ಹರಿವು

ಹರಿವು

ಆಧುನಿಕ ಜಗತ್ತಿನ ವೇಗದ ಓಟದ ಆಟದಲ್ಲಿ ಸಂಬಂಧಗಳು ಬಲಿಯಾಗುವುದು ಸಾಮಾನ್ಯವೇನೋ?.  ಇಂತಹುದೊಂದು ಆಟ ೧೭ನೇ ಶತಮಾನದ ಕೈಗಾರಿಕಾ ಕ್ರಾಂತಿಯಿಂದ ಶುರುವಿಟ್ಟುಕೊಂಡು ಇಂದಿನವರೆಗೂ ನಡೆದೇ ಇದೆ. ಬಂಡವಾಳಶಾಹಿಯ ಹಿಡಿತವನ್ನು ವಿರೋಧಿಸಿದ ಸಮಾಜವಾದದ ಮಗ್ಗುಲಿನ ಆಟವೂ ಸಂಬಂಧಗಳ ಎಳೆ ಕಳೆಚುತ್ತಲೇ ಇದೆ. ಈ ಆಟದ ಗೆಲುವು ಸೋಲುಗಳು ಏನೆಂದು ನಿರ್ಧರಿಸುವುದೇ ಕ್ಲಿಷ್ಟಕರ ಕೆಲಸ.

ಅಂತಹುದರಲ್ಲಿ ಭಾರತದ ಇಂದಿನ ಸಾಮಾಜಿಕ ಸ್ಥಿತಿಗತಿಯನ್ನು ವಿಶ್ಲೇಷಿಸಿದರೆ, ಇತ್ತ ಬಂದವಾಳಶಾಹಿಯೂ ಅಲ್ಲದ ಅತ್ತ ಸಮಾಜವಾದಿಯೂ ಅಲ್ಲದ ಕಲಬೆರೆಕೆ ಮನೋಸ್ಥಿತಿ ನಮ್ಮ ಗಮನಕ್ಕೆ ಬರುತ್ತದೆ. ಇದರ ಮಧ್ಯೆ ಹಳ್ಳಿಯ ಮುಗ್ಧ, ಶಾಹಿಗಳಿಲ್ಲದ  ಜನತೆಯ ಬವಣೆಗಳ ಪದರವೇ ಬೇರೆಯಾಗಿ  ಸಾಮಾಜಿಕ ಸಂಕೀರ್ಣತೆಯನ್ನು ಅಧಿಕಗೊಳಿಸುತ್ತಿದೆ.

ಈ ಸಂದರ್ಭದಲ್ಲಿ “ಹುಟ್ಟು ಉಚಿತ, ಸಾವಿಗೆ ತೆರಿಗೆ ಖಚಿತ” ಎನ್ನುವ ಅರ್ಥ ಕೊಡುವ  ಇಂಗ್ಲಿಷ್ ನಾಣ್ನುಡಿಯೊಂದು ನೆನಪಿಗೆ ಬರುತ್ತದೆ. ಉತ್ತರ ಕರ್ನಾಟಕದ ಹಳ್ಳಿಯ ಮುಗ್ಧ ಶರಣಪ್ಪನ ಮಗ ಗವಿಸಿದ್ದ ಹೃದಯ ಸಂಬಂಧಿ ತೊಂದರೆಯಿಂದ ನರಳಿ, ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದ ವ್ಯವಸ್ಥೆಯಿಂದಾಗಿ ಸಾವನ್ನಪ್ಪುತ್ತಾನೆ.  ಇದಕ್ಕೆ ಶರಣಪ್ಪನ ಬಡತನವೋ, ಅವನನ್ನು ಬದವನಾಗಿಯೇ ಉಳಿಸಿರುವ, ಅಥವಾ ಬಡವರಿಗೆ ಚಿಕಿತ್ಸೆ ಮರೀಚಿಕೆಯನ್ನಾಗಿ  ಮಾಡಿರುವ ವ್ಯವಸ್ಥೆಯೋ ಎನ್ನುವ ಪ್ರಶ್ನೆ, ನಾಯಕನ ತಂದೆಯ ಆಸ್ಪತ್ರೆ ಖರ್ಚಿಗೆ ಸುರೇಶ ತಂದೆಯನ್ನೂ ನೋಡಿಕೊಳ್ಳದೆ, ಕೆಲಸದಲ್ಲಿ ತೊಡಗಿಕೊಳ್ಳುವುದನ್ನು ಕಂಡಾಗ ಮೂಡಿಬರುತ್ತದೆ. ಬಂಡವಾಳಶಾಹಿಯನ್ನು ಸಮರ್ಥಿಸಿ, ಕನಸು ಕಂಡ ದೇಶದ ಯುವಜನತೆ, ಇಂದಿನ ದಿನಗಳ ಪರಿಸ್ಥಿಯಿಂದ ಭ್ರಮನಿರಸನಗೊಳ್ಳುತ್ತಿರುವಾಗ,  ಈ ರೂಪಕ ದೃಶ್ಯ ಮನಸಲ್ಲ್ಲಿ ಬಿಡಿಸುವ ಪ್ರಶ್ನೆಗಳು ಚಲನಚಿತ್ರದ ಸಾರ್ಥಕ್ಯವನ್ನು ತೋರಿಸುತ್ತದೆ.

ಮುಂದೆ, ಶರಣಪ್ಪ ಮಗುವಿಗಾಗಿ ಕಾಡಿರಬಹುದಾದ ಮಗುವಿನ ತಾಯಿಗೆ ಮಗುವಿನ ಕಡೆಯ ದರ್ಶನ ಮಾಡಿಸುವ ಹಂಬಲದಿಂದ, ಮಗುವಿನ ಶವವನ್ನು ಊರಿಗೆ ಕೊಂಡೊಯ್ಯಲು ಪಡುವ ಪರಿಪಾಟಲು, ಚಿತ್ರದ ಅಂತರಂಗ. ಕಳಚಿದ ಕೊಂಡಿಯೊಂದನ್ನು, ಕೈ ಬಿಡದೆ, ಎದೆಗಪ್ಪಿಕೊಳ್ಳುವ ವಾತ್ಸಲ್ಯಮಯಿ ತಂದೆಯಾಗಿ ಸಂಚಾರಿ ವಿಜಯ್ ಅದ್ಭುತವಾಗಿ ನಟಿಸಿದ್ದಾರೆ. ಅಪರಿಚಿತರೊಂದಿಗೆ ಪಯಣಿಸುವ ಅವಶ್ಯಕತೆಯಿಲ್ಲದೆಯೂ, ಅಪರಿಚಿತರೊಂದಿಗೆ ದಾರಿ ಸಾಗಿಸಬೇಕಾಗಿ ಬಂದ, ಸುರೇಶ್ ಮತ್ತವನ ತಂಡ, ಅಪರಿಚಿತನ ಪಿತೃವಾತ್ಸಲ್ಯವನ್ನು ಕಂಡು, ಅರಿವಿಲ್ಲದೆಯೇ ಅವನ ಅಭಿಮಾನಿಗಳಾಗುತ್ತಾರೆ. ಮತ್ತು ತಮ್ಮ ಸಂಬಂಧಗಳನ್ನು ನೆನೆದುಕೊಂಡು, ಆ ಸಂಬಂಧದ ಎಳೆಗಳನ್ನು ಗಟ್ಟಿ ಮಾಡಿಕೊಳ್ಳುವತ್ತ, ಮತ್ತು ಅದಕ್ಕಿರಬಹುದಾದ ತಡೆಗಳನ್ನು ಗೆಲ್ಲುವತ್ತ ಮುಖ ಮಾಡುತ್ತಾರೆ.

“ಬರುವಾಗ ಹೆಗಲ ಮೇಲೆಹೊತ್ತು ತಂದ ಕಂದನನ್ನು ಅನಾಥ ಶವ ಮಾಡದೇ ತಲೆ ಮೇಲೆ ಹೊತ್ತುಕೊಂಡು ಹೊರಟಿದ್ದೇನೆ” ಎನ್ನುವ ಶರಣಪ್ಪನ ಮಾತುಗಳು ಎದೆಯಾಳಕ್ಕಿಳಿದು ಕಣ್ಣನ್ನು ಒದ್ದೆಯಾಗಿಸುತ್ತವೆ

ಪೆಟ್ಟಿಗೆಯಲ್ಲಿ ಕಂದನ ಶವ ಕಂಡು ರೋದಿಸುವ ಸನ್ನಿವೇಶದಲ್ಲಿ ಸ್ವಲ್ಪ ಅತಿರೇಕವೆನಿಸಬಹುದಾದರೂ ಸಹ್ಯವಾಗುತ್ತದೆ.

ಲಂಚಕೋರ ವಾರ್ಡ್ ಬಾಯ್ ಸಾಮಾಜಿಕ ರೂಪಕವಾದರೆ, ಸುರೇಶನ ತಂಡ ತನ್ನಂತಾನೆ ವಿಮರ್ಶಿಸಿಕೊಳ್ಳುವ ವೈಯುಕ್ತಿಕ ರೂಪಕವಾಗುತ್ತಾರೆ. ಸುರೇಶನ ತಂಡ ಬಾಯಲ್ಲಿ ಬರುವ ಕೆಲ ಸಂಭಾಷಣೆಗಳು, ಹಿರಿದಾದ ಅರ್ಥ ಹೊಂದಿವೆ. ಆದರೆ ಅವನ್ನು ಹೇಳುವ ರೀತಿಯಲ್ಲಿ ಇನ್ನೂ ಸ್ವಲ್ಪ ಪರಿಣಾಮಕಾರಿಯಾಗುವಂತೆ ಮಾಡಬಹುದಿತ್ತು. ಜೊತೆಗೆ, ಇಂತಹ ಸಂಭಾಷಣೆ ಯಾರ ಬಾಯಲ್ಲಿ ಬಂದರೆ ಚೆನ್ನ? ಯಾವ ಪಾತ್ರದ ವ್ಯಕ್ತಿತ್ವದ ಹಿನ್ನೆಲೆಗೆ ಹೊಂದಿಕೊಳ್ಳುತ್ತದೆ. ಅಥವಾ, ಪಾತ್ರಗಳ ವ್ಯಕ್ತಿತ್ವಕ್ಕೆ ತಕ್ಕಂತೆ ಅವೇ ಸಂಭಾಷಣೆಯನ್ನು ಬದಲಾಯಿಸಬಹುದೇ ಎನ್ನುವುದರ ಕಡೆ ನಿರ್ದೇಶಕರ ಗಮನ ಹರಿಯಬೇಕಿತ್ತು.

ಇನ್ನು ತಾಂತ್ರಿಕವಾಗಿ ಚಿತ್ರದ ಗುಣಮಟ್ಟ ಯಾವುದೇ ಕಮರ್ಷಿಯಲ್ ಚಿತ್ರಗಳಿಗೂ ಕಡಿಮೆಯಿಲ್ಲ. ಸೌಂಡ್ ಸಿಂಕ್ ಬಳಕೆಯಿಂದ ಬಂದಿರುವ ಪರಿಣಾಮ ಅದ್ಭುತ. ಹಿನ್ನೆಲೆ ಸಂಗೀತ ಮತ್ತಷ್ಟು ಪಳಗಬೇಕೆನ್ನಿಸುತ್ತದೆ. ಇರುವ ಹಾಡು ಮನಸ್ಸಿನಲ್ಲಿ ಉಳಿಯುತ್ತದೆ.

ಅದರದೇ ಸಾಲು

ಪ್ರೇಮವು ಆತ್ಮದ ಹರಿವು ಇರುವಿಗೆ ಅರಿವಿನ ಮರೆವು.

ಇರುವನ್ನು ಅರಿತುಕೊಳ್ಳುವ ಈ ಪ್ರಯತ್ನ ಅಂತರಂಗದ ಸಂಬಂಧಗಳ ಹರಿವಿಗೆ ದಾರಿ ಮಾಡುತ್ತದೆ ಎನ್ನುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.

Rating
No votes yet

Comments

Submitted by kavinagaraj Mon, 06/01/2015 - 21:23

ಒಳ್ಳೆಯ ಕಥೆ ಇರುವ ಚಿತ್ರದ ಒಳ್ಳೆಯ ವಿಮರ್ಶೆ.

Submitted by anil.ramesh Fri, 06/12/2015 - 19:19

In reply to by kavinagaraj

ಹರಿವು ಚಿತ್ರದ ಸಂವಾದಕ್ಕೆ ಹೋದಾಗ ಈ ಚಿತ್ರವನ್ನು ನೋಡುವ ಭಾಗ್ಯ ದೊರಕಿತು.
ಹೊಸಬರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ನಿಮ್ಮ ಲೇಖನ ಅದಕ್ಕೆ ಪೂರಕವಾಗಿದೆ.