ಹಾಲೆಂದರೆ ಹೇಗಿರತ್ತೆ...?

ಹಾಲೆಂದರೆ ಹೇಗಿರತ್ತೆ...?

 

 

ಊರೊಳಗಿನ ಬಸ್ ನಿಲ್ದಾಣದಲ್ಲಿ ಗಂಡ ಹೆಂಡತಿ ಮಗು ಮತ್ತೊಬ್ಬರು ವಯೋವೃದ್ಧರು, ಒಬ್ಬ ಯುವಕ ಮತ್ತು ಒಭ್ಭ ಕುರುಡು ಯುವಕ ಕುಳಿತಿದ್ದರು.
ಮಗು ಜೋರಾಗಿ ಅರಚುತ್ತಿತ್ತು, ತಾಯಿ ಅದಕ್ಕೆ ಹಾಲು ಕುಡಿಸಲು ಪ್ರಯತ್ನಿಸುತ್ತಿದ್ದಳು. ಪಕ್ಕದಲ್ಲಿನ ಅವಳ ಪತಿ ಅವಳನ್ನೂ ಮಗುವನ್ನೂ ಸಂತೈಸಲು ಪ್ರಯತ್ನಿಸುತ್ತಿದ್ದ.
"ಏಕೆ ಮಗು ಅಷ್ಟೊಂದು ಜೋರಾಗಿ ಅಳುತ್ತಿದೆ?" ಕುರುಡು ಯುವಕ ಪಕ್ಕದ ವೃದ್ಧರನ್ನು ಕೇಳಿದ.
"ಮಗುವಿಗೆ ಹಾಲು ಕುಡಿಸುತ್ತಿದ್ದಾರೆ" ಉತ್ತರ ಬಂತು.
"ಹಾಲು ಎಂದರೆ ಏನು?  ಅದು ಹೇಗಿರುತ್ತೆ? " ಕೇಳಿದ ಕುರುಡ ಅಮಾಯಕನಾಗಿ
"ಹಾಲು .... ಬೆಳ್ಳಗಿರುತ್ತೆ" ಎಂದ ಪಕ್ಕದ ಯುವಕ.
"ಅಂದರೆ...?" ಅರ್ಥವಾಗದೇ ಕೇಳಿದ ಕುರುಡ.
"ಬೆಳ್ಳಗೆ ಎಂದರೆ ಗೊತ್ತಿಲ್ವಾ...? ಬಿಳಿ ಮೋಡದ ಹಾಗೆ ... ಹಂಸದ ಹಾಗೆ...? ಎಂದರು ವೃದ್ಧರು.
"ನಾನು ಹುಟ್ಟುಗುರುಡ ಸಾರ್.. ಮರೆತಿರಾ...?   ಸ್ವಲ್ಪ ತಿಳಿಯುವ ಹಾಗೆ ಹೇಳಿ " ಗೋಗೆರೆದ  ಕುರುಡ.
ವೃದ್ಧರ ಗಲಿಬಿಲಿ ಕಂಡು ಯುವಕ  ಕುಳಿತಲ್ಲಿಂದ ಎದ್ದು ಬಂದು ವೃದ್ಧರ ಕೈಯಲ್ಲಿರುವ ಕೋಲನ್ನು ಕುರುಡನ ಕೈಯ್ಯಲ್ಲಿಟ್ಟು ಅವನ ಕೈಯನ್ನು
ಅದರ ಹಿಡಿಕೆಯ ಮೇಲೆ ಆಡಿಸುತ್ತಾ " ನೋಡಿ....    ಹಂಸವೆಂದರೆ ಹೀಗೇ ...  ಇರುತ್ತೆ" ಎಂದ.
ಕೋಲಿನ ಹಿಡಿಯ  ತಿರುವಿನ ಮೇಲೆ ಕೈಯಾಡಿಸುತ್ತಾ ಕುರುಡ

  " ಮತ್ತೆ..... ಇಂತಹದ್ದನ್ನು ಮಗುವಿಗೆ ಕುಡಿಸಿದರೆ ಅದು ಅಳದೇ ಇರುತ್ತಾ...? ಎಂದ ಅಚ್ಚರಿಯಿಂದ

 

 

ಚಿತ್ರ ಕೃಪೆ : ಅಂತರ್ಜಾಲ

Rating
No votes yet

Comments