ಹಸಿರು ಬೆಳೆಸಿ, ಉಸಿರು ಉಳಿಸೋಣ!

ಹಸಿರು ಬೆಳೆಸಿ, ಉಸಿರು ಉಳಿಸೋಣ!

ಭೂಮಿಯ ತಾಪಮಾನ ಹೆಚ್ಚಾಗುತ್ತಾ ಬರುತ್ತಿದೆ. ಜಲಾಶಯಗಳು ಬತ್ತುತ್ತಿವೆ. ಹವಾಮಾನ ವೈಪರೀತ್ಯ!ಇವೆಲ್ಲದಕ್ಕೂ ಹಸಿರುಮನೆ ಅನಿಲದ ಹೊರ ಹೊಮ್ಮುವಿಕೆ ಅಧಿಕವಾಗಿರುವುದೇ ಕಾರಣ ಎಂಬುದಾಗಿ ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ಸದ್ಯ ಹಸಿರು ಮನೆ ಪರಿಣಾಮದ ಬಗ್ಗೆ ಭಾರತೀಯರು ಈ ಮೊದಲು ತಲೆಕೆಡಿಸಿಕೊಂಡಿಲ್ಲ. ಹೆಚ್ಚುತ್ತಿರುವ ನಗಕರೀಕರಣ, ಕಾಡುಗಳ ನಾಶ ಎಲ್ಲವೂ ವಾತಾವರಣದಲ್ಲಿ ಅಂಗಾರಾಮ್ಲ, ಮಿಥೇನ್ ಮೊದಲಾದ ಅನಿಲಗಳು ತುಂಬಿಕೊಳ್ಳಲು ಕಾರಣವಾಗಿದೆ. ನಮ್ಮೀ ವಾತಾವರಣವನ್ನು ರಕ್ಷಿಸುವ, ವಾತಾವರಣ ಮಲಿನೀಕರಣದ ಬಗ್ಗೆ ಜಾಗರೂಕತೆ ಮೂಡಿಸುವ ಸಲುವಾಗಿ ವರ್ಷಂಪ್ರತಿ ಪರಿಸರ ದಿನಾಚರಣೆಯನ್ನು ಜಗತ್ತಿನಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ಸಂಯುಕ್ತ ರಾಷ್ಟ್ರ ಪರಿಸರ ಯೋಜನೆಯು ಈ ಬಾರಿ co2 kick the Habit! ಎಂಬ ಧ್ಯೇಯವಾಕ್ಯನ್ನು ಘೋಷಿಸಿದ್ದು, ಅಂಗಾರಾಮ್ಲದ ಪ್ರಮಾಣವನ್ನು ಕಡಿಮೆ ಮಾಡುವಂತೆ ಜನರಲ್ಲಿ ಕೇಳಿಕೊಂಡಿದೆ. ಅದೇ ರೀತಿ ಭಾರತ ಸರಕಾರವು ಜೀವಂತಿಕೆ ಮತ್ತು ಬೆಳವಣಿಗೆಯತ್ತ ಸಾಗಲು c02 pick right ಎಂಬ ಧ್ಯೇಯ ವಾಕ್ಯವನ್ನು ಘೋಷಿಸಿದೆ.

ಪ್ರಸ್ತುತ ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಅಥವಾ ಅಂಗಾರಾಮ್ಲದ ಪರಿಣಾಮವು ಏರಿಕೆಯಾಗುತ್ತಾ ಬರುತ್ತಿದೆ. ಆ ಕಾರಣದಿಂದಾಗಿ ಭೂಮಿಯ ತಾಪಮಾನವು ಏರುತ್ತಿದ್ದು, ಕಾಲಕ್ಕನುಗುಣವಾಗಿ ಮಳೆ ಬರದೆ ಹವಾಮಾನ ವೈಪರೀತ್ಯವು ಕಂಡು ಬರುತ್ತಿದೆ. ಇದೀಗ ಪರಿಸರ ವಿಜ್ಞಾನಿಗಳ ಸಲ್ಲಿಸಿದ ವರದಿಯ ಪ್ರಕಾರ ಭೂಮಿಯಲ್ಲಿ ಅಂಗಾರಾಮ್ಲದ ಅತ್ಯಧಿಕವಾದ ಸಾನಿಧ್ಯಕ್ಕೆ ಐದು ರಾಷ್ಟ್ರಗಳು ಕಾರಣವಾಗಿವೆ. ಇದರಲ್ಲಿ ಭಾರತವೂ ಸೇರಿಕೊಂಡಿದೆ. ಪ್ರಗತಿಪರ ರಾಷ್ಟ್ರಗಳು ಅತ್ಯಧಿಕ ಅಂಗಾರಾಮ್ಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ ಎಂಬುದು ಗಮನಿಸಬೇಕಾದ ಅಂಶ. ಸಂಯುಕ್ತ ರಾಷ್ಟ್ರಗಳು ಜಗತ್ತಿನಲ್ಲೇ ಅತ್ಯಧಿಕ ಅಂಗಾರಾಮ್ಲವನ್ನು ಪರಿಸರಕ್ಕೆ ಹೊರ ಹೊಮ್ಮಿಸುವ ದೇಶವಾಗಿದೆ. ಪ್ರಸಕ್ತ ದೇಶದಿಂದ ಬಿಡುಗಡೆಯಾಗುವ ಅಂಗಾರಾಮ್ಲದ ಪರಿಮಾಣವು 19.8% ಆದರೆ ಚೀನಾವು 17.7% ಅಂಗಾರಾಮ್ಲ ಹೊರಸೂಸುವುದರಲ್ಲಿ ಎರಡನೇ ಸ್ಥಾನವನ್ನು ಗಳಿಸಿಕೊಂಡಿದೆ. ಅದೇ ರೀತಿ ರಷ್ಯಾವು 5.4, ಭಾರತ 4.7 ಮತ್ತು ಜಪಾನ್ 4.1 ಪ್ರತಿಶತ ಅಂಗಾರ ಬಿಡುಗಡೆಯೊಂದಿಗೆ ನಂತರದ ಮೂರು ಸ್ಥಾನಗಳನ್ನು ಗಳಿಸಿಕೊಂಡಿದೆ. ತಜ್ಞರ ಪ್ರಕಾರ 2009ನೇ ಇಸವಿಯ ವೇಳೆಗೆ ಚೀನಾವು ಮೊದಲ ಸ್ಥಾನಕ್ಕೇರಬಹುದು ಎಂಬುದಾಗಿದೆ.ಇದೀಗ ಭಾರತದಿಂದ ಹೊರ ಸೂಸುವಂತಹ ಅಂಗಾರದ ಪರಿಣಾಮವು ಧುತ್ತನೆ ಏರಿಕೆಯಾಗುತ್ತಾ ಬರುತ್ತಿದೆ. ಕಾಡುಗಳ ನಾಶ, ನಗರೀಕರಣ, ಪಳೆಯುಳಿಕೆ ಇಂಧನಗಳ ಉರಿಸುವಿಕೆ, ಹೆಚ್ಚುತ್ತಿರುವ ವಾಹನಗಳ ಹೊಗೆಯಿಂದಾಗಿ ಪರಿಸರವು ಮಲಿನವಾಗುತ್ತಾ ಬರುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. 2000 ಮತ್ತು 2007ನೇ ನಡುವಿನ ಕಾಲಾವಧಿಯಲ್ಲಿನ ಅಂಗಾರಾಮ್ಲದ ಪ್ರಮಾಣದ ಏರಿಕೆಯನ್ನು ಗಮನಿಸಿದರೆ ಪ್ರತಿವರ್ಷವೂ 2ppmನಷ್ಟು ಇದು ಅಧಿಕವಾಗುತ್ತಿದೆ. ಕೈಗಾರಿಕಾ ಕ್ರಾಂತಿ ಆರಂಭವಾಗುವುದಕ್ಕಿಂತ ಮೊದಲು 280ppm ನಷ್ಟು ಇದ್ದ ಅಂಗಾರದ ಪ್ರಮಾಣವು 2007ನೇ ಇಸವಿಯ ಅಂಕಿಅಂಶದ ಪ್ರಕಾರ 384 ppm ಆಗಿ ಏರಿಕೆಯಾಗಿದೆ.

ವಿಜ್ಞಾನ ಮತ್ತು ಪರಿಸರ ಕೇಂದ್ರ (cse) ಪ್ರಕಾರ ದ್ವಿಚಕ್ರವಾಹನಗಳು ಅಧಿಕವಾಗಿ ಅಂಗಾರಾಮ್ಲವನ್ನು ಹೊರ ಸೂಸುತ್ತವೆ. 2002 ರಿಂದ 2007ರ ನಡುವಿನ ಕಾಲಾವಧಿಯಲ್ಲಿ ಕಾರುಗಳು 73% ಅಂಗಾರಾಮ್ಲ ಬಿಡುಗಡೆ ಮಾಡಿದರೆ, ದ್ವಿಚಕ್ರ ವಾಹನಗಳು 61% ವನ್ನು ಹೊರಸೂಸುತ್ತವೆ, ಆದರೆ ಸಂಚಾರಿ ಬಸ್‌ಗಳು ಕೇವಲ 20% ಅಂಗಾರಾಮ್ಲವನ್ನು ಹೊರಸೂಸುತ್ತವೆ. ಇದೀಗ ಹಸಿರುಮನೆ ಅನಿಲದ ಅತ್ಯಧಿಕ ಹೊರಸೂಸುವಿಕೆಯಿಂದ ಜಗತ್ತೆಲ್ಲ ತಲ್ಲಣಗೊಂಡಿದ್ದು, ಇದು ಮಾನವನ ಜೀವನದ ಮೇಲೆ ಅತೀವ ಪರಿಣಾಮವನ್ನು ಬೀರಲಿದೆ. ಪ್ರಕೃತಿದತ್ತವಾದ ವಾಯು ಸಿಗದೆ ಕಷ್ಟ ಪಡಬೇಕಾದ ಪರಿಸ್ಥಿತಿ ಬಂದೊದಗುವ ಮೊದಲೇ ಪರಿಸರವಾಸಿಗಳೆಲ್ಲರೂ ಜಾಗೃತರಾಗಬೇಕು. ತ್ಯಾಜ್ಯಗಳನ್ನು ಬಿಸಾಡುವ ಬದಲು ಅವುಗಳನ್ನು ಉಪಯುಕ್ತ ಕಾರ್ಯಗಳಿಗಾಗಿ ಬಳಸಬೇಕು.ಅದೇ ರೀತಿ ಜೈವಿಕ ಗೊಬ್ಬರದ ತಯಾರಿ, ಜೈವಿಕ ಅನಿಲ ಮೊದಲಾದವುಗಳ ಯೋಜನೆಯಲ್ಲಿ ಸಕ್ರಿಯವಾದರೆ ಮಾತ್ರ ತ್ಯಾಜ್ಯದ ಹೊರೆ ಕಡಿಮೆಯಾಗುವಂತೆ ಮಾಡಬಹುದು.ಇತ್ತ ಹೆಚ್ಚುತ್ತಿರುವ ಇ-ತ್ಯಾಜ್ಯಗಳೂ ಸಮಸ್ಯೆಯನ್ನುಂಟು ಮಾಡಿದರೆ ಅವುಗಳನ್ನು ರೀಸೈಕಲ್ ಮಾಡುವ ಬಗೆಗಿನ ಕಾರ್ಯವೂ ಮುಂದುವರಿಯುತ್ತಿದೆ.ಪರಿಸರ ಸಂರಕ್ಷಣೆಯಲ್ಲಿ ಭಾರತ ಸರಕಾರದ ಧ್ಯೇಯವಾಕ್ಯದಂತೆ ಸೂಕ್ತವಾದನ್ನು ಆರಿಸಿ, ಪರಿಸರ ಸಂರಕ್ಷಣೆಯಲ್ಲಿ ಭಾಗಿಗಳಾಗಬೇಕು. ಎರಡು ಹೆಜ್ಜೆಗೂ ವಾಹನ ಬಳಸುವ ನಾವು ನಡೆದು ಕೊಂಡು ಹೋದರೆ ಇಂಧನವೂ ಲಾಭ, ಆರೋಗ್ಯಕ್ಕೂ ಉತ್ತಮ, ಪರಿಸರ ಸಂರಕ್ಷಣೆಯೂ ಆಗುತ್ತದೆ ಎಂಬುದನ್ನು ಯಾಕೆ ಚಿಂತಿಸುತ್ತಿಲ್ಲ?. ಕೈಗಾರಿಕಾ ಕೇಂದ್ರಗಳಿಂದ ಹೊರ ಸೂಸುವ ಬೃಹತ್ ಮಲಿನ ವಾಯುಗಳ ಮುಂದೆ ನಮ್ಮ ವಾಹನಗಳಿಂದ ಹೊರಬಿಡುವ ಹೊಗೆಯೇನು ಮಹಾ ಎಂದು ಚಿಂತಿಸುವ ಬದಲು ಮಾನವನ ಅಸ್ತಿತ್ವ ಉಳಿಯಬೇಕಾದರೆ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದಾಗಿ ಆಲೋಚಿಸಬೇಕು. ಹಾಗೆಯೇ ಕಾರ್ಯ ಪ್ರವೃತ್ತರಾಗಬೇಕು. ಆದಷ್ಟು ಗಿಡ ಮರಗಳನ್ನು ಬೆಳೆಸಿ ಪ್ರಕೃತ್ತಿಯನ್ನು ಹಸನುಗೊಳಿಸಬೇಕು. ಪರಿಸರ ಸಂರಕ್ಷಣೆಯ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಅನವರತ ಶ್ರಮದಲ್ಲಿ ತೊಡಗಿಸಿಕೊಳ್ಳಬೇಕು.ಅಂತೂ ಒಟ್ಟಿನಲ್ಲಿ, ಪರಿಸರ ಮಲಿನೀಕರಣಕ್ಕೆ ಕಾರಣವಾಗುವ ವಸ್ತುಗಳ ಬಗ್ಗೆ ಜಾಗೃತರಾಗಿರಿ. ಈ ನಿಟ್ಟಿನಲ್ಲಿ ಪರಿಸರದ ಉಳಿವಿಗಾಗಿ ಹೋರಾಡಲು ಸಿದ್ಧರಾಗೋಣ. ಬನ್ನಿ, ಹಸಿರುಮನೆ ಅನಿಲ ಪರಿಣಾಮದಿಂದ ಉಸಿರು ಕಟ್ಟುವ ಮೊದಲು ಪರಿಸರವನ್ನು ಹಸಿರಾಗಿಸೋಣ.

Rating
No votes yet

Comments