ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 2)

ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 2)

ಮೈಸೂರಿನಿಂದ ನಂಜನಗೂಡಿಗೆ ಹೋಗುವಾಗ ದಾರಿಗುಂಟ ದಳವಾಯಿ ಕೆರೆ, ಶೆಟ್ಟಿ ಕೆರೆಗಳ ನಿಸರ್ಗ ಸೌಂದರ್ಯವನ್ನು ಸವಿಯುತ್ತ ಸಾಗುತ್ತಿದ್ದೆ. ಹಾಗೆಯೇ, ಶ್ರೀಗಣಪತಿ ಸಚ್ಚಿದಾನಂದರ ಭವ್ಯ ದತ್ತಪೀಠ ಕಂಡು ಇದು ಆಶ್ರಮವೋ ಅಥವಾ ಇಂದ್ರನ ಅಮರಾವತಿಯೋ! ಎಂದು ಸೋಜಿಗವೆನಿಸಿತು. ವಿಶಾಲವಾದ ದಳವಾಯಿ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಅತ್ಯುತ್ತಮವಾದ ಪ್ರವಾಸಿ ತಾಣವಾಗಬಹುದಲ್ಲ, ಯಾಕೆ ಸರಕಾರ ಈ ಕಡೆ ಗಮನ ಹರಿಸಿಲ್ಲ ಎಂದು ಆಲೋಚಿಸುತ್ತಿದ್ದೆ. ನಂಜನಗೂಡಿನಿಂದ ಮೈಸೂರು ತುಂಬಾ ಹತ್ತಿರವಿರುವುದರಿಂದ 20-30 ನಿಮಿಷದಲ್ಲಿಯೇ ನಂಜನಗೂಡನ್ನು ತಲುಪಿದ ನಾವು, ತಿಂಡಿಗಾಗಿ ಅಲ್ಲಿ ಮುಖ್ಯರಸ್ತೆಯಲ್ಲಿರುವ ದೊಡ್ಡ ಹೋಟೆಲೊಂದರ ಬಳಿ ಎಲ್ಲರೂ ಇಳಿದುಕೊಂಡೆವು. ಇತ್ತೀಚಿನ ದಿನಗಳಲ್ಲಿ ನಾನು ತಿಂದ ರುಚಿಯಾದ, ಅಚ್ಚುಕಟ್ಟಾದ ತಿಂಡಿ ಅದಾಗಿತ್ತು. ಇನ್ನು ಚಹಾವಂತೂ ನನ್ನ ಅಚ್ಚುಮೆಚ್ಚಿನ ಶುಂಠಿ ಸ್ವಾದದ್ದಾಗಿದ್ದರಿಂದ ಇನ್ನೂ ಹೆಚ್ಚಿನ ಖುಷಿ ನೀಡಿತು. ಇಲ್ಲಿಂದ ನಾವು ಗುಂಡ್ಲುಪೇಟೆಯೆಡೆಗೆ ಬೆಳೆಯಿತು ನಮ್ಮ ಪಯಣ.

ಗುಂಡ್ಲುಪೇಟೆಯಿಂದ ಹಿಮವದ್‌ಗೋಪಾಲಸ್ವಾಮಿ ಬೆಟ್ಟ 20 ಕಿ.ಮೀ.ದೂರ. ಹಾದಿಯುದ್ದಕ್ಕೂ ಹಿಮದ ತೊಡುಗೆಯನ್ನು ತೊಟ್ಟಂತೆ ಕಾಣುತ್ತಿತ್ತು ಆ ಗಿರಿಶಿಖರ. ನನ್ನ ಪ್ರೀತಿಯ ಕವಿಗಳಲ್ಲೊಬ್ಬರಾದ ಗೋಪಾಲ ಕೃಷ್ಣ ಅಡಿಗರ 'ಮೌನ ತಬ್ಬಿತು ನೆಲವ ಜುಮ್ಮೆನೆ, ಪುಳಕಗೊಂಡಿತು ಧಾರಿಣಿ'ಯ ಸಾಕ್ಷಾತ್ ಅನುಭವ, ಭಾಷೆಗೂ ಸಿಲುಕದ ಭಾವಗೀತೆ.

ಒಂದೊಂದೇ ಬೈಕುಗಳು ಚಲಿಸಿದವು ಬೆಟ್ಟದ ಮೈಮೇಲೆ. ಗಾಡಿಗಳು ಮೈಮೇಲೆ ಹರಿದಾಡುತ್ತಿದ್ದರಿಂದಲೋ ಏನೋ, ಮೈಗೆ ಕಚಗುಳಿಯಿಟ್ಟಂತಾಗಿ ನಡು ದಾರಿಯಲ್ಲಿ ಎಡವಿತು ಗಾಡಿ. ಬಿದ್ದೆವು ನಾನು, ಶ್ರೀ. ಮೇಲೆದ್ದು ಮೈ ಕೊಡವಿ ನಿಂತು ಗಾಡಿ ಆರಂಭಿಸಲು ನೋಡಿದರೆ ಆಗದು. ನಮ್ಮ ನಂತರ ಬಂದ ರಾಜು ಹಾಗೆಯೇ ಸಾಗಿದ. ನಂತರ ಬಂದ ತೇಜಸ್ವಿ, ಹರ್ಷ ನಿಂತು ನೋಡಿದರು. ಕಡೆಗೂ ಗಾಡಿ ಆರಂಭಗೊಂಡಿತು, ಮುಂದುವರಿಯಿತು ನಮ್ಮ ಸವಾರಿ. ಇನ್ನೇನೋ ದೇವಸ್ಥಾನ ಹತ್ತಿರವಾಗುತ್ತಿದ್ದಂತೆ ಅಲ್ಲೊಂದು ಕಡೆ ಎಲ್ಲ ಗಾಡಿಗಳನ್ನು ನಿಲ್ಲಿಸಿ ತಿಂಡಿ ಪೊಟ್ಟಣಗಳನ್ನು ಬಿಚ್ಚಿ ತಿಂದೆವು ಬಿಸ್ಕತ್ತುಗಳು, ಹಣ್ಣುಗಳು. ಗಿರಿಶಿಖರದ ಶಿಖದ ಮೇಲೆಲ್ಲ ಇಬ್ಬನಿಯ ಶಾಲು. ಅವರ್ಣನೀಯ ಅನುಭವದಿಂದ ನಮಗೆ ಮೈ ಪುಳಕ. ಗಿರಿಗಳಿಗೆ ಇಬ್ಬನಿಯ ಎರಕ.

ಸ್ವಲ್ಪ ಸಮಯದ ನಂತರ ದೇವಾಲಯದೆಡೆಗೆ ಸಾಗಿತು ನಮ್ಮ ಪಯಣ. ಪಂಕ್ತಿಯಂತೆ ನಾನು, ರಾಜು ಮತ್ತು ಶ್ರೀ ಮೊದಲಿಗೆ. ನಯನ ಮನೋಹರ ಮೂರ್ತಿ ಗೋಪಾಲಸ್ವಾಮಿಯ ದರ್ಶನ ಪ್ರಾಪ್ತಿ. ಅರ್ಚಕರಿಂದ ದೇವಾಲಯದ ಇತಿಹಾಸದ ವರ್ಣನೆ. ತಮಿಳು ರಾಜ ಪೆರುಮಾಳ್ ದಂಡನಾಯಕನಿಂದ ಸು.14ನೇ ಶತಮಾನದಲ್ಲಿ ಈ ದೇವಾಲಯದ ಸ್ಥಾಪನೆ. ಇಲ್ಲಿಗೂ ತಿರುಮಲದ ಶ್ರೀವೆಂಕಟೇಶ್ವರಸ್ವಾಮಿ ದೇವಸ್ಥಾನಕ್ಕೂ ಎಂಥದೋ ಸಂಬಂಧವಂತೆ. ವರ್ಷದ ಎಲ್ಲಾ ಕಾಲದಲ್ಲೂ ಗೋಪಾಲಸ್ವಾಮಿಯ ಮೂರ್ತಿಯ ಮೇಲೆ ಹಿಮದ ನೀರು ತೊಟ್ಟಿಕ್ಕುದಂತೆ. ಹೇಳಿಕೊಳ್ಳುವಷ್ಟೇನು ಸುಂದರವಾಗಿರದ ಈ ದೇವಾಲಯ ತನ್ನ ನಿಸರ್ಗ ಸೌಂದರ್ಯದಿಂದಾಗಿಯೇ ಪ್ರಸಿದ್ಧಿ ಎಂಬುದು ನನ್ನ ವೈಯುಕ್ತಿಕ ಭಾವನೆ. ನಮ್ಮ ನಂತರ ತೇಜಸ್ವಿ, ಹರ್ಷರ ಸರದಿ. ಇದೆಲ್ಲ ಮುಗಿದ ಮೇಲೆ, ನಮ್ಮ ಚೀಲಗಳನ್ನು ಹಿಡಿದು ಚಾರಣ ಮಾಡುವ ಆಸೆ ಹೊತ್ತು ಹೊರಟಿತು ನಮ್ಮ ಗುಂಪು. ದಾರಿಗುಂಟ ಹೊಟ್ಟೆ ತುಂಬ ಬಿಸ್ಕತ್ತು, ಹಣ್ಣುಗಳು. ಜತೆಗೆ ಖಾಲಿ-ಪೋಲಿ ಜೋಕುಗಳು, ಕೀಟಲೆ-ಪಾಟಲೆಗಳ ನಂಚಿಕೆ.

ಬೆಟ್ಟದ ಮಧ್ಯೆ ಕಲ್ಲು ಬಂಡೆಗಳ ನಡುವೆ ದೊಡ್ಡ ಗಿಡವೊಂದರ ಆಸರೆಯಿತ್ತು. ಅದ ನೋಡಿ ಹೊರಟೆವತ್ತಕಡೆಗೆ. ನನ್ನ ಜೀವನದಿ ಮೊದಲ ಬಾರಿಗೆ ಚಾರಣ ಮಾಡಿದ ಅನುಭವ. ಅಂತೂ ಇಂತು ಕಡೆಗೆ ನಮ್ಮ ತಲುಪುದಾಣ ತಲುಪಿದ ಸಂತಸ. ಅಲ್ಲಿ ಶುರುವಾಯಿತು ಪುರಾಣ, ರಾಮ-ಕೃಷ್ಣರ ಪರ ವಿರೋಧ ಚರ್ಚೆ, ವಾಗ್ವಾದ, ವಾಗ್ಯುದ್ಧ.

ಮೊದಲ ಭಾಗದಲ್ಲಿ ಶ್ರೀಕೃಷ್ಣನ ಭಕ್ತನಾದ ಶ್ರೀ ಉರುಫ್ ಡಾನ್ ಬಗ್ಗೆ ವಿವರವಾಗಿ ಹೇಳುತ್ತೇನೆಂದು ಹೇಳಿದ್ದೆ. ಮಹಾನ್ ಕರ್ಮಠ ಇಸ್ಕಾನ್ ಭಕ್ತನಾದ ಈತ ಹೇಳುವ ಹಾಗೆ, ನಾವೆಲ್ಲರೂ ಓದಿರುವಂತೆ, ಕೇಳಿರುವಂತೆ ರೂಢಿಗತವಾಗಿರುವ ವಿಷ್ಣುವಿನ ದಶಾವತಾರಗಳಲ್ಲಿ ಶ್ರೀಕೃಷ್ಣನದು ಒಂದು ಅವತಾರವೆಂದು ನಾವು ಹೇಳಿದರೆ, ಆತ ಇದಕ್ಕೆ ತದ್ವಿರುದ್ಧ. ಶ್ರೀಕೃಷ್ಣನ ಒಂದಂಶ ವಿಷ್ಣು ಎಂಬುದು ಅವನ ವಾದ. ಇಂತಹವರನ್ನು ಅವರ ಪಾಡಿಗೆ ಬಿಟ್ಟರೆ ಒಳ್ಳೆಯದು. ವಾದಕ್ಕೆ ಎಳೆದು, ತರ್ಕಕ್ಕೆ ಸಿಲುಕಿಸಲು ನೋಡಿದಷ್ಟು ಇನ್ನೂ ಅತಿರೇಕಕ್ಕೆ ಹೋಗುತ್ತಾರೆಂದು ನಾನು ನನ್ನ ಗೆಳೆಯ ರಾಜುಗೆ ಹೇಳಿದೆ. ಆದರೆ, ಆತ ಸುಮ್ಮನಾಗಲಿಲ್ಲ.

ಈ ಹಿಂದೆ ನಾನು ಆತನಿಗೆ ಪುರಾಣಗಳ ವಿಷಯ ಬಂದಾಗ ಒಂದು ವಿಷಯ ಪ್ರಸ್ತಾಪಿಸಿದ್ದೆ: ರಾಮ ಕ್ಷತ್ರಿಯ. ಕೃಷ್ಣ ಯಾದವ ಅಂದರೆ ಗೊಲ್ಲ. ಅಂದರೆ, ಇಬ್ಬರೂ ಬ್ರಾಹ್ಮಣರಲ್ಲ. ಕ್ಷತ್ರಿಯರು ತಮ್ಮ ದೈಹಿಕ ಶೌರ್ಯ, ಪರಾಕ್ರಮಗಳಿಗೆ ಹೆಸರುವಾಸಿ. ಅಂದಮೇಲೆ, ಅವರು ಮಾಂಸಾಹಾರಿಗಳಾಗಿರಲೇಬೇಕು. ಇನ್ನು ಯಾದವ ಕುಲ ಶೂದ್ರ ವರ್ಣಕ್ಕೆ ಸೇರುತ್ತದಾದ್ದರಿಂದ ಕೃಷ್ಣ ಕೂಡ ಶೂದ್ರನೇ. ಅದರಿಂದಾಗಿ ಕೃಷ್ಣ ಕೂಡ ಮಾಂಸಾಹಾರಿಯಾಗಿರಬಹುದು. ತ್ರಿಮೂರ್ತಿಗಳಲ್ಲೊಬ್ಬನಾದ ಶಿವ ಸ್ಮಶಾನವಾಸಿಯಾದ್ದರಿಂದ ಅವನು ಮಾಂಸಾಹಾರ ಸೇವಿಸುತ್ತಾನೆಂದು ವಿಶೇಷವಾಗಿ ಹೇಳಬೇಕಿಲ್ಲ. ಅದು ವಿವಾದಾತೀತ. ಅಲ್ಲಿಗೆ ಬ್ರಹ್ಮ ಮಾತ್ರ ಬ್ರಾಹ್ಮಣ, ಸಸ್ಯಾಹಾರಿ ಎಂಬುದಾದಲ್ಲಿ, ಆತನಿಗೆ ಭೂಲೋಕದಲ್ಲಿ ಪೂಜೆಯೇ ಇಲ್ಲ. ಸಹಜವಾಗಿಯೇ, ಶಿವ ರಾಮ ಕೃಷ್ಣರಿಗೆ ಭೂಲೋಕದಲ್ಲಿ ಅಗ್ರ ಮನ್ನಣೆ. ಅದರಲ್ಲೂ ಪುರೋಹಿತಶಾಹಿಗಳಿಗಂತೂ ರಾಮ ಕೃಷ್ಣರೇ ಆರಾಧ್ಯದೈವ.

ಇದೇ ವಾದವನ್ನು ಮುಂದಿಟ್ಟುಕೊಂಡು ರಾಜು ಶ್ರೀಯನ್ನು ಕೆಣಕಿದ. ಮೊದಲೇ ಹೇಳಿದ ಹಾಗೆ, ಶ್ರೀ ಕರ್ಮಠ ಕೃಷ್ಣ ಭಕ್ತನಾದ್ದರಿಂದ ಆತನಲ್ಲಿ ವಾದಿಸಲು, ತರ್ಕಬದ್ಧವಾಗಿ ಮಾತನಾಡಲು ಯಾವುದೇ ಜ್ಞಾನವಿರಲಿಲ್ಲ. ಇಸ್ಕಾನ್ ಏನು ಹೇಳುತ್ತದೆಯೋ ಅದೇ ಅಂತಿಮ. ನಾನೊಬ್ಬ ಎಲ್ಲರ ವಾದವನ್ನು ಕೇಳುತ್ತಾ ಮೂಕಪ್ರೇಕ್ಷಕನಾಗಿ ಕುಳಿತಿದ್ದೆ. ರಾಜು, ತೇಜಸ್ವಿ ಹಾಗೂ ಹರ್ಷ ಮೂವರು ಶ್ರೀಯ ವಿರುದ್ಧ ವಾಗ್‌ಬಾಣ ಬಿಡಲಾರಂಭಿಸಿದ್ದರು. ಇದಕ್ಕೆ ಪ್ರತಿಯಾಗಿ ವಾದಿಸಲಾಗದೆ ತಾಳ್ಮೆ ಕಳೆದುಕೊಂಡ ಶ್ರೀ, ಸಂಸ್ಕೃತ ಅಂದರೆ ಅವಾಚ್ಯ ಭಾಷೆ ಬಳಸಲಾರಂಭಿಸಿದ. ಆಗ ಮಧ್ಯ ಪ್ರವೇಶಿಸಿದ ನಾನು ಕಡೆಯದಾಗಿ ಶ್ರೀಗೆ ಒಂದು ಮಾತು ಹೇಳಿದೆ. ನೋಡಿ, ಶ್ರೀರಾಮ ಒಬ್ಬ ಆದರ್ಶವಾದಿ. ಆತನನ್ನು ಅನುಸರಿಸುವುದು ಮಾನವ ಮಾತ್ರರಿಗೆ ಸ್ವಲ್ಪ ಕಷ್ಟವೇ ಸರಿ. ಆದರೆ, ಶ್ರೀಕೃಷ್ಣ ಹಾಗಲ್ಲ. ಮಾನವರಿಗೆ ಅತ್ಯಂತ ಹತ್ತಿರದವ, ಆಪ್ತ. ಅದಲ್ಲದೆ, ಇಡೀ ಮಹಾಭಾರತದಲ್ಲಿ ಶ್ರೀಕೃಷ್ಣ ಶಿಶುಪಾಲ ಸಂಹಾರದ ವೇಳೆ ಹೊರತುಪಡಿಸಿದರೆ, ಎಲ್ಲಿಯೂ ಯಾರು ಎಷ್ಟೇ ಛೇಡಿಸಿದರೂ, ಯಾರ ಮೇಲೂ ಕೋಪಿಸಿಕೊಳ್ಳುವುದಿಲ್ಲ. ಸದಾ ಹಸನ್ಮುಖಿಯಾಗಿಯೇ ಇಡೀ ಮಹಾಭಾರತದ ಕೇಂದ್ರಬಿಂದುವಾಗಿ ಕಂಗೊಳಿಸುತ್ತಾನೆ. ಹಾಗಾಗಿ, ನೀವು ನಿಜವಾಗಿಯೂ ಶ್ರೀಕೃಷ್ಣ ಭಕ್ತರೇ ಆಗಿದ್ದಲ್ಲಿ, ನೀವು ಕೃಷ್ಣನ ಆ ಗುಣವನ್ನು ಅಳವಡಿಸಿಕೊಳ್ಳಬೇಕೇ ಹೊರತು, ಹೀಗೆ ವರ್ತಿಸಬಾರದು ಎಂದು ಹೇಳಿದೆ. ಅಲ್ಲಿಗೆ ಈ ವಾದ ಪರಿಸಮಾಪ್ತಿಗೊಂಡಿತು. ಶ್ರೀ ವಿರುದ್ಧವಾಗಿದ್ದವರು ಕೂಡ ನನ್ನ ಈ ಮಾತನ್ನು ಒಪ್ಪಿಕೊಂಡು, ನೀನು ಹೇಳುವುದು 'ಸರಿ' ಎಂದು ವಾಗ್ಯುದ್ಧಕ್ಕೆ ಅಂತ್ಯ ಹಾಡಿದರು. ರಾಮಾಯಣ ಮಹಾಭಾರತಗಳಿಗೆ, ರಾಮ ಕೃಷ್ಣರಿಗೆ ಸಂಬಂಧಿಸಿದ ಹಲವಾರು ವಿಷಯಗಳು ವಾದವಿವಾದದ ಕೇಂದ್ರಬಿಂದುವಾದರೂ, ಅವೆಲ್ಲವನ್ನೂ ಇಲ್ಲಿ ಬರೆಯುವ ಗೋಜಿಗೆ ಹೋಗದೆ, ಸಾರಾಂಶವನ್ನು ಮಾತ್ರ ಇಲ್ಲಿ ಬರೆದಿದ್ದೇನೆ,

ಸಮಯ ಮಧ್ಯಾಹ್ನ 3 ಗಂಟೆಯನ್ನು ಮೀರಿತ್ತು. ಇನ್ನೂ ಬಂಡೀಪುರಕ್ಕೆ ಹೋಗಬೇಕಾದ್ದರಿಂದ, ಎಲ್ಲರೂ ನಾವು ತಂದಿದ್ದ ಹಣ್ಣುಹಂಪಲುಗಳು, ಬಿಸ್ಕತ್ತುಗಳನ್ನು ತಿಂದು ಹೆಚ್ಚು ಕಮ್ಮಿ ಖಾಲಿ ಮಾಡಿ ಮೇಲೆದ್ದೆವು. ಈ ಸ್ಥಳಕ್ಕೆ ಇಳಿಯುವಾಗ ಸ್ವಲ್ಪ ಸುಲಭವಾಗಿ ಇಳಿದಿದ್ದ ನಾವು, ಹತ್ತುವಾಗ ಮಾತ್ರ ಸುಸ್ತಾಗಿಬಿಟ್ಟೆವು. ನಾವೆಲ್ಲರೂ ಕುಳಿತಿದ್ದ ಸ್ಥಳದಿಂದ, ಬೆಟ್ಟದ ಮೇಲೆ ಹೋಗುವ ಮಾರ್ಗಮಧ್ಯದಲ್ಲಿ ಅಲ್ಲಲ್ಲಿ ಬಿದ್ದಿದ್ದ ಆನೆ ಲದ್ದಿಗಳು ಈ ಬೆಟ್ಟ ಆನೆಗಳ ವಾಸತಾಣವೆಂಬುದನ್ನು ಸೂಚಿಸುತ್ತಿದ್ದವು.

ಮತ್ತೆ ಬೆಟ್ಟದಿಂದ ಬಂಡೀಪುರದೆಡೆಗೆ ಹೋಗಲು ಬೆಟ್ಟಕ್ಕೆ ಹತ್ತಿರವಾಗಿರುವ ಹಂಗಳ ಗ್ರಾಮದ ಮೂಲಕವೇ ಹೋಗಬೇಕು. ಬೆಟ್ಟದ ಪ್ರವೇಶದ್ವಾರದಲ್ಲಿ ನಾವು ನಮ್ಮ ನಮ್ಮ ಗಾಡಿಗಳನ್ನು ನಿಲ್ಲಿಸಿ ಬಂಡೀಪುರಕ್ಕೆ ಹೋಗುವುದೋ ಬೇಡವೋ ಎನ್ನುವ ನಿರ್ಷರ್ಷೆಗೆ ನಿಂತೆವು. ಹತ್ತಿರದಲ್ಲಿ ಉಳಿದುಕೊಳ್ಳುವುದಕ್ಕೆ ಎಲ್ಲಾದರೂ ಲಾಡ್ಜ್ ಇದೆಯೇ ಎಂದು ಸಾಮಾನ್ಯವಾಗಿ ಎಲ್ಲಾ ಪ್ರವಾಸಿತಾಣಗಳಲ್ಲಿ ಪ್ರವಾಸಿಗರನ್ನು ಪೆನ್ನು, ಕಾಸು ಕೇಳುವ ಹುಡುಗರನ್ನು ವಿಚಾರಿಸಿದಾಗ ಅವರು ಯಾವುದೋ ಲಾಡ್ಜ್ ಹೆಸರು ಹೇಳಿದರು. ರಾಜು ತನ್ನ ಗೆಳೆಯನೊಬ್ಬನ ಪರಿಚಯವಿದ್ದ ಲಾಡ್ಜ್ ಮ್ಯಾನೇಜರ್‌ಗೆ ಕರೆ ಮಾಡಿ ವಿಚಾರಿಸಿದಾಗ, ಆತ 1000 ರೂ. ಆಗುತ್ತದೆಂದು ಹೇಳಿದನಂತೆ. ಆ ಹಣಕ್ಕೆ ನಾವು ಇನ್ನಷ್ಟು ಸ್ಥಳಗಳನ್ನು ನೋಡಬಹುದೆಂದು ಹೇಳಿ ಹರ್ಷನ ಮಾವನ ಮನೆಯಿದ್ದ ಕೊಳ್ಳೇಗಾಲದಲ್ಲಿ ರಾತ್ರಿ ಉಳಿದುಕೊಂಡು, ಮಾರನೇ ದಿನ ತಲಕಾಡು, ಶಿವನಸಮುದ್ರ ಹಾಗೂ ಸೋಮನಾಥಪುರಕ್ಕೆ ಹೋಗೋಣವೆಂದು ನಿರ್ಧರಿಸಿ, ಗುಂಡ್ಲುಪೇಟೆ, ಚಾಮರಾಜನಗರ ಮಾರ್ಗವಾಗಿ ಕೊಳ್ಳೇಗಾಲ ತಲುಪುವ ಹಾದಿ ಹಿಡಿದೆವು.

ಮುಂದುವರೆಯುತ್ತದೆ...

Rating
No votes yet