ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳಗಳು ಏಕೆ?
ಹಿಂದೂ ಭಾರತದ ಧಾರ್ಮಿಕ ಸಂಪ್ರದಾಯಗಳನ್ನು ತುಚ್ಛೀಕರಿಸಲಾಗುತ್ತಿದೆ
೨೦೦೯ನೇ ಇಸವಿಯ ಮಧ್ಯಭಾಗದಲ್ಲಿ, ಅಮೇರಿಕದ ಉದ್ಯಮಿ ಬಿಲ್ ಗೇಟ್ಸ್ ಅವರ ಸಮಾಜ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ ಅವರಿಗೆ ಶ್ರೀಮತಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡುವ ಸಂದರ್ಭದಲ್ಲಿ ಭಾರತದ ಪ್ರಮುಖ ರಾಜಕೀಯ ಪಕ್ಷವೊಂದರ ಅಧ್ಯಕ್ಷರು ಮಾತನಾಡುತ್ತಾ, "ನಮ್ಮ ದೇಶದಲ್ಲಿ ಬಹು ಹಿಂದಿನಿಂದಲೂ ಸಮಾಜ ಸೇವೆ ಮಾಡುವ ಪರಿಪಾಟವಿದೆ ಆದರೆ ಅದು ಪ್ರಮಾಣಬದ್ಧವಾಗಿಲ್ಲ" ಎಂದು ನುಡಿದರು. ಎರಡು ದಿನಗಳ ನಂತರ ಅಮೇರಿಕದ ವಾಲ್ ಸ್ಟ್ರೀಟ್ ಜರ್ನಲ್ ಹೀಗೆಯೇ ಅಪರೂಪಕ್ಕೆನ್ನುವಂತೆ ತನ್ನ ಪತ್ರಿಕೆಯಲ್ಲಿ ಈ ರಾಜಕೀಯ ನಾಯಕರ ಸಂಪೂರ್ಣ ಭಾಷಣವನ್ನು ಮುದ್ರಿಸಿತು. ಇದಾದ ಮತ್ತೆರಡು ದಿನಗಳ ನಂತರ ವಾಲ್ ಸ್ಟ್ರೀಟ್ ಜರ್ನಲ್ಲಿನ ಅಂಕಣ ಬರಹಗಾರರಲ್ಲೊಬ್ಬನಾದ ಪಾಲ್ ಬೆಕೆಟ್ ಭಾರತೀಯ ಉದ್ಯಮಿಗಳು ಬಿಲ್ಗೇಟ್ಸ್ನ ಸಮೀಪಕ್ಕೂ ಬರಲಾರರೆಂದು ಅವಹೇಳನಕಾರಿಯಾಗಿ ಬರೆಯುವುದಲ್ಲದೇ, "ಭಾರತದ ಶ್ರೀಮಂತರೇ ನಿಮ್ಮ ಥೈಲಿಗಳನ್ನು ಬಿಚ್ಚಿ" ಎನ್ನುವ ನೀತಿ ಬೋಧೆಯನ್ನೂ ಮಾಡಿದ. ಭಾರತದ ಬಗ್ಗೆ ಏನೇನೂ ಅರಿಯದ ಮತ್ತು ಭಾರತೀಯ ಸಮಾಜ ಸೇವಾ ಪರಂಪರೆಯನ್ನು ಕೀಳಾಗಿಸಿದ ಆ ರಾಜಕೀಯ ಮುಖಂಡನ ಪುಣ್ಯದಿಂದಾಗಿ ಬೆಕೆಟ್ ಭಾರತೀಯ ಉದ್ಯಮಪತಿಗಳನ್ನು ಅಡ್ಡವಿಟ್ಟುಕೊಂಡು ಭಾರತದ ಪ್ರತಿಷ್ಠೆಗೇ ಮಸಿ ಬಳಿಯಲು ಈ ಸಂದರ್ಭವನ್ನು ಉಪಯೋಗಿಸಿಕೊಂಡ.
ಆ ರಾಜಕೀಯ ನಾಯಕನಿಗಾಗಲೀ ಅಥವಾ ಅವನಿಂದ ಮಾಹಿತಿಯನ್ನು ಎರವಲು ಪಡೆದ ಬೆಕಟ್ಗಾಗಲೀ ಭಾರತ ಮತ್ತು ಅಮೇರಿಕವನ್ನು ಯಾವುದು ಪ್ರತ್ಯೇಕಿಸುತ್ತದೆ ಎನ್ನುವ ತಿಳುವಳಿಕೆಯು ಖಂಡಿತವಾಗಿಯೂ ಇಲ್ಲ. ಅಮೇರಿಕದಲ್ಲಿನ ಬೃಹತ್ ಉದ್ಯಮಗಳು ಬಹುತೇಕ ಅಮೇರಿಕವನ್ನೇ ಬರಿದಾಗಿಸುತ್ತವೆ, ಎಷ್ಟರಮಟ್ಟಿಗೆಂದರೆ ಅಮೇರಿಕಾ ಸಂಯುಕ್ತ ಸಂಸ್ಥಾನದ GDPಯ ಶೇಖಡ ೮೦%ರಷ್ಟನ್ನು ಅದರ ಬೃಹತ್ ಉದ್ಯಮಗಳೇ ಆಕ್ರಮಿಸಿವೆ. ಅದಕ್ಕೇ ಅಮೇರಿಕದ ಮಾಜಿ ರಾಷ್ಟ್ರಾಧ್ಯಕ್ಷ ಬಿಲ್ ಕ್ಲಿಂಟನ್ ವ್ಯಂಗವಾಗಿ ಅಮೇರಿಕದ ಸಂಯುಕ್ತ ಸಂಸ್ಥಾನವನ್ನೇ, ’ಅಮೇರಿಕ ಕಂಪನಿ ನಿಯಮಿತ’ ಎನ್ನುವ ಅನ್ವರ್ಥ ನಾಮದಿಂದ ಕರೆದಿದ್ದು; ಅಮೇರಿಕವು ಅಲ್ಲಿನ ಉದ್ಯಮಗಳ ಒಕ್ಕೂಟವಾಗಿದೆ ಎನ್ನುವ ಅರ್ಥದಲ್ಲಿ. ಆದ್ದರಿಂದ ಅಮೇರಿಕದ ಕಂಪನಿಗಳು ಮತ್ತು ಅಲ್ಲಿನ ಧಾರ್ಮಿಕ ದತ್ತಿಗಳು ಬೃಹತ್ತಾಗಿ ಕಾಣಿಸುತ್ತವೆ. ಉದಾಹರಣೆಗೆ, ಕೋಕ-ಕೋಲಾ, ಮೆಕ್ ಡೊನಾಲ್ಡ್ಸ್, ಮಿಕಿ ಮೌಸ್ ಮೊದಲಾದವು. ಮಾರುಕಟ್ಟೆಯಲ್ಲಿ ಅಮೇರಿಕದ ಕಂಪನಿಗಳ ಮೂಲ ಬಂಡವಾಳ ಹೂಡಿಕೆಯು ಭಾರತದ ಕಂಪನಿಗಳಿಂತಲೂ ೪೦ ಪಟ್ಟು ಅಧಿಕವಾಗಿದೆ ಹಾಗಾಗಿ ಭಾರತದ ಉದ್ಯಮಗಳ ಪ್ರಮಾಣವು ಹೋಲಿಕೆಯಲ್ಲಿ ಪರಿಗಣಿಸಲಾಗದಷ್ಟು ಚಿಕ್ಕವಾಗಿವೆ. ಭಾರತದ ಅರ್ಥ ವ್ಯವಸ್ಥೆಯನ್ನು ಮುಕ್ತಗೊಳಿಸಿ ಎರಡು ದಶಕಗಳೇ ಕಳೆದಿದ್ದರೂ ಇಂದಿಗೂ ಸಹ ಇಲ್ಲಿನ ಅತ್ಯಂತ ದೊಡ್ಡ ೪೦೦ ಖಾಸಗೀ ಕಂಪನಿಗಳ ಒಟ್ಟು ವಹಿವಾಟು ದೇಶದ GDPಯ ಶೇಖಡ ೬%ರಷ್ಟನ್ನೂ ಮುಟ್ಟಿಲ್ಲ. ಆದ್ದರಿಂದ ಭಾರತೀಯ ಕಂಪನಿಗಳ ಸಮಾಜ ಸೇವೆಯನ್ನು ಅಮೇರಿಕಾ ಕಂಪನಿಗಳೊಂದಿಗೆ ಹೋಲಿಸಿ ಭಾರತದ ಸಮಾಜ ಸೇವಾ ಚಟುವಟಿಕೆಗಳನ್ನು ತುಚ್ಛೀಕರಿಸುವುದನ್ನು ಅತ್ಯಂತ ಯುಕ್ತಿ ಪೂರ್ವಕವಾಗಿ ಮಾಡುತ್ತಿದ್ದಾರೆ.
೨೦೦೯ನೇ ಇಸವಿಯಿಂದ ಬಹುತೇಕ ದುರುದ್ದೇಶಪೂರಿತ ಮತ್ತು ರಾಜಕೀಯಪ್ರೇರಿತವಾದ ರಾಜತಾಂತ್ರಿಕ ನೀತಿಯನ್ನು ಆಕ್ರಮಣಕಾರೀ ಧೋರಣೆಯಲ್ಲಿ ಪಾಶ್ಚಿಮಾತ್ಯ ದೇಶಗಳು ಅದರಲ್ಲೂ ವಿಶೇಷವಾಗಿ ಅಮೇರಿಕವು ತಾವೊಬ್ಬರೇ ಪ್ರಪಂಚದಲ್ಲೆಲ್ಲಾ ಸಮಾಜ ಸೇವೆ ಮಾಡುವ ಅತ್ಯಂತ ಶಿಷ್ಠ ನಾಗರೀಕರೆಂದೂ ಮತ್ತು ಉಳಿದ ವಿಶ್ವವೆಲ್ಲಾ ಅದರಲ್ಲೂ ವಿಶೇಷವಾಗಿ ಭಾರತವು ಈ ಧರ್ಮ ಸೇವಾ ಕಾರ್ಯಗಳಲ್ಲಿ ಬಹಳ ಕೀಳೆಂದೂ ಬಿಂಬಿಸುತ್ತಿವೆ. ಈಗಿನ ಭಾರತದ ರಾಜಕೀಯ ನಾಯಕರೂ ಅದರಲ್ಲೂ ವಿಶೇಷವಾಗಿ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಬಂದವರು ಅಥವಾ ಅದರೆಡೆಗೆ ಒಲವುಳ್ಳವರು ಹಾಗು ಭಾರತದ ಕುರಿತು ತಿಳುವಳಿಕೆಯಿಲ್ಲದವರು ಅಥವಾ ಭಾರತದ ಬಗೆಗಿರುವ ತಮ್ಮ ಪರಿಮಿತ ಜ್ಞಾನದಿಂದಾಗಿ ಬೃಹತ್ತಾಗಿರುವ ಹಿಂದೂ ಭಾರತದ ಧಾರ್ಮಿಕ ಕಾರ್ಯಗಳನ್ನು ಗಣನೆಗೆ ಬಾರದ ಭಾರತೀಯ ಕಂಪನಿಗಳ ಧಾರ್ಮಿಕ ಮತ್ತು ಸಮಾಜ ಸೇವಾ ಚಟುವಟಿಕೆಗಳೊಂದಿಗೆ ಸಮೀಕರಣಗೊಳಿಸಿ ಭಾರತದ ಸಾಮಾಜಿಕ ಸೇವೆಗಳು ಕೆಳ ಮಟ್ಟದ್ದೆಂದು ಪ್ರತಿಪಾದಿಸುವ ಪಾಶ್ಚಿಮಾತ್ಯರು ಅಥವಾ ಅಮೇರಿಕನ್ನರ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಿಂದೂ ಧಾರ್ಮಿಕ ಸೇವಾ ಸಂಪ್ರದಾಯಗಳನ್ನು ಅವಹೇಳನ ಮಾಡುವ ಆ ರಾಜಕೀಯ ಪಕ್ಷದ ಅಧ್ಯಕ್ಷರಂತೆ ಹಲವಾರು ರಾಜಕೀಯ ಹಾಗೂ ಸಾಮಾಜಿಕ ನೇತಾರರು ಮತ್ತು ಬುದ್ಧಿ ಜೀವಿಗಳು ಭಾರತೀಯ ಸೇವಾ ಸಂಪ್ರದಾಯಗಳಿಗೆ ವ್ಯತಿರಿಕ್ತವಾಗಿದ್ದಾರೆ ಅಥವಾ ಅವುಗಳಿಂದ ವಿಮುಖರಾಗಿಸಲ್ಪಟ್ಟಿದ್ದಾರೆ. ಭಾರತೀಯರ ಉದಾರಗುಣವು ಬಹು ವಿಶದವಾಗಿ ಕೆಳ ಸ್ತರದಲ್ಲಿಯೂ ಆಚರಣೆಯಲ್ಲಿದ್ದು ಪ್ರತಿಯೊಂದು ಮನೆಯೂ ಅವನ್ನು ’ದಾನ’ ಮತ್ತು ”ಧರ್ಮ’ವೆಂದು ಪಾಲಿಸುತ್ತದೆ. ಇದು ಒಂದು ಸಾಮಾಜಿಕ ಹಾಗು ಧಾರ್ಮಿಕ ಆಚರಣೆಯಾಗಿದ್ದು, ಇದು ಲೌಕಿಕವಾದ ಧ್ಯೇಯೋದ್ಧೇಶಗಳಿಗಾಗಿ ರೂಪಿಸಲ್ಪಟ್ಟಿದ್ದಲ್ಲ. ಆದರೆ ಅಮೇರಿಕೆಯಲ್ಲಿ ಧಾರ್ಮಿಕ ಸೇವೆಯು ಬಹು ವ್ಯವಸ್ಥಿತವಾಗಿ ಮತ್ತು ಲೆಕ್ಕಾಚಾರದಿಂದ ಕೂಡಿರುತ್ತದೆ ಮತ್ತು ಅದರಲ್ಲಿನ ಕೊನೆಯ ಡಾಲರಿಗೂ ಸಹ ಲೆಕ್ಕವನ್ನಿಡುತ್ತಾರೆ, ಆದರೆ ಭಾರತದಲ್ಲಿ ಅದು ಕೋಟ್ಯಂತರ ಕುಟುಂಬಗಳ ಅಯ-ವ್ಯಯಗಳ ಬಾಬ್ತಿನಲ್ಲಿ ಹಾಸು ಹೊಕ್ಕಾಗಿದೆ. ವಾಸ್ತವವಾಗಿ, ಭಾರತದಲ್ಲಿನ ಪ್ರತಿ ಕುಟುಂಬವೂ ಸಂಪ್ರದಾಯ ಬದ್ಧವಾದ ಮತ್ತು ಸಹಜವಾದ ಧಾರ್ಮಿಕ ಸಂಸ್ಥೆಯಾಗಿದೆ. ಆದರೆ ’ದಾನ’ವೆನ್ನುವುದನ್ನು (ತನ್ನಲ್ಲಿರುವುದನ್ನು ಇತರರೊಂದಿಗೆ ಹಂಚಿಕೊಳ್ಳುವುದನ್ನು) ನಮ್ಮ ಪರಂಪರೆಯಲ್ಲಿ ಯಾವುದೇ ವಿಧವಾದ ಪ್ರಚಾರವಿಲ್ಲದೆ ಮಾಡುವ ಕಾರ್ಯವಾಗಿದೆ ಎನ್ನುವುದು ಬಹುತೇಕರಿಗೆ ತಿಳಿಯದ ವಿಚಾರವಾಗಿದೆ. ಆದರೂ ಸಹ, ಹಿಂದೂ ಭಾರತದ ಬಗೆಗೆ ಬಹು ಅಲ್ಪ ತಿಳುವಳಿಕೆಯುಳ್ಳ ನಾಯಕರು ಮತ್ತು ಬುದ್ಧಿ ಜೀವಿಗಳಿಂದ ಭಾರತೀಯ ಧಾರ್ಮಿಕ ಸಂಪ್ರದಾಯಗಳು ಮತ್ತು ನಮ್ಮ ದೇಶವಾದ ಭಾರತವು ಅವಹೇಳನಕಾರಿಯಾಗಿ ಚಿತ್ರಿಸಲ್ಪಡುತ್ತಿವೆ.
ಭಾರತೀಯ ಸಂಪ್ರದಾಯದಲ್ಲಿ ಧಾರ್ಮಿಕ ಸೇವೆಯ ಸ್ಥಾನವೇನು ಎನ್ನುವುದನ್ನು ತಿಳಿಯಬೇಕಾದರೆ ಅದರ ದೀರ್ಘ ಚರಿತ್ರೆಯನ್ನು ಅವಲೋಕಿಸಬೇಕಾಗುತ್ತದೆ ಮತ್ತು ಅದರಿಂದ ಧಾರ್ಮಿಕ ಸೇವೆಯು ಹೇಗೆ ಭಾರತದ ತತ್ವ ಸಿದ್ಧಾಂತಗಳ ಅವಿಭಾಜ್ಯ ಅಂಗವಾಗಿದೆ ಮತ್ತು ಹಿಂದೂಗಳ ಸಂಪ್ರದಾಯ ಹಾಗೂ ಜೀವನ ಪದ್ಧತಿಯ ಭಾಗವಾಗಿದೆ ಎನ್ನುವುದು ಸುಲಭವಾಗಿ ಅರ್ಥವಾಗುತ್ತದೆ. ಧಾರ್ಮಿಕ ಸೇವೆಯು ಜನಸಾಮಾನ್ಯರ ಹವ್ಯಾಸವಾಗಿದ್ದು ಅದು ಹಿಂದೂಗಳ ಜೀವನ ಪದ್ಧತಿಯಲ್ಲಿ ಹಾಸು ಹೊಕ್ಕಾಗಿದೆ. ಭಾರತದಲ್ಲಿರುವ ಸೇವಾತನದ ಸಂಸ್ಥೀಕರಣವು ಇತ್ತೀಚಿನ ಬೆಳವಣಿಗೆಯಾಗಿದೆ. ವಾಸ್ತವವಾಗಿ, ದಾನ ಎನ್ನವುದಕ್ಕೆ ಸಮಾನಾರ್ಥಕವಾದ ಧರ್ಮವು, ಧಾರ್ಮಿಕತೆಯ ಭಾಗವಾಗಿರುವ ‘ದಾನ’ ಎನ್ನುವುದರ ಸ್ಪೂರ್ತಿಯನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಇಂದು ಅಸಮರ್ಥವಾಗಿದೆ, ಏಕೆಂದರೆ ದಾನವೆನ್ನುವುದು ವಿಶಿಷ್ಠವಾಗಿದ್ದು; ಅದು ತನ್ನಲ್ಲಿರುವುದನ್ನು ಇತರರೊಂದಿಗೆ ಹಂಚಿಕೊಳ್ಳುವುದಾಗಿದೆ ಮತ್ತು ಎಲ್ಲಾ ಮನುಜರಿಗೆ ಅವರು ಕೈಗೊಳ್ಳಬೇಕಾಗಿರುವ ಮೂಲಭೂತ ಕರ್ತವ್ಯಗಳನ್ನು ಅದು ವಿಧಿಸುತ್ತದೆ. ಈ ಸಂದರ್ಭದಲ್ಲಿ ಹಿಂದೂ ಭಾರತದ ತತ್ವವಾದ ದಾನದ ಕುರಿತಾಗಿ ಸ್ವಲ್ಪ ತಿಳಿದುಕೊಳ್ಳುವುದು ಅವಶ್ಯವೆನಿಸುತ್ತದೆ.
ಹಿಂದೂವಿನ ದೃಷ್ಟಿಯಲ್ಲಿ ದಾನವೆನ್ನುವುದು ಕೇವಲ ಕೊಡುವುದಾಗಿರದೆ ಅದು ಇತರರೊಂದಿಗೆ ಹಂಚಿಕೊಳ್ಳುವುದೂ ಆಗಿದೆ. ಅದು ಕೇವಲ ಹಣಕಾಸಿಗೆ ಸಂಭಂದಪಟ್ಟಿದ್ದಲ್ಲ. ಅದು ನಂಬಿಕೆ ಮತ್ತು ಶ್ರದ್ಧೆಗಳಿಂದ ಕೂಡಿದ್ದು, ಏಕ ಮುಖವಾಗಿರುವ ದಾನದೊಂದಿಗೆ (ಕೊಡುವುದರೊಂದಿಗೆ), ಭಕ್ತಿ, ಪ್ರೇಮ ಮತ್ತು ಪ್ರೀತಿ ಇವೆಲ್ಲವುಗಳನ್ನೂ ಒಳಗೊಳ್ಳುತ್ತದೆ. ಈ ವಿಧವಾದ ಏಕ ಮುಖವಾದ ಕ್ರಿಯೆಗಳು ಯಾವುದೇ ವಿಧವಾದ ತರ್ಕ ಅಥವಾ ವಿಶ್ಲೇಷಣೆಗೆ ನಿಲುಕುವಂತಹವುಗಳಲ್ಲ, ಆದರೆ ಅವು ಭಾವೋದ್ವೇಗದ ಉತ್ತಮಗೊಳ್ಳುವಿಕೆಯಿಂದ ಚಿಮ್ಮುವಂತಹದ್ದಾಗಿವೆ. ಇಲ್ಲಿ ಉತ್ತಮಗೊಳ್ಳುವಿಕೆಯು ಅಹಂಕಾರ, ಸ್ವಾರ್ಥ ಸಾಧನೆ, ತನ್ನ ಹಿಡಿತದಲ್ಲೇ ಎಲ್ಲಾ ಇರಬೇಕೆನ್ನುವ ಬುದ್ಧಿಯಿಂದ ಸ್ವಾರ್ಥರಹಿತ ಶರಣಾಗತಿಯೆಡೆಗೆ ಸಾಗುತ್ತದೆ. ಈ ದೃಷ್ಟಿಯಿಂದ ಅವುಗಳನ್ನು ದಾನಶೀಲತೆ ಎನ್ನುವ ಪದದ ಮೂಲಕ ಸೂಕ್ತವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ವೇದಗಳಲ್ಲಿ ’ದಾನ’ವೆನ್ನುವುದನ್ನು ದೈವ ಸಾಕ್ಷಾತ್ಕಾರ ಅಥವಾ ಆತ್ಮ ಸಾಕ್ಷಾತ್ಕಾರಕ್ಕೆ ಸಾಂಪ್ರದಾಯಿಕ ಮಾರ್ಗಗಳಾದ ಯಜ್ಞ ಮತ್ತು ತಪಸ್ಸುಗಳೊಂದಿಗೆ ಬಹು ಅವಶ್ಯವಾಗಿ ಬೇಕಾಗಿರುವ ಗುಣವೆಂದು ಉತ್ಪ್ರೇಕ್ಷೆಗೊಳಿಸಲಾಗಿದೆ. ‘ಕನ್ಯಾದಾನ’ (ತನ್ನ ಪ್ರೀತಿಯ ಮಗಳನ್ನು ಮದುವೆ ಮಾಡಿ ಕೊಡುವುದು), ‘ವಿದ್ಯಾದಾನ’ (ತನ್ನಲ್ಲಿರುವ ವಿದ್ಯೆಯನ್ನು ಶಿಷ್ಯನಿಗೆ ಕೊಡಮಾಡುವುದು), ‘ಜೀವದಾನ’ (ಯುದ್ಧದಲ್ಲಿ ಸೋತ ಶತ್ರುವನ್ನು ಸಾಯಿಸದೇ ಬಿಡುವುದು), ‘ಅಭಯದಾನ’ (ಕೆಡಕುಗಳಿಂದ ರಕ್ಷಣೆ ಕೊಡುವುದು) ಮತ್ತು ‘ಅನ್ನದಾನ’ (ಹಸಿದವನಿಗೆ ಆಹಾರವಿಟ್ಟು ತಣಿಸುವುದು) ಮೊದಲಾದವುಗಳನ್ನು ಇವಕ್ಕೆ ಉದಾಹರಣೆಯಾಗಿ ಕೊಡಬಹುದು. ದಾನವೆನ್ನುವುದನ್ನು ಪುಣ್ಯಗಳಿಸುವ ಧಾರ್ಮಿಕ ಭಾವನೆಯಾಗಿ ವಿಧಿಬದ್ಧಗೊಳಿಸಲಾಗಿದೆ. ಈ ವಿಧವಾದ ನೈತಿಕವಾದ ಮತ್ತು ನಿಜವಾದ ಸ್ವಾರ್ಥರಹಿತ ಸೇವೆಗಳನ್ನು ಉನ್ನತವಾದ ಸಂಸ್ಕೃತಿ ಹೊಂದಿರುವ ಭಾರತೀಯ ಕೌಟುಂಬಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಗೌರವಿಸುವ ಪರಿಪಾಟವು ಈ ಆಧುನಿಕ ಕಾಲದಲ್ಲಿಯೂ ಮುಂದುವರೆದಿದೆ. (ಬಿ.ವಿ. ವೆಂಕಟಕೃಷ್ಣ ಶಾಸ್ತ್ರಿ ಇವರಿಂದ ರಚಿಸಲ್ಲಟ್ಟ ಆಂಗ್ಲ ಮೂಲದ ಎನ್ಸೈಕ್ಲೋಪೀಡಿಯಾ ಆಫ್ ಲವ್ ಇನ್ ವರ್ಲ್ಡ್ ರೆಲಿಜಿಯನ್ಸ್, ಸಂಪುಟ ೧, ಸಂಪಾದನೆ - ಯುದಿತ್ ಕೋರ್ನ್ಬರ್ಗ್ ಗ್ರೀನ್ಬರ್ಗ್).
ಇದೇ ಹಿಂದೂ ಸಾಂಪ್ರದಾಯಿಕ ಗ್ರಂಥಗಳಲ್ಲಿ ದಾನವೆನ್ನುವುದು ನಾಲ್ಕು ವಿಧವಾದದ್ದೆಂದು ಹೇಳಲಾಗಿದೆ. ಅವುಗಳೆಂದರೆ, ‘ನಿತ್ಯದಾನ’ - ಇದು ದಾನ ಮಾಡುವ ವ್ಯಕ್ತಿಯ ಆತ್ಮ ತೃಪ್ತಿಗೋಸ್ಕರವಾಗಿ ಕೈಗೊಳ್ಳುವುದಾಗಿದೆ, ‘ಕಾಮ್ಯದಾನ’ - ಇದು ಕೆಲವೊಂದು ಫಲಗಳನ್ನು ಅಪೇಕ್ಷಿಸಿ ಮಾಡುವಂತಹದ್ದಾಗಿದೆ, ‘ವಿಮಲದಾನ’ - ಇದು ದೇವರನ್ನು ಸಂತೃಪ್ತಿಗೊಳಿಸುವುದಕ್ಕಾಗಿ ಮಾಡುವುದಾಗಿದೆ ಮತ್ತು ‘ನೈಮಿತ್ತಿಕದಾನ’ - ಇದು ಒಬ್ಬನು ತನ್ನ ಪಾಪ ಕರ್ಮಗಳಿಂದ ಮುಕ್ತಿ ಹೊಂದಲು ಮಾಡುವಂತಹದ್ದಾಗಿದೆ (ಹಿಂದೂಗಳ ನಂಬಿಕೆಗಳು ಮತ್ತು ಪೂಜಾ ವಿಧಾನಗಳ ಕುರಿತಾದ ಡಾ! ವೆಂಗನೂರು ಬಾಲಕೃಷ್ಣನ್ ವಿರಚಿತ ‘ತಾಳಿಯೋಲ’ - ಆಂಗ್ಲ ಮೂಲದ ಗ್ರಂಥದಲ್ಲಿ ಉಲ್ಲೇಖಿತವಾದದ್ದು). ಸಂತ ಗುರುನಾನಕರು ಹೇಳುತ್ತಾರೆ, "ನೆನಪಿಡು, ನೀನು ಕೊಡುವುದರ ಮೂಲಕ ಗಳಿಸಿಕೊಳ್ಳುವ ಪುಣ್ಯವೊಂದೇ ನಿನ್ನನ್ನು ಪರಲೋಕದಲ್ಲಿ ಹಿಂಬಾಲಿಸುತ್ತದೆ". ಇದರ ಒಟ್ಟಾರೆ ಉದ್ದೇಶವೇನೆಂದರೆ ಹಿಂದೂ ಸಂಪ್ರದಾಯದಲ್ಲಿ ಬೇರೆಯವರೊಂದಿಗೆ ಹಂಚಿಕೊಳ್ಳುವುದು ಅಥವಾ ಬೇರೆಯವರಿಗೆ ದಾನ ಕೊಡುವುದು ಆತ್ಮಸಾಕ್ಷಾತ್ಕಾರದ ಮಾರ್ಗವಾಗಿತ್ತು. ಇದನ್ನೇ ಸ್ವಾಮಿ ವಿವೇಕಾನಂದರು ರಾಮಕೃಷ್ಣ ಸೇವಾ ಸಂಸ್ಥೆಗಾಗಿ ರೂಪಿಸಿದ "ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯ ಚ" ಎನ್ನುವ ಧ್ಯೇಯ ವಾಕ್ಯದಲ್ಲಿ ಅಳವಡಿಸಿದ್ದಾರೆ. ಇದರ ಅರ್ಥ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಮಾಡುವ ದಾನವೇ ಅತ್ಯಂತ ಉನ್ನತವಾದದ್ದು ಮತ್ತು ಶ್ರೇಯಸ್ಕರವಾದದ್ದು ಎನ್ನುವುದಾಗಿದೆ.
ಹಿಂದೂ ಸಂಪ್ರದಾಯದಲ್ಲಿ ದಾನ ಕೊಡುವವನಿಗೆ ಅದನ್ನು ಸ್ವೀಕರಿಸುವವನು ದೊರೆತರೆ ಕೊಡುವವನೇ ಮಹಾ ಭಾಗ್ಯಶಾಲಿಯೆಂದು ಪರಿಗಣಿಸಲ್ಪಡುತ್ತಾನೆ; ಇಲ್ಲಿ ತೆಗೆದುಕೊಳ್ಳುವವನು ದಾನ ಸ್ವೀಕರಿಸುವ ಮೂಲಕ ಭಾಗ್ಯಶಾಲಿಯೆನಿಸಿಕೊಳ್ಳುವುದಿಲ್ಲ. ವ್ಯಕ್ತಿಯೊಬ್ಬನು ದಾನವನ್ನು ಕೊಟ್ಟಾಗ ಅವನು ಮಾಡಿದ ಸತ್ಕಾರ್ಯಕ್ಕೆ ಅವನಿಗೆ ಪುಣ್ಯವು ದೊರೆಯುತ್ತದೆ. ಆದರೆ ಅವನು ದಾನ ಪಡೆದುಕೊಳ್ಳುವ ವ್ಯಕ್ತಿಗೆ ಕೃತಜ್ಞನಾಗಿರಬೇಕು, ಏಕೆಂದರೆ ಅವನಿಲ್ಲದೆ ದಾನಿಯು ಮಾಡಿದ ಒಳ್ಳೆಯ ಕಾರ್ಯವು ಸಾಧ್ಯವಾಗುತ್ತಿರಲಿಲ್ಲ. ಹಿಂದೂ ಮದುವೆಗಳಲ್ಲಿ ಕನ್ಯಾದಾನ ಮಾಡುವ (ತನ್ನ ಪ್ರೀತಿಯ ಮಗಳನ್ನು ಕೊಡುವ) ಕನ್ಯಾ ಪಿತೃವು ವರನಿಗೆ ತಲೆಬಾಗಿ ನಮಸ್ಕರಿಸುತ್ತಾನೆ ಇದರ ಹಿಂದಿನ ಉದ್ದೇಶವೇನೆಂದರೆ, ’ತಂದೆಯು ತನ್ನ ಮಗಳನ್ನು (ಐಶ್ವರ್ಯವನ್ನು) ವರನ ಕುಟುಂಬಿಕರಿಗೆ ಕೊಡುತ್ತಾನೆ. ಇಲ್ಲಿ ಅವನು (ಕನ್ಯಾ ಪಿತೃವು) ನಾನು ಕೊಡುವವನೆಂಬ ಅಹಂಕಾರವನ್ನು ಹೊಂದಬಾರದು’. ಇದಕ್ಕೆ ಪ್ರತಿಯಾಗಿ ವರನು ಕನ್ಯೆಯ ತಂದೆಗೆ ಶಿರಬಾಗಿ ನಮಸ್ಕರಿಸುತ್ತಾನೆ ತಾನು ಮಾವನಿಂದ ಪಡೆದ ದಾನಕ್ಕೆ ಕೃತಜ್ಞತೆಯ ದ್ಯೋತಕವಾಗಿ. ಹೀಗೆ ಕೊಡುವವನು ಮತ್ತು ಸ್ವೀಕರಿಸುವವನು ಇಬ್ಬರೂ ಒಬ್ಬರಿಗೊಬ್ಬರು ಪ್ರತಿವಂದಿಸಿ ತಮ್ಮ ತಮ್ಮ ಕಾರ್ಯಗಳಿಗೆ ಯಾವುದೇ ರೀತಿಯ ಅಹಂಭಾವವನ್ನು ತೆಳೆಯುವುದಿಲ್ಲ. ಆದ್ದರಿಂದ ಕನ್ಯಾದಾನವು ಮಹಾದಾನವೆಂದು ಹಿಂದೂ ಶಾಸ್ತ್ರಗಳಲ್ಲಿ ಪ್ರಚಲಿತವಾಗಿದೆ. ಹಿಂದೂ ಸಂಪ್ರದಾಯದಲ್ಲಿ ದಾನವು ಕೇವಲ ಕೊಡು-ಕೊಳ್ಳುವಿಕೆಯ ಭೌತಿಕ ಕ್ರಿಯೆಯಾಗಿರದೆ ಅದು ಕೊಡುವವನ ಭಾವನಾತ್ಮಕ ಕ್ರಿಯೆಯಾಗಿದೆ. ಸರಿಯಾದ ಮನೋಭಾವವಿಲ್ಲದಿದ್ದರೆ, ಭೌತಿಕ ದಾನವು ಒಬ್ಬನ ಅಹಂಕಾರ ಮತ್ತು ಗರ್ವಗಳನ್ನು ಉಲ್ಬಣಗೊಳ್ಳುವಂತೆ ಮಾಡುತ್ತದೆ. ದಾನಿಯು ಸ್ವೀಕರಿಸುವವನಿಗೆ ಕೃತಜ್ಞತಾಪೂರ್ವಕವಾಗಿ ಋಣಿಯಾಗಿರುತ್ತಾನೆ, ಏಕೆಂದರೆ ಸ್ವೀಕರಿಸುವವನು ಕೊಡುವವನಿಗೆ ದಾನ ಮಾಡುವ ಅವಕಾಶವನ್ನು ಒದಗಿಸುತ್ತಾನಾದ್ದರಿಂದ.
ಹೀಗೆ ಕೊಡುವವನು ತೆಗೆದುಕೊಳ್ಳುವವನಿಗೆ ಕೃತಜ್ಞನಾಗಿರಬೇಕೆನ್ನುವ ತತ್ವವು ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಿರೂಪಣಾತ್ಮಕವಾಗಿ ಬಂದಿದೆ. ವಿವೇಕಾನಂದರು ಪಾಶ್ಚಿಮಾತ್ಯ ದೇಶಗಳಲ್ಲಿದ್ದಾಗ ಎಲ್ಲರಿಂದಲೂ ಗೌರವ, ಮರ್ಯಾದೆಯಿಂದ ಕಾಣಲ್ಪಡುತ್ತಿದ್ದ ಒಬ್ಬ ಶ್ರೀಮಂತ ವ್ಯಕ್ತಿ ಇವರನ್ನು ಕಾಣಲು ಬಂದ. ಅವನು ವಿವೇಕಾನಂದರೂ ಸಹ ತನ್ನನ್ನು ಅದೇ ರೀತಿ ಕಾಣಬೇಕೆಂದು ಬಯಸಿದ ಆದರೆ ಸ್ವಾಮಿಗಳು ಇವನತ್ತ ತಿರುಗಿ ಕೂಡಾ ನೋಡಲಿಲ್ಲ. ಮರುದಿವಸ ಅವನು ವಿವೇಕಾನಂದರ ಬಳಿಗೆ ಹೋಗಿ ಅವರಿಗೆ ಬಹು ದೊಡ್ಡ ಮೊತ್ತದ ದೇಣಿಗೆಯನ್ನು ಕೊಟ್ಟ. ವಿವೇಕಾನಂದರು ಒಂದು ಮಾತನ್ನೂ ಆಡದೇ ಸುಮ್ಮನೇ ಆ ದೇಣಿಗೆಯನ್ನು ಸ್ವೀಕರಿಸಿದರು. ಆಗ ಆ ದೊಡ್ಡ ಮನುಷ್ಯ ತನ್ನ ತಾಳ್ಮೆಯನ್ನು ಕಳೆದುಕೊಂಡು ಹೇಳಿದ, "ನಾನು ನಿನಗೆ ಒಂದು ಬೃಹತ್ ದೇಣಿಗೆಯನ್ನು ಕೊಡುತ್ತಿದ್ದೇನೆ. ಆದ್ದರಿಂದ ನೀನು ಶಿಷ್ಠಾಚಾರಕ್ಕಾಗಿಯಾದರೂ ನನಗೆ ಧನ್ಯವಾದಗಳನ್ನು ಹೇಳಬೇಕು". ವಿವೇಕಾನಂದರು ತಕ್ಷಣವೇ, "ನೀನೇ ನನಗೆ ಧನ್ಯವಾದಗಳನ್ನು ಹೇಳಬೇಕು, ನಾನು ನಿನ್ನ ದೇಣಿಗೆಯನ್ನು ಸ್ವೀಕರಿಸುತ್ತಿರುವುದಕ್ಕೆ" ಎಂದು ಹೇಳಿದರಂತೆ.
ಹಿಂದೂ ಭಾರತದ ದಾನ ಎನ್ನುವುದರ ಹಿಂದಿರುವ ತತ್ವವು ವಾಸ್ತವವಾಗಿ ತನ್ನ ಬಳಿಯಿರುವ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಅವನ ಧರ್ಮ ಅಥವಾ ಕರ್ತವ್ಯವಾಗಿದೆ. ಅದರಲ್ಲಿ ಯಾವುದೇ ವಿಧವಾದ ಕೊಡುತ್ತಿದ್ದೇನೆಂದು ತೋರಿಸಿಕೊಳ್ಳುವ ಅಹಂಭಾವವಿರುವುದಿಲ್ಲ. ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಬ್ಬ ಗೃಹಸ್ಥನಿಗೂ ವಿಧಿಸಲ್ಪಟ್ಟಿರುವ ಐದು ಮೂಲಭೂತ ಯಜ್ಞಗಳೆರಡರಲ್ಲಿ ಒಂದು ಭೂತ ಯಜ್ಞ; ಪ್ರಾಣಿಗಳಿಗೆ ಆಹಾರವನ್ನು ಸಮರ್ಪಿಸುವುದು ಮತ್ತೊಂದು ಮನುಷ್ಯ ಯಜ್ಞ - ಸಹ ಮಾನವರಿಗೆ ಆಹಾರವನ್ನು ಅರ್ಪಿಸುವುದಾಗಿದೆ. ಒಬ್ಬ ಗೃಹಸ್ಥನು ಎಲ್ಲರಿಗೂ ಅಂದರೆ ಪ್ರಾಣಿಗಳಿಗೂ ಸಹ ಉಣಬಡಿಸಿದ ನಂತರ ತಾನು ಊಟ ಮಾಡಬೇಕೆನ್ನುವುದನ್ನು ಶಾಸ್ತ್ರಗಳಲ್ಲಿ ವಿಧಿಸಲಾಗಿದೆ. ಭಗವದ್ಗೀತೆಯಲ್ಲಿ, “ಯಾರು ಕೇವಲ ತನಗಾಗಿ ಅಡುಗೆಯನ್ನು ತಯಾರಿಸಿಕೊಳ್ಳುತ್ತಾನೆಯೋ ಮತ್ತು ಇತರರಿಗೆ ಉಣಬಡಿಸುವುದಿಲ್ಲವೋ ಅವನು ಕಳ್ಳನೇ ಸರಿ” ಎಂದು ಹೇಳಲಾಗಿದೆ. ಪ್ರತಿಯೊಬ್ಬ ಮಾನವನಿಗೆ ಮತ್ತು ಕುಟುಂಬಗಳಿಗೆ ಇತರರ ಕ್ಷೇಮವನ್ನು ನೋಡಿಕೊಳ್ಳ ಬೇಕೆನ್ನುವುದನ್ನು ಕಡ್ಡಾಯಗೊಳಿಸಲಾಗಿದೆ. ಇತರರನ್ನು ಸಂತೃಪ್ತಿ ಪಡಿಸುವ ಸಾಮರ್ಥ್ಯವು, ಒಬ್ಬನು ಮದುವೆ ಮಾಡಿಕೊಂಡು ಸಂತೋಷದಿಂದಿರುವುದಕ್ಕೆ ಅರ್ಹತೆಯ ಮಾನದಂಡವಾಗಿದೆ. ಆದ್ದರಿಂದ ಹಿಂದೂ ಸಂಪ್ರದಾಯದಲ್ಲಿ ಗೃಹಸ್ಥಾಶ್ರಮವು ಎಲ್ಲಾ ಆಶ್ರಮಗಳಿಗಿಂತಲೂ ಶ್ರೇಷ್ಠವಾದ್ದದೆಂದು ಪರಿಗಣಿತವಾಗಿದೆ, ಏಕೆಂದರೆ ಗೃಹಸ್ಥನು ಮಾತ್ರವೇ ಉಳಿದ ಎಲ್ಲರ ಕ್ಷೇಮವನ್ನು ನೋಡಿಕೊಳ್ಳಬಲ್ಲ. ಧಾರ್ಮಿಕ ಸೇವೆಯು ಗೃಹಸ್ಥ ಧರ್ಮದ ಅವಿಭಾಜ್ಯ ಅಂಗವಾಗಿದ್ದು, ಇದು ಹಿಂದೂ ನಾಗರೀಕತೆಯ ಸಾರವಾಗಿದೆ. ಇದು ಗತ ವೈಭವದ ಕುರಿತು ಕೇವಲ ಜಂಬದಿಂದ ಹೇಳಿಕೊಳ್ಳುವುದೇ ಅಥವಾ ಇದು ಇಂದಿಗೂ ಜೀವಂತವಿರುವ ಸತ್ಯವೇ? ಇತ್ತೀಚಿನ ಸಂಶೋಧನೆಗಳು ಅದು ಇನ್ನೂ ಜೀವಂತ ಸತ್ಯವೆನ್ನುವುದನ್ನು ಪ್ರಮಾಣಪೂರ್ವಕವಾಗಿ ಹೇಳುತ್ತವೆ.
ಏಷ್ಯಾದಲ್ಲಿ ಭಾಗವಹಿಸುವಿಕೆಯ ಸಂಶೋಧನೆ - Participatory Research in Asia [PRIA] ಎನ್ನುವ ಸರ್ಕಾರೇತರ ಸಂಸ್ಥೆಯೊಂದು (NGO) ಪ್ರಪ್ರಥಮವಾಗಿ ೨೦೦೩ನೇ ಇಸವಿಯಲ್ಲಿ ಲಾಭ-ರಹಿತ ವಲಯದ ಮಹತ್ವವನ್ನು ಗುರುತಿಸಲು ದೇಶಾದ್ಯಂತ ಒಂದು ಲಕ್ಷ ಕುಟುಂಬಗಳನ್ನು ಸಮೀಕ್ಷೆ ಮಾಡಿತು. ಅವರ ಸಂಶೋಧನೆಯ ಫಲಿತಾಂಶಗಳು ಹೀಗಿವೆ:
ಶೇಖಡಾ ೪೧% ಗೃಹಸ್ಥರು ಪ್ರತಿವರ್ಷ ಹಣ ಅಥವಾ ವಸ್ತುವಿನ ರೂಪದಲ್ಲಿ ದಾನ ಮಾಡುತ್ತಾರೆ - ಇದು ಪ್ರಾಂತದಿಂದ ಪ್ರಾಂತಕ್ಕೆ ಭಿನ್ನವಾಗಿದೆ.
ಪೂರ್ವ ಭಾರತದಲ್ಲಿ ಮತ್ತು ಉತ್ತರ ಭಾರತದಲ್ಲಿ ದಾನ ಮಾಡುವ ಕುಟುಂಬಗಳ ಪ್ರಮಾಣವು ಒಟ್ಟು ಕುಟುಂಬಗಳ ಪ್ರಮಾಣಕ್ಕೆ ಹೋಲಿಸಿದರೆ ಮೂರನೇ ಎರಡು ಭಾಗದಷ್ಟಿದ್ದಾರೆ.
ಇದರಿಂದ ವ್ಯಕ್ತವಾಗುವುದೇನೆಂದರೆ ದೇಶಾದ್ಯಂತ ಸುಮಾರು ೭೫ ದಶಲಕ್ಷ ಕುಟುಂಬಗಳು ವಾರ್ಷಿಕವಾಗಿ ಧರ್ಮ ಸೇವಾ ಕಾರ್ಯಗಳಲ್ಲಿ ಭಾಗಿಯಾಗುತ್ತವೆ.
ಸ್ವಾರಸ್ಯಕರ ಅಂಶವೇನೆಂದರೆ ದಾನ ಕೊಡುವವರಲ್ಲಿ ಮೂರನೇ ಎರಡು ಭಾಗದಷ್ಟು ಜನ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾರೆ.
ಅಧಿಕ ಮೊತ್ತದ ದಾನ ಮಾಡ ಬೇಕಾದ ಸಂದರ್ಭಗಳಲ್ಲಿ ಅವುಗಳ ಕುರಿತಾಗಿ ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ನಿರ್ಣಯ ತೆಗೆದುಕೊಳ್ಳುತ್ತಾರೆ, ವ್ಯಕ್ತಿಗತವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವುದಿಲ್ಲ.
೧೯೯೯-೨೦೦೦ರ ಆರ್ಥಿಕ ಸಂವತ್ಸರದಲ್ಲಿ ಭಾರತೀಯರು ಹಣ ಮತ್ತು ವಸ್ತು ರೂಪದಲ್ಲಿ ಒಟ್ಟಾರೆಯಾಗಿ ರೂ. ೪೨, ೩೩೩ ದಶಲಕ್ಷಗಳನ್ನು ದಾನವಾಗಿ ಕೊಟ್ಟಿರುತ್ತಾರೆ.
ಇದರಲ್ಲಿ ಶೇಖಡಾ ೫೫% ಹಣವು ವ್ಯಕ್ತಿಗಳಿಗೆ ಸಂದಾಯವಾಗಿದ್ದರೆ ಉಳಿದ ಶೇಖಡಾ ೪೫% ಹಣವು ಸಮಾಜ ಸೇವಾ ಸಂಸ್ಥೆಗಳಿಗೆ ಸಂದಾಯವಾಗಿತ್ತು.
ಮಹತ್ವದ ಅಂಶವೇನೆಂದರೆ ಶೇಖಡಾ ೮೭%ರಷ್ಟು ದೇಣಿಗೆಯು ವಾರ್ಷಿಕ ಒಂದು ಲಕ್ಷ ರೂಪಾಯಿಗಿಂತಲೂ ಕಡಿಮೆ ಅಥವಾ ಮಾಸಿಕ ೮,೦೦೦ ರೂಪಾಯಿಗಳಿಗೂ ಕಡಿಮೆ ಆದಾಯವಿರುವ ಕುಟುಂಬಗಳಿಂದ ಸಂಗ್ರಹವಾಗಿತ್ತು.
ಪ್ರಾಥಮಿಕ ಶಾಲಾ ಹಂತದ ವಿದ್ಯಾಭ್ಯಾಸವನ್ನೂ ಪೂರೈಸಲು ಅದೃಷ್ಟವಿಲ್ಲದವರಲ್ಲಿಯೂ ಸಹ ಸಾಮಾಜಿಕ ಕಳಕಳಿಯು ಅವರ ಹೃದಯಕ್ಕೆ ಹತ್ತಿರವಾಗಿರುವಂತೆ ಕಂಡು ಬಂದಿತು; ಅವರ ಕೊಡುಗೆಯು ಒಟ್ಟು ವಂತಿಗೆಗಳ ಶೇಖಡಾ ೨೬%ರಷ್ಟಿತ್ತು.
ಅಂದರೆ, ಪ್ರತೀ ನಾಲ್ಕು ರೂಪಾಯಿಗಳಲ್ಲಿ ಒಂದು ರೂಪಾಯಿಯು ಅಲ್ಪ ವಿದ್ಯಾವಂತರಿಂದ ದೇಣಿಗೆಯಾಗಿ ಕೊಡಮಾಡಲ್ಪಟ್ಟಿತ್ತು.
ಈ ಸಂಶೋಧನೆಯು ಒಂದು ಪ್ರಶ್ನೆಯನ್ನೂ ಹುಟ್ಟು ಹಾಕಿತು, ಅದೇನೆಂದರೆ ಜನರು ಏತಕ್ಕಾಗಿ ದೇಣಿಗೆಯನ್ನು ಕೊಡುತ್ತಾರೆ? ಜನರಲ್ಲಿ ತಾವು ಸಮಾಜಕ್ಕೆ ಏನನ್ನಾದರೂ ಹಿಂದಿರುಗಿ ಕೊಡಬೇಕೆನ್ನುವ ನೈತಿಕ ಹೊಣೆ ಮತ್ತು ಹೀಗೆ ದಾನ-ಧರ್ಮಗಳನ್ನು ಮಾಡುವ ಮೂಲಕ ತಮ್ಮ ಧಾರ್ಮಿಕ ನಿಲುವುಗಳು ದೃಢವಾಗಿರುತ್ತವೆ ಎನ್ನುವ ನಂಬಿಕೆ, ಈ ಸಂಶೋಧನೆಯಲ್ಲಿ ಕಂಡುಕೊಂಡ ಪ್ರಧಾನ ಅಂಶವಾಗಿತ್ತು. ಈ ಮಾಹಿತಿಗಳ ಆಧಾರದ ಮೇಲೆ PRIAಯ ಲಾಭ-ರಹಿತ ವಲಯಗಳ ಆಧ್ಯಯನ ವಿಭಾಗದ ಪ್ರಮುಖ ಸಂಶೋಧಕರಾದ ಎಸ್.ಎಸ್. ಶ್ರೀವಾತ್ಸವ ಅವರು ’ದ ಹಿಂದೂ’ ದಿನಪತ್ರಿಕೆಯಲ್ಲಿ ಹೀಗೆ ಬರೆದರು:
"ಇದೆಲ್ಲವೂ ಏನನ್ನು ಪ್ರತಿಬಿಂಬಿಸುತ್ತದೆ ಎಂದರೆ ಬಹುತೇಕ ಭಾರತೀಯರು ಯಾವುದೇ ವಿಧವಾದ ಪ್ರಚಾರವನ್ನು ಬಯಸದೇ ’ಕೊಡು’ವುದಕ್ಕೆ ಇಷ್ಟಪಡುತ್ತಾರೆ............. ಕೇವಲ ಸರ್ಕಾರಗಳು, ಉದ್ಯಮಗಳು ಮತ್ತು ಸೇವಾ ಸಂಸ್ಥೆಗಳು ಮಾತ್ರ ಸಾಮಾಜಿಕ ಕಾಳಜಿಯನ್ನು ಹೊಂದಿವೆ ಎನ್ನುವುದನ್ನು ಸಮೀಕರಿಸುವುದು ತಪ್ಪಾಗುತ್ತದೆ. ಎಲ್ಲಿ ಯಾವುದೇ ಸರ್ಕಾರೀ ಸಂಸ್ಥೆಗಳು ಕಾರ್ಯನಿರ್ವಹಿಸಲು ಸಫಲವಾಗಿಲ್ಲವೋ ಅಥವಾ ಕಾರ್ಯಕೈಗೊಂಡಿಲ್ಲವೋ ಅಂಥಹ ಸ್ಥಳಗಳಲ್ಲಿಯೂ ಸಹ ಸಾಮಾನ್ಯ ಜನರು ಕೂಡಾ ವೈಯ್ಯಕ್ತಿಕವಾಗಿ ಜನ ಸಮೂಹದಂತೆಯೇ ಹೆಚ್ಚಲ್ಲದಿದ್ದರೂ ಅವರೊಂದಿಗೆ ಸಮಾನವಾಗಿ ಸಹ-ಮಾನವರಿಗೆ ಸಹಾಯ ಒದಗಿಸಲು ಮತ್ತು ಸಮಾಜದ ಉನ್ನತಿಯ ಕುರಿತು ಕಾತರರಾಗಿರುತ್ತಾರೆ."
ಏಷಿಯನ್ನರು/ಹಿಂದೂ ಭಾರತವು ಅಮೇರಿಕೆಗೆ ಹೋಲಿಸಿದರೆ ಹೆಚ್ಚು ದಾನ ಮಾಡುತ್ತಾರೆ ಎನ್ನುತ್ತದೆ ಹಡ್ಸನ್ ವರದಿ. ಏಷಿಯಾ ಹಾಗೂ ಭಾರತದಲ್ಲಿನ ಅತೀ ಶ್ರೀಮಂತ ವ್ಯಕ್ತಿಗಳಲ್ಲಿಯೂ ಸಹ ಸೇವಾ ಮನೋಭಾವನೆಯು ಇತರೆಲ್ಲೆಡೆಗಳಿಗಿಂತ ಅಧಿಕವಾಗಿಯೇ ಇದೆ. ಧಾರ್ಮಿಕ ಸಮಾಜ ಸೇವೆ ಮತ್ತು ದಾನಗಳ ಭೌಗೋಳಿಕ ಸೂಚಿಯು (ಹಡ್ಸನ್ ವರದಿ ೨೦೧೦) - The Index of Global Philanthropy & Remittances (Hudson Report 2010) ಇದರ ಪ್ರಕಾರ, ಮಾನವ ಸೇವೆ ಮಾಡ ಬಯಸುವವರ ಪ್ರಮಾಣವು ಉತ್ತರ ಅಮೇರಿಕಾ ಮತ್ತು ಮಧ್ಯಪೂರ್ವದ ಧನಿಕರಿಗೆ ಹೋಲಿಸಿದರೆ ಅದು ಏಷ್ಯಾ ರಾಷ್ಟ್ರದ ಶ್ರೀಮಂತ ವ್ಯಕ್ತಿಗಳಲ್ಲಿಯೇ ಅತ್ಯಧಿಕವಾಗಿದೆ. ಹಡ್ಸನ್ ವರದಿಯು ಮುಂದುವರಿಯುತ್ತಾ ಹೇಳುತ್ತದೆ, ಏಷಿಯಾದಲ್ಲಿರುವ ಕುಲೀನರು ತಮ್ಮ ಸಂಪತ್ತಿನ ಶೇಖಡಾ ೧೨%ಗಿಂತಲೂ ಅಧಿಕವಾದ ದಾನ ಮಾಡಿದರೆ, ತಮ್ಮ ವೃತ್ತಿ ಬಾಂಧವರಾದ; ತಮ್ಮ ಸಂಪತ್ತಿನ ಶೇಖಡಾ ೮%ರಷ್ಟು ದೇಣಿಗೆಗಳನ್ನು ಕೊಡುವ ಉತ್ತರ ಅಮೇರಿಕಾ ಮತ್ತು ಮಧ್ಯಪೂರ್ವದ ಶ್ರೀಮಂತ ವ್ಯಕ್ತಿಗಳಿಗೆ ಹೋಲಿಸಿದರೆ ಅವರಿಗಿಂತ ಉನ್ನತ ಸ್ಥಾನದಲ್ಲಿಯೇ ಇದ್ದಾರೆ.
BRIC (ಬ್ರೆಝಿಲ್, ರಷಿಯಾ, ಇಂಡಿಯಾ ಮತ್ತು ಚೀನಾ) ದೇಶಗಳನ್ನು ಹೋಲಿಕೆ ಮಾಡಿ ನೋಡಿದಾಗ ಭಾರತ ಮತ್ತು ಚೀನಾ ಇವರೆಡೂ ರಾಷ್ಟ್ರಗಳಲ್ಲಿ ಪುರಾತನ ಕಾಲದಿಂದಲೂ ಧಾರ್ಮಿಕ ಸೇವಾ ಕಾರ್ಯಗಳನ್ನು ಮಾಡುವ ಪರಂಪರೆಯೇ ಇದೆ.
"ಭಾರತದಲ್ಲಿ, ಬಹು ಹಿಂದಿನ ಕಾಲದಿಂದಲೂ ಧಾರ್ಮಿಕ ಆಚರಣೆಗಳಲ್ಲಿ ದಾನ ಮಾಡುವ ಕ್ರಿಯೆಯು ಚಿಗುರೊಡೆದಿದೆ ಮತ್ತದು ಕೊಡುವುದಕ್ಕೆ ಪ್ರೇರಣೆ ನೀಡುತ್ತದೆ. ದೇಶಾದ್ಯಂತ ಸುಮಾರು ಶೇಖಡಾ ೪೦%ರಷ್ಟು ಜನರು ಸಮಾಜ ಸೇವಾ ಕಾರ್ಯಗಳಿಗೆ ವಂತಿಗೆಯನ್ನು ಕೊಟ್ಟರೆ, ಪಟ್ಟಣ ಪ್ರದೇಶಗಳಲ್ಲಿ ನಿವಸಿಸುವ ಉನ್ನತ ವರ್ಗದ ಮತ್ತು ಮಧ್ಯಮ ವರ್ಗದ ಶೇಖಡಾ ೯೬% ಜನರು ಸಾಮಾಜಿಕ ಕಾರ್ಯಗಳಿಗೆ ದೇಣಿಗೆಯನ್ನು ನೀಡುತ್ತಾರೆ."
ಸಂಪ್ರದಾಯ ಮತ್ತು ರೂಢಿಗತ ಪದ್ಧತಿಗಳಲ್ಲಿ ಮುಳುಗಿರುವ ಸಮಾಜವಾಗಿರುವ ಭಾರತದಲ್ಲಿ ಧಾರ್ಮಿಕ ಭಾವನೆಯಿಂದ ನೀಡುವ ಕೊಡುಗೆಗಳು ವಂತಿಗೆಗಳನ್ನು ಸಂಗ್ರಹಿಸುವಲ್ಲಿ ಪ್ರಮುಖ ಸಾಧನವಾಗಿದೆ.
ಭಾರತದ ಪಾರಂಪರಿಕ ಸೇವಾ ಕಾರ್ಯಕ್ರಮಗಳು ಮಠ-ಮಂದಿರಗಳಿಗೆ, ಧಾರ್ಮಿಕ ದತ್ತಿ ಸಂಸ್ಥೆಗಳಿಗೆ ಮತ್ತು ವಿಶ್ವಸ್ಥ ಮಂಡಳಿಗಳಿಗೆ ಕೊಡುವ ವಂತಿಗೆ ಹಾಗೂ ದೇಣಿಗೆಗಳಿಂದ ನಡೆಯುವ ವಿಶ್ವವಿದ್ಯಾಲಯಗಳು, ವಿದ್ಯಾರ್ಥಿವೇತನ, ಮತ್ತಿತರ ಉತ್ತೇಜಕರ ವಸ್ತು ಮೊದಲಾದವುಗಳನ್ನು ಕೊಡುವುದನ್ನು ಒಳಗೊಂಡಿವೆ.
"ಭಾರತದಲ್ಲಿ ಜನರು ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳನ್ನು ನಂಬುತ್ತಾರೆ ಮತ್ತು ಸತ್ಕಾರ್ಯಗಳು ನಮಗೆ ಮುಂದಿನ ಜನ್ಮಗಳಲ್ಲಿ ಅದೃಷ್ಟವನ್ನು ಕಾಯ್ದಿರಿಸುತ್ತವೆ ಎಂದು ವಿಶ್ವಸಿಸುತ್ತಾರೆ" ಎಂದು ಭಾರತದ ಅತೀ ದೊಡ್ಡ ಚಿಲ್ಲರೆ ದಾಸ್ತಾನು ಮಾರಾಟ ಮಳಿಗೆಗಳ ಜಾಲವನ್ನು ಹೊಂದಿರುವ ಫ್ಯೂಚರ್ ಕಂಪನಿಯ ಮುಖ್ಯ ವಿಶ್ವಸ್ಥ ಅಧಿಕಾರಿಯಾಗಿರುವ ದೇವದತ್ತ ಪಾಟ್ನಾಯಕರು ದಾಖಲಿಸುತ್ತಾರೆ.
ಪರಿವ್ರಾಜಕರಾದ ಮತ್ತು ಸರ್ವಸಂಗ ಪರಿತ್ಯಾಗಿಗಳಾದ ಧಾರ್ಮಿಕ ವ್ಯಕ್ತಿಗಳು (ಸಂನ್ಯಾಸಿಗಳು) ದಾನ ಪಡೆಯುವುದರ ಮೂಲಕವೇ ಸಂಪೂರ್ಣ ಜೀವನವನ್ನು ನಡೆಸುತ್ತಾರೆ.
ಹಳ್ಳಿಗರು ಪ್ರವಾಸಿಗರಿಗೆ ಉಚಿತ ಆಹಾರ ಮತ್ತು ಆಶ್ರಯಗಳನ್ನು ನೀಡುತ್ತಾರೆ.
ಬೃಹತ್ ನಗರವಾಗಿರುವ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿರುವ ದೆಹಲಿಯಲ್ಲಿ ಇಂದಿಗೂ ಸಹ ತಮ್ಮ ಮನೆಗಳ ಹೊರಗೆ ನೀರಿನಿಂದ ತುಂಬಿದ ಗಡಿಗೆಗಳನ್ನು ಬಾಯಾರಿದ ವ್ಯಕ್ತಿಗಳ ತೃಷೆಯನ್ನು ಇಂಗಿಸಲು ಇರಿಸಿರುತ್ತಾರೆ.
ಸೇವಾ ಮನೋಭಾವದ ಸಂಪ್ರದಾಯವು ಭಾರತದಷ್ಟೇ ಪುರಾತನವಾದದ್ದು. ದಾನ ಮಾಡುವುದು ಭಾರತದಲ್ಲಿ ಆಧ್ಯಾತ್ಮಿಕ ಉನ್ನತಿಯ ಅಳತೆಗೋಲಾಗಿದೆಯೇ ಹೊರತು ಆರ್ಥಿಕ ಉನ್ನತಿಯ ಸಂಕೇತವಾಗಿಲ್ಲ" ಎನ್ನುತ್ತಾರೆ ಪಾಟ್ನಾಯಕರು.
ಭಾರತದಲ್ಲಿ ಕುಟುಂಬಗಳು ಒಂದು ರೀತಿಯಲ್ಲಿ ಸೂಕ್ಷ್ಮವಾದ ಸಾಮಾಜಿಕ-ಆರ್ಥಿಕ ವ್ಯವಸ್ಥೆಗಳಾಗಿದ್ದು ಹಂಚಿಕೊಳ್ಳುವ ಪ್ರಕಿಯೆಯಾಗಿರುವ ದಾನವೆನ್ನುವ ಪಾರಂಪರಿಕ ಪದ್ಧತಿಯನ್ನು ಇಂದಿನ ಕಾಲದಲ್ಲಿ ದೇಣಿಗೆ ಅಥವಾ ವಂತಿಗೆ ಎಂದು ಕರೆಯಲಾಗುತ್ತಿದ್ದು ಇದು ಭಾರತೀಯರ ಸೇವಾ ಮನೋಭಾವವು ಇಂದಿಗೂ ಮುಂದುವರೆಯುತ್ತಿರುವುದರ ಸಂಕೇತವಾಗಿದ್ದು ಅದು ಅವರ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಅನುವಂಶೀಯ ಗುಣವಾಗಿ ರಕ್ತಗತವಾಗಿದೆ. ಇದರಿಂದ ವ್ಯಕ್ತವಾಗುವುದೇನೆಂದರೆ ಭಾರತೀಯರ ಕೌಟುಂಬಿಕ ಧಾರ್ಮಿಕ ಸೇವೆಗಳ ಮಹತ್ವವನ್ನು ಹತ್ತಿಕ್ಕಿ ಅದನ್ನು ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಕುಬ್ಜವಾಗಿಸುವ ಹುನ್ನಾರವನ್ನು ಹೊಂದಿದ್ದಾರೆ ಮತ್ತದು ಸಂಪೂರ್ಣವಾಗಿ ತಪ್ಪು ಹಾಗು ಪೂರ್ವಾಗ್ರಹಪೀಡಿತವಾದ್ದದ್ದಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಸಂಸ್ಥಾಗತ ಸೇವಾಕಾರ್ಯಗಳು ಭಾರತದ ಸ್ವಾತಂತ್ರ ಚಳುವಳಿಯ ಮೂಲಕ ಉಗಮವಾಗಿವೆ
ಕೊಡುವ ಪ್ರಕ್ರಿಯೆಯು ಯಾವಾಗಲೂ ಹಿಂದೂ ಭಾರತದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಇತಿಹಾಸದ ಅಂತರ್ಗತ ಭಾಗವಾಗಿತ್ತು ಮತ್ತದು ಯಾವಾಗಲೂ ಯಾವುದೇ ರೀತಿಯ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಕ್ರಿಯೆಯಾಗಿತ್ತು ಮತ್ತು ಅದಕ್ಕೆ ಪ್ರತಿಯಾಗಿ ಸನ್ಮಾನ ಅಥವಾ ಪ್ರಶಸ್ತಿಗಳನ್ನು ಕೊಡಮಾಡುವುದು ರೂಢಿಗತವಾದ ಪದ್ಧತಿಯಾಗಿರಲಿಲ್ಲ. ಧರ್ಮವೆನ್ನುವುದು ಕ್ರಮಬದ್ಧವಾದ ದಾನ ಕೊಡುವ ಪದ್ಧತಿಯಾಗಿತ್ತು ಆದರೆ ಅದನ್ನು ಕ್ರೋಢೀಕರಣಗೊಳಿಸುವುದಾಗಲೀ ಅಥವಾ ಅದನ್ನು ಸಂಸ್ಥಾಗತವಾದ ರೂಢಿ ಪದ್ಧತಿಯೊಳಗೆ ಅಡಕವಾಗಿಸುವುದಾಗಲೀ ಇರಲಿಲ್ಲ. ಸಂಸ್ಥೀಕರಣಗೊಳಿಸುವುದು ಎಂದರೆ ಎಲ್ಲಾ ಪ್ರಕ್ರಿಯೆಗಳನ್ನು ಒಗ್ಗೂಡಿಸುವುದು. ಪುರಾತನ ಹಿಂದೂ ಪದ್ಧತಿಯಂತೆ, ಇಂದಿಗೂ ಪ್ರಚಲಿತವಿರುವಂತೆ, ದಾನವೆನ್ನುವುದು ಪ್ರಚಾರಗಳಿಂದ ಮುಕ್ತವಾಗಿರ ಬೇಕು ಮತ್ತು ವ್ಯವಸ್ಥಿತ ಹಾಗೂ ಸಂಸ್ಥಾಗತ ದೇಣಿಗೆಗಳು ಹಿಂದೂಗಳ ದೃಷ್ಟಿಕೋನಕ್ಕೆ ಸಮಂಜಸವೆನಿಸುವುದಿಲ್ಲ; ಏಕೆಂದರೆ ದಾನ ಕೊಡುವುದು ಎಂದರೆ ಇತರರೊಂದಿಗೆ ಹಂಚಿಕೊಳ್ಳುವುದು ಎನ್ನುವ ಅವರ ಭಾವನೆಯಿಂದಾಗಿ. ಹೀಗೆ ಉನ್ನತವಾದ ಮತ್ತು ಮಾದರಿಯಾಗಿರುವ ಇತರರೊಂದಿಗೆ ಹಂಚಿಕೊಳ್ಳುವ ದಾನ ಪದ್ಧತಿಯು ಇಂದಿಗೂ ಈ ಪುರಾತನ ಭೂಮಿಯಲ್ಲಿ ಪ್ರಚಲಿತವಿದ್ದು ಸಕ್ರಿಯವಾಗಿದೆ, ಆದರೆ ಇದಕ್ಕೆ ಒಂದು ಸಂಸ್ಥಾಗತ ಸ್ವರೂಪವನ್ನು ಕೊಟ್ಟದ್ದು ಸ್ವಾತಂತ್ರ ಚಳುವಳಿ ಎಂದು ಹೇಳಬಹುದು. ಈ ಭಾವನಾತ್ಮಕ ಸ್ವಾತಂತ್ರ ಚಳುವಳಿಯು ರಾಷ್ಟ್ರೀಯ ಸೇವಾ ಕಾರ್ಯಕ್ರಮಗಳನ್ನು ಉತ್ತೇಜಿಸಿ ತಮ್ಮಲ್ಲಿರುವುದನ್ನೆಲ್ಲಾ ದೇಶಕ್ಕಾಗಿ ಯಾವುದೇ ವಿಧವಾದ ಪ್ರತಿಫಲಾಪೇಕ್ಷೆಯಿಲ್ಲದೆ ಸಮರ್ಪಿಸುವಂತೆ ಮಾಡಿತು ಎನ್ನುವುದು ಕೆಳಗಿನ ಎರಡು ನಿದರ್ಶನಗಳು ನಿರೂಪಿಸುತ್ತವೆ.
ಗೋಪಬಂಧು ದಾಸ್ ಎನ್ನುವ ಓರಿಸ್ಸಾದ ಸ್ವಾತಂತ್ರ ಹೋರಾಟಗಾರರು ತಮ್ಮ ಸಮಸ್ತ ಆಸ್ತಿಯನ್ನು ಲಾಲಾ ಲಜಪತ್ ರಾಯ್ ಅವರಿಂದ ಸ್ಥಾಪಿಸಲ್ಪಟ್ಟ ‘ಲೋಕ ಸೇವಾ ಸಂಘ’ಕ್ಕೆ ಅರ್ಪಿಸಿದರು. ಇಲ್ಲಿ ಗಮನಾರ್ಹವಾದ ಮುಖ್ಯವಾದ ವಿಷಯವೇನೆಂದರೆ ಗೋಪಬಂಧು ದಾಸ್ ಅವರು ತಮ್ಮ ಹೆಸರಿನಲ್ಲಾಗಲೀ ಅಥವಾ ತಮ್ಮ ತಂದೆ-ತಾಯಿಯರ ಹೆಸರಿನಲ್ಲಾಗಲಿ ಅಥವಾ ತಮ್ಮ ಕುಟುಂಬದ ಹೆಸರಿನಲ್ಲಾಗಲಿ ಯಾವುದೇ ವಿಧವಾದ ವಿಶ್ವಸ್ಥ ಮಂಡಳಿಯನ್ನು ಸ್ಥಾಪಿಸಲಿಲ್ಲ, ಆದರೆ ಅವರು ಎಲ್ಲವನ್ನೂ ಲಾಲಾ ಲಜಪತ್ ರಾಯ್ ಅವರು ಸ್ಥಾಪಿಸಿದ ದತ್ತಿ ಸಂಸ್ಥೆಗೆ ಧಾರೆಯೆರೆದರು. ಇದು ಯಾವುದೇ ಫಲಾಪೇಕ್ಷೆಯಿಲ್ಲದ ಸಂಪೂರ್ಣ ನಿಃಸ್ವಾರ್ಥತೆಯನ್ನು ನಿರೂಪಿಸುತ್ತದೆ, ಇಲ್ಲಿ ಹೆಸರಿಗಾಗಲಿ ಅಥವಾ ಭವಿಷ್ಯದಲ್ಲಿ ತನಗೆ ಅಥವಾ ತನ್ನ ಕುಟುಂಬ ವರ್ಗದವರಿಗೆ ಪ್ರತಿಷ್ಠೆ-ಪ್ರಖ್ಯಾತಿಗಳನ್ನು ತಂದುಕೊಳ್ಳುವ ಕುರಿತಾದ ಆಲೋಚನೆಯಾಗಲಿ ಇಲ್ಲ.
ದೇಶಬಂಧು ಚಿತ್ತರಂಜನದಾಸರು ಸಹ ತಮ್ಮೆಲ್ಲಾ ಆಸ್ತಿಯನ್ನು ದೇಶ ಮತ್ತು ಅದರ ನಿವಾಸಿಗಳಿಗಾಗಿ ತ್ಯಾಗ ಮಾಡಿದರು. (ದೇಶಬಂಧು ಚಿತ್ತರಂಜನ ದಾಸ್ ಅವರ ಜೀವನ ಮತ್ತು ಚರಿತ್ರೆ, ರಚನೆ ರತೀಂದ್ರನಾಥ್ ಸೇನ್ (ಪುಟ ೨) - ಆಂಗ್ಲ ಮೂಲ Life and Times of Deshbandhu Chittaranjandas by Rathindranath Sen [p2]
ಇಂತಹ ನೂರಾರು ದೊಡ್ಡ ಹಾಗೂ ಸಣ್ಣ ನಿದರ್ಶನಗಳು ಇರುವುವು; ಅವುಗಳಲ್ಲಿ ಎಷ್ಟೋ ಕುಟುಂಬಗಳು ದೇಶಕ್ಕಾಗಿ ಎಲ್ಲವನ್ನೂ ಅರ್ಪಿಸಿ ಸಂಪೂರ್ಣವಾಗಿ ನಿರ್ಗತಿಕರಾದವರಿದ್ದಾರೆ.
ವಾರ್ಟನ್ ಅವನ ಲೇಖನವೂ ಸಹ ಸ್ವಾತಂತ್ರ ಚಳುವಳಿಯಲ್ಲಿ ಹುಟ್ಟಿಕೊಂಡ ಇಂಥಹ ಹಲವಾರು ಉದ್ಯಮ ಮತ್ತು ವ್ಯಾಪಾರೀ ಸಂಸ್ಥೆಗಳ ಸೇವಾ ಕಾರ್ಯಗಳನ್ನು ಪಟ್ಟಿ ಮಾಡುತ್ತದೆ. ಈ ಲೇಖನದಿಂದ ಹೊರಹೊಮ್ಮುವ ಪ್ರಮುಖವಾದ ಅಂಶಗಳು ಹೀಗಿವೆ:
ಸ್ವಾತಂತ್ರ ಪೂರ್ವದಲ್ಲಿ ಅಂದರೆ ೧೯೪೭ನೇ ಇಸವಿಗಿಂತ ಹಿಂದೆ ದೇಶ ಕಟ್ಟುವ ಕಾರ್ಯಕ್ಕಾಗಿ ಕೊಟ್ಟ ದೇಣಿಗೆಗಳು ಬಹುಶಃ ಪುರಾತನ ಭಾರತದ ಸಮಾಜ ಸೇವಾ ಕಾರ್ಯಗಳ ಪ್ರಭಾವಕ್ಕೊಳಗಾಗಿ ಹೊರಹೊಮ್ಮಿದವುಗಳಾಗಿವೆ.
ಸ್ವಾತಂತ್ರ ಚಳುವಳಿಯ ಸಮಯದಲ್ಲಿ ಔದ್ಯೋಗಿಕ ಚಿಂತನೆಗಳುಳ್ಳ ಹಲವಾರು ನೇತಾರರು ಸ್ವಾತಂತ್ರ ಸಂಗ್ರಾಮಕ್ಕಾಗಿ ಆರ್ಥಿಕ ಸಹಾಯವನ್ನು ಕೊಡ ಮಾಡಿದರು. ಇವುಗಳಲ್ಲಿ ಜಿ.ಡಿ. ಬಿರ್ಲಾ ಅವರು ಚಳುವಳಿಗೆ ಮಾಡಿದ ಹಣಕಾಸು ಸಹಾಯ ಮತ್ತು ಹರಿಜನೋದ್ಧಾರಕ್ಕಾಗಿ ಬಾಲಗಂಗಾಧರ ತಿಲಕ್ ಅವರು ಸ್ಥಾಪಿಸಿದ ನಿಧಿಗೆ ೧೯೨೦ನೇ ಇಸವಿಯ ಕಾಲದಲ್ಲಿ ಬೃಹತ್ ಮೊತ್ತದ ದೇಣಿಗೆಯಾದ ರೂ. ಮೂರು ಲಕ್ಷಗಳನ್ನು ಕೊಟ್ಟ ಅರ್ದೇಶಿರ್ ಗೋದ್ರೇಝ್ ಅವರ ಉದಾರತೆಗಳು ಉಲ್ಲೇಖಾರ್ಹವಾಗಿವೆ.
ಬಿರ್ಲಾ ಅವರು ಜನಸಾಮಾನ್ಯರಿಗೆ ವಿದ್ಯೆಯು ಎಟುಕುವಂತೆ ಮಾಡಲು ಉದಾರವಾದ ಕಾಣಿಕೆಯನ್ನು ನೀಡಿದರು. ಸ್ವತಃ ಶಾಲೆಬಿಟ್ಟಿದ್ದ ಬಿರ್ಲಾ ಅವರೇ ೪೦೦ ಪ್ರಾಥಮಿಕ ಶಾಲೆಗಳನ್ನು ಒಂದೇ ವರ್ಷದಲ್ಲಿ ಸ್ಥಾಪಿಸಿದ್ದಲ್ಲದೆ ೧೯೨೫ನೇ ಇಸವಿಯಲ್ಲಿ ಬೃಹತ್ ಮೊತ್ತವೆನಿಸಿದ್ದ ರೂ. ೭೦,೦೦೦ಗಳನ್ನು ಅಲೀಘಡ್ ಮುಸ್ಲಿಮ್ ವಿಶ್ವವಿದ್ಯಾಲಯಕ್ಕೆ ವಂತಿಗೆಯಾಗಿ ಕೊಟ್ಟರು.
ಗಾಂಧೀಜಿಯವರ ಪಂಚಮ ಪುತ್ರನೆಂದೇ ಸ್ವತಃ ಹೇಳಿಕೊಳ್ಳುತ್ತಿದ್ದ ಶ್ರೀಮಂತ ವ್ಯಾಪಾರಿ ಜಮನ್ಲಾಲ್ ಬಜಾಜ್ ಅವರು ರಾಷ್ಟ್ರೀಯ ಚಳುವಳಿಯ ಅಂಗವಾಗಿ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ೧೯೧೪ರಷ್ಟು ಹಿಂದೆಯೇ ‘ಶಿಕ್ಷಾ ಮಂಡಲ್’ (ಕಲಿಕಾ ಕೇಂದ್ರವನ್ನು) ಸ್ಥಾಪಿಸಿದರು. ಈ ಕಲಿಕಾ ಕೇಂದ್ರವು ಬಹಳ ಮಹತ್ವವಾದ ಕೊಡುಗೆಯನ್ನು...ಆರ್ಥಿಕವಾಗಿ ಮತ್ತು ಇತರೇ ವಿಧವಾಗಿ......ಸ್ವಾತಂತ್ರ ಸಂಗ್ರಾಮಕ್ಕಾಗಿ ಕೊಟ್ಟಿತು. ಮುಂದೆ ಅವರು ಕುಟುಂಬದ ಒಟ್ಟು ಆಸ್ತಿಯಲ್ಲಿ ತಮ್ಮ ಪಾಲಿನ ಆಸ್ತಿಯನ್ನು ಸಂಪೂರ್ಣವಾಗಿ ಜಮನ್ಲಾಲ್ ಬಜಾಜ್ ಸೇವಾ ಪ್ರತಿಷ್ಠಾನವನ್ನು ಸ್ಥಾಪಿಸುವುದಕ್ಕಾಗಿ ಉಯಿಲು ಬರೆದಿಟ್ಟರು.
ಸ್ವಾತಂತ್ರೋತ್ತರದಲ್ಲಿ ಸಂಸ್ಥಾಗತ ರಾಷ್ಟ್ರೀಯ ಸಮಾಜ ಸೇವಾ ಕಾರ್ಯಕ್ರಮಗಳು
ಭಾರತವು ಸ್ವಾತಂತ್ರವನ್ನು ಗಳಿಸಿಕೊಂಡ ಮೇಲೆ, ದೇಶಭಕ್ತರು ದೇಶದ ಆಡಳಿತದ ಭಾಗವಾದರು, ಆಗ ರಾಷ್ಟ್ರವನ್ನು ಕಟ್ಟುವ ಜವಾಬ್ದಾರಿಯು ಸರ್ಕಾರದ ಹೊಣೆ ಎನ್ನುವ ಒಂದು ರೀತಿಯ ಭಾವನೆ ಒಡಮೂಡಿತ್ತು. ಆದ್ದರಿಂದ ರಾಷ್ಟ್ರೀಯ ಉದ್ದೇಶಗಳಿಗಾಗಿ ಸಮಾಜ ಸೇವಾ ಕಾರ್ಯಗಳನ್ನು ಕೈಗೊಳ್ಳುವುದು ಕಡಿಮೆಯಾಯಿತು. ಇದನ್ನೇ ವಾರ್ಟನ್ನನ ಲೇಖನವು ಈ ವಿಧವಾದ ಕ್ಷೀಣಿಸುವಿಕೆಯ ಕುರಿತು ಬರೆಯುತ್ತಾ ಹೀಗೆ ಹೇಳುತ್ತದೆ: "ಗೋದ್ರೇಝ್ ಅವರ ಪ್ರಕಾರ, ಭಾರತೀಯರ ಸಮಾಜ ಸೇವಾ ಕಾರ್ಯಕ್ರಮಗಳು ಬ್ರಿಟೀಷ್ ಆಡಳಿತದ ನಂತರ ಹಾಗೂ ಸ್ವಾತಂತ್ರ ದೊರೆತ ಮೊದಲ ದಿವಸಗಳಲ್ಲಿ ಕ್ಷೀಣವಾಗುತ್ತಾ ಹೋಯಿತು. ಏಕೆಂದರೆ ಸಮಾಜವಾದದ ರೀತಿಯ ಆರ್ಥಿಕ ನೀತಿಯಿಂದಾಗಿ ಭಾರತೀಯ ಕಂಪನಿಗಳು ಬಹುತೇಕ ಯಶಸ್ವಿಯಾಗಲಿಲ್ಲ ಹಾಗಾಗಿ ಸೇವಾ ಕಾರ್ಯಕ್ರಮಗಳು ಹಿಂಬದಿಗೆ ಸರಿದವು". ಇದು ದೊಡ್ಡ ವಾಣಿಜ್ಯೋದ್ಯಮಿಗಳು ನಡೆಸುವ ಸಮಾಜ ಸೇವಾ ಕಾರ್ಯಕ್ರಮಗಳ ವಿಷಯಕ್ಕೆ ಸಂಭಂದಪಟ್ಟಂತೆ ಬಹುತೇಕ ನಿಜವಾದರೂ ಸಹ ಸಣ್ಣ ವ್ಯಾಪರಕ್ಕೆ ಸಂಭಂದಪಟ್ಟ ಹಾಗೆ ಸಮಾಜ ಸೇವಾ ಚಟುವಟಿಕೆಗಳು ಮುಂದುವರೆದವು ಆದರೆ ಖಂಡಿತವಾಗಿಯೂ ಪಾಶ್ಚಿಮಾತ್ಯ ದೇಶಗಳ ವೇಗದಲ್ಲಲ್ಲ, ಏಕೆಂದರೆ ಸಮಾಜವಾದವನ್ನಪ್ಪಿಕೊಂಡಿದ್ದ ಭಾರತ ಸರ್ಕಾರವು ನಿಧಾನವಾಗಿ ಹೆಚ್ಚು ಹೆಚ್ಚಾಗಿ ವ್ಯಾಪಾರೀ ವಲಯವನ್ನು ಆಕ್ರಮಿಸಿಕೊಳ್ಳ ತೊಡಗಿತು ಮತ್ತು ಚಾಲನೆಯಲ್ಲಿದ್ದ ಹಲವಾರು ಉದ್ಯಮಗಳನ್ನೂ ಸಹ ರಾಷ್ಟ್ರೀಕರಣದ ಮೂಲಕ ಭಾರತೀಯ ವ್ಯಾಪರೋದ್ಯಮಿಗಳಿಂದ ಅವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಹಾಗಾಗಿ ಭಾರತೀಯ ವ್ಯಾಪರ ವಲಯವು ಕುಸಿದು ವ್ಯಾಪಾರೀ ರಂಗದ ಸಂಸ್ಥಾಗತ ಸಮಾಜ ಸೇವಾ ಕಾರ್ಯಕ್ರಮಗಳು ಕುಂಠಿತಗೊಳ್ಳುತ್ತಾ ನಿಧಾನ ಗತಿಯಲ್ಲಿ ಮುಂದುವರೆದವು. ಆದ್ದರಿಂದ ಉದ್ಯಮ ರಂಗದವರ ಸಂಸ್ಥಾಗತ ಸಮಾಜ ಸೇವಾ ಕಾರ್ಯಕ್ರಮಗಳು ಇತರೇ ದೇಶದಲ್ಲಿನ ತನ್ನ ಪ್ರತಿಸ್ಪರ್ಧಿಗಳಂತೆ ಅಭಿವೃದ್ಧಿಯಾಗಲಿಲ್ಲ ಮತ್ತದಕ್ಕೆ ಕಾರಣಗಳೂ ಸರ್ವವಿಧಿತವಾಗಿವೆ. ಆದರೆ ಇದೀಗ ಉದ್ಯಮರಂಗದ ಸಮಾಜ ಸೇವಾ ಕಾರ್ಯಗಳು ರಾಷ್ಟ್ರೀಯ ಸೇವಾ ಮನೋಭಾವದ ನಾಡಿಯ ದ್ಯೋತಕವಾಗಿರುವುದರಿಂದ ಭಾರತವು ಒಂದು ದೇಶವಾಗಿ ಸೇವಾ ಮನೋಭಾವವನ್ನು ಹೊಂದಿಲ್ಲ ಎನ್ನುವಂತೆ ಚಿತ್ರಿಸಲಾಗುತ್ತಿದೆ. ಆದರೂ ಸಹ ಅದೇ ವಾರ್ಟನ್ನನ ಲೇಖನವು ಹೇಗೆ ಸ್ವಾತಂತ್ರೋತ್ತರ ಕಾಲದಲ್ಲಿ ಭಾರತೀಯ ಉದ್ಯಮಿಗಳಾದ ಟಾಟಾ, ಮುರುಗೆಪ್ಪ, ಬಿರ್ಲಾ, ಬಜಾಜ್, ಗೋದ್ರೇಝ್, ಮಹೀಂದ್ರಾ ಮೊದಲಾದವರು ವಿದ್ಯಾ ಪ್ರಸಾರಕ್ಕಾಗಿ ಬೃಹತ್ ಪ್ರಮಾಣದಲ್ಲಿ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆನ್ನುವುದನ್ನು ಪ್ರಸ್ತಾಪಿಸುತ್ತದೆ.
ಹೊಸ ಸಮಾಜ ಸೇವಾ ಕಾರ್ಯಕ್ರಮದ ರಾಜತಾಂತ್ರಿಕ ನೀತಿಯು ಹಿಂದೂ ಗೃಹಸ್ಥರ ದಾನಶೀಲತೆ ಮತ್ತು ಹಿಂದೂ ಆಧ್ಯಾತ್ಮಿಕ ಸಂಸ್ಥೆಗಳ ದಾನ-ಧರ್ಮದ ಕಾರ್ಯಗಳನ್ನು ನಿರ್ಮೂಲಿಸಲು ಪ್ರಯತ್ನಿಸುತ್ತಿದೆ
ಪಾಶ್ಚಿಮಾತ್ಯರು ಅದರಲ್ಲೂ ವಿಶೇಷವಾಗಿ ಅಮೇರಿಕನ್ನರು ಸಂಸ್ಥಾಗತ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ತನ್ನ ವ್ಯಾಪರೋದ್ಯಮಿಗಳು ಅದರಲ್ಲೂ ಹೆಸರು ವಾಸಿಯಾದ ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ನಂತವರು ಸ್ಥಾಪಿಸಿದ ಪ್ರತಿಷ್ಠಾನಗಳ ಮೂಲಕ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಭಾರತೀಯರು ಸಾಕಷ್ಟು ಸಾಮಾಜಿಕ ಕಾಳಜಿಯನ್ನು ಹೊಂದಿದವರಲ್ಲ ಅಥವಾ ದಾನಶೀಲ ಗುಣವನ್ನು ಹೊಂದಿಲ್ಲ ಎಂದು ಪ್ರತಿಪಾದಿಸುವವರ ಮುಂದಾಳತ್ವವನ್ನು ವಹಿಸಿದ್ದಾರೆ. ವಾಸ್ತವವಾಗಿ ಬಿಲ್ ಗೇಟ್ಸ್ ಹಾಗು ವಾರನ್ ಬಫೆಟ್ ಇವರಿಬ್ಬರೂ ಹಿಂದಿನ ವರ್ಷ ಭಾರತಕ್ಕೆ ಬಂದು ಭಾರತೀಯ ವಾಣಿಜ್ಯೋದ್ಯಮಿಗಳನ್ನು ಖಂಡಿಸುವ ರೀತಿಯಲ್ಲಿ ಅವರಿಗೆ ನಿಮ್ಮ ರೀತಿ ನೀತಿಗಳನ್ನು ಬದಲಾಯಿಸಿಕೊಳ್ಳಿರೆಂದು ಹೇಳುತ್ತಾ ಹೆಚ್ಚು ಸಮಾಜ ಸೇವಾ ತತ್ಪರರಾಗಿ ಎಂದು ಬುದ್ಧಿ ಮಾತು ಹೇಳಿದರು. ಹೀಗೆ ಉದ್ದೇಶಪೂರ್ವಕವಾಗಿ ಭಾರತ ಮತ್ತು ಭಾರತೀಯ ವಾಣಿಜ್ಯೋದ್ಯಮಿಗಳನ್ನು ಕೀಳಾಗಿಸುವ ಹುನ್ನಾರ ಮತ್ತು ಪ್ರಸಾರ ಮಾಧ್ಯಮಗಳ ಉತ್ಪ್ರೇಕ್ಷಯುತ ವರದಿಗಳು ಹಾಗೂ ಪ್ರಚಾರಗಳಿಂದಾಗಿ ಅದು ಹಲವಾರು ಭಾರತೀಯ ವ್ಯಾಪಾರಿಗಳಿಗೆ ಗಂಭೀರವಾದ ಕೀಳರಿಮೆಯನ್ನುಂಟು ಮಾಡಿತಲ್ಲದೆ ಅವರುಗಳು ಅಮೇರಿಕಾದ ವಿಶ್ವವಿದ್ಯಾಲಯಗಳಿಗೆ ಬೃಹತ್ ಮೊತ್ತದ ಹಣಕಾಸನ್ನು ದೇಣಿಗೆಯಾಗಿ ಕೊಡುವಂತೆ ಮಾಡಿತು; ತನ್ಮೂಲಕ ತಮ್ಮ ಮತ್ತು ಭಾರತದ ಸೇವಾ ಮನೋಭಾವದ ಪ್ರಮಾಣವನ್ನು ಪ್ರಾತ್ಯಕ್ಷಿಕವಾಗಿ ಸಾಬೀತುಗೊಳಿಸಿಕೊಳ್ಳಲು. ಈ ವಿದ್ಯಮಾನದಿಂದ ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ಅವರು ದೊಡ್ಡ ಮೊತ್ತದ ದೇಣಿಗೆಗಳನ್ನು ಭಾರತದಿಂದ ಪಡೆದರು ತಾವು ಭಾರತಕ್ಕೆ ಕೊಟ್ಟ ವಂತಿಗೆಗಳಿಗೆ ಪ್ರತಿಯಾಗಿ! ಆದ್ದರಿಂದ ಹೊಸದೊಂದು ಸಮಾಜ ಸೇವೆಯ ರಾಜತಾಂತ್ರಿಕ ಆಟವೊಂದು ಪ್ರಾರಂಭವಾಗಿದೆ ಮತ್ತಲ್ಲಿ ವಾಣಿಜ್ಯ ಮತ್ತು ವ್ಯಾಪರೋದ್ಯಮಿಗಳ ಸೇವಾ ಕಾರ್ಯಕ್ರಮಗಳು ಮಾತ್ರವೇ ಸಮಾಜ ಸೇವೆ ಎನ್ನುವಂತೆ ಪ್ರತಿಬಿಂಬಿತವಾಗುತ್ತಿವೆ.
ಈ ರೀತಿ ನವ್ಯ ವಿಧಾನದ ಭೌಗೋಳಿಕ ರಾಜತಾಂತ್ರಿಕ ನೀತಿಯು ಭೌಗೋಳಿಕ ರಾಜಕೀಯದ ಪೂರ್ಣಪ್ರಮಾಣವಲ್ಲದಿದ್ದರೂ ಸಹ, ಅವುಗಳು ಒಂದು ದೇಶದಲ್ಲಿನ ಪ್ರಜೆಗಳು ಎಷ್ಟರ ಮಟ್ಟಿಗೆ ಸೇವಾ ಮನೋಭಾವದವರು ಮತ್ತು ಎಷ್ಟರ ಮಟ್ಟಿಗೆ ಅಲ್ಲ ಎಂದು ದೇಶಗಳನ್ನು ಪ್ರಮಾಣೀಕರಿಸುತ್ತವೆ ಮತ್ತು ವರ್ಗೀಕರಿಸುತ್ತವೆ. ಅದಲ್ಲದೆ ಅವುಗಳು ದಾನಶೀಲತೆಯನ್ನು ವಾಣೀಜ್ಯೋದ್ಯಮಿಗಳ ದೇಣಿಗೆಗಳೊಂದಿಗೆ ಸಮೀಕರಿಸಿ ಸಂಪ್ರದಾಯಗಳ ಮೂಲಕ ಆವಿರ್ಭವಿಸಿ ಅದನ್ನು ಕೌಟುಂಬಿಕ ಮಟ್ಟದ ಮೂಲದಿಂದ ಮೇಲ್ಮಟ್ಟಕ್ಕೆ ಅಭಿವೃದ್ಧಿಪಡಿಸಿ ಅದನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಟ್ಟಳೆಗಳಿಂದ ವಿಧಿಬದ್ಧವಾಗಿಸಿ ಸ್ವಾರ್ಥರಹಿತ ದಾನಕ್ಕೆ ಉದಾಹರಣೆಯಾಗಿ ನಿಲ್ಲುವ ಅತ್ಯುನ್ನತ ಗುಣವಾಗಿರುವ ಹಿಂದೂ ಭಾರತದ ಬೃಹತ್ ಪ್ರಮಾಣದ ಸೇವಾ ಕಾರ್ಯಗಳನ್ನು ನಾಶಪಡಿಸುವುದರೆಡೆಗೆ ಸಾಗಿವೆ. ಈ ಹೊಸ ರಾಜತಾಂತ್ರಿಕ ನೀತಿಯು ಜಾಗತಿಕ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಸಂಸ್ಥೆಗಳು ಕೈಗೊಳ್ಳುವ ಬೃಹತ್ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹೊರತು ಪಡಿಸುತ್ತವೆ ಅಥವಾ ಅವನ್ನು ಉದ್ದೇಶಪೂರ್ವಕವಾಗಿ ಪರಿಗಣೆನೆಗೇ ಬಾರದಂತೆ ಎಚ್ಚರ ವಹಿಸುತ್ತವೆ.
ಈ ದೇಶದಲ್ಲಿನ ಶ್ರೇಷ್ಠವಾದ ಹಾಗೂ ಪವಿತ್ರವಾದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ಹಲವಾರು ವೈವಿಧ್ಯಮಯವಾದ ಸೇವಾ ಕಾರ್ಯಕ್ರಮಗಳ ಸರಣಿಯನ್ನು ಹಮ್ಮಿಕೊಂಡು ಸಂಭಾವನೆ ಪಡೆಯದ ಸ್ವಯಂ ಸೇವಕರ ದೊಡ್ಡ ಪಡೆಯನ್ನೇ ನಿಯಮಿಸಿ ಅವರ ಮೂಲಕ ಸೇವಾ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುತ್ತವೆ; ಇವರ ಈ ನಿಃಸ್ವಾರ್ಥ ಸೇವೆಯನ್ನು ಗುರುತಿಸುವಲ್ಲಿ ದೇಶದ ಜನಮಾನಸವು ವಿಫಲವಾಗಿದೆ. ನಮ್ಮ ದೇಶದಲ್ಲಿ ಹೀಗೆ ಆಧ್ಯಾತ್ಮಿಕ ಸೇವಾ ಚಟುವಟಿಕೆಗಳು ಬಹು ಕಡಿಮೆ ಖರ್ಚಿನಲ್ಲಿ ನಿರ್ವಹಿಸಲ್ಪಡುತ್ತವೆ, ಆದರೆ ಅಮೇರಿಕೆಯ ಸೇವಾ ಪ್ರತಿಷ್ಠಾನಗಳು ಲಕ್ಷಾಂತರ ಡಾಲರುಗಳನ್ನು ಅದರ ಅಧಿಕಾರ ವರ್ಗಕ್ಕೆ ಮತ್ತು ನಿರ್ವಹಣಾ ಸಮಿತಿಯ ಸಿಬ್ಬಂದಿಗಾಗಿ ವ್ಯಯ ಮಾಡುತ್ತವೆ. ಹೊಸ ರಾಜತಾಂತ್ರಿಕ ನೀತಿಯು ಭಾರತದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೇವಾ ಕಾರ್ಯಗಳನ್ನು ಸಂಪೂರ್ಣವಾಗಿ ಮಸುಕುಗೊಳಿಸಿ ಹಿಂದೂ ಇಂಡಿಯಾದ ಅಂದರೆ ಭಾರತೀಯರು ತಮ್ಮ ಸಹ ಮಾನವರ ಬಗ್ಗೆ ಅನುಕಂಪವನ್ನು ಹೊಂದಿಲ್ಲ ಎಂದು ಬಿಂಬಿಸಲು ಪ್ರಯತ್ನಿಸುತ್ತದೆ. ಆದ್ದರಿಂದ ಹೊರಗಿನವರು ಇಲ್ಲಿಗೆ ಬಂದು ಧಾರ್ಮಿಕ ದತ್ತಿ ಸಂಸ್ಥೆಗಳನ್ನು ಸ್ಥಾಪಿಸಲಿ ಎನ್ನುವುದು ಅದರ ಹಿನ್ನಲೆಯಾಗಿದೆ. ಯಾವುದು ಸಂಪೂರ್ಣವಾಗಿ ಸಂಸ್ಥಾಗತ ಸೇವಾ ಕಾರ್ಯಗಳ ಅಥವಾ ಹಣಕಾಸಿನ ನೆರವಿನ ವಿಷಯವಾಗಿದೆಯೋ ಅದನ್ನುಪಯೋಗಿಸಿಕೊಂಡು ಹಿಂದೂ ಆಧ್ಯಾತ್ಮಿಕತೆಯಲ್ಲಿ ಸಹ-ಮಾನವರ ಬಗೆಗಿನ ಕಾಳಜಿಗೆ ಸ್ಥಾನವಿಲ್ಲವೆಂದು ಆರೋಪಿಸುವುದಲ್ಲದೆ ಹಿಂದೂಗಳಿಗೆ ಅನುಕಂಪವಿಲ್ಲದವರು ಎನ್ನುವ ಹಣೆಪಟ್ಟಿಯನ್ನು ಲಗತ್ತಿಸುವುದು ಹೊಸ ರಾಜತಾಂತ್ರಿಕ ನೀತಿಯ ದುರುದ್ದೇಶವಾಗಿದೆ. ಅಂದರೆ ಹಿಂದೂಗಳು ಕ್ರಿಶ್ಚಿಯನ್ನರಂತೆ ಸಾಮಾಜಿಕ ಕಾಳಜಿಯನ್ನು ಹೊಂದಿಲ್ಲ ಎಂದು ಬಿಂಬಿಸಿ, ಸಮಾಜ ಸೇವೆಯ ಸೋಗಿನಲ್ಲಿ ಭೌಗೋಳಿಕವಾಗಿ ಕ್ರೈಸ್ತವೇತರರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವ ಹುನ್ನಾರವು ಅದರ ಹಿಂದೆ ಅಡಗಿದೆ. ಹೀಗೆ ಈ ರಾಜತಾಂತ್ರಿಕ ನೀತಿಯ ಉದ್ದೇಶವು ಹಿಂದೂ ಆಧ್ಯಾತ್ಮಿಕತೆ ಮತ್ತು ಧರ್ಮವನ್ನು ಕ್ಷುಲ್ಲಕವಾಗಿ ಪ್ರತಿಬಿಂಬಿಸುವುದಷ್ಟೇ ಅಲ್ಲದೆ ಭಾರತದ ಪ್ರತಿಷ್ಠೆಯನ್ನೂ ಕುಗ್ಗಿಸುವುದೇ ಆಗಿದೆ.
ಹಿಂದೂ ಆಧ್ಯಾತ್ಮಿಕ ಸಂಸ್ಥೆಗಳ ಮಹತ್ವದ ಸಾಧನೆಗಳನ್ನು ಬಿಂಬಿಸಲು ಇಲ್ಲಿರುವ ಕೇವಲ ಮೂರು ನಿದರ್ಶನಗಳು ಸಾಕು. ಉದಾಹರಣೆಗೆ ರಾಮಕೃಷ್ಣ ಸಂಘವನ್ನು ತೆಗೆದುಕೊಳ್ಳಿ, ಅದು ೧೯೭ ಆಸ್ಪತ್ರೆಗಳನ್ನು ನಡೆಸುವುದಲ್ಲದೆ ಅದರ ಆರೋಗ್ಯ ಸಂಭಂದಿತ ಕಾರ್ಯಕ್ರಮಗಳು ೮೫ ಲಕ್ಷ ಜನರ ಸೇವೆಯನ್ನು ಮಾಡುತ್ತವೆ ಇದರಲ್ಲಿ ೨೫ ಲಕ್ಷ ಜನರು ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ರಾಮಕೃಷ್ಣ ಸಂಘವು ೧,೧೮೬ ವಿದ್ಯಾ ಸಂಸ್ಥೆಗಳ ಮೂಲಕ ೩.೪ ಲಕ್ಷ ವಿದ್ಯಾರ್ಥಿಗಳ ಸೇವೆಯನ್ನು ಮಾಡುತ್ತದೆ ಅದರಲ್ಲಿ ೧.೨೪ ಲಕ್ಷ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರು. ಮಾತಾ ಆಮೃತಾನಂದಮಯಿ ಮಠವನ್ನು ತೆಗೆದುಕೊಳ್ಳಿ, ೨೦೧೨ನೇ ಇಸವಿಯವರೆಗೆ ಅವರು ೨೫,೦೦೦ ಮನೆಗಳನ್ನು ನಿರ್ಮಿಸಿರುವುದಲ್ಲದೇ ಅವನ್ನು ದೇಶಾದ್ಯಂತ ಕೊಳಚೆ ನಿವಾಸಿಗಳಿಗೆ ಹಂಚಿದ್ದಾರೆ. ಅವರಿಗೆ ಇನ್ನೂ ಒಂದು ಲಕ್ಷ ಮನೆಗಳ ನಿರ್ಮಾಣವನ್ನು ಕೈಗೊಳ್ಳುವ ಯೋಜನೆಯಿದ್ದು ಆ ಗುರಿಯನ್ನು ಮುಟ್ಟುವುದು ಸರ್ಕಾರಗಳಿಗೇ ಕಠಿಣ ಸವಾಲಾಗಿದೆ. ಸತ್ಯಸಾಯಿ ಸೇವಾ ಕೇಂದ್ರವನ್ನು ನೋಡಿ. ಭಾರತದ ಸರ್ಕಾರದ ೯ನೇ ಯೋಜನಾ ಆಯೋಗದ ವರದಿಯಲ್ಲಿ ಹೀಗೆ ದಾಖಲಾಗಿದೆ, ‘ಸತ್ಯ ಸಾಯಿ ಸೇವಾ ಸಂಸ್ಥೆಯು ಸಾಟಿಯಿಲ್ಲದ ಸ್ವಯಂಪ್ರೇರಣೆಯಿಂದ ಯಾವುದೇ ವಿಧವಾದ ಸರ್ಕಾರಗಳ ಹಣಕಾಸಿನ ನೆರವಿಲ್ಲದೇ, ರೂ. ೩,೦೦೦ ದಶಲಕ್ಷದ ಬೃಹತ್ತಾದ ನೀರು ಸರಬರಾಜು ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡು ೧೮ ತಿಂಗಳುಗಳಲ್ಲಿ ನೀರಿನ ಬರವಿರುವ ಮತ್ತು ಫ್ಲೋರೈಡ್/ಸವಳುಯುಕ್ತ ನೀರಿನ ಸಮಸ್ಯೆ ಎದುರಿಸುತ್ತಿರುವ ಅನಂತಪುರ ಜಿಲ್ಲೆಯ ೭೩೧ ಹಳ್ಳಿಗಳು ಮತ್ತು ಕೆಲವೊಂದು ಪಟ್ಟಣಗಳಿಗೆ ನೀರನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಪ್ರತಿಷ್ಠಾನವು ಅದನ್ನು ಮೇದಕ್ ಮತ್ತು ಮೆಹಬೂಬ್ನಗರ ಜಿಲ್ಲೆಗಳಲ್ಲಿ ಪುನಃ ಮಾಡಿ ತೋರಿಸಿತಲ್ಲದೆ ಚನ್ನೈ ಪಟ್ಟಣಕ್ಕೆ ನೀರು ಪೂರೈಸುವ ತೆಲುಗು-ಗಂಗಾ ಜೋಡಣಾ ಕಾಲುವೆಯನ್ನು ಪೂರ್ಣಗೊಳಿಸಿತು. ಈ ಯೋಜನೆಗಳು ಆ ಪ್ರತಿಷ್ಠಾನಕ್ಕೆ ಹುಬ್ಬೇರುವಂತೆ ಮಾಡುವ ಅತ್ಯಧಿಕ ಮೊತ್ತವಾದ ರೂ. ೬೦೦ ಕೋಟಿಗಳಷ್ಟು ಭಾರವಾಗಲಿವೆ. ಇಂತಹ ಬೃಹತ್ ಹಣಕಾಸಿನ ಸೇವಾ ಕಾರ್ಯಯೋಜನೆಗಳು ಪಾಶ್ಚಿಮಾತ್ಯ ಅಥವಾ ಅಮೇರಿಕದಿಂದ ನಿಯಂತ್ರಿಸಲ್ಪಡುವ ಭೌಗೋಳಿಕ ಸೇವಾ ಯೋಜನೆಗಳ ರಾಜತಾಂತ್ರಿಕ ನೀತಿಯಲ್ಲಿ ಉದ್ದೇಶಪೂರ್ವಕವಾಗಿ ಕಡೆಗಣಿಸಲ್ಪಡುತ್ತವೆ.
ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳ, ೨೦೧೨ (Hindu Spiritual and Service Fair 2012 - HSSF 2012) ಇದರಲ್ಲಿ ಭಾಗವಹಿಸಿದ ಹಿಂದೂ ಆಧ್ಯಾತ್ಮಿಕ ಸಂಸ್ಥೆಗಳು ಕೈಗೊಂಡ ಒಟ್ಟಾರೆ ಸೇವಾ ಕಾರ್ಯಕ್ರಮಗಳ ವೆಚ್ಚವು ಅವರ ಬೃಹತ್ ಸೇವಾ ಕಾರ್ಯಕ್ರಮಗಳನ್ನು ಪ್ರತಿಬಿಂಬಿಸುತ್ತದೆ. ಮುಂದೆ ಅವುಗಳನ್ನು ಕೂಲಂಕುಷವಾಗಿ ವಿವರಿಸಿಲಾಗಿದೆ, ಅದನ್ನು ಅವಲೋಕಿಸಿದಾಗ ಹೇಗೆ ಉದ್ದೇಶಪೂರ್ವಕವಾಗಿ ಅದನ್ನು ಮರೆಮಾಚಲಾಗಿದೆ ಎನ್ನುವುದು ವಿಧಿತವಾಗುತ್ತದೆ. ೧೬೦ ಸಂಸ್ಥೆಗಳು ಭಾಗವಹಿಸಿದ ಆ ಮೇಳದಲ್ಲಿ ಸುಮಾರು ೯೮ ಸಂಸ್ಥೆಗಳು ೧ ಲಕ್ಷಕ್ಕೂ ಅಧಿಕ ವಿದ್ಯಾ ಸಂಸ್ಥೆಗಳನ್ನು ನಡೆಸುತ್ತವೆ ಹಾಗೂ ೫೮,೦೦೦ಕ್ಕೂ ಅಧಿಕ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಕೈಗೊಂಡಿವೆ ಮತ್ತು ೮,೨೦೦ ಆಸ್ಪತ್ರೆಗಳನ್ನು, ೮೮,೦೦೦ ದೇವಸ್ಥಾನಗಳನ್ನು....ಹೀಗೆ ಕೊನೆಯಿಲ್ಲದಂತೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಆಧ್ಯಾತ್ಮಿಕ ಸಂಸ್ಥೆಗಳ ಈ ಕಾರ್ಯಕ್ರಮಗಳನ್ನು ಹೊರತು ಪಡಿಸಿ ಪರಂಪರಾಗತ ಸಮುದಾಯಗಳ ವಂತಿಗೆಗಳು ಹಿಂದೂ ಭಾರತದ ಸೇವಾ ಚಟುವಟಿಕೆಗಳ ಆಸ್ತಿಯಾಗಿವೆ. ಉದಾಹರಣೆಗೆ ಪಂಜಾಬಿನಲ್ಲಿ ಕೇವಲ ಒಬ್ಬನೇ ಒಬ್ಬ ಪುರುಷ, ಸ್ತ್ರೀ ಅಥವಾ ಮಗು ಕಳೆದ ಮುನ್ನೂರು ವರ್ಷಗಳಿಂದ ಹೊಟ್ಟೆ ಹಸಿವಿನಿಂದ ನರಳಿಲ್ಲ ಇದಕ್ಕೆ ಗುರುದ್ವಾರಗಳು ಪಾಲಿಸಿಕೊಂಡು ಬರುತ್ತಿರುವ ಲಂಗರ್ ಪದ್ಧತಿಯು ಕಾರಣವಾಗಿದ್ದು ಅದು ನಿತ್ಯವೂ ಲಕ್ಷಲಾದಿ ಜನರಿಗೆ ಅನ್ನ ನೀಡುತ್ತಿರುವುದಕ್ಕೆ ಕೃತಜ್ಞರಾಗಿರೋಣ. ಜೈನರೂ ಸಹ ದೊಡ್ಡ ದೊಡ್ಡ ಸೇವಾ ಕಾರ್ಯಕ್ರಮಗಳನ್ನು ದೇಶಾದ್ಯಂತ ನಡೆಸುತ್ತಾರೆ. ಸಂಪ್ರದಾಯ ಬದ್ಧವಾದ ಸಮುದಾಯಗಳು ತಮ್ಮ ಆದಾಯದ ನಿಯಮಿತ ಭಾಗವನ್ನು ದಾನ-ಧರ್ಮಗಳಿಗಾಗಿ ಮೀಸಲಿಡುತ್ತವೆ. ಮಹಾಮಾಯಿ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ವಂತಿಗೆ ಶುಲ್ಕವನ್ನು ತಮಿಳುನಾಡಿನ ನಾಡಾರ್ ಸಮುದಾಯವು ಸಂಗ್ರಹಿಸಿ, ನೂರಾರು ಸಂಸ್ಥೆಗಳನ್ನು ಸ್ಥಾಪಿಸಿರುವುದಲ್ಲದೆ ಅವುಗಳಿಗೆ ದೇಣಿಗೆಗಳನ್ನು ಶತಮಾನಕ್ಕೂ ಅಧಿಕ ಕಾಲದಿಂದ ನೀಡುತ್ತಾ ಬಂದಿದೆ. ಇದೇ ವಿಧವಾಗಿ ತಮಿಳುನಾಡಿನ ನಗರ್ತ ಸಮುದಾಯವು ಸಹ ಮಹಾಮಾಯಿಯ ಮೂಲಕ ಬೃಹತ್ ಸೇವಾ ಸಂಸ್ಥೆಗಳನ್ನು ನಡೆಸುತ್ತದೆ. ಮಾರ್ವಾಡಿಗಳು ಮತ್ತು ಉತ್ತರ ಭಾರತದ ಇತರೇ ವರ್ಗಗಳು ಅದನ್ನು ’ಧರ್ಮಾದ’ದ ಮೂಲಕ ಕೈಗೊಳ್ಳುತ್ತವೆ. ಈಗಲೂ ಸಹ ಈ ಸಾಂಪ್ರದಾಯಿಕ ಪದ್ಧತಿಯು ಪ್ರಚಲಿತವಿದ್ದು ಸಣ್ಣ ವ್ಯಾಪಾರೀ ವರ್ಗದವರಲ್ಲಿ ಅಸ್ತಿತ್ವದಲ್ಲಿದೆ. ಆದ್ದರಿಂದ ದಾನವೆನ್ನುವುದು ಇಡೀ ಸಮುದಾಯದಿಂದ ಮಾಡಲ್ಪಡುತ್ತದೆಯೇ ಹೊರತು ಪ್ರತ್ಯೇಕ ವ್ಯಕ್ತಿಗಳಿಂದಲ್ಲ ಎನ್ನುವುದು ಗಮನಾರ್ಹ.
ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಸಂಸ್ಥೆಗಳು ದಾಖಲೆಯ ಪ್ರಮಾಣದಲ್ಲಿ ಸಮಾಜ ಸೇವೆಯ ಬೃಹತ್ ಜಾಲವನ್ನೇ ಹೊಂದಿವೆ, ಇವುಗಳೊಂದಿಗೆ ಸಮುದಾಯಗಳು ಮಾಡುವ ಸಮಾಜ ಸೇವಾ ಕಾರ್ಯಕ್ರಮಗಳನ್ನು ಸೇರಿಸಿಕೊಂಡರೆ, ಅದು ಹಿಂದೂ ಆಧ್ಯಾತ್ಮಿಕತೆಯ ವಾಸ್ತವ ಚಿತ್ರಣವನ್ನು ನೀಡುತ್ತದೆ. ಕೌಟುಂಬಿಕ ಹಂತದಲ್ಲಿ ಇದ್ದ ಹಿಂದೂ ದೇಣಿಗೆ ಅಥವಾ ದಾನ-ಧರ್ಮದ ಪದ್ಧತಿಯು ಇಂದು ಸಂಸ್ಥೀಕರಣಗೊಂಡಿದೆ. ಆದರೆ ಯಾರಿಗೂ ಇಂತಹ ಬೃಹತ್ ಪ್ರಮಾಣದ ಮತ್ತು ಪವಿತ್ರವಾದ ಚಟುವಟಿಕೆಗಳ ಕುರಿತು ದೇಶದ ಒಳಗಡೆಯಾಗಲಿ ಅಥವಾ ಸೇವಾಕಾರ್ಯಗಳ ಕುರಿತಾದ ರಾಜತಾಂತ್ರಿಕ ನೀತಿಯನ್ನು ಪ್ರತಿಪಾದಿಸುವ ಹೊರ ಪ್ರಪಂಚಕ್ಕಾಗಲಿ ತಿಳಿದೇ ಇಲ್ಲ; ಈ ರಾಜತಾಂತ್ರಿಕ ನೀತಿಯು ಕೇವಲ ವಾಣಿಜ್ಯೋದ್ಯಮಿಗಳ ಹಣಕಾಸಿನ ನೆರವನ್ನಷ್ಟೇ ಪರಿಗಣನೆಗೆ ತೆಗೆದುಕೊಂಡು ಉದ್ದೇಶಪೂರ್ವಕವಾಗಿ ಇಂತಹ ವಾಣಿಜ್ಯೇತರ ಸೇವಾ ಸಂಸ್ಥೆಗಳು ಕೈಗೊಳ್ಳುವ ಸಮಾಜ ಸೇವಾ ಕಾರ್ಯಗಳನ್ನು ಹತ್ತಿಕ್ಕುತ್ತವೆ.
ಹಾಗಾಗಿ ಈ ಮೇಳವು ಹಿಂದೂ ಧಾರ್ಮಿಕ ಮತ್ತು ಸೇವಾ ಸಂಸ್ಥೆಗಳ ಕಾರ್ಯವೈಖರಿಯನ್ನು ಹೊರಪ್ರಪಂಚಕ್ಕೆ ತೆರೆದಿಡುವ ಪ್ರಯತ್ನವಾಗಿದೆ.
ಜಾಗತಿಕ ಮಟ್ಟದ ರಾಜತಾಂತ್ರಿಕ ನೀತಿಯು ನಿಃಸಂಶಯವಾಗಿ ಲೆಕ್ಕಾಚಾರದಿಂದ ಕೂಡಿದ ಸಂಗತಿಯಾಗಿದ್ದು ಅದು ಪಾಶ್ಚಿಮಾತ್ಯರ ದೊಡ್ಡಸ್ಥಿಕೆಯನ್ನು ಪ್ರದರ್ಶಿಸುವ ಹುನ್ನಾರವಾಗಿದೆ ಮತ್ತು ಅದೇ ಸಮಯದಲ್ಲಿ ವಿಶ್ವದ ಇತರೇ ದೇಶಗಳ ಅದರಲ್ಲೂ ವಿಶೇಷವಾಗಿ ಹಿಂದೂ ಭಾರತವು ನಿರೀಕ್ಷಿತ ಪ್ರಮಾಣದಲ್ಲಿ ಸಮಾಜ ಮುಖಿಯಾಗಿಲ್ಲವೆಂದು ಬಿಂಬುಸುವುದೇ ಆಗಿದೆ. ಈ ಸಂಗತಿಯು ಕೇವಲ ಭಾರತ ದೇಶ ಮತ್ತು ಅದರ ಜನರ ಮುಖಕ್ಕೆ ಕೆಸರೆರಚುವ ವಿಚಾರವಾಗಿರದೆ ಪರಂಪರಾಗತವಾಗಿ ಪುರಾತನ ಕಾಲದಿಂದಲೂ ಆಚರಣೆಯಲ್ಲಿರುವ ಮತ್ತು ಅತ್ಯುನ್ನತ ಸ್ಥಾನದಲ್ಲಿರುವ ಹಿಂದೂ ಸೇವಾ ಕಾರ್ಯಕ್ರಮಗಳ ಮಹತ್ವವನ್ನು ಕಡೆಗಣಿಸುವ ಅಥವಾ ಅದನ್ನು ಕೀಳಾಗಿ ಬಿಂಬಿಸುವ ಪ್ರಯತ್ನವೇ ಆಗಿದೆ. ಇದು ದೇಶಭಾಂದವರು ಸ್ಪಂದಿಸುವ ವಿಚಾರವಾಗಿದೆ. ಬೇರೆ ದೇಶಗಳಲ್ಲಿ ಹೀಗಾಗಿದ್ದರೆ ಸಾರ್ವಜನಿಕರ ಅಭಿಪ್ರಾಯವನ್ನು ಕೆರಳಿಸಿ ತಮ್ಮ ದೇಶ ಮತ್ತದರ ಸಂಪ್ರದಾಯ ಹಾಗೂ ಪ್ರತಿಷ್ಠೆಯನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದರು. ಆದರೆ ಭಾರತದಲ್ಲಿನ ಜನಮಾನಸವು ಎಷ್ಟರ ಮಟ್ಟಿಗೆ ಪಾಶ್ಚಿಮಾತ್ಯರ ಹಿಡಿತಕ್ಕೆ ಒಳಪಟ್ಟಿದೆ ಎಂದರೆ, ಇಲ್ಲಿನ ಪ್ರಸಾರ ಮಾಧ್ಯಮಗಳು ಮತ್ತು ಸಾರ್ವಜನಿಕರೂ ಸಹ ಪಾಶ್ಚಿಮಾತ್ಯರು ಊದುವ ಹೊಸ ಸೇವಾಕಾರ್ಯಕ್ರಮಗಳ ರಾಜನೀತಿಯ ಶಂಖಕ್ಕೆ ದನಿಗೂಡಿಸುತ್ತಾರೆ. ಸಾಮಾನ್ಯವಾಗಿ ಇಂತಹ ತಪ್ಪುಗಳನ್ನು ಮತ್ತು ದುರುದ್ದೇಶಪ್ರೇರಿತ ಚಿತ್ರಣವನ್ನು ಒಡಮೂಢಿಸುವ ವಿಷಯಗಳನ್ನು ಸರಿಪಡಿಸುವುದು ದೇಶದಲ್ಲಿನ ರಾಜಕೀಯ ಪಕ್ಷಗಳ ಮತ್ತು ಇಲ್ಲಿನ ರಾಜಕೀಯ ಮತ್ತು ಸಂವಿಧಾನಾತ್ಮಕ ವ್ಯವಸ್ಥೆಯ ಜವಾಬ್ದಾರಿಯಾಗಿರುತ್ತದೆ. ವಿಷಾದದ ಸಂಗತಿಯೇನೆಂದರೆ ಭಾರತ ದೇಶವಾಗಲೀ ಮತ್ತು ಇಲ್ಲಿನ ರಾಜಕೀಯ ವ್ಯವಸ್ಥೆಯಾಗಲೀ ತಾವು ಹಿಂದೂ ಭಾರತದ ಪರಂಪರಾಗತ ಅನುಯಾಯಿಗಳೆನ್ನುವುದನ್ನು ಒಪ್ಪಿಕೊಳ್ಳುಲು ಸಿದ್ಧವಿಲ್ಲದೇ ಇರುವುದರಿಂದ ಅವು ಹಿಂದೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮುಖ್ಯವಾಹಿನಿಯನ್ನು ಅನಾಥವಾಗಿಸುವದಷ್ಟೇ ಅಲ್ಲದೆ ದೇಶವಾಸಿಗಳು ತಲೆತಗ್ಗಿಸುವಂತೆ ಮಾಡುವುದರೊಂದಿಗೆ ದೇಶದ ಪ್ರತಿಷ್ಠೆಯೂ ಕುಂದಲು ಅನುವು ಮಾಡಿ ಕೊಟ್ಟಿದ್ದಾರೆ.
ಪಾಶ್ಚಿಮಾತ್ಯರ ಈ ವಿಧವಾದ ಪೈಪೋಟಿಯನ್ನೆದುರಿಸಲು ಮತ್ತು ಹಿಂದೂ ಭಾರತದ ನಾಗರೀಕತೆಯನ್ನು ರಕ್ಷಿಸಿಕೊಳ್ಳಲು, ನಾಗರೀಕತೆಗಳ ಸಮನ್ವಯೋದ್ದೇಶದ ಭೌಗೋಳಿಕ ಪ್ರತಿಷ್ಠಾನ (ಭಾರತ) - Global Foundation for Civilisational Harmony [India] ಇವರಿಂದ ಸ್ಥಾಪಿಸಲ್ಪಟ್ಟ ’ಹಿಂದೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸೇವಾ ಪ್ರತಿಷ್ಠಾನ’ವು - Hindu Spiritual and Service Foundation ಅಥವಾ ಸಂಕ್ಷಿಪ್ತವಾಗಿ HSSF; ಆಧ್ಯಾತ್ಮಿಕ ಮತ್ತು ಸೇವಾ ಮೇಳಗಳನ್ನು ಆಯೋಜಿಸುವ ಕಲ್ಪನೆಯನ್ನು ಈ ಕೆಳಕಂಡ ಉದ್ದೇಶಗಳ ಈಡೇರಿಕೆಗಾಗಿ ಪ್ರಾರಂಭಿಸಿದೆ - (ಅ) ಹಿಂದೂ ಸಂಪ್ರದಾಯದಲ್ಲಿನ ಸೇವೆಯ ಕಲ್ಪನೆಯನ್ನು ಪುನರುದ್ಧರಿಸುವುದು ಮತ್ತು ಅದಕ್ಕೆ ಒತ್ತು ಕೊಡುವುದು ಅಂದರೆ, "ದೈವತ್ವವನ್ನು ಪಡೆಯಲು" -”ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯ ಚ’ ಎನ್ನುವುದನ್ನು ಆಚರಣೆಯಲ್ಲಿಡಲು ಮತ್ತು ಯಾವುದೇ ವಿಧವಾದ ಕ್ಷುಲ್ಲಕ ಅಥವಾ ಕೀಳಾದ ಉದ್ದೇಶಗಳಿಗಾಗಿ ಅಲ್ಲ, ಉದಾಹರಣೆಗೆ ಇತರರನ್ನು ನಮ್ಮ ಧರ್ಮಕ್ಕೆ ಮತಾಂತರಗೊಳಿಸುವುದಕ್ಕಲ್ಲ ಮತ್ತು (ಬ) ದೊಡ್ಡ ಮತ್ತು ಸಣ್ಣ ಹಾಗು ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ, ಹಿಂದೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸೇವಾ ಸಂಸ್ಥೆಗಳು ಕೈಗೊಳ್ಳುವ ಬಹುಮುಖ ಸೇವಾ ಕಾರ್ಯಕ್ರಮಗಳ ಪ್ರದರ್ಶನ ಮತ್ತು ತನ್ಮೂಲಕ ಜಗತ್ತಿಗೆ ಆಧ್ಯಾತ್ಮಿಕ ಮತ್ತು ಸಾಮುದಾಯಿಕ ಹಿಂದೂ ಸಂಸ್ಥೆಗಳು ಕೈಗೊಳ್ಳುವ ಸಂಸ್ಥಾಗತ ಸೇವೆಗಳ ನೈಜ ಚಿತ್ರಣವನ್ನು ನೀಡುವುದು. ಈ ಮೇಳಗಳಲ್ಲಿ ಪ್ರತಿ ಸಂಸ್ಥೆಗೂ ಒಂದೊಂದು ಮಳಿಗೆಗಳನ್ನು ಅದರ ಅವಶ್ಯಕತೆ ಮತ್ತು ಪ್ರಮಾಣದ ಆಧಾರದ ಮೇಲೆ ನೀಡಲಾಗಿತ್ತು, ಇದರ ಮೂಲಕ ಅವರು ಮಾಡುತ್ತಿರುವ ವಿವಧ ಸೇವಾ ಚಟುವಟಿಕೆಗಳನ್ನು ಪ್ರದರ್ಶಿಸುವುದಕ್ಕೆ ಅನುಕೂಲವಾಯಿತಲ್ಲದೆ ಅವರ ಸಂಸ್ಥೆಯ ಧ್ಯೇಯೋದ್ಧೇಶಗಳನ್ನು ಸಂದರ್ಶಕರಿಗೆ ವಿವರಿಸಲು ಸಾಧ್ಯವಾಯಿತು. ಇದರೊಂದಿಗೆ ಮೇಳದ ಪ್ರಮುಖ ಸ್ಥಳದಲ್ಲಿ ಮೇಳದಲ್ಲಿ ಭಾಗವಹಿಸಿದ ಎಲ್ಲಾ ಸಂಸ್ಥೆಗಳ ಸೇವಾ ಕಾರ್ಯಕ್ರಮಗಳನ್ನು ಬಿಂಬಿಸುವ ಚಿತ್ರ-ಪಟಗಳನ್ನು ಇಡುವುದರೊಂದಿಗೆ ಒಟ್ಟಾರೆಯಾಗಿ ಎಲ್ಲಾ ಸೇವಾ ಸಂಸ್ಥೆಗಳು ಕೈಗೊಳ್ಳುವ ಎಲ್ಲಾ ವೈವಿಧ್ಯಮಯ ಕಾರ್ಯಕ್ರಮಗಳನ್ನು ತೋರಿಸುವ ಚಿತ್ರ-ಪಟಗಳನ್ನೂ ಸಹ ಪ್ರದರ್ಶನಕ್ಕೆ ಇಡಲಾಗಿತ್ತು.
೨೦೧೨ರ ಹಿಂದೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸೇವಾ ಮೇಳವು ಜನವರಿ ೨೫-೨೯, ೨೦೧೨ರಲ್ಲಿ ನಡೆಯಿತು; ಇದು ೨೦೦೯ರಿಂದಲೂ ಆಯೋಜಿಸಿಕೊಂಡು ಬರುತ್ತಿರುವ ಇಂತಹ ವಾರ್ಷಿಕ ಮೇಳಗಳಲ್ಲಿ ನಾಲ್ಕನೆಯದಾಗಿತ್ತು. ಮೂರು ದಿವಸ ನಡೆದ ಮೊದಲನೆಯ ಮೇಳದಲ್ಲಿ ಕೆಲ ೩೦ ಸಂಸ್ಥೆಗಳು ಭಾಗವಹಿಸಿದ್ದವು. ಅಲ್ಲಿಂದ ಅನುಕ್ರಮವಾಗಿ ನಡೆದ ಮೇಳಗಳು ಐದು ದಿವಸಗಳಷ್ಟು ಕಾಲ ನಡೆದವು. ಎರಡನೇ ಮೇಳದಲ್ಲಿ ಭಾಗವಹಿಸಿದ ಸಂಸ್ಥೆಗಳ ಸಂಖ್ಯೆಯು ೯೮ಕ್ಕೆ ಏರಿದರೆ, ಮೂರನೆಯ ಮೇಳದಲ್ಲಿ ಅದು ೧೨೦ಕ್ಕೇರಿ ಈಗಿನ ನಾಲ್ಕನೆಯ ಮೇಳದಲ್ಲಿ ಆ ಸಂಸ್ಥೆಗಳ ಸಂಖ್ಯೆಯು ೧೬೦ನ್ನು ಮುಟ್ಟಿದೆ. ಈ ಮೇಳಗಳು ಮಹತ್ವವನ್ನು ಪಡೆಯುತ್ತಿರುವಂತೆಯೇ, ಹೆಚ್ಚು ಹೆಚ್ಚು ಪ್ರಮುಖ ಸಂಘ ಸಂಸ್ಥೆಗಳು ಅದರಲ್ಲೂ ಸರ್ಕಾರಿ ಸ್ವಾಮ್ಯದ ತಿರುಮಲ-ತಿರುಪತಿ ದೇವಸ್ಥಾನ, ದ್ವಾರಕಾ ತಿರುಮಲ ದೇವಸ್ಥಾನ, ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ನಿಯಮ ಮಂಡಳಿ, ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಮೊದಲಾದವುಗಳು ಭಾಗವಹಿಸಿವೆ. ಪ್ರಖ್ಯಾತವಾಗಿರುವ ಹಿಂದೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸೇವಾ ಸಂಸ್ಥೆಗಳೂ ಸಹ ಭಾಗವಹಿಸಲು ಪ್ರಾರಂಭಿಸಿವೆ.
ಇದರೊಳಗೆ ಅಡಕವಾಗಿರುವ ವಿವರಗಳು ತೋರಿಸುವಂತೆ, ಹಿಂದೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸೇವಾ ಸಂಸ್ಥೆಗಳು ಎಷ್ಟೆಲ್ಲಾ ವಿಧವಾದ ಮತ್ತು ಬೃಹತ್ ಪ್ರಮಾಣದಲ್ಲಿ ಅವಿರತವಾಗಿ ಕಾರ್ಯನಿರತವಾಗಿವೆ ಎನ್ನುವುದನ್ನು ಸಂದರ್ಶಕರಿಗೆ, ಸಾರ್ವಜನಿಕರಿಗೆ ಮತ್ತು ಪ್ರಸಾರ ಮಾಧ್ಯಮಗಳಿಗೆ ತೋರಿಸಿ ಕೊಟ್ಟಿದ್ದಲ್ಲದೆ ಹಿಂದೂ ಆಧ್ಯಾತ್ಮಿಕತೆಯು ಹೇಗೆ ಪರಂಪರಾಗತವಾಗಿ ಮತ್ತು ನಿಃಸ್ವಾರ್ಥವಾಗಿ ಸಾಮಾಜಿಕ ಕಳಕಳಿಯನ್ನು ಹೊಂದಿವೆ ಎನ್ನುವುದನ್ನು ತೋರಿಸಿಕೊಟ್ಟಿತು. ಮತ್ತು ಹಿಂದೂ ಸೇವಾ ಸಂಸ್ಥೆಗಳ ದೃಷ್ಟಿಯಲ್ಲಿ ವ್ಯತಿರಿಕ್ತವೆನಿಸುವ ಮಾಡಿದ ಕಾರ್ಯಗಳ ಕುರಿತಾಗಿ ಪ್ರಚಾರ ಮಾಡಿಕೊಂಡರೆ ಮೋಕ್ಷ ಸಾಧನೆಗೆ ಅಥವಾ ದೈವ ಸಾಕ್ಷಾತ್ಕಾರಕ್ಕೆ ತೊಡಕುಂಟಾಗುತ್ತದೆಂದು ಪ್ರಚಾರವನ್ನು ಕೈಗೊಳ್ಳಲು ಹಿಂಜರಿದದ್ದರಿಂದ ಅವರ ಕಾರ್ಯಗಳ ಕುರಿತು ಜನ ಮಾತನಾಡದಿರಲು ಕಾರಣವಾದ ತಪ್ಪಿನ ಅರಿವಾದದ್ದು. ಹಿಂದೂ ಆಧ್ಯಾತ್ಮಿಕತೆಯು ಕೇವಲ ಪರಲೋಕದ ಕುರಿತಾಗಿ ಆಲೋಚಿಸುತ್ತದೆಂದು ಮತ್ತು ಅದು ಸಾಮಾಜಿಕ ಸ್ಪೃಹೆಯನ್ನು ಹೊಂದಿಲ್ಲವೆಂದು ಉದ್ದೇಶಪೂರ್ವಕವಾಗಿ ಹೇಳಲಾಗುತ್ತಿರುವುದಕ್ಕೂ ಮತ್ತು ವಾಸ್ತವವಾಗಿ ಹಿಂದೂ ಸಂಘಟನೆಗಳು ಆಧ್ಯಾತ್ಮಿಕತೆಯಿಂದ ಪ್ರೇರಣೆಗೊಂಡು ಅವುಗಳು ಕೈಗೆತ್ತಿಕೊಂಡಿರುವ ಸಮಾಜ ಸೇವಾ ಯೋಜನೆಗಳ ಮಧ್ಯೆ ದೊಡ್ಡದಾದ ಬಿರುಕಿರುವಂತೆ ಬಿಂಬಿಸಲಾಗುತ್ತಿದೆ. ಇದನ್ನು ತೊಡೆದು ಹಾಕಲು ನೂತನ ಯೋಜನೆಯಾದ ಹಿಂದೂ ಧಾರ್ಮಿಕ ಸಂಸ್ಥೆಗಳ ಈ ಮೇಳವು ಪ್ರಯತ್ನಿಸುತ್ತಿದೆ ಮತ್ತು ಇದರಲ್ಲಿ ಭಾಗವಹಿಸುವ ಸಂಘ ಸಂಸ್ಥೆಗಳು ಸ್ವತಃ ತಮ್ಮ ಪ್ರಚಾರಕ್ಕೆ ಮುಂದಾಗದೆ ಅವುಗಳು HSSF ನ ಆಹ್ವಾನದ ಮೇರೆಗೆ ಇದರಲ್ಲಿ ಭಾಗವಹಿಸಿ ತಮ್ಮ ಕಾರ್ಯಸಾಧನೆಯನ್ನು ಪ್ರದರ್ಶಿಸುತ್ತಿವೆ ಎನ್ನುವುದು ಗಮನಿಸಬೇಕಾದ ಸಂಗತಿ. ಇದು ಅವುಗಳು ತಮ್ಮ ಸಂಸ್ಥೆಯ ಸತ್ಕಾರ್ಯಗಳನ್ನು ಕುರಿತಾಗಿ ಮಾತನಾಡಬೇಕಾಗಿ ಬಂದಾಗ ಉಂಟಾಗುವ ಧರ್ಮ ಸಂಕಟವನ್ನು ನಿವಾರಿಸುತ್ತದೆ. ಈ ದೃಷ್ಟಿಯಿಂದ HSSನ ಮೇಳವು ಹಿಂದೂ ಧಾರ್ಮಿಕ ಸಂಘ ಸಂಸ್ಥೆಗಳು ತೊಡಕುಗಳನ್ನು ಅಧಿಗಮಿಸಿ ತಾವು ವೈಯ್ಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಮಾಡುತ್ತಿರುವ ಬೃಹತ್ ಸೇವಾ ಕಾರ್ಯಕ್ರಮಗಳನ್ನು ಸಾರ್ವಜನಕರೆದುರಿಗೆ ತೆರೆದಿಡಲು ಅವಕಾಶವನ್ನು ಒದಗಿಸಿದೆ.
ಮೇಳಗಳು ಸೇವಾಮನೋಭಾವವನ್ನು ಪ್ರೇರೇಪಿಸುತ್ತವೆ
ಈ ಮೇಳದ ಮತ್ತೊಂದು ಮಹತ್ವದ ವಿಷಯವೇನೆಂದರೆ ಇದು ಕೇವಲ ಹಿಂದೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸೇವಾ ಸಂಸ್ಥೆಗಳ ಕಾರ್ಯವೈಖರಿಯನ್ನು ಪ್ರದರ್ಶಿಸುವುದಷ್ಟೇ ಅಲ್ಲದೆ ಇದು ಇನ್ನೂ ಹೆಚ್ಚು ಹೆಚ್ಚು ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸುವುದಲ್ಲದೆ ಇದುವರೆಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ಇರುವ ಸಂಘ ಸಂಸ್ಥೆಗಳಿಗೂ ಅದರಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತದೆ.
ಇಂದಿಗೂ ಪ್ರಚಲಿತವಿರುವ, ಅತ್ಯಂತ ದೊಡ್ಡ ಪ್ರಮಾಣದ, ನಿಜವಾದ ಮತ್ತು ಮಾನವ ಜನಾಂಗಕ್ಕೆ ಅತ್ಯಂತ ಪವಿತ್ರವಾದ ಸೇವೆಯನ್ನು ನೀಡುತ್ತಿರುವ, ಮತ್ತು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳು ಮಾಡದೇ ಇರುವ ಆದರೆ ಸನಾತನ ಧರ್ಮದ ಪಾಲನೆಯಿಂದ ಪ್ರೇರಿತವಾದ ಮತ್ತು ವಿಧಿಬದ್ಧಗೊಳಿಸಲಾದ ಮತ್ತು ಅವರ ಜೀವನದ ರೀತಿಯಾಗಿಯೇ ಮಾರ್ಪಟ್ಟಿರುವ ಮತ್ತು ಹಿಂದೂ ಭಾರತದ ಹಂಚಿಕೊಳ್ಳುವ ಮಹೋನ್ನತ ಗುಣವಾದ ಹಿಂದೂ ಗೃಹಸ್ಥರ ಆಧ್ಯಾತ್ಮಿಕ ಸೇವೆಗಳನ್ನು ಚಿತ್ರಿಸುವಲ್ಲಿ ಈ ಮೇಳಗಳು ಸಫಲವಾಗಿಲ್ಲವೆಂದೇ ಹೇಳಬೇಕು. ಆದರೆ ಈ ಧಾರ್ಮಿಕ ಸಂಘ ಸಂಸ್ಥೆಗಳು ಗೃಹಸ್ಥರಿಗೆ ತಮ್ಮ ಗೃಹಸ್ಥ ಧರ್ಮವನ್ನು ನಿತ್ಯನಿರಂತರವಾಗಿ ಅನುಸರಿಸುತ್ತಾ ದೂರದಲ್ಲಿರುವ, ತಲುಪಲಸಾಧ್ಯವಾದ ಸ್ಥಳಗಳಲ್ಲಿ ತಮ್ಮ ಸಹ ಮಾನವರಿಗೆ ಸಹಾಯ ಮಾಡುವ ಸಾಮರ್ಥ್ಯವಿರುವ ಪ್ರತೀ ಗೃಹಸ್ಥನನ್ನು ಸೇವೆಯೊದಗಿಸುವ ಸಂಸ್ಥೆಯನ್ನಾಗಿ ಮಾರ್ಪಡಿಸಿ ನಿಜವಾದ ಮತ್ತು ಜೀವಂತ ರೂಪವಾದ ಸನಾತನ ಧರ್ಮವನ್ನು ಮುಂದುವರೆಸಿಕೊಂಡು ಹೋಗುವ ಪ್ರೇರಕ ಶಕ್ತಿಯಾಗಿ, ಅವುಗಳನ್ನು ಆಚರಿಸುವುದರೊಂದಿಗೆ ಅವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಸಹಾಯಕವಾಗಿವೆ. ಒಂದು ವೇಳೆ ಎಲ್ಲಾ ಸ್ತರಗಳಲ್ಲಿಯೂ ಮಾನವ ಜೀವಿಗಳನ್ನು ಸಾಮಾಜಿಕ ಮತ್ತು ಆಧ್ಯಾತ್ಮಿಕ ಸ್ಪೃಹೆಯುಳ್ಳವರಾಗಿ ಪರಿವರ್ತಿಸಿದರೆ ಯಾವುದೇ ವಿಧವಾದ ಸರ್ಕಾರೇತರ ಸಂಸ್ಥೆಗಳು ಸೇವೆಯನ್ನೊದಗಿಸುವ ಅವಶ್ಯಕತೆಯೇ ಬೀಳುವುದಿಲ್ಲ, ಒಂದು ವೇಳೆ ಬಿದ್ದರೂ ಸಹ ಅದು ಬಹು ಅಲ್ಪ ಪ್ರಮಾಣದ್ದಾಗಿರುತ್ತದೆ ಎಂದು ಹೇಳುವುದಕ್ಕೆ ಯಾವೊಬ್ಬ ಪರಿಣಿತನ ಅವಶ್ಯಕತೆಯೂ ಇಲ್ಲ. ವ್ಯವಸ್ಥಿತ ಸೇವೆಯ ಅವಶ್ಯಕತೆಯು ಯಾವಾಗ ಕೆಳಸ್ತರದಲ್ಲಿ ಮಾನವನ ಅನುಕಂಪದ ಮಟ್ಟವು ವಿಫಲವಾಗುತ್ತದೆಯೋ ಆಗ ಅವಶ್ಯವೆನಿಸುತ್ತದೆ. ಎಣೆಯಿಲ್ಲದ ಸೇವೆಗಳನ್ನು ಕೈಗೊಳ್ಳುತ್ತಿರುವ ಹಿಂದೂ ಆಧ್ಯಾತ್ಮಿಕ ಸಂಸ್ಥೆಗಳು ಸಾಂಪ್ರದಾಯಿಕರು ಗೃಹಸ್ಥ ಧರ್ಮವನ್ನು ಆಚರಣೆಯಲ್ಲಿಡುವಂತೆ ಮಾಡುವದನ್ನೂ ಉತ್ತೇಜಿಸುವ ಹೊಣೆಯನ್ನು ಹೊಂದಿದ್ದಾರೆ.
ಮೇಳವು ಸನಾತನ ಧರ್ಮವನ್ನು ಆಚರಿಸುತ್ತದೆ
ಹಿಂದೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸೇವಾ ಸಂಸ್ಥೆಗಳನ್ನು ಉತ್ತೇಜಿಸಿ ಅವುಗಳನ್ನು ಅಭಿವೃದ್ದಿ ಪಡಿಸುವುದೆಂದರೆ ಅದರೊಂದಿಗೆ ಕೌಟುಂಬಿಕ ಮಾನವ ಸೇವಾ ಧರ್ಮವನ್ನೂ ಸಹ ಉತ್ತೇಜಿಸಿ ಪ್ರೋತ್ಸಾಹಿಸಿದಂತಾಗುತ್ತದೆ. ಈ ದಿಶೆಯಲ್ಲಿ ಆಲೋಚಿಸಿದಾಗ, ಈ ಮೇಳವೂ ಸಹ ಮಾನವ ಜನಾಂಗಕ್ಕೆ ಸನಾತನ ಧರ್ಮವು ಕೊಟ್ಟ ಅತ್ಯಮೂಲ್ಯ ಕೊಡುಗೆಯಾದ ಸಾಂಪ್ರಾದಾಯಿಕ ಕೌಟುಂಬಿಕ ಮಾನವ ಸೇವಾ ಧರ್ಮವನ್ನು ಪ್ರೋತ್ಸಾಹಿಸುತ್ತದೆ. ನಾಲ್ಕನೇ ಮೇಳದಲ್ಲಿ ಸ್ಥಾಪಿಸಲ್ಪಟ್ಟ ಮಾತನಾಡುವ ಸನಾತನ ಧರ್ಮ ವೃಕ್ಷವು ಗೃಹಸ್ಥನ ಕರ್ತವ್ಯದ ಆಧಾರದ ಮೇಲೆ ಹೇಗೆ ಧರ್ಮವು ಉದ್ಭವವಾಯಿತು ಎನ್ನುವುದನ್ನು ವಿವರಿಸುತ್ತದೆ. ಕಡಿಮೆ ಭಾಗ್ಯಶಾಲಿ ವರ್ಗಗಳ ಪೋಷಣೆಯ ಭಾರದ ಜವಾಬ್ದಾರಿಯನ್ನು ಭಾಗ್ಯಶಾಲಿಗಳಾದ ಅವರ ಇತರೇ ಸಹೋದರರು ಯಾವುದೇ ಸಂಘ ಸೇವಾ ಸಂಸ್ಥೆಗಳ ಮಧ್ಯಸ್ಥಿಕೆಯಿಲ್ಲದೆ ನೇರವಾಗಿ ನಿಭಾಯಿಸ ಬೇಕೆನ್ನುವುದು HSSF ಮತ್ತು ಅದರ ಆಯೋಜಕರ ಮಹತ್ವಾಕಾಂಕ್ಷೆಯ ಅಭಿಲಾಷೆಯಾಗಿದೆ. ಇದುವೇ ನಿಜವಾದ ಸನಾತನ ಧರ್ಮವಾಗಿದ್ದು ಇದರೆಡೆಗೆ ಹಿಂದೂ ಭಾರತವು ಅಡಿಯಿರಿಸಬೇಕಾಗಿದೆ. ಹೀಗೆ ಈ ಮೇಳವು ಸನಾತನ ಧರ್ಮವನ್ನು ಆಚರಿಸುತ್ತದೆ.
Comments
ಆತ್ಮೀಯ ಸಂಪದಿಗರೇ,
ಆತ್ಮೀಯ ಸಂಪದಿಗರೇ,
ಹಲವು ದಿನಗಳಿಂದ ನಿಮ್ಮೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಇತ್ತೀಚೆಗೆ ಹಿಂದೂ ಧಾರ್ಮಿಕ ಸಮ್ಮೇಳನವೊಂದನ್ನು ತಿರುಪತಿಯಲ್ಲಿ ಇದೇ ಫೆಭ್ರವರಿ ೧೯ -೨೩ರವರೆಗೆ ಆಯೋಜಿಸಲಾಗಿದೆ. ಎಲ್ಲಾ ವಿಧವಾದ ಹಿಂದೂ ಧಾರ್ಮಿಕ ಸಂಘಟನೆಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಇತರರಿಗೆ ಪರಿಚಯಿಸುವ ಉದ್ದೇಶದಿಂದ ಅದರಲ್ಲಿ ಭಾಗವಹಿಸುತ್ತಿವೆ. ಇದರ ಕುರಿತಾಗಿ Why Hindu Spiritual and Service Fairs ಎನ್ನುವ ಒಂದು ಇಂಗ್ಲೀಷ್ ಲೇಖನವನ್ನು ಶ್ರೀಯುತರೊಬ್ಬರು ಬರೆದಿದ್ದಾರೆ (ಬರಹದ ಶೈಲಿಯನ್ನು ಓದಿದರೆ ಅದು ಬಹುಶಃ ಮದ್ರಾಸಿನ ಎನ್. ರವಿ ಎನ್ನುವವರು ಬರೆದಿದ್ದೆನಿಸುತ್ತದೆ); ಅದರ ಕನ್ನಡಾನುವಾದವನ್ನು ಮಾಡುವ ಒಂದು ಸುಯೋಗವನ್ನು ಬಿಜಾಪುರದ ಸದ್ಯಕ್ಕೆ ಹೈದರಾಬಾದಿನಲ್ಲಿಯೇ ನೆಲೆಸಿರುವ ಹಿರಿಯ ಮಿತ್ರರಾದ ಮತ್ತು ಸಂಪದಿಗರಾದ ಶ್ರೀಯುತ ಕೃಷ್ಣ ಕುಲಕರ್ಣಿಯವರ ಮೂಲಕ ನನಗೆ ದೊರೆಕಿದೆ. ವಿಷಯವು ಆಲೋಚನೆಗೆ ಹಚ್ಚುವಂತಿದ್ದು ನಮ್ಮ ಭಾರತೀಯ ಸಂಪ್ರಾದಾಯದಲ್ಲಿ ದಾನ-ಧರ್ಮದ ಮಹತ್ವವೇನು ಎನ್ನುವುದನ್ನು ತಿಳಿಸುವುದರಿಂದ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣವೆಂದು ಸಂಪದದಲ್ಲಿ ಕೊಡುತ್ತಿದ್ದೇನೆ. (ಇದನ್ನು ಸಂಪದದಲ್ಲಿ ಪ್ರಕಟಿಸಬಹುದೆಂದು ಕುಲಕರ್ಣಿಯವರು ಮಿಂಚಂಚೆಯಲ್ಲಿ ತಿಳಿಸಿರುತ್ತಾರೆ). ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷಗಳಷ್ಟು ಅಮೂಲ್ಯವಾದ ’ಸಮಯ ದಾನ’ ಮಾಡುವ ಮೂಲಕ ಇದನ್ನು ಓದಿ :))
"ಈ ದೇಶದಲ್ಲಿನ ಶ್ರೇಷ್ಠವಾದ ಹಾಗೂ
"ಈ ದೇಶದಲ್ಲಿನ ಶ್ರೇಷ್ಠವಾದ ಹಾಗೂ ಪವಿತ್ರವಾದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ಹಲವಾರು ವೈವಿಧ್ಯಮಯವಾದ ಸೇವಾ ಕಾರ್ಯಕ್ರಮಗಳ ಸರಣಿಯನ್ನು ಹಮ್ಮಿಕೊಂಡು ಸಂಭಾವನೆ ಪಡೆಯದ ಸ್ವಯಂ ಸೇವಕರ ದೊಡ್ಡ ಪಡೆಯನ್ನೇ ನಿಯಮಿಸಿ ಅವರ ಮೂಲಕ ಸೇವಾ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುತ್ತವೆ; ಇವರ ಈ ನಿಃಸ್ವಾರ್ಥ ಸೇವೆಯನ್ನು ಗುರುತಿಸುವಲ್ಲಿ ದೇಶದ ಜನಮಾನಸವು ವಿಫಲವಾಗಿದೆ. ನಮ್ಮ ದೇಶದಲ್ಲಿ ಹೀಗೆ ಆಧ್ಯಾತ್ಮಿಕ ಸೇವಾ ಚಟುವಟಿಕೆಗಳು ಬಹು ಕಡಿಮೆ ಖರ್ಚಿನಲ್ಲಿ ನಿರ್ವಹಿಸಲ್ಪಡುತ್ತವೆ, ಆದರೆ ಅಮೇರಿಕೆಯ ಸೇವಾ ಪ್ರತಿಷ್ಠಾನಗಳು ಲಕ್ಷಾಂತರ ಡಾಲರುಗಳನ್ನು ಅದರ ಅಧಿಕಾರ ವರ್ಗಕ್ಕೆ ಮತ್ತು ನಿರ್ವಹಣಾ ಸಮಿತಿಯ ಸಿಬ್ಬಂದಿಗಾಗಿ ವ್ಯಯ ಮಾಡುತ್ತವೆ. ಹೊಸ ರಾಜತಾಂತ್ರಿಕ ನೀತಿಯು ಭಾರತದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೇವಾ ಕಾರ್ಯಗಳನ್ನು ಸಂಪೂರ್ಣವಾಗಿ ಮಸುಕುಗೊಳಿಸಿ ಹಿಂದೂ ಇಂಡಿಯಾದ ಅಂದರೆ ಭಾರತೀಯರು ತಮ್ಮ ಸಹ ಮಾನವರ ಬಗ್ಗೆ ಅನುಕಂಪವನ್ನು ಹೊಂದಿಲ್ಲ ಎಂದು ಬಿಂಬಿಸಲು ಪ್ರಯತ್ನಿಸುತ್ತದೆ. ಆದ್ದರಿಂದ ಹೊರಗಿನವರು ಇಲ್ಲಿಗೆ ಬಂದು ಧಾರ್ಮಿಕ ದತ್ತಿ ಸಂಸ್ಥೆಗಳನ್ನು ಸ್ಥಾಪಿಸಲಿ ಎನ್ನುವುದು ಅದರ ಹಿನ್ನಲೆಯಾಗಿದೆ. ಯಾವುದು ಸಂಪೂರ್ಣವಾಗಿ ಸಂಸ್ಥಾಗತ ಸೇವಾ ಕಾರ್ಯಗಳ ಅಥವಾ ಹಣಕಾಸಿನ ನೆರವಿನ ವಿಷಯವಾಗಿದೆಯೋ ಅದನ್ನುಪಯೋಗಿಸಿಕೊಂಡು ಹಿಂದೂ ಆಧ್ಯಾತ್ಮಿಕತೆಯಲ್ಲಿ ಸಹ-ಮಾನವರ ಬಗೆಗಿನ ಕಾಳಜಿಗೆ ಸ್ಥಾನವಿಲ್ಲವೆಂದು ಆರೋಪಿಸುವುದಲ್ಲದೆ ಹಿಂದೂಗಳಿಗೆ ಅನುಕಂಪವಿಲ್ಲದವರು ಎನ್ನುವ ಹಣೆಪಟ್ಟಿಯನ್ನು ಲಗತ್ತಿಸುವುದು ಹೊಸ ರಾಜತಾಂತ್ರಿಕ ನೀತಿಯ ದುರುದ್ದೇಶವಾಗಿದೆ. ಅಂದರೆ ಹಿಂದೂಗಳು ಕ್ರಿಶ್ಚಿಯನ್ನರಂತೆ ಸಾಮಾಜಿಕ ಕಾಳಜಿಯನ್ನು ಹೊಂದಿಲ್ಲ ಎಂದು ಬಿಂಬಿಸಿ, ಸಮಾಜ ಸೇವೆಯ ಸೋಗಿನಲ್ಲಿ ಭೌಗೋಳಿಕವಾಗಿ ಕ್ರೈಸ್ತವೇತರರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವ ಹುನ್ನಾರವು ಅದರ ಹಿಂದೆ ಅಡಗಿದೆ. ಹೀಗೆ ಈ ರಾಜತಾಂತ್ರಿಕ ನೀತಿಯ ಉದ್ದೇಶವು ಹಿಂದೂ ಆಧ್ಯಾತ್ಮಿಕತೆ ಮತ್ತು ಧರ್ಮವನ್ನು ಕ್ಷುಲ್ಲಕವಾಗಿ ಪ್ರತಿಬಿಂಬಿಸುವುದಷ್ಟೇ ಅಲ್ಲದೆ ಭಾರತದ ಪ್ರತಿಷ್ಠೆಯನ್ನೂ ಕುಗ್ಗಿಸುವುದೇ ಆಗಿದೆ."
;(((((
ಇದಂತೂ ಸತ್ಯ..
ಮತ್ತು ವಿಪರ್ಯಾಸ..;(
ಜೀ
ಈ ಬರಹ ಅದರ ವಿಷ್ಯ ವಸ್ತು ಬಗ್ಗೆ ಅಷ್ಟಾಗಿ ನನಗೆ ಗೊತ್ತಿಲ್ಲ..ಆದರೆ ನೀವ್ ಆರಂಭದಲ್ಲಿ ಹೇಳಿದ ಅಮೆರಿಕಾದ ಪತ್ರಿಕೆಗಳು ಪತ್ರಕರ್ತರ ಅಹಂಕಾರದ ಮಾತುಗಳು ಗಮನ ಸೆಳೆದವು...
ನಮ್ ದೇಶದಲ್ಲೋ ನಮಗೆಲ್ಲ ತಿಳಿದಿರುವ ಹಾಗೆ ಮೊದಲಿಂದಲೂ ದಾನ ಧರ್ಮದ ಬಗ್ಗೆ ಹಲವು ಉಲ್ಲೇಖಗಳಿವೆ-ಅವುಗಳ ಬಗ್ಗೆ ಕಥೆ ಉಪ ಕಥೆಗಳಿವೆ-ಬಿಲ್ ಗೇಟ್ಸ್ ಗೆ ನಮ್ಮ ಉಧ್ಯಮಿಗಳನ್ನು ಯಾಕ್ ಹೋಲಿಸಬೇಕು..
ಇಷ್ಟಕ್ಕೂ ಧಾನ ಧರ್ಮ ಆಯಾಯ ವ್ಯಕ್ತಿಯ ವಯುಕ್ತಿಕ ಅಭಿಪ್ರಾಯ -ಆಯಾಯ ಕ್ಷಣದ ಮಾನಸಿಕ ಸ್ಥಿತಿ ಗತಿ ಮೇಲೆ ಅವಲಂಬಿಸಿರುತ್ತೆ..ಇನ್ನು ಕೆಲವರದ್ದು ಬಲಗೈಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬ ಪಾಲಿಸಿ..!
ಒತ್ತಾಯ ಮಾಡಿ ಹಣ ಕೇಳಿದರೆ ಶೋಭೆಯೇ...!!
ಈಗಾಗಲೇ ಅಧ್ಯಾತ್ಮಿಕ-ಪುರಾಣ-ಇತ್ಯಾದಿ ಬಗ್ಗೆ ವಿವರಣಾತ್ಮಕ ಬರಹಗಳನ್ನು ಭಾಷಾಂತರ ಮಾಡಿ ಸಂಪದದಲ್ಲಿ ಸೇರಿಸಿ ನಮಗೆ ಆ ಬಗ್ಗೆ ಅರಿಯುವ ಇನ್ನಿತರರಿಗೆ ತಿಳಿಸುವ ಹಾಗೆ ಮಾಡಿರುವ ನೀವು ಈಗ ಮತ್ತೊಂದು ಮಹಾ ಬರಹ ಯಜ್ಞಕ್ಕೆ ಕೈ ಹಾಕಿದ್ದು ಅದರ ಮೊದಲ ಭಾಗ ಓದಿ
ಈ ಮೇಳಗಳ -ಜನರಲ್ಲಿ ಧಾರ್ಮಿಕ ಭಾವನೆ ಉದ್ದೀಪನೆಗೊಳಿಸಿ ಸನ್ಮಾರ್ಗದತ್ತ ನಡೆಸುವ ಅವಶ್ಯಕತೆ ಅರಿವಾಯ್ತು...
ಮುಂದಿನ ಭಾಗಗಳ ನಿರೀಕ್ಷೆಯಲಿ
ಶುಭವಾಗಲಿ.
\।
ನಿಮ್ಮ ಮಾತು ನಿಜ ಸಪ್ತಗಿರಿಗಳೇ,
ನಿಮ್ಮ ಮಾತು ನಿಜ ಸಪ್ತಗಿರಿಗಳೇ,
ದಾನೆವೆಂದರೇನೆ ಗುಪ್ತವಾಗಿ ಕೊಡುವುದು ಅದನ್ನೇ ಆಡುನುಡಿಯಲ್ಲಿ ಬಲಗೈಯ್ಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂದು ಹೇಳಿದ್ದಾರೆ. ನಿಮ್ಮ ವಿಶ್ಲೇಷಣಾತ್ಮಕ ಪ್ರತಿಕ್ರಿಯೆ ಮತ್ತು ಸಮಯದಾನಕ್ಕಾಗಿ ಧನ್ಯವಾದಗಳು.
ಈ ಸರಣಿಯಲ್ಲಿ ಸಧ್ಯಕ್ಕೆ ಇದೊಂದೇ ಬರಹ. ಅದನ್ನು ಎರಡು ಮೂರು ಭಾಗಗಳಾಗಿ ಕೊಡೋಣವೆಂದುಕೊಂಡಿದ್ದೆ. ಆದರೆ ಮೂರ್ನಾಲ್ಕು ದಿವಸ ನಾನು ಊರಿನಲ್ಲಿರುವುದಿಲ್ಲ; ಹಾಗಾಗಿ ಇದನ್ನು ಒಂದೇ ಸರಣಿಯಾಗಿ ಸಂಪದದಲ್ಲಿ ಸೇರಿಸಿದ್ದೇನೆ. ಈಗ ನಾನು ಅನುವಾದಕ್ಕೆ ಕೈಗೆತ್ತಿಕೊಂಡಿರುವ ಸರಣಿ ಬೇರೆಯೇ ಇದೆ. ಅದನ್ನು ಇನ್ನು ಕೆಲವೇ ದಿನಗಳಲ್ಲಿ ನಿತ್ಯ ಧಾರವಾಹಿಯಾಗಿ ಪ್ರಕಟಿಸಬೇಕೆಂದು ಕೊಂಡಿದ್ದೇನೆ. ನಿಮ್ಮ ಎಂದಿನ ಪ್ರೋತ್ಸಾಹಕ್ಕೆ ಮತ್ತೊಮ್ಮೆ ಧನ್ಯವಾದಗಳು.
"ಹಿಂದೂ ಭಾರತ"? ಅಮೆರಿಕೆಯ
"ಹಿಂದೂ ಭಾರತ"? ಅಮೆರಿಕೆಯ ವ್ಯಕ್ತಿ ಹಿಂದೂ ಭಾರತ ಎಂದು ಹೇಳಲಿಲ್ಲ ಬರೀ ಭಾರತ ಎಂದ. ಭಾರತ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ, ಜೈನ...ಧರ್ಮೀಯರಿಗೆ ಸೇರಿದ್ದು.
ಮಕರರವರೆ, ದಾನದ ವಿಷಯದಲ್ಲಿ ಆ ವ್ಯಕ್ತಿ ಹೇಳಿದ್ದರಲ್ಲಿ ದೊಡ್ಡ ಪ್ರಮಾದ ಕಾಣುತ್ತಿಲ್ಲ. ಭಾರತದ ಸಂಪನ್ಮೂಲಗಳನ್ನು ಆಯ್ದ ಕೆಲವೇ ಕೆಲವರು ಲೂಟಿ ಮಾಡಿದರೇ ಹೊರತು ಕೊಡ ಬೇಕಾದಷ್ಟನ್ನು ಬಡ ಜನತಗೆ ಕೊಟ್ಟಿದ್ದರೆ ನಮ್ಮ ದೇಶದಲ್ಲಿ ಇಷ್ಟೊಂದು ದಾರಿದ್ರ್ಯ ಇರುತ್ತಿರಲಿಲ್ಲ. ಈ ಮಾತು ಅಮೆರಿಕೆಗೂ ಅನ್ವಯಿಸುತ್ತದೆ.
In reply to "ಹಿಂದೂ ಭಾರತ"? ಅಮೆರಿಕೆಯ by abdul
"ಬರೀ ಭಾರತ"? ಅಮೆರಿಕೆಯ ವ್ಯಕ್ತಿ
"ಬರೀ ಭಾರತ"? ಅಮೆರಿಕೆಯ ವ್ಯಕ್ತಿ ಬರೀ ಭಾರತ ಎಂದೂ ಹೇಳಲಿಲ್ಲ.:) >>>ಭಾರತ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ, ಜೈನ...ಧರ್ಮೀಯರಿಗೆ ಸೇರಿದ್ದು. ಅಬ್ದುಲ್ ಅವರೆ, "ನನ್ನ ಸಂಪದ"ಅಂತ ನಾನು ಹೇಳಿದರೆ ಅದು ತಪ್ಪಾ? ಹಿಂದೂ ಭಾರತ ಎಂದ ಕೂಡಲೇ ಯಾಕೆ ಉರಿದು ಬೀಳುತ್ತೀರಿ? http://sampada.net/blog/%E2%80%9C%E0%B2%B9%E0%B2%BF%E0%B2%82%E0%B2%A6%E0%B3%81%E2%80%9D-%E0%B2%88-%E0%B2%A6%E0%B3%87%E0%B2%B6%E0%B2%A6-%E0%B2%B9%E0%B3%86%E0%B2%B8%E0%B2%B0%E0%B3%81/10-2-2013/39915 .>>>ದಾನದ ವಿಷಯದಲ್ಲಿ ಆ ವ್ಯಕ್ತಿ ಹೇಳಿದ್ದರಲ್ಲಿ ದೊಡ್ಡ ಪ್ರಮಾದ ಕಾಣುತ್ತಿಲ್ಲ.!! ಅದು ಎಷ್ಟು ದೊಡ್ಡ ಪ್ರಮಾದ ಎನ್ನುವುದಕ್ಕೇ ಈ ಸುದೀರ್ಘ ಲೇಖನದಲ್ಲಿ ವಿವರವಾಗಿ ಹೇಳಿದ್ದಾರೆ ಶ್ರೀಧರ್ಜಿ(ಮಕರ)ಯವರು. >>>ಭಾರತದ ಸಂಪನ್ಮೂಲಗಳನ್ನು ಆಯ್ದ ಕೆಲವೇ ಕೆಲವರು ಲೂಟಿ ಮಾಡಿದರೇ...-----ನೀವಂದಂತೆ ಆಯ್ದ ಕೆಲವೇ ಕೆಲವರು ಲೂಟಿ ಮಾಡಿದವರು. ಉಳಿದವರು ಒಳ್ಳೆಯವರೇ. ಶ್ರೀಧರ್ಜಿ, ಉತ್ತಮ ಲೇಖನಕ್ಕೆ ಧನ್ಯವಾದಗಳು.
In reply to "ಬರೀ ಭಾರತ"? ಅಮೆರಿಕೆಯ ವ್ಯಕ್ತಿ by ಗಣೇಶ
ಗಣೇಶರೆ ನಿಮ್ಮ ಪ್ರತಿಕ್ರಿಯೆಯಿಂದ
ಗಣೇಶರೆ ನಿಮ್ಮ ಪ್ರತಿಕ್ರಿಯೆಯಿಂದ ಹರಿಹರಪುರರ ಲೇಖನವನ್ನು ಓದಿದೆ. ನಾನು ಹಿಂದುವಾಗಿ ಹುಟ್ಟಿದ್ದು ದುರ್ದೈವ ಎನ್ನುವ ನಾಯಕರೊಬ್ಬರು, ಮುಂದೆ ಜನ್ಮವಿದ್ದಲ್ಲಿ ’ಮುಸ್ಲಿಮನಾಗಿ’ ಹುಟ್ಟುವೆ ಎನ್ನುವ ನಾಯಕರೊಬ್ಬರು, ಓಟಿಗಾಗಿ ಇಂತ ನಾಯಕರು ಭಾರತದಲ್ಲಿ ಹುಟ್ಟಿರುವುದು ನಮ್ಮ ದುರ್ದೈವ ಅಷ್ಟೆ. ಮುದೊಂದು ಕಾಲ ಬಂದೀತು, ’ಹಿಂದು’ ಪದ ಅನ್ ಪಾರ್ಲಿಮೆಂಟರಿ ಎಂದು ಘೋಷಿಸಿ, ಯಾರಾದರು ಹಿಂದು ಎಂಬ ಪದ ಬಳಸಿದಲ್ಲಿ, ಅಥವ ನಾನು ಹಿಂದು ಎಂದು ಹೇಳಿದಲ್ಲಿ ಅವರನ್ನು ಟಾಡ ರೀತಿಯ ಕಾನುನಿನ ಅಡಿ ಶಿಕ್ಷೆಗೆ ಒಳಪಡಿಸುವದಾಗಿ ಘೋಶಿಸಿ, ಆ ದಿನವನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕೆಂದು ನಮ್ಮ ನಾಯಕರು ಹೇಳಿಕೆ ಕೊಡುವ ದಿನ ದೂರವಿಲ್ಲ. ನಿಜ ಭಾರತವನ್ನು ಹಿಂದು ದೇಶವೆಂದು ಹೇಳುವಂತಿಲ್ಲ ಅದು ಹಿಂದು ಮುಸ್ಲಿಮ್ ಕ್ರಿಸ್ತರು ಎಲ್ಲರಿಗು ಸೇರಿರುವನು. ಉಳಿದವರಾರೊ ಶತ ಶತಮಾನಗಳಿಂದ ಎಲ್ಲ ದೇಶದಲ್ಲಿ ದಾಳಿ ನಡೆಸುತ್ತ, ಅಲ್ಲಿರುವರನ್ನೆಲ್ಲ ತಮ್ಮ ಧರ್ಮಗಳಿಗೆ ಮತಾಂತರಿಸುತ್ತ ಸಾಗಿದವರು, ಈಗವರು ಯಾವುದೆ ದೇಶವನ್ನು ನಮ್ಮದೆಂದು ಹೇಳಬಹುದು. ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಬ್ರೀಟಿಷರು ಹೇಳಿಕೊಂಡಂತೆ, ಆದರೆ ಹಿಂದುಗಳಾದರೊ ಯಾವುದೆ ದೇಶಕ್ಕೆ ಹೋದವರಲ್ಲ, ತಲ ತಲಾಂತರಗಳಿಂದ ಇಲ್ಲಿಯೆ ನೆಲಸಿರುವರು, ಅವರಿಗೆ ’ಭಾರತವನ್ನು’ ಮಾತ್ರ ನಮ್ಮದ್ದು ಎಂದು ಹೇಳಿಕೊಳ್ಳಲು ಸಾದ್ಯ, ಹಿಂದುಭಾರತವೆನ್ನದೆ ಅವರು ಹಿಂದುಪಾಕಿಸ್ತಾನ ಎಂದೆನ್ನಲು ಸಾದ್ಯವೆ? . ಈಗಾಗಲೆ ನಾವು ಹಿಂದು ಎನ್ನಲು, ಹಿಂದುಭಾರತವೆನ್ನಲು ಹೆದರುವ ಸಂಕೋಚಪಡುವ ಕಾಲಬಂದಾಗಿದೆ ಮುಂದೇನು?
In reply to ಗಣೇಶರೆ ನಿಮ್ಮ ಪ್ರತಿಕ್ರಿಯೆಯಿಂದ by partha1059
@ಗಣೇಶರೆ,
@ಗಣೇಶರೆ,
ಲೇಖನದ ಆಳ-ವಿಸ್ತಾರಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅಬ್ದುಲ್ಲಾರವರ ಪ್ರಶ್ನೆಗೆ ಸೂಕ್ತ ಉತ್ತರವನ್ನು ಕೊಡುವುದಲ್ಲದೆ ಹರಿಹರಪುರದ ಶ್ರೀಧರ್ ಅವರ ಲೇಖನದ ಕೊಂಡಿಯನ್ನೂ ಸಹ ಕೊಟ್ಟು ಉಪಕರಿಸಿದ್ದೀರಿ. ನಿಮ್ಮ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು.
@ಪಾರ್ಥಸಾರಥಿಗಳೇ,
ಹಿಂದೂಗಳೂ ಸಹ ಹಲವಾರು ದೇಶಗಳಲ್ಲಿ ನೆಲೆಸಿದ್ದಾರೆ. ಅವರು ಆಮಿಷಗಳನ್ನು ಒಡ್ಡುವ ಮೂಲಕವಾಗಲಿ ಅಥವಾ ಖಡ್ಗ ಬೆದರಿಕೆಯಿಂದಾಗಲೀ ಮತಾಂತರವನ್ನು ಅಥವಾ ಧರ್ಮಪ್ರಸಾರವನ್ನು ಮಾಡಲಿಲ್ಲ. ಅವರು ಕೇವಲ ಪ್ರೀತಿ ವಿಶ್ವಾಸಗಳಿಂದ ಜನರ ಮನಸ್ಸುಗಳನ್ನು ಗೆದ್ದು ಅಲ್ಲಿ ಸನಾತನ ಭಾರತದ ಸದ್ವಿಚಾರಗಳನ್ನು ಹರಡಿದರು. ಬುದ್ಧನು ಸಂಪೂರ್ಣ ಚೀನಾ, ಟಿಬೆಟ್ ಹಾಗೂ ಜಪಾನ್ ದೇಶಗಳಲ್ಲಿ ಬೌದ್ಧ ಧರ್ಮ ಹರುಡುವಂತೆ ಮಾಡಿದರೆ. ಕಾಂಭೋಜ, ಜಾವಾ, ಸುಮಾತ್ರಾ ಮೊದಲಾದ ರಾಷ್ಟ್ರಗಳಲ್ಲಿ ಅಲ್ಲಿ ನೆಲೆ ನಿಂತ ಹಿಂದೂ ಜನರು ಯಾವುದೇ ಪ್ರಲೋಭನೆ ಅಥವಾ ಬೆದರಿಕೆಗಳಿಲ್ಲದೆ ಅಲ್ಲಿನ ಜನ ವೈದಿಕ ಧರ್ಮವನ್ನು ಅನುಸರಿಸುವಂತೆ ಮಾಡಿದ್ದಾರೆ ಇದೇ ಭಾರತೀಯ ಅಥವಾ ಹಿಂದೂ ಧರ್ಮದ ಶ್ರೇಷ್ಠತೆ. ಇದನ್ನು ಯಾರು ಒಪ್ಪಲಿ ಬಿಡಲಿ ಇದು ಸಾರ್ವಕಾಲಿಕ ಸತ್ಯ. ಇದನ್ನು ಸ್ವಾಮಿ ವಿವೇಕಾನಂದರು ತಮ್ಮ ಭಾಷಣಗಳಲ್ಲಿ ಹೇಳಿದ್ದಾರೆ. ಆದ್ದರಿಂದ ನಾವು ಯಾರಿಗೂ ಕಡಿಮೆಯಿಲ್ಲ; ಅದನ್ನು ಆಗಾಗ ಯಾರಾದರೂ ಪ್ರಚೋದಿಸುತ್ತಿರಬೇಕಷ್ಟೇ! ಅದೇ ನಮ್ಮ ದುರ್ದೈವ. ಪ್ರತಿಕ್ರಿಯೆಗೆ ನಿಮಗೂ ಸಹ ಧನ್ಯವಾದಗಳು.
ಮತ್ತೊಂದು ಮಾತು ಜಾತ್ಯಾತೀತವಾದ ಭಾರತದಲ್ಲಿ ಹಿಂದೂ ಸೇನೆ ಎಂದು ಯಾರಾದರೂ ಹೆಸರಿಟ್ಟುಕೊಂಡು ಚುನಾವಣೆಗೆ ನಿಂತರೆ ಅದು ಕೋಮುವಾದವನ್ನು ಕೆರಳಿಸುತ್ತಿದೆಯಾದ್ದರಿಂದ ಅದನ್ನು ನಿರ್ಭಂದಿಸಬೇಕೆಂದು ಎತ್ತಿ ಹಿಡಿಯುತ್ತದೆ ನಮ್ಮ ಕಾನೂನು. ಆದರೆ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (IML), ಮಜಲೀಸ್ ಇತ್ತೇಹಾದ್ ಮುಸ್ಲಮೀನ್ (MIM) ಇವು ಜಾತ್ಯಾತೀತ ಪಕ್ಷಗಳು ಏಕೆಂದರೆ ಇವು ಯಾವುದೇ ಒಂದು ಕೋಮನ್ನು ಪ್ರತಿನಿಧಿಸುವುದಿಲ್ಲ ಆದ್ದರಿಂದ ಇವುಗಳು ಕಾನೂನು ರೀತ್ಯಾ ಸರಿ. ಜೈ ಭಾರತಾಂಬೆ!
In reply to "ಹಿಂದೂ ಭಾರತ"? ಅಮೆರಿಕೆಯ by abdul
ಅಬ್ದುಲ್ಲಾ ಅವರೇ,
ಅಬ್ದುಲ್ಲಾ ಅವರೇ,
ಸಾರೇ ಜಹಾ..ಸೇ ಅಚ್ಛಾ..ಹಿಂದೂಸ್ತಾನ್ ಹಮಾರಾ ಎಂದು ಹಾಡಿದ ಇಕ್ಬಾಲ್ ಕವಿಗೆ ಈ ಭಾರತ ಸೇರಿಲ್ಲವೇ? ಏಕೆ ಅನಾವಶ್ಯಕವಾಗಿ ಈ ವಿಧವಾದ ತಪ್ಪುಗಳನ್ನು ಹುಡುಕುತ್ತೀರಿ. ಆ ಅಮೇರಿಕನ್ನನು ಹೇಳಿದ್ದು ಭಾರತವೆಂದೇ ಎನ್ನುವ ನಿಮ್ಮ ಮಾತುಗಳು ನಿಜ ಆದರೆ ಅವನ ಗುರಿಯಿರುವುದು ಭಾರತೀಯ ಪರಂಪರೆ ಅಂದರೆ ಹಿಂದೂ ಪರಂಪರೆಯನ್ನು ಕ್ಷುಲ್ಲಕವಾಗಿಸುವ ಲಕ್ಷ್ಯದಿಂದಲೇ ಆದ್ದರಿಂದ ನಮ್ಮ ಸನಾತನ ಪರಂಪರೆಯಲ್ಲಿ ದಾನ ಅಥವಾ ಧರ್ಮ ಎಂದರೇನು ಎಂದು ಎಲ್ಲರಿಗೂ ಅರ್ಥವಾಗುವಂತೆ ತಿಳಿ ಹೇಳುವುದು ಈ ಲೇಖನವನ್ನು ಬರೆದ ಮೂಲ ಲೇಖಕರ ಉದ್ದೇಶ. ಇದನ್ನೇ ಈ ಲೇಖನಕ್ಕೆ ಪ್ರತಿಕ್ರಿಯೆಗಳನ್ನು ಬರೆದಿರುವ ಪಾರ್ಥಸಾರಥಿಗಳು ಮತ್ತು ಗಣೇಶರು ಸ್ಪಷ್ಟಪಡಿಸಿರುವುದು. ಪೂರ್ತಿ ಲೇಖನವನ್ನು ಓದಿದರೆ ನಿಮಗೆ ಅಮೇರಿಕನ್ನರ/ಯೂರೋಪಿಯನ್ನರ ಹುನ್ನಾರ ಅರ್ಥವಾಗುವುದು. ಇರಲಿ ಬಿಡಿ, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
In reply to ಅಬ್ದುಲ್ಲಾ ಅವರೇ, by makara
ಅವರಿಗೆ ಕಲ್ಯಾಣಸುಂದರಮ್ ರವರ
ಅವರಿಗೆ ಕಲ್ಯಾಣಸುಂದರಮ್ ರವರ ಉದಾಹರಣೆ ಕೊಡಿ. ಕೆಲವರಿಗೆ ಶಿಂಧೆಯವರು ಹಿಂದೂ ಭಯೋತ್ಪಾದಕತೆ ಬಗ್ಗೆ ಸುಳ್ಳು ದೋಷಾರೋಪಣೆ ಮಾಡಿದ್ದರ ಬಗ್ಗೆ ಗೊತ್ತಾಗುತ್ತದೆ. ಆದರೆ ಶಿಂಧೆಯವರು ತಮ್ಮ ಮಾತಿಗೆ ಕ್ಷಮೆ ವ್ಯಕ್ತಪಡಿಸಿದ್ದು ಗೊತ್ತಾಗುವುದಿಲ್ಲ. ವಿಷಯಗಳನ್ನು ಕೇವಲ ತಮ್ಮ ಮೂಗಿನ ನೇರಕ್ಕೆ ಮಾತ್ರ ಗಮನಿಸುವವರು ವಿಶಾಲವಾಗಿ ಯೋಚಿಸುವುದು ಕಷ್ಟ.
In reply to ಅಬ್ದುಲ್ಲಾ ಅವರೇ, by makara
ಅವರಿಗೆ ಕಲ್ಯಾಣಸುಂದರಮ್ ರವರ
ಅವರಿಗೆ ಕಲ್ಯಾಣಸುಂದರಮ್ ರವರ ಉದಾಹರಣೆ ಕೊಡಿ. ಕೆಲವರಿಗೆ ಶಿಂಧೆಯವರು ಹಿಂದೂ ಭಯೋತ್ಪಾದಕತೆ ಬಗ್ಗೆ ಸುಳ್ಳು ದೋಷಾರೋಪಣೆ ಮಾಡಿದ್ದರ ಬಗ್ಗೆ ಗೊತ್ತಾಗುತ್ತದೆ. ಆದರೆ ಶಿಂಧೆಯವರು ತಮ್ಮ ಮಾತಿಗೆ ಕ್ಷಮೆ ವ್ಯಕ್ತಪಡಿಸಿದ್ದು ಗೊತ್ತಾಗುವುದಿಲ್ಲ. ವಿಷಯಗಳನ್ನು ಕೇವಲ ತಮ್ಮ ಮೂಗಿನ ನೇರಕ್ಕೆ ಮಾತ್ರ ಗಮನಿಸುವವರು ವಿಶಾಲವಾಗಿ ಯೋಚಿಸುವುದು ಕಷ್ಟ.
In reply to ಅವರಿಗೆ ಕಲ್ಯಾಣಸುಂದರಮ್ ರವರ by kavinagaraj
+1
+1
ಹಿಂದುಗಳೆಲ್ಲರ ಕಣ್ತೆರೆಸುವ ಲೇಖನ
ಹಿಂದುಗಳೆಲ್ಲರ ಕಣ್ತೆರೆಸುವ ಲೇಖನ ಶ್ರೀಧರ್ ರವರೇ ಒಳ್ಳೆಯ ಮಾಹಿತಿಗೆ ಧನ್ಯವಾದಗಳು
@ಗಣೇಶ್ & ಪಾರ್ಥಸಾರಥಿ ಯವರ ಪ್ರತಿಕ್ರಿಯೆಗೆ +1
.......ಸತೀಶ್
In reply to ಹಿಂದುಗಳೆಲ್ಲರ ಕಣ್ತೆರೆಸುವ ಲೇಖನ by sathishnasa
ಬಹಳ ದಿನಗಳ ನಂತರ ಒಂದು ರಸವತ್ತಾದ
ಬಹಳ ದಿನಗಳ ನಂತರ ಒಂದು ರಸವತ್ತಾದ ಅನುವಾದ ಹೊರತಂದಿದ್ದಿರ, ಧನ್ಯವಾದಗಳು ಶ್ರೀಧರ್ ಬಂಡ್ರಿಯವರೇ.
In reply to ಬಹಳ ದಿನಗಳ ನಂತರ ಒಂದು ರಸವತ್ತಾದ by Prakash Narasimhaiya
ಆತ್ಮೀಯ ಪ್ರಕಾಶ್ ಅವರಿಗೆ
ಆತ್ಮೀಯ ಪ್ರಕಾಶ್ ಅವರಿಗೆ ಧನ್ಯವಾದಗಳು. ಇದು ಕೇವಲ ರಸವತ್ತಾಗಿರದೆ ವಿಚಾರ ಪ್ರಚೋದಕವೂ ಅಗಿರುವುದರಿಂದ ಮೂಲ ಲೇಖಕರಿಗೆ ಕೃತಜ್ಞತೆಗಳನ್ನು ಸಲ್ಲಿಸೋಣ.
In reply to ಹಿಂದುಗಳೆಲ್ಲರ ಕಣ್ತೆರೆಸುವ ಲೇಖನ by sathishnasa
ಸತೀಶ್ ಅವರೇ,
ಸತೀಶ್ ಅವರೇ,
ಇದು ಕೇವಲ ಹಿಂದೂಗಳ ಕಣ್ತೆರುಸುವುದಷ್ಟೇ ಅಲ್ಲ ಸಮಸ್ತ ಭಾರತೀಯರ ಕಣ್ಣನ್ನು ತೆರಸುವಂತಾಗಬೇಕು. ಏಕೆಂದರೆ ಪಾಶ್ಚಿಮಾತ್ಯ ದೇಶಗಳು ನಮ್ಮ ದೇಶದ ಪರಂಪರೆಯನ್ನು ಕ್ಷುಲ್ಲಕವಾಗಿಸಲು ಹೊರಟಿವೆ ಇದನ್ನು ಎಲ್ಲರೂ ಅರಿತರೆ ಒಳಿತು. ಪ್ರತಿಕ್ರಿಯೆಗೆ ಧನ್ಯವಾದಗಳು.
ಉತ್ತಮ ವೈಚಾರಿಕ ಬರಹ.ಅಭಿನಂದನೆಗಳು
ಉತ್ತಮ ವೈಚಾರಿಕ ಬರಹ.ಅಭಿನಂದನೆಗಳು ಶ್ರೀಧರ್. ವಸ್ತುಸ್ಥಿತಿಯ ನೈಜ ವಿಶ್ಲೇಷಣೆ, ಕಳವಳಕಾರಿ ಪರಿಸ್ಥಿತಿಯ ಅನಾವರಣ! ಪಾಶ್ಚಾತ್ಯರದು ವ್ಯಾವಹಾರಿಕ ಲೆಕ್ಕಾಚಾರ, ಭಾರತೀಯರದು ವಿಶ್ವಾಸದ ನೆಲೆಗಟ್ಟಿನ ಜೀವನ. ಎರಡರ ಹೋಲಿಕೆ ಸಾಧ್ಯವೇ ಇಲ್ಲ. ಸಂಖ್ಯಾತ್ಮಕವಾಗಿ ಹಿಂದೂಗಳು ಕ್ಷೀಣಿಸುತ್ತಿದ್ದರೂ ಗುಣಾತ್ಮಕವಾಗಿ ಉಳಿದುಕೊಳ್ಳುವ ಸಂಗತಿಗಳಿಗೆ ಮಹತ್ವ ಕೊಡುವುದು ಎಂದಿಗಿಂತ ಹೆಚ್ಚು ಅಗತ್ಯವಿದೆ.
In reply to ಉತ್ತಮ ವೈಚಾರಿಕ ಬರಹ.ಅಭಿನಂದನೆಗಳು by kavinagaraj
ನಿಮ್ಮ ಮಾತು ನಿಜ ಕವಿಗಳೆ. ಹಿಂದೂ
ನಿಮ್ಮ ಮಾತು ನಿಜ ಕವಿಗಳೆ. ಹಿಂದೂ ಧರ್ಮವು ಚೊಕ್ಕ ಬಂಗಾರವೆಂದು ತಿಳಿದಿದ್ದರೂ ಅದರ ವೈಶಿಷ್ಠ್ಯವನ್ನು ಬಹಳ ಜನ ಅರಿಯರು ಅದು ಹೇಗೆ ಬಂಗಾರವೆನ್ನುವುದನ್ನು ತೋರಿಸುವ ಕಾರ್ಯವನ್ನು ಈ ಲೇಖನವನ್ನು ಬರೆದ ಮೂಲ ಲೇಖಕರು ಮಾಡಿದ್ದಾರೆ. (ನನ್ನದೇನಿದ್ದರೂ ಕೇವಲ ಅನುವಾದದ ಕಾರ್ಯ ಆದರೆ ಇದನ್ನು ಮಾಡಲು ಒಪ್ಪಿಕೊಂಡದ್ದು ಮೂಲ ಲೇಖಕರ ಅಭಿಪ್ರಾಯಕ್ಕೆ ನನ್ನ ಸಹಮತವೂ ಇರುವುದರಿಂದ). ಇದನ್ನು ಎಲ್ಲ ಭಾರತೀಯರು ಅರಿತರೆ ಒಳಿತು; ಆಗ ಲೇಖನದ ಆಶಯ ನೆರವೇರುತ್ತದೆ. ಧನ್ಯವಾದಗಳು.