ಹಾಲು-ಹುಡುಗ-ಹಸು ಇತ್ಯಾದಿ..

ಹಾಲು-ಹುಡುಗ-ಹಸು ಇತ್ಯಾದಿ..

"ಒಂದು ಲೋಟ ಹಾಲು,೨ ಖರ್ಜೂರ,ದಿನಾ ಕೊಡಿಯಮ್ಮ, ಮಗನಿಗೆ ಬೇರೆ ಟಾನಿಕ್ ಬೇಕಾಗಿಯೇ ಇಲ್ಲ" ಎಂದು ಡಾಕ್ಟ್ರು ಹೇಳುವಾಗ,ತಾಯಿ ಮತ್ತು ಮಗನ ಮುಖ ಜಿರಳೆ ತಿಂದ ಹಾಗಾಗಿತ್ತು."ಹಾಲು ನೋಡಿದರೆ ನನ್ನ ಮಗನಿಗೆ ವಾಂತಿ ಬರುತ್ತದೆ, ಎಷ್ಟು ಬೆಲೆಯಾದರೂ ಪರವಾಗಿಲ್ಲ ಒಂದು ಒಳ್ಳೆ ಟಾನಿಕ್ ಬರೆದುಕೊಡಿ ಡಾಕ್ಟ್ರೇ" ಎಂದು ಟಾನಿಕ್ ಬರೆಸಿಕೊಂಡು ಹೋದಳಾಕೆ. ಯಾಕೆ ಈಗಿನ ಮಕ್ಕಳು ಹಾಲನ್ನು ಕಂಡಾಗ ಮುಖ ಹುಳ್ಳಗೆ ಮಾಡುತ್ತಾರೆ.
ಹಾಲು ಒಂದು ಪರಿಪೂರ್ಣ ಆಹಾರ.ದೇಹದ ಸವೆದು ಹೋದ ಅಥವಾ ಹಾಳಾದ ಜೀವಕಣಗಳನ್ನು ಸರಿಪಡಿಸುವಲ್ಲಿ ಹಾಲಲ್ಲಿರುವ ಪ್ರೊಟೀನ್ ಇತರ ಪ್ರಾಣಿಜನ್ಯ ಪ್ರೊಟೀನ್ ಗಳಿಗಿಂತ ಶ್ರೇಷ್ಟ. ಹಾಲಲ್ಲಿರುವ ಕೊಬ್ಬು ಸುಲಭದಲ್ಲಿ ಜೀರ್ಣಿಸಲ್ಪಡುತ್ತದೆ. ಸ್ನಾಯು ಹಾಗು ಮೂಳೆಯ ಬೆಳವಣಿಗೆಗೆ ಬೇಕಾದ ಫಾಸ್ಫೇಟ್ ಗಳು ಹಾಲಲ್ಲಿ ಬಹಳವಿದೆ.ಆರೋಗ್ಯವಂತನು ಹಾಲು ಹಾಗು ೨ ಖರ್ಜೂರ ಹಣ್ಣು ಸೇವಿಸಿದಲ್ಲಿ ದೇಹಕ್ಕೆ ದಿನದ ಆವಶ್ಯಕತೆಗನುಸಾರ ಕಬ್ಬಿಣದಂಶವೂ ಸೇರಿಕೊಳ್ಳುವುದು.
ಯಾಕೆ ಇದನ್ನು ತಂದೆ ತಾಯಿ ಮಕ್ಕಳಿಗೆ ವಿವರಿಸಿ ಹೇಳಬಾರದು. ಎಂದೋ ಒಮ್ಮೆ ಮಗು ವಾಂತಿ ಮಾಡಿದನ್ನೇ,ಆಗಾಗ ಹೇಳುತ್ತಿದ್ದರೆ ಮಕ್ಕಳ ತಲೆಯಲ್ಲಿ ತನಗೆ ಹಾಲು ಕುಡಿದರೆ ವಾಂತಿ ಬರುವುದು ಎಂಬ ಯೋಚನೆ ಗಟ್ಟಿ ರಿಜಿಸ್ಟರ್ ಆಗುವುದು. ಮತ್ತೆ ಆ ಮಕ್ಕಳು ಹಾಲು ಕುಡಿಯಲು ಕೇಳುವುದೇ ಇಲ್ಲ.
ಆದರೆ ಕೆಲ ಸಂಶಯಗಳಿವೆ-
ಪ್ಲಾಸ್ಟಿಕ್ ಕವರ್ ನಲ್ಲಿ ಕೊಡುವ ನಂದಿನಿ ಮತ್ತು ಇತರ್‍ಏ ಹಾಲುಗಳಿಗೆ ಪ್ಲಾಸ್ಟಿಕ್ ನ ತೊಂದರೆಗಳಿಲ್ಲವಾ?
ಹಾಲು ಹೆಚ್ಚಾಗಲು ದನಕ್ಕೆ ಹಾರ್ಮೋನ್ ಇಂಜಕ್ಷನ್ ಕೊಡುವರಲ್ಲ? ಅದರ ಪರಿಣಾಮ ಮಕ್ಕಳಿಗೆ ಆಗುವುದಿಲ್ಲವೇ?
ಪೇಟೆಗಳಲ್ಲಿ ಹುಲ್ಲಿಗಿಂತ ಜಾಸ್ತಿ ಪ್ಲಾಸ್ಟಿಕ್ ತಿನ್ನುವ ಹಸುಗಳ ಹಾಲು ಕುಡಿಯಲು ಯೋಗ್ಯವಲ್ಲ ತಾನೆ?
ಏನೇ ಇರಲಿ. ತಾಯ ಹಾಲಿನ ನಂತರ ಮಗುವಿನ ಬೆಳವಣಿಗೆಗೆ ಕಾರಣವಾದ ಆ ಗೋಮಾತೆಗೆ ನನ್ನ ಪ್ರಣಾಮಗಳು.
ಗೋಮಾಂಸಕ್ಕಾಗಿ ಅದನ್ನು ಕೊಲ್ಲುವವರಲ್ಲಿ ನನ್ನ ಒಂದು ವಿನಂತಿ- ಆದಷ್ಟೂ ಅದನ್ನು ನರಳಾಡಿಸದೇ ಕೊಲ್ಲಿ ಪ್ಲೀಸ್

Rating
No votes yet

Comments