ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ

ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ

     ಸಂಪದ ಓದುತ್ತಾ ಕುಳಿತಿದ್ದವನನ್ನು ನೋಡಿದ ನನ್ನಾಕಿ "ಎಲಾ ಇವರ! ಎಷ್ಟು ಹೊತ್ತಿಂದ ಲ್ಯಾಪ್‌ಟಾಪ್ ಮುಂದೆ ಕೂತು ನನ್ನನ್ನೂ ಮರೆತಿದ್ದಾರಲ್ಲ" ಅಂತ ಯೋಚಿಸಿ, ಸುಮ್ಮನಿರಲಾರದೆ, "ಇವತ್ತು ಏನು ಅಡುಗೆ ಮಾಡಲಿ?" ಅಂತ ಕೇಳಬೇಕೆ?! ಇತ್ತೀಚಿಗೆ ಸಂಪದದಲ್ಲಿ ನಡೆಯುತ್ತಿರುವ "ಕನ್ನಡದ ಏತ್ವಗಳು, ಕಾಗುಣಿತ ಕಲಿತದ್ದು" ಇತ್ಯಾದಿ ಚರ್ಚೆಗಳ ಬಗ್ಗೆಯೇ ಏನೋ ಯೋಚಿಸಿ ಟೈಪಿಸುತ್ತಾ ಕುಳಿತವನು, ಅದೆಲ್ಲಿಂದ ಹೊಳೆಯಿತೋ ನನಗೇ ಗೊತ್ತಿಲ್ಲ, "ಕೊಟ್ಟೆ ಮಾಡು" ಅಂದೆ. ಒಂದು ಕ್ಷಣ ತಬ್ಬಿಬ್ಬಾದ ನನ್ನಾಕಿ "ಅಯ್ಯೋ ರಾಮ; ಅದೇನದು ಕೊಟ್ಟೆ? ನಾನು ಕೇಳಿದ್ದು ಅಡುಗೆಯ ಬಗ್ಗೆ. ಹೋಗೀ ಹೋಗೀ ನಿಮ್ಮನ್ನು ಕೇಳಿದ್ನಲ್ಲಾ..." ಅಂತಂದಳು.

     ತಕ್ಷಣ ನೆನಪಿಗೆ ಬಂದದ್ದು ಬೀಚಿಯವರ "ಏಕೀಕರಣ" ನಾಟಕ. ಸುಮಾರು ೯-೧೦ ವರ್ಷಗಳ ಹಿಂದೆ ಓದಿದ ನಾಟಕ ಇವತ್ತು ಹೇಗೋ ನೆನಪಾಗಿ "ಕೊಟ್ಟೆ ಮಾಡು" ಅಂತ ಹೇಳುವಂತೆ ಮಾಡಿಸಿತಲ್ಲ ಅಂತ ಅಚ್ಚರಿಯೂ ಆಯಿತು. ಆ ಪುಸ್ತಕ ಈಗ ನಾನಿರುವಲ್ಲಿ ನನ್ನ ಬಳಿಯಿಲ್ಲವಾದ್ದರಿಂದ ನೆನಪಿನಲ್ಲಿದ್ದಷ್ಟು ಅದರ ಬಗ್ಗೆ ಹೇಳಿದೆ. ನನ್ನಾಕಿ ಬಹಳ ಎಂಜಾಯ್ ಮಾಡಿ ನಕ್ಕಳು. ಆಮೇಲೆ ಸ್ವಲ್ಪ ವಿಚಾರ ಮಾಡಿದಾಗ ಅನ್ನಿಸಿದ್ದು; ಇವತ್ತು ನಾವೆಲ್ಲ "ಕಾಗುಣಿತ ಹೇಗೆ ಕಲಿತದ್ದು" ಅಂತ ಚರ್ಚೆ ಮಾಡುತ್ತಾ ಹೋದಂತೆ "ಕರ್ನಾಟಕದಲ್ಲೇ ಎಷ್ಟು ಬೇರೆ ಬೇರೆ ರೀತಿಯಲ್ಲಿ ಕನ್ನಡ ಕಾಗುಣಿತ ಕಲಿಸುತ್ತಾರೆ" ಅಂತ ಗೊತ್ತಾಗಿ "ಹೌದಲ್ವಾ!" ಎಂದುಕೊಳ್ಳುತ್ತೇವೆ, ಆಶ್ಚರ್ಯಪಡುತ್ತೇವೆ. "ಕರ್ನಾಟಕದಲ್ಲೇ ಚಾಲ್ತಿಯಲ್ಲಿರುವ ಐದಾರು ಆಡುಮಾತಿನ ಕನ್ನಡ ರೂಪಗಳನ್ನು ಆಧಾರವಾಗಿಟ್ಟುಕೊಂಡು ಎಷ್ಟು ಹಾಸ್ಯಮಯವಾಗಿ ಬರೆದಿದ್ದಾರಲ್ಲ ಬೀಚಿ" ಅಂತನ್ನಿಸಿತು. ಅದರ ಬಗ್ಗೆ ಕೊಂಚ ಬ್ಲಾಗುವುದರ ಮೂಲಕ ನಿಮ್ಮ ಜತೆ ಹಂಚಿಕೊಳ್ಳೋಣ ಅನ್ನಿಸಿ ಬರೆಯುತ್ತಿದ್ದೇನೆ.

     ಬೀಚಿಯವರ ಹಾಸ್ಯ ನಾಟಕಗಳ ಸಂಕಲನ "ರೇಡಿಯೋ ನಾಟಕಗಳು". "ನಾನೇ ಸತ್ತಾಗ, ಏಕೀಕರಣ" ಇನ್ನೂ ಮುಂತಾದ ಉತ್ತಮ ಹಾಸ್ಯ ನಾಟಕಗಳು ಅದರಲ್ಲಿವೆ. "ನಾನೇ ಸತ್ತಾಗ" ಅಂತೂ "ಸಕ್ಕರೆಯ ಲೇಪದಲ್ಲಿನ ಮಾತ್ರೆ"ಯ ತರಹ ಮೇಲ್ನೋಟಕ್ಕೆ ನಗೆಯುಕ್ಕಿಸಿದರೂ ಜೀವನದ ನಗ್ನಸತ್ಯಗಳನ್ನು ಅಷ್ಟೇ ನಿರ್ದಾಕ್ಷಿಣ್ಯವಾಗಿ ನಮ್ಮ ಮುಂದಿಟ್ಟು "ನಕ್ಕಿದ್ದು ಸಾಕಯ್ಯಾ, ಇದರ ಬಗ್ಗೆ ಕೂಡಾ ಸ್ವಲ್ಪ ಯೋಚಿಸು" ಅನ್ನುತ್ತದೆ! ಇರಲಿ, ವಿಷಯ ಎಲ್ಲೋ ಹೋಯಿತು. ನಾನು ಹೇಳೋಕೆ ಹೊರಟಿದ್ದು "ಏಕೀಕರಣ" ನಾಟಕದ ಬಗ್ಗೆ. ನಾಟಕದ ಬಗ್ಗೆ ಪೂರ್ಣ ವಿವರ ಕೊಟ್ಟು ನಿಮ್ಮ ಆಸಕ್ತಿಗೆ ಭಂಗತರಲು ನನಗಿಷ್ಟವಿಲ್ಲ. ನೀವೇ ಓದಿದರೇನೆ ಅದನ್ನು ಪೂರ್ತಿಯಾಗಿ ಅನುಭವಿಸಿ, ಸವಿಯಲು ಸಾಧ್ಯ. ಹಾಗಾಗಿ ಕೇವಲ ಅದರ ಪಕ್ಷಿನೋಟವನ್ನು ಮಾತ್ರ ನಿಮ್ಮ ಮುಂದಿಡುತ್ತೇನೆ. ಅಂದಹಾಗೆ ಒಂದು ಮಾತು: ಈ ಬಗ್ಗೆ ಇದಕ್ಕೂ ಮೊದಲೆ ಯಾರಾದರೂ ಸಂಪದದಲ್ಲಿ ಬರೆದಿದ್ದಲ್ಲಿ ಇದನ್ನು "ಎರಡನೆಯ ಓದು" ಅಂತ ಓದಿ ಪಕ್ಕಕ್ಕಿಡಿ!

     ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಬಂದ ನಾಲ್ಕೈದು ಜನರು ಒಂದೇ ಮನೆಯಲ್ಲಿ ವಾಸಿಸಿದಾಗ, ಅವರದೇ ಆದ ಶೈಲಿಯ ಕನ್ನಡ ಬಳಕೆಯಿಂದ ಎಷ್ಟೆಲ್ಲ ಅವಾಂತರಗಳು ಸಂಭವಿಸಬಹುದು ಎನ್ನುವುದೇ "ಏಕೀಕರಣ" ನಾಟಕದ ಹೂರಣ. ಅದರಲ್ಲಿನ ಅಡುಗೆ ಭಟ್ಟ ದಕ್ಷಿಣ ಕನ್ನಡದವನು. ಯಜಮಾನ ಹುಬ್ಬಳ್ಳಿ/ಧಾರವಾಡ ಕಡೆಯವನು. ಒಮ್ಮೆ ಯಜಮಾನ ಹಲಸಿನಕಾಯೊಂದನ್ನು ಎಲ್ಲಿಂದಲೋ ಕಷ್ಟಪಟ್ಟು ತಂದು (ಆತನಿಗೆ ಹಲಸಿನಕಾಯಿ ಅಂದ್ರೆ ಪ್ರಾಣ) ಅಡುಗೆಭಟ್ಟನಿಗೆ ಕೊಟ್ಟು "ಇದರಲ್ಲಿ ಏನಾದರೂ ಒಳ್ಳೆಯ ಅಡುಗೆ ಮಾಡಪ್ಪಾ" ಅಂತ ಹೇಳುತ್ತಾನೆ. ಸ್ವಲ್ಪ ಹೊತ್ತಿನ ನಂತರ "ಏನು ಅಡುಗೆ ಮಾಡಿದೆ" ಅಂತ ಕೇಳಿದಾಗ ಭಟ್ಟ "ಹಲಸಿನಕಾಯಿ ಕೊಟ್ಟೆ" ಅನ್ನುತ್ತಾನೆ! ಯಜಮಾನನಿಗೆ ಕೋಪ ನೆತ್ತಿಗೇರುತ್ತದೆ. "ಅಡುಗೆ ಮಾಡು ಅಂತ ಕೊಟ್ಟರೆ, ಯಾರಿಗೆ ಕೊಟ್ಟು ಬಂದ್ಯೋ ಭಡವ? ಎಷ್ಟು ಧೈರ್ಯ ನಿನಗೆ?" ಅಂತ ದಬಾಯಿಸಲು ಶುರು ಮಾಡುತ್ತಾನೆ. ಪಾಪ ಭಟ್ಟ ತಬ್ಬಿಬ್ಬು! ದಕ್ಷಿಣಕನ್ನಡದಲ್ಲಿ ಕೊಟ್ಟೆ ಎಂದರೆ ಒಂದು ರೀತಿಯ ಕಡುಬು. ಬಾಳೆಎಲೆ ಅಥವಾ ಆಲದೆಲೆಗಳನ್ನು ಬಾಡಿಸಿ, ಪುಟ್ಟಪುಟ್ಟ ಪಾತ್ರೆಗಳಾಕಾರಕ್ಕೆ ಮಡಚಿ, ಅದರೊಳಗೆ ಹಿಟ್ಟು (ಹಲಸಿನ ಹಣ್ಣು + ನೆನೆದ ಅಕ್ಕಿ + ತೆಂಗಿನಕಾಯಿ + ಉಪ್ಪು ಹಾಕಿ ರುಬ್ಬಿದ್ದು) ಹಾಕಿ ಹಬೆಯಲ್ಲಿ ಬೇಯಿಸಿ ತಯಾರಿಸಿದ ತಿಂಡಿ. ಪಾಪ, ಭಟ್ಟ ಆ ಅರ್ಥದಲ್ಲಿ (ತನ್ನ ಆಡು ಮಾತಿನಲ್ಲಿ) "ಹಲಸಿನಕಾಯಿ ಕೊಟ್ಟೆ" ಅಂತ ಹೇಳಿರುತ್ತಾನೆ. ಕೊನೆಗೆ ಗೊತ್ತಾದಾಗ ಯಜಮಾನ ಕೂಡಾ ಬಿದ್ದೂ ಬಿದ್ದೂ ನಗುತ್ತಾನೆ. ಬೇರೆ ಬೇರೆ ಕನ್ನಡದ ಬಳಕೆಗಳ ಮೇಲೂ ಹಾಸ್ಯದ ಬೆಳಕು ಚೆಲ್ಲುತ್ತಾ "ಏಕೀಕರಣ" ನಾಟಕ ಹೀಗೇ ಸಾಗುತ್ತದೆ. ಆದರೆ ನಾಟಕದ ಅಂತರಂಗದಲ್ಲಿ ಪ್ರತಿಧ್ವನಿಸುವುದು "ವಿವಿಧತೆಯಲ್ಲಿ ಏಕತೆ ಇದ್ದರೆಷ್ಟು ಚೆನ್ನ" ಎನ್ನುವ ಭಾವನೆ.

     ಸಾಕು ಬಿಡಿ, ತುಂಬಾ ಹೇಳಿದರೆ ಚೆನ್ನಾಗಿರೋದಿಲ್ಲ. ಇಲ್ಲದಿದ್ದರೆ "ಪುಸ್ತಕಕ್ಕಿಂತ ಮುನ್ನುಡಿ, ಬೆನ್ನುಡಿಗಳೇ ಹೆಚ್ಚಾದಂತೆ" ಆಗಿಬಿಡುತ್ತೆ! ಪೂರ್ತಿ ಸವಿಯಬೇಕೂಂತ ಅನ್ನಿಸಿದಲ್ಲಿ ಇನ್ನು ನೀವುಂಟು, ಬೀಚಿಯವರ "ರೇಡಿಯೋ ನಾಟಕಗಳು" ಪುಸ್ತಕ ಉಂಟು. ಮಧ್ಯೆ ನಾನೇಕೆ?

Rating
No votes yet

Comments