ಹಸಿರ ದಾರಿಯಲೀ..

ಹಸಿರ ದಾರಿಯಲೀ..

ರಸ್ತೆಗಳೇ ಹೀಗೆ ಯಾರಿಗೂ
ಏನನ್ನೂ ಹೇಳುವುದಿಲ್ಲ.
ಅಳಿಸಿ ಹೋದ ಹೆಜ್ಜೆಯ
ಗುರುತು, ಗತಿಸಿದ ನೆನಪುಗಳ
ಲೆಕ್ಕ ವಿಟ್ಟುಕೊಳ್ಳುವುದಿಲ್ಲ..
ಗುರಿ ಕಾಣುವ ಸಾಮರ್ಥ್ಯ,
ಅಚಲ ವಿಶ್ವಾಸ ನಿನ್ನಲ್ಲಿದ್ದರೆ
ಕತ್ತಲಲ್ಲಿಯೂ ದಾರಿ ಕಾಣಬಲ್ಲೆ..

ಹೆಜ್ಜೆ ಗುರುತಿಲ್ಲದ ಹಾದಿಯಲ್ಲಿ
ಕನಸಿನ ದೀವಿಗೆ ಹೊತ್ತು
ಕವಲುಗಳಿಲ್ಲದ ಹಾದಿಯಲ್ಲಿ
ನಿನ್ನ ಮುಗಿಯದ ಪಯಣ.
ಮರುಗದಿರು ಸಾಗುವ ಹಾದಿ
ದುರ್ಗಮವೆಂದು, ಹಿಮ್ಮೆಟ್ಟದಿರು
ಸೂರ್ಯ ದಹಿಸಿದಾಗಲೇ
ತಣ್ಣನೆಯ ಚಂದ್ರಮನ ಅನುಭಾವ.
ಶ್ರಮದ ಫಲದ ಸಿಹಿಯ
ಸವಿಯು ಅಮೂಲ್ಯ ,ಅನನ್ಯ..

ನೀ ಸಾಗುವ ಹಾದಿಯಲಿ
ಸಾಲು ಮರಗಳ ಸೊಬಗಿರಲೀ
ತುಳಿದ ಹಾದಿಯ ದಣಿವು
ನಿನಗಾಗದಿರಲೀ, ಸಹ
ಪಯಣಿಗನ ಹಾರೈಕೆಯಿದುವೇ..

ಮನುಜಮತ ಒಂದೇ ಎಂದು
ಸಾರುತ ಒಂದಾಗಿ ಸಾಗೋಣ
ಈ ಹಸಿರ ದಾರಿಯಲೀ..

ಕಮಲ ಬೆಲಗೂರ್.

Rating
No votes yet