ಹೀಗೆಯೇ ಒಂದು ಮಾಮೂಲು ದಿನ ದ ವರದಿ ( ರಿಯಲಿಟಿ ಟೀವೀ ಶೋ)

ಹೀಗೆಯೇ ಒಂದು ಮಾಮೂಲು ದಿನ ದ ವರದಿ ( ರಿಯಲಿಟಿ ಟೀವೀ ಶೋ)

ಎರಡು  ದಿನದ ಹಿಂದೆ ಅಯ್ಯೋ , ಇವತ್ತು ಏನೂ ಮಾಡಲೇ ಇಲ್ಲವಲ್ಲ ; ಒಂದು ದಿನ ಸುಮ್ಮನೇ ಹೋಯಿತಲ್ಲ  ಎಂದು ಅನ್ನಿಸಿ  ರಾತ್ರಿ ಹನ್ನೊಂದು ಗಂಟೆಗೆ    ಸೋನಿ ಪಿಕ್ಸ್  ವಾಹಿನಿಯಲ್ಲಿ  ಸಿನೇಮಾ ಒಂದನ್ನು ನೋಡಿದ್ದೆ - ಕಣ್ಣು ಎಳೆಯುತ್ತಿದ್ದರೂ . ಇಂಗ್ಲೀಶು ಸಿನೆಮ  ದೊಡ್ಡವಿರುವುದಿಲ್ಲ ಅಂತ ತಿಳಿದಿದ್ದೆ . ಅದು ಎರಡು ಗಂಟೆಗೆ ಮುಗಿಯಿತು. ಅದ್ಯಾವ್ದೋ  ಹಳೇ ಪುಸ್ತಕ ( ಮತ್ತೆ ಪುಸ್ತಕಾನಾ ? )  ಅಂತೆ ಜಗತ್ತಿನಲ್ಲಿ ಮೂರೇ  ಪ್ರತಿ ಅಂತೆ . ಅವುಗಳಲ್ಲಿ ಒರಿಜಿನಲ್ ಯಾವುದು ?  ಆದರೆ ಅವು ಮೂರೂ ಒರಿಜಿನಲ್ ಇದ್ದರೂ ಕೆಲ ಪುಟಗಳು ಬೇರೆ !  ಅದರಲ್ಲಿರುವ ರಹಸ್ಯ ಏನು ?  .. ಕತೆ ಹೀಗೆ ಏನೋ ಇತ್ತು . 

ಇರಲಿ ಬಿಡಿ  . ಮೊದಲೇ ತೀವ್ರ  ಶೀತ ನೆಗಡಿ ನನಗೆ ಬಾಧಿಸಿದ್ದು . ಕಚೇರಿಯಲ್ಲೂ ನಾನಿರುವಲ್ಲಿ ತುಂಬಾ ‌ AC  ಚಳಿ ಇದ್ದುದ್ದಲ್ಲದೆ.  ತಲೆ ಭಾರ  ಇವತ್ತೂ ಇತ್ತು . ಸವಾ ಏಳು ಆದರೂ  ಇನ್ನೂ ಮಲಗಿಯೇ ಇದ್ದೆ . ಊರಿಂದ ಅವ್ವ  ಫೋನು ಮಾಡಿದಳು . ಅದನ್ನು ಮುಗಿಸುವ ಹೊತ್ತಿಗೆ ಹೆಂಡತಿ  ರೀ ಚಹಾ  ಎಂದು ಕಿರುಚಿದಳು .   ಮುಂಜಾನೆಯ  ಚಹಾ ಮಾಡುವ   ಡ್ಯೂಟಿ  ಸಾಮಾನ್ಯವಾಗಿ ನನ್ನದೇ .   ಚಹಾ ಮಾಡಿ ಬಾಗಿಲು ತೆರೆದು ಬಾಗಿಲಿಗೆ ತಂದಿಟ್ಟ  ಜಾಗತಿಕ ಕಸದ ರಾಶಿ - ಎರಡು-ಮೂರು  ಇಂಗ್ಲೀಶು  ಪೇಪರ್ರು - ಒಳತಂದು ಚಹಾ ಕುಡಿಯುತ್ತ   ಆ ನೂರು ಪುಟ ತಿರುವಿ ಹಾಕಿ   ಸ್ನಾನ ಇತ್ಯಾದಿ ಗೆ ಹೋದೆ . ನನ್ನ ಹೆಂಡತಿ ಅಡುಗೆ ಮನೆ ಸೇರಿದಳು. ತಯಾರಾಗಿ   ತಿಂಡಿ  ಮುಗಿಸಿಕೊಂಡು  ಡಬ್ಬಿ ಬ್ಯಾಗಲ್ಲಿ ಹಾಕಿಕೊಂಡು  ಬಸ್ಸು  ಹಿಡಿಯಲು  ಓಡಿ  ಟ್ರೇನು ಹತ್ತಿ ಒಂಚೂರು ನಡೆದು ಕಚೇರಿ ತಲುಪಿ   ನನ್ನ  ಪೀಸೀಯ ಮಾನಿಟರ್ ಮೇಲಿನ   "ಯೋಗಿಗಳೆಲ್ಲ ಕೂತೇ ಶ್ರೇಷ್ಠರಾಗಿರೋದು .. ಓಡಾಡಿ ಕೆಲಸ ಮಾಡಿ ಅಲ್ಲ"  ಸಂದೇಶ    ನೋಡಿ    ಮುಗುಳುನಕ್ಕು ,  ನಿನ್ನೆ   ಶುರು ಮಾಡಿದ್ದ   ಪ್ರೊಸೆಸ್  ಮುಗಿದಿದೆಯಾ ಅಂತ ನೋಡಿ ನಾಲಕ್ಕು ರಿಪೋರ್ಟ್  ಮಾಡಿ ಒಂದಿಬ್ಬರಿಗೆ  ತಳ್ಳುವ ಹೊತ್ತಿಗೆ  ನಮ್ಮ ಸಾಹೇಬರು  ನನ್ನ  ಹತ್ತಿರ ಬಂದು ಮೀಟಿಂಗೆ ಇದೆ  , ಬರ್ರಿ ಅಂತ  ನನ್ನ  ( ಎಮ್ಮೆ-ದನ ಹೊಡೆದುಕೊಂಡು ಹೋಗುವ ತರಹ)  ಹೊಡೆದುಕೊಂಡು ಹೋದರು! ಅವರು ಧರ್ಮರಾಯನ ತರ , ಒಳ್ಳೆಯವರು !   ಮೀಟಿಂಗ  ನಲ್ಲಿ  ಬಾಕಿ ಪಾಂಡವರೂ ಇದ್ದರು ಅನ್ನಿ  .   ನಮ್ಮವರು ನಾಲ್ಕೈದು ಜನ ; ಒಬ್ಬ ಹೊರಗಿನಿಂದ ಪ್ರಖ್ಯಾತ ಸಂಸ್ಥೆಯವನು .  ನಮ್ಮಲ್ಲಿ ಒಬ್ಬ  ವಿಷ್ಯ  ತಿಳಿದವನು ...  ಉಳಿದವರು ತೆಪ್ಪಗೇ ಇರ್ತಾರೆ  ಅಂತ  ಅಸಹನೆ ಪಡುತ್ತ  , ಅದೂ ಸರೀನೇ ಅನ್ನಿ   ವಿಷ್ಯ ಚರ್ಚಿಸುತ್ತ ಹೋದ . ನನ್ನ ಕೆಲಸ  ಇವರುಗಳು ತೀರ್ಮಾನಿಸಿದಂತೆ  ವರದಿ ತಯಾರಿ ಮಾಡೋದು.  ನಮ್ಮ ಧರ್ಮರಾಯನೂ  ಬಾಕಿ ಪಾಂಡವರೂ ಆ ದ್ರೌಪದಿ ವಸ್ತ್ರಾಪಹರಣ ಸಮಯದಲ್ಲಿ   ತಲೆ ತಗ್ಗಿಸಿ ಕೂತಿರ್ತಾರಂತಲ್ಲ ಪಾಂಡವರು , ಹಾಗೇ  ಕೂತಿದ್ದರು. ಮೀಟಿಂಗ್ ನಾಲಕ್ಕು ಗಂಟೆಯಾದರೂ ಮುಗಿಯಲಿಲ್ಲ .  ನಡುವೆ ಒಂದು ಸಲ ಆ ಪ್ರಖ್ಯಾತ ಸಂಸ್ಥೆಯವನ್ನ  ಬೈಯಬೇಕನ್ನಿಸಿತು . ಎಷ್ಟೆಲ್ಲ  ಚಾರ್ಜ್  ಮಾಡ್ತಾರೆ , ವಿಶ್ವವಿಖ್ಯಾತ ಸಂಸ್ಥೆ  ಬೇರೆ  , ಬಡದೇಶಗಳನ್ನು ಸುಲಿಯುತ್ತಾರೆ ,   ಒಂದು ಡಾಕ್ಯುಮೆಂಟ್  ಸರಿಯಾಗಿ ಮಾಡೋದಿಕ್ಕೆ  ಬರೋದಿಲ್ಲ  ಅನ್ನಿಸಿ  ನನಗನ್ನಿಸಿದ್ದನ್ನು  ಒಂದು ಡಾಕ್ಯುಮೆಂಟ್  ಸರಿಯಾಗಿ ಮಾಡೋದಿಕ್ಕೆ  ಬರೋದಿಲ್ಲವಲ್ರೀ ಪ್ರೊಫೆಶನಲ್ ಅಪ್ರೋಚು  ಇಲ್ಲವಲ್ಲ  ಅಂತ  ಹೇಳಿಯೂ ಬಿಟ್ಟೆ . ಇದನ್ನೇ  ಇನ್ನೊಬ್ಬ ಪಾಂಡವ ಭೀಮನು ಹೇಳಿದನು.  ಇವನು   ಅದನ್ನೇ ನಯವಾಗಿ ಹೇಳಿದನು !  ಅಂತ  ನಮ್ಮ ಧರ್ಮರಾಯನು ತಲೆ ಎತ್ತಿ ಟಿಪ್ಪಣಿ ಮಾಡಿ ಮತ್ತೆ  ತಲೆ ತಗ್ಗಿಸಿ ಕೂತು ಬಿಟ್ಟನು!  

 

ನಡುವೆ ಬಂದಿದ್ದ  ಚಹಾ , ನಾನು ನನ್ನದು ಕುಡಿಯೋದಲ್ಲದೆ  ಪಕ್ಕದಲ್ಲಿದ್ದೋರ್ದೂ ಕುಡಿದುಬಿಟ್ಟೆ .   ಅವರಿಗೆ ಇನ್ನೊಂದು ತಂದು ಕೊಟ್ಟೆ ಅನ್ನಿ ; ಆದರೂ  ತಲೆ ಭಾರ , ತಲೆ ನೋವು , ಕಣ್ಣುರಿ  ಕಡಿಮೆ ಆಗಲಿಲ್ಲ        .  ಬೇಸತ್ತು ನಾನೇ  ಹೊರಗೆ  ಬಂದೆ . ಸಹೋದ್ಯೋಗಿಯ ಜತೆ  ಹರಟೆ ಕೊಚ್ಚಿದೆ . 

ಏನು ಕೆಲ್ಸ ಮಾಡೋದು ?   ನಾನು  ಮಾಡ್ತಾ ಇರೋದು ೮-೧೦  ತಿಂಗಳಾದರೂ  ಮುಂದಕ್ಕೇ   ಹೋಗುತ್ತಿಲ್ಲ ; ಅದು ಯಾರಿಗೂ ಬೇಕಾಗೂ ಇಲ್ಲ ; ಅಂತ  ಗೋಳಿಡುತ್ತಿದ್ದವಳಿಗೆ   ನನಗೆ ಇತ್ತೀಚೆಗೆ ಆದ  ಜ್ಞಾನೋದಯವನ್ನು ಹಂಚಿಕೊಂಡು  ನಗಿಸಿದೆ . ಅಷ್ಟು ಹೊತ್ತಿಗೆ ಇನ್ನೊಬ್ರು ನಡೀರೀ  , ಮನೆಗೆ ಹೋಗೋ ಹೊತ್ತು ಆಯ್ತು  ಅಂತ ನನ್ನ ನ್ನ  ಅವಸರಿಸಿ  ಎಳೇದುಕೊಂಡು ಹೊರಟರು .  ಸರಸರ ನಡೆದು ಸ್ತೇಷನ್ನು ಮುಟ್ಟಿ ಲೋಕಲ್ ಹಿಡಿದು , ಸೀಟು ಹಿಡಿದು , ಕಣ್ಣು ಎಳೆಯುತ್ತಿದ್ದರೂ   ಕನ್ನಡ ಕಾದಂಬರಿ ಒಂದನ್ನ ತೆಗೆದು ಓದತೊಡಗಿದೆ . ಪುಸ್ತಕ ಓದೋದರಿಂದ  ಒಂದು ಮಹತ್ತರ ಅನುಕೂಲ ಇದೆ . ನಿದ್ದೆ ಬಂದು ಒಂದಿಷ್ಟು   ತಲೆನೋವು , ಕಣ್ಣುರಿ ಕಡಿಮೆ ಆಯಿತು !  ನನ್ನ ಸ್ತೇಷನ್ನು ತಲುಪಿ ಯಾವ್ದೋ ಬಸ್ಸು ಹಿಡಿದು , ಅಲ್ಲೂ ಸೀಟೂ ಗಿಟ್ಟಿಸಿಕೊಂಡು  ಮನೆ ತಲುಪಿದೆ, ಸುತ್ತಲಿನ  ಜನಜಂಗುಳಿ ನನಗೆ  ಸಂಬಂಧವೇ ಇಲ್ಲ ಎನ್ನುವಂತೆ !  ಇದೀಗ  ನನ್ನ  ಅರಗಿಣಿ ' ಊಟಾ'  ಅಂತ ಕಿರುಚಿತು ...   ತಡೀರಿ ಊಟ ಮುಗಿಸಿ ನಂತರದ ವಿಶ್ಯ  ಹೇಳುತ್ತೇನೆ
... ನನ್ನ  ಅರಗಿಣಿ ಇನ್ನೊಮ್ಮೆ ಕಿರುಚಿತು  ... ಈಗ ಹೋಗಲೇಬೇಕು ... ಹೊರಟೆ .  

ಊಟ ಮುಗಿಸಿಕೊಂಡು  ಬಂದಿದೀನಿ .  ಅಂದ ಹಾಗೇ  ಕಚೇರಿಯಲ್ಲಿ  ಈ ಎಲ್ಲದರ ನಡುವೆ  ಒಂದು  ಕನ್ನಡ  ಬ್ಲಾಗನ್ನು  ಪೂರ್ತಿ ನೋಡಿದೆ. ( ಅಂದ ಹಾಗೆ   ಅಂತರ್ಜಾಲದ ಗೆಳೆಯ  ರೋಹಿತ್ ರಾಮಚಂದ್ರಯ್ಯ  ತಮ್ಮ  ಬ್ಲಾಗ್    kannadabala.blogspot.com  ನಲ್ಲಿ ಕನ್ನಡದ ೭೦೦ ಬ್ಲಾಗುಗಳ ಕೊಂಡಿಯನ್ನು     ಒ/ಕೊ/ಒಕ್ಕೊ ಟ್ಟಿದ್ದಾರೆ !.  ಅವನ್ನೆಲ್ಲ  ನೋಡಬೇಕೂಂತ  ಮಾಡಿದ್ದೀನಿ .. ನಿನ್ನೆ  ಶುರು ಮಾಡಿದ್ದು . ನಿನ್ನೆ ಐದು ಬ್ಲಾಗ್  ಸಂಪೂರ್ಣ ತಿರುವಿ ಹಾಕಿದೆ .  ನನ್ನ ಗುರಿ ಮುಟ್ಟಲು   ಸಾಧ್ಯ ಆದರೆ    ಎಲ್ಲ  ಬ್ಲಾಗ್ ಗಳ ಬಗ್ಗೆ , ಅಲ್ಲಿನ ವಿಶೇಷಗಳ  ಬಗ್ಗೆ  ತಿಳಿಸುತ್ತೀನಿ ಆಯ್ತಾ ?!)
ಅಂದ  ಹಾಗೆ ಎಲ್ಲೀವರೆಗೆ ಬಂದಿದ್ದೆ ?  ಹಾಂ , ಎಂಟು ಗಂಟೆಗೆ ನನ್ನ ಮನೆ ಬಾಗಿಲು ಮುಟ್ಟುತ್ತಿದ್ದಂತೆ  ಮೊಬೈಲು  ಸದ್ದು ಮಾಡಿ  ಅವ್ವನ   ಚಿತ್ರ ತೋರಿಸಿತು. ಕಾಲೂ ತೊಳೆಯದೆ  ಒಂದು  ಕೈಯಿಂದ  ಮೊಬೈಲು ಕಿವಿಗಾನಿಸಿಕೊಂಡೇ  ಹಿಡಿದುಕೊಂಡೇ  ಪ್ಯಾಂಟಿನ ಬೆಲ್ಟು ತೆಗೆಯಲು   ಪ್ರಯತ್ನ ಮಾಡಿದೆ . ಆಗಲಿಲ್ಲ  .     ಸರಿ ಆಗಲಿ ಮಾತನ್ನು ಮುಗಿಸೋಣ .  ಅವಳು ದಿನದ  ಬೆಳವಣಿಗೆ(?!) ಗಳನ್ನು /ಆಗು ಹೋಗುಗಳನ್ನು  ವರದಿ ಮಾಡಲು ಇಪ್ಪತ್ತು ನಿಮಿಷ  ತಕೊಂಡಳು .  ಅಂತೂ ಕೈಕಾಲು ತೊಳೆದು  ಹಾಲಿಗೆ ಹೋದೆ.  ಸಮಯ ಎಂಟೂವರೆ  .  (  ಬಿಗ್ ಬಾಸ್ ನಲ್ಲಿ   ಅರವತ್ನಾಲ್ಕನೇ ದಿನ ಮಧ್ಯಾಹ್ನ   ಒಂದು ಗಂಟೆ  ಅಂತ  ಕೆಳಗೆ ತೋರಿಸ್ತಾರಲ್ಲಾ   ಹಾಗೆ !  )ಟೀವೀಯಲ್ಲಿ ಕಣ್ಣು  ಕೀಲಿಸಿಕೊಂಡೇ   ಚಹಾ  ಮಾಡಲೇ   ಅಂತ  ನನ್ನ ಹೆಂಡತಿ ಕೇಳಿದಳು. ಬೇಡ ಅಂದು . ಅವಳು ಹೇಗಿದ್ದಾಳೆ ಅಂತ  ಕೇಳಿ , ಅವಳು ನೋಡುತ್ತಿದ್ದ ಕಚಡಾ  ಹಿಂದೀ ಧಾರಾವಾಹಿ- ಅದ್ಯಾವ್ದೋ  ಹರಿಯಾಣಾದ್ದೋ ರಾಜಾಸ್ಥಾನದ್ದೋ  ಬಗ್ಗೆ   ಎಂದಿನ ಹಾಗೆ  ಗೊಣಗಿದೆ. ಎಂದಿನ ಹಾಗೆ ಅವಳೂ  ಅಲಕ್ಷ್ಯ   ಮಾಡಿದಳು .  ಸರಿ , ಅದು  ಮುಗಿದರೆ   ಬಿಗ್ ಬಾಸ್  ಹಚ್ಚಿಕೊಳ್ಳುವಳು . ಹೇಗೂ ನಾನು  ಟೀವೀಯನ್ನು  ಬಿಟ್ಟಿದ್ದೇನಲ್ಲ ? ಅಂದು      ಒಳಗೆ ಬಂದೆ . ಅದೇನೋ ತಲೆಯಲ್ಲಿ   ಬಂತು -ನನ್ನ   ಪ್ರತಿದಿನದ ದಿನಚರಿಯನ್ನ   ಪ್ರಾತಿನಿಧಿಕವಾಗಿ    ನಿಮಗೆ ಹೇಳೋಣ  ಅಂತ  ಇದನ್ನು ಬರೆಯ ತೊಡಗಿದೆ.   ನಡುವೆ ಮೇಲೆ ಹೇಳಿದಂತೆ   ಊಟಕ್ಕೇಳಬೇಕಾಯಿತು . ಊಟದ ಹದಿನೈದು ನಿಮಿಷದ ನಡುವೆಯೇ , ಎರಡು ನಿಮಿಷ NDTV ಸುದ್ದಿ   ನೋಡಿ , ಅವಳಿಗೆ   ಯಾಕೆ ಬೇಜಾರು ಮಾಡೋದು ಅಂತ  , ಅವಳ  ಪ್ರೊಗ್ರಾಮಿಗೇ  ಬದಲಿಸಿ , ಅವಳು ಮಾಡಿದ್ದ ಹುಗ್ಗಿ ಗೊಜ್ಜು ಬಿಸಿಯಾಗಿ   ಉಣ್ಣುತ್ತ  , ಕುಶಲೋಪರಿ  ವಿಚಾರಿಸಿ  ಊಟ ಮುಗಿಸಿ    ಈ ಬ್ಲಾಗನ್ನು ಮುಂದುವರಿಸಿದೆ .
   ಬೇಗ ಮುಗಿಸಿ  ಇಂಟರ್ನೆಟ್ ಸಂಪರ್ಕ ಇರುವಾಗಲೇ ಪೋಸ್ಟ್  ಮಾಡಿಬಿಡ್ತೀನಿ   .  
ಇನ್ನು ಹೇಳಲು ಬಹಳ ಇಲ್ಲ . ಯಾಕೋ  ಕಣ್ಣು ಉರಿಯುತ್ತಿದೆ. ಇದನ್ನ ಪೋಸ್ಟ್ ಮಾಡ್ಬಿಟ್ಟು   ಮಲಕ್ಕೋತೀನಿ.  ನನ್ ಹೆಂಡತಿ  ಯಾವಾಗ ಬೇಕೋ  ಆವಾಗ  ಬಂದುಕೊಳ್ಳಲಿ .
ಇಗೋ   ಪೋಸ್ಟ್   ಮಾಡುತ್ತಿರುವೆ .
ಸೊಗದಿರುಳ್  ನಿಮಗಕ್ಕೆ    ಅಂದ್ರೆ ಕನ್ನಡದಲ್ಲಿ ಗುಡ್ ನೈಟು  !!

Rating
No votes yet

Comments