ಹಾರುವ ಬೇರುಗಳು : ಒಂದು - ಜರ್ಮನಿಯ ಅಭಿಯಂತರಿಸಿದ ವಿನ್ಯಾಸ

ಹಾರುವ ಬೇರುಗಳು : ಒಂದು - ಜರ್ಮನಿಯ ಅಭಿಯಂತರಿಸಿದ ವಿನ್ಯಾಸ

 

 

ಸಣ್ಣ ಸಣ್ಣ ಚಡ್ಡಿಯ ಜನಸಂದಣಿಯಿದ್ದ ಫ್ರಾನ್ಸಿನ ಆ ಏರ್ ಪೋರ್ಟು ಮೊದಲ ನೋಟಕ್ಕೆ ತುಂಬಾ ವರ್ಣಮಯವಾಗಿಯೇ ಕಾಣುತ್ತದೆ.ಯಾರಿಗೆ ಯಾರೂ ಪರಿಚಯದವರೇ ಅಲ್ಲದಂತೆ ಸರ್ವರೂ ಓಡಾದುತ್ತಿರುವಾಗ ಸದ್ದಿಲ್ಲದೇ ಹೊಸ ವ್ಯವಸ್ಥೆಯ ವಾಸನೆ ಬಂದಿತ್ತು. ಹೊರಗೆ ಸ್ವಲ್ಪವೇ ಅನಿಸುವಂತ ತಂಗಾಳಿಯು ನಿಲ್ದಾಣದ ಒಳಗೆ ಬಂದು ಬೆಚ್ಚಗಾಗಿತ್ತು. ವ್ಯವಸ್ಥೆಗಳು, ಜನಮನಗಳು ಹೊಸತಾದರೂ ಪರದೇಶವೆನ್ನುವಷ್ಟು ಬದಲಾದ ವಾತಾವರಣ ಅದಾಗಿರಲಿಲ್ಲ. ಅದೇ ಏರ್ಪೋರ್ಟಿನ ಸೆಕ್ಯೂರಿಟಿ ಚೆಕ್ಕುಗಳು, ಕಾಯುವವರಿಗೆ ಕಾಯುತ್ತಿದ್ದ ಸೀಟುಗಳು, ಟ್ಯಾಕ್ಸ್ ಇಲ್ಲದೇ ಬೀರು,ಚಾಕಲೇಟುಗಳನ್ನು ಮಾರುವ ಅಂಗಡಿಗಳು, ಆಗಾಗ ಗುಂಯ್ಗುಟ್ಟಂತೆ ಧಾಳಿಯಿಡುವ ನಾಗರೀಕ ಧ್ವನಿಯ ಅನೌನ್ಸ್ ಮೆಂಟುಗಳು.. ಹೀಗೆ ಎಲ್ಲವುಗಳ ಮಿಶ್ರಣ ಗೊತ್ತಿದ್ದ ವಿಷಯವನ್ನೇ ಹೊಸ ಧ್ವನಿಯಲ್ಲಿ ವಿವರಿಸಿದಂತಿತ್ತು. ಟ್ರಾನ್ಸಿಟ್ಟಿನ ಎರಡು ತಾಸು ಕಾಯುವಿಕೆಯನ್ನು ಆರಾಮಾಗಿ ಕಳೆಯಲು ನನಗೆ ಬೇಕಾದಷ್ಟು ಹೊಸತಿದ್ದವು ಬಿಡಿ..

ಎರಡನೇ ಮಹಾಯುದ್ಧದ ಸಮಯದಲ್ಲಿ ಫ್ರಾನ್ಸಿನ ಜನರಲ್ ಆಗಿದ್ದ ಚಾರ್ಲ್ಸ್ ದಿ ಗೌಲ್ ಎಂಬವನ ಹೆಸರಿಟ್ಟುಕೊಂಡ ಆ ನಿಲ್ದಾಣದ ಒಳಗೆ ಸುತ್ತುವುದು ಒಂದು ಸಮಸ್ಯಾಪೂರ್ತಿ ಮಾಡಿದಂತೆ. ಆಗ ತಾನೇ ಸಿಕ್ಕ ವಿಚಿತ್ರ ಸ್ವಾತಂತ್ರ್ಯಾನುಭೂತಿಯಲ್ಲಿ ಆ ಬಾಗಿಲಿನಿಂದ ಈ ಬಾಗಿಲಿಗೆ, ಸಿ ಟರ್ಮಿನಲ್ಲಿನಿಂದ ಡಿ ಟರ್ಮಿನಲ್ಲಿಗೆ ತಿರುಗುತ್ತಾ ಒಂದು ತಾಸು ಕಳೆದು ಹೋಗಿತ್ತು. ಇನ್ನೊಂದು ತಾಸನ್ನು ಮುಂದಿನ ವಿಮಾನ ಬರುವ ಬಾಗಿಲ ಎದುರು ಕೂತು ಕಳೆಯಲು ನಿರ್ಧರಿಸಿ ವಿರಮಿಸಿದೆವು. ಸ್ವಲ್ಪವೇ ಚಾರ್ಜ್ ಉಳಿದಿದ್ದ ನನ್ನ ಫೋನಿನ ಸಂಗೀತ ಆ ಸಮಯದಲ್ಲಿ ಜೊತೆಯಾದರೂ ಹೊಸ ಜಾಗ ಎಂದೇನೋ ತನ್ನ ಮೊದಲಿನ ಆಪ್ತತೆಯನ್ನು ತೋರಲಿಲ್ಲ.

ಈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳೆಂದರೆ ಮೆಜೆಸ್ಟಿಕ್ಕಿನಂತೆ. ಬಸ್ಸಿನ ಬದಲು ಉಕ್ಕಿನ ರೆಕ್ಕೆಯ ಹಕ್ಕಿಗಳು.. ಒಂದರ ಹಿಂದೆ ಸಾಲಾಗಿ ನಿಂತು ಪಾಳಿಗಾಗಿ ಕಾಯುತ್ತಾ, ಪುರ್ರನೆ ಹಾರುವ ಈ ವಿಮಾನಗಳಿಗೆ ಅವುಗಳ ಮೂಲದ ಆಧಾರದ ಮೇಲೆ ವಿಧ ವಿಧ ಬಣ್ಣಗಳು.. ಮೈಬಣ್ಣ ಎಲ್ಲವೂ ಬೆಳ್ಳಗಿದ್ದರೂ ಬಾಲ, ರೆಕ್ಕೆಗಳ ಭಾಗ ಆಯಾ ದೇಶದ ಆಯಾ ಕಂಪನಿಯ ಲಾಂಛನಗಳನ್ನು ಹೊತ್ತು ಮೆರೆಯುತ್ತಿದ್ದವು. ನಮ್ಮ ವಿಮಾನ ಈಗ ಹಾರುವಾಗ ಹಗಲು ಮತ್ತು ನನಗೆ ಸಂಪೂರ್ಣ ಎಚ್ಚರವಿತ್ತು. ಕಿಟಕಿ ಅಷ್ಟೇ ಸಣ್ಣದಿದ್ದರೂ ಈಗೇನೋ ಹೊಸದು ಕಾಣಲಿದೆ ಎಂದು ಮನಸ್ಸಿಗೆ ಅನ್ನಿಸಿ ಬಿಟ್ಟಿತ್ತು. ವಿಮಾನ ತನ್ನ ರೆಕ್ಕೆಗಳನ್ನು ಅಲುಗಾಡಿಸುತ್ತಾ ಬಾನಿಗೆ ಜಿಗಿದು ಸುಧಾರಿಸಿಕೊಳ್ಳುವಷ್ಟರಲ್ಲಿ ಕಿಟಕಿಯಿಂದ ಹಳೇ ದೈವೀ ಸಿನಿಮಾಗಳಲ್ಲಿ ನಾರದರು ತಂಬೂರಿ ಮೀಟುತ್ತಾ ಹಾಡಿಕೊಂಡು ಹೋಗುವಂತಾ ಸ್ವರ್ಗ ಕಿಟಕಿಯ ಪಕ್ಕದಲ್ಲಿತ್ತು. ಆ ಮೋಡಗಳ ಮಧ್ಯೆ ಆಗಾಗ ತೂರಿ ಹಾರುವ ಇತರ ವಿಮಾನಗಳ ಹಿಂದೆ ಬೀಳುವ ಬೆಳ್ಳಿ ರೇಖೆ ಆಗಸದಲ್ಲಿ ರಂಗೋಲಿ ಬಿಡಿಸುತ್ತಿತ್ತು. ಹತ್ತಿಯ ಚೀಲಗಳಂತ ಮೋಡಗಳು ನೆಲ ಕಾಣುವಂತೆ ಅಲ್ಲಲ್ಲಿ ಹರಿದಿದ್ದರೆ, ಆ ಹರಿದ ಭಾಗದಲ್ಲಿ ಫ್ರಾನ್ಸಿನದ್ದೋ ಜರ್ಮನಿಯದ್ದೋ ನದಿಯೊಂದು ವಕ್ರಾವಕ್ರವಾಗಿ ಹರಿದಿತ್ತು. ಒಂಭತ್ತೋ ಹತ್ತನೆಯದೋ ಇಯತ್ತೆಯ ನಕಾಶೆ ಪುಸ್ತಕದಲ್ಲಿ ಬಿಡಿಸಿದ್ದ ಫ್ರಾನ್ಸಿನ ಅಂಚುಗಳು ಆಲ್ಲಿ ಮಿಂಚುತ್ತಿದ್ದಂತೆ ಕಂಡಾಗ ಮೈ ಜುಮ್ಮೆಂದಿತ್ತು. ಮತ್ತು ಸಖಿಯೋರ್ವಳು ಕೊಟ್ಟ ಜ್ಯೂಸ್ ರೀತಿಯ ಕಹಿ ದ್ರಾವಣ ತಣ್ಣಗಿತ್ತು.

ಮಧ್ಯಾಹ್ನ ಎರಡರ ಹೊತ್ತಿಗೆ ಸ್ಟುಟ್ಗಾರ್ಟ್ ನಲ್ಲಿ ಇಳಿದಾಗಿತ್ತು. ಇನ್ನೆರಡು ತಿಂಗಳು ಇಲ್ಲೆಲ್ಲೋ ಅಸುಪಾಸಲ್ಲೇ ಇರಬೇಕು ಎಂಬ ಪೂರ್ವಾಗ್ರಹದಿಂದಲೋ ಏನೋ , ಈ ಜಾಗ ಫ್ರಾನ್ಸಿಗಿಂತಲೂ ಇಷ್ಟವಾಗಿತ್ತು. ರನ್ವೇಗೆ ತಲುಪುವ ಕೆಲಕ್ಷಣಗಳ ಮುಂಚೆ ಕಂಡ ಬಾಷ್ ಹೆಸರಿನ ಜಗತ್ತಿನ ಅತೀ ದೊಡ್ಡ ಲೋಗೋ ನೋಡಿ ಮೂಡಿದ ಅಭಿಮಾನ ಅದಕ್ಕೆ ಪೂರಕವಾಗಿತ್ತು ಎನ್ನಬಹುದು. ಅಷ್ಟೇನೂ ದೊಡ್ದದಲ್ಲದ ನಿಲ್ದಾಣ - ತನ್ನಿಂದ ತಾನೇ ಮುಚ್ಚುವ ತೆರೆಯುವ ಬಾಗಿಲುಗಳು, ಹೊಸಬರಿಗೂ ದಾರಿ ತಪ್ಪದ ರೀತಿಯಲ್ಲಿ ಬರೆದ ದಾರಿ ಸೂಚಕಗಳು, ಜಾಸ್ತಿ ಕಾಯಿಸದ ಸೆಕ್ಯೂರಿಟಿಗಳು ಇತ್ಯಾದಿಗಳಿಂದ ಸುಸಜ್ಜಿತವಾಗಿತ್ತು. ಬ್ಯಾಗುಗಳು ಪ್ರದಕ್ಷಿಣೆ ಹಾಕಿ ಬಂದು ನಮ್ಮ ಕೈ ಸೇರಿದಾಗ ವಿಮಾನ ನಿಲ್ದಾಣದ ಋಣ ತೀರಿದಂತಾಯಿತು. ಏರ್ಪೋರ್ಟಿನ ಹೊರಗೆ ಬಂದು ಟ್ಯಾಕ್ಸಿ ಹತ್ತಿ ಹೋಟೆಲಿಗೆ ಹೊರಟಾಗ ಇಪ್ಪತ್ತು ನಿಮಿಷಗಳು ಎಂದು ಮೊದಲೇ ತಿಳಿಸಿಬಿಟ್ಟ ಚಾಲಕ.

ಜರ್ಮನಿಯನ್ನು ಸುಮ್ಮನೆ ಕಟ್ಟಿದ್ದಲ್ಲ. ಅಭಿಯಂತಿರಿಸಿದ ವಿನ್ಯಾಸವದು. ಇಂಜಿನಿಯರ್ಡ್ ಡಿಸೈನ್. ರಸ್ತೆಗಳಾಗಲಿ, ಅದರ ಡಿವೈಡರ್ಗಳಾಗಲೀ ಚಿತ್ರದಂತೆ ರಚಿಸಿದ್ದು. ಬದಿಯ ಮರಗಳು, ಗಿಡಗಳು ಪೊದೆಗಳು, ಅಲ್ಲಲ್ಲಿ ಅರಳಿದ ಹೂವುಗಳು ಎಲ್ಲವೂ ಬಲು ಆತ್ಮವಿಶ್ವಾಸದಿಂದ ಬೆಳೆದದ್ದು. ರಸ್ತೆಯ ಭವಿಷ್ಯ ನಿರ್ಧರಿಸುವ ಬೋರ್ಡುಗಳು ಅಳತೆಯಿಟ್ಟು ಬರೆದಿದ್ದು. ಬುರು ಬುರು ತಿರುಗುವ ಕಾರುಗಳ ಹೊಳಪುಗಳು ಕನ್ನಡಿಯ ಪ್ರತಿಫಲನದಿಂದ ಆಗಿದ್ದು. ಇದನ್ನೆಲ್ಲಾ ನೋಡುತ್ತಾ ನಮ್ಮಲ್ಲಿ ಈತರಹ ಯಾಕಿಲ್ಲ ಎಂಬ ಯೋಚನೆ ಬರಲೇ ಇಲ್ಲ. ಬದಲಿಗೆ ನಿದ್ದೆ ಬಂತು. ಮರ್ಸಿಡಿಸ್ ಟ್ಯಾಕ್ಸಿಯ ಆ ಪಯಣ ಮೊದಲು ತಿಳಿಸಿದಂತೇ ಇಪ್ಪತ್ತೇ ನಿಮಿಷದಲ್ಲಿ ಮುಗಿದಿತ್ತು.

ಯಾವುದೋ ಕಾಡಿನ ಮಧ್ಯೆ ಇರುವಂತೆ ಬಿಂಬಿಸಿದ ನಾವಿರಲಿರುವ ಹೋಟೆಲು ಇಂಟರ್ನೆಟ್ನಲ್ಲಿ ನೋಡಿದಂತೆಯೇ ಇತ್ತು. ಹೀಗಾಗಿ ಇದು ಪರಿಚಯವಿತ್ತು ಅನ್ನಬಹುದು. ರಿಸೆಪ್ಷನ್ನಲ್ಲಿ ಸಹಿ ಹೊಡೆದು ಕೀ ತೆಗೆದುಕೊಂಡು ರೂಮಿನ ಬಾಗಿಲು ತೆಗೆದರೆ ನಿರಾಸೆ. ಅಡುಗೆ ಮನೆ ಇಲ್ಲ. ಇಂಟರ್ನೆಟ್ ನಲ್ಲಿ ಬುಕ್ ಮಾಡುವಾಗ ಇದ್ದ ಅಡುಗೆ ಮನೆ ಈಗ ಮಾಯ.. ಅದನ್ನು ನಂಬಿ ಅಡ್ಜಸ್ಟ್ ಮಾಡಿ ಹೊತ್ತು ತಂದ ಅಕ್ಕಿ, ಬೇಳೆ, ಸಾಂಬಾರು ಪುಡಿಗಳ ಜೊತೆಗೆ ನಮಗೂ ಗಾಯ. ರೊಂಯ್ಯನೆ ರಿಸೆಪ್ಷನ್ನಿಗೆ ಹೋಗಿ ಅರುಹಿದಾಗ, ಆಡುಗೆಮನೆ ಸಹಿತ ರೂಮುಗಳು ಸಧ್ಯಕ್ಕಿ ಲಭ್ಯವಿಲ್ಲ ಎಂಬ ದೈನ್ಯದ ಉತ್ತರ. ಬೇರೇನೂ ಹೇಳಲಾಗದ ಅಸಹಾಯಕ ಸ್ಥಿತಿಯಲ್ಲಿ ಸರಿ ಎಂದಷ್ಟೇ ಹೇಳಿ ರೂಮಿಗೆ ವಾಪಾಸಾಗಿ ಮುಖ ತೊಳೆದುಕೊಂಡು ಜರ್ಮನಿಯೆಂಬ ಜರ್ಮನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕೂತದ್ದಾಯಿತು.

ಮೊದಲ ದಿನ ಮೌನ ಎಂಬೋ ಹಾಡಿನ ಗುಂಗು ಹತ್ತಿರ ಬಂದು ಮನಸ್ಸನ್ನು ಹೊಕ್ಕುತ್ತಿದ್ದಂತೆ ಅದಕ್ಕಡ್ಡಬಂದವರು ಸಹೋದ್ಯೋಗಿಗಳಿಬ್ಬರು. ಧುತ್ತನೆ ಪ್ರತ್ಯಕ್ಷರಾದ ಅವರು ಜರ್ಮನಿಯಲ್ಲಿದ್ದುದು ಗೊತ್ತಿತ್ತಾದರೂ ಆ ಕ್ಷಣದಲ್ಲಿ ಅವರನ್ನು ನಾವಿರುವ ಜಾಗದಲ್ಲೇ ಕಂಡಿದ್ದು ಆಶ್ಚರ್ಯವನ್ನುಂಟು ಮಾಡಿತ್ತು. ಹಲೋಗಳನ್ನೂ ಹಾಯಿಗಳನ್ನೂ ಮುಳುಗಿಸಿ ತೇಲಿಸಿದ ನಂತರ ಸಧ್ಯದ ಪರಿಸ್ಥಿತಿಯನ್ನು ಅವಲೋಕಿಸಲಾಯಿತು. ನಮಗಿಲ್ಲದ ಅಡುಗೆ ಮನೆ ಸೌಲಭ್ಯ ಅವರವರ ರೂಮಿನಲ್ಲಿತ್ತಾದ್ದರಿಂದ ಅವರ ರೂಮಿಗೆ ಹೋಗಿ ಊಟ ಮಾಡಿ ಮುಂದಿನ ದಿನವನ್ನು ಕಳೆಯಲು ತೀರ್ಮಾನಿಸಲೂ ಆಯಿತು. ಸೊಂಟಕ್ಕೊಂದು ಬೆಲ್ಟಿನಂತ ಚೀಲ ಕಟ್ಟಿಕೊಂಡು ಅದರೊಳಗೆ ಪಾಸ್ ಪೋರ್ಟು ತುರುಕಿಕೊಂಡು, ಬಗಲಿಗೆ ಕ್ಯಾಮರಾ ನೇತುಕೊಂಡು ರೈಲು ನಿಲ್ದಾಣವೆಂಬ ಹೊಸ ಜಾಗಕ್ಕೆ ನಡೆಯುತ್ತಾ ಇರುವಾಗ ಇದು ಖರೇ ಯುರೋಪಿನಂತೆ ಅನಿಸಿತು. ಆಗ ಉಳಿದ ಅರ್ಧ ದಿನದ ಕತೆ ಏನೆಂದು ಅಸ್ಪಷ್ಟ ಚಿತ್ರಣವೂ ಇರಲಿಲ್ಲ. ಯಾವುದಕ್ಕೂ ಏನೂ ತಯಾರಿಯಿಲ್ಲದೆ ಸುಮ್ಮನೆ ಹೊರಟಿದ್ದೆ.

Rating
No votes yet