ಹಳ್ಳಿಕಟ್ಟೆ​: ಎಲ್ಲ ದೇವರಆಟಕಣಪ್ಪ !!!!(2)

ಹಳ್ಳಿಕಟ್ಟೆ​: ಎಲ್ಲ ದೇವರಆಟಕಣಪ್ಪ !!!!(2)

*** ಹಳ್ಳಿ ರಮ್ಮಿ ಅಲಿಯಾಸ್ ರಮೇಶ , ಸಿಟಿ ಸೀನಿ ಅಲಿಯಾಸ್ ಶ್ರೀನಿವಾಸ ಮತ್ತು ಅಬ್ದುಲ್ಲ ಅಲಿಯಾಸ್ ಮಹಮ್ಮದ್ ಅಬ್ದುಲ್ಲ ***

ಅಬ್ದುಲ್ಲ: ಏನ್ ರಮೇಶಣ್ಣ, ನಿಮ್ದುಕ್ಕೆ ಮೊನ್ನೆ ಬೆಂಗಳೂರ್ಗೆ ಹೋಗಿದ್ರಿ ಅಂತಲ...ಸಾಯೇಬ್ರು ಸಿಕ್ಕಿದ್ರಾ?

ಹಳ್ಳಿರಮ್ಮಿ: ನಿನೊಬ್ಬ ಬಾಕಿ ಇದ್ದೆ ನೋಡ್ಲ ಅಬ್ದುಲ್ಲ, ಇದುನ್ನ ಕೇಳೋದಕ್ಕೆ.....ಅಲ್ಲಲೇ ರಾಜ್ಯದಾಗೆ ರಾಜಕೀಯ ಬಿರುಗಾಳಿ ಎದ್ದು, ಎಲ್ಲ ಎಂ.ಎಲ್.ಎ ಗಳು ಅಲ್ಲೋಲ-ಕಲ್ಲೋಲ ಆಗಿ ಹೋಗಿದಾರೆ ಮಿನಿಸ್ಟರ್ ಆಗಬೇಕು ಅಂತ ತಾ ಮುಂದು, ನಾ ಮುಂದು ಅಂತ....ಬೆಂಗಳೂರುಗೂ-ಡೆಲ್ಲಿಗೂ....ಒಳ್ಳೆ ಭೇದಿ ಆದೋರು ನಮ್ಮೂರಲ್ಲಿ ನಿಮಿಷಕ್ಕೊಂದು ಸಲ ಮನೆಗೂ-ಕೆರೆಕಡೆಕು ಹೊಗಿಬಂದಂಗೆ ಓಡಾಡ್ಕೊಂಡು ಇದಾರೆ..ಇನ್ನು ನಮಂತ ಬಡವರ ಕೈಗೆ ಸಿಗ್ತಾರೆನ್ಲ?

ಅಬ್ದುಲ್ಲ: ಅಂದ್ರೆ ನಿಮ್ದುಕ್ಕೆ ಸಾಯೇಬ್ರು ಸಿಕ್ಲಿಲ್ಲ ಅನ್ನಿ....ಆ ಕಡೆ ನೋಡಿ ರಮೇಶಣ್ಣ.....ಸೀನಣ್ಣನ್ದುಕ್ಕೆ ನಮ್ದು ಕಡೆನೆ ಬರ್ತಾ ಇದಾರೆ ...

ಹಳ್ಳಿರಮ್ಮಿ: ಅಬ್ಬಬ್ಬ, ಏನ್ಲ ಸೀನಿ, ಕೈತುಂಬಾ ಪೇಪರ್ ಹಿಡುಕೊಂಡು, ಬಾರಿ ವಿಷ್ಯನೇ ತಂದಿರೊಂಗಿದಿಯ....ಏನೇನಿದೆ ಆ ಪೇಪರ್ನಾಗೆ ಅಂತ ಸ್ವಲ್ಪ ಓದಿ ಹೇಳಲಾ...

ಸಿಟಿ ಸೀನಿ: ಊನ್ಲ ರಮ್ಮಿ, ಈ ವಾರ ನಡೆದಿದ್ದ ವಿಷಯನೆಲ್ಲ ತಿಳಿಸೋಣ ಅಂತ ..ಕೈಗೆ ಸಿಕ್ಕ ಪೆಪರ್ನೆಲ್ಲ ಎತ್ತಿಕೊಂಡು ಬಂದೀನಿ ನೋಡ್ಲ ...ನಿಮಿಗೆ ತಿಳಿದಂಗೆ ಇರುತ್ತಾ...ಗೌಡ್ರು ಮನೆ ಟಿವ್ಯಾಗೆ ಎಲ್ಲ ನೋಡಿರ್ತಿರ ಅಲ್ವಾ.....

ಅಬ್ದುಲ್ಲ: ಅದ್ರು ನಿಮ್ದು ಬಾಯಲ್ಲಿ ಕೇಳಿ, ನಮ್ದುಕ್ಕೆ ಸ್ವಲ್ಪ ಜನರದ್ದು ನಾಲೆಡ್ಜು ಜಾಸ್ತಿ ಮಾಡಿಕೊಂತಿವಿ...

ಸಿಟಿ ಸೀನಿ: ಹ ಹ ಹ !ಜನರದ್ದು ನಾಲೆಡ್ಜು ಅಲ್ಲ ಕಣ್ಲ ಅಬ್ದುಲ್ಲ ಅದು ಜೆನೆರಲ್ ನಾಲೆಡ್ಜ್ .....

ಅಬ್ದುಲ್ಲ: ಏನೋ ಒಂದು ಸಿನಣ್ಣ...ನಮ್ದುಕ್ಕೆ ಅಷ್ಟೊಂದು ಗೊತ್ತಿದ್ರೆ ಯಾಕೆ ? ನೀವು ಏನೋ ವಿಷ್ಯ ಐತೆ ಅಂದ್ರಲ್ಲ ನಮ್ದುಕ್ಕೆ ಸ್ವಲ್ಪ ಹೇಳಿ....

ಸಿಟಿ ಸೀನಿ: ವಿಜ್ಞಾನಿಗಳೆಲ್ಲ ಸೇರಿ "ದೇವಕಣ" ಅಂತ ಕಂಡಿಡಿದು ಬಿಟ್ಟರೆ ಕಂಡ್ರೋ....ಅದೇ ಬಾರಿ ನ್ಯೂಸ್ ನೋಡಪ್ಪ...

ಹಳ್ಳಿರಮ್ಮಿ: ಹ ಹ ಹ !!!

ಸಿಟಿ ಸೀನಿ: ಯಾಕ್ಲ ರಮ್ಮಿ ನಗ್ತಿಯ?

ಹಳ್ಳಿರಮ್ಮಿ: ಅಲ್ಲಾಲ, ದೇವಕಣ ಅನ್ನೋದನ್ನ ನಮ್ಮ ಅಜ್ಜ-ಅಜ್ಜಿನೆ ಹೇಳ್ತಾ ಇದ್ರೂ ಬಿಡಲಾ.....

ಸಿಟಿ ಸೀನಿ:ಅದು ಹೇಗೆ ಜಗತ್ತಿಗೆ ತಿಳಿಯೋದಕ್ಕಿಂತ ಮುಂಚೆ ನಿಮ್ಮಜ್ಜ-ಅಜ್ಜಿಗೆ ತಿಳಿದಿತ್ತು....!!!

ಹಳ್ಳಿರಮ್ಮಿ: ನೋಡ್ಲಾ ಸೀನಿ ...ನಮ್ಮ ಅಜ್ಜ-ಅಜ್ಜಿ ಏನೇ ಒಳ್ಳೆದಾದ್ರು-ಕೆಟ್ಟುದಾದ್ರು ..ಎಲ್ಲದಕ್ಕೂ "ದೇವರುಆಟಕಣಪ್ಪ" ಅಂತಿದ್ರು....

ಸಿಟಿ ಸೀನಿ: ಅದು ಎಲ್ಲರುಮನೆಗು ಮಾತಾಡೋ ಮಾತೆ ಅಲ್ವೆನ್ಲ..ಅದರಲ್ಲಿ ಏನ್ಲ ಹೊಸದು ಐತೆ...
 
ಹಳ್ಳಿರಮ್ಮಿ: ಅದುಕ್ಕೆ ನೀನಿಗೆ ಬುದ್ದಿ ಇಲ್ಲ ಅನೋದು ಕಣ್ಲ ....."ದೇವರುಆಟಕಣಪ್ಪ" ಅನ್ನೋದ್ರಾಗೆ ಆಟ ಜೊತೆಗೆ ಅಪ್ಪನು ತೆಗುದಾಕಲ...ಅಲ್ಲೇ ಇಲ್ವೇನೋ ನಿನೇಳಿದ್ದು "ದೇವಕಣ"....

ಸಿಟಿ ಸೀನಿ: ಲೇ ಕೋತಿ ಮುಂಡೇದೆ....ದೇವಕಣ ಅಂದ್ರೆ ಅವುರೇಳಿದ್ದು ಮಾತಲ್ಲಲೇ...ಎಲ್ಲ ಸೃಷ್ಟಿಗೂ ಮೂಲಧಾತುವಾದ ಕಣ ಒಂದೈತೆ ಅದೇ ಕಣ್ಲ ....

ಅಬ್ದುಲ್ಲ: ಅಂದ್ರೆ ...ಇದು ಇಲ್ಲಿವರೆಗೂ ಯಾರ್ದುಕ್ಕು ತಿಳ್ದಿರ್ಲಿಲ್ಲ !!!!

ಸಿಟಿ ಸೀನಿ: ಸತ್ಯೇಂದ್ರನಾಥ್ ಬೋಸ್ ಅಂತ ನಮ್ಮೋರೆ ಮಾಡಿದ್ದೂ ಸಿದ್ದಾಂತ ಹಿಡ್ಕೊಂಡು ಕಂಡು ಹಿಡಿದಿದ್ದಾರೆ ಕಣ್ಲ ...ಆದರೆ....

ಹಳ್ಳಿರಮ್ಮಿ: ಏನೋ ಸಿದ್ದಾಂತ ಅಂದೇ..ನನ್ನ ತಲೆಗೆ ಏನು ಹೊಗ್ಲಿಲ್ಲ ...ಕೊನೆಗೆ ಏನ್ಲ ಆದ್ರೆ ಅಂತ ರಾಗ ನಿಂದು....

ಸಿಟಿ ಸೀನಿ: ಅವುರು ಸಿದ್ದಾಂತ ಹಿಡ್ಕೊಂಡು ಸಂಶೋದನೆ ಮಾಡಿದ್ದ ಎಷ್ಟೋ ಜನಕ್ಕೆ "ನೊಬೆಲ್" ಪ್ರಶಸ್ತಿ ಕೊಟ್ಟರೆ ಕಣ್ಲ ...ಅವುರಿಗೆ ಸಿಕ್ಕಿಲ್ಲ........ಅದ್ರಗು ಸಮಾದಾನ ಅಂದ್ರೆ..."ದೇವಕಣ"ಕ್ಕೆ ಅವುರೆಸ್ರು ಸೇರ್ಸ್ಕೊಂದರೆ "ಹಿಗ್ಸ್ ಬೋಸನ್" ಅಂತ ....

ಹಳ್ಳಿರಮ್ಮಿ: ಆದರು ಬಿಡ್ಲಾ..ನಮ್ಮ ಭಾರತೀಯರ ಕೆಲಸಗಳು ಪ್ರಶಸ್ತಿಗೂ ಮಿರಿದವು ಕಣ್ಲ....ಈಗ ನೋಡಪ್ಪ ಗಾಂಧಿಜೀಗೆ, ವಿವೇಕಾನಂದ ಅವ್ರುನ್ನ ಜನ ಪ್ರಶಸ್ತಿ ಇಂದ ಗುರ್ತುಸ್ತರೆನ್ಲ್....ಅವುರು ವ್ಯಕ್ತಿತ್ವ ಪ್ರಶಸ್ತಿನ ಮಿರಿಸಿದ್ದು ಕಣ್ಲಾ...ಆದರು ಆ ಪ್ರಶಸ್ತಿ ಸಿಕ್ಕಿದ್ರೆ...ಅವುರ ಹೆಸರನಿಂದ ಪ್ರಶಸ್ತಿಗೆ ಒಂದು ತೂಕ ಬರುತ್ತಿತ್ತು ನೋಡ್ಲ ....

ಅಬ್ದುಲ್ಲ: ನಿಮ್ದುಕ್ಕೆ ಸರಿಯಾಗಿ ಹೇಳ್ದೆ ರಮೇಶಣ್ಣ ..........ನೂರುಕ್ಕೆ ಒಂದು ಮಾತು....ಅಂದ ಆಗೇ ಸಿನಣ್ಣ...ಶೆಟ್ರುದ್ಕೆ ಮುಖ್ಯಮಂತ್ರಿ ಆಗಿಬಿಟ್ರು.....ಆದ್ರೆ ನಮ್ದು ಮಿನಿಸ್ಟ್ರು ಯಾರು ಆಗಿದಾರೆ....

ಸಿಟಿ ಸೀನಿ: ಒಹ್ ಒಹ್ ! ನಿಮ್ಮದು ಅಂದ್ರೆ ಅಬಕಾರಿ ಸಚಿವ್ರಲ್ವೇನ್ಲಾ.... ರೇಣುಕಚಾರ್ಯರೆ ಕಣ್ಲ....

ಅಬ್ದುಲ್ಲ: ಒಹ್, ಯಾವಾಗಲು "ಯಡಿಯೂರಪ್ಪ ನಮ್ಮ ನಾಯಕರು" ಅನ್ತಿರ್ತ್ರಲ್ಲ ಅವುರೆ ಅಲ್ವಾ....

ಹಳ್ಳಿರಮ್ಮಿ: ಹೌದು, ಅವುರೆ ಕಣ್ಲ.....ಬಲು ಚೆಂದಗೆ ಕುಣಿತ ಹಾಕ್ತಾರೆ ಬಿಡಪ್ಪ ಗೌಡ್ರು ಮನೆ ಟಿವ್ಯಾಗೆ ನೋಡಿದ್ದೇ.....ಒಳ್ಳೆ ಜೋಗಿ ಸಿನ್ಮದಗೆ ಶಿವಣ್ಣನ ರೀತಿ ಕುಣಿಯೋಕೆ ಹೋಗ್ತಾರೆ....ಮುಂದಿನಸಲ ಮಾರಮ್ಮನ ಜಾತ್ರೆ ಗೆ ಕರಿಸಿ ....ಒಂದೆರಡು ಕುಣಿತ ಹಾಕಿ ಅನ್ನುಬೇಕು ಕಣ್ಲ....

ಅಬ್ದುಲ್ಲ:ಮತ್ತೆ ಅವುರ್ದುಕ್ಕೆ ಅಬಕಾರಿ ಸಚಿವರು ಮಾಡಿದ್ರ ಸಿನಣ್ಣ...ಯಾಕೆ?

ಹಳ್ಳಿರಮ್ಮಿ: ಲೇ ಸೀನಿ... ಇವುನಿಗೆ ನೀನು ಏನು ಹೇಳಿದ್ರು ಅರ್ಥ ಆಗೋದಿಲ್ಲ ಕಣ್ಲ ....ನಾನೆಳ್ತಿನಿ .....ಅಬ್ದುಲ್ಲ ಕೇಳಲ ....ನಿನಿಗೆ ಹೆಂಗೆ, ಯಾಕೆ ಅಂತ ಬಿಡುಸಿ ಹೇಳ್ತೀನಿ ಕಣ್ಲ.....

ಹಿಂಗೆ ಯಾರ್ಯಾರನ್ನ ಯಾವ್ಯಾವ ಮಿನಿಸ್ಟ್ರು ಮಾಡಬೇಕು ಅಂತ ಚರ್ಚೆ ನಡೀತಾ ಇತ್ತಂತೆ....ಅವಾಗ ರೇಣುಕಚಾರ್ಯ ಎದ್ದು ಬಿಟ್ಟು, ಬಬ್ರುವಾಹನನ ಸ್ಟೈಲ್ನಲ್ಲಿ ಯಡಿಯೂರಪ್ಪ ಕಡೆ ತಿರುಗಿ ನಮಸ್ಕಾರ ಮಾಡಿ ಕೇಳಿದ್ರಂತೆ...

"ಅಪ್ಪಾಜಿ, ನೀವು ಉ ಅಂದ್ರೆ, ನಾನೆ ಮತ್ತೆ ಅಬಕಾರಿ ಖಾತೆ ತಗೊಳ್ತಿನಿ ಅಂತ" ...

ಅದುಕ್ಕೆ ಯಡಿಯೂರಪ್ಪ್ನೋರು ...

"ವತ್ಸ ರೇಣುಕ, ನೀನು ನಾಲ್ಕು ವರ್ಷದಿಂದ ಅಬಕಾರಿ ಸಚಿವ ಆಗಿ ಎಣ್ಣೆ ಕುಡಿಸಿದ್ರಿನ್ದನೆ ..ನಮ್ಮ ಜನ ಯಾರೇ ರಾಜ್ಯದ ಖಜಾನೆ ಲೂಟಿ ಮಾಡಿ ಜೈಲ್ಗೆ ಹೋದರು... ಮೇಲಕ್ಕೆ ಎದ್ದಿಲ...ಅಷ್ಟೇ ಯಾಕೆ,ನಾವು ರಾಜಕಿಯದಾಗೆ ಇಷ್ಟ ಬಂದಂಗೆ ಆಟ ಅಡ್ತ ಇದ್ರೂ.... ಕುಡುದು ಮೇಲಕ್ಕೆ ಎದ್ದಿಲ್ಲ.....ಅದುಕ್ಕೆ ಈ ಖಾತೆ ನಿನಿಗೆ ಸರಿ....ಆದ್ರೆ...ಎಲೆಕ್ಷನ್ ಬೇರೆ ಇನೊಂದು ಹತ್ತು ತಿಂಗಳಿಗಿಂತ ಕಡಿಮೆ ಇದೆ...ಅದುಕ್ಕೆ ನಮ್ಮ ಜನ ಸ್ವಲ್ಪಕಡಿಮೆ ಎಣ್ಣೆ ಕುಡಿಯಂಗೆ ನೋಡ್ಕೋ ....ಯಾಕೆ ಅಂದ್ರೆ ಎಲೆಕ್ಷನ್ ಟೈಮ್ನಾಗೆ ಎದ್ದು ಬಂದು ಓಟು ಹಾಕೊದಿಕಾದ್ರು ಪ್ರಜ್ಞೆ ಇರಲಿ ಅಂತ" ಹೇಳಿದ್ರಂತೆ ಕಣ್ಲ ...

ಅಬ್ದುಲ್ಲ: ನಿಮ್ದುಕ್ಕೆ ಚಲೋ ತಮಾಷೆ ಮಾಡ್ತಿರ ರಮೇಶಣ್ಣ......ಅದ್ರು ನಮ್ದುಕ್ಕೆ ಸುಮ್ನೆ ಕುತ್ಕೊಂಡಿಲ್ಲ...ಎಲೆಕ್ಷನ್ಗೆ ಕಾಯ್ತಾ ಇದಿವಿ.....

ಸಿಟಿ ಸೀನಿ: ಇಲ್ಲಿ ಇನೊಂದು ವಿಷ್ಯ ಕೇಳ್ರಪ್ಪ.....ಅಡ್ವಾಣಿ ಅವ್ರುನ್ನ ಅವ್ರು ಪಕ್ಷದೋರು ಮೊನ್ನೆ "ಭೀಷ್ಮ ಪಿತಮಹಾ" ಅಂತ ಕರಿತ ಇಧ್ರಲ್ಲಪ್ಪ..

ಹಳ್ಳಿರಮ್ಮಿ: ಅದು ಹಂಗೆ ಕಣ್ಲ....ಈಗ ನೋಡಪ್ಪ ಅಡ್ವಾಣಿಜೀ ನಿಮಿಗೆ ವಯಸಾಯ್ತು...ಪ್ರದಾನಿ ಅಸೆ ಬಿಡಿ...ಆರಾಮಾಗಿ ಮನೇಲಿ ಇರಿ ಅಂತ ನೆರವಾಗಿ ಹೇಳಿದ್ರೆ ಸಿಟ್ಟಾಗ್ತಾರೆ ..... ಅದುಕ್ಕೆ ಇವತ್ತು ಭೀಷ್ಮ ಅಂದು, ನಾಳೆ ಶಸ್ತತ್ಯಾಗ ಮಾಡಿಸ್ಬೋದು ಅಂತ ಅಂಗೆ ಹೇಳ್ತಾ ಇದಾರೆ ಕಣ್ಲ.......

ಅಬ್ದುಲ್ಲ: ಅಂಗದ್ರೆ ನಮ್ಮ ಯಡಿಯೂರಪ್ಪನೋರು ಅವುರ್ದಕ್ಕೆ ಹೇಳಿದ್ರಲ್ಲ .."ಸಮ ಬಾಳು ಸಮ ಪಾಲು" ಅಂದ್ರೆ ಏನಣ್ಣ?
 
ಹಳ್ಳಿರಮ್ಮಿ: ಸಮ ಬಾಳು ಅಂದ್ರೆ ...ಗೌಡ್ರಿಗೂ-ಶೆಟ್ರಿಗೂ ಸರಿಯಾಗಿ ಅಧಿಕಾರ ಕೊಟ್ಟಿನಿ...ಸಮ ಪಾಲು ಅಂದ್ರೆ, ಎಲ್ಲ ಮಿನಿಸ್ಟ್ರು ಮುಂದಿನ ೧೦ ತಿಂಗಳು ಏನೇ ಸಿಕ್ರು ಸಮವಾಗಿ ಹಂಚಿಕೊಂಡು ತಿನ್ರಿ ಅಂತ ಹೇಳಿರಬೇಕು ಕಣ್ಲ......ಅಲ್ವೇನೋ ಸೀನಿ...?

ಸಿಟಿ ಸೀನಿ: ನಿನಿಗೆ ಯಾರಪ್ಪ ಹೇಳೋಕಾಗುತ್ತೆ....ಏನೇ ಹೇಳಿದ್ರು ಅದುಕ್ಕೊಂದು ಕಥೆ ಕಲ್ಪಿಸಿರ್ತಿಯ....ಮುಂದೆ ಕೇಳು ....ನಮ್ಮ ಭಾರತೀಯ ಮೂಲದವರೇ ಅದ ಸುನೀತಾ ವಿಲಿಯಮ್ಸ್ ಎರಡನೇ ಬಾರಿ ಗಗನ ಯಾತ್ರೆ ಮಾಡ್ತಾ ಇದಾರೆ ಕಣ್ಲ....

ಹಳ್ಳಿರಮ್ಮಿ:ಬಲು ಹೆಮ್ಮೆ ತರೋ ವಿಷ್ಯ ಕಣ್ಲ....ಮುಂದಿನಸಲ ಬೆಂಗಳೂರಿಗೆ ಹೋಗಬೇಕಾದ್ರೆ ನಮ್ಮ ಹೆಂಡ್ರುನು ಜೊತೆಗೆ ಮಕ್ಳುನ್ನ ಕರಕೊಂಡು ಹೋಗಿ ..ಅದೇನೋ ಮೆಟ್ರೋ ಅಂತಲೋ....ಆ ಮೆಟ್ರೋ ಯಾತ್ರೆನಾದ್ರು ಮಾಡುಸ್ಬೇಕು ಕಣ್ಲ .....

ಅಬ್ದುಲ್ಲ: ರಮೇಶಣ್ಣ ನಿಮ್ದುಕ್ಕೆ ಯಾವಾಗಲು ಮನೆಯವರು ಯೋಚನೇನೆ....ಸ್ವಲ್ಪ ರಾಜ್ಯದ್ದು ಬಗ್ಗೆ ಯೋಚನೆ ಮಾಡಿ...

ಹಳ್ಳಿರಮ್ಮಿ: ಅಂದಾಗೆ ಸೀನಿ, ನಮ್ಮ ಸದಾನಂದ ಗೌಡ್ರು ಕೆಳಗೆ ಇಳಿದಿದ್ದು ಯಾಕೆ ಅಂತ ಗೊತ್ತಯ್ತೆನ್ಲ....

ಸಿಟಿ ಸೀನಿ: ನಾನು ವಿಚಾರಿಸಿ ನೋಡಿದೆ ಕಣ್ಲ, ಎಲ್ಲರು ಅವುರು ದೇವ್ರು ಖಾತೆ ಜೇಬಲ್ಲಿ ಇಟ್ಟುಕೊಂಡು ಓಡಾಡಿದ್ದೆ ಕಾರಣ ಅಂತರ ಕಣ್ಲ....

ಹಳ್ಳಿರಮ್ಮಿ: ಒಹ್ , ನೀನು ದೇವ್ರು ಖಾತೆ ಅಂತಕ್ಷಣ ನೆನಪಾಯ್ತು ನೋಡ್ಲ.....ನನ್ನ ಹೆಂಡ್ರು ಹೇಳ್ತಿದ್ಲು ಮಗುಗೆ ಹುಷಾರಿಲ್ಲ ...ಊರು ಹೊರಗಿರೋ ಅಂಜನೇಯ ಗುಡಿಗೆ ಹೋಗಿ ಕಾಣಿಕೆ ಹಾಕಿ ಬಾ ಅಂತ ಒಂದಿಷ್ಟು ಚಿಲ್ದ್ರೆ ಕಾಸು ಕೊಟ್ಟಿದ್ಲು...ನಾನೇನೋ ರಾತ್ರಿ ಎಣ್ಣೆ ಖರ್ಚಿಗೆ ಆಗುತ್ತೆ ಅಂತ ಇಟ್ಟುಕೊಂಡಿದ್ದೆ .....ನೀನು ಬೇರೆ ದೇವ್ರು ಬಗ್ಗೆನೇ ಬಂದಾಗಿಂದ ಹೇಳಿ ಹೇಳಿ ಹೆದರುಸ್ತ ಇದಿಯಾ......

ಸಿಟಿ ಸೀನಿ: ಅದುಕ್ಕೆ ಏನ್ಲ ಈಗ...

ಹಳ್ಳಿರಮ್ಮಿ: ಅದುಕ್ಕೆ ದೇವ್ರಿಗೋಗಿ ಕಾಣಿಕೆ ಹಾಕಿ ಬರೋಣ ಅಂತ ಯೋಚನೆ ಮಾಡ್ತಿದ್ದೆ ಕಣ್ಲ ...ಎಲ್ಲ ದೇವ್ರುಆಟಕಣ್ಲ ..ಅಂದುಕೊಂಡದ್ದು ಒಂದು ಅಗೊದೊಂದು....ಇಗೋ ಹೊರಟೆ ಅಂಜನೇಯ ಗುಡಿ ಕಡೆಗೆ....ನಿವಿಬ್ರು ಇನ್ನು ಕಳಚಿಕೊಳ್ರಿ.....

--ಚಿತ್ರದುರ್ಗ ಚೇತನ್

Rating
No votes yet

Comments