ಹಾರುವ ಬೇರುಗಳು : ಸೊನ್ನೆ - ಜರ್ಮನಿ ಪ್ರಯಾಣದ ತತ್ಕಾಲ ವೈರಾಗ್ಯ
ಇದು ಹೀಗೆಲ್ಲಾ ಅಗುತ್ತದೆ ಎಂದು ಗೊತ್ತಿಲ್ಲದಿದ್ದರೂ ಇದನ್ನು ಬಿಟ್ಟು ಬೇರೇನೋ ಆಗುತ್ತದೆ ಎಂದೇನೂ ಅಂದುಕೊಂಡಿರಲಿಲ್ಲ. ಒಂದೂವರೆ ಎರಡು ತಿಂಗಳ ಹಿಂದೆಯೇ ಜರ್ಮನಿಗೆ ಹೋಗುವುದು ನಿಶ್ಚಿತವಾಗಿದ್ದರೂ ಹಲವಾರು ಕಾರಣಗಳಿಂದ ಇವತ್ತಿನವರೆಗೆ ಬಂತು. ಚೀಲದಲ್ಲಿ ಬಟ್ಟೆ ಬರೆ, ಊಟ ತಿಂಡಿ, ಬ್ರಷ್ಶು ಪೇಸ್ಟುಗಳನ್ನೆಲ್ಲಾ ತುಂಬಿ, ಹತ್ತಿರದ ತೂಕದವನಿಂದ ತೂಗಿಸಿ, ಅದು ಎರಡು ಕೇಜಿ ಜಾಸ್ತಿ ಬಂದು, ಅದರೊಳಗಿದ್ದ ಎರಡು ಪುಸ್ತಕಗಳನ್ನು ಇನ್ನೊಂದು ಬ್ಯಾಗಿಗೆ ಹಾಕಿ, ಆ ಬ್ಯಾಗು ತೂಗಲಾಗಿ ಅದು ಮತ್ತೆ ಒಂದು ಕೆ.ಜಿ. ಜಾಸ್ತಿಯಾಗಿ, ಅದರಿಂದೆರಡು ಬಟ್ಟೆ ತೆಗೆದು ಇದಕ್ಕೆ ಹಾಕಿ, ಎರಡೂ ಬ್ಯಾಗಿನಲ್ಲಿ ಒಂದೊಂದು ಕೆಜಿ ಜಾಸ್ತಿ ತುಂಬಿ, ಮಧ್ಯಾಹ್ನವೇ ಬುಕ್ ಮಾಡಿಟ್ಟಿದ್ದ ಟ್ಯಾಕ್ಸಿಯವನ ಹಾರ್ನಿಗೆ ಓಗೊಟ್ಟು, ಹಳೆ ಶೂವಿಗೆ ಹೊಸ ಲೇಸು ಕಟ್ಟಿ, ಕ್ಯಾಮರವನ್ನು ನೇತು ಹಾಕಿಕೊಂಡು, ಲಗೇಜನ್ನು ಡಿಕ್ಕಿಯಲ್ಲಿಟ್ಟು, ಮುಂದಿನ ಸೀಟಿನಲ್ಲಿ ಕೂತು ಕಿಡಕಿ ಗಾಜು ಕೆಳಗಿಳಿಸುವಷ್ಟರಲ್ಲಿ ಹತ್ತೂವರೆ. ವಿಮಾನ ಒಂದೂ ಐವತ್ತಕ್ಕೆ.
ಮನೆ ಮುಂದೆಯೇ ಆದ ಟ್ರಾಫಿಕ್ ಜ್ಯಾಮು ನೋಡಿ ಒಮ್ಮೆ ಗಾಬರಿಯಾದರೂ ಗಂಟೆ ನೋಡಿ ಇನ್ನೂ ಟೈಮಿದೆ ಅಂದುಕೊಂಡೆ. ಡ್ರೈವರ್ ಆಗಲೇ ಬೆಂಗಳೂರು ಸಿಟಿಗೆ ಬಯ್ಯುವುದರೊಂದಿಗೆ ನಿದಾನಕ್ಕೆ ಮಾತಿಗಿಳಿದಿದ್ದ. ನಾನೂ ಸರಿ ಎಂದು ಸಣ್ಣಗೆ ಪರಿಚಯ ಭಾಷಣ ಮಾಡಿ ಓಂ ಸ್ವಸ್ತಿ ಅಂದೆ. ಮನೆಗೆ, ಅವರಿವರಿಗೆ, ಮತ್ತಿತರರಿಗೆ ಫೋನಾಯಿಸುತ್ತಾ ನನ್ನ ಜೊತೆ ಹೊರಟ ಸಹೋದ್ಯೋಗಿಗಳಿಗೆ ನನ್ನ ಮಾಹಿತಿ ಕೊಡುತ್ತಾ ಟ್ರಾಫಿಕ್ ತಪ್ಪಿ ಮಹಾನಗರಿಯ ವರ್ತುಲ ರಸ್ತೆಯಲ್ಲಿ ಗುಯ್ಯಂನೆ ಹೋಗುವಾಗ ತಂಪುಗಾಳಿ ಕಿವಿಯನ್ನು ಹೊಕ್ಕಿತು. ಕಿಡಕಿಯ ಗಾಜನ್ನು ಸ್ವಲ್ಪ ಮೇಲೆರಿಸಿದೆ. ಅಮೆರಿಕಾ ಅಮೆರಿಕಾ ಸಿನಿಮಾದಲ್ಲಿ ಒಂದು ಡೈಲಾಗಿದೆ. ಶಶಿ ಸೂರ್ಯನಿಗೆ ’ಮನುಷ್ಯನಿಗೆ ರೆಕ್ಕೆಗಳಿರಬೇಕು’ ಅಂದರೆ ’ರೆಕ್ಕೆಗಳಲ್ಲ ಬೇರುಗಳು ಬೇಕು’ ಎನ್ನುತ್ತಾನೆ ಸೂರ್ಯ. ಅದೆಲ್ಲಾ ನೆನಪಾಗಿ ನಾನು ಯಾಕೆ ಅಥವಾ ಏನನ್ನು ಅರಸಿ ಅಲ್ಲಿಗೆ ಹೋಗುತ್ತಿದ್ದೇನೆ? ಎಂಬ ಪ್ರಶ್ನೆ ಕಾಡಿದರೂ ಹೊಸ ಅನುಭವವೊಂದಕ್ಕೆ ಇದು ಸರಿ ಸಮಯವೆಂದೂ ಮತ್ತು ಯೋಚನೆ ಮಾಡಲು,ಅಂದರೆ ಈ ರೀತಿ ಯೋಚನೆ ಮಾಡಲು ಇದು ಸರಿಯಾದ ಸಮಯವಲ್ಲವೆಂದೂ ಸುಮ್ಮನಾದೆ. ಈಗ ಬರೆಯಬೇಕಾದರೆ ಅನಿಸುತ್ತಿದೆ. ಈ ತಾತ್ಕಾಲಿಕ ವೈರಾಗ್ಯಗಳು ಒಮ್ಮಿಂದೊಮ್ಮೆಗೆ ನುಗ್ಗಿ ಮನಸ್ಸನ್ನು ದ್ವಂದ್ವದಲ್ಲಿ ಸಿಕ್ಕಿಸಿ ಮಜ ಮಾಡುತ್ತವೆ. ಅದನ್ನೆಲ್ಲ ಲೆಕ್ಕಿಸದೆ ಈ ಕ್ಷಣದ ಸತ್ಯ ಇದೆಂದು ಅದನ್ನೇ ಒಪ್ಪಿಕೊಂಡು ಅಪ್ಪಿಕೊಂಡು ಮುಂದುವರಿಯಬೇಕು. ಯೋಚಿಸಿದರೆ ಮತ್ತೆ ಯಾವುದೋ ಮುರಳಿ ನಾದ ದೂರ ತೀರಕ್ಕೆ ಕರೆಯುತ್ತದೆ..
ವಿಮಾನದ ಡಿಲೇ ಗಳು ಸಹಜ ಮತ್ತು ಸುಂದರ. ಯಾಕೆ ತಡವಾಗಿದೆ ಎಂದು ಯಾರಿಗೂ ಸುಳುಹು ಕೊಡದೇ ತಡವಾಗಿದೆ ಎಂದು ಸರಳವಾಗಿ ನಗುತ್ತಾ ಹೇಳುತ್ತಾ ಅಡ್ಡಾಡಿಕೊಂಡಿರುವ ಏರ್ ಫ್ರಾನ್ಸ್ ಅಧಿಕಾರಿಗಳನ್ನು ನೋಡೀ ಅನಿಸಿದ್ದು ಇದು. ಎರಡು ಗಂಟೆ ತಡ ಎಂದು ಹೇಳಿ ನಮ್ಮ ಬ್ಯಾಗೇಜುಗಳ ಮೇಲೆ ಪಟ್ಟಿ ಸುತ್ತಿ ಬಿಸಾಡಿದ ಮೇಲೆ ಕೈಯಲ್ಲಿ ಉಳಿದಿದ್ದು ತಡವಾಗಿದ್ದಕ್ಕೆ ಪರಿಹಾರವಾಗಿ ಕೊಟ್ಟ ಕಾಫಿ ಡೇ ಡ್ರಿಂಕ್ಸು ಮತ್ತು ಒಂದು ಕ್ಯಾಬಿನ್ ಬ್ಯಾಗು. ಒಂದ್ನಾಲ್ಕು ಫೋಟೋ ತೆಗೆದೆ. ಒಂದೆರಡು ಬೋರ್ಡುಗಳನ್ನು ಶ್ರದ್ಧೆಯಿಂದ ಓದಿದೆ. ಸೆಕ್ಯೂರಿಟಿ ಚೆಕ್ ಮುಗಿದ ಮೇಲೆ ಲ್ಯಾಪ್ ಟಾಪ್ ತೆರೆದು ಕೂತೆ. ಹಾಗೂ ಹೀಗೂ ಎರಡು ತಾಸು ಕಳೆಯಿತು. ಏರ್ ಪೋರ್ಟಿನ ಆ ಗೌಜಿ, ಕೂತವರ ತೂಕಡಿಕೆಗಳು, ಕೆಲವರ ಆಕಳಿಕೆಗಳು ಒಂಥರಾ ಆಪ್ತಭಾವವನ್ನುಂಟುಮಾಡಿತ್ತು.ಮುಂದಾಗಲಿರುವ ಯಾವುದೋ ಭಯಂಕರ ಖುಷಿಕೊಡುವ ಸಮಾರಂಭಕ್ಕೆ ತಯಾರಿ ಮಾಡಿದಂತಿತ್ತು.
ಕ್ಯೂದಲ್ಲಿ ಮೊದಲು ಕೈಲಾಗದವರು, ಮುದುಕರು, ಮಕ್ಕಳು, ಕುಟುಂಬ ಸಮೇತ ಆಗಮಿಸಿದವರು ಇವರೆಲ್ಲ ನಿರ್ಗಮನ ದ್ವಾರದಿಂದ ಹೊರಬಿದ್ದ ಮೇಲೆ ನಮ್ಮ ಸರದಿ. ವಿಮಾನದ ಒಳ ಬಿಡುವ ಕೊಳವೆ ಮಾರ್ಗವಾಗಿ ಹೋಗುತ್ತಿರಲು ಬಾಗಿಲಲ್ಲಿ ನಿಂತ ಸಖಿಯರಿಂದ ಆ ನಾಲ್ಕು ಗಂಟೆ ಬೆಳಗಿನಜಾವದಲ್ಲಿ ಗುಡ್ ಮಾರ್ನಿಂಗ್ ಕೇಳಿದಾಗ ನಿದ್ದೆ ಇನ್ನೂ ಜಾಸ್ತಿ ಆದಂತನಿಸಿತು. ಗುಡ್ ನೈಟ್ ಹೇಳಿ ಒಳಹೋಗುವ ಅಂತಿದ್ದ ನಮಗೆ ಗುಡ್ ಮಾರ್ನಿಂಗ್ ಹೇಳುವಂತೆ ಮಾಡಿದ ಆ ಏರ್ ಫ್ರಾನ್ಸಿನ ಸಿಬ್ಬಂದಿಗಳಿಗೆ ನಮಸ್ಕಾರ. ರಾಜಹಂಸ ಬಸ್ಸಿರುತ್ತಲ್ಲ. ಅಂತದ್ದೇ ಸೀಟು. ಜಾಸ್ತಿ ಬಗ್ಗಿಸುವ ಹಾಗೂ ಇಲ್ಲ. ಕಿಡಕಿ ಬದಿ ಸೀಟು ಬೇಕು ಎಂದು ಮೊದಲೇ ಆರಿಸಿದ್ದ ನನಗೆ ಕಿಡಕಿ ಸೈಜ್ ನೋಡಿ ನಿರಾಸೆ ಆಯಿತು. ಆ ರಾತ್ರಿ ಏನೂ ಕಾಣುತ್ತಿರಲಿಲ್ಲ ಎನ್ನುವುದು ಬೇರೆ ಮಾತಾದರೂ ಅಷ್ಟು ದೊಡ್ಡ ವಿಮಾನಕ್ಕೆ ಆ ಸಣ್ಣ ಸಣ್ಣ ಪುಟಾಣಿ ಕಿಡಕಿಗಳು ಇರಬಾರದಿತ್ತು.
ವಿಮಾನ ಹಾರುವಾಗ ಅಲುಗಾಡುತ್ತದೆ ಎಂಬ ವಿಷಯವನ್ನು ನನ್ನ ರೂಮ್ ಮೇಟುಗಳು ಹಲವು ಸಾರಿ ಹೇಳಿದ್ದುದರಿಂದ ಹಾಗೆ ಅಲುಗಾಡಿದಾಗ ಅದು ಹೌದು ಅನ್ನಿಸಿತು. ಯಾವ್ಯಾವುದೋ ಭಾಷೆಯಲ್ಲಿ ಪೈಲಟ್ ಒಂದು ಬಾರಿ, ಗಗನಸಖಿ ಒಂದು ಬಾರಿ ಏನೇನೋ ಹೇಳುತ್ತಿರುವಾಗಲೇ ವಿಮಾನ ಹಾರಿ ಗಗನದಲ್ಲಿತ್ತು. ಹಾಂ.. ಅದಕ್ಕೂ ಮೊದಲು ಗಗನ ಸಖ ಸಖಿಯರು ನಡೆಸಿದ ನಾಟಕದಂತಿದ್ದ ಸುರಕ್ಷಾ ತಾಲೀಮು ಮಜ ಇತ್ತು. ವಿಮಾನ ಮೇಲಿರುವಾಗ ಕಿಟಕಿಯಿಂದಿಣುಕಿದರೆ ಕಾಣುವುದು ಮಿಣುಕು ಲೋಕ. ಭೂಮಿಯಿಂದ ಆಕಾಶ ನೋಡಿದಾಗ ಕಾಣುವ ಹಾಗೆ. ನಕ್ಷತ್ರಗಳೆಲ್ಲಾ ಭೂಮಿಗೆ ಬಿದ್ದ ಹಾಗೆ. ಆ ಬೆಳಕುಗಳಿಗೆ ನಮ್ಮದೇ ಕಲ್ಪನೆಯ ಹೆಸರು ಕೊಡುತ್ತಾ ಆಕಾರ ಕೊಡುತ್ತಾ ಮೇಲೆ ಮೇಲೆ ಹಾರುವುದು ಒಂಥರಾ ಹಿತ. ಎದುರಿಗಿದ್ದ ಟಿ ವಿಯಲ್ಲಿ ಮ್ಯಾಪ್ ನೋಡುತ್ತಾ, ಓಹೋ ಈಗ ಕಾಣುವ ಬೆಳಕು ಆಲಮಟ್ಟಿ ಡ್ಯಾಮಿನದ್ದು, ಈಗ ಕಾಣುವುದು ಗೋವಾ ಚರ್ಚಿನದ್ದು ಎಂದೆಲ್ಲ ಮನಸ್ಸಿಗೆ ಬಂದ ಹಾಗೆ ಅಂದುಕೊಳ್ಳುವುದರಲ್ಲೂ ಸುಖವಿದೆ. ಆ ಆಲೋಚನೆಗಳು ಎಂದಿಗೂ ಸುಳ್ಳಾಗುವುದಿಲ್ಲ. ಯಾರನ್ನಾದರೂ ಕರೆದು ಇದು ಅದೇ ಎಂದರೆ ಅಲ್ಲ ಎಂದು ಹೇಳುವ ಧೈರ್ಯ ಅವರಿಗೂ ಇರುವುದಿಲ್ಲವಲ್ಲ ಅದಕ್ಕೆ. ತತ್ಕಾಲ ಸತ್ಯಗಳು..
ಮದ್ಯ್ಹೆ ಯಾವಗಲೋ ಊಟಕ್ಕೆ ತಂದಿರಬೇಕು ನನಗೆ ಎಚ್ಚರವಿರಲಿಲ್ಲ. ಪಕ್ಕದಲ್ಲಿದ್ದ ಫ್ರೆಂಚ್ ಮಹಿಳೆಯಂತೂ ವಿಮಾನ ಹತ್ತಿದಾಗಿನಿಂದ ಪಂಚೇಂದ್ರಿಯಗಳಿಗೂ ಏನನ್ನೋ ತುರುಕಿ ತನ್ನ ಮತ್ತು ಹೊರ ಜಗತ್ತಿನ ಸಂಪರ್ಕವನ್ನು ಕಡಿದುಕೊಂಡ್ ಗಪ್ಪನೆ ನಿದ್ದೆ ಮಾಡುತ್ತಿದ್ದಳು. ನನಗೆ ಎಚ್ಚರವಾದಾಗ ಎರಡನೇ ಹೊತ್ತಿನ ಊಟ ಬಂದಿತ್ತು. ಬೆಳಕಾಗಿದೆ ಎಂದು ತಿಳಿಯಿತು. ಇನ್ನೇನು ಒಂದೂವರೆ ಗಂಟೆಯಲ್ಲಿ ಫ್ರಾನ್ಸಿನಲ್ಲಿರುತ್ತೇವೆ ಎಂದು ಪೈಲಟ್ ಬಿತ್ತರಿಸಿದ. ಕಿಟಕಿ ತೆರೆದು ಬೆಳ್ಳಿ ಮೋಡಗಳನ್ನು ಕಣ್ನಲ್ಲೇ ನುಂಗುತ್ತಾ ಕುಳಿತೆ. ಎದ್ರುಗಿದ್ದ ಟಿವಿಯಲ್ಲಿ ರವಿಶಂಕರನ ಸಿತಾರಿನ ಒಂದು ಅಲ್ಬಮ್ ಇತ್ತು.. ಕಿವಿಗಿಟ್ಟು ಮತ್ತೆ ತೂಕಡಿಸಿದೆ. ವಿಮಾನ ಫ್ರಾನ್ಸ್ ನಲ್ಲಿ ಇಳಿಯುವಾಗ ವಂಡರ್ ಲಾ ದ ಅನುಭವವಾಯಿತು, ಡುಬಕ್ ಡುಬಕ್ ಎಂದು ಮೋಡಗಳ ಮಧ್ಯೆ ಇಳಿಯುವಾಗ ಎದೆಯಲ್ಲಿ ನಿರ್ವಾತ ಸೃಷ್ಟಿಯಾಗಿತ್ತು. ಅಂತೂ ಇಂತೂ ವಿಮಾನ ನೆಲ ಮುಟ್ಟಿತು. ರನ್ ವೇಯಲ್ಲಿ ಓಡುವಾಗ ಮಂಗಳೂರ ಅಪಘಾತ ಯಾಕೆ ನೆನಪಾಯಿತೋ ಗೊತ್ತಿಲ್ಲ. ಮತ್ತೆ ಬಾಗಿಲಲ್ಲಿ ನಿಂತ ಸಖಿಯೋರ್ವಳು ನಮಸ್ತೇ ಎಂದು ಹಿಂದಿಯಲ್ಲಿ ಹೇಳಿದಾಗ ವಿಮಾನದ ಒಳಗೆ ಹಿಂದಿಯಲ್ಲಿ ಅತ್ಯಂತ ಕೆಟ್ಟದಾದ ಉಚ್ಛಾರಣೆ ಮಾಡಿ ಸೂಚನೆ ಕೊಡುತ್ತಿದ್ದವಳು ಇವಳಲ್ಲ ಎಂಬುದು ಖಾತ್ರಿಯಾಯಿತು. ವಿಮಾನದ ಬಾಗಿಲಿಗೆ ಜೋಡಿಸಿದ್ದ ಏಣಿಯನ್ನು ಇಳಿಯುತ್ತಾ ಮುಂದೆಲ್ಲಪ್ಪಾ ಎಂದು ನೋಡುಷ್ಟರಲ್ಲಿ, ಈಗ ನಾನಿರುವುದು ಫ್ರಾನ್ಸ್ ನಲ್ಲಿ ಎಂಬದು ವರ್ತಮಾನಕಾಲವಾಯಿತು.