ಹಬ್ಬಗಳು
ಹಬ್ಬಗಳು
ಹಬ್ಬಗಳ ನೆನೆದರೆ ಮನೆಮಾಡುವುದು ಸಡಗರ
ಏಕೆಂದರೆ ಅವು ಆಗಿಹುದು ವೈವಿದ್ಯತೆಯ ಆಗರ
ಹತ್ತು ಹಲವು ಹಬ್ಬಗಳ ನಾಡಿದು ನಮ್ಮ ದೇಶ
ನಾನಾ ಕಾರಣಗಳಿಗೆ ಹಬ್ಬಗಳಿರುವುದೇ ವಿಶೇಷ
ಹಬ್ಬದ ದಿನ ಹತ್ತಿರ ಬರುತ್ತಲೇ ನಡೆವುದು ತಯಾರಿ
ಮನೆಯವರಿಗೆಲ್ಲ ಹೊಸ ಬಟ್ಟೆಗಳು ಬೇಕು ತರಾವರಿ
ಮನೆಯ ಮುಂದೆ ಸುಂದರ ರಂಗೋಲಿಯ ಚಿತ್ತಾರ
ಮನೆಯ ಬಾಗಿಲಿಗೆ ಮಾವಿನ ತೋರಣದ ಸಿಂಗಾರ
ಮುಂಜಾನೆಯೇ ಮಾಡುವರು ಅಭ್ಯಂಜನ ಸ್ನಾನ
ಮಡಿಯುಟ್ಟು ಆರಂಭಿಸುವರು ದೇವರ ಪೂಜೆಯನ
ಹೊಸ ಬಟ್ಟೆಯುಟ್ಟು ನಲಿವರು ಮಕ್ಕಳು-ಮುದುಕರು
ಹಬ್ಬಕೆ ನೆಂಟರು ಬಂದು ಸಂತೋಷ ತಂದಿಹರು
ಮಧ್ಯಾಹ್ನ ಭೋಜನಕೆ ಉಂಟು ಒಬ್ಬಟ್ಟಿನ ಊಟ
ಊರ ಬೀದಿ ಬೀದಿಗಳಲ್ಲೆಲ್ಲಾ ಸಂಭ್ರಮದ ನೋಟ
ಹಬ್ಬಗಳ ಆಚರಿಸುವರು ಜನ ವಿಭಿನ್ನ ಕಾರಣಗಳಿಗೆ
ಎಲ್ಲಾ ಹಬ್ಬಗಳು ಕೊಡುವುದು ಸಂತಸದ ಘಳಿಗೆ
ಹಬ್ಬಗಳು ನಾಡಿನ ಅಖಂಡತೆ, ಏಕತೆಗೆ ದ್ಯೋತಕ
ಇವುಗಳು ನಮ್ಮ ಸಂಸ್ಕೃತಿ, ಸಂಸ್ಕಾರದ ಪ್ರತೀಕ
- ತೇಜಸ್ವಿ. ಎ. ಸಿ
Rating