ಹಬ್ಬ ತಂದ ನೆನಪು...

ಹಬ್ಬ ತಂದ ನೆನಪು...

ಇವತ್ತು ಗಣೇಶ ಚತುರ್ಥಿ... ಏನು ಮಾಡಿದ್ದೀಯೋ ??? ನಮ್ಮನೇಲಿ ಕಡುಬು, ಒಬ್ಬಟ್ಟು, ಪಾಯಸ ಮಾಡಿದ್ದೀನಿ...

ಹೀಗೆ ನನ್ನ ಗೆಳತಿಯೊಬ್ಬಳು ಹೇಳುತ್ತಿರುವಾಗ ನನ್ನ ಕಣ್ತುಂಬಿ ಬಂದಿತ್ತು. ಮನೆಯಲ್ಲಿ ಯಾರಾದರೂ ಸಾವನ್ನಪ್ಪಿರುವಾಗ ಯಾವುದೇ ಹಬ್ಬ ಹರಿದಿನಗಳನ್ನ ಆಚರಿಸುವುದಾದರೂ ಹೇಗೆ ? ಅಪ್ಪ ಕಳೆದ ಗಣಪತಿ ಹಬ್ಬದಂದು ನಮ್ಮೊಂದಿಗಿದ್ದರು, ಆದರೆ ಈ ಬಾರಿ.... ಅವರು ನಮ್ಮನ್ನಗಲಿ ೮ ತಿಂಗಳು ಕಳೆದಿದೆ. ನಮ್ಮನ್ನಗಲಿಯೂ ಅವರು ನಮ್ಮೊಂದಿಗಿದ್ದಾರೆ. ಕಳೆದ ೨ ವರುಷಗಳ ಹಿಂದೆ ಇದೇ ಸಮಯಕ್ಕೆ ನಾವೆಲ್ಲಾ ಉಡುಪಿಗೆ ಹೋಗಿ ನಮ್ಮ ಅಜ್ಜನಮನೆಯಲ್ಲಿ ಹಬ್ಬವನ್ನಾಚರಿಸಿದ್ದುಂಟು... ಆಗ ಮನೆ ಮಂದಿಯೆಲ್ಲಾ ಒಟ್ಟಿಗೇ ಸೇರಿ ಮನೆಯಲ್ಲಿ ಏನೋ ಒಂದುರೀತಿಯ ಸಂಬ್ರಮ, ಸಡಗರ ನೆಲೆಸಿತ್ತು. ನಮ್ಮ ಮಾವನವರು ಸ್ವತಃ ತಾವೇ ತಯಾರಿಸಿದ ಗಣಪನ ಮೂರ್ತಿಯನ್ನು ಪೂಜಿಸಿ ನಂತರ ನಮ್ಮ ಅಜ್ಜನ ಮನೆಮುಂದಿರುವ ಕೆರೆಯಲ್ಲಿ ವಿಸರ್ಜಿಸುತ್ತಿದ್ದರು. ಆ ಸಂಧರ್ಬದಲ್ಲಿ ಅಲ್ಲಿಯ ವಾತಾವರಣವನ್ನು ನೋಡುವುದೇ ಒಂದು ರೀತಿಯ ಖುಷಿ...

ಎಲ್ಲರೋಂದಿಗೆ ಬೆರೆತು ಮಾತನಾಡಿ ಅಜ್ಜನ ತೋಟದೊಳಗಡೆ ತಿರುಗಾಡಿ ಬುಗುರಿಮರದಡಿಯಲ್ಲಿ ಬಿದ್ದಿದ್ದ ಬುಗುರಿ ಹಣ್ಣನ್ನು ಹೆಕ್ಕಿ ತಿನ್ನುತ್ತಿದ್ದೆವು. ಕೊಟ್ಟಿಗೆಯಲ್ಲಿ ಇರುವ ದನ ಕರುಗಳ ಮೈದಡವುತ್ತಾ ಹಕ್ಕಿಗಳ ಚಿಲಿಪಿಲಿಯನ್ನು ಕೇಳುತ್ತಾ ನಮಗೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಆದರೆ ಈ ವರುಷ ಮನೆಯಲ್ಲಿ ಸಂಭ್ರಮ, ಸಡಗರ ಇಲ್ಲ, ಹಬ್ಬಕ್ಕೆಂದು ನಾನು ಮೈಸೂರಿಗೂ ಹೋಗಲಿಲ್ಲ. ಮನದಲ್ಲಿ ಏನೋ ಒಂದು ರೀತಿಯ ಬೇಸರ ಮಡುಗಟ್ಟಿತ್ತು. ಬೆಳಗಿನಿಂದ ತಿಂಡಿಯನ್ನೂ ಮಾಡಿಕೊಳ್ಳದೇ ಕಂಪ್ಯೂಟರಿನಲ್ಲಿ ನಾನು ತೆಗೆದಿದ್ದ ಹಳೆಯ ಫೋಟೋಗಳನ್ನು ನೋಡುತ್ತಾ ಕುಳಿತಿದ್ದೆ. ಆ ಸಂಧರ್ಭದಲ್ಲಿ ಅಪ್ಪನ ಕೆಲವು ಚಿತ್ರಗಳು ಹಾದು ಹೋದವು. ಅದು ಆಯುಧಪೂಜೆಯ ಸಂಧರ್ಭ. ಬೆಳಗ್ಗೆ ಎದ್ದು ಸ್ನಾನಮಾಡಿ ದೇವರಿಗೆ ಪೂಜೆ ಮಾಡಿ ಅವರ ಸೈಕಲ್ಲಿಗೆ ಮತ್ತೆ ನನ್ನ, ಅಣ್ಣನ ಬೈಕಿಗೆ ಪೂಜೆ ಮಾಡುತ್ತಿದ್ದರು. ಅವರ ಕೈಇಂದಲೇ ಪೂಜೆಯನ್ನು ಮಾಡಿಸುವ ಸಲುವಾಗಿ ನಾನು ಬೆಂಗಳೂರಿನಿಂದ ಮೈಸೂರಿಗೆ ನನ್ನ ಬೈಕಿನಲ್ಲೇ ಹೋಗುತ್ತಿದ್ದೆ. ಅವರನ್ನು ಕೊನೆಯ ಸಲ ಕಾಣಲು ನಾನು ಹೋಗಿದ್ದೂ ಅದೇ ಬೈಕಿನಲ್ಲಿ.

ಅಪ್ಪನಿಗೆ ಸಕ್ಕರೆಖಾಯಿಲೆ ಇದ್ದರೂ ಹಬ್ಬದ ದಿನಗಳಂದು ಸಿಹಿ ಊಟ ಮಾಡದೇ ಬಿಡುತ್ತಿರಲಿಲ್ಲ, ಬಾಕಿ ದಿನಗಳಂದು ಕಹಿಬೇವಿನ ಮಾತ್ರೆಯನ್ನ ತೆಗೆದುಕೊಂಡು ತಮ್ಮ ಆರೋಗ್ಯವನ್ನ ಸರಿದೂಗಿಸಿಕೊಳ್ಳುತ್ತಿದ್ದರು. ಅವರ ಮನಸ್ಸಿಗೆ ಬೇಸರವಾಗಬಾರದೆಂದು ಮನೆಯಲ್ಲಿ ಸಿಹಿತಿಂಡಿಗಳನ್ನು ತರುವುದನ್ನೇ ನಾವೆಲ್ಲಾ ಕಡಿಮೆ ಮಾಡಿದ್ದೆವು. ಹಬ್ಬ ಹರಿದಿನಗಳಂದು ಸ್ವಲ್ಪವೇ ಸ್ವಲ್ಪ ದೇವರಿಗೆ ನೈವೇದ್ಯ ಮಾಡುವ ಸಲುವಾಗಿ ಸಿಹಿತಿಂಡಿ ಇರುತ್ತಿತ್ತು. ಅಪ್ಪನಿಗೆ ಮೊದಲಿಂದಲೂ ಸಿಹಿತಿಂಡಿಯನ್ನು ಕಂಡರೆ ಪ್ರೀತಿ ಹೆಚ್ಚು. ಅವರಿಗೆ ಸಕ್ಕರೆಖಾಯಿಲೆ ಬಂದಮೇಲೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ... ಪ್ರತಿ ಹೆಜ್ಜೆಯಲ್ಲೂ ಮೈಎಲ್ಲಾ ಕಣ್ಣಾಗಿಸಿಕೊಂಡು ತಿರುಗಾಡಬೇಕಾಗಿ ಬಂತು. ಅಪ್ಪಿ ತಪ್ಪಿ ಕೈಗೇನಾದರೂ ಮುಳ್ಳು ಚುಚ್ಹಿದರೆ ಚಿಮ್ಮುಟವನ್ನು ಬಿಸಿಮಾಡಿ ಮುಳ್ಳು ತೆಗೆದು ಅವರಿಗೆ ಇನ್ಫೆಕ್ಶನ್ ಆಗದಂತೆ ನೋಡಿಕೊಳ್ಳುತ್ತಿದ್ದೆವು.

ಇಂದು ಅಪ್ಪ ನೆಟ್ಟು ಬೆಳೆಸಿದ, ಫಲನೀಡುತ್ತಿರುವ ತೆಂಗಿನ ಮರವನ್ನ ಪಕ್ಕದ ಮನೆಯವರು ಕತ್ತರಿಸಿ ಹಾಕಿ ಎಂದು ಹೇಳುತ್ತಿದ್ದಾರೆ !!! ಆ ಮರವನ್ನ ನೇರವಾಗಿ ಬೆಳೆಸಲು ಸೈಕಲ್ಲಿನ ಟಯರ್‍ಅನ್ನು ಹಾಕಿ ಎಳೆದು ಕಟ್ಟಿ ನಾವೆಲ್ಲಾ ಪಟ್ಟ ಪಾಡು ಅಷ್ಟಿಷ್ಟಲ್ಲ... ಅಪ್ಪ ನಮ್ಮನ್ನಗಲಿ ಇನ್ನೂ ವರುಷ ಕೂಡಾ ಸಂಧಿಲ್ಲ, ಪಕ್ಕದ ಮನೆಯವನು ಗಲಾಟೆ ಮಾಡುತ್ತಿದ್ದಾನೆ. ಆ ಮರದಲ್ಲಿ ಜೀವ ತುಂಬಿದೆ, ಅಪ್ಪ ಕಂಡ ಕನಸುಗಳು ತುಂಬಿದೆ, ಅವರ ನೆನಪಿದೆ, ಅವರ ಶ್ರಮ, ದುಡಿಮೆ ಎಲ್ಲಾ ಸೇರಿ ಆ ಮರ ಇಂದು ಬೆಳೆದು ನಿಂತಿದೆ. ಅದನ್ನು ಯಾವ ಕೈ ಇಂದ ಕಡಿಯುವುದು ??? ಏನು ಮಾಡಲೂ ದಾರಿ ಕಾಣುತ್ತಿಲ್ಲ...

ಅಪ್ಪಾ, ನೀವು ನೆಟ್ಟ ಆ ಕಲ್ಪವೃಕ್ಷವನ್ನು ಉಳಿಸಿಕೊಳ್ಳಲು ನಮ್ಮ ಕೈಲಾದ ಪ್ರಯತ್ನ ನಾವು ಮಾಡುತ್ತೇವೆ... ನಮ್ಮ ದಾರಿದೀಪವಾಗಿ... ನಮಗೆ ದಾರಿ ತೋರಿಸಿ

Rating
No votes yet

Comments