ಹಾಗೇ ಸುಮ್ಮನೆ - ೨. ಮುಕ್ತರಾಗುವುದು ಹೇಗೆ

ಹಾಗೇ ಸುಮ್ಮನೆ - ೨. ಮುಕ್ತರಾಗುವುದು ಹೇಗೆ

ರಾಶಿಯವರು ವಿದ್ಯಾರ್ಥಿಯಾಗಿದ್ದಾಗ ಪಂಚ್ ಪತ್ರಿಕೆಯ ಸಂಚಿಕೆಗಳನ್ನು ಓದಿ ಆನಂದಿಸಿದರು.  ಅವುಗಳಲ್ಲಿನ ಚುರುಕು, ಸ್ಪೂರ್ತಿ,  ಸುಸಂಸ್ಕೃತ ದೃಷ್ಟಿ,  ವಿಡಂಬನಾ ನೋಟ ಅವರನ್ನು  ನಗಿಸಿ ಸಂತೋಷ ಕೊಟ್ಟವು. ಹಾಗಾಗಿ ಇಂಗ್ಲಿಷ್ನಲ್ಲಿನ  ಈ ತರನ ಉಕ್ತಿಗಳನ್ನು ತಮ್ಮ ಸಮಾಜ ಜೀವನಕ್ಕೆ ಅಳವಡಿಸಿ ಸ್ನೇಹಿತರೊಡನೆ ಮಾತನಾಡುವಾಗ ಕನ್ನಡದಲ್ಲಿ ನುಡಿದರೆ ಜೊತೆಯವರು ಬಲು ಸಂತೋಷಪಡುತ್ತಿದ್ದರು.  

ಅವರು ಹೇಳಿದರು - ಇಷ್ಟೆಲ್ಲಾ ಸುಖ ಸಂತೋಷಗಳನ್ನು ನನಗೆ ಒದಗಿಸಿಕೊಟ್ಟ ನಾನು ಋಣಿಯಾಗಿರಬೇಕು.  ಇಂಥ ಸಾಂಸ್ಕೃತಿಕ ಋಣ ತೀರಿಸಬೇಕಾದರೆ ಅಲ್ಲಿ ಕಲಿತದ್ದನ್ನು ಇಲ್ಲಿ ನಮ್ಮವರಿಗೆ ಬಡಿಸಬೇಕು. ಆಗಲೇ ಋಣ ಮುಕ್ತನಾಗಲು ಸಾಧ್ಯ. 

ಹೀಗೆಲ್ಲ ವಿಚಾರಿಸಿ ಅವರು ಮುಂದೊಂದು ದಿನ ಕೊರವಂಜಿ ಹಾಸ್ಯಪತ್ರಿಕೆಯನ್ನು ಕನ್ನಡದಲ್ಲಿ ಆರಂಭಿಸಿದರು. 

 

ಇತ್ತೀಚೆಗೆ  ಕಮಲಹಾಸನ್ ಹಾಗೂ  ಮಾಧವಿ ಅಭಿನಯದ ಶ್ರೇಷ್ಠ ಚಿತ್ರ 'ಸಾಗರಸಂಗಮಮ್ '  ನ ಹಿಂದಿಗೆ ಡಬ್ ಆದ ಆವೃತ್ತಿಯನ್ನು  ಯುಟ್ಯೂಬ್ ನಲ್ಲಿ ನೋಡಿದೆ .  ( ನೀವೂ ನೋಡಬಹುದು ಇಲ್ಲಿ - 
 https://youtu.be/2WDWVlWRUBg  )

ಅದರಲ್ಲಿ ಅಪಾರ ನೃತ್ಯ ಪ್ರತಿಭೆ ಇರುವ ನಾಯಕನು  ವಿಫಲ ಪ್ರೇಮದಿಂದಾಗಿ ದುಃಖಿತನಾಗಿ ಕುಡಿತಕ್ಕೆ ಬಿದ್ದು ನೃತ್ಯವನ್ನು ಬಿಟ್ಟು ಬಿಟ್ಟಿದ್ದಾನೆ! ಆಗ ಅವನ ಗೆಳೆಯ ಅವನಿಗೆ ಹೇಳುವದು ಇದನ್ನು -  ನಿನ್ನ ಹತ್ತಿರ ಇರುವ ಕಲೆಯು ದೇವರ ದೇಣಿಗೆ ;  ನಿನ್ನ ಪೂರ್ವ ಜನ್ಮದ ಪುಣ್ಯ.  ದೇವರು ನಿನ್ನಲ್ಲಿ ಈ ಕಲೆಯನ್ನು  ಪ್ರಸಾದ ರೂಪದಲ್ಲಿ  ಇಟ್ಟಿರುವುದು ಲೋಕದ ಜನರಿಗೆ  ಈ ಪ್ರಸಾದವನ್ನು ಹಂಚಲೆಂದು. ಅದು ನಿನ್ನಲ್ಲೇ ಕೊನೆಯಾಗಕೂಡದು. ನಿನ್ನ ನಂತರವೂ ಅದು ಇನ್ನೊಬ್ಬರಲ್ಲಿ ಮುಂದುವರೆಯಬೇಕು.

 ಒಂದು ಜನಪದ ಕತೆಗಳ ಸಂಗ್ರಹದಲ್ಲಿ ಓದಿದ್ದೆ. 'ಕತೆಗಳನ್ನು ಹೇಳುವುದು  ಪುಣ್ಯದ ಕೆಲಸ.   ನಮಗೆ ಗೊತ್ತಿರುವ ಕತೆಗಳನ್ನು ನಮ್ಮಲ್ಲಿಯೇ ಇಟ್ಟುಕೊಳ್ಳಕೂಡದು. ಅವನ್ನು ಇನ್ನೊಬ್ಬರಿಗೆ ಹೇಳಬೇಕು'  ಅಂತ.

ಕವಿತೆಯೊಂದು ಹೀಗಿದೆ: -

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ 
ನೀಡಿ ನೀಡಿ ಮುಕ್ತ ಮುಕ್ತ
ಬೇವ ಅಗಿವ ಸವಿ ಗಾನದ ಹಕ್ಕಿ ಹಾಡಿ
ಮುಕ್ತ ಮುಕ್ತ 

ಬೆಂಗಳೂರಿನ ಬಸವನಗುಡಿಯ ಬಸವನ ಕುರಿತಾದ ಒಂದು ಕತೆಯಲ್ಲಿ ಬಸವ ಹೇಳಿತು - ನಿನಗೆ ಕೊಟ್ಟಿರುವ ಸಂಪತ್ತು ನಿನ್ನೊಬ್ಬನಿಗೇ ಅಂತ ಕೊಟ್ಟಿದ್ದಲ್ಲ. ಕಾಸು ಕೂಡಿಸುವ ಜಿಪುಣನಾಗಬೇಡ ; ದಾನಿಯಾಗು.

( ಅಂದ ಹಾಗೆ  ಕಥಾ ಸರಿತ್ಸಾಗರದಲ್ಲಿ ಒಂದೆಡೆ 'ಅವನು ವಸ್ತ್ರಗಳನ್ನೂ ಆಭರಣಗಳನ್ನು ನೀಡಿ ಗೌರವಿಸಿದನು'  ಅನ್ನುವ ಮಾತಿದೆ.   ದಾನ ಮಾಡಿದನು; ಆ ಬಗ್ಗೆ ಹೆಮ್ಮೆ, ಅಹಂಕಾರಪಟ್ಟನು ಎಂಬ ಭಾವ ಇಲ್ಲಿ ಇಲ್ಲ , ಬದಲಾಗಿ ವಿನಯವಿದೆ.)

 

ಒಟ್ಟಿನಲ್ಲಿ ನಮ್ಮ ಹತ್ತಿರ ಇರುವುದನ್ನು  ಇನ್ನೊಬ್ಬರ ಒಳಿತಿಗೆ ಬಳಸಬೇಕೇ ಹೊರತು ನಮ್ಮಲ್ಲಿಯೇ ಇಟ್ಟುಕೊಳ್ಳುವುದು  ಸರಿಯಲ್ಲ. 

Rating
Average: 4 (4 votes)