ಹಬ್ಬಗಳ ಮೂಲಕ ಪಾಡ್ಯ, ಬಿದಿಗೆ, ತದಿಗೆ... ಬಾಯಿಪಾಠ

ಹಬ್ಬಗಳ ಮೂಲಕ ಪಾಡ್ಯ, ಬಿದಿಗೆ, ತದಿಗೆ... ಬಾಯಿಪಾಠ

     ಚಿಕ್ಕಂದಿನಲ್ಲಿ ನಾವೆಲ್ಲ "ಪಾಡ್ಯ, ಬಿದಿಗೆ, ತದಿಗೆ.....ಹುಣ್ಣಿಮೆ/ಅಮಾವಾಸ್ಯೆ" ಅಂತ ಹದಿನೈದು ದಿನಗಳ ಬಾಯಿಪಾಠ ಮಾಡಿರುತ್ತೀವಿ ಅಲ್ಲವೇ? ಮನೆಯಲ್ಲಿ ಅಜ್ಜ ಅಥವಾ ಅಜ್ಜಿ ಇದ್ದರಂತೂ, ಈ ಬಾಯಿಪಾಠಗಳು ಬಹುತೇಕ "ಕಂಪಲ್ಸರಿ"ಯೇ ಬಿಡಿ! ಸುಮ್ಮನೆ ಪಾಡ್ಯ, ಬಿದಿಗೆ ಅಂತ ಬಾಯಿಪಾಠ ಮಾಡಿಸುವುದು ಒಂದು ರೂಢಿಯಾದರೆ, ಪ್ರತಿ ತಿಥಿ(ದಿನ)ಗೂ ಒಂದು ಹಬ್ಬವನ್ನು ತಳಕು ಹಾಕಿ ಅದರ ಮೂಲಕ ಬಾಯಿಪಾಠದಲ್ಲಿ ಇನ್ನಷ್ಟು ಆಸಕ್ತಿ ಚಿಗುರುವಂತೆ ಮಾಡುವುದು ಇನ್ನೊಂದು ಪದ್ಧತಿ. ನಮ್ಮಲ್ಲಿ ಹಬ್ಬಗಳಿಗೇನು ಕೊರತೆ ಹೇಳಿ? ಅದರಲ್ಲಿ ಪ್ರಸಿದ್ಧವಾದ ಹಬ್ಬಗಳನ್ನು ಆಯಾ ದಿನಕ್ಕೆ ಜೋಡಿಸಿ ಬಾಯಿಪಾಠದಲ್ಲಿ ಅಳವಡಿಸಿರುತ್ತಾರೆ.

     ಸಣ್ಣವನಿದ್ದಾಗ ನನಗೆ ಈ ರೀತಿ ಬಾಯಿಪಾಠ ಆಗಿತ್ತು:

ಬಲಿ ಪಾಡ್ಯಮಿ
ಸೋದರ ಬಿದಿಗೆ
ಅಕ್ಷಯ ತದಿಗೆ (ತೃತೀಯ)
ಗಣೇಶ ಚೌತಿ
ನಾಗರ ಪಂಚಮಿ
ಸುಬ್ರಹ್ಮಣ್ಯ ಷಷ್ಠಿ (ಸುಬ್ಬರಾಯನ ಷಷ್ಠಿ)
ರಥ ಸಪ್ತಮಿ
ದುರ್ಗಾ ಅಷ್ಟಮಿ
ಮಹಾ ನವಮಿ (ಮಾರನವಮಿ)
ವಿಜಯ ದಶಮಿ
ವೈಕುಂಠ ಏಕಾದಶಿ
ಉತ್ಥಾನ ದ್ವಾದಶಿ (ತುಳಸಿ ಹಬ್ಬ)
??? ತ್ರಯೋದಶಿ
ಅನಂತನ ಚತುರ್ದಶಿ / ನರಕ ಚತುರ್ದಶಿ
ಮಹಾಲಯ ಅಮಾವಾಸ್ಯೆ
ಗುರು ಪೌರ್ಣಮಿ (ಹುಣ್ಣಿಮೆ)

"ತ್ರಯೋದಶಿ"ಗೆ ಏನು ಹಬ್ಬ ಅಂತ ಮರೆತು ಹೋಗಿದೆ. ದಯವಿಟ್ಟು ಯಾರಾದರೂ ತಿಳಿಸುತ್ತೀರಾ?

     ಈ ರೀತಿ ಹೇಳಿಕೊಡೋದು ಎಷ್ಟು ಚೆನ್ನ ಅಲ್ಲವಾ? ಹಾಗೇ ಒಮ್ಮೆ ಕಣ್ಣು ಮುಚ್ಚಿ ಜ್ಞಾಪಿಸಿಕೊಳ್ಳಿ. "ಬಲಿ ಪಾಡ್ಯಮಿ" ಅಂತ ಅಜ್ಜ/ಅಜ್ಜಿ/ಅಮ್ಮ ಶುರು ಮಾಡಿದ ತಕ್ಷಣ ಅಲ್ಲೇ ಮೊದಲ ಬ್ರೇಕು! "ಅಮ್ಮ, ಈ ಬಲಿ ಯಾರು?". ತಗೋ, ಅಲ್ಲಿ "ಬಲೀಂದ್ರ"ನ ಕಥೆ ಕೇಳು. "ಸೋದರ ಬಿದಿಗೆ"ಯ ಮೂಲಕ "ರಾಖಿ ಹಬ್ಬ, ಸೋದರ-ಸೋದರಿ ಸಂಬಂಧ" ಇವುಗಳ ಬಗ್ಗೆ ತಿಳಿದುಕೊಂಡು, "ವಿಜಯ ದಶಮಿ"ಯ ಮೂಲಕ ಮಹಾಭಾರತಕ್ಕೂ ಒಂದು ಎಂಟ್ರಿ ಹೊಡೆದು, ಒಟ್ಟಾರೆ ಬಾಯಿಪಾಠ ಅಲ್ಲಿ ನೆಪಕ್ಕೆ ಮಾತ್ರ. ಸಂಜೆ ಆಡಿ ಬಂದ ಮನಸ್ಸಿಗೆ ಕಥೆಗಳ ಮೂಲಕ ನಮ್ಮ ಸಂಸ್ಕೃತಿಯ, ಸೊಗಡಿನ ದರ್ಶನ. ಅದಕ್ಕೆ ತಕ್ಕ ಹಿನ್ನೆಲೆಯೆಂಬಂತೆ ಸೂರ್ಯ ಮುಳುಗುವ ಸಮಯ, ಆ ಮಬ್ಬು ವಾತಾವರಣ; ಅಂಗಳದಲ್ಲಿ ತುಳಸಿಕಟ್ಟೆಯ ಮುಂದೆಯೋ, ಅಥವಾ ಒಳಮನೆಯಲ್ಲಿ ದೇವರ ಗೂಡಿನ ಮುಂದೋ ಅಜ್ಜನೋ, ಅಜ್ಜಿಯೋ ಇವುಗಳನ್ನು ಹೇಳಿಕೊಡುತ್ತಾ ಇದ್ದರೆ, ಈಗಲೂ ಒಮ್ಮೆ ಕೂತು ಹೇಳಿಸಿಕೊಳ್ಳೋಣ ಅಂತ ಅನ್ನಿಸುವುದಿಲ್ಲವೇ?

     ನಿಮ್ಮ ಭಾಗದಲ್ಲಿ ಈ ಬಾಯಿಪಾಠದ ಇತರೆ ರೂಢಿಗಳಿದ್ದಲ್ಲಿ(ಪಾಠಾಂತರ) ದಯವಿಟ್ಟು ಹಂಚಿಕೊಳ್ಳಿ. ಎಲ್ಲರೂ ಕೇಳಿ ಖುಷಿ ಪಡುತ್ತೀವಿ. ಹಾಗೂ ಒಟ್ಟಿಗೆ ಸಂಗ್ರಹಿಸಲು ಅನುಕೂಲವಾಗುತ್ತದೆ.

Rating
Average: 3 (2 votes)

Comments

Submitted by vinugange1 Tue, 11/05/2024 - 10:55

ನಿಮ್ಮ ಬರಹ ತುಂಬಾ ಚೆನ್ನಾಗಿದೆ 

ಅತ್ಯಂತ ವೈಜ್ಞಾನಿಕ ನೆಲೆಗಟ್ಟಿನ ನಮ್ಮ ಪಂಚಾಂಗ ಕಲಿಯಬೇಕು 

ತ್ರಯೋದಶಿ ಗೆ ಯಾವುದು ಅಂತ ಕೇಳಿದ್ದೀರಿ 

ಉತ್ತರ ಮಹಾಶಿವರಾತ್ರಿ