' ಹಾಲಿವುಡ್‍ನ ಚಾರಿತ್ರಿಕ ನಟ ಓಮಾರ್ ಶಾರೀಫ್ ಇನ್ನಿಲ್ಲ '

' ಹಾಲಿವುಡ್‍ನ ಚಾರಿತ್ರಿಕ ನಟ ಓಮಾರ್ ಶಾರೀಫ್ ಇನ್ನಿಲ್ಲ '

ಚಿತ್ರ

 

 

     ಇಂದು ಬೇಳಿಗ್ಗೆ ನನ್ನ ಪರಿಚಿತ ಸ್ನೇಹಿತರಾದ ರಮೇಶ ಕಾಮತರು ಫೋನ್ ಮಾಡಿ ಇಂದಿನ ದಿನ ಪತ್ರಿಕೆ ನೋಡಿದಿರಾ ಎಂದು ಕೇಳಿದರು. ಹೌದು ಏನು ವಿಶೇಷ ಎಂದು ಕೇಳಿದೆ. ಹಾಲಿವುಡ್ ನಟ ಓಮಾರ್ ಶಾರೀಫ್ ತೀರಿಕೊಂಡ ಸುದ್ದಿ ಬಂದಿದೆ ಎಂದರು. ಇಲ್ಲ ನಾನು ಗಮನಿಸಿಲ್ಲ ಎಂದೆ. ಒಂದು ಪುಟದಲ್ಲಿ ಸಣ್ಣದಾಗಿ ಸುದ್ದಿ ಪ್ರಕಟಗೊಂಡಿದೆ ಎಂದರು. ತಕ್ಷಣವೆ ಪತ್ರಿಕೆಯ ಪುಟ ತಿರುಗಿಸಿ ನೋಡಿದೆ. ಒಂದು ಸಣ್ಣ ಕಾಲಂನಲ್ಲಿ ಕೆಲ ಸಾಲುಗಳಲ್ಲಿ ಆತನ ನಿಧನದ ಸುದ್ದಿ ಪ್ರಕಟಗೊಂಡಿತ್ತು. ವೇಗದ ಇಂದಿನ ಹೊಸ ಯುಗದಲ್ಲಿ ಅದೊಂದು ಇತಿಹಾಸ ಸೇರಿ ಮರೆತು ಹೋದ ಹೆಸರು ಅದಾಗಿತ್ತು.. ಓಮಾರ್ ಶಾರೀಫ್ ಎಂದ ತಕ್ಷಣ ನನ್ನ ಕಣ್ಮುಂದೆ ಬಂದ ಚಿತ್ರಗಳು ‘ದಿ ಲಾರೆನ್ಸ್ ಆಫ್ ಅರೇಬಿಯಾ, ಡಾ.ಜಿವಾಗೋ, ಚೆಂಗಿಜ್ ಖಾನ್ ಮತ್ತು ಮೆಕನ್ನಾಸ್ ಗೋಲ್ಡ್ ಚಿತ್ರಗಳ ಅಭಿನಯದ ಆತನ ಪಾತ್ರಗಳು. ಅಷ್ಟು ಎತ್ತರವೂ ಅಲ್ಲದ ಅಷ್ಟು ಕುಳ್ಳಗೂ ಅಲ್ಲದ ಮಧ್ಯಮ ಗಾತ್ರದ ಶರೀರ ರೇಶಿಮೆ ನುಣುಪಿನ ಜೊಂಪೆ ಗೂದಲು ಹೊಳೆವ ಕಣ್ಣುಗಳ ಒಂದು ತರಹದ ಆಕರ್ಷಕ ವ್ಯಕ್ತಿತ್ವ ಕಣ್ಣೆದುರು ಬಂದು ನಿಂತಿತು.

     1966 ನೇ ಇಸವಿಯ ಜನೇವರಿ ತಿಂಗಳ 26 ನೇ ತಾರೀಕು ಹುಬ್ಬಳ್ಳಿಯ ಮೋಹನ್ ಟಾಕೀಸ್‍ನಲ್ಲಿ 1962 ರಲ್ಲಿ ತೆರೆ ಕಂಡ ಡೆವಿಡ್ ಲೀನ್ ತಯಾರಿಕೆಯ ಅನೇಕ ಅಕಾಡೆಮಿ ಅವಾರ್ಡಗಳನ್ನು ಬಾಚಿ ಕೊಂಡಿದ್ದ ಅಗ್ಗಳಿಕೆಯ ಅತ್ಯಂತ ಯಶಸ್ವಿ ಚಿತ್ರ ಮರು ಪ್ರದರ್ಶನಕ್ಕೆ ಬಂದಿತ್ತು. ರಜೆಯ ದಿನವಾದ್ದರಿಂದ ಎಲ್ಲ ಥಿಯೆಟರ್‍ಗಳೂ ಹೌಸ್‍ಫುಲ್. ಹದಿನಾರು ವಾರಗಳು ಕಳೆದಿದ್ದರೂ ಕೆಲ ಹಿಂದಿ ಚಿತ್ರಗಳ ಟಿಕೆಟ್‍ಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದವು. ಅವೆಲ್ಲ ನೋಡಿದ ಚಿತ್ರಗಳಾಗಿದ್ದು ದುಬಾರಿ ಬೆಲೆ ತೆತ್ತು ನೋಡುವ ಆಸಕ್ತಿ ಯಾರಿಗೂ ಇರಲಿಲ್ಲ. ಆಗಲೆ ಮಧ್ಯಾನ್ಹದ ಒಂದು ಗಂಟಯ ಸಮಯವನ್ನು ನಮ್ಮ ವಾಚ್‍ಗಳು ತೋರಿಸುತ್ತಿದ್ದವು. ನಿರಾಸೆಯಿಂದ ಕೊಪ್ಪಿಕರ್ ರಸ್ತೆಗುಂಟ ಸಾಗುತ್ತಿದ್ದ ನಮ್ಮ ಗುಂಪಿಗೆ ಮೋಹನ್ ಟಾಕಿಸಿನಲ್ಲಿ ನಡೆಯುತ್ತಿದ್ದ ಮೇಲಿನ ಚಿತ್ರ ನಮ್ಮೆಲ್ಲರ ಗಮನ ಸೆಳೆಯಿತು ಜನ ಸಂದಣಿ ಇರಲಿಲ್ಲ. ರಜೆಯ ದಿನವಾಗಿದ್ದರಿಂದ ಯಾವುದಾದರೂ ಚಿತ್ರ ನೋಡಲೇ ಬೇಕೆಂಬ ಇರಾದೆ ನಮ್ಮ ಅನೇಕ ಸ್ನೇಹಿತರದಾಗಿತ್ತು.

     ಸುಮ್ಮನೆ ಮೋಹನ್ ಟಾಕೀಸು ಹತಿರ ಹೋದೆವು ಮೊದಲ ಶೋ 1 ಗಂಟೆಗೆ ಎಂದು ಪೋಸ್ಟರನಲ್ಲಿ ನಮೂದಿಸಿದ್ದು ಯಾವುದೇ ಒಂದು ಚಿತ್ರ ನೋಡಿದರಾಯಿತು ಎಂಬ ಮನಸ್ಥಿತಿಯಲ್ಲಿದ್ದ ಅನೇಕರ ಆಯ್ಕೆ ದಿ ಲಾರೆನ್ಸ್ ಆಫ್ ಅರೇಬಿಯಾ ಚಿತ್ರ ಆಗಿತ್ತು.. ಆಗಲೆ ಚಿತ್ರ ಮಂದಿರದ ಎಲ್ಲ ಬಾಗಿಲುಗಳು ಮುಚ್ಚುತ್ತಿದ್ದವು. ಎರಡನೆ ದರ್ಜೆಯ ಟಕೆಟ್ ಪಡೆದು ಒಳ ನಡೆದೆವು. ಸಿನೆಮಾದ ಟೈಟಲ್ ಕಾರ್ಡ ಪರದೆಯ ಮೇಲೆ ಚಲಲಿಸುತ್ತಿತ್ತು. ಅರೇಬಿಯಾದ ಮರಳುಗಾಡಿನಲ್ಲಿ ಸೂರ್ಯೋದಯವಾಗುತ್ತಿತ್ತು. ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದ ಮರಳುಗಾಡಿನ ಪರಿಸರ ಮರಳುಗಾಡಿಗೂ ಒಂದು ಸೌಂದರ್ಯವಿದೆ ಎಂಬುದನ್ನು ಡೆವಿಡ್‍ಲೀನ್ ಆ ಚಿತ್ರದ ಮೂಲಕ ತೋರಿಸಿದ್ದ. ಆ ಚಿತ್ರದಲ್ಲಿ ನಾಯಕಿ ಬಿಡಿ ಒಂದು ಹೆಣ್ಣು ಮುಖವೂ ಇರಲಿಲ್ಲ. ನಮಗೆಲ್ಲರಿಗೂ ಒಂದು ವಿಶಿಷ್ಟ ಸುಂದರ ಅನುಭವ ನೀಡಿದ ಬಹು ಕಾಲ ನೆನಪಿನಲ್ಲಿ ಉಳಿದು ಕಾಡಿದ ಇಂದಿಗೂ ಕಾಡುತ್ತಿರುವ ಚಿತ್ರ ಅದಾಗಿತ್ತು. ಅದರಲ್ಲಿ ಗ್ರಗರಿ ಪೆಕ್ ನಾಯಕನ ಪಾತ್ರವಾದರೆ  ಓಮಾರ್ ಶಾರೀಫ್‍ನದು ಸಪೋರ್ಟಿಂಗ್ ಪಾತ್ರವಾಗಿತ್ತು.. ಅದು ಆತನ ಮೊದಲ ಹಾಲಿವುಡ್ ಚಿತ್ರವಾಗಿತ್ತು. ಈ ಚಿತ್ರದ ಆ ರೋಲ್‍ಗಾಗಿ ಡೆವಿಡ್ ಲೀನ್ ಭಾರತಕ್ಕೆ ಬಂದಾಗ ಮೊದಲು ದಿಲೀಪ ಕುಮಾರ್ ನನ್ನು ಸಂಪರ್ಕಿಸಿದ್ದನಂತೆ ಆದರೆ ಆತ ಒಪ್ಪದಿದ್ದಾಗ ಈಜಿಪ್ಸಿಯನ್ ನಟ ಓಮಾರ್‍ಗೆ ಆ ಪಾತ್ರ ದಕ್ಕಿತ್ತು. ಅದನ್ನು ಆತ ಸಮರ್ಥವಾಗಿ ಬಳಸಿಕೊಂಡು ಹೆಸರು ಮಾಡಿದ. ಅದರಲ್ಲಿನ ಅಭಿನಯಕ್ಕಾಗಿ ಆತನಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ನ್ಯೂ ಸ್ಟಾರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಪಡೆದ. ಅದೇ ವರ್ಷ ಆ ಪಾತ್ರಕ್ಕಾಗಿ ಅಕಾಡೆಮಿ ಅವಾರ್ಡಗಾಗಿ ಹೆಸರಿಸಲ್ಪಟ್ಟಿದ್ದು ಆತನ ಹೆಗ್ಗಳಿಕೆಯಾಗಿತ್ತು.

     ಮುಂದೆ 1965 ರಲ್ಲಿ ಅದೇ ಡೆವಿಡ್‍ಲೀನ್ ತಯಾರಿಕೆಯ ಎಂಜಿಎಂ ಲಾಂಛನದಲ್ಲಿ ತಯಾರಾಗಿ ತೆರೆಕಂಡ ಖ್ಯಾತ ರಶಿಯನ್ ಕಾದಂಬರಿಕಾರ ಬೋರಿಸ್ ಪ್ಯಾಸ್ಟರ್‍ನಾಕ್‍ನ ರಶಿಯಾದಲ್ಲಿ ನಿಚೇಧಿಸಲ್ಪಟ್ಟಿದ್ದ ಕೃತಿಯಾಧಾರಿತಚಿತ್ರ ಡಾ.ಜಿವಾಗೊ ಚಿತ್ರದಲ್ಲಿ ಓಮಾರ್‍ನಿಗೆ ನಾಯಕನ ಪಾತ್ರ ಕೊಡಲಾಗಿತ್ತು. ಆತನಿಗೆ ನಾಯಕಿಯಾಗಿ ನಟಿಸಿದವಳು ನೀಲಿಗಂಗಳ ಕೆಂಗೂದಲಿನ ಸುಂದರ ನಟಿ ಜ್ಯೂಲಿ ಕ್ರೈಸ್ತ್ ಎಂಬ ಖ್ಯಾತ ನಟಿ. ಈ ಚಿತ್ರದ ನಾಯಕ ಡಾ.ಯೂರಿ ಜಿವಾಗೋ ಪಾತ್ರದಲ್ಲಿ ನಟಿಸಿದವನೀತ. ಇದು ಕವಿ ಮತ್ತು ವೈದ್ಯನ ಪಾತ್ರವಾಗಿದ್ದು ಅದರಲ್ಲಿ ಸಮರ್ಥ ಅಭಿನಯ ಈತನದಾಗಿತ್ತು..ಸತ್ವಪೂರ್ಣ ಕಥೆ ಸಂಭಾಷಣೆ ಕಾವ್ಯಾತ್ಮವಾದ ಕಥಾ ನಿರೂಪಣೆ ಹಿಮಾಚ್ಛಾದಿತ ಸೈಬೀರಿಯಾದ ಸುಂದರವಾದ ಕಾಡಿನ ದೃಶ್ಯ ಸಂಯೋಜನೆ ಮಾರಿಸ್ ಜಾರ್‍ನ ಸುಮಧುರ ಸಂಗೀತ ಇದೊಂದು ಯಶಸ್ವಿ ಚಿತ್ರವಾಗಿ ಹೆಸರು ಮಾಡಿತ್ತು. ಇದರಲ್ಲಿನ ಅಭಿನಯಕ್ಕಾಗಿ ಓಮಾರ್ ಮತ್ತು ಜ್ಯೂಲಿ ಕ್ರೈಸ್ತ್ ಅತ್ಯುತ್ತಮ ನಟ ಮತ್ತು ನಟಿಯರೆಂದು ಅಕಾಡೆಮಿ ಪ್ರಶಸ್ತಿಗೆ ಹೆಸರಿಸಲ್ಪಟ್ಟಿದ್ದು ಪ್ರಶಸ್ತಿ ಪಡೆದವಳು ಜ್ಯೂಲಿ ಮಾತ್ರ. ಒಟ್ಟು ಹತ್ತು ಅಕಾಡೆಮಿ ಪ್ರಶಸ್ತಿಗಳನ್ನು ಈ ಚಿತ್ರ ಪಡೆಯಿತು. ಆದರೆ ಓಮಾರ್‍ಗೆ ಅಕಾಡೆಮಿ ಪ್ರಶಸ್ತಿ ಕೈತಪ್ಪೊದರೂ ಗೋಲ್ಡನ್ ಗ್ಲೋಬ್ ಆತನ ಆಭಿನಯದ ಸತ್ವವನ್ನು ಗುರುತಿಸಿ ಪ್ರಶಸ್ತಿ ನೀಡಿತು. ಅದೇ ವರ್ಷ ಇನ್ನೊಂದು ಹಾಲಿವುಡ್ ಚಿತ್ರ್ ಚೆಂಗೀಜ್‍ಖಾನ್ ಚಿತ್ರದಲ್ಲಿ ಮಂಗೋಲಿಯಾದ ವೀರ ಸಾಹಸಿ ಆರ್ಭಟದ ಯೋದನೆಂದು ಕರೆಯ;ಪಟ್ಟಿದ್ದ ಚೆಂಗೀಜ್‍ಖಾನ್‍ನ ಪಾತ್ರದಲ್ಲಿ ಅಭಿನಯಿಸಿದ. ಈತನ ಇನ್ನೊಂದು ಯಶಸ್ವಿ ಹಾಲಿವುಡ್ ಚಿತ್ರ 1969 ರಲ್ಲಿ ತೆರೆ ಕಂಡು ಯಶಸ್ಸು ಪಡೆದ ಚಿತ್ರ ಮೆಕನ್ನಾಸ್ ಗೋಲ್ಡ್. ಇದರಲ್ಲಿ ಈತನದು ಖಳನ ಪಾತ್ರವಾಗಿದ್ದರೆ ಗ್ರೆಗರಿ ಪೆಕ್ ನಾಯಕ ನಟನಾಗಿ ಅಭಿನಯಿಸಿದ್ದ. ಇವಲ್ಲದೆ ಈತ ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಿದ.

     ಇಂತಹ ಈ ಬಹು ಪ್ರತಿಭೆಯ ನಟ 10.4.1932 ರಂದು ಇಜಿಪ್ತಿನ ಅಲೆಕ್ಝಾಂಡ್ರಿಯಾದಲ್ಲಿ ಜನಿಸಿದ. ಈತನ ತಂದೆಯ ಹೆಸರು ಜೋಸೇಫ್ ಫಾರೋತ್ ಜಾಹಲ್ ಮೂಲದವನಾಧ ಈತ ಮರ ಮುಟ್ಟುಗಳ ವ್ಯಾಪಾರಿಯಾಗಿ ಇಜಿಪ್ತನಲ್ಲಿ ಇದ್ದ. ಈತನಿಗೆ ಇಜಿಪ್ತ ದೊರೆ ಫಾರೂಖ್ ಜೊತೆಗೆ ಪರಸ್ಪರರ ಮನೆಗಳಿಗೆ ಹೋಗಿ ಬರುವಷ್ಟು ಸ್ನೇಹ ಸಂಬಂಧ ಈ ಎರಡೂ ಕುಟುಂಬಗಳ ಮಧ್ಯೆ ಇತ್ತು. 1952 ರಲ್ಲಿ ದೊರೆ ಸಾಯುವವರೆಗೂ ಈ ನಿಕಟ ಬಾಂಧವ್ಯವಿತ್ತು. ಈತ ಅಲೆಕ್ಝಾಂಡ್ರಿಯಾಧ ವ್ಹಿಕ್ಟೋರಿಯಾ ಕಾಲೇಜಿನಲ್ಲಿ ಮ್ಯಾಥ ಮ್ಯಾಟಿಕ್ಸ್ ಮತ್ತು ಫಿಸಿಕ್ಸ್‍ಗಳಲ್ಲಿ ಪದವಿ ಪಡೆದ. ಗ್ರೀಕ್ ಕೆಥೋಲಿಕ್ ಧರ್ಮದ ಈತ 1955 ರಲ್ಲಿ ಮುಸ್ಲಿಮ್ ಧರ್ಮಕ್ಕೆ ಮತಾಂತರಗೊಂಡ. ಮುಂದೆ ಈತ ಇಜಿಪ್ಸಿಯನ್ ಮೂಲದ ನಟಿ ಫಾತೆಂ ಹಮಾಮ್‍ಳನ್ನು ಪ್ರೀತಿಸಿ ಮದುವೆಯಾದ. ನಟನಾ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಅನೇಕ ಇಜಿಪ್ಸಿಯನ್ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ. ಅನೇಕ ರೊಮ್ಯಾಂಟಿಕ್ ಚಿತ್ರಗಳಲ್ಲಿ ತನ್ನ ಹೆಂಡತಿ ಜೊತೆಗೆ ಇಜಿಪ್ಸಿಯನ್ ಚಿತ್ರಗಳಲ್ಲಿ ಹೆಸರು ಪಡೆದ. ಇವರ ದಾಂಪತ್ಯಕ್ಕೊಂಡು ಗಂಡು ಮಗುವಿದ್ದು ಆತನ ಹೆಸರು ತಾರೆಕ್ ಅಲ್ ಶರೀಫ್. ಈತನ ಹೆಂಡತಿ 1974 ರಲ್ಲಿ ಇಲ್ಲವಾದಳು. ಒಮಾರ್ ಕೊನೆಯ ತನಕ ಈ ತನ್ನ ಮಗನ ಜೊತೆಗೆಯೆ ಇದ್ದದ್ದು ಇಂದಿನ ದಿನಮಾನಗಳಿಗೆ ಹೋಲಿಸಿದ್ದಲ್ಲಿ ಸಂತಸ ಪಡುವಂತಹುದೆ ಎನ್ನಬಹುದು. ಈತನಿಗೆ ಇಂಗ್ಲೀಷ್ ಅಲ್ಲದೆ ಫ್ರೆಂಚ್, ಗ್ರೀಕ್, ಇಟಾಲಿಯನ್, ಸ್ಪ್ಯಾನಿಶ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಪರಿಣಟಿಯಿತ್ತು ಎನ್ನುವುದು ಹೆಮ್ಮೆ ಪಡಬೇಕಾದ ಸಂಗತಿ. ಈತ ಇಜಿಪಿಯನ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ಅಲ್ಲದೆ ಅನೇಕ ಟೆಲಿವಿಜನ್ ಚಿತ್ರಗಳಲ್ಲಿ ಸಹ ನಟಿಸಿ ಹೆಸರು ಮಾಡಿದ. 2015 ನೇ ವರ್ಷ ಆತ ಅಲ್ಜಮೀರ್ ಕಾಯಿಲೆಯಿಂದ ಬಳುತ್ತಿದ್ದು ಆತನ ನೆನಪುಗಳು ಅಸ್ಪಷ್ಟವಾಗಿರುತ್ತಿದ್ದವು. ಈ ದಿನ ತನ್ನ ಸಮಸ್ತ ಬದುಕಿಗೆ ವಿದಾಯ ಹೇಳಿ ಕೈರೋದ ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದ ಮೃತ ಪಟ್ಟಿರುತ್ತಾನೆ. ಆತನ ಅರ್ಥಪೂರ್ಣ ಬದುಕಿಗೊಂದು ವಿದಾಯ ಹೇಳೋಣ.

 

                                                                                  ದಿನಾಂಕ.10.7.2015

ಚಿತ್ರ ಕೃಪೆ :ಅಂತರ್ ಜಾಲ

Rating
No votes yet

Comments

Submitted by partha1059 Mon, 07/13/2015 - 11:08

ನೀವು ಹೇಳಿದ‌ ಚಿತ್ರಗಳಲ್ಲಿ ನಾನು ಮ್ಯಾಕಾನಸ್ ಗೋಲ್ಡ್ ಚಿತ್ರ‌ ನೋಡಿರುವೆ, 'ಯೂ ಮ್ಯಕಾನಾ... ' ಎನ್ನುವ‌ ದ್ವನಿ ಇಂದಿಗೂ ನೆನಪಿನಲ್ಲಿದೆ. ನಾನು ಆತನನ್ನು ಪಾಕಿಸ್ತಾನದ‌ ನಟ‌ ಎಂದು ಭಾವಿಸಿದ್ದೆ, ಅದೇಕೊ ಹಾಗೆ ಓದಿದ‌ ನೆನಪಿತ್ತು.
ಹಳೆಯ‌ ಮುಖಗಳೆಲ್ಲ‌ ಮರೆಯಾಗುತ್ತಿರುವುದು,
ಹೊಸ‌ ಮುಖಗಳು ಆ ಸ್ಥಾನವನ್ನು ತುಂಬದಿರುವುದು ಸ್ವಷ್ಟವಾಗಿ ಗೋಚರಿಸುತ್ತಿದೆ.
ಒಳ್ಳೆಯ‌ ನಟನೊಬ್ಬನ‌ ಅಗಲುವಿಕೆಗಾಗಿ ಮರುಗೋಣ‌
‍ = ಪಾರ್ಥಸಾರಥಿ

Submitted by H A Patil 1 Mon, 07/13/2015 - 20:27

In reply to by partha1059

ಪಾರ್ಥಸಾರಥಿಯವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ನನಗೆ ಸಂತಸ ತಂದಿದೆ,ನೀವು ಆತನನ್ನು ಪಾಕಿಸ್ಥಾನದ ನಟ ಎಂದು ಓದಿದ ನೆನಪು ಎಂದಿದ್ದೀರಿ, ನನಗೂ ಅನೇಕ ಸಲ ಈ ಅನುಭವವಾಗಿದೆ. ನಮ್ಎಮ ವಿದ್ಯಾರ್ಥಿ ಜೀವನದಲ್ಲಿ ನಮ್ಮ ಅಸಕ್ತಿಯ ವಿಷಯಗಳ ಕುರಿತು ಓದಿರುತ್ತೇವೆ ಅವನ್ನು ನಿಜವೆಂದು ಸಹ ನಂಬಿರುತ್ತೇವೆ ಅವನ್ನು ಕೆಲ ಸಲ ನಮ್ಮ ಬರಹಗಳಲ್ಲಿ ದಾಖಲಿಸಿರುತ್ತೆವೆ ಕೂಡ. ಇದರಲ್ಲಿ ನಮ್ಮ ತಪ್ಪೋ ಓದಿದ ವಿಷಯ ತಪ್ಪೋ ಎನ್ನುವ ಗೊಂದಲ ನಮಗುಂಟಾಗುತ್ತದೆ. ನಾನು ಶಶಿಕಪೂರ ಕುರಿತು ಬರೆದಾಗ ಈ ಸಮಸ್ಯೆ ಎದುರಾಯಿತು. ಆತ ಕಪೂರ ಖಾಂದಾನಿನ ಮೊದಲ ಪದವೀದರ ಮತ್ತು ಆತನ ಹೆಂಡತಿ ಜೆನ್ನಿಫರ್ ಅಂಗ್ಲೋ ಇಂಡಿಯನ್‌ ಎಂದು ಓದಿದ ನೆನಪು ನನಗೆ ಇಂದಿಗೂ ಸ್ಪಷ್ಟವಾಗಿದೆ, ಅದರೆ ಅವು ಸರಿ ಅಲ್ಲ ಎಂದು ಸಪಂದಿಗರೊಬ್ಬರು ಬರೆದರು ಅವರ ಅನಿಸಿಕೆ ನಿಜ ಬಲ್ಲವರನ್ನು ಕೇಳಿ ಅವರ ಸಹಾಯದಿಂದ ವಿಕಿಪೀಡಿಯೋ ನೋಡಿ ತಿಳಿದೆ, ಆದರೆ ನಾನು ಓದಿದ್ದು ನಿಜ ಇದನ್ನು ಯಾರಿಗೆ ವಿವರಿಸುವುದು. ವಿಕಿಪೀಡಿಯಾದಲ್ಲಿ ಮಾಹಿತಿಗಳು ಸಿಗುತ್ತವೆ ನಿಜ ಅದರೆ ಅವುಗಳನ್ನು ಆಧರಿಸಿ ಬರೆಯುವುದು ಅಂತರ್ಜಾಲ ಸೌಲಬ್ಯ ಹೊಂದಿರದ ನನ್ನಂತಹವರಿಗೆ ಕಷ್ಟ, ಸಾಹಿತಿ ಕಲಾವಿದರುಗಳ ಬಗೆಗೆ ಬರೆಯುವಾಗ ನಮ್ಮ ವೈಯಕ್ತಿಕ ಅನುಭವಗಳು ಮುಖ್ಯುವಾಗುತ್ತವೆ ಈ ಎಲ್ಲ ಕಾರಣಗಳಿಂದಾಗಿ ನಾನು ಲೇಖನ ಬರಹಗಳನ್ನು ಕಡಿಮೆ ಮಾಡಿದ್ದೆನೆ, ಕಾಮತರು ಓಮಾರ್‌ ಸಾವನಪ್ಪಿದ ವಿಷಯ ತಿಳಿಸಿದಾಗ ಬರೆಯದೆ ಇರಲಾಗಲಿಲ್ಲ ಹೀಗಾಗಿ ಈ ಲೇಖನ ಮೂಡಿ ಬಂತು. ಇನ್ನೂ ಕೆಲ ಮಾಹಿತಿಗಳನ್ನು ಬರೆಯಲು ಇತ್ತು, ನಮ್ಮ ಅನಿಸಿಕೆಗಳ ಮಂಡನೆ ಕೆಲರಿಗೆ ವಿಷಯ ಎಳೆಂದತೆ ಕಂಡು ಬರುತ್ತದೆ ಈ ಎಲ್ಲ ಕಾರಣಗಳಿಂದಾಗಿ ವಿವರಗಳನ್ನು ದಾಖಲಿಸಲಾಗಲಿಲ್ಲ, ನಿಮ್ಮ ಪ್ರತಿಕ್ರಿಯೆ ಇದನ್ನೆಲ್ಲ ಬರೆಯಲು ಪ್ರೇರೇಪಿಸಿತು ಧನ್ಯವಾದಗಳು.

Submitted by swara kamath Mon, 07/13/2015 - 16:20

ಪಾಟೀಲರೆ ನಮಸ್ಕಾರ
ಶೃದ್ದಾಂಜಲಿ ಲೇಖನಕ್ಕೆ ಪೀಟಿಕೆ ನನ್ನ ಹೆಸರಿನಿಂದಲೇ ಶುರು ಹಚ್ಚಕೊಂಡಿದ್ದೀರಿ.:))
ಶೃದ್ದಾಂಜಲಿ ಲೇಖನ ಗಳನ್ನು ಬರೆಯುವುದರಲ್ಲಿ ನೀವು ಯಾವತ್ತು ಮೊದಲಿಗರು ಹಾಗೂ ನಿಮ್ಮ ನೇನಪಿನ ಬುತ್ತಿಯಿಂದ ವಿಚಾರಗಳನ್ನು ಹೆಕ್ಕಿ ಸಂಪದಿಗರಿಗರೊಂದಿಗೆ ಹಂಚಿಕೊಳ್ಳಲಿ ಎಂಬ ಬಯಕೆಯಿಂದ ನಿಮಗೆ ಫೋನಾಯಿಸಿದೆ.
ಹೌದು ನಾನು ಸಹ ಮೆಕಾನಸ್ ಗೋಲ್ಡ ಚಿತ್ರ ನೋಡಿರುವೆ.ಒಬ್ಬ ಶ್ರೇಷ್ಟ ನಟ ಕಣ್ಮರೆಯಾದಗ ಮಾತ್ರವೆ ಅವನ ಬಗ್ಗೆ ಮನಸು ಪದೆ ಪದೇ ಹಿಂಬಾಲಿಸುತ್ತಿರುತ್ತದೆ. ನಟನಿಗೊಂದು ನನ್ನ ಕಡೆಯ ವಿದಾಯ! ವಂದನೆಗಳು.

Submitted by H A Patil 1 Mon, 07/13/2015 - 20:03

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಣೊಡಿದೆ ನನಗೆ ನೀವು ಓಮಾರ್‌ ಶಾರೀಫ್‌ ವಿಷಯ ತಿಳಿಸದೆ ಹೋಗಿದ್ದರೆ ಅದು ನನಗೆ ತಿಳಿಯುತ್ತಲೆ ಇರಲಿಲ್ಲ. ನೀವು ತಿಳಿಸಿದ ನಂತರವೆ ನನಗೆ ಆತ ಗತಿಸಿದ ವಿಷಯ ತಿಳಿದದ್ದು ಆ ಕಾರಣದಿಂದಾಗಿ ನಿಮ್ಮ ಹೆಸರಿನ ಉಲ್ಲೇಖ ಬರಬೇಕಾಯಿತು. ನಿಮ್ಮ ಆಶಯ ನನಗೆ ತಿಳಿಯಿತು. ನೀವು ಬಹಳ ಸಮಯದ ನಂತರ ಸಂಪದಕ್ಕೆ ಮರಳಿದ್ದೀರಿ ಇದು ಸಂತಸದ ವಿಷಯ ದನ್ಯವಾದಗಳು.

Submitted by lpitnal Mon, 07/13/2015 - 19:45

ವಾಹ್ ಪಾಟೀಲ ಸರ್, ಒಮರ್ ಶರೀಫರ ಜೀವಮಾನವನ್ನೆಲ್ಲಾ ಹಿಡಿದಿಡುತ್ತ, ನಮಗೆಲ್ಲ ಅಂದಿನ ಉತ್ತರಕರ್ನಾಟಕದ ಬದುಕಿನ ಝಲಕುಗಳನ್ನೂ ಕೂಡ ನೆನಪಿನ ಕಣ್ಣಿಗೆ ಕಟ್ಟಿಬಿಟ್ಟಿದ್ದು ಬಹು ಮೆಚ್ಚುಗೆಯಾಯಿತು. ಮೋಹನ್ ಮಲ್ಲಿಕಾರ್ಜುನ ಟಾಕೀಸ್ ಗಳು ಈಗ ಇತಿಹಾಸದ ಪಳಿಯುಳಿಕೆಗಳು, ಅಲ್ಲಿ ಅದ್ಯಾವುವೂ ಇಲ್ಲದಿದ್ದರೂ ನಮ್ಮೊಡನೆ ತಳುಕಿ ಹಾಕಿಕೊಂಡ ನೆನಪುಗಳನ್ನು ಕಿತ್ತುಹಾಕಲಾಗದಲ್ಲವೇ ಸರ್, ಹುಬ್ಬಳ್ಳಿಯ ಅಂದಿನ ಖದರುಗಳು, ಅಂದಿನ ಜೀವನ ಶೈಲಿ, ಅಂದಿನ ಜಮಾನಾದ ಯುವಕರ ಲಕ್ಷುರಿ ಎಂದರೆ ಹುಬ್ಬಳ್ಳಿಯ ಐಷಾರಾಮಿ ಥಿಯೇಟರ್ ಗಳಲ್ಲಿ ಸಿನೇಮಾವೊಂದನ್ನು ನೋಡುವುದೆಂದರೆ ಅದು ಜೀವಮಾನವೂ ನೆನಪಿಡುವ ಹೆಗ್ಗಳಿಕೆಯೆ ಸಾಧನೆಯೇ ಎಂದು ತಿಳಿಯುತ್ತಿದ್ದ ಕಾಲಘಟ್ಟ ಅದು.. ಬಹುತೇಕರು ತಾವು ಹುಬ್ಬಳ್ಳಿಯಲ್ಲಿ ಯಾವ ಯಾವ ಸಿನೀಮಾಗಗಳನ್ನು ನೋಡಿರುವುದನ್ನು ಇಂದಿಗೂ ನೆನಪಿಸಿ ಹೇಳುತ್ತಿರುವುದನ್ನು ನಾನೂ ಕೇಳಿ, ನೋಡಿ ಬಲ್ಲೆ. ಡೌನ್ ದಿ ಮೆಮರಿ ಲೇನ್ ಗೆ ಹೋಗುವುದೆಂದರೆ ಎಷ್ಟೊಂದು ಮಜವಲ್ಲವೇ ಸರ್, ಸರಿ,...ಒಮರ್ ಶರೀಫರ ಮೆಕಾನ್ಯಾಸ್ ಗೋಲ್ಡ್ ಮಾತ್ರ ನೋಡಿದ್ದೆ, ಉಳಿದಂತೆ ಕೇಳಿದ್ದೆ. ಆತ್ಮೀಯ ಪಾರ್ಥರು ತಿಳಿದಂತೆ ನಾನೂ ಕೂಡ ಅವನು ಪಾಕಿಸ್ತಾನೀ ಎಂದೇ ನಂಬಿದ್ದೆ. ಬಹಳಷ್ಟು ವಿಷಯಗಳನ್ನು ತಿಳಿಸಿದ್ದೀರಿ ಸರ್, ನಿಮಗೆ ಮೊದಲು ನ್ಯೂಜ್ ಕೊಟ್ಟ ಸಹೃದಯಿ ರಮೇಶ ಕಾಮತ್ ರನ್ನೇ ನೆನೆದು ಲೇಖನ ಪ್ರಾರಂಭಿಸಿದ್ದು ಖುಷಿಯೆನಿಸಿತು. ಅವರೊಳಗೊಬ್ಬ ಅತ್ಯುತ್ತಮ, ಸುತ್ತ ಆಗುಹೋಗುಗಳಿಗೆ ಕಿವಿಯಾಗಿ, ಕಣ್ಣಾಗಿರುವ ಮಾನವೀಯ ಶ್ರೋತೃ ಇದ್ದುದು ಹೀಗೆ ಅನಾವರಣವಾದಂತಾಯಿತು. ತಮಗೆಲ್ಲ ಸಹೃದಯರಿಗೂ, ಪಾಟೀಲ ಸರ್ ತಮಗೂ ಈ ಮೂಲಕ ಮತ್ತೊಮ್ಮೆ ವಂದನೆಗಳು. ನಮಸ್ಕಾರ.

Submitted by H A Patil 1 Mon, 07/13/2015 - 21:06

In reply to by lpitnal

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ಬಹಳ ಸಂತಸವಾಯಿತು ಎಕೆಂದರೆ ನೀವು ಉತ್ತರ ಕರ್ನಾಟಕದ ಬಗೆಗೆ ಹುಬ್ಬಳ್ಳಿಯ ಮೋಹನ ಮತ್ತು ಮಲ್ಲಿಕಾರ್ಜುನ ಟಾಕೀಸುಗಳು ಅಲ್ಲಿನ ಬದುಕಿನ ಕುರಿತು ಸಂತಸದಿಂದ ನೆನಪಿಸಿಕೊಂಡಿರುವುದು ಅತೀವ ಹರುಷ ತಂದಿದೆ ಎಂದು ಹೇಳಿಕೊಳ್ಳುವಲ್ಲಿ ಯಾವುದೆ ಮುಜುಗರವಿಲ್ಲ. ಮಲ್ಲಿಕಾರ್ಜುನ ಮೊದಲ ಸಿನೆಮಾ ಸ್ಕೋಪ್ ಚಿತ್ರಗಳ ಪ್ರದರ್ಶನದ ವ್ಯವಸ್ತೆ ಹೊಂದಿದ ಉತ್ತರ ಕರ್ನಾಟಕದ ಮೊದಲ ಚಿತ್ರ ಮಂದಿರವೆಂದು ಕೇಳಿದ್ದೆ, ಅದು ಮೂರು ಸಲ ಸುದಾರಣೆ ಹೋಂದಿದ್ದರೆ ಮೋಹನ ಎರಡು ಸಲ ನವೀಕರಣ ಗೊಂಡಿತ್ತು. ಮೋಹನ 1960 ರಲ್ಲಿ ನವೀಕರಣಗೊಂಡಾಗ ಮೊಗಲ್‌ ಎ ಅಝಮ್ ಚಿತ್ರ ಅಲ್ಲಿ ಪ್ರದರ್ಶನಗೊಳ್ಳುವ ಬಾಗ್ಯ ಕಂಡಿತ್ತು. ಮಲ್ಲಿಕಾರ್ಜುನ್ ಮೂರನೆ ಸಲ ಏರ್‌ ಕೂಲ್‌ ವ್ಯವಸ್ಥೆಯೊಂದಿಗೆ ನವೀಕರಣ ಗೊಂಡಾಗ ಅಲ್ಲಿ ಚಕ್ರತೀರ್ಥ ಕನ್ನಡ ಚಿತ್ರ ಪ್ರದರ್ಶನ ಕಂಡಿತ್ತು, ನಂತರದಲ್ಲಿ ಬಿ.ಆರ್.ಛೋಪ್ರಾ ಬ್ಯಾನರಿನ ಹಮ್‌ ರಾಝ್ ಪ್ರದರ್ಶನಗೊಂಡಿತ್ತು. ಇನ್ನು ನಾನು ಓಮಾರ್‌ ಡಾ,ಜಿವಾಗೋ ನೋಡಿದ್ದು ಸಹ ಇಂತಹುದೆ ಒಂದು ಸಾರ್ವತ್ರಿಕ ರಜಾ ದಿನದಂದು ಅಜಂತ ಚಿತ್ರ ಮಂದಿರದಲ್ಲಿ, ಎಲ್ಲ ಥಿಎಯೇಟರುಗಳು
ಹೌಸ್‌ಫುಲ್‌ ಜೋಬಿನಲ್ಲಿದ್ದದ್ದು 90 ಪೈಸೆ ಡೆವಿಡ್‌ ಲೀನ್‌ನ ಈ ಚಿತ್ರಕ್ಕೆ ಅಷ್ಟು ಜನಸಂದಣಿ ಇರಲಿಲ್ಲ ಆ ದಿನ ಚಿತ್ರ ನೋಡಲೆ ಬೇಕೆಂಬ ಹಕ್ಕೊತ್ತಾಯ ಅನಿವಾರ್ಯವಾಗಿ ಅಜಂತದೆಡೆಗೆ ಪಯಣ ಥಿಯೆಟರಿನಿಂದ ಹೊರ ಬಂದಾಗ ಒಂದು ಅದ್ಬುತ ಚಿತ್ರ ನೋಡಿ ಬಂದ ಅನುಭವವಾಗಿತ್ತು. ಅದೊಂದು ಅವಿಸ್ಮರಣೀಯ ಚಿತ್ರ ಅವಕಾಶ ದೊರೆತರೆ ಥಿಯೆಟರಿನ ಪರದೆಯ ಮೆಲೆಯೆ ನೋಡಿ, ಧನ್ಯವಾದಗಳು ಸರ್.

Submitted by kavinagaraj Tue, 07/21/2015 - 20:54

ನಮಸ್ತೆ, ಪಾಟೀಲರೇ. ಕಲಾವಿದನ ಜೀವನದ ಸಂಗತಿಗಳನ್ನು ಹುಡುಕಿ ಹೆಕ್ಕಿ ಆತನ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಾ ಶ್ರದ್ಧಾಂಜಲಿ ಅರ್ಪಿಸಿದ ರೀತಿ ಚೆನ್ನಾಗಿದೆ. ಅಗಲಿದ ಕಲಾವಿದನ ಆತ್ಮಕ್ಕೆ ಶಾಂತಿಯಿರಲಿ.

Submitted by H A Patil Wed, 07/22/2015 - 17:34

In reply to by kavinagaraj

ಕವಿ ನಾಗರಾಜರವರಿಗೆ ವಂದನೆಗಳು
ಒಂದು ಸಾಧಾರಣ ಲೇಖನವನ್ನು ಮೆಚ್ಚಿ ಬರೆದಿದ್ದೀರಿ ತಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.