ಹೀಗಾಗಿದ್ದರೆ ಹೇಗಿರುತ್ತಿತ್ತು: ಒಂದು ಹಾಸ್ಯ ಬರಹ

ಹೀಗಾಗಿದ್ದರೆ ಹೇಗಿರುತ್ತಿತ್ತು: ಒಂದು ಹಾಸ್ಯ ಬರಹ


    ಶ್ರೀನಾಥ್ ಭಲ್ಲೆಯವರ ಇತ್ತೀಚಿನ ಮನುಜನ ಕಾಡುತ್ತಿರುವ ರಕ್ಕಸರು http://www.sampada.net/%E0%B2%AE%E0%B2%A8%E0%B3%81%E0%B2%9C%E0%B2%A8-%E0%B2%95%E0%B2%BE%E0%B2%A1%E0%B3%81%E0%B2%A4%E0%B3%8D%E0%B2%A4%E0%B2%BF%E0%B2%B0%E0%B3%81%E0%B2%B5-%E0%B2%B0%E0%B2%95%E0%B3%8D%E0%B2%95%E0%B2%B8%E0%B2%B0%E0%B3%81 ಬರಹದ ಪ್ರೇರಣೆಯಿಂದ ನೆನಪಿಗೆ ಬಂದ ಕಥೆಗಳು ಇವು. ಈ ಕಥೆಗಳು ೭೦-೮೦ರ ದಶಕದಲ್ಲಿ ಬಹುಶಃ ಸುಧಾ ವಾರಪತ್ರಿಕೆ ಅಥವಾ ಮಯೂರ ಮಾಸ ಪತ್ರಿಕೆಯಲ್ಲಿ ಓದಿದ ನೆನಪು. ಇರಲಿ ಒಂದು ವೇಳೆ ದಶರಥ ಅಥವಾ ಕಂಸ ಹೀಗೆ ಮಾಡಿದ್ದರೆ ಇಂದು ಪ್ರಚಲಿತದಲ್ಲಿರುವ ರಾಮಾಯಣ ಮತ್ತು ಭಾಗವತ/ಮಹಾಭಾರತ ಎರಡೂ ಇರುತ್ತಿರಲಿಲ್ಲವಷ್ಟೇ. ಅದು ಹೇಗೆ ಎಂದುಕೊಂಡರೆ, ಮುಂದೆ ಓದಿ...ನಿಮಗೇ ವೇದ್ಯವಾಗುತ್ತದೆ!

ಪ್ರಸಂಗ - ೧: ರಾಮಾಯಣ
    ದಶರಥ ತನ್ನ ಮಗ ರಾಮನಿಗೆ ಪಟ್ಟಾಭಿಷೇಕ ಮಾಡುವ ಸಂಭ್ರಮದಲ್ಲಿರುತ್ತಾನೆ. ಆಗ ಮಂಥರೆಯ ಕುಟಿಲ ಮಾತಿಗೆ ಮರುಳಾಗಿ, ಕೈಕೇಯಿ ದಶರಥನನ್ನು ತನಗೆ ಹಿಂದೆ ದೇವ-ದಾನವರ ಯುದ್ಧದ ಸಮಯದಲ್ಲಿ ನೀಡಿದ ಎರಡು ವರಗಳನ್ನು ಈಡೇರಿಸುವಂತೆ ಕೇಳುತ್ತಾಳೆ. ಅದರ ಪ್ರಕಾರ ತನ್ನ ಮಗ ಭರತನಿಗೆ ಪಟ್ಟಾಭಿಷೇಕವಾಗಬೇಕು ಮತ್ತು ರಾಮ ಹದಿನಾಲ್ಕು ವರ್ಷ ವನವಾಸಕ್ಕೆ ತೆರಳಬೇಕು. ಇದನ್ನು ಕೇಳಿದ ದಶರಥ ಚಿಂತಾಕ್ರಾಂತನಾಗಿ, ಸ್ವಲ್ಪ ಕಾಲಾವಕಾಶವನ್ನು ಕೋರಿ ತನ್ನ ಶಯನ ಮಂದಿರಕ್ಕೆ ಹಿಂತಿರುಗುತ್ತಾನೆ. ಇವನ ಪರಿಸ್ಥಿತಿಯನ್ನು ಕಂಡು ಹಿರಿಯ ರಾಣಿ ಒಬ್ಬ ಆಪ್ತ ಸಮಾಲೋಚಕನಿಗೆ ಕರೆ ಕಳುಹಿಸಿದಳು. ಅವನು ಸಮಸ್ಯೆಯನ್ನು ಅಧ್ಯಯನ ಮಾಡಿ ದಶರಥನಿಗೆ ಕೆಲವು ಸಲಹೆ ಸೂಚನೆಗಳನ್ನಿತ್ತ; ಅದನ್ನು ಕೇಳಿದ ನಂತರ ದಶರಥ ನಿಶ್ಚಿಂತೆಯಿಂದ ನಿದ್ರೆ ಮಾಡಿದ. ಬೆಳಗಾಗುತ್ತಲೇ, ಕೈಕೇಯಿ ಬಂದು ದಶರಥನಲ್ಲಿ ತನ್ನ ವರಗಳ ವಿಷಯವಾಗಿ ಪ್ರಸ್ತಾಪಿಸಿದಳು. ಆಗ ದಶರಥ ಏನೂ ತಳಮಳಗೊಳ್ಳದೆ, ಅವಳನ್ನು cool.....ಆಗಿ ಕೇಳಿದ, " ಯಾವ ಯುದ್ಧ? ಯಾವ ವರಗಳು? ನಾನು ನಿನಗೆ ಯಾವಾಗ ಮಾತು ಕೊಟ್ಟಿದ್ದೆ? ಅದಕ್ಕ್ಯಾರಾದರು ಸಾಕ್ಷಿ ಇದ್ದಾರೆಯೆ? ಇಲ್ಲಾ ನಾನೇನಾದರು ಲಿಖಿತಪೂರ್ವಕವಾಗಿ ನಿನಗೇನಾದರೂ ಬರೆದುಕೊಟ್ಟಿದ್ದೇನೆಯೆ?" ತನ್ನ ಬಳಿ ಯಾವುದೇ ಆಧಾರವಿಲ್ಲದ್ದರಿಂದ ಕೈಕೇಯಿ ಅಲ್ಲಿಂದ ಸುಮ್ಮನೆ ಹೊರ ನಡೆದಳು. ಹಾಗಾಗಿ ರಾಮನ ವನವಾಸವೂ ತಪ್ಪಿತು ಮತ್ತು ರಾಮಾಯಣ  ರಾಮನ ಪಟ್ಟಾಭಿಷೇಕದೊಂದಿಗೆ ಅಲ್ಲಿಗೇ ಮುಗಿಯಿತು.

ಪ್ರಸಂಗ - ೨: ಮಹಾಭಾರತ
    ಕಂಸ ತನ್ನ ತಂಗಿ ದೇವಕಿಯನ್ನು ವಸುದೇವನಿಗೆ ಮದುವೆಮಾಡಿಕೊಟ್ಟು, ಸಂತೋಷದಿಂದ ಅವರನ್ನು ರಥದಲ್ಲಿ ಕೂಡಿಸಿಕೊಂಡು ಊರ ಮೆರವಣಿಗೆಯಲ್ಲಿ ಸಾಗಿದ್ದ. ಆಗ ಅವನಿಗೊಂದು ಅಪರಚಿತ ಮೊಬೈಲ್ ಕರೆ? (ಅಶರೀರವಾಣಿ)ಯೊಂದು ಬಂತು. "ಹೇ ಕಂಸ ಇಷ್ಟೊಂದು ಸಂಭ್ರಮಿಸುತ್ತಿದ್ದೀಯಲ್ಲಾ, ನಿನ್ನ ಈ ತಂಗಿಗೆ ಜನಿಸುವ ಅಷ್ಟಮ ಸಂತಾನದಿಂದ ನಿನ್ನ ಅವಸಾನವಾಗುತ್ತದೆ." ಇದನ್ನು ಕೇಳಿದ ಕಂಸ ಕೆಂಡಾಮಂಡಲವಾಗಿ, ಒರೆಯಿಂದ ತನ್ನ ಖಡ್ಗವನ್ನು ತೆಗೆದು ತನ್ನ ತಂಗಿಯನ್ನು ಕೊಲ್ಲಲು ಮುಂದಾದ. ಆಗ ರಾಜ ವೈದ್ಯ ಕಂಸನ ಕಿವಿಯಲ್ಲಿ ಏನನ್ನೋ ಉಸುರಿದ, ಅದನ್ನು ಕೇಳಿದ ಕಂಸ ಏನೂ ಆಗಿಲ್ಲವೆಂಬಂತೆ ಮೆರವಣಿಗೆಯನ್ನು ಯಥಾ ಪ್ರಕಾರ ಮುಂದುವರಿಸಿದ ಮತ್ತು ರಾಜ ವೈದ್ಯ ಹೇಳಿದ ಸೂಚನೆಗಳನ್ನು ಅನುಸರಿಸಿ ನಿರಮ್ಮಳವಾಗಿದ್ದ. ರಾಜ ವೈದ್ಯ ಕಂಸನಿಗೆ ಅವನ ತಂಗಿ ದೇವಕಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಲು ಸಲಹೆ ನೀಡಿದ್ದ. ಅಲ್ಲಿಗೆ ಕೃಷ್ಣಾವತಾರ ಫಿನಿಶ್ ಮತ್ತು ಇಂದು ನಾವು ಕೇಳಿರುವ ಮಹಾಭಾರತವೇ ಇರುತ್ತಿರಲಿಲ್ಲ. ಆಗ ಕಂಸ ಮಥುರೆಯನ್ನು ಆಳಿದರೆ ಹಸ್ತಿನಾವತಿಯಲ್ಲಿ ಕೌರವರು ಪಾಂಡವರನ್ನು ಕಾಡಿಗೆ ಅಟ್ಟಿ ಇಂದ್ರಪ್ರಸ್ಥವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು 'ಮಹಾನ್ ಭಾರತ'ವನ್ನು ಆಳುತ್ತಿದ್ದರು.

    ಕೊನೆಯ ಹನಿಗಳಾಗಿ, ನಮ್ಮ ಮಾರ್ಡನ್ ಚಿಂತೆಗನುಗುಣವಾಗಿ ನಮ್ಮ ಪುರಾನಾ ಜಮಾನಾದಲ್ಲಿ ರಾಮಾಯಣದ ಬಗ್ಗೆ ಪ್ರಚಲಿತವಿರುವ ಒಂದೆರಡು  ಪ್ರಸಂಗಗಳನ್ನು  ಕೊಡುತ್ತಿದ್ದೇನೆ.

ಕೊನೆಯ ಹನಿ - ಲೋಕದ ರೀತಿ: ಪಾದುಕಾ ಪುರಾಣ
    ರಾಮನು ತಂದೆಯ ಆಣತಿಯಂತೆ ೧೪ ವರ್ಷ ವನವಾಸಕ್ಕೆ ತೆರಳುತ್ತಾನೆ. ಅಯೋಧ್ಯೆಗೆ ಹಿಂತಿರುಗಿ ಬಂದ ಭರತ ಅಣ್ಣನನ್ನು ಹುಡುಕಿಕೊಂಡು ಅರಣ್ಯಕ್ಕೆ ತೆರಳಿ, ರಾಮನ ಮನವೊಲಿಸಿ ಅವನು ಹಿಂತಿರುಗಿ ಬಂದು ರಾಜ್ಯವಾಳುವಂತೆ ಮಾಡಲು ಪ್ರಯತ್ನಿಸುತ್ತಾನೆ. ಆಗ ತಂದೆಯ ಮಾತನ್ನು ಮೀರಿ ತಾನು ವಚನ ಭ್ರಷ್ಟನಾಗಲಾರೆನೆಂದು ತಿಳಿಸಿ; ವನವಾಸದ ಅವಧಿ ಮುಗಿದ ನಂತರ ಹಿಂದಿರುಗುವದಾಗಿ ರಾಮನು ಭರತನಿಗೆ ವಚನ ಕೊಡುತ್ತಾನೆ. ಆಗ ಭರತ, ರಾಮನ ಪಾದುಕೆಗಳನ್ನೇ ಸಿಂಹಾಸನದ ಮೇಲಿರಿಸಿ ಅಣ್ಣನ ಪ್ರತಿನಿಧಿಯಾಗಿ ರಾಜ್ಯಭಾರ ಮಾಡುವುದಾಗಿ ತಿಳಿಸಿ ಅವನಿಂದ ಪಾದುಕೆಗಳನ್ನು ಪಡೆಯುತ್ತಾನೆ. ಇದು ಸಾಮನ್ಯವಾಗಿ ತಿಳಿದಿರುವಂತೆ; ರಾಮನ ಪಿತೃವಾಕ್ಯಪರಿಪಾಲನೆಗೆ ಮತ್ತು ಭರತನ ಭ್ರಾತೃಪ್ರೇಮಕ್ಕೆ ಕೊಡುವ ಉದಾಹರಣೆ. ಆದರೆ ಕೊಂಕು ಮಾತನಾಡುವ ಜನ ಸುಮ್ಮನಿರುತ್ತಾರೆಯೇ? ಅದಕ್ಕೂ ಒಂದು ಕಾರಣ ಹೇಳುತ್ತಾರೆ, ಅದೇನೆಂದರೆ; ಹೇಗೂ ರಾಮನ ವಿರೋಧವನ್ನು ಕಟ್ಟಿಕೊಂಡು ಭರತ ರಾಜ್ಯಭಾರ ಮಾಡಲಾಗುವುದಿಲ್ಲ; ಯಾವತ್ತಿದ್ದರೂ ರಾಮನೇ ಸಿಂಹಾಸನಕ್ಕೆ ನಿಜವಾದ ವಾರಸುದಾರ, ಅದಕ್ಕೇ ತನಗೆ ಅಪವಾದ ಬರದಂತೆ ರಾಮನಿಗೆ ಕಷ್ಟಕೊಡಬೇಕು. ಆಗ ಅವನು ಮಾಡಿದ ಉಪಾಯವೆಂದರೆ, ರಾಮನ ಪಾದುಕೆಗಳನ್ನು ತೆಗೆದುಕೊಳ್ಳುವದು; ಆಗ ರಾಮ ಕಾಡಿನಲ್ಲಿ ಬರಿಗಾಲಿನಲ್ಲಿ ನಡೆದು ಪಜೀತಿ ಮಾಡಿಕೊಳ್ಳುತ್ತಾನೆ!!!!
(ಇದನ್ನೇ ನಮ್ಮ ಆಧುನಿಕ ಭಾಷೆಯಲ್ಲಿ ಡಿಪ್ಲೋಮಸಿ ಎನ್ನುವುದು)

ಕಟ್ಟಕಡೆಯ ಹನಿ - ಕಲಿಯುಗದ ಆಫೀಸರುಗಳು ಯಾರು?
     ರಾಮಾಯಣವನ್ನಾಧರಿಸಿಯೇ ನಮ್ಮ ಕೆಲವೊಂದು ಉದ್ಯೋಗಿಗಳ ಬಗ್ಗೆ ಪ್ರಚಲಿತವಿರುವ ಈ ಎರಡನೇ ಪ್ರಸಂಗವನ್ನು ಓದಿ. ತಂದೆಯ ಆಣತಿಯಂತೆ ರಾಮ ಹದಿನಾಲ್ಕು ವರುಷ ವನವಾಸ ಮಾಡಿ ಕಾಡಿನಿಂದ ಅಯೋಧ್ಯೆಗೆ ಹಿಂದಿರುಗಿದ. ಆಗ ಅಯೋಧ್ಯೆಯ ಹೊರವಲಯದಲ್ಲಿ ಕೆಲವು ಜನ ನಿಂತಿರುವುದನ್ನು ಗಮನಿಸಿದ. ಅವರನ್ನು ನೋಡಿ ಆಶ್ಚರ್ಯಗೊಂಡ ಶ್ರೀರಾಮಚಂದ್ರ ಅವರೇಕೆ ಹಾಗೆ ನಿಂತುಕೊಂಡಿದ್ದಾರೆಂದು ಪ್ರಶ್ನಿಸಿದ. ಆಗ ಅವರು ಹೇಳಿದರು, "ಮಹಾಸ್ವಾಮಿ, ನೀವು ವನವಾಸಕ್ಕೆ ಹೋಗುವಾಗ ಎಲ್ಲರ ಜೊತೆಯಲ್ಲಿ ನಾವು ಕೂಡ ನಿಮ್ಮನ್ನು ಬೀಳ್ಕೊಡಲು ಬಂದಿದ್ದೆವು. ನೀವು ನಗರದ ಹೊರವಲಯಕ್ಕೆ ಬಂದ ಕೂಡಲೇ ಈ ನಗರದ ಯಾವತ್ತೂ ಮಹನೀಯರೇ ಹಾಗೂ ಮಹಿಳೆಯರೇ ನೀವು ಇಷ್ಟು ದೂರ ನನ್ನನ್ನು ಕಳುಹಿಸಲು ಬಂದದ್ದು ಸಾಕು, ಇನ್ನು ನೀವು ಹಿಂದಿರುಗಿ ಎಂದು ಹೇಳಿದಿರಿ. ಆಗ ಮಹನೀಯರಾದ ಪುರುಷರು ಮತ್ತು ಮಹಿಳೆಯರು ನಿಮ್ಮ ಮಾತಿನಂತೆ ಹಿಂದಿರುಗಿದರು. ಆದರೆ ಮಹಿಳೆಯರೂ ಅಲ್ಲದ ಪುರುಷರೂ ಅಲ್ಲದ ನಮಗೆ ನೀವು ಯಾವ ಆದೇಶವನ್ನೂ ಕೊಡಲಿಲ್ಲ. ಅದಕ್ಕಾಗಿ ನಿಮ್ಮ ಆಣತಿಗೆ ಈ ಹದಿನಾಲ್ಕು ವರುಷಗಳಿಂದ ಕಾಯುತ್ತಿದ್ದೇವೆ". ಇದನ್ನು ಕೇಳಿ ರಾಮನಿಗೆ ಅವರ ಬಗ್ಗೆ ಬಹಳ ಕನಿಕರ ಉಂಟಾಯಿತು ಮತ್ತು ಅವರ ಭಕ್ತಿಗೆ ಮೆಚ್ಚಿ ಅವರಿಗೆ ವರವೊಂದನ್ನು ದಯಪಾಲಿಸಲು ನಿಶ್ಚಯಿಸಿದ. ಅದರಂತೆ, "ಮುಂದೆ ಕಲಿಯುಗದಲ್ಲಿ ಪ್ರಜಾಪ್ರಭುತ್ವ ಬರುತ್ತದೆ, ಆಗ ನೀವೆಲ್ಲಾ ಆಫೀಸರುಗಳಾಗಿ ಯಾವುದೇ ಕೆಲಸ ಮಾಡದೇ ಸುಖವಾಗಿರಿ" ಎಂದು ಅವರನ್ನೆಲ್ಲಾ ಆಶೀರ್ವದಿಸಿದ?!!
 

Rating
No votes yet

Comments