ಹಾವಿನ ದ್ವೇಷ

ಹಾವಿನ ದ್ವೇಷ

ಹಳ್ಳಿಯಲ್ಲಿ ನಮ್ಮಜ್ಜಿ ಮನೆಯೊಳಗೆ ನಾಗರ ಹಾವು ಬಂದಾಗ ಕೈಮುಗಿದು ‘ ಇಲ್ಲಿ ಯಾಕೆ ಬಂದೆಯಪ್ಪಾ... ನಮ್ಮ ಯಾವುದೇ ತಪ್ಪು ಇದ್ದರೂ ಕ್ಷಮಿಸು.’ ಇತ್ಯಾದಿ ಹೇಳುತ್ತಿದ್ದರು. ಹಾವು ಇವರ ಕೋರಿಕೆಗೆ ಸಮ್ಮತಿಸಿ ಸ್ವಲ್ಪ ಹೊತ್ತು ಹೆಡೆಯಾಡಿಸಿ, ಸುಮ್ಮನೆ ಹೋಗುತ್ತಿತ್ತು.
‘ಹಾವಿಗೆ ಮಾತು ಕೇಳುವುದಿಲ್ಲ.ಅದಕ್ಕೆ ಏನೂ ಅಪಾಯವಿಲ್ಲ ಎಂದು ಗೊತ್ತಾದಾಗ ಸುಮ್ಮನೆ ಹೋಗುವುದು.’ ಎಂದು ಹೇಳಿದರೂ ಒಪ್ಪುತ್ತಿರಲಿಲ್ಲ. ಜತೆಗೆ ತಪ್ಪು ಕಾಣಿಕೆ ಕೊಡಲು ನಮಗೇ ಆದೇಶಿಸುತ್ತಿದ್ದರು.

ಒಬ್ಬರಿಗೆ ಕಣ್ಣಿಲ್ಲ - ಹಿಂದಿನ ತಲೆಮಾರು ಯಾರನ್ನೂ ಕೊಂದಿಲ್ಲ.
ಒಬ್ಬರಿಗೆ ಕಾಲಿಲ್ಲ - ಹಿಂದಿನ ತಲೆಮಾರಿನ ತಪ್ಪಿಲ್ಲ.
ಒಬ್ಬರಿಗೆ ಮಕ್ಕಳಿಲ್ಲ -ಹಿಂದಿನ ತಲೆಮಾರಲ್ಲಿ ಯಾರೋ ಹಾವನ್ನು ಕೊಂದ ಪಾಪ!?

ಮೀನು,ಕುರಿ,ಕೋಳಿಗಿಲ್ಲದ ಶಕ್ತಿ ಹಾವಿಗೆ ಹೇಗೆ ಬಂತು? ಸ್ವಂತ ಅಜ್ಜನ ಹಿಂದಿನ ತಲೆ ಯಾರು ಎಂದು ನಮಗೇ ಗೊತ್ತಿರುವುದಿಲ್ಲ, ತಲೆಮಾರಿನವರೆಗೆ ದ್ವೇಷವನ್ನು
ಮುಂದುವರಿಸಲು ಹಾವಿಗೆ ಹೇಗೆ ಸಾಧ್ಯ.(ಹಾವಿನ ದ್ವೇಷ ಹನ್ನೆರಡು ವರುಷ-ಹಾಡಿಗೆ ವಿಷ್ಣುವರ್ಧನ್ ಸೂಪರ್ ಅಭಿನಯಿಸಿದ್ದರು.)

ಒಂದು ಸಣ್ಣ ಕತೆ ಹೇಳುತ್ತೇನೆ-

ಬಹಳ ಹಿಂದೆ ಒಂದು ಜೋಡಿ, ಮಕ್ಕಳಾಗಲಿಲ್ಲವೆಂದು ಭಟ್ಟರ ಬಳಿ ಬಂದು ಕೇಳಿದರು. ಜೋಡಿ ಜತೆ ಸೇರಲೇ ಇಲ್ಲ. ಮತ್ತೆ ಮಕ್ಕಳೆಲ್ಲಿಂದ ಆಗುವುದು? ಈ ವಿಷಯ ಭಟ್ಟರಿಗೂ ತಿಳಿದಿತ್ತು. ಭಟ್ಟರು ಒಂದು ಉಪಾಯ ಹೂಡಿದರು-
ಪ್ರಸಾದ ನೀಡಿ, ‘ಬೆಳಗ್ಗಿನ ಜಾವ,ಒದ್ದೆ ಬಟ್ಟೆಯಲ್ಲಿ, ತೋಟದ ಕೊನೆಯಲ್ಲಿರುವ ನಾಗರಕಲ್ಲಿಗೆ ದಿನಾ ಹಾಲು ಹಾಕಿ ಬನ್ನಿ’ ಎಂದರು.

ಚುಮುಚುಮು ಚಳಿ.., ಒದ್ದೆ ಬಟ್ಟೆಯಲ್ಲಿರುವ ಹೆಂಡತಿ,
ತೋಟದ ಕೊನೆಯ ಏಕಾಂತ.., ನಾಗರಕಲ್ಲಿನಲ್ಲಿರುವ ಜೋಡಿ ಹಾವುಗಳು ಒಂದಕ್ಕೊಂದು ಸುತ್ತಿರುವ ಚಿತ್ರ..ಇಶ್‌ಶ್..

ಮಕ್ಕಳಾಯಿತು. ಭಟ್ಟರ ಪ್ರಸಾದಕ್ಕೆ ಪ್ರಚಾರ ಸಿಕ್ಕಿತು. ಭಟ್ಟರೂ ಸಿಕ್ಕಿದ ಚಾನ್ಸ್
ಬಿಡಲಿಲ್ಲ. ನಾಗರಕಲ್ಲಿಗೆ ತಾವೇ ಹಾಲು ಹಾಕಲು ಹೊರಟರು. ಅಲ್ಲಿ ಒಂದೆರಡು ಮಂತ್ರ ಉದುರಿಸಿ ಸಂಪಾದನೆ ಹೆಚ್ಚಿಸಿಕೊಂಡರು.

ಅಲ್ಲಾ, ನಾವು ಪಲಾವ್ ತಿಂದ ಹಾಗೆ, ಹಾವನ್ನು ತಿನ್ನುವ ದೇಶದಲ್ಲಿ ಜನಸಂಖ್ಯೆ ಯಾಕೆ ಕಮ್ಮಿಯಾಗಲಿಲ್ಲ?

ಮಕ್ಕಳಾಗದ ‘ತಾಯಿಯ’ ಸಂಕಟ ನನಗೆ ಅರ್ಥವಾಗುವುದು. ಗಂಡ ಹೆಂಡತಿ ಇಬ್ಬರೂ ಒಳ್ಳೆಯ ಡಾಕ್ಟ್ರಿಗೆ ತೋರಿಸಿ, ಮಕ್ಕಳಾಗುವುದು ಸಾಧ್ಯವೇ ಇಲ್ಲ ಎಂದು ಹೇಳಿದರೆ-ಕಲ್ಲಿನಡಿ ಉರುಳುವುದು, ಹಾವಿಗೆ ಹರಿಕೆ ಸಲ್ಲಿಸುವುದು, ಕಲ್ಲಿನ ಮೂರ್ತಿಯನ್ನು ಅಪ್ಪಿಕೊಳ್ಳುವುದು ಮಾಡುವ ಬದಲು ಒಂದು ಅನಾಥಾಲಯದ ಮಗುವನ್ನು ಅಡಾಪ್ಟ್ ಮಾಡಿಕೊಳ್ಳಬಾರದೇ?

ಗಣೇಶ.

Rating
No votes yet