ಹಸಿ ಮಡಿಕೆಯ ಮೇಲೆ ಬರೆದ ಚಿತ್ತಾರ

ಹಸಿ ಮಡಿಕೆಯ ಮೇಲೆ ಬರೆದ ಚಿತ್ತಾರ

ನೆನ್ನೆ ಸ್ಟಾನ್ಫರ್ಡ್ ರೇಡಿಯೋದಲ್ಲಿ ’ಇಟ್ಸ್ ಡಿಫ್’ ಶೋ ಕೇಳುತ್ತಾ ಬರುತ್ತಿದ್ದೆ. ಮಾನವ ಪ್ರಯತ್ನ ಮತ್ತೆ ಯಶಸ್ಸು ಸಿಗುವಲ್ಲಿ ಅದೃಷ್ಟದ ಪಾತ್ರ - ಇವುಗಳ ಬಗ್ಗೆ ಚೆನ್ನಾಗಿ ಮಾತುಕತೆ ನಡೆಯುತ್ತಿತ್ತು. ಆಗ ಕೇಳಿದ ಒಂದು ಹಳೇ ಕಥೆ - "ಮಾಡುವ ಕೆಲಸ ಸರಿಯಾಗಬೇಕಾದರೆ ಅದೃಷ್ಟ ಬೇಕೇ ಬೇಕು. ಹೇಗೆ? ನಾವು ಬತ್ತದ ಪೈರು ಬೆಳೀಬೇಕು ಅಂತಿಟ್ಕೊಳ್ಳಿ. ಮೊದಲು ನಮ್ಮದೇ ಆಗ ಜಮೀನಿರ್ಬೇಕು, ಅಥವಾ ಗುತ್ತಿಗೆ ತೊಗೊಬೇಕು. ಮತ್ತೆ ಅದನ್ನ ಉತ್ತು, ಬಿತ್ತು, ನಾಟಿ ಮಾಡಿ, ಕಳೆ ತೆಗೆದು ಎಲ್ಲಾ ಕೆಲಸ ಆಗಬೇಕಾದ ಸಮಯದಲ್ಲಿ ಮಾಡಬೇಕು. ಜೊತೆಗೆ ಸರಿಯಾದ ಸಮಯದಲ್ಲಿ ಮಳೆಯೂ ಬರಬೇಕು. ಈಗ ಮಳೆ ಸುರಿಯೋದು ನಮ್ಮ ಕೈಲಿದೆಯೇ? ಇಲ್ಲ. ಅದೇ ಅದೃಷ್ಟ. ಆದರೆ, ಮಳೆ ಚೆನ್ನಾಗಿ ಬರುವಾಗ, ಅದಕ್ಕೆ ಮೊದಲು ಮಾಡಬೇಕಾದ ಉತ್ತು ಬಿತ್ತುವ ಕೆಲಸಗಳನ್ನು ಮಾಡಿರದಿದ್ದರೆ ಪಯಿರನ್ನ ಬೆಳೆಯೋಕೆ ಸಾಧ್ಯವೇ?"

ಮನುಷ್ಯ ಪ್ರಯತ್ನ ಎಷ್ಟು ಅಗತ್ಯ ಅನ್ನೋದರ ಬಗ್ಗ ಕೇಳುಗರು ಫೋನ್ ನಲ್ಲಿ ಮಾತಾಡಿ ತಮ್ಮ ನಿಲುವು, ಅನುಭವ ಇವುಗಳನ್ನ ಇತರ ಕೇಳುಗರ ಜೊತೆ ಹಂಚಿಕೋತಿದ್ದರು. ನಾನೂ ಕೂಡ ಫೋನಿಸಿ, ಎಡರು ತೊಡರುಗಳ ಪ್ರಯತ್ನಗಳನ್ನ ಕೈ ಬಿಡದೇ ನಡೆಸುವವರೇ ಉತ್ತಮರು ಅಂತ ಅರ್ಥ ಬರುವ ಈ ಸಂಸ್ಕೃತ ಸುಭಾಷಿತನ್ನ, ಮತ್ತೆ ಅದರ ತಿರುಳನ್ನ ಇಂಗ್ಲಿಷ್ ನಲ್ಲಿ ಹೇಳಿದೆ.

ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ:
ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ ಮಧ್ಯಾಃ
ವಿಘ್ನೈಃ ಪುನಃಪುನರಪಿ ಪ್ರತಿಹನ್ಯಮಾನಾ:
ಪ್ರಾರಬ್ದಮುತ್ತಮ ಜನಾಃ ನ ಪರಿತ್ಯಜಂತಿ

ಅದು ಹೇಳೋವಾಗಲೇ, ಈ ಸುಭಾಷಿತವನ್ನ ಕನ್ನಡಕ್ಕೆ ಅನುವಾದ ಮಾಡಿ ಬ್ಲಾಗ್ ನಲ್ಲಿ ಹಾಕಿದೇನೆ ಅನ್ನೋ ವಿಷಯವೂ ಮನಸಿಗೆ ಬಂದರೂ, ಆ ಅನುವಾದದ ಎಲ್ಲ ಸಾಲುಗಳೂ ಪೂರ್ತಿ ನೆನಪಿಗೆ ಬರಲೆ ಇಲ್ಲ. ನಂತರ ಆ ಬ್ಲಾಗ್ ಬರಹಕ್ಕೇ ಹೋಗಿ ನೋಡಿದೆ ಅನ್ನಿ, ಕಂಪ್ಯೂಟರ್ ಮುಂದೆ ಹೋದಾಗ.

ಈಗ ಈ ಸಂಸ್ಕೃತದ ಸುಭಾಷಿತವನ್ನ ಕಲಿತು ಸುಮಾರು ಮೂವತ್ತು ವರ್ಷಕ್ಕೂ ಹೆಚ್ಚೇ ಆಗಿದೆಯೇ ಹೊರತು ಕಡಿಮೆ ಅಲ್ಲ. ಕನಸಿನಲ್ಲಿ ಎಬ್ಬಿಸಿ ಕೇಳಿದರೂ ಹೇಳಬಲ್ಲೆ. ಅಂತಹದರಲ್ಲಿ, ನಾನೇ ಬರೆದ ಸಾಲುಗಳನ್ನೇ, ಮೂರು ವರ್ಷವೂ ಆಗದೆ ಮರೆತೆದ್ದೇನಲ್ಲ ಅಂತ ಅನ್ನಿಸಿ ’ಅಯ್ಯೋ’ ಅನ್ನಿಸಿತು. ಎಳವೆಯಲ್ಲಿ ಕಲಿತ ಎಷ್ಟೋ ಸುಭಾಷಿತಗಳು ಇಂದಿಗೂ ಸ್ವಲ್ಪವೂ ಮರೆಯದಿರುವಾಗ, ಕಳೆದ ಎರಡು ಮೂರು ವರ್ಷಗಳಲ್ಲಿ ನಾನು ಮಾಡಿರುವ ಅನುವಾದಗಳಲ್ಲಿರುವ ನೂರಾರು ಪದ್ಯಗಳಲ್ಲಿ ಎರಡು ಮೂರನ್ನಾದರೂ, ಒಂದೂ ಪದ ತಪ್ಪದೇ ಹೇಳಲಾರೆನಲ್ಲ! ಕಾಲಾಯ ತಸ್ಮೈ ನಮಃ ಅನ್ನಬೇಕಷ್ಟೇ!

ಇದೇ ಗುಂಗಿನಲ್ಲಿರುವಾಗ, ಇಲ್ಲಿಯವರೆಗೆ ನಾನು ಓದಿರದ ಕೇಳಿರದ ಸುಭಾಷಿತವೊಂದು ಕಣ್ಣಿಗೆ ಬಿತ್ತು. ಅರರೆ! ನನ್ನ ಈಗಿನ ಅನುಭವಕ್ಕೆ ಬೇಸರ ಪಡುವ ಕಾರಣವಿಲ್ಲ ಅಂತನ್ನಿಸಿತು. ಸುಭಾಷಿತ ಹೀಗಿದೆ ನೋಡಿ:

ಸಂಸ್ಕೃತ ಮೂಲ:

ಬಾಲಃ ಪುತ್ರೋ ನೀತಿವಾಕ್ಯೋಪಚಾರೈಃ
ಕಾರ್ಯೇ ಕಾರ್ಯೇ ಯತ್ನತಃ ಶಿಕ್ಷಣೀಯಃ |
ಲೇಖಾ ಲಗ್ನಾ ಯಾSಮಪಾತ್ರೇ ವಿಚಿತ್ರಾ
ನೌಸಾ ನಾಶಂ ಪಾಕಕಾಲೇSಪಿ ಯಾತಿ ||

ಕನ್ನಡದಲ್ಲಿ:

ಪುಟ್ಟ ಮಕ್ಕಳನೊಳ್ಳೆ ಮಾತಿನಾರೈಕೆಯಲೆ
ಒಳ್ಳೆ ಕೆಲಸಗಳನೆ ಮಾಡ ಕಲಿಸು;
ಹಚ್ಚ ಹಸಿ ಮಡಿಕೆಯ ಮೇಲ್ಬರೆದ ಚಿತ್ತಾರ
ಅಟ್ಟು ಉಣುವಾಗಲೂ ಸೊಗಸುಗೆಡದು!

ಎಳೆವಯಸ್ಸಿನಲ್ಲಿ ಸಂಸ್ಕೃತ ತರಗತಿಗಳಿಗೆ ಕಳಿಸಿ ಇಂತಹ ಕಾವ್ಯ ಪ್ರಕಾರದಲ್ಲಿ ಆಸಕ್ತಿ ಮೂಡಿಸಿದ ಅಣ್ಣನಿಗೂ (ನನ್ನ ತಂದೆ), ಮತ್ತೆ ಮನಸಿಗೆ ಮುಟ್ಟುವಂತೆ ಕಲಿಸಿದವರಿಗೂ ನಾನು ಎಂದಿಗೂ ಆಭಾರಿಯೇ!

-ಹಂಸಾನಂದಿ

Rating
No votes yet

Comments