಾಡುತ್ತಲೇ ಮಗಳ ಮದುವೆ ಮಾಡುತ್ತಾರೆ. ರಾಯರ ಪತ್ನಿ ಮಗಳ ಮದುವೆಯಾಗಲೆಂದೇ ಕಾದಿದ್ದರೇನೋ ಎಂಬಂತೆ, ಯಾರಿಗೂ ಯಾವ ಸುಳಿವೂ ಕೊಡದೇ, ಇದ್ದಕ್ಕಿದ್ದಂತೆ ಇಲ್ಲಿಯ ಕಥೆ ಮುಗಿಸಿ ಹೊರಟು ಬಿಡುತ್ತಾರೆ.  ಮಾಲತಿ ಗಂಡನ ಮನೆಗೆ ಹೋಗುವ ಮೊದಲೇ.. ಮದುವೆಯಾಗಿ ೩ ತಿಂಗಳಿಗೇ ವಿಧವೆಯಾಗಿ ತಮ್ಮಲ್ಲೇ ಉಳಿದಾಗ ರಾಯರು ಮಾನಸಿಕವಾಗಿ ತುಂಬಾ ಬಳಲುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಮಗಳ ಬದುಕಿನ ದುರಂತ.. ಪತ್ನಿಯ ವಿಯೋಗ ಎಲ್ಲವನ್ನೂ ಎದುರಿಸಿ, ನಮ್ಮ ರಾಯರು ಮತ್ತೆ ತಮ್ಮ ತನವನ್ನು ಮೆರೆಯುತ್ತಾರೆ. 

ಹಳೆಯ ಕಾಲದ ರಾಯರು ವಿಧವೆ ಮಗಳನ್ನು ಕಾಲೇಜಿಗೆ ಕಳುಹಿಸಲು ಒಪ್ಪೋಲ್ಲ ಆದರೆ ಗಂಡು ಮಕ್ಕಳ ಬಲವಂತದಿಂದಿ ಮಾಲತಿ ವಿದ್ಯಾಭ್ಯಾಸ ಮುಂದುವರೆಸುತ್ತಾಳೆ.  ಮಗಳು ಸಂತೋಷವಾಗಿರುವುದನ್ನು ಕಂಡು ರಾಯರೂ ಸಂತಸ ಪಡುತ್ತಾರೆ.  ಆದರೆ ತಮ್ಮ ಸೊಸೆಯ ಚಿಕ್ಕಮ್ಮನ ಮಗ, ವಿಧುರ ಹಾಗೂ ೩-೪ ವರ್ಷದ ಮಗನ ತಂದೆ ಪ್ರಸಾದ್ ತಮ್ಮ ಮಗಳನ್ನು ಮದುವೆಯಾಗ ಬಯಸಿದಾಗ ಮಾತ್ರ ನಿಜಕ್ಕೂ ತುಂಬಾ ಕೆರಳುತ್ತಾರೆ.  ಕೊನೆಗೂ ಇಲ್ಲೂ ಅವರು ತಮ್ಮ ನಿಲುವಿನಲ್ಲಿ ಬದಲಾವಣೆ ತಂದುಕೊಂಡೇ ಬಿಡುತ್ತಾರೆ.  ಮದುವೆ ನಡೆಯುತ್ತದೆ.

ಕಥೆಯ climax ರಾಯರ ವ್ಯಕ್ತಿತ್ವದ  high light and ultimatum.  ಜ್ವರ ಬಂದು ಮಲಗಿ, ತಾವಿನ್ನು ಸತ್ತೇ ಹೋಗಬಹುದೆಂದು ಹೆದರಿ, ಇಷ್ಟವಿಲ್ಲದಿದ್ದರೂ ತಿಜೋರಿ ಬೀಗದ ಕೈ ದೊಡ್ಡ ಮಗನ ಕೈಗೆ ಕೊಡುವ ರಾಯರು... ಜ್ವರ ಬಿಟ್ಟ ತಕ್ಷಣ, ಮಗನ ಮುಂದೆ ಕೈ ಚಾಚಿ ತಿಜೋರಿ ಬೀಗದ ಕೈ ವಾಪಸ್ಸು ಪಡೆಯುತ್ತಾರೆ...... :-)

ಪುಸ್ತಕ ಓದಿ ಮುಗಿಸಿದಾಗ, ಒಂದು ತಿಳಿನಗೆ ನಮ್ಮ ಮುಖದಲ್ಲಿರುತ್ತದೆ....  ರಾಯರ ಪಾತ್ರ ಹಾಸ್ಯಮಯವಾಗಿ ರೂಪಿತವಾಗಿದ್ದರೂ, ತುಂಬಾ ಭಾವನಾತ್ಮಕವಾಗಿ, ಆ ವಯಸ್ಸಿನವರ ಮನಸ್ಥಿತಿಯನ್ನು ಲೇಖಕಿ ಸರಳವಾಗಿ, ಸೂಚ್ಯವಾಗಿ ಚಿತ್ರಿಸಿದ್ದಾರೆ.  ಬಹು ಕಾಲ ಮನದಲ್ಲುಳಿಯ ಬಹುದಾದ ಕಥೆ. 

 

ಚಲನ ಚಿತ್ರ ಕೂಡ ಬಂದಿರುವುದರಿಂದ ನಮಗೆ ಎಲ್ಲಾ ಪಾತ್ರಗಳೂ ಮನದಲ್ಲಿ ಅಚ್ಚೊತ್ತಿ ಬಿಡುತ್ತವೆ..........

Rating
No votes yet

Comments