ಹಾವು ಪುರಾಣ!
ಹಾವುಗಳ ಬಗ್ಗೆ ಬರೆಯಬೇಕೆಂದು ಎಷ್ಟೋ ದಿನದಿಂದ ಅಂದುಕೊಳ್ತಿದ್ದೆ.ಸಮಯ ಸಿಗ್ತಾನೆ ಇರಲಿಲ್ಲ.ಇವತ್ತು ಶಶಿಧರ ಹೆಬ್ಬಾರ ಹಾಲಾಡಿ ಇವರ ಹಾವುಗಳ ಪ್ರಕರಣ ಓದಿದ ಮೇಲೆ ಬರೆಯದಿರಲು ಆಗೋದೇ ಇಲ್ಲ ಅನಿಸ್ತು..ಅವರ ಲೇಖನಕ್ಕೆ ಪ್ರತಿಕ್ರಿಯೆ ಬರೆವಾಗ ನೆನಪಾದ ಘಟನೆಗಳು ಒಂದೆರಡಲ್ಲ..ಬರೆಯ ಹೋದೆ..ಆಮೇಲೆ ಅವರ ಲೇಖನಕ್ಕಿಂತ ನನ್ನ ಪ್ರತಿಕ್ರಿಯೆಯೇ ದೊಡ್ಡದಾಗಬಹುದು ಅನ್ನಿಸಿ ಇಲ್ಲಿ ಬರೆಯುತ್ತಿದ್ದೇನೆ :)
ನಮ್ಮ ಹಳ್ಳಿಗಳಲ್ಲಿ ಹಾವಿನ ಬಗ್ಗೆ ಭಯ ಮತ್ತು ಆಸಕ್ತಿ ಸ್ವಲ್ಪ ಕಮ್ಮಿನೇ ಜನರಲ್ಲಿ.ಆದರೆ ನಂಗೆ ಮಾತ್ರ ಇವತ್ತಿಗೂ ಅಷ್ಟೇ ಉತ್ಸಾಹ ಅವುಗಳ ಬಗ್ಗೆ.ಅದರಲ್ಲೂ ನಾಗರಹಾವು ಅಂದ್ರೆ ಸಕತ್ ಖುಷಿ..ಅದು ಮಾಡುವಷ್ಟು ಗೊಂದಲ ,ಖರ್ಚು,ಭಯ ಮತ್ಯಾವ ಹಾವುಗಳು ಮಾಡೋದಿಲ್ಲ.ಅಪರೂಪಕ್ಕೆ ಅವುಗಳು ಕೋಳಿ ಗೂಡಲ್ಲಿರೋ ಮೊಟ್ಟೆ ತಿನ್ನೋಕೆ ಬಂದರೆ ಈ ಅಕ್ಕ ಪಕ್ಕದ ಮನೇಲಿ ಎಲ್ಲ ಹೋ ದೇವ್ರ್ ಹಾವ್ ಬಂತ್ ..ಎಂದು ಪಡುವ ಸಂಭ್ರಮವೋ ಸಂಭ್ರಮ!ನಂತರ ಅದಕ್ಕಿಷ್ಟು ಹಾಲು ಇಟ್ಟು ,ಅಕ್ಕಿ ಚೆಲ್ಲಿ ಕೈ ಮುಗಿಯೋರು !ಆದರೆ ಅದು ಕುಡಿದದ್ದು ನಾ ನೋಡೇ ಇಲ್ಲ.ಪಾಪ !ಅದರ ಹೆದರಿಕೆ ಅದಕ್ಕೆ ಎಲ್ಲಿ ಹೊಡಿತಾರೋ ಅಂತ!ಯಾವ ಹಾವಿಗೂ ಇರದ ಮುಂಡು ಬಾಲ ಇದಕ್ಕೆ ಇರೋದರಿಂದ ಅದರ ನಿಕ್ ನೇಮ್ ಮುಂಡಪ್ಪ.
ಒಂದು ಸಾರಿ ಮಳೆ ಬಂದಾಗ ಗುಡ್ಡದ ಬುಡದ ಮಣ್ಣು ಕೊಚ್ಚಿ ಹೋಗಿ ಒಂದು ಶಿಲೆಯ ಮೇಲೆ ೩ ಹಾವಿದ್ದ ಆಕೃತಿ ಸಿಕ್ಕಿತ್ತು.ಅದೊಂದು ದೊಡ್ಡ ಸುದ್ದಿ ಆಗಿ, ಊರಿನ ಜನರೆಲ್ಲಾ ಸೇರಿ ನಾಗ ಪ್ರತಿಷ್ಠೆ ಮಾಡಿ, ಒಂದು ಬನ ಕಟ್ಟಿಸಿ ಅಬ್ಬಬ್ಬ !ಅದೇ ನಮ್ಮ ಊರಲ್ಲೇ ಒಂದು ಐತಿಹಾಸಿಕ ಸ್ಥಳ ಇದೆ "ಕತ್ತಲೆ ಬಸದಿ" ಅಂತ..ಅಲ್ಲಿ ಹಾಳು ಬಿದ್ದಿರೋ ನೂರಾರು ಶಿಲೆಗಳ ಮೇಲೆ ಇರೋದು ಸಹ ಇಂತಹ ಕೆತ್ತನೆಗಳೇ !ಅಂತಹುದೆಲ್ಲ ಈಗ ಯಾರ್ಯಾರ ಮನೆಯಲ್ಲಿ ಬಟ್ಟೆ ಒಗೆಯೋ ಕಲ್ಲುಗಳಾಗಿವೆಯೋ , ಮನೆ ಸುತ್ತಲಿನ ಬೇಲಿಗಳಾಗಿವೆಯೋ!ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳೋದಿಲ್ಲ ಬಿಡಿ ನಮ್ಮ ಜನ!ಸರಿ, ನಾನು ಮತ್ತೆ ನನ್ನ ಗೆಳತಿ ಒಬ್ಬಳಿದ್ದಳು. ನಾವಿಬ್ಬರೂ ಸೇರಿ ಅಂತಹುದೇ ಒಂದು ಕಲ್ಲನ್ನು ತಂದು ಮನೆ ಪಕ್ಕದ ನಾಗಬನದ ಕಲ್ಲುಗಳ ಮಧ್ಯೆ ಇಟ್ಟೆವು..ಅದಕ್ಕೆ ಈಗಲೂ ಉಳಿದೆಲ್ಲ ನಾಗ ಕಲ್ಲುಗಳ ಜೊತೆ ಪೂಜೆ ನಡೆಯುತ್ತೆ .ಜನ ಮರುಳೋ ಜಾತ್ರೆ ಮರುಳೋ ಇನ್ನೂ ತಿಳಿದಿಲ್ಲ :)
ನೆನೆಸಿಕೊಂಡಾಗಲೆಲ್ಲ ಎಂಥಹ ಪರಿಸ್ಥಿತಿಯಲ್ಲೂ ನಗು ಬರೋ ಪ್ರಸಂಗ ಒಂದಿದೆ.ನಮ್ಮ ಊರಲ್ಲಿ ಒಬ್ಬ ಅರೆ ಹುಚ್ಚ ಇದ್ದ ಕೃಷ್ಣ ಅಂತ!ಅವನಿಗೆ ಹಾವುಗಳ ಬಗ್ಗೆ ಸ್ವಲ್ಪವೂ ಭಯ ಇದ್ದಿರಲಿಲ್ಲ .ಯಾವಾಗಲೂ ತನ್ನ ಹೆಗಲಿನಲ್ಲಿದ್ದ ಜೋಳಿಗೆಯನ್ನು ತೋರಿಸಿ ಇದರಲ್ಲಿ ಹಾವಿದೆ ಗೊತ್ತಾ? ಅಂತಾ ಇದ್ದ. ಅದೇ ಕಾರಣಕ್ಕೆ ನಾನು ಅವನ ಅಭಿಮಾನಿ ಆಗಿದ್ದೆ.ಎದುರಿಗೆ ಸಿಕ್ಕಾಗಲೆಲ್ಲ ಪುಟ್ಟೀ ಈ ಹಾವು ಮಕ್ಕಳಿಗೆ ಕಚ್ಚೋದಿಲ್ಲ ಕೆಟ್ಟವರಿಗೆ ಮಾತ್ರ ಕಚ್ಚುತ್ತೆ ಗೊತ್ತಾ ಅಂತಿದ್ದ.ಅವನ ಕೈ ಮೇಲೊಂದು ಗರುಡನ ಹಚ್ಚೆ ಹಾಕಿಸ್ಕೊಂಡಿದ್ದ,ಏನೂ ಮಾಡದ ಹಸಿರು ಹಾವನ್ನು ಈಶ್ವರನ ರೀತಿ ಕುತ್ತಿಗೆಗೆ ಸುತ್ತಿಕೊಂಡೇ ,ಅವನ ನಿಲ್ಲದ ಹಾಡು "ಹಾವಿನ ಧ್ದ್ವೇಷ ,ಹನ್ನೆರಡು ವರುಷ, ನನ್ನ ರೋಷ ನೂರು ವರುಷ.....
ನಮ್ಮ ಮನೆ ಹಿಂದೆ ಇದ್ದ ಕಾಡಿನ ಮಧ್ಯಕ್ಕೊಂದು ದೊಡ್ಡ ಹಾಳು ಬಾವಿ ಇದೆ ..ಮೊದಲ್ಯಾರೋ ಬಾವಿ ತೊಡಿಸ ಹೋಗಿ ಕೆಳಗೆ ಅರೆಗಲ್ಲು ಸಿಕ್ಕಿ ,ಅದನ್ನು ಅಲ್ಲಿಗೇ ಬಿಟ್ಟಿದ್ದರು.ಮಳೆಗಾಲ ಆಗಿದ್ದರಿಂದ ಸ್ವಲ್ಪ ನೀರು ಇದ್ದಿತ್ತು ಅದರಲ್ಲಿ.ನಾವೆಲ್ಲಾ ದಿನವೂ ಸುಮ್ಮನೆ ಇಣುಕಿ ನೋಡುತ್ತಿದ್ದೆವು.ಒಂದಿನ ನೋಡೋವಾಗ ದೊಡ್ಡ ನಾಗರ ಹಾವು ಅದರೊಳಗೆ ಇದ್ದಿತ್ತು.ಅದು ಅಲ್ಲಿಗೆ ಹ್ಯಾಗೆ ಹೋಗಿರಬಹುದೋ ನಮಗಂತೂ ತಿಳಿಲಿಲ್ಲ .ಸರಿ ಹೋದ ಹಾಗೆ ವಾಪಸ್ ಬರಬಹುದು ಅಂತ ಸುಮ್ಮನಾಗಿದ್ವಿ.೨ ದಿನ ಆದರೂ ಹಾಗೇ ಇತ್ತು ಮೂರನೇ ದಿನ ನಮಗೆಲ್ಲ ಬೇಸರವೆನಿಸಿತು ಪಾಪ ತಿನ್ನೋಕು ಸಹ ಸಿಗೋದಿಲ್ಲ ಅಂತ.ಸಮಯಕ್ಕೆ ಸರಿಯಾಗಿ ಕೃಷ್ಣ ಬಂದ....ನೋಡಿ, ನಾನದನ್ನು ಕಾಪಾಡ್ತೀನಿ ಅಂತ ಬಾವಿ ಸಂದಿಯಲ್ಲಿದ್ದ ಕುರುಚಲುಗಳನ್ನು ಹಿಡಿದುಕೊಂಡು ಕೆಳಗೆ ಹೋದ.ನಾವು ಬೇಡ ಅನ್ನಲೂ ಇಲ್ಲ, ನಮಗೆಲ್ಲ ತಮಾಷೆ !ಮನೆಗೆ ಹೋಗಿ ಒಂದು ಉದ್ದದ ಒರೆ ಕೋರೆ ಕೋಲುಗಳನ್ನು ತಂದು ನಾವೆಲ್ಲಾ ಒಂದಕ್ಕೊಂದು ಸೇರಿಸಿ ಕಟ್ಟುತ್ತಿದ್ದೆವು..ಅವನು ಸೀದಾ ಹೋಗಿ ಒಂಚೂರು ಭಯಪಡದೆ ಅದರ ಜೊತೆ ಮಾತಾಡ್ತಿದ್ದ..ಯಾಕೆ ಇಲ್ಲಿಗೆ ಬಂದೆ ? ಮನೆಯವರ ಜೊತೆ ಜಗಳ ಆಡಿದ್ಯ ಅಂತ !ಕೃಷ್ಣ ಅದಕ್ಕೆ ಕಿವಿ ಕೇಳೋದಿಲ್ಲ ಮಾರಾಯ ಅಂತ ನಾವು ಕೂಗಿದರೂ ಅವನದು ಅದೇ ಹುಚ್ಚುತನ.ಪಾಪ ಆ ಹಾವು ಮೊದಲೇ ಹೆದರಿಕೊಂಡಿತ್ತು..ಇವನ ಅಭಿನಯ ಕಂಡುಒಮ್ಮೆಲೇ ಹೆಡೆ ಅರಳಿಸಿಬಿಟ್ಟಿತು..ಇವನು ಒಮ್ಮೆಲೇ ಹಾಡು ಹಾಡಲು ಶುರು 'ನಾಗರ ಹಾವೇ ಹಾವೊಳು ಹೂವೆ, ಬಾಗಿಲ ಬಿಲದಲಿ ನಿನ್ನಯ ಸೇವೆ...ನಾವೆಲ್ಲ ಬಿದ್ದು ಬಿದ್ದು ನಗುತ್ತಿದ್ದೆವು.ಆಗ ಮೊದಲೇ ಹೆದರಿಕೊಂಡಿದ್ದ ಹಾವಿಗೆ ಇವ ಕೈ ಮುಗಿಯೋದು ನೋಡಿ ಏನನ್ನಿಸಿತೋ ಕೈಗೆ ಕಚ್ಚಿಬಿಟ್ಟಿತು.ಮತ್ತೆ ಯಾರಾಗಿದ್ದರೂ ವಿಷ ಏರುವ ಮೊದಲೇ ಭಯ ಏರಿ ಸಾಯ್ತಿದ್ದರು..ನಮ್ಮ ಹೀರೋ ಮಾತ್ರ ಹೇಗೆ ಇಳಿದನೋ ಹಾಗೆ ಹತ್ತಿ ಬಂದು ಮಾತೇ ಆಡದೆ ಕುಣಿಯುತ್ತಾ ಹೋಗಿಬಿಟ್ಟಿದ್ದ.
ಅವನು ಪದೇ ಪದೇ ಹೇಳೋದು,ಮುಳ್ಳು ಗುಡ್ಡೆಯ ನಾಗಬನದಲ್ಲಿ ನಾಗಮಣಿ ಇದೆ ಅಂತ !ಯಾವ ಹಾವು ಯಾರಿಗೂ ಒಂದೇ ಒಂದು ಸಲವೂ ಕಚ್ಚದೆ ಹುತ್ತದ ಒಳಗೆ ಸಾವಿರಾರು ವರ್ಷ ಮಲಗಿ ಒಂದಿನ ವಿಷವನ್ನು ಕಕ್ಕಿ ಅದೇ ವಿಷ ನಾಗ ಮಣಿ ಆಗುತ್ತಂತೆ!ಆ ಮಣಿ ಆ ಹುತ್ತದಲ್ಲಿದೆ ಅಂತ ..ಕೇಳಲು ತುಂಬಾ ಸೊಗಸಾಗಿತ್ತು ಅವನ ಮಾತು,ಹಾವಿನ ಪೊರೆಗಳ ಸಂಗ್ರಹವೇ ಇತ್ತು ಅವನ ಬಳಿ!ಒಂದು ಕಾಲದಲ್ಲಿ ಸರ್ಪ ಶಾಸ್ತ್ರಜ್ಞ ಆಗಿರಬಹುದಾ ಅಂತ ನಂಗೆ ಅನುಮಾನ !ಅವನ ಹತ್ತಿರ ಒಂದು ಬೆಣಚುಕಲ್ಲು ಇತ್ತು..ಅದನ್ನು ಹಾವಿನ ಕಡಿತದ ಮೇಲೆ ಇಟ್ಟರೆ ವಿಷ ಹೀರುತ್ತದೆಯಂತೆ.ನಿಜವಾಗಿರಬಹುದು ಯಾರಿಗ್ಗೊತ್ತು .. (ಅವನು ನಮ್ಮ ಜೊತೆ ಮಾತಾಡಿದ ಇದೇ ಹೋಲಿಕೆಗಳ ವಿಷಯಗಳನ್ನು ನಾನು ಸರಿ ಸುಮಾರು ೬ ವರ್ಷಗಳ ,ನಂತರ ರವಿ ಬೆಳಗರೆಯ ಸರ್ಪ ಸಂಬಂಧದಲ್ಲಿ ಓದಿದ್ದೆ ಸ್ವಲ್ಪ ಬದಲಾವಣೆಯೊಂದಿಗೆ,ಅಂದರೆ ವೈಜ್ಞಾನಿಕ ಹಿನ್ನಲೆಯೊಂದಿಗೆ).ಆದ್ರೆ ಮಕ್ಕಳ ವಿನಃ ಅವನ ಬಳಿ ಮತ್ಯಾರೂ ಹೋಗ್ತಾನೆ ಇರಲಿಲ್ಲ!ಹುಣ್ಣಿಮೆ ದಿನ ನೀಲಾವರ(ಊರಿನ ಹೆಸರು)ಕ್ಕೆ ಹೋಗ್ತೀನಿ,ಅಂದಿದ್ದ ನಾವ್ಯಾರೂ ಅವನನ್ನು ಮತ್ತೆ ನೋಡಿರಲೇ ಇಲ್ಲ.
ಹಾವೆಂದರೆ ಮತ್ತೆ ನೆನಪಾಗೋದು ನಂಗೆ ಬೆಕ್ಕು. ನಮ್ಮ ಮನೆಯಲ್ಲೊಂದು ಬೆಕ್ಕಿತ್ತು.ಅದಕ್ಕೆ ಎಲ್ಲಿಂದಾದರೂ ಹಾವೋ, ಕಪ್ಪೆ ಮರಿಯೋ ಇಲ್ಲ ಒತಿಕ್ಯಾತಗಳನ್ನೋ ಹಿಡಿಯುವ ಅಭ್ಯಾಸ.ತಿನ್ನೋದಕ್ಕಲ್ಲ, ಬರೀ ಅವುಗಳನ್ನು ಕಚ್ಚಿ ಅರೆಜೀವ ಮಾಡಿ ಅವುಗಳು ನೋವಿನಿಂದ ಸ್ವಲ್ಪ ಹರಿದಾಡಿದರೂ ಮತ್ತೆ ಚಂಗನೆ ಅವುಗಳ ಮೇಲೆ ನೆಗೆದು ಆಡುವ ಆ ಪರಿಯನ್ನು ನಾ ಹ್ಯಾಗೆ ವರ್ಣಿಸಲಿ !ಎಲ್ಲಿಂದಲೋ ಹಿಡಿದು ತಂದು ಮನೆಯ ಅಂಗಳದಲ್ಲೋ ಇಲ್ಲ ಮನೆ ಹಿಂದಿನ ಹುಲ್ಲಿನ ಮಂದೆಯಲ್ಲೋ ಹೀಗೆ ಆಡಿ ಆಮೇಲೆ ಅವುಗಳು ಅಲ್ಲಾಡಲು ಅಸಮರ್ಥ ವಾದ ಮೇಲೆ ಅದನ್ನು ಅಲ್ಲಿಯೇ ಬಿಟ್ಟು ಮನೆಯೊಳಗೆ ಬರ್ತಿತ್ತು .ಬೆಕ್ಕಿನ ಎಂಜಲು ಅಮೃತ ಅಂತೆ !ಇದ್ದರೂ ಇರಬಹುದು ,ನಮ್ಮ ದೊಡ್ದಮ್ಮನಂತೂ ಅದನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ .ಪಾಪ ಅವರಿಗೆ ದಿನವೂ ಮನೆಯ ಸುತ್ತ ಮುತ್ತಲಿನಲ್ಲಿ ಬಿದ್ದಿರುತ್ತಿದ್ದ ಈ ಪ್ರಾಣಿಗಳ ಹೆಣವನ್ನು ಬಿಸಾಕೋದೇ ದೊಡ್ಡ ಕೆಲಸವಾಗಿತ್ತು..ಹಾಗೇ ಬಿಟ್ಟರೆ ಕೆಟ್ಟ ವಾಸನೆ ಬೇರೆ! ಅಂತೂ ಒಂದು ದಿನ ನಾನು ಇಲ್ಲದ ಸಮಯ ನೋಡಿ ನನ್ನ ಬೆಕ್ಕನ್ನು ಎಲ್ಲೋ ದೂರ ಬಿಟ್ಟು ಬರಲು ಗದ್ದೆ ಕೆಲಸದವರಿಗೆ ಹೇಳಿದ್ದರು.ಇಲ್ಲದಿದ್ದರೆ ಒಂದು ದಿನ ಖಂಡಿತವಾಗಲು ಸರ್ಪ ಸಂಸ್ಕಾರದ ಭಾಗ್ಯ(?) ಸಿಗುತಿತ್ತು !ನಂತರ ನಮ್ಮ ಮನೆಗೆ ಬಂ(ತಂ)ದ ಬೆಕ್ಕು , ಇಡೀ ಬೆಕ್ಕಿನ ಜಾತಿಗೆ ಅವಮಾನ!ಎದುರಲ್ಲಿ ಹಾವು ಹರಿದರೂ ಅಷ್ಟೇ ,ಹೆಗ್ಗಣ ಓಡಿದರೂ ಅಷ್ಟೇ !ಮಹಾನ್ ನಿರ್ಲಿಪ್ತ! ಅಡಿಗೆಮನೆ ಮತ್ತು ಅಲ್ಲಿರುವ ಹಾಲು ಬಿಟ್ಟರೆ ಮತ್ತೊಂದು ವಿಷ್ಯ ಗೊತ್ತಿರಲಿಲ್ಲ ಅದಕ್ಕೆ!
ಈ ಒಂದೊಂದು ಹಾವುಗಳು ಮತ್ತು ಅವುಗಳ ವಿಷದ ಸಾಮರ್ಥ್ಯದ ಹಿಂದಿರುವ ಒಂದೊಂದು ಕಥೆಯೂ ಅಧ್ಬುತ ,ನಾಗರ ಹಾವು,ಕನ್ನಡಿ ಹಾವು ,ಕಡಂಬಳ್ಕ ಹಾವು, ತೌಡ್ ಹಪ್ಪಳ್ಕ,ಪಟ್ಟೆ ಹಾವು, ಮರ ಹಾವು,ಕೆರೆ ಹಾವು, ಒಳ್ಲೆ ಹಾವು,ಹಸಿರು ಹಾವು,ಹೈನ್ಸರ ಹಾವು,ಜಡೆ ಹಾವು, ಒಂದಾ.. ಎರಡಾ..ಸೊಳ್ಳೆ,ಕ್ರಿಮಿ ಕೀಟಕ್ಕೊಸ್ಕರ ನೆಗೆದಾಡುವ ಕಪ್ಪೆಗಳು, ಆ ಕಪ್ಪೆಗಳಿಗಾಗಿ ಹೊಂಚು ಹಾಕೋ ಹಾವುಗಳು ,ಆ ಹಾವುಗಳನ್ನು ಎತ್ತಿಕೊಂಡು ಹೋಗೋ ಹದ್ದುಗಳು...ಈಗಿನ ಮಕ್ಕಳು ಪುಸ್ತಕದಲ್ಲಷ್ಟೇ ನೋಡಬೇಕು ಅಥವಾ ಮೃಗಾಲಯದಲ್ಲಿ ಅಷ್ಟೇ.ಅಳಿಯುತ್ತಿರುವ ಸಂತತಿಗಳಲ್ಲಿ ಈ ಸರೀಸೃಪಗಳೂ ಸೇರಿ ಕಾಲಕ್ರಮೇಣ ಹಾವುಗಳು ಮತ್ತು ಹಾವಿನ ಹುತ್ತಗಳು ಚಿತ್ರದಲ್ಲಷ್ಟೇ ಸಿಗಬಹುದು !
Comments
ಉ: ಹಾವು ಪುರಾಣ!
In reply to ಉ: ಹಾವು ಪುರಾಣ! by vivekrp
ಉ: ಹಾವು ಪುರಾಣ!
ಉ: ಹಾವು ಪುರಾಣ!
In reply to ಉ: ಹಾವು ಪುರಾಣ! by asuhegde
ಉ: ಹಾವು ಪುರಾಣ!
ಉ: ಹಾವು ಪುರಾಣ!
In reply to ಉ: ಹಾವು ಪುರಾಣ! by sasi.hebbar
ಉ: ಹಾವು ಪುರಾಣ!
In reply to ಉ: ಹಾವು ಪುರಾಣ! by vani shetty
ಉ: ಹಾವು ಪುರಾಣ!