ಹಸಿರು ಕ್ಷಣಗಳು -ಲಕ್ಷ್ಮೀಕಾಂತ ಇಟ್ನಾಳ
ಹಸಿರು ಕ್ಷಣಗಳು
(ಗುಲ್ಜಾರರ ‘ಸಬ್ಜ ಲಮ್ಹೇ’ ಕವನದ ಅನುವಾದ)
- ಲಕ್ಷ್ಮೀಕಾಂತ ಇಟ್ನಾಳ
ಬಿಳಿಯ ಹದ್ದೊಂದು ಅಯಾಸಗೊಂಡು ಕೆಳಗಿಳಿದಾಗ
ಬೆಟ್ಟಗಳಿಗೆ ಹೇಳುತಿಹುದು
ಎತ್ತರದ ಮರಗಳ ಹಳೆಯ ಕಥೆಗಳನು
ಅಲ್ಲೊಂದು ಬಹುಎತ್ತರದ ದೇವದಾರ ಮರವಿತ್ತು, ಮೊದಲು,
ಅದು ಮೋಡಗಳನ್ನು, ತನ್ನ ಎಲೆಗಳಿಗೆ ರುಮಾಲಿನಂತೆ ಸುತ್ತುತ್ತ,
ಕೆಲವೊಮ್ಮೆ ಶಾಲಿನಂತೆ ಮೈತುಂಬ ಹೊದೆಯುತಿತ್ತು,
ತಡೆದು ಗಾಳಿಯನ್ನು, ಬಾಹುಗಳಿಂದ-
ಅತ್ತಿತ್ತ ತೂಗುತ್ತ, ಅದಕೆ ಹೇಳುತಿತ್ತು,
ಈ ಕಾಲುಗಳು ನೆಲೆಯೂರದಲ್ಲಿ, ನಿನ್ನೊಂದಿಗೇ ಬರತಿದ್ದೆ!
ಅದೋ ಅಲ್ಲಿ ಬೀಟೆ ಇತ್ತು, ಜಾಲಿಗಿಂತ ತುಸು ಮುಂದೆ,
ಬಲು ತಿಕ್ಕಾಡುತಿದ್ದವು ಅವೆರಡು-
ಆದರಿದು ಸತ್ಯ, ಜಾಲಿಗೆ ಹೊಟ್ಟೆಕಿಚ್ಚಿತ್ತು ಅದರೆತ್ತರಕೆ,
ಇಂಪಾದ ಸಿಳ್ಳು ಹೊರಟಾಗ, ಬೀಟೆಯ ಕೊರಳಿಂದ,
ಬಾನಾಡಿಗಳು ರೆಂಬೆಗಳಲ್ಲಿ ಕುಳಿತು, ಅದರ ನಕಲು ಮಾಡುತಿದ್ದವು!
ಅಲ್ಲೊಂದು, ಮಾವು ಸಹವಿತ್ತು
ಅದರಲ್ಲೊಂದು ಕೋಗಿಲೆ, ಎಷ್ಟೊ ವರ್ಷಗಳಿಂದ ಬರತಿತ್ತು,
ಹೂಬಿಡುವ ಸಮಯದಲ್ಲಿ-
ಅಲ್ಲಿ, ಮೂರು ನಾಲ್ಕು ಸಂಕೇಸರಗಳಲ್ಲಿ , ಈಗ ಉಳಿದಿರುವುದೊಂದೇ,
ಅದು ಪಾಲಿಸುತ್ತಿದೆ, ತನ್ನ ದೇಹದ ಮೇಲೆ, ಕೊರೆದ ಹೆಸರನ್ನೇ-
ಅಲ್ಲೊಂದು ಬೇವಿತ್ತು,
ಚಂದಿರನ ಜೊತೆಗದು ಪ್ರೇಮದಲ್ಲಿತ್ತು-
ಅದರೆಲೆಗಳೆಲ್ಲ ನೀಲಿಯಾಗುತಿದ್ದವು, ನಾಚಿಕೆಯಲ್ಲಿ!
ಮತ್ತೆ ಸ್ವಲ್ಪ ಆ ಕಡೆಯ, ಹಸಿರು ಬೆಟ್ಟದ ಮೇಲೆ,
ಗಿಡಗಿಳಿದ್ದವು ಗುಂಪಾಗಿ, ನೀಳ ಉಸಿರಾಡುತಿದ್ದವು,
ಆದರೀಗ ಕಾಣದೊಂದೂ, ಆ ಬೋಳು ಬೆಟ್ಟದ ಮೇಲೆ!
ನೋಡಲಿಲ್ಲವಾದರೂ, ಕೇಳಿದ್ದೆ, ಆ ಮೈದಾನದ ಸೆರಗಿನಲ್ಲಿ,
ಆಲದ ಬೊಡ್ಡೆಗಿಂತಲೂ ದೊಡ್ಡದೊಂದು, ಸಂಪಿಗೆ ಇರತಿತ್ತು
ಎಲ್ಲಿಂದ ಕಡಿದೊಯ್ದರೋ, ಅಲ್ಲಿಂದಲೇ ಹಾಲು ಒಸರುತಿತ್ತು,
ಅದೆಷ್ಟೋ ತುಂಡುಗಳಲ್ಲಿ ಹೋಗಿತ್ತು, ನತದೃಷ್ಟೆ, ತನ್ನದೇ ಕಾಡಿನಿಂದ!
ಬಿಳಿ ಹದ್ದೊಂದು ಒಣ ಮರದ ಮೇಲೆ ಕುಳಿತು
ಬೆಟ್ಟಗಳಿಗೆ ಹೇಳುತಿಹುದು, ಎತ್ತರದ ಮರಗಳ ಹಳೆಯ ಕಥೆಗಳನು
ಅವುಗಳನ್ನು ಈ ಸಣ್ಣ ಮನುಷ್ಯನು ಕಡಿದು, ಕೆಡವಿ,
ತುಂಡು ತುಂಡಾಗಿ ಕತ್ತರಿಸಿ,
ಉರಿಸುತಿಹನು!
ಕೃಪೆ : ಗುಲ್ಜಾರ ಸಾಹಬ್
Rating
Comments
ವ್ಹಾ ವ್ಹಾ..ಎತ್ತರದ ಮರಗಳ ಹಳೆಯ
ವ್ಹಾ ವ್ಹಾ..ಎತ್ತರದ ಮರಗಳ ಹಳೆಯ ಕಥೆಗಳು...ಅಲ್ಲೊಂದು ಬಹುಎತ್ತರದ ದೇವದಾರ ಮರವಿತ್ತು, ಮೊದಲು,
ಅದು ಮೋಡಗಳನ್ನು, ತನ್ನ ಎಲೆಗಳಿಗೆ ರುಮಾಲಿನಂತೆ ಸುತ್ತುತ್ತ,
ಕೆಲವೊಮ್ಮೆ ಶಾಲಿನಂತೆ ಮೈತುಂಬ ಹೊದೆಯುತಿತ್ತು,
ತಡೆದು ಗಾಳಿಯನ್ನು, ಬಾಹುಗಳಿಂದ-
ಅತ್ತಿತ್ತ ತೂಗುತ್ತ, ಅದಕೆ ಹೇಳುತಿತ್ತು,
ಈ ಕಾಲುಗಳು ನೆಲೆಯೂರದಲ್ಲಿ, ನಿನ್ನೊಂದಿಗೇ ಬರತಿದ್ದೆ! ವ್ಹಾ ಗುಲ್ಜಾರ್ ಸಾಬ್..ಎಂತಹ ಕವನ. ಈಗಷ್ಟೇ ಜಬ್ ತಕ್ ಹೆ ಜಾನ್ ಗೆ ಬರೆದ ಕವನ "ಚಲ್ಲಾ.."ಗೆ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿದ್ದನ್ನು ಟಿ.ವಿಯಲ್ಲಿ ನೋಡಿದೆ. ಇಟ್ನಾಳರೆ,ಉತ್ತಮ ಅನುವಾದಕ್ಕೆ ಧನ್ಯವಾದಗಳು.( -ಹಿಂದೆ ನಮ್ಮ ಆಸುಹೆಗ್ಡೆಯವರು ಮೋಡದಲ್ಲಿ ತಾವೇ ಸಖಿಯೊಂದಿಗೆ ಸುತ್ತಿದ ಕವನ ನೆನಪಾಯಿತು.)
In reply to ವ್ಹಾ ವ್ಹಾ..ಎತ್ತರದ ಮರಗಳ ಹಳೆಯ by ಗಣೇಶ
ಬಿಳಿ ಹದ್ದೊಂದು ಒಣ ಮರದ ಮೇಲೆ
ಬಿಳಿ ಹದ್ದೊಂದು ಒಣ ಮರದ ಮೇಲೆ ಕುಳಿತು, ಬೆಟ್ಟಗಳಿಗೆ ಹೇಳುತಿಹುದು, ಎತ್ತರದ ಮರಗಳ ಹಳೆಯ ಕಥೆಗಳನು, ಅವುಗಳನ್ನು ಈ ಸಣ್ಣ ಮನುಷ್ಯನು ಕಡಿದು, ಕೆಡವಿ, ತುಂಡು ತುಂಡಾಗಿ ಕತ್ತರಿಸಿ, ಉರಿಸುತಿಹನು!? ಅರ್ಥಪೂರ್ಣ ಸಾಲುಗಳು. ಉತ್ತಮವಾಗಿವೆ.
In reply to ಬಿಳಿ ಹದ್ದೊಂದು ಒಣ ಮರದ ಮೇಲೆ by ಮಮತಾ ಕಾಪು
ಮಮತಾ ಕಾಪು ರವರಿಗೆ, ಲಕ್ಷ್ಮೀಕಾಂತ
ಮಮತಾ ಕಾಪು ರವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.
In reply to ವ್ಹಾ ವ್ಹಾ..ಎತ್ತರದ ಮರಗಳ ಹಳೆಯ by ಗಣೇಶ
ಧನ್ಯವಾದಗಳು ಪ್ರಿಯ ಗಣೇಶ ರವರೇ,
ಧನ್ಯವಾದಗಳು ಪ್ರಿಯ ಗಣೇಶ ರವರೇ, ತಮ್ಮ ಪ್ರೋತ್ಸಾಹದ ಮೆಚ್ಚುಗೆಗೆ.
ಸುಂದರ ಅನುವಾದ, ಲಕ್ಷ್ಮೀಕಾಂತ
ಸುಂದರ ಅನುವಾದ, ಲಕ್ಷ್ಮೀಕಾಂತ ಇಟ್ನಾಳರೇ. ಮಾನವನ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಿದು!
In reply to ಸುಂದರ ಅನುವಾದ, ಲಕ್ಷ್ಮೀಕಾಂತ by kavinagaraj
ಪ್ರಿಯ ಕವಿನಾಗರಾಜ್ ರವರೇ,
ಪ್ರಿಯ ಕವಿನಾಗರಾಜ್ ರವರೇ, ಧನ್ಯವಾದಗಳು ತಮ್ಮ ಮೆಚ್ಚುಗೆಯ ಪ್ರೋತ್ಸಾಹಕ್ಕೆ , ಮಾನವನ ಕಾರ್ಬನ್ ಫುಟ್ ಪ್ರಿಂಟ್ಸ್ ಬಿದ್ದಲ್ಲಿ, ಅದು ಪ್ರಕೃತಿಯ ಚರಮ ಗೀತೆಯಾಗುವುದು ದುರ್ದೈವದ ಮಾತಾಗುತ್ತಿದೆ, ನಾವೆಲ್ಲ ಪ್ರಕೃತಿ ಸ್ನೇಹಿಯಾಗುವುದು ಅತೀ ಅವಶ್ಯವೆನಿಸುತ್ತಿದೆ ಅಲ್ಲವೇ ಸರ್.
ನಿಮ್ಮ ಮಾತು ಅಕ್ಷರಶಃ ಸತ್ಯ
ನಿಮ್ಮ ಮಾತು ಅಕ್ಷರಶಃ ಸತ್ಯ ಇಟ್ನಾಳರೆ, ಅದಕ್ಕೇ ಅಲ್ಲವೇ 'ಮನುಷ್ಯ ನಡೆದ ಕಡೆ ಹುಲ್ಲೂ ಹುಟ್ಟುವುದಿಲ್ಲ' ಎಂಬ ಮಾತು ಜನಿಸಿರುವುದು....
In reply to ನಿಮ್ಮ ಮಾತು ಅಕ್ಷರಶಃ ಸತ್ಯ by Shobha Kaduvalli
ಶೋಭಾ ಕೂಡುವಳ್ಳಿಯವರಿಗೆ,
ಶೋಭಾ ಕೂಡುವಳ್ಳಿಯವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಾವು ಗುರುತಿಸಿದಂತೆ ಮಾನವನು ಎಲ್ಲಿ ಕಾಲೂರವನೋ ಅಲ್ಲಿ ಹುಲ್ಲೂ ಹುಟ್ಟುವುದಿಲ್ಲ. ನಿಜ ಮೇಡಂ. ಭೂಮಿಯ ಈ ಗ್ರಹಕ್ಕೆ ಭಸ್ಮಾಸುರನಾಗುತ್ತಿದ್ದಾನೆ ಈ ಮನುಷ್ಯಪ್ರಾಣಿ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದ ಮೇಡಂ.