ಹಾರಿಹೋಗುವವೆಲ್ಲಿಗೆ ಹೃದಯದ ಭಾವನೆಗಳು...
ಹಾರಿಹೋಗುವವೆಲ್ಲಿಗೆ ಹೃದಯದ ಭಾವನೆಗಳು
ಈ ಯಾಂತ್ರಿಕ ತಾಂತ್ರಿಕ ರಕ್ಕಸ ಮಂದಿಯೊಳಗೆ
ಹುಟ್ಟಿ ಬರುವವೆಲ್ಲಿಗೆ ಜೀವಿಗಳೆಡೆ ಚೇತನಗಳು
ಈ ಸೃಷ್ಟಿ ನಿಯಮದ ಸತ್ಯ ಪೃಥ್ವಿಯೊಳಗೇ..
ಬಿಡದೆ ಕಾಡುವವೇಕೆ ದುಃಖ ದುಮ್ಮಾನಗಳು
ನಮ್ಮದೇ ಕನಸು-ಮನಸಿನ ಸ್ವರ್ಗದೊಳಗೆ
ವಿಜ್ಞಾನ, ತಾಂತ್ರಿಕತೆಯಲಿ ಸಕಲ ಭೋಗಗಳೇಕೆ
ಸುಖದ ಕಲ್ಪನೆಯದೇಕೆ ಬದುಕಿನೀ ಬಲುಮೆಯೊಳು
ಅದಿರುವುದೇಕೆ ಸ್ವಾರ್ಥ-ಹುಸಿ ವೇಷದ ಪರಿಧಿಯೊಳಗೇ.
ಮತ್ತೆಲ್ಲ ಸಿಡಿವ ಮದ್ದೇತಕೆ ನಯವಂಚಕರ ಜಾಲದಲಿ
ಅದಿರುವುದೇ ದುಷ್ಟರ ದಮನ ಸೂತ್ರದೊಳಗೇ...?
ಏನಿದೀ ಶ್ರೀ ಸಾಮಾನ್ಯನ ಗೋಳು...
ಯಾಕೆ ಹೊಯ್ಯುವಿರೋ ಎಕ್ಕೆ ಹಾಲು
ಕನಸು ಕಾಣುವ ಪುಟ್ಟ ಪುಟ್ಟ ಕಣ್ಣುಗಳಿಗೆ
ಅಮಾಯಕರ ಬಾಳಲಿ ಧಗೆ ಹೊಗೆ
ಕಣ್ಣೀರ ಕೋಡಿ, ಬದುಕೇಕೆ ರಾಡಿ..
ಯಾರ ರಕ್ತ ಕುದಿಸುವುದೇತಕೋ
ಈ ಸುಪ್ತ ಮನಸಿನ ಮೂಸೆಯೊಳಗೇ
ದಿವ್ಯ ಮೌನದ ಪ್ರಕೃತಿ ಪರಿಸರದೊಳಗೇ
ಸುಂದರ ದೇಗುಲ, ತೋಟ ತಾಣಗಳು
ನಿತ್ಯ ನಡೆವ ದಾರಿ, ವಾಹನ ಮಾರ್ಗಗಳು
ಎಲ್ಲರೂ ಅಹೋರಾತ್ರಿ ನಿರೀಕ್ಷಿಸಿ
ಬರಮಾಡಿಕೊಳುವ ಬೆಳಕಿನೊಳಗೇ,
ಪ್ರತ್ಯೇಕ-ಅತಿರೇಕ ವಾದಗಳೇಕೋ
ಭೀತಿಗಳೇಕೋ ಆಂತರಿಕ ಆಂದಲೋನದೊಳಗೇ..
ಇಲ್ಲಿ ಭವ ಬಂಧನ ಹರಿವುದು ಹೇಗೋ
ಕಡೆಗೂ ಅದ್ಯಾವ ಕೈಗಳ ಲೀಲೆಯೊಳಗೋ.....
ಹಾರಿ ಹೋಗುವವೆಲ್ಲಿಗೆ ನಿತ್ಯ ಯುವ ಚೇತನಗಳು
ಈ ಸ್ವತಂತ್ರ ಸ್ವಚ್ಛಂದ ಸೀಮೆಯೊಳಗೇ
ಮರಳಿಯೆ ಬರುವವೆಲ್ಲಿಗೆ ಹೃದಯದ ಭಾವನೆಗಳು
ಜಗದಲಿ ಸಮರ ಶಾಂತಿಯ ಸತ್ಯ ಚಿಂತನೆಯೊಳಗೇ.
- ಎಚ್.ಶಿವರಾಂ, ಜುಲೈ 13, 2006 * ಮಾರ್ದನಿ(ನನ್ನಕವನ ಸಂಕಲನ)