ಹೀಗೂ ಜೀವಿಸಬಹುದೇ?

ಹೀಗೂ ಜೀವಿಸಬಹುದೇ?

ಹೌದು ಜೀವಿಸಬಹುದು, ಜೀವಿಸುತ್ತಿದ್ದಾರೆ, ಮುಂಬೈ ನಲ್ಲಿ ಇದು ಸಾಮಾನ್ಯವಾಗಿ ಕಂಡು ಬರುವ ಸಂಗತಿ.

ಮುಂಬಯಿಯಲ್ಲಿ ಎಲ್ಲೆಲ್ಲಿ ನೋಡಿದರೂ ಭಿಕ್ಷುಕರು ಕಾಣುವುದು ಸಹಜ. ಹೂಂ! ಭಾರತದ ಎಲ್ಲ ನಗರಗಳಂತೆಯೇ ಇಲ್ಲಿಯೂ ಸಹ. ಆದರೆ ಮುಂಬಯಿಯಲ್ಲಿ ಏನೇ ಕೆಲಸ ಮಾಡಿದರೂ ಹೊಟ್ಟೆ ತುಂಬುವಷ್ಟು ಗಳಿಸಬಹುದು. ಇದೊಂದು ಮಾಯಾನಗರಿ. ಕನಸನ್ನು ತೋರಿಸುತ್ತದೆ, ಅದನ್ನು ನನಸಾಗಿಸಲು ಏನೆಲ್ಲಾ ಮಾಡಲು ಪ್ರೇರೇಪಿಸುತ್ತದೆ. ಮುಂಬಯಿಗೆ ಮೊದಲ ಬಾರಿಗೆ ಬಂದವರಿಗೆ, ಬಣ್ಣದ ಜಗತ್ತು ಅಂದ್ರೆ ಸಿನೆಮಾ ಕೈಬೀಸಿ ಕರೆಯುವುದು. ಅಲ್ಲಿಗೆ ಬಂದವರಲ್ಲಿ ಲಕ್ಷಕ್ಕೆ ಒಬ್ಬರಿಗೆ ಕನಸು ನನಸಾಗಬಹುದು. ಮಿಕ್ಕವರು ಮೇರಾ ಹಾತ್ ಜಗನ್ನಾಥ್ ಎಂದು ಬೀದಿಗಿಳಿಯಬೇಕಾಗುವುದು. ಊರಿಗೆ ಮರಳಿ ಹೋಗಲು, ಅವರುಗಳ ಸ್ವಾಭಿಮಾನ ಅಡ್ಡಿ ಬರುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಹೊಟ್ಟೆ ಪಾಡಿಗೆ ಏನು ಕೆಲಸ ಮಾಡಲೂ ತಯಾರಿರುತ್ತಾರೆ. ಮುಂಬಯಿಯ ಒಂದು ವಿಶಿಷ್ಟತೆ ಎಂದರೆ ಯಾವುದೇ ಕೆಲಸ ಮಾಡಿದರೂ ಜೀವನಕ್ಕೆ ಬೇಕಾದಷ್ಟು ದುಡ್ಡು ದುಡಿಯಬಹುದು. ಇಲ್ಲಿ ವಾಸಕ್ಕಿರಲು ಮನೆ ಸಿಗುವುದೊಂದೇ ಕಷ್ಟ. ಎಲ್ಲಿ ಬೇಕಾದರೂ ವಾಸಿಸುವಂತಹವರು ಬೀದಿ ಬದಿಯಲ್ಲಿಯಾಗಲೀ, ಯಾರ್ಡಿನಲ್ಲಿ ನಿಲ್ಲಿಸಿರುವ ಲೋಕಲ್ ಟ್ರೈನಿನಲ್ಲಾಗಲಿ, ಪ್ಲಾಟ್‍ಫಾರಮ್ಮಿನಲ್ಲಾಗಲೀ, ಸೇತುವೆಯ ಕೆಳಗಾಗಲಿ ಎಲ್ಲೆಂದರಲ್ಲಿ ಇದ್ದು ಬಿಡುವರು. ಇಡೀ ಏಷಿಯಾ ಖಂಡದಲ್ಲೇ ಅತಿ ದೊಡ್ಡದಾದ ಕೊಳೆಗೇರಿ ಎಂದರೆ, ಇಂತಹವರುಗಳು ಇರುವ, ಧಾರಾವಿ ಎಂಬ ಬಡಾವಣೆ.

ಹೀಗೆ ಬೆಳಗಿನ ಬಗ್ಗೆ ರಾತ್ರಿಯ ಬಗ್ಗೆ ಯೋಜಿಸಲಾಗದ ಯೋಚಿಸದ ಜನಗಳು ಜೀವಿಸಲು ಏನನ್ನು ಬೇಕಾಡರೂ ಮಾಡಿಯಾರು. ಕೆಲವರು ಗೂಂಡಾಗಿರಿ ಮಾಡಿ ಹಣ ಗಳಿಸುವರು. ಜಗತ್ತಿಗೆ ಹೆದರುವ ಮಧ್ಯವರ್ಗದವರು ಹಾಸುಗೆ ಇದ್ದಷ್ಟು ಕಾಲು ಚಾಚಿಕೊಂಡು, ರೈಲ್ವೇ ಹಳಿಗಳ ಪಕ್ಕದ ಝೋಪಡಿಗಳಲ್ಲಿ ಜೀವಿಸುವವರೂ. ಇಂತಹವರಿಗೆ ಜೀವಿಸಲು ಆಸೆಯಿದೆ, ಉತ್ತಮ ಜೀವನ ನಡೆಸಲು ಆಸೆಯಿದೆ. ಇವರುಗಳಲ್ಲಿ ಹೆಚ್ಚಿನವರಿಗೆ ಸರಿಯಾದ ಓದು ಬರಹ ದೊರಕದೇ ಸರಿಯಾದ ಕ್ರಮದ ಜೀವನದ ಮಾರ್ಗ ತಿಳಿಯದಾಗಿರುವುದು ಸಹಜವಾದ ಸಂಗತಿ. ಆದರೂ ಇವರೂ ಮನುಷ್ಯರಲ್ಲವೇ! ಉಪ್ಪು ಖಾರ ಸಿಹಿ ತಿಂದ, ತಿನ್ನುತ್ತಿರುವ ಜೀವಿಗಳಲ್ಲವೇ! ಎಲ್ಲರಂತೆ ಇವರೂ ಮಕ್ಕಳುಗಳನ್ನು ಹೊಂದುವರು. ಅವರನ್ನು ಸಾಕಲು ಕಷ್ಟವಾಗಿ ಅದರ ಬಗ್ಗೆ ಸುಲಭೋಪಾಯ ಹುಡುಕುವರು. ಇಂತಹವರ ಬಗ್ಗೆ ಒಂದು ಆಶ್ಚರ್ಯಕರವಾದ ವಿಷಯವಿದೆ. ಅದನ್ನೇ ನಾನು ಈಗ ನಿಮ್ಮ ಮುಂದಿಡಲು ಬಯಸುತ್ತಿರುವೆ.

ಭಿಕ್ಷೆ ಬೇಡುವುದೂ ಒಂದು ವೃತ್ತಿ. ಮುಂಬಯಿಯಲ್ಲಿ ಭಿಕ್ಷೆ ಬೇಡುವವ ಪ್ರತಿಯೊಬ್ಬರೂ ದಿನಕ್ಕೆ ಸರಾಸರಿ ೩೦೦ ರೂಪಾಯಿಗಳನ್ನು ದುಡಿಯುತ್ತಾರೆ. ಲೋಕಲ್ ಟ್ರೈನ್‍ಗಳಲ್ಲಿ ಚಿಕ್ಕ ಮಕ್ಕಳು ಬಂದು ಭಿಕ್ಷೆ ಬೇಡುವುದೂ, ಎಳೆ ಕೂಸುಗಳನ್ನು ಹೊತ್ತಿಕೊಂಡ ಹೆಂಗಸು ಪ್ರಯಾಣಿಕರ ಕಾಲುಮುಟ್ಟಿ ಭಿಕ್ಷೆ ಕೇಳುವುದೇ ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ಪ್ರತಿದಿನ ನಾನು ಬೆಳಗ್ಗೆ ಪ್ರಯಾಣಿಸುವ ಲೋಕಲ್ಲಿನಲ್ಲಿ ಒಬ್ಬ ಮಹಿಳೆಯನ್ನು ೧೦-೧೨ ದಿನಗಳು ಗಮನಿಸುತ್ತಿದ್ದೆ. ಒಂದು ದಿನ ಒಂದು ಎಳೆ ಕೂಸನ್ನು ಎತ್ತಿಕೊಂಡು ಬಂದರೆ ಇನ್ನೊಂದು ದಿನ ಇನ್ನೊಂದು ಕೂಸನ್ನು ತರುತ್ತಿದ್ದಳು. ಹೊಟ್ಟೆಗಿಲ್ಲದೇ ಇರುವ ಇಂತಹವರುಗಳು ಯಾಕೆ ಇಷ್ಟೊಂದು ಮಕ್ಕಳನ್ನು ಹೆರಬೇಕು, ಎಂದುಕೊಳ್ಳುತ್ತಿದ್ದೆ. ಒಮ್ಮೆ ಇದರ ಬಗ್ಗೆ ನನ್ನ ಸ್ನೇಹಿತನನ್ನು ಕೇಳಿದಾಗ, ಅವನು ಹೇಳಿದ ವಿಷಯ ತಿಳಿದು ಬಹಳ ಅಚ್ಚರಿಯಾಯಿತು.

ಇಂತಹ ಹೆಂಗಸರು ಮಕ್ಕಳನ್ನು ಬಾಡಿಗೆಗೆ ಕರೆ ತರುತ್ತಾರಂತೆ. ಭಿಕ್ಷೆ ಬೇಡಲು ನಾಚಿಕೆ ಎನಿಸಿದ, ಜೀವನದ ಬಂಡಿಯನ್ನು ಸುಲಭದಿ ಎಳೆಯಲಾರದ ಸಂಸಾರೊಂದಿಗರು ತಮ್ಮ ಮಕ್ಕಳನ್ನು ಇವರುಗಳಿಗೆ ಕೊಡುವರಂತೆ. ದಿನಕ್ಕೆ ೨೫ ರಿಂದ ೫೦ ರೂಪಾಯಿಗಳವರೆವಿಗೆ ಬಾಡಿಗೆಯನ್ನು ಚಾರ್ಜ್ ಮಾಡುವರಂತೆ. ಇದಲ್ಲದೇ ಚಿಕ್ಕ ಚಿಕ್ಕ ಮಕ್ಕಳನ್ನು ಭಿಕ್ಷೆಗೆಂದು ಕರೆತರುವ ಏಜೆಂಟರೂ ಇರುವರು. ಅವರುಗಳು ತಂದೆ ತಾಯಿಗಳಿಗೆ ಇಂತಿಷ್ಟೆಂದು ಹಣ ಕೊಟ್ಟು ಈ ಮಕ್ಕಳನ್ನು ಟ್ರೈನಿನಲ್ಲಿ ಭಿಕ್ಷೆ ಬೇಡಲು ಬಿಡುವರು. ತಾವು ಒಂದು ಮೂಲೆಯಲ್ಲಿ ಯಾರಿಗೂ ತಿಳಿಯದಂತೆ ನಿಂತು ಈ ಮಕ್ಕಳ ಚಲನವಲನವನ್ನು ಗಮನಿಸುತ್ತಿರುತ್ತಾರೆ. ಈ ಮಕ್ಕಳು ಎಲ್ಲಿಗೂ ಓಡಿ ಹೋಗದಂತೆ ನೋಡಿಕೊಳ್ಳುವುದು ಅವರ ಕೆಲಸ. ಮಧ್ಯೆ ಆಹಾರವನ್ನೂ ಕೊಟ್ಟು, ದಿನ ಮುಗಿದ ಬಳಿಕ ಆ ಮಕ್ಕಳು ಭಿಕ್ಷೆಯಿಂದ ತಂದ ಹಣವನ್ನು ತೆಗೆದುಕೊಂಡು, ಅವರುಗಳನ್ನು ಮನೆಗೆ ಬಿಟ್ಟು ತಂದೆ ತಾಯಿಗಳಿಗೆ ನಿಗದಿತ ಹಣವನ್ನು ಕೊಡುವರು.

ಇಷ್ಟೇ ಅಲ್ಲ, ಕೆಲವು ಸಲ, ಆಸ್ಪತ್ರೆಗಳಲ್ಲಿ ಹುಟ್ಟಿದ ಕೂಸುಗಳನ್ನು ಕಳುವು ಮಾಡುವರು. ಮನೆಯಿಂದ ತಪ್ಪಿಸಿಕೊಂಡು ಬಂದ ಅಥವಾ ಮನೆಯವರಿಗೆ ತಿಳಿಯದಂತೆ ಎತ್ತಿಕೊಂಡು ಬಂದ ಮಕ್ಕಳ ಕಿವಿ, ಕಣ್ಣು, ಮೂಗು ಅಥವಾ ಕೈ ಕಾಲುಗಳನ್ನು ಊನ ಮಾಡಿ ಭಿಕ್ಷೆಯ ವೃತ್ತಿಗೆ ತೊಡಗಿಸುವರು. ಇದೊಂದು ದೊಡ್ಡ ಜಾಲವಾಗಿದೆ. ಯಾವ ಪೊಲೀಸರೂ ಇವರುಗಳನ್ನು ಮಟ್ಟ ಮಾಡಲಾಗಿಲ್ಲ. ಯಾವ ಸರಕಾರವೂ ಇಂತಹ ಕೃತ್ಯಗಳನ್ನು ನಿರ್ಮೂಲನ ಮಾಡಲಾಗಿಲ್ಲ.

ಈ ಭಿಕ್ಷೆ ವೃತ್ತಿಯ ಬಗ್ಗೆ ಮುಂಬಯಿಯ ಒಂದು ದಿನಪತ್ರಿಕೆಯವರು ಅಧ್ಯಯನ ನಡೆಸಿದ್ದರು. ಆಗ ಒಬ್ಬ ಭಿಕ್ಷುಕನನ್ನು ಸಂದರ್ಶಿಸಿದ್ದರು. ಅವನ ಬಗ್ಗೆ ತಿಳಿದ ಮಾಹಿತಿ ಹೀಗಿದೆ. ಈ ಭಿಕ್ಷುಕ ಖಾರ್ ಬಡಾವಣೆಯ ಪ್ರಮುಖ ರಸ್ತೆಯಲ್ಲಿಯ ಒಂದು ಸಿಗ್ನಲ್ ಬಳಿ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದನು. ಅವನಿಗೆ ಒಂದು ಕಾಲು ಊನವಾಗಿದೆ. ಭಿಕ್ಷೆ ಬೇಡುವುದೇ ಅವನ ವೃತ್ತಿ. ಪ್ರತಿ ದಿನ ಬೆಳಗಿನ ಮತ್ತು ಸಂಜೆಯ ಜನಸಂದಣಿಯ ಸಮಯಗಳಲ್ಲಿ ಹತ್ತಿರದ ರೈಲ್ವೇ ನಿಲ್ದಾಣಕ್ಕೆ ಬಂದು ಭಿಕ್ಷೆ ಬೇಡುವನು. ತನ್ನ ಮಕ್ಕಳಿಗೆ ಓದಲು ಇಷ್ಟವಿದ್ದರೂ ಕಳುಹಿಸದೇ ಇದೇ ವೃತ್ತಿಗೆ ತೊಡಗಿಸುತ್ತಿರುವನು. ಅವನಿಗೆ ದಿನಕ್ಕೆ ೫೦೦ ರಿಂದ ೬೦೦ ರೂಪಾಯಿಗಳಷ್ಟು ವರಮಾನವಿದೆಯಂತೆ. ಮಕ್ಕಳೂ ಇದೇ ವೃತ್ತಿಯಲ್ಲಿ ತೊಡಗಿದರೆ ಇನ್ನೂ ಹೆಚ್ಚು ಹಣ ಗಳಿಸಬಹುದು ಎಂಬುದು ಅವನ ಮನದ ಇಂಗಿತ. ಇಂತಹವನಿಗೆ ಸಂದರ್ಶಕರು ಒಂದು ಪ್ರಶ್ನೆಯನ್ನು ಕೇಳಿದ್ದಾರೆ - ನಿಮಗೆ ಉಳಿದುಕೊಳ್ಳಲು ಮನೆಯನ್ನು ಕೊಟ್ಟು, ಕೆಲಸ ಕೊಟ್ಟರೆ ಭಿಕ್ಷೆ ವೃತ್ತಿಯನ್ನು ಬಿಟ್ಟು ಬಿಡುವೆಯಾ? ಎಂದು. ಅದಕ್ಕೆ ಅವನ ಪ್ರತಿಕ್ರಿಯೆ ಎಂದರೆ, ನನಗೆ ಜೀವಿಸಲು ತೊಂದರೆಯೇ ಇಲ್ಲ. ಆದರೂ ಸುಲಭವಾಗಿ ಹಣ ಮಾಡುವ ಈ ವೃತ್ತಿಯನ್ನು ನಾನು ಖಂಡಿತವಾಗಿಯೂ ಬಿಡುವುದಿಲ್ಲ. ಅವನ ಬಳಿ, ಮುಂಬಯಿಯ ಹತ್ತಿರ ಇರುವ ವಿರಾರ ಎಂಬ ಗ್ರಾಮದಲ್ಲಿ ಒಂದು ಫ್ಲಾಟ್, ಸೊಲಾಪುರದಲ್ಲಿ (ಅವನ ಸ್ವಂತ ಊರು) ಒಂದು ಮನೆ, ಮತ್ತು ಅಲ್ಲಿಯೇ ಹತ್ತಿರದಲ್ಲಿ ಸ್ವಲ್ಪ ಸಾಗುವಳಿಯ ಜಮೀನು ಇದೆಯಂತೆ. ನೋಡಿದಿರಾ ಎಷ್ಟು ಸುಲಭದಲ್ಲಿ ಜೀವಿಸಬಹುದು ಎಂದು.

ಅಧೀನರಾದ, ಅಧೀರರಾದ, ಪಿಕ್‍ನಿಕ್‍ಗೆ ಹೋದ ಮಕ್ಕಳ ಅಳಲನ್ನು ಹಿಂದೊಮ್ಮೆ ಯಾರೋ ಕವಿಗಳು ಚುಟುಕದ ಮೂಲಕ ಬರೆದಿದ್ದರು. ಅದು ಹೀಗಿದೆ ನೋಡಿ

ಶಾಲೆಯ ಮಕ್ಕಳಿಗೆ ಉಪ್ಪಿಟ್ಟು
ಪಾತ್ರೆಯಲ್ಲಿರುವುದು ಸಾಕಷ್ಟು
ಮಕ್ಕಳಿಗೆ ಮಾತ್ರ ಇಷ್ಟಿಷ್ಟು
ಮಾಸ್ತರಿಗೆ ಮಾತ್ರ ಅಷ್ಟಷ್ಟು

Rating
No votes yet