ಹಸುವಿನ ಕೊರಳ ಗೆಜ್ಜೆದನಿ

ಹಸುವಿನ ಕೊರಳ ಗೆಜ್ಜೆದನಿ

ಚಿತ್ರ

ಈ ಚಿತ್ರದಲ್ಲಿರುವುದು ಏನೆಂದು ನಿಮಗೆ ಗೊತ್ತೇ? ’ ಹಸುವಿನ ಕೊರಳಿನ ಗಂಟೆ’ ಎಂದು ಇದನ್ನು ನಮಗೆ ಮಾರಿದವರು ಹೇಳಿದ್ದರು. ಇವತ್ತು ದೇವರಪಾತ್ರೆಗಳನ್ನು ತೊಳೆದು, ಫೋಟೋಗಳನ್ನು, ಬಾಗಿಲನ್ನು ಒರೆಸುತ್ತಿದ್ದಾಗ , ಬಾಗಿಲತೋರಣದ ಹಿಂದೆ ಅವಿತಿದ್ದ ಇದು ಕಣ್ಣಿಗೆ ಬಿತ್ತು. ಕಪ್ಪಾಗಿದೆಯಲ್ಲ.. ಎಂದು ಹುಣಿಸೆನೀರಿನಲ್ಲಿ ತೊಳೆದರೆ ಫಳ ಫಳ ಹೊಳಪು. ಹೊಳಪಿನಲ್ಲಿ ಆ ಹುಡುಗನ ಮುಖ ಕಾಣಿಸಿತು! ಹೌದು ಇದರ ಹಿಂದೊಂದು ಸ್ವಾರಸ್ಯಕರ ಕತೆಯಿದೆ.

ಸುಮಾರು  13  ವರ್ಷಗಳ ಹಿಂದೆ ಇಂಥದೇ ಒಂದು ಮೇ ತಿಂಗಳ ದಿನ. ನಾವು ಆಗತಾನೇ ಮಾರುತಿ ಕಾರು ಕೊಂಡಿದ್ದೆವು.ಸರಿ.. ಕಾರಿನಲ್ಲಿ ಒಂದಿಷ್ಟು ದೂರ ಹೋದಂತೆಯೂ ಆಯಿತು,ಮಕ್ಕಳಿಗೂ ರಜೆ ಇದೆ, ಬೇಲೂರು- ಹಳೆಬೀಡುಗಳನ್ನು ನೋಡಿಕೊಂಡು ಬರೋಣ ಎಂದುಕೊಂಡು ನಾನು, ನನ್ನ ಪತಿ, ಏಳು ಹಾಗೂ ಐದು ವಯಸ್ಸಿನ ಮಗಳು-ಮಗ ಹೊರಟೆವು. ಪೆಟ್ರೋಲ್ ಖರ್ಚೇ ತುಂಬಾ ಆಗುತ್ತದೆ. ಇನ್ನು ಹೋಟೇಲಿಗೆ ದುಡ್ಡು ದಂಡ ಬೇಡ. ಅಲ್ಲದೇ ಆರೋಗ್ಯಕ್ಕೂ ಒಳ್ಳೆಯದು ಎಂದುಕೊಂಡು ಬೆಳಗಿನ ತಿಂಡಿ, ಮಧ್ಯಾಹ್ನದ ಊಟವನ್ನು ಮನೆಯಿಂದಲೇ ಕಟ್ಟಿಕೊಂಡು ಹೊರಟೆವು. ಬೆಳಗ್ಗೆ ಬೇಗ ಹೊರಟು, ಬೇಲೂರು ಚೆನ್ನಕೇಶವನ ದರ್ಶನ ಮುಗಿಸಿ, ಮಧ್ಯಾಹ್ನ ಮೂರರ ಹೊತ್ತಿಗೆ ಹಳೆಬೀಡಿಗೆ ಬಂದೆವು. ಹೊಯ್ಸಳೇಶ್ವರ ದೇಗುಲದ ಶಿಲ್ಪವೈಭವವನ್ನು ಕಂಡು ಬೆರಗಾಗಿ, ಅಲ್ಲೇ ಮುಂದಿದ್ದ ಉದ್ಯಾನದಲ್ಲಿ ಕುಳಿತೆವು.

ಹೊಟ್ಟೆ ತುಂಬಿತ್ತು. ಗಾಳಿ ತಣ್ಣಗೆ ಹಿತವಾಗಿ ಬೀಸುತ್ತಿತ್ತು. ಮಕ್ಕಳು ಹೀಗೇ ಏನೋ ಆಟ ಶುರುಮಾಡಿದರು. ಕೆಲಹೊತ್ತಿನಲ್ಲೇ ಮಗ ಬಿದ್ದು ಮಂಡಿ ತರಚಿದ್ದೂ ಆಯ್ತು. ಇಬ್ಬರೂ ಒಬ್ಬರ ಮೇಲೊಬ್ಬರು ದೋಷಾರೋಪಣ ಪಟ್ಟಿ ಒಪ್ಪಿಸಲು ಶುರು ಮಾಡಿದ್ದೂ ಆಯ್ತು. ನಾನು ನ್ಯಾಯಪಂಚಾಯ್ತಿಯನ್ನು ಆರಂಭಿಸುತ್ತಿದ್ದಂತೆಯೇ ಆತ ಅಲ್ಲಿಗೆ ಬಂದ. ತೆಳ್ಳನೆ ಮೈಕಟ್ಟಿನ , ಹಳೆ ಪಾಂಟು ಗೀರಿನ ಅಂಗಿ ತೊಟ್ಟಿದ್ದ ಸುಮಾರು ಹದಿನಾರು ವಯಸ್ಸಿನ ಆ ಹುಡುಗ “ಸಾರ್ ಇದನ್ನು ಕೊಂಡ್ಕೊಳ್ಳಿ 3೦೦ ರೂ. ಕೊಡಿ”  ಅಂದ. ನನ್ನ ಪತಿ “ನಾವು ಬೆಂಗಳೂರಿನವರು, ನಮಗಿದು ಉಪಯೋಗವಿಲ್ಲ ,ಬೇಡ” ಅಂದರು.ಅವನು ಮತ್ತೆ ಮತ್ತೆ ಅದರ ಗುಣಲಕ್ಷಣಗಳನ್ನು ವರ್ಣಿಸಿ , ಮನೆಗೆ ಅಲಂಕಾರಕ್ಕೆ ಹಾಕಿ ತಗೊಳ್ಳಿ ಸಾರ್ ಎಂದು ಒತ್ತಾಯ ಶುರುಮಾಡಿದ. ನಾವು ಒಪ್ಪಲೇ ಇಲ್ಲ. ಇದ್ದಕ್ಕಿದ್ದಂತೆ ಆತ “ ಸಾರ್ , ಇಲ್ಲ ಅನ್ಬೇಡಿ .ಫೀಸ್ ಕಟ್ಟಕ್ಕೆ ದುಡ್ಡಿಲ್ಲ. ಹಸುವಿನ ಕೊರಳಿನಿಂದ ಕದ್ದು ತಂದಿದೀನಿ. ನಿಮ್ಮ ಹೆಸರು ಹೇಳಿಕೊಂಡು ಓತ್ತೀನಿ... “ಅಂತೆಲ್ಲ ಆರಂಭಿಸಿದ. ಕದ್ದದ್ದು ಅಂದಕೂಡಲೇ ಜಾಗ್ರತರಾದ ನಾವು ಮೆಲ್ಲನೆ ಅಲ್ಲಿಂದ ಎದ್ದು ಕಾರಿನ ಕಡೆ ನಡೆಯಲಾರಂಭಿಸಿದೆವು. ನಮ್ಮ ಬೆನ್ನ ಹಿಂದೆಯೇ ಬಂದ ಆತ “ ಸಾರ್ ನಾನು ಕಳ್ಳನಲ್ಲ. ಪಿಯುಸಿ ಫೇಲ್ ಆಗಿದ್ದೀನಿ. ಅಪ್ಪ ಮನೆಯಿಂದ ಓಡಿಸಿದ್ದಾನೆ. ಆದ್ರೆ ಸಾರ್ ಈಗ ನನಗೆ ಬುದ್ಧಿ ಬಂದಿದೆ. ನಾನು ೧೦ನೇ ಕ್ಲಾಸ್ ಪಾಸ್ . ಅದರ ಮೇಲೆ ಇಲ್ಲೆ ಬೇಲೂರಲ್ಲಿ ಐ ಟಿ ಐ ಸೇರ್ಕೋತೀನಿ... ಫೀಸ್ ಪುಸ್ತಕಕ್ಕೆ ದುಡ್ಡು ಬೇಕು ಸಾರ್ ... ಆಮೇಲೆ ಹೇಗೋ ಮಾಡ್ಕೋತೀನಿ... ಬೆಂಗಳೂರಿನಲ್ಲಿ ಕೆಲಸ ಮಾಡ್ತೀನಿ..... ಎಂದೆಲ್ಲಾ ಪರಿಪರಿಯಾಗಿ ಅವನ ಬಡತನದ  ಕತೆ ಹೇಳುತ್ತಾ ಅಂಗಲಾಚತೊಡಗಿದ. ನನ್ನ ಪತಿ ಸ್ವಲ್ಪ ಖಾರವಾಗಿ “ ನೋಡು ನಿನ್ನ ಕತೆ ಎಲ್ಲಾ ನಾನು ನಂಬಲು ಸಾಧ್ಯವಿಲ್ಲ. ಈ ಗಂಟೆಗಳು ನನಗೆ ಬೇಡ “. ಎಂದು ಹೇಳಿ ವೇಗವಾಗಿ ನಡೆಯಲಾರಂಭಿಸಿದರು.  ನನಗೆ ಇಕ್ಕಟ್ಟಿನ ಪರಿಸ್ಥಿತಿ. ಪಾಪ ಬಡರೈತನ ಮಗ. ಏನೋ ಮನಸ್ಸಿಟ್ಟು ಓದದೇ ನಪಾಸಾಗಿ ತಪ್ಪು ಮಾಡಿದ್ದಾನೆ. ಆದರೆ ಈಗ ತಪ್ಪನ್ನು ತಿದ್ದಿಕೊಳ್ಳುತ್ತಿದ್ದಾನೆ. ಮನೆಯಲ್ಲಿ ಕಷ್ಟ ಇದೆ ಅನ್ನುತ್ತಿದ್ದಾನೆ. ಆದರೆ ನಮ್ಮ ಅಂದಿನ ಬ್ಯಾಂಕಿನ ಕಂತುಗಳ ಮೇಲೆ ನಿಂತಿದ್ದ ಆರ್ಥಿಕಸ್ಥಿತಿಗೆ 3೦೦ ರೂ. ಕೊಂಚ ದೊಡ್ಡ ಮೊತ್ತವೇ ಆಗಿತ್ತು. ಅದೂ ಈ ರೀತಿಯ ದಾನಕ್ಕೆ! ಅಲ್ಲದೇ ಆತ ಸುಳ್ಳು ಹೇಳುತ್ತಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ? ಆತನದ್ದು ಇದೇ ರೀತಿ ಸುಲಿಗೆಯೇ ಉದ್ಯೋಗವಾಗಿದ್ದರೆ ಏನು ಗತಿ? ಆದರೆ ಓದಬೇಕು ಅನ್ನುತ್ತಿದ್ದಾನೆ. ಮಾತಿನಲ್ಲಿ ಪ್ರಾಮಾಣೆಕತೆ ಇದೆ. ... ಸರಿ ಏನೇ ಇರಲಿ... ನನ್ನ ಸತ್ಯ ನನಗೆ.....  ಅಂದುಕೊಂದು ಪರ್ಸಿನಲ್ಲಿ ಜೋಪಾನವಾಗಿರಿಸಿದ್ದ ೨೦೦ ರೂಗಳನ್ನು ಅವನಿಗೆ ಕೊಟ್ಟು ಈ ಗಂಟೆಗಳನ್ನು ತೆಗೆದುಕೊಂಡು, ನನ್ನೆಡೆಗೆ ತೀಕ್ಷ್ಣ ನೋಟ ಬೀರುತ್ತಿದ್ದ ಪತಿಯನ್ನು ಹಿಂಬಾಲಿಸಿದೆ.

ಅಂದಿನಿಂದ ಈ ಎರಡು ಟಿಣಿ ಟಿಣಿಗಳು ನಮ್ಮ ಜೊತೆಗೇ ಬಾಡಿಗೆ ಮನೆಗಳನ್ನು ಸುತ್ತಿವೆ. ಈಗ ನಮ್ಮ ಈ ಮನೆಯಲ್ಲಿ ಬಾಗಿಲ ಸಂದಿಯಲ್ಲಿ ತಣ್ಣಗೆ ಕುಳಿತು ಎಂದಾದರೊಮ್ಮೆ ಅವನನ್ನು ನೆನಪಿಸುತ್ತವೆ. ಅವನು ವಿದ್ಯಾಭ್ಯಾಸ ಮುಗಿಸಿ, ಕೆಲಸ ಹಿಡಿದು, ಮುನಿದ ಅಪ್ಪನನ್ನು ಒಲಿಸಿಕೊಂಡಿರಬಹುದು. ಮದುವೆಯಾಗಿ ಈ ಮಹಾನಗರದಲ್ಲೇ ಸಂಸಾರ ಹೂಡಿರಬಹುದು ಎಂಬ ಭರವಸೆಯನ್ನು ನನ್ನಲ್ಲಿ ತುಂಬುತ್ತವೆ. ಹದಿವಯಸ್ಸಿನಲ್ಲಿ ಬಾಹ್ಯ ಆಕರ್ಷಣೆಗಳಿಂದ ಎಷ್ಟೋ ಮಕ್ಕಳು ಓದಿನ ಕಡೆ ಗಮನ ಕೊಡದೆ ನಪಾಸಾಗುತ್ತಾರೆ. ಅವರಿಗೆ ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶ ಕೊಡಿ. ಈ ಅತ್ಯಮೂಲ್ಯ ಸಂಪತ್ತುಗಳ ಭವಿಷ್ಯ ನೀವು ರೂಪಿಸಿದ ಯಶಸ್ಸಿನ ಮಾನದಂಡಗಳ ನಡುವೆ ನಾಶವಾಗದಿರಲಿ ಎಂದು ಆಗಾಗ ಕಿಣಿ ಕಿಣಿ ನಾದಗೈದು ಹೇಳುತ್ತವೆ.

Rating
No votes yet

Comments

Submitted by nageshamysore Wed, 05/20/2015 - 19:14

ಗೆಜ್ಜೆಗಳ ಸದ್ದು ನಿರಂತರ ಆಶಾವಾದದ ಸಂಕೇತ ಮಾತ್ರವಲ್ಲದೆ,  ಪ್ರತಿಫಲಾಪೇಕ್ಷೆಯಿಲ್ಲದೆ ಸತ್ಕಾರ್ಯವೊಂದನ್ನು ಮಾಡಿದ ಸಜ್ಜನ ಮನೋಭಾವವನ್ನು ಪ್ರತಿಫಲಿಸಿದೆ.

Submitted by kavinagaraj Thu, 05/21/2015 - 21:09

ಆ ಹುಡುಗನಿಗೆ ಹಣದ ಅಗತ್ಯವಿದ್ದಿರಬಹುದು. ಆದರೆ ಬೇಲೂರಿನಲ್ಲಿ ಐಟಿಐ ಇಲ್ಲ. ಅಲ್ಲಿ ಇಂತಹ ವಸ್ತುಗಳನ್ನು ಮಾರುವ, ಏಮಾರಿಸುವ ಜನರೂ ಇದ್ದಾರೆ. ಹಸುವಿನ ಕೊರಳ ಗೆಜ್ಜೆ ಈಗ ಅಪರೂಪದ ವಸ್ತುವಾದ್ದರಿಂದ ಕಾಯ್ದಿರಿಸಿಕೊಳ್ಳಿ.

Submitted by VEDA ATHAVALE Fri, 05/22/2015 - 15:19

In reply to by kavinagaraj

ಹೌದು, ನಾನೇ ಬರೆದಿರುವಂತೆ ಆ ಹುಡುಗ‌ ವಂಚಿಸುತ್ತಿರಬಹುದೆಂಬ‌ ಅನುಮಾನ‌ ನನಗೂ ಇತ್ತು /ಇದೆ. ಆದರೆ ನನ್ನ‌ ಸತ್ಯ‌ ನನಗೆ... ಹಾಗೂ ಅಪರೂಪದ‌ ವಸ್ತು ನನಗೆ ಸಿಕ್ಕಿತು.

Submitted by Srinivasamurth… Wed, 07/01/2015 - 14:26

In reply to by VEDA ATHAVALE

ಹುಡುಗನ ಪರಿಸ್ತಿತಿಯನ್ನು ಅರ್ಥಮಾಡಿಕೊಂಡು ಮಾನವೀಯತೆಯಿಂದ ಸಹಾಯ ಹಸ್ತ ನೀಡಿದ ನಿಮ್ಮ ವರ್ತನೆ ಶ್ಲಾಘನೀಯ.
ಅಭಿನಂಧನೆಗಳು

Submitted by Srinivasamurth… Wed, 07/01/2015 - 14:26

In reply to by VEDA ATHAVALE

ಹುಡುಗನ ಪರಿಸ್ತಿತಿಯನ್ನು ಅರ್ಥಮಾಡಿಕೊಂಡು ಮಾನವೀಯತೆಯಿಂದ ಸಹಾಯ ಹಸ್ತ ನೀಡಿದ ನಿಮ್ಮ ವರ್ತನೆ ಶ್ಲಾಘನೀಯ.
ಅಭಿನಂಧನೆಗಳು