ಹಾರುವ ಬೇರುಗಳು : ಎರಡು- ಬೋಪ್ಸರದ ಚಹದಂಗಡಿ ಮತ್ತು ಧ್ಯಾನಸ್ಥ ನಗರ
ಅಷ್ಟೇನೂ ಚಳಿಯಲ್ಲದ ಭಾರತದ ಬಿಸಿಗಿಂತಲೂ ಕಡಿಮೆಯಿರುವ ತಣ್ಣಗಿನ ವಾತಾವರಣ ರಸ್ತೆಯ ಇಕ್ಕೆಲಗಳನ್ನೂ ಬೆಚ್ಚಗಿಟ್ಟಿತ್ತು. ಹೊಸ ಜಾಗದ ಪರಿಚಯ ಮಾಡಿಕೊಳ್ಳುತ್ತಾ ಜೊತೆಗಾರರ ತೆಲುಗಿನ ಸಂವಾದವನ್ನು ಅರ್ಥಮಾಡಿಕೊಳ್ಳುತ್ತಾ ಆ ಸ್ಟುಟ್ಗಾರ್ಟಿನ ಫುಟ್ಪಾತಿಗೆ ಹೊಂದಿಕೊಳ್ಳುತ್ತಾ ನಡೆಯತೊಡಗಿದೆ. ಸ್ವಚ್ಛ ರಸ್ತೆಯ ಮೇಲೆ ಓಡಾಡುವ ಅಷ್ಟೇ ಚೊಕ್ಕ ಟಯರಿನ ಕಾರುಗಳ ಮಧ್ಯೆ ಆಗಾಗ ಓಡಾಡುವ ದೊಡ್ಡ ಆವಾಜಿನ ಬೈಕುಗಳು, ಅವುಗಳ ವೇಗ ಭಯ ಹುಟ್ಟಿಸುವಂತಿದ್ದವು. ಪಾದ ಸಂಚಾರಿಗಳೂ ಅಷ್ಟೇ ಮಹತ್ವ ಕೊಟ್ಟು ರಚಿಸಿದ ಪುಟ್ಪಾತುಗಳು ಸೈಕಲ್ ಸವಾರರಿಗೂ ದಾರಿಯಾಗಿತ್ತು. ಶಿಸ್ತಿನ ಜನಕ್ಕೆ ಮಾಡಿಟ್ಟ ವ್ಯವಸ್ಥೆಗಳವು.
ರೈಲು ನಿಲ್ದಾಣಕ್ಕೆ ಹೋಗಿ ಕಂಬಕ್ಕೆ ಕಟ್ಟಿದ್ದ ಪುಟ್ತ ಯಂತ್ರದಿದ ಬಂದ ಎರಡೂವರೆ ಯೂರೋ ಟಿಕೆಟ್ ಹಿಡಿದು S6 ಅಂಕಿತದ ಉಗಿಬಂಡಿಗಾಗಿ ಕಾಯುತ್ತಾ ಕುಳಿತೆವು. ಕ್ಷಮಿಸಿ.. ಉಗಿಬಂಡಿಗಳಲ್ಲ ಅವು, ವಿದ್ಯುತ್ ವೇಗಿಗಳೆನ್ನಬಹುದು. ಸರಾಸರಿ ವೇಗವೇ ನಮ್ಮಲ್ಲಿನ ಗರಿಷ್ಠ ವೇಗಕ್ಕಿಂತ ಜಾಸ್ತಿ ಇರುವ ಉದ್ದುದ್ದದ ಜನವಾಹಿನಿಗಳು. ನಿಲ್ದಾಣ ಜರ್ಮನಿಗೆ ಹೇಳಿ ಮಾಡಿಸಿದ ಹಾಗೆ ಸುಸಜ್ಜಿತವಾಗಿತ್ತು. ಅದೊಂದು ಲೋಕಲ್ ನಿಲ್ದಾಣವಾಗಿದ್ದರೂ ಸಹ ಸರ್ವ ಮಾಹಿತಿಗಳೂ ಲಭ್ಯವಿದ್ದವು. ನಮಗೆ ಬೇಕಾದ ಟ್ರೈನಿನ ವಿವರಗಳು ನನ್ನ ಜೊತೆಗಾರರಿಗೇ ಜಾಸ್ತಿ ಗೊತ್ತಿದುದರಿಂದ ಅವುಗಳ ಬಗ್ಗೆ ವಿಚಾರವನ್ನೂ ಮಾಡದೆ ಕಾಯುತ್ತಿದ್ದೆ. ಏನು ಬೇಕು ಎಂದು ಗೊತ್ತಿಲ್ಲದೇ, ಆ ಗೊತ್ತಿಲ್ಲದ ಕಾರಣಕ್ಕಾಗಿ ಕಾಯುವುದೇ ಜೀವನವಿರಬೇಕು. ಬೋರ್ಡು ತೋರಿದ ಸಮಯಕ್ಕೆ ಆಚೀಚೆ ಆಗದಂತೆ ತನ್ನ ಸಮಯಕ್ಕೆ ಸರಿಯಾಗಿ ಕೆಂಪು ಬಣ್ಣದ ಟ್ರೈನೊಂದು ಹಾಜರಾಯಿತು. ತನ್ನಿಂದ ತಾನೇ ತೆರೆದುಕೊಂಡ ಬಾಗಿಲನ್ನು ಪ್ರವೇಶಿಸಿ ಬೋಗಿಯನ್ನು ಹೊಕ್ಕಾಗ ಮೊದಲ ಬಾರಿಗೆ ಜರ್ಮನಿಯ ಜನ ಗುಂಪಾಗಿ ಕಾಣಿಸಿಕೊಂಡರು. ಏರ್ಪೋರ್ಟಿನಲ್ಲಿ, ಹೋಟೆಲಿನಲ್ಲಿ ಜನರಿದ್ದರೂ ಗುಂಪಾಗಿರಲಿಲ್ಲ. ಆಗಾಗ ಅಲ್ಲಲ್ಲಿ ಕಾಣ ಸಿಗುವ ವಿರಳ ಮುಖಳೀಗ ಗುಂಪ್ನಲ್ಲಿ ಸಿಕ್ಕಾಗ ನಾವು ಬೇರೆ ಅಂತ ಅನಿಸದಿರಲಿಲ್ಲ.
ಅದು ಅವರಿಗನಿಸಿತೋ ಇಲ್ಲವೋ ಗೊತ್ತಿಲ್ಲ. ಯಾರಿಗೂ ಜಾಸ್ತಿ ಗಮನ ಕೊಡದ ಜೀವಿಗಳಂತಿದ್ದರು. ಅವರು, ಅವರವರ ಜೋಡಿಗಳು, ಅವರಿಳಿಯುವ ಜಾಗಗಳು.. ಹೀಗೆ ಅವರದ್ದೇ ಆದ ವರ್ತುಲದಲ್ಲಿ ಬದುಕುತ್ತಾರೆ ಅನಿಸಿತು. ನಾವೂ ಅವರಂತೆ ಅವರ ಬಗ್ಗೆ ಜಾಸ್ತಿ ಗಮನ ಕೊಡದಂತೆ ನಟಿಸಿದರೂ, ಆಗಾಗ ಅವರಿವರನ್ನು ಗಮನಿಸುತ್ತಿದ್ದೆವು. ಮುಂದಿನ ಎರಡೋ ಮೂರೋ ನಿಲ್ದಾಣಗಳು ದಾಟಿದ ನಂತರ ಮುಖ್ಯ ನಿಲ್ದಾಣವಂತೆ. ಅಲ್ಲಿಂದ ಇನ್ನೊಂದು ಟ್ರೈನು ಹಿಡಿದು ಇನ್ನೆರಡು ನಿಲ್ದಾಣ ಕಳೆದರೆ ಅಪಾರ್ಟ್ಮೆಂಟ್ ಸಿಗುತ್ತದೆಯಂತೆ. ಅಂದರೆ ನಮ್ಮ ಹೊಟೆಲಿಂದ ಈಗ ಹೊರಟಿರುವ ಜಾಗ ಐದಾರು ಸ್ಟೇಶನ್ ಗಳ ಅಂತರ. ಆದರೂ ಹತ್ತರಿಂದ ಹದಿನೈದು ನಿಮಿಷಗಳ ಒಳಗೆ ಅಪಾರ್ಟ್ಮೆಂಟಿನಲ್ಲಿದ್ದೆವು ಎಂದರೆ ಆಶ್ಚರ್ಯವಾಗುತ್ತದೆ.
ಹೋದತಕ್ಷಣವೇ ಅಡುಗೆಗೆ ಅಕ್ಕಿ ಇಟ್ಟು,ಎಂಥದೋ ಬಾತು ಮಾಡಿ ತಿಂದಾಯಿತು. ಮೊಬೈಲಿನಲ್ಲಿ ಹಿಂದಿ ಹಾಡೊಂದನ್ನು ಹಾಕಿ ಕೂತ ಗೆಳೆಯರ ಮಾತಿನ ಓಘ ಮತ್ತು ವೇಗ ಆಫೀಸಿನ ಕೆಲಸದಿಂದ ಶುರುವಾಗಿ, ತಮ್ಮ ಹಳೆಯ ಕ್ಲಾಸ್ ಮೇಟ್ಗಳ ವಿವರಣೆಯವರೆಗೆ ಬಂದು ನಿಂತಿತ್ತು. ಗಂಟೆ ಎಂಟಾದರೂ ಬೆಳಕೋ ಬೆಳಕು. ಅಲ್ಲೆರಡು ಫೋಟೋಗಳನ್ನು ಕ್ಲಿಕ್ಕಿಸಿ ಅವರ ತೆಲಗು ಸಂಭಾಷಣೆಗಳಿಗೆ ಇಂಗ್ಲೀಷಿನ ಸಾಲುಗಳನ್ನು ಸೇರಿಸುತ್ತಾ ನನಗಾದಷ್ಟನ್ನು ಮಾತನಾಡುತಿದ್ದೆ. ನಾನೀವರೆಗೆ ಬೆರೆತ ಜನರಿಗಿಂತ ತುಸು ಬೇರೆಯದೇ ಆದ ಪ್ರವೃತ್ತಿಯುಳ್ಳ ಜನರೋದಿಗೆ ಹೊಂದಿಕೊಳ್ಳುತ್ತಿರುವಾಗಲೇ ಮುಂದಿದ್ದ ಕಡಲೇ ಬೀಜಗಳು ಖಾಲಿಯಾಗುತ್ತಾ ಬಂತು.
ಬೋಪ್ಸರ ಎಂಬ ಆ ಪಟ್ಟಣಭಾಗದ ಸಮೀಪ ಸ್ಟುಟ್ಗಾರ್ಟಿನ ಅತೀ ಎತ್ತರದ ಜಾಗವೊಂದಿದೆ. ಹೆಸರಿಗೆ ಟೀ ಹೌಸ್ ಎಂದು ಕರೆದರೂ ಅದು ಪ್ರೇಮಿಗಳ ಜಾಗವಾಗಿ ಬಲು ಪರಿಚಿತ. ಒಂಬತ್ತು ಗಂಟೆಯ ಆ ನಸುಗತ್ತಲಲ್ಲಿ ರಸ್ತೆ ಬೆಳಕಿಗೆ ಅಭಿಮುಖವಾಗಿ ನಡೆಯತೊಡಗಿದಾಗ ಇವತ್ತು ಇಲ್ಲೇ ಎಲ್ಲೋ ಮಲಗುವುದು ಸ್ಪಷ್ಟವಾಗತೊಡಗಿತ್ತು. ಅಲ್ಲೊಬ್ಬರು ಇಲ್ಲೊಬ್ಬರು ಸೈಕಲ್ ಹತ್ತಿ ಟ್ರಿಣ್ ತ್ರಿಣ್ ಮಾಡುವವರನ್ನು ಬಿಟ್ಟರೆ ಕಾಡಿಗೆ ಪ್ರವೇಶದಂತಿದ್ದ ಆ ಏರು ದಾರಿಯಲ್ಲಿ ಮತ್ಯಾರೂ ಇರಲಿಲ್ಲ. ಜೊತೆಯಲ್ಲಿದ್ದವರು ಬೀರಿನ ಮಹಿಮೆಯಿಂದ ಬಹಳ ಜಾಸ್ತಿ ಮಾತನಾಡತೊಡಗಿದ್ದರು. ಅಥವಾ ಅವರು ಬಿಯರು ಕುಡಿದ ವಿಷಯ ತಿಳಿದ ನನಗೆ ಅವರ ಸಹಜ ಮಾತುಗಳೂ ವಿಚಿತ್ರವಾಗಿ ಕಂಡಿರಬಹುದು. ಆ ಟೀ ಹೌಸೆಂಬ ಹಳೇ ಕಟ್ಟಡದ ಎದುರಿಗೆ ನಮ್ಮ ದೇವಸ್ಥಾನದಲ್ಲೆಲ್ಲಾ ನಿಲ್ಲಿಸಿರುತ್ತಾರಲ್ಲಾ ಆ ತರಹದ್ದು ಒಂದು ಗರುಡಗಂಬ.. ಯಾವುದೋ ವಿಶ್ವವಿದ್ಯಾಲಯದಂತೆ ಕಾಣುವ ಉದ್ದದ ಮೆಟ್ಟಿಲುಗಳು.. ಅವುಗಳ ಮೇಲೆ ಸಾಲು ಕಂಬಗಳು..ರಾತ್ರಿಯಲ್ಲಿ ಕಂಬದ ಮೇಲಿನ ಕೆತ್ತನೆಗಳೆಲ್ಲಾ ಸರಿಯಾಗಿ ಕಾಣಲೂ ಇಲ್ಲ..ನೋಡಲೂ ಇಲ್ಲ..
ನಿಜ. ಸ್ಟುಟ್ಗಾರ್ಟ್ ಸಿಟಿ ಸಂಪೂರ್ಣವಾಗಿ ಕತ್ತಲೆಗೆ ಹೊರಳಿಕೊಂಡಿತ್ತು.. ಆಗಸದಲ್ಲಿ ಅಲ್ಲಲ್ಲಿ ಹಾರುವ ವಿಮಾನಗಳ ಬೆಳಕು ಬಿಟ್ಟರೆ ಯಾವುದೇ ನಕ್ಷತ್ರಗಳಿರಲಿಲ್ಲ.. ಆ ಜಾಗದಿಂದ ಇಡೀ ಸಿಟಿ, ಧ್ಯಾನಸ್ಥ ಯೋಗಿಯಂತೆ ತಟಸ್ಥವಾಗಿ ಕಾಣುತ್ತಿತ್ತು.. ಕಾರುಗಳ ಭರಾಟೆ, ಯುವಜನರ ಕೂಗಾಟ, ವೀಕೆಂಡಿನ ಜಂಜಾಟಗಳ ಸಿಟಿ ಇದೇನಾ ಎಂದು ಕೇಳುವಷ್ಟು ಸುಂದರ ನಿರ್ಲಿಪ್ತತೆ ಅಲ್ಲಿತ್ತು.. ಕುಡಿಯುವವರು ಕುಡಿಯುತ್ತಿದ್ದರು.. ನುಡಿಯುವವರು ಕಲ್ಲುಬೆಂಚಿನ ಮೇಲೆ ನುಡಿಯುತ್ತಿದ್ದರು.. ಮಿಡಿಯುವವರು ಮರದ ಮರೆಯಲ್ಲಿದ್ದರು.. ಅವರಷ್ಟಕ್ಕೆ ಅವರು ತಮ್ಮದೇ ಆದ ಅದೇ ವರ್ತುಲಗಳಲ್ಲಿ ಅವರದೇ ಕೇಂದ್ರದಲ್ಲಿ ಮುಳುಗಿದ್ದರು. ಕ್ಯಾಮರಾಕ್ಕೆ ಕೈ ಕಾಲು ಸಿಕ್ಕಿಸಿ ಕೆಲ ಚಿತ್ರಣಗಳನ್ನು ತೆಗೆದೆ.. ಆಮೇಲೆ ಸುಮ್ಮನೆ ಕತ್ತಲನ್ನು ದೃಷ್ಟಿಸುತ್ತಾ ಕುಳಿತೆ. ಎಲ್ಲರೂ ಹೊರಟಾಗ ಅವರೊಂದಿಗೇ ಹೊರಟೆ..
ಈಗ ಮಲಗುವ ದಿನಾಂತದ ಸಮಯ.. ನಾವಂತೂ ನಮ್ಮ ಹೊಟೇಲಿಗೆ ಮರಳುವ ಸಾಧ್ಯತೆ ಬಹಳ ಕಡಿಮೆಯಿತ್ತು. ಮೊದಲೇ ಹೇಳಿದಂತೆ ಬಟ್ಟೆ ಬರೆಯೇನನ್ನೂ ತಂದಿರಲಿಲ್ಲ.. ಬ್ರಹ್ಮಚಾರಿಗಳಿಗೆ ಎಲ್ಲಿದ್ದರೇನಂತೆ ಎಂದು ಜೊತೆ ಬಂದ ಇಬ್ಬರಲ್ಲಿ ಒಬ್ಬ ಸಹೋದ್ಯೋಗಿಯ ಮನೆಯಲ್ಲಿ ಪಾಚುವ ವ್ಯವಸ್ಥೆಯಾಯಿತು. ಏನೋ ಸಿನಿಮಾ ನೋಡುವ ಎಂದು ಆ ಅಪರಾತ್ರಿ ಟಿ,ವಿ, ಹಚ್ಚಿದರೂ ವಿಮಾನ ನಿಲ್ದಾಣದಿಂದ ಈ ಟೀ ಹೌಸಿನ ವರೆಗಿನ ಎಲ್ಲಾ ಕೆಲಸಗಳು ನೆನಪಾಗಿ ನಿದ್ದೆ ಒಂದೇ ಸರಿಯಾದ ಆಯ್ಕೆ ಎಂದು ಬಣಬಣಿಸುತ್ತಿತ್ತು. ಅವರ ಮನೆಯ ಬಿಳೀ ಹಾಸಿಗೆಯ ಬಿಳೀ ಚಾದರದಡಿಯಲ್ಲಿ ಕಾಲು ನೀಡಿ ಮಲಗಿದಾಗ ಕಿಡಕಿಯಿಂದ ತಂಗಾಳಿಯಾಗಿ ತೂರಿ ಬಂದ ನಿದ್ರಾದೇವಿ ಕಣ್ಣಿನ ರೆಪ್ಪೆಗಳನ್ನು ಜೋಡಿಸಿ ಹೊಲಿಯತೊಡಗಿದಳು..