ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೨ (೨)

ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೨ (೨)

ದರ್ಶನಗಳ ಉಗಮ
    ಹಿಂದೂ ಸಂಪ್ರದಾಯದ ಪ್ರಕಾರ ಈ ಆರು ದರ್ಶನಗಳು: ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸ ಮತ್ತು ವೇದಾಂತ - ಇವುಗಳನ್ನು ಪೌರಾಣಿಕ ಋಷಿಗಳು ಪ್ರತಿಪಾದಿಸಿದರು ಎಂದು ತಿಳಿದು ಬರುತ್ತದೆ. ಈ ಋಷಿಗಳ ಹೆಸರುಗಳು ನಮಗೆ ವೇದಗಳಲ್ಲಲ್ಲದೆ ಪುರಾಣೇತಿಹಾಸಗಳಲ್ಲೂ ದೊರಕುತ್ತವೆ ಮತ್ತು ಇವರ ಬೋಧನೆಗಳು ನಮಗೆ ಸೂತ್ರರೂಪದಲ್ಲಿ ದೊರೆಯುತ್ತವೆ. ಸೂತ್ರಗಳು ಬಹಳ ಸರಳ ಮತ್ತು ಸಂಕ್ಷಿಪ್ತವಾಗಿದ್ದು ಅರ್ಥಗರ್ಭಿತವಾಗಿರುತ್ತವೆ. ಸೂತ್ರಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಸುಲಭ ಹಾಗಾಗಿ ಅವು ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಹರಿದುಬಂದಿವೆ. ಆದರೆ ಕಾಲಕ್ರಮೇಣ ಬರವಣಿಗೆ ರೂಢಿಯಾದ ಮೇಲೆ ವಿವಿಧ ದರ್ಶನಗಳ ಶಾಖೆಗಳ ನುರಿತ ಉಪಾಧ್ಯಾಯರುಗಳು ಅವುಗಳಿಗೆ ಭಾಷ್ಯಗಳನ್ನು ಮತ್ತು ಟೀಕೆಗಳನ್ನು ಬರೆದರು. ಆ ಟೀಕೆಗಳಿಗೆ ವೃತ್ತಿಗಳನ್ನು ಮತ್ತು ಈ ವೃತ್ತಿಗಳಿಗೆ ವಾರ್ತಿಕಗಳೆಂಬ ವಿವಿಧ ರೀತಿಯ ಉಪಟಿಪ್ಪಣಿಗಳನ್ನು - ಪದ್ಯ ಹಾಗೂ ಗದ್ಯರೂಪಗಳೆರಡೂ ವಿಧಗಳಲ್ಲಿ ಬರೆದು ದರ್ಶನಗಳ ವಿವಿಧ ಶಾಖೆಗಳ ಮೂಲ ಚಿಂತನೆಗಳನ್ನು ಹೆಚ್ಚು ವಿಸ್ತಾರವಾಗಿ ಪ್ರಚುರ ಪಡಿಸಿದರು. ಬೇರೆ ಶಾಖೆಗಳು ಇವರ ತತ್ವಗಳನ್ನು ಖಂಡಿಸಿದಾಗ ತಮ್ಮ ತಮ್ಮ ಚಿಂತನೆಗಳನ್ನು ಎತ್ತಿಹಿಡಿಯಲು ಪ್ರತಿಯೊಬ್ಬರೂ ಹೆಚ್ಚು ಹೆಚ್ಚಾಗಿ ಹಲವು ರೀತಿಯ ಟಿಪ್ಪಣಿಗಳು ಮತ್ತು ಪ್ರತಿ ಟಿಪ್ಪಣಿಗಳನ್ನು ಬರೆದರು. (ಒಂದೇ ಮಾತಿನಲ್ಲಿ ಹೇಳುವುದಾದರೆ "ಪರಮತ ಖಂಡನ-ಸ್ವಮತ ಮಂಡನ"). ಈ ವಿವಿಧ ರೀತಿಯ ಭಾಷ್ಯಗಳು, ಟೀಕೆಗಳು ಮುಂತಾದವುಗಳಿಂದ ವಿವಿಧ ದರ್ಶನಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯುಂಟಾದ್ದದ್ದಲ್ಲದೆ ಅವು ತರ್ಕಶಾಸ್ತ್ರದ ಬಗೆಗಿನ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು.

ಸಾಮಾನ್ಯ ಅಂಶಗಳು
    ತಾತ್ವಿಕವಾಗಿ ವಿವಿಧ ದರ್ಶನಗಳಲ್ಲಿ ತೀಕ್ಷ್ಣವಾದ ವ್ಯತ್ಯಾಸಗಳು ಕಂಡುಬಂದರೂ ಆರೂ ದರ್ಶನಗಳ ಪ್ರಾಯೋಗಿಕ ನಿಯಮಗಳಲ್ಲಿ ಎದ್ದು ಕಾಣುವಂತಹ ಸಾಮರಸ್ಯವಿದೆ.
    ಮಾನವನ ದುಃಖ ಮತ್ತು ಯಾತನೆಯನ್ನು ಪ್ರಾರಂಭದಲ್ಲಿ ಎಲ್ಲಾ ದರ್ಶನಗಳೂ ಗುರುತಿಸಿದವು ಮತ್ತು ಎಲ್ಲಾ ವಿಧವಾದ ದುಃಖದಿಂದ ಸಂಪೂರ್ಣ ಮುಕ್ತಿಯನ್ನು ಅಂತಿಮವಾಗಿ ಹೊಂದುವುದು ಅವೆಲ್ಲುವುಗಳ ಸಾಮಾನ್ಯ ಗುರಿಯಾಗಿತ್ತು.
    ಈ ಅಂತಿಮ ಗುರಿಯನ್ನು ಮುಟ್ಟಲು ಸರಿಯಾದ ಜ್ಞಾನದಿಂದ ಮಾತ್ರ ಸಾಧ್ಯವಿದೆ. ಸರಿಯಾದ ಜ್ಞಾನವೆನ್ನುವುದು ಬೌದ್ಧಿಕ ಮಟ್ಟದ್ದಲ್ಲ ಆದರೆ ಬುದ್ಧಿ-ಮನಸ್ಸುಗಳ ಸಂಕೀರ್ಣಕ್ಕೆ ಅತೀತವಾದ ಆತ್ಮದ ಅರಿವನ್ನು ನೈಜ ಮತ್ತು ಪ್ರತ್ಯಕ್ಷ ಅನುಭವದಿಂದ ಪಡೆಯುವಂತಾಹದ್ದಾಗಿದೆ ಎಂದು ಎಲ್ಲಾ ದರ್ಶನಗಳು ಅಭಿಪ್ರಾಯಪಟ್ಟವು.
    ಆತ್ಮದ ನಿಜವಾದ ಸ್ವರೂಪವನ್ನು ಅರಿಯಲಿಕ್ಕೆ ಕಠಿಣವಾದ ನೀತಿಯುಕ್ತ ಜೀವನವನ್ನು ಪಾಲಿಸುವುದು ಮತ್ತು ಕಾಮ-ಕ್ರೋಧಾದಿ ಮೊದಲಾದ ಅರಿಷಡ್ವರ್ಗಗಳನ್ನು ಗೆಲ್ಲುವುದು ಅನಿವಾರ್ಯ. ಹಾಗೆಯೇ ಈ ರೀತಿಯ ಸಾಧನೆಯ ಮೂಲಕ ಅರಿತುಕೊಂಡ ಸತ್ಯಗಳ ಬಗ್ಗೆ ನಿರಂತರ ಅಧ್ಯಯನ ಮತ್ತು ಮನನ ಕೂಡ ಆತ್ಮದ ನೈಜ ಸ್ವರೂಪವನ್ನು ತಿಳಿದುಕೊಳ್ಳುವವರೆಗೆ ಬಹು ಅವಶ್ಯಕ ಎಂದು ಅವು ಸಾರಿದವು.
    ಎಲ್ಲ ದರ್ಶನಗಳೂ ಕೂಡ ಕರ್ಮ ಸಿದ್ಧಾಂತವನ್ನು ನಂಬುತ್ತವೆ ಮತ್ತು ಈ ಪ್ರಪಂಚ ನಮಗೆ ನೀತಿಯುಕ್ತ ಜೀವನವನ್ನು ಸಾಗಿಸಲು ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಹೊಂದಲು ಭೂಮಿಕೆಯನ್ನು ಒದಗಿಸಿ ಕೊಡುತ್ತದೆ ಎನ್ನುವುದನ್ನೂ ನಂಬುತ್ತವೆ.
    ಈ ದರ್ಶನಗಳಲ್ಲಿ ನಮ್ಮ ಅರಿವು ಸರಳ ಸತ್ಯಗಳಿಂದ ಉನ್ನತ ಸತ್ಯಗಳೆಡೆಗೆ ಹಂತ ಹಂತವಾಗಿ ಸಾಗಿ; ಬಾದರಾಯಣನು ಪ್ರತಿಪಾದಿಸಿದ ಅತ್ಯುನ್ನತವಾದ ವೇದಾಂತ ದರ್ಶನದಲ್ಲಿ ಅಂತಿಮವಾಗಿ ಪರ್ಯಾವಸಾನಗೊಳ್ಳುವುದನ್ನು ಕಾಣುತ್ತೇವೆ. ವೇದಾಂತ ತತ್ವವು ಜಗತ್ತಿನ ಎಲ್ಲಾ ತತ್ವಗಳಿಗಿಂತ ಅತೀ ಎತ್ತರದ ಸ್ಥಾನದಲ್ಲಿದ್ದು ನಾವು ಹೆಮ್ಮೆಯಿಂದ ತಲೆ ಎತ್ತುವಂತೆ ಮಾಡುತ್ತದೆ. 
================================================================================
    ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ General Introductionನ 4 ರಿಂದ 6 ನೆಯ ಪುಟದ ಅನುವಾದದ ಭಾಗ.
ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೨ (೧)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
 

http://sampada.net/blog/%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%A8-%E0%B3%A8/25/03/2012/36113

Rating
Average: 5 (1 vote)

Comments