ಹಿಟ್ಟಿನ ಹುಂಜ-ಗಿರೀಶ್ ಕಾರ್ನಾಡರ ನಾಟಕದ ಕಥೆ
ರಾಣಿ ಅಮೃತಮತಿ ಸುಂದರಿ , ಏನೂ ಕೊರತೆಯಿಲ್ಲ ಅವಳಿಗೆ . ಅವಳನ್ನು ತುಂಬ ಪ್ರೀತಿಸುವ ಸದ್ಗುಣಿ , ಸುಂದರ ರಾಜ . ಹೀಗಿರುವಾಗ ಅವಳಿಗೆ ಒಬ್ಬ ಕುರೂಪಿ ಮಾವುತ - ಹೆಸರಿಗೆ ತಕ್ಕಂತೆ ಅಷ್ಟಾವಕ್ರ , ಅಷ್ಟೇ ಅಲ್ಲ ನೀಚ , ಕ್ರೂರಿ ಕೂಡ - ನ ಮೇಲೆ ಮೋಹವುಂಟಾಗುತ್ತದೆ. ರಾಜನ ಕಣ್ಣು ತಪ್ಪಿಸಿ ಅವನ ಹತ್ತಿರ ಹೋಗುತ್ತಿರುತ್ತಾಳೆ.
ಹೀಗೆ ಒಂದು ರಾತ್ರಿ ಹೋಗುವಾಗ ರಾಜನಿಗೆ ಎಚ್ಚರವಾಗಿ ಅವಳನ್ನು ಹಿಂಬಾಲಿಸುತ್ತಾನೆ. ತನ್ನ ಪತ್ನಿಯ ವ್ಯಭಿಚಾರವನ್ನು ಕಣ್ಣಾರೆ ನೋಡಿ ಅವನಿಗೆ ಸಿಟ್ಟು ಬಂದು ಇಬ್ಬರನ್ನೂ ಅಲ್ಲಿಯೇ ತುಂಡರಿಸುವ ಮನಸ್ಸಾಗಿ ಖಡ್ಗದ ಮೇಲೆ ಕೈ ಹಾಕಿದವ ಮತ್ತೆ ಹಿಂಜರಿದು ವಾಪಸ್ ಬಂದು ಮಲಗುತ್ತಾನೆ. ರಾತ್ರಿಯೆಲ್ಲ ಅವನಿಗೆ ನಿದ್ದೆಯೇ ಬರುವದಿಲ್ಲ .
ಬೆಳಗಿನ ಸಮಯ ರಾಜಮಾತೆ ಅವನ ಕಳೆಗುಂದಿದ ಮುಖ ನೋಡಿ ವಿಚಾರಿಸಿದಾಗ ಏನು ಹೇಳಬೇಕೆಂದು ತಿಳಿಯದೆ 'ಏನೋ ಕೆಟ್ಟ ಕನಸು ಬಿದ್ದು ನಿದ್ದೆಯಾಗಲಿಲ್ಲ' ಎನ್ನುತ್ತಾನೆ. ರಾಜಮಾತೆ ಅದು ಏನೆಂದು ಕೇಳಿದಾಗ -ಶ್ರೇಷ್ಠವಾದ ರಾಜಹಂಸವೊಂದು ಕೊಚ್ಚೆಯಲ್ಲಿ ಹೊರಳಡುವದನ್ನು ಕಂಡೆ- ಎನ್ನುತ್ತಾನೆ. ರಾಜಮಾತೆ ರಾಜನ ಕನಸು ಕುರಿತು ಮಂತ್ರಿಗಳು ಪುರೋಹಿತರನ್ನು ವಿಚಾರಿಸಿದಾಗ ಅವರು ಈ ಕೆಟ್ಟ ಕನಸಿಗೆ ಪರಿಹಾರವಾಗಿ ಒಂದು ಶಾಂತಿಯನ್ನು ಮಾಡಿ ಒಂದು ಹುಂಜವನ್ನು ಬಲಿ ಕೊಡಲು ಹೇಳುತ್ತಾರೆ.
ರಾಜ ಜೈನ ಮತವನ್ನು ಅನುಸರಿಸುವವ . ಇದಕ್ಕೆ ಒಪ್ಪದಾದಾಗ . ಹಿಟ್ಟಿನ ಹುಂಜವೊಂದನ್ನು ಮಾಡಿ ಸಾಂಕೇತಿಕವಾಗಿ ಬಲಿಯನ್ನು ಕೊಡಲು ಹೇಳುತ್ತಾರೆ. ಈ ರೀತಿ ಮಾಡುವಾಗ ಹಿಟ್ಟಿನ ಹುಂಜದಲ್ಲಿ ಬೆಂತರ( ದೆವ್ವ? )ವೊಂದು ಸೇರಿಕೊಂಡು ಕೂಗಿಕೊಂಡು ರಕ್ತ ಕಾರಿ ಸಾಯುತ್ತದೆ .
ಆಗ ರಾಜನಿಗೆ ಜೀವನದಲ್ಲಿ ವೈರಾಗ್ಯ ತೋರಿ ರಾಜ್ಯ ತ್ಯಾಗ ಮಾಡಿ ವನವಾಸಕ್ಕೆ ತೆರಳುತ್ತಾನೆ. ಅವನೊಂದಿಗೆ ರಾಜಮಾತೆ ಕೂಡ ಹೋಗುತ್ತಾಳೆ.
ಇತ್ತ ರಾಣಿ ಅಮೃತಮತಿ ಅಷ್ಟಾವಕ್ರನನ್ನೆ ಮದುವೆಯಾಗಿ ರಾಜ್ಯಭಾರ ವಹಿಸಿಕೊಳ್ಳುತ್ತಾಳೆ. ಅಷ್ಟೇ ಅಲ್ಲ , ರಾಜ ಹಾಗೂ ರಾಜಮಾತೆಯರಿಗೆ ವಿಷ ಉಣ್ಣಿಸಿ ಕೊಲ್ಲುತ್ತಾಳೆ.
ಈಗ ಈ ಕಥೆಯ ಕುತೂಹಲಕಾರಿ ಅಂತ್ಯ ಹೊಂದಿದೆ .
ಕಾಲಕ್ರಮೇಣ ಎಲ್ಲರೂ ಸಾಯುವಾಗ ರಾಜ ಹಾಗೂ ರಾಜಮಾತೆ ನೀಚ ಜನ್ಮಗಳನ್ನು ಎತ್ತುತ್ತ ಹೋಗುತ್ತಾರೆ . ಆದರೆ ರಾಣಿ ಅಮೃತಮತಿ ಹಾಗು ಅಷ್ಟಾವಕ್ರ ಉತ್ತಮ ಜನ್ಮಗಳನ್ನೇ ಎತ್ತುತ್ತ ಹೋಗುತ್ತಾರೆ.
ಇದೇಕೆ ಹೀಗೆ ?
ಜೈನ ಧರ್ಮದ ಪ್ರಕಾರ ಪಾಪ ಮಾಡುವದಕ್ಕಿಂತ ಅದರ ಪ್ರಜ್ಞೆ , ವಿಚಾರ , ಸಂಕಲ್ಪ ಹೆಚ್ಚು ಘೋರ. ರಾಣಿ ಅಮೃತಮತಿ ಹಾಗು ಅಷ್ಟಾವಕ್ರರಿಗೆ ಪಾಪ ಪ್ರಜ್ಞೆ ಇಲ್ಲ . ರಾಜ ಅವರನ್ನು ಕೊಲ್ಲುವ ವಿಚಾರ ಬಂದು ಖಡ್ಗವನ್ನು ಎತ್ತಿದ್ದ. ರಾಜಹಂಸದ ಕನಸಿನ ಬಗ್ಗೆ ಹೇಳುವಾಗ , ಹುಂಜ ಹಿಟ್ಟಿನದಾದರೂ ಅದನ್ನು ಕೊಲ್ಲುವಾಗ ಅವನ ಧ್ಯಾನ ಅವರತ್ತಲೇ ಇದೆ .
Comments
ನಮ್ಮೊಳಗೆ