ಹರಕೆ
ಈ ಬಾರಿ ಊರಿಗೆ ಹೋದವನಿಗೆ ಯಾವ ಮದುವೆ ಊಟವೂ ಸಿಕ್ಕಿರಲಿಲ್ಲ. ಸಂಜೆಯ ಹೊತ್ತು ಅಮ್ಮನಲ್ಲಿ ಅದನ್ನೇ ಹೇಳುತ್ತಿದ್ದೆ. ಅದಕ್ಕೆ ಕಾಯುತ್ತಿದಂತೆ ಅಮ್ಮ ಶುರು ಮಾಡಿದಳು..'ಕುರಿ ಪೂಜೆ ಹೇಳಿ ವರ್ಷ ಐದು ಮೇಲಾಯಿತು. ಇನ್ನೂ ನಿನ್ನ ಅಣ್ಣನಿಗೆ ಸಮಯ ಬರಲಿಲ್ಲ. ದೇವರ ಕೆಲಸ ಎಲ್ಲ ಹಾಗೆ ಎಷ್ಟು ದಿನ ಅಂತ ಬಾಕಿ ಇಟ್ಟುಕೊಳ್ಳುವುದು. ನಾನು ಹಣ ಕೊಡ್ತೇನೆ ಹೇಳಿದರೂ ಹಮ್ಮಿಸಿಕೊಳ್ಳಳಿಕ್ಕೆ ಇವರಿಗೆ ಏನು ದಾಡಿಯೋ'. ಅಣ್ಣನಿಗೂ ಕೇಳಿ ಕೇಳಿ ಬೇಜಾರಾಗಿತ್ತು ಅನ್ನಿಸುತ್ತೆ..ಸುಮ್ಮನೆ ಒಪ್ಪಿಕೊಂಡ. ಮತ್ತೆ ನೋಡುವಾಗ ಮೂರು ಕುರಿ ಪೂಜೆ ಬಾಕಿ ಇತ್ತಂತೆ..ಒಂದು ಅಪ್ಪ ಹೇಳಿಕೊಂಡದ್ದು..ಏಕೆ, ಏನು ಅಂತ ಯಾರಿಗೂ ಗೊತ್ತಿಲ್ಲ. ಹೇಳಿಕೊಂಡಿದ್ದಾರೆ ಅಂತ ಹೇಗೆ ಗೊತ್ತಾಯಿತೋ ನನಗೆ ತಿಳಿಯಲಿಲ್ಲ. ಇನ್ನೆರಡೂ ಅಣ್ಣ ಹೇಳಿಕೊಂಡದ್ದು. ಒಂದು ಅಕ್ಕನ ಮದುವೆ ಸಮಯದಲ್ಲಂತೆ. ಇನ್ನೊಂದು ನಮ್ಮ ಶಿಲೆಕಲ್ಲು ವ್ಯವಹಾರ ಸ್ವಲ್ಪ ಸಂಕಷ್ಟದಲ್ಲಿದ್ದಾಗ. ಅಮ್ಮ ಹೇಳುವಂತೆ ಎರಡೂ ಬಾರಿ ಚಾಮುಂಡೇಶ್ವರಿ ಹರಿಕೆ ಪಡೆದುಕೊಂಡು ಒಳ್ಳೆ ರೀತಿಯಲ್ಲಿಕೇಳಿದ್ದನ್ನು ನಡೆಸಿಕೊಟ್ಟಿದ್ದಳು.
'ಮೂರು ಕುರಿಯೆಂದರೆ ಐದು ದಿನ ಇಟ್ಟು ತಿಂದರೂ ಮುಗಿಯುವುದಿಲ್ಲ', ಖುಷಿಯಿಂದ ಹೇಳಿದೆ. 'ಆ ಹಪ್ಪುಕ್ಕೆಟ್ಟ ಬಳೆಗಾರರು ನಮಗೆಲ್ಲಿ ಬಿಡ್ತಾರೆ, ಎಷ್ಟಿದ್ದರೂ ಅವರಿಗೆ ಸಾಲುವುದಿಲ್ಲ', ಬಳೆಗಾರರಿಗೆ ಬಯ್ಯುತ್ತ ಅಕ್ಕ ಹೊರಗಡೆ ಬಂದಳು. ನಮ್ಮ ಊರ ದೇವಸ್ಥಾನಕ್ಕೆ ಪೂಜೆ ಮಾಡುವುದು ದೇವಸ್ಥಾನದ ಸಮೀಪದಲ್ಲಿ ಇರುವ ಬಳೆಗಾರರ ಮನೆಯವರು. ಎಷ್ಟು ವರ್ಷದಿಂದ ಅಂತಹ ನನಗೂ ಸರಿಯಾಗಿ ಗೊತ್ತಿಲ್ಲ. ಮಾಂಸಾಹಾರಿ ದೇವತೆಯಾದ್ದರಿಂದ ಬ್ರಾಹ್ಮಣರ ಪೂಜೆ ಇರಲಿಲ್ಲ. ಮೊದಲೆಲ್ಲ ಒಂದೇ ಮನೆಯವರ ಪೂಜೆ ಇತ್ತು, ಬಳೆಗಾರರದ್ದು ಅವಿಭಾಜ್ಯ ಕುಟುಂಬವಾಗಿರುವಾಗ. ಕೆಲ ವರ್ಷಗಳ ಹಿಂದೆ ಅವರ ಮನೆ ಪಾಲಾದಾಗ ದೇವರನ್ನೂ ಪಾಲು ಮಾಡಿಕೊಂಡಿದ್ದರು. ಹಾಗಾಗಿ ವರ್ಷಕ್ಕೊಬ್ಬರ ಪೂಜೆ ಈಗ. 'ಈಗಿರುವ ಸಂಜು ಬಳೆಗಾರರು ತುಂಬಾ ಒಳ್ಳೆಯವರು. ಉಳಿದವರ ಹಾಗಲ್ಲ. ಪೂಜೆಯೂ ಒಳ್ಳೆ ಮಾಡ್ತಾರೆ, ಊಟ ಕೂಡ ಒಳ್ಳೆಯದಾಗಿ ಹಾಕ್ತಾರೆ', ಅಮ್ಮನ ಶಿಫಾರಿಸು ಅವರಿಗೆ.
'ಮೂರು ಕುರಿ ಪೂಜೆಯೆಂದರೆ ಖರ್ಚು ಒಟ್ಟು ಎಷ್ಟಾಗಬಹುದು' ಕೇಳಿದೆ. 'ಒಂದು ಕುರಿ ಪೂಜೆಗೆ ಏನೂ ಇಲ್ಲ ಅಂದ್ರೆ ಹೆಚ್ಚು ಕಡಿಮೆ ಹದಿನೈದರಿಂದ ಇಪ್ಪತ್ತು ಸಾವಿರ ರುಪಾಯಿ ಬೇಕು. ಇದು ಮೂರು ಒಟ್ಟಿಗೆ ಕೊಡುವದರಿಂದ ನಮಗೆ ಎರಡು ಕುರಿಗಳದ್ದು ಮಾತ್ರ ಹೆಚ್ಚಿನ ಖರ್ಚು ಬರುವುದು. ಎಲ್ಲ ಒಟ್ಟು ಮೂವತ್ತು ಸಾವಿರದ ಒಳಗೆ ಖಂಡಿತ ಮುಗಿಯತ್ತೆ', ಅಮ್ಮ ಎಲ್ಲ ಮೊದಲೇ ಲೆಕ್ಕಾಚಾರ ಹಾಕಿದ್ದಳು. ನನಗೆ ಒಮ್ಮೆಲೇ ಸಿಟ್ಟು ಬಂದಿತು, ಸುಮ್ಮ ಸುಮ್ಮನೆ ಮೂವತ್ತು ಸಾವಿರ ಖರ್ಚು ಮಾಡ್ತಾರಲ್ಲ ಅಂತ. ಈ ಊರಿನ ಜನಗಳಿಗೆ ಬೇರೆ ಕೆಲಸವಿಲ್ಲ, ಎಲ್ಲದಕ್ಕೂ ಒಂದು ಹರಕೆ ಹೇಳಿ ಕೊಳ್ಳುತ್ತಾರೆ. ಅಣ್ಣನಿಗೆ ಹಾಗೆಯೇ ಹೇಳಿದೆ. ಮತ್ತೆ ನೋಡಿದರೆ ಅಣ್ಣನಿಗೂ ಅಷ್ಟು ಖರ್ಚು ಅಂತ ಗೊತ್ತಿರಲಿಲ್ಲವಂತೆ. ನಮ್ಮನೆಯಿಂದ ಪ್ರತಿ ವರ್ಷ ಊರ ಮಾರಿ ಹಬ್ಬಕ್ಕೆ ಒಂದು ಕುರಿ ಕೊಡುತ್ತಿದ್ದರು. ಅದಕ್ಕೊಂದು ಐದಾರು ಸಾವಿರ ಖರ್ಚು, ಅಷ್ಟೇ, ಹಾಗೇ ಅಂದು ಕೊಂಡು ಎರಡು ಬಾರಿ ಕುರಿ ಪೂಜೆ ಹರಿಕೆ ಹೇಳಿದ್ದ. ಮತ್ತೆ ಗೊತ್ತಾಯಿತಂತೆ ಶಬ್ದಗಳ ಎಡವಟ್ಟು. 'ಮಾರಿ ಕುರಿ' ಮತ್ತೆ 'ಕುರಿ ಪೂಜೆ' ಎರಡು ಬೇರೆ ಬೇರೆ ಸೇವೆಗಳಂತೆ, ಯಾಕಾದರೂ ಅಷ್ಟು ಗೊಂದಲಮಯ ಹೆಸರುಗಳನ್ನಿಡುತ್ತಾರೋ. ಅಮ್ಮನಂತೂ ಸುತರಾಂ ಸಿಧ್ಧಳಿರಲಿಲ್ಲ, ದೇವರ ಜೊತೆ ಚೌಕಾಶಿ ಮಾಡಲು. ಹಾಗಾಗಿ ಮೂರು ಕುರಿ ಪೂಜೆಯ ತಯಾರಿ ಮಾಡತೊಡಗಿದೆವು.
ಕುರಿ ಪೂಜೆಗೆ ನೂರ ಇಪ್ಪತ್ತೈದು ಜನರಿಗೆ ಊಟ ಅಂತ ನಿರ್ಧಾರ ಮಾಡಿದೆವು. ನಮ್ಮ ಕಡೆಯಿಂದ ೭೫ ಜನ, ಬಳೆಗಾರರ ಕಡೆಯಿಂದ ೫೦ ಜನ. ನಮ್ಮ ಪೂಜೆಗೆ ಬಳೆಗಾರರ ಕಡೆಯಿಂದ ಅಷ್ಟು ಜನ ಯಾಕೆ ಎಂದರೆ ಅಮ್ಮನ ಉತ್ತರ ತಯಾರಾಗಿತ್ತು, 'ಇವತ್ತು ನಿನ್ನೆಯ ಕ್ರಮವಲ್ಲ ಅದು, ಹಾಗೆ ಕುರಿ ಪೂಜೆ ಕೆಲಸಕ್ಕೆಲ್ಲ ತುಂಬಾ ಜನ ಬೇಕು, ಕರೆಯಲಿ ಬಿಡಿ'. ನಮ್ಮಲ್ಲಿ ಪೂಜೆಯ ಎಲ್ಲ ಕೆಲಸಗಳು ದೇವಸ್ತಾನದಲ್ಲಿಯೇ ನಡೆಯುವುದು. ಮಧ್ಯಾಹ್ನ ಪೂಜೆ ಮುಗಿಸಿ ಕುರಿ ಕಡಿಯಲು ಹೋಗಿ ಬಂದರೆ, ಸಂಜೆ ಊಟಕ್ಕೆ ಹೋಗುವುದು. ಉಳಿದ ಎಲ್ಲ ಕೆಲಸವೂ ಅವರೇ ನೋಡಿಕೊಳ್ಳುತ್ತಾರೆ. ನಾವು ಹಣ ಕೊಟ್ಟರೆ ಸಾಕು. ಒಂತರ ಸಂಪೂರ್ಣ ಹೊರಗುತ್ತಿಗೆ.
ಈ ಬಾರಿ ನನಗೆ ಪೂರ್ತಿಯಾಗಿ ಮಧ್ಯಾಹ್ನದ ಪೂಜೆ ನೋಡಬೇಕಿತ್ತು. ಕೊನೆಯ ಬಾರಿ ನಾನು ಮಾರಿ ಪೂಜೆ ನೋಡಿದ್ದು ಎಷ್ಟೋ ವರ್ಷಗಳ ಹಿಂದೆ. ಇಪ್ಪತ್ತು ನಿಮಿಷಗಳಲ್ಲಿ ನಲವತ್ತು ಕುರಿಗಳನ್ನು ಕಚ ಕಚ ಕೊಂದಿದ್ದರು, ನೋಡಲಾರದೆ ಕಣ್ಣು ಮುಚ್ಚಿದ್ದೆ. ಈ ಬಾರಿ ನೋಡುವ ಗಟ್ಟಿ ದೈರ್ಯ ಮಾಡಿದ್ದೆ. ಪೂಜೆ ನೋಡಲು ಜಾಸ್ತಿ ಜನ ಬಂದಿರಲಿಲ್ಲ, ನಮ್ಮ ಮನೆಯ ಪೂಜೆ ಹೆಚ್ಚು ಸಮಯ ಇರುವುದೂ ಇಲ್ಲ. 'ಅಮ್ಮನವರ' ಪಾತ್ರಿ ಉಡುಗೆ ತೊಟ್ಟುಕೊಂಡು ಸಿಧ್ಧರಾಗಿ ನಿಂತರು. ಹೆಗ್ಗಡೆಯವರು ಶಿಂಗಾರ ಹೂವನ್ನು ನೀಡಿ ನೀರನ್ನು ಕೊಟ್ಟೊಡನೆ, ಅದನ್ನು ಮುಖಕ್ಕೆಲ್ಲ ತಿಕ್ಕಿತೊಂಡು ಛಂಗನೆ ಹಾರಿ ಜೋರಾಗಿ ಚೀತ್ಕರಿಸಿದರು. ಕ್ಷಣಾರ್ಧದಲ್ಲಿ ಅವರ ಮೈಮೇಲೆ ಅಮ್ಮನವರ (ಚಾಮುಂಡೇಶ್ವರಿ) ಆಹ್ವಾಹನೆಯಾಗಿತ್ತು. ಪೂಜೆಯ ವಿಷಯ ತಿಳಿದುಕೊಂಡು ಹರಕೆಯನ್ನು ಪಡೆಯಲು ದೇವರು ಹೊರಗಡೆ ಬಂತು.
ದೇವಸ್ಥಾನದ ಎದುರಿನ ಅಂಗಳದಲ್ಲಿ ಮೂರು ಕುರಿಗಳನ್ನು ನಿಲ್ಲಿಸಿದ್ದರು. ಒಂದೊಂದು ಕುರಿ ಹಿಡಿಯಲು ಇಬ್ಬಿಬ್ಬರು. ಒಬ್ಬರು ಬಲವಾಗಿ ಹಿಂದುಗಡೆ ಹಿಡಿದರೆ ಇನ್ನೊಬ್ಬರು ಕುತ್ತಿಗೆಗೆ ಹಾಕಿದ ಹಗ್ಗವನ್ನು ಎಳೆದು ಹಿಡಿಯಲಿಕ್ಕೆ. ಮೂರು ಕುರಿಗಳಲ್ಲಿ ಒಂದು ತುಂಬಾ ಚಿಕ್ಕದು, ಬಹುಶ ವರ್ಷ ಕೂಡ ಆಗಿರಲಿಕ್ಕಿಲ್ಲ. ಇನ್ನೆರಡು ದೊಡ್ಡವು. ಎಲ್ಲವುಗಳ ಕುತ್ತಿಗೆಯನ್ನು ಚನ್ನಾಗಿ ಕ್ಷೌರ ಮಾಡಲ್ಲಾಗಿತ್ತು. ಕುರಿಗಳಿಗೆ ಕುತ್ತಿಗೆ ಕ್ಷೌರ ಮಾಡುವಾಗಲೇ ತಿಳಿಯುತ್ತದಂತೆ, ಕಡಿಯಲು ಪೂರ್ವ ತಯಾರಿ ಎಂಬುದಾಗಿ.
ಮೊದಲ ಸರದಿ ಚಿಕ್ಕ ಕುರಿಯದ್ದು. ಹರಿತವಾದ ಕತ್ತಿಯ ಮೊದಲ ಏಟಿಗೆ ರುಂಡ ಮತ್ತು ಮುಂಡ ಬೇರಾಗಿತ್ತು. ಉಳಿದೆರಡು ಕುರಿಗಳು ನೋಡಿ ಜೋರಾಗಿ ಕಿರುಚಲು ತೊಡಗಿದವು. ಅವುಗಳ ಕಿರುಚಾಟಕ್ಕೆ ದೇವರ ಅರ್ಭಟವೂ ಜೋರಾಯಿತು, ಬೆಂಕಿಗೆ ತುಪ್ಪ ಎರಚಿದಂತೆ. ಕೆಲ ಕ್ಷಣಗಳಲ್ಲಿ ಇನ್ನೊಂದು ಕುರಿಯ ಕತ್ತು ತುಂಡಾಯಿತು. ದೊಡ್ಡ ಕುರಿಗೆ ಮೂರನೇ ಏಟು ಬಿತ್ತು. ಉಳಿದೆರದಕ್ಕಿಂತ ದೊಡ್ಡದಾದ ಅದಕ್ಕೆ ಆ ಏಟು ಸಾಲಲಿಲ್ಲ. ಅರ್ಧ ಮುರಿದ ಕತ್ತಿಗೆ ಇನ್ನೊಂದು ಏಟು ಬಿತ್ತು, ಮೂರು ನಿಮಿಷಗಳಲ್ಲಿ ಕುರಿಗಳೆಲ್ಲ ನೆಲಕ್ಕುರುಳಿದವು. ದೇವರೂ ವಿಚಿತ್ರ ಸಂತೋಷದಿಂದ ಆರ್ಭಟವನ್ನು ಕಡಿಮೆ ಮಾಡಿತು. ಕಡಿದವರು ಓಕುಳಿ ಚೆಲ್ಲಿ ಸಂತೋಷದಿಂದ ದೇವರೊಡನೆ ಒಳ ಹೋದರು. ಅವರ ಮನಸ್ಸಲ್ಲಿ ಕೃತಾರ್ಥರಾದ ಭಾವವಿತ್ತು. ಧರ್ಮದಿಂದ ಇದ್ದು, ದೇವರ ಕೃಪೆ ಇದ್ದಾಗ ಮಾತ್ರ ಅಷ್ಟು ಆರಾಮವಾಗಿ ಕಡಿಯಲು ಸಾಧ್ಯವಂತೆ.
ಮರಿ ಕುರಿಗೆ ಹೆಚ್ಚು ಒದ್ದಾಟವಿರಲಿಲ್ಲ, ಒಂದು ನಿಮಿಷದ ಒಳಗಾಗಿ ಅದರ ದೇಹ ನಿಶ್ಚಲವಾಗಿತ್ತು. ಆದರೆ ಉಳಿದೆರಡು ಕುರಿಗಳು ವಿಲ ವಿಲ ಒದ್ದಾಡುತ್ತ ಇದ್ದವು. ನೋಡುತ್ತಲೇ ಹೋದೆ. ತಲೆ ಬಿದ್ದ ಸ್ಥಳದಲ್ಲಿಯೇ ಇತ್ತು, ದೇಹ ಮಾತ್ರ ಅತ್ತಿಂದಿತ್ತ ಇತ್ತಿಂದತ್ತ ಹೋಗುತ್ತಿತ್ತು. ರಕ್ತ ಬಿಡದೆ ಚಿಮ್ಮುತ್ತಲೇ ಇತ್ತು. ರಕ್ತಕ್ಕೆ ಓಕುಳಿಯ ನೀರು ಸೇರಿ ಎಲ್ಲ ಕಡೆ ಕೆಂಪು ತುಂಬಿತ್ತು. ಮೂರು ನಿಮಿಷಗಳವರೆಗೂ ಆ ಒದ್ದಾಟ ಮುಂದುವರೆಯಿತು. ಮತ್ತೆ ನಿದಾನವಾಗುತ್ತ ಸಾಗಿ ಕೊನೆಗೊಮ್ಮೆ ಶಾಂತವಾಯಿತು. ನನ್ನ ಕಣ್ಣುಗಳಲ್ಲೂ ನೀರು ಬರಲು ಶುರುವಾಯಿತು. ಇಷ್ಟನ್ನೆಲ್ಲ ನೋಡಿ ಇನ್ನು ಮೇಲೆ ಕುರಿ ತಿನ್ನುವುದು ಸಾಧ್ಯವೇ ಇಲ್ಲವೆನಿಸಿತು. ಪ್ರತಿಬಾರಿ ಮಾಂಸಾಹಾರ ನೋಡಿದಾಗಲೂ ಈ ರಕ್ತದೊಕುಳಿಯೇ ಕಣ್ಣ ಮುಂದೆ ಕುಣಿಯಬಹುದು ಅಂದುಕೊಂಡೆ.
ಪೂಜೆ ಮುಗಿಸಿ ಮನೆಗೆ ಬಂದರೂ ಕೂಡ ತಲೆಯಲ್ಲೇ ಅದೇ ಕುಳಿತಿತ್ತು. ಮನೆಗೆ ಎಲ್ಲ ಬಂದ ಮೇಲೆ ಹೇಳಿದೆ, 'ಇನ್ಯಾರು ಮುಂದೆ ಕುರಿ ಪೂಜೆ ಹೇಳಬೇಡಿ. ಹರಿಕೆ ಕೊಟ್ಟು ಪುಣ್ಯ ಪಡೆಯಲು ಪಾಪದ ಕುರಿಗಳನ್ನು ಕೊಲ್ಲುವ ಪಾಪ ಯಾಕಾದ್ರೂ ಮಾಡಬೇಕು' ಅಂದೆ. ಅಮ್ಮನಿಗೆ ಅರ್ಥವಾಗಲಿಲ್ಲ, 'ಅದು ಹೇಗೆ ಪಾಪವಾಗುತ್ತದೆ? ಕೊಂದ ಪಾಪ ತಿಂದ ಪರಿಹಾರ ಅಂತ ದೊಡ್ಡವರೆಲ್ಲ ಹೇಳಿದ್ದರಲ್ಲ'. ನಾನು ನನ್ನ ಪಾಂಡಿತ್ಯ ಬಿಚ್ಚಲು ಶುರು ಮಾಡಿದೆ. 'ತಿಂದ ಪರಿಹಾರ ಎಂದರೆ ಕುರಿ ಕೊಂದು ಚೆನ್ನಾಗಿ ಸಾಂಬಾರು ಮಾಡಿ ತಿನ್ನುವುದಲ್ಲ, ಕೊಂದದ್ದು ತಪ್ಪಾಯಿತೆಂದು ಮನಸಾರೆ ಪಶ್ಚಾತ್ತಾಪ ಪಡಬೇಕು. ನೋವನ್ನು ತಿನ್ನಬೇಕು. ಮತ್ತೆ ಅದೇ ತಪ್ಪು ಮಾಡಬಾರದು' ಎಂದೆ. ಅಮ್ಮನ ಗೊಂದಲ ಇನ್ನೂ ಜಾಸ್ತಿಯಾಯಿತು. ಅಮ್ಮ ಶಾಲೆಗೆ ಹೋದವಳಲ್ಲ. 'ಹೌದಾ, ಮತ್ತೆ ಮನೆಯ ಕೋಳಿ ಮರಿಗಳನ್ನು ಕಾಗೆ ತೆಗೆದುಕೊಂಡು ಹೋಗುವಾಗ ಕೂಡ ತಪ್ಪಿಸುವುದು ಪಾಪ ಅಂತ ಹೇಳ್ತಾರಲ್ಲ, ಅದರ ಆಹಾರಕ್ಕೆ ಅಡ್ಡ ಬಂದ ಹಾಗಂತೆ ಅದು. ಇದೂ ಕೂಡ ಹಾಗೆಯೇ ಅಲ್ಲವಾ' ಅಂದಳು. ಈಗ ನನಗೂ ಸ್ವಲ್ಪ ಗೊಂದಲವಾಯ್ತು. 'ತಿಂದ ಪರಿಹಾರ' ಎಂದರೆ 'ಪ್ರಾಯಶ್ಚಿತ್ತ' ಅಂತ ನಾನು ಎಲ್ಲಿಯೂ ಓದಿದ್ದು ನೆನಪಿಗೆ ಬರಲಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಯಾರೋ ಅಧ್ಯಾಪಕರು ಹೇಳಿದ ನೆನಪು, ಭಟ್ಟರು ಬೇರೆ. ಯಾವುದನ್ನು ನಂಬುವುದೆಂಬ ಗೊಂದಲ ಶುರುವಾಯಿತು. ಆದರೂ ನಾನು ಹೇಳಿದ್ದೇ ವೇದ ಎಂದು ಬೇರೆಯವರ ಬಾಯಿ ಮುಚ್ಚಿಸಿದೆ, ಮತ್ತೆ ಮನಸ್ಸಲ್ಲೇ ಯೋಚಿಸಲು ಶುರು ಮಾಡಿದೆ.
ರಾತ್ರಿ ಎಂಟು ಘಂಟೆಯ ಹೊತ್ತಿಗೆ ಊಟಕ್ಕೆ ತಯಾರಾಗಿ ಹೋದೆವು, ಹತ್ತಿರ ಹತ್ತಿರ ನೂರೈವತ್ತು ಜನ ಬಂದಿದ್ದರು. ಮೊದಲ ಪಂಕ್ತಿಯಲ್ಲೇ ಕುಳಿತೆ. ಅನ್ನ ಹಾಕಿದಷ್ಟೇ ಕುರಿ ಮಾಂಸ ಸಹ ಹಾಕಿದರು. ಚೆನ್ನಾಗಿ ತೆಂಗಿನಕಾಯಿ ಹಾಕಿ ಮಾಡಿದ ಬಿಸಿಬಿಸಿ ಪದಾರ್ಥ ಒಳ್ಳೆಯ ಪರಿಮಳ ಬರಿಸುತ್ತಿತ್ತು. ಮಧ್ಯಾಹ್ನದ ನೆನಪಾಗಲಿಲ್ಲ. ಎರಡು ಪೀಸು ತಿಂದೆ. ಮೂರನೇ ಪೀಸು ಬಾಯಿಗೆ ಹಾಕುವಾಗ ಎಲ್ಲ ನೆನಪಿಗೆ ಬಂತು. ಆಶ್ಚರ್ಯವಾಯಿತು, ಏನೂ ಅನಿಸಲಿಲ್ಲ. ತಿನ್ನುತ್ತ ಹೋದೆ. ನನ್ನ ಪಾಲಿನದು ಮುಗಿಸಿ ನನ್ನ ಹೆಂಡತಿಯ ಪಾಲಿನದ್ದು ಅರ್ಧ ಮುಗಿಸಿದೆ. ಮತ್ತೆ ಮಧ್ಯಾಹ್ನದ ಘಟನೆಯನ್ನು ಎಣಿಸಿದೆ, ಕುರಿ ಸತ್ತದ್ದು ಬೇಜಾರೆನಿಸಿತು, ಆದರೆ ಕುರಿ ಪದಾರ್ಥ ಚೆನ್ನಗಿತ್ತೆನಿಸಿತು. ನನ್ನಲ್ಲೇ ಏನೋ ಸಮಸ್ಯೆ ಇರಬೇಕು, ಅದಕ್ಕೆ ಈ ತರ ಮನಸ್ಸು ಬದಲಾಗುತ್ತಿದೆ ಅನ್ನಿಸಿ ಮುಂದೆ ಆಲೋಚಿಸೋದು ಬಿಟ್ಟು ಬಿಟ್ಟೆ.
ಮರುದಿನ ನನ್ನನ್ನು ಸೇರಿಸಿ ಮನೆಯವರೆಲ್ಲ ಮೂರು ಮೂರು ಬಾರಿ ಶೌಚಾಲಯಕ್ಕೆ ಹೋಗುವವರೇ. ಎಲ್ಲರೂ ನನ್ನ ಹಾಗೆ ತಿಂದಿದ್ದರು. ಗಮನಿಸಿದೆ, ಅಮ್ಮ ಮಾತ್ರ ಸರಿಯಿದ್ದಳು. ಸಂಶಯ ಬಂತು ' ನೀನ್ಯಾಕಮ್ಮ ಜಾಸ್ತಿ ತಿನ್ನಲಿಲ್ವಾ' ಕೇಳಿದೆ. 'ಇಲ್ಲವಾ, ಜಾಸ್ತಿ ತಿನ್ನಲಿಕ್ಕೆ ನನ್ನ ಹಲ್ಲು ಎಷ್ಟು ಸರಿ ಇದೆ' ಅಂತ ಉತ್ತರಕ್ಕೂ ಕಾಯದೆ ಒಳಗಡೆ ಹೋದಳು. ನನ್ನ ಸಂಶಯ ನಿವಾರಣೆಯಾಗಿರಲಿಲ್ಲ. ಅವಳ ಹಲ್ಲನ್ನು ದೂಶಿಸುವುದೋ ನನ್ನ ಪಾಂಡಿತ್ಯವನ್ನೋ ತಿಳಿಯಲಿಲ್ಲ.
ವಾಪಾಸು ಬರುವ ಹಿಂದಿನ ದಿನ ನಾನು ನಮ್ಮನೆಯಲ್ಲಿ ಇದ್ದರೆ ಹೆಂಡತಿ ತಾಯಿಯ ಮನೆಗೆ ಹೋಗಿದ್ದಳು. ಮರುದಿನ ಅಲ್ಲಿಂದಲೇ ವಿಮಾನ ಹಿಡಿಯಲು ಆರಾಮ ಆಗುತ್ತದೆ ಅಂತ. ಸಂಜೆ ಎಂಟು ಘಂಟೆಗಳ ತನಕ ಸರಿಯಾಗಿ ಇದ್ದವಳಿಗೆ ಮತ್ತೆ ಒಂದೇ ಸಮನೆ ವಾಂತಿ ಶುರುವಾಯಿತು. ಸ್ವಲ್ಪ ಸ್ವಲ್ಪ ಸಂವೇದನೆ ಮೊದಲೇ ಇದ್ದುದ್ದರಿಂದ ನಾನೂ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ಸುಮ್ಮನೆ ಮನೆಯವರ ತಲೆ ಕೆಡಿಸೋದು ಬೇಡವೆಂದು ಯಾರಿಗೂ ಹೇಳಲಿಲ್ಲ. ನಮ್ಮ ಮನೆಯಲ್ಲಿ ಎಲ್ಲ ಮಲಗಿ ಕೊಂಡರು. ಸಮಯ ಮುಂದೆ ಹೋದಹಾಗೆ ಇವಳ ವಾಂತಿಯೂ ಮುಂದುವರಿಯುತ್ತಲೇ ಹೋಯಿತು. ಕೊನೆಗೆ ಕುಡಿದ ನೀರು ಸಹ ನಿಲ್ಲಲಿಲ್ಲ. ಹನ್ನೆರಡು ಘಂಟೆ ರಾತ್ರಿಗೆ ಅವಳ ಮನೆಯವರು ಫೋನ್ ಮಾಡಿ ಅಳತೊಡಗಿದರು. ನನಗೂ ಏನೂ ಮಾಡುವುದೆಂದು ತೋಚಲಿಲ್ಲ. ಮತ್ತೆ ಕೂಡಲೇ ಆಸ್ಪತ್ರೆಗೆ ಸೇರಿಸಿದರು. ಒಂದು ಘಂಟೆಗೆ ಫೋನ್ ಮಾಡಿದಾಗಲೂ ಏನೂ ಒಳ್ಳೆಯ ಸುದ್ದಿ ಇರಲಿಲ್ಲ. ನಾಳೆ ವಿಮಾನ ಹಿಡಿಯುವುದು ಸ್ವಲ್ಪ ಕಷ್ಟವೇ ಅಂದರು. ನನ್ನ ಚಿಂತೆ ಇನ್ನೂ ಜಾಸ್ತಿಯಾಯಿತು. ದೂರದಲ್ಲಿರುವುದರಿಂದ ಅವಳ ಅನಾರೋಗ್ಯ ಯಾವ ಪ್ರಮಾಣದಲ್ಲಿದೆ ಅನ್ನುವ ಸೂಚನೆ ಸಹ ಸರಿಯಾಗಿರಲಿಲ್ಲ, ಹೋಗೋಣವೆಂದರೆ ರಾತ್ರಿ ಒಂದು ಘಂಟೆ ಬೇರೆ. ವಿಮಾನಕ್ಕುಳಿದಿರುವುದು ಬರಿಯ ಹದಿನಾರು ಘಂಟೆ ಮಾತ್ರ. ಟಿಕೇಟು ರದ್ದು ಮಾಡಿದರೆ ಸುಮ್ಮನೆ ಎರಡು ಮೂರು ದಿನ ಹೆಚ್ಚಿನ ರಜೆ, ಅದೂ ಕೂಡಲೇ ಸಿಗುವ ಖಾತರಿ ಇಲ್ಲ, ಮೇಲೆ ಹತ್ತಿರ ಹತ್ತಿರ ನಲವತ್ತು ಸಾವಿರದ ಬರೆ. ಹರಕೆ ಹೇಳಿಕೊಳ್ಳಲೇ ಅನ್ನಿಸಿತು, ಒಂತರ ನಾಚಿಕೆಯೆನಿಸಿತು. ದೇವರ ಹತ್ತಿರ ಬೇಡುವುದು ಬಿಟ್ಟು ಎಷ್ಟೋ ವರ್ಷಗಳು ಕಳೆದಿದ್ದವು. ಆದರೆ ಅದನ್ನು ಬಿಟ್ಟು ಮಾಡಲಿಕ್ಕೆ ನನ್ನ ಕೈಯಲ್ಲಿ ಬೇರೆ ಏನೂ ಇರಲಿಲ್ಲ. ನಮ್ಮ ಮನೆಯವರು ಯಾಕೆ ಹರಕೆ ಹೇಳಿ ಕೊಳ್ಳುತ್ತಾರೆ ಅಂತ ಸ್ವಲ್ಪ ಸ್ವಲ್ಪ ಅರ್ಥವಾಯಿತು. ಹರಕೆ ಹೇಳುವುದಾದರೆ ಯಾವ ಹರಕೆ ಹೇಳುವುದು. ಕುರಿ ಪೂಜೆ, ಕೋಳಿ ಪೂಜೆ ಎಲ್ಲ ಬೇಡ ಅಂತ ನಾನೇ ಮನೆಯವರಿಗೆ ಉಪದೇಶ ಮಾಡಿ ಆಗಿದೆ. ಮತ್ತೆ ಸ್ವಲ್ಪ ಹೊತ್ತು ಆಲೋಚನೆ ಮಾಡಿದೆ. ಕೊನೆಗೆ ಹತ್ತಿರದ ಶಾಲೆಯಲ್ಲಿ ಬಡ ಮಕ್ಕಳಿಗೆ ಏನಾದರೂ ಕೊಡುವುದು ಅಂತ ನಿರ್ಧರಿಸಿದೆ. ಹರಕೆ ನಿರ್ಧಾರ ಆಯಿತು, ಆದರೆ ಎಷ್ಟು ಕೊಡಬೇಕು ಅನ್ನುವುದು ಗೊತ್ತಾಗಲಿಲ್ಲ. ದೇವರ ಹತ್ತಿರ ವ್ಯವಹಾರ ಮಾಡಿದ ಅಭ್ಯಾಸವಿರಲಿಲ್ಲ. ನಮ್ಮ ಪ್ಯಾಕ್ಟರಿ ಮಾಡುವಾಗ ಸಬ್ಸಿಡಿಯಲ್ಲಿ ಸರಕಾರೀ ಅಧಿಕಾರಿಗಳಿಗೆ ಇಪ್ಪತ್ತೈದು ಶೇಕಡಾ ಕೊಟ್ಟಿದ್ದು ನೆನಪಿಗೆ ಬಂತು. ಟಿಕೇಟಿನ ಬೆಲೆ ನಲವತ್ತು ಸಾವಿರ, ಹಾಗಾಗಿ ಹತ್ತು ಸಾವಿರ ಸರಿ ಅನ್ನಿಸಿತು. ಮತ್ತೆ ಮನಸ್ಸು ಬದಲಾಯಿಸಿ ಹರಕೆಯನ್ನು ಹದಿನ್ನೈದು ಸಾವಿರಕ್ಕೆರಿಸಿದೆ, ಆರಾಮವಾಗಿ ವಿಮಾನ ಹತ್ತುವ ಹಾಗಾದರೆ. ಸಮಾಧಾನವಾಯಿತು, ಮಲಗಿದ ಕೂಡಲೇ ನಿದ್ದೆಯೂ ಬಂತು.
ಮರುದಿನ ಬೆಳಗ್ಗೆ ಬೇಗನೆ ಎದ್ದು ಹೊರಟೆ. ದೇವರಿಗೆ ಹರಿಕೆಯ ಕರೆ ಹೋಗಿತ್ತು ಅನಿಸುತ್ತೆ, ಹನ್ನೆರಡು ಘಂಟೆ ಹೊತ್ತಿಗೆ ಆಸ್ಪತ್ರೆಯಿಂದ ಬಿಟ್ಟರು, ನಾಲ್ಕು ಬಾಟಲ ಗ್ಲುಕೋಸ್ ಹಾಕಿದ ಬಳಿಕ. ದೇವರ ಹತ್ತಿರ ವ್ಯವಹಾರ ಪರವಾಗಿಲ್ಲ ಅನ್ನಿಸಿತು.
ಕೆಲದಿನಗಳ ಬಳಿಕ ಹೆಂಡತಿಯಲ್ಲಿ ಹೇಳಿದ್ದೆ, ಹರಕೆಯ ವಿಷಯ. ಅದಕ್ಕೆ ಕಾಯುತ್ತಿದ್ದ ಹಾಗೆ ಹೇಳಿದಳು, 'ಇನ್ನೊಮ್ಮೆ ಹರಿಕೆ ಹೇಳಿಕೋ, ಡಾಕ್ಟರ್ ಮೂರು ತಿಂಗಳಲ್ಲೇ ಗುಣವಾಗುತ್ತೆ ಅಂತ ಹೇಳಿದ ವಾಕರಿಕೆ, ಸುಸ್ತು ಇನ್ನು ಸ್ವಲ್ಪ ಕೂಡ ಹೋಗಿಲ್ಲ' ಅಂತ. ನಾನು ಅಂತರ್ಜಾಲ ಎಲ್ಲ ಜಾಲಾಡಿ ಎಲ್ಲ ರೀತಿಯ ಮನೆಯೌಷಧ ಮಾಡಿದ್ದೆ, ಯಾವುದು ಉಪಯೋಗಕ್ಕೆ ಬಂದಿರಲಿಲ್ಲ. ಇದನ್ನೂ ಒಂದು ಬಾರಿ ನೋಡಿ ಬಿಡೋಣ ಅನ್ನಿಸಿತು. ಆದರೆ ಮತ್ತದೇ ಸಮಸ್ಯೆ. ಎಷ್ಟು ಹಣ ಕೊಡಬೇಕೆಂದು. ಅವಳ ನೋವಿನ ಬೆಲೆ ನನಗೆ ತಿಳಿದಿರಲಿಲ್ಲ. ಅವಳನ್ನೇ ಕೇಳಿದೆ. ನೋವಿನ ಬೆಲೆ ಕಟ್ಟುವುದು ಅವಳ ಕೈಯಲ್ಲೂ ಆಗಲಿಲ್ಲ. ಕೊನೆಗೆ ಈವರೆಗೆ ಆದ ಖರ್ಚು ಲೆಕ್ಕ ಹಾಕತೊಡಗಿದಳು. ಎರಡು ಆಕ್ಯೂ ಪ್ರೆಶರ್ ಬ್ಯಾಂಡ್, ಒಂದು ಆಡಿಯೋ ಸಿಡಿ, ಮತ್ತಿಷ್ಟು ಶುಂಟಿ, ನೆಲ್ಲಿಕಾಯಿ. ಎಲ್ಲ ಸೇರಿ ಹತ್ತಿರ ಹತ್ತಿರ ಮೂರು ಸಾವಿರ. ಹಾಗಾಗಿ ಐದು ಸಾವಿರ ಸಾಕೆಂದಳು. ಅಷ್ಟು ಕಡಿಮೆಯಾ ಅಂತ ಕೇಳಿದ್ದಕ್ಕೆ ಇನ್ನೈದು ಸೇರಿಸಿದಳು, ಜೊತೆಗೊಂದು ಷರತ್ತು ಕೂಡ. ಇನ್ನು ಮೂರು ದಿನದಲ್ಲಿ ಗುಣವಾದರೆ ಮಾತ್ರಾ ಅಂತ. ಆಯ್ತು ಅಂದೆ. ಮೂರು ದಿನ ಆಯ್ತು, ಆರು ದಿನ ಆಯ್ತು, ಓಂಭತ್ತಾಯ್ತು. ದೇವರ ಸುದ್ದಿಯೇ ಇಲ್ಲ. ಹರಕೆ ದೇವರಿಗೆ ಕೇಳಿಸಲಿಲ್ಲವೋ, ಷರತ್ತು ಇಷ್ಟವಾಗಲಿಲ್ಲವೋ ಗೊತ್ತಾಗಲಿಲ್ಲ. ನನಗೂ ಸಾಕಾಯ್ತು, ಇನ್ನು ಮೇಲೆ ದೇವರ ಜೊತೆ ವ್ಯವಹಾರ ಸಾಕು ಎಂದು ಮನಸ್ಸಲ್ಲೇ ನಿರ್ಧರಿಸಿಕೊಂಡೆ.
Comments
ಉ: ಹರಕೆ
In reply to ಉ: ಹರಕೆ by kamath_kumble
ಉ: ಹರಕೆ