ಹೀಗೇ ಅತ್ತು, ಸುಮ್ಮನಾಗುವ ಹೊತ್ತು!

ಹೀಗೇ ಅತ್ತು, ಸುಮ್ಮನಾಗುವ ಹೊತ್ತು!

ನಿನ್ನೆ ಬೆಳಿಗ್ಗೆಯಿಂದ ಏಕೋ ಖಿನ್ನತೆ.

ಒಂದು ಸುತ್ತು ಅತ್ತು ಸುಮ್ಮನಾಗಿದ್ದರೂ ದುಃಖ ಮಡುಗಟ್ಟಿದಂತಿರುವ ಮೋಡ ಯಾವಾಗ ಬೇಕಾದರೂ ಅಳಲು ಸಿದ್ಧವಾಗಿದೆ. ಹೊರಗೆ ಮಂಕು ಆಕಾಶ. ವಸುಂಧರೆಗೆ ಬೈದ ನಾಚಿಕೆಯೇನೋ, ಸೂರ್ಯ ತಲೆ ಮರೆಸಿಕೊಂಡಿದ್ದಾನೆ. ಹಸಿರು ತುಂಬಿದ ರಸ್ತೆಗಳು ಮೋಡದ ಕಣ್ಣೀರಿಗೆ ತೋಯ್ದು ಕಪ್ಪಾಗಿ ಕಾಣುತ್ತಿವೆ. ಒಳಗೆ ಅವ್ವ ಒಗ್ಗರಣೆ ಕೊಡುವ ಸದ್ದು. ಗಾಳಿಯಲ್ಲಿ ಹಿತವಾದ ಘಮ. ಆಕಾಶವಾಣಿ ಧಾರವಾಡದಲ್ಲಿ ಚೌಡಿಕೆ ಪದದ ರಣನ. ಅಪ್ಪ ಪೇಪರ್‌ ಓದುತ್ತಿರಬೇಕು. ನಾನು ಮೌನವಾಗಿ ಕೂತು ಖಿನ್ನತೆಯನ್ನು ಅಕ್ಷರಗಳನ್ನಾಗಿಸುತ್ತಿದ್ದೇನೆ.

ಏಕೋ ಬೇಸರ. ಅಡಿಗರು ನೆನಪಾಗುತ್ತಾರೆ. ’ಮತ್ತದೇ ಬೇಸರ, ಏನೋ ಕಾಡಲು, ಏನೋ ತೀಡಲು ಹೊತ್ತಿ ಉರಿವುದು ಕಾತರ’ (ಪೂರ್ತಿ ನುಡಿ ನೆನಪಾಗುತ್ತಿಲ್ಲ). ನನ್ನ ಮನದಲ್ಲಿ ಬೇಸರವೊಂದಿದೆ. ಆದರೆ, ಕಾತರ ಇಲ್ಲವಾದಂತಿದೆ.

ಐ-ಪಾಡ್‌ನಿಂದ ಸೋಸಿ ಬರುತ್ತಿದೆ ’ಭಾವಸಂಗಮ’ದಲ್ಲಿಯ ಕವನ. ’ದೂರದೊಂದು ತೀರದಿಂದ, ತೇಲಿ ಪಾರಿಜಾತ ಬಂಧ, ದಾಟಿ ಬಂತು ಬೇಲಿ ಸಾಲ, ಮೀಟಿ ಹಳೆಯ ಮಧುರ ನೋವ’. ಮನಸ್ಸಿನೊಳಗಿಂದ ಖಿನ್ನತೆ ಮತ್ತಷ್ಟು ಒಸರುತ್ತದೆ. ’ಎಲ್ಲಿ ಜಾರಿತೋ ಮನವು...!’

ಹೀಗೇ ಒಮ್ಮೊಮ್ಮೆ ಬೆಳ್ಳಂಬೆಳಿಗ್ಗೆ ಖಿನ್ನತೆ ಕಾಡತೊಡಗುತ್ತದೆ. ಸುಮ್ಮನೇ ಕೂತರೆ ಅಪ್ಪ ಕೇಳುತ್ತಾನೆ. ಅವ್ವ ಸಂತೈಸಲು ಬರುತ್ತಾಳೆ, ಕಾರಣ ಗೊತ್ತಿರದಿದ್ದರೂ. ಏಕೋ ಸಿಡಿಮಿಡಿ. ಏನೂ ಆಗಿಲ್ಲ ಬಿಡವ್ವ ಎಂದರೂ ಕೇಳುವುದಿಲ್ಲ. ನಾನಿನ್ನೂ ಹತ್ತನೇ ಕ್ಲಾಸ್‌ ಓದುವ ಹುಡುಗಿಯೇನೋ ಎಂಬಂತೆ ಮಡಿಲಲ್ಲಿ ಮಲಗಿಸಿ ಚುಕ್ಕು ತಟ್ಟಲು ತೊಡಗುತ್ತಾಳೆ. ಅದು ನನಗಿಷ್ಟ. ಆದರೆ, ಖಿನ್ನತೆಗೆ ಆ ಪ್ರೀತಿ ಕಷ್ಟ. ಕೊಸರಿ ಎದ್ದು ನನ್ನ ರೂಮಿಗೆ ಬರುತ್ತೇನೆ. ಕಂಪ್ಯೂಟರ್‌ ಮುಂದೆ ಕೂತು ಏನೋ ಬರೆಯುವವಳಂತೆ ಮಗ್ನಳಾಗುತ್ತೇನೆ.

ಮೋಡಕ್ಕೆ ದುಃಖ ಇನ್ನೂ ಇಳಿದಂತಿಲ್ಲ. ಹಚ್ಚನೆಯ ಹಸಿರು ಇನ್ನಷ್ಟು ಹಚ್ಚಗಾಗಿ ಕಾಣುತ್ತಿದೆ. ಕಂಪೌಂಡ್‌ ತಬ್ಬಿರುವ ಮರಗಳಲ್ಲಿ ನೀರು ಇನ್ನೂ ತೊಟ್ಟಿಕ್ಕುತ್ತಿದೆ. ಮಳೆ ನಿಂತರೂ ಮರದ ಹನಿ ನಿಲ್ಲದು. ಇನ್ನು ಈ ಖಿನ್ನತೆ ನಿಲ್ಲುವುದು ಯಾವಾಗೋ!

ಬುಕ್‌ ಸೆಲ್ಫ್‌ನಿಂದ ಹೆಮಿಂಗ್ವೇಯ ’ಓಲ್ಡ್‌ ಮ್ಯಾನ್‌ ಅಂಡ್‌ ದಿ ಸಿ’ ಕಾದಂಬರಿ ತೆಗೆಯುತ್ತೇನೆ. ’ಹೌ ಆರ್‌ ಯು ಫೀಶ್‌?’ ಎಂದು ನನಗೆ ನಾನೇ ಪ್ರಶ್ನಿಸಿಕೊಳ್ಳುತ್ತೇನೆ. ಒಂಟಿ ಮುದುಕನ ಮೀನು ಹಿಡಿಯುವ ಸಾಹಸದಲ್ಲಿ ಖಿನ್ನತೆ ಮುಳುಗಿಸಲು ಯತ್ನಿಸುತ್ತೇನೆ. ಊಹೂಂ, ಆಗದು. ಮನಸ್ಸು ನಿಲ್ಲುತ್ತಿಲ್ಲ, ಕೂಡುತ್ತಿಲ್ಲ, ಒಂದೇ ಸಮನೆ ಗಿರಗಿರ ತಿರುಗುತ್ತಿದೆ. ’ಮತ್ತದೇ ಬೇಸರ...’.

ನಾಷ್ಟಾಕ್ಕೆ ಕರೆದಳು ಅವ್ವ. ಪೇಪರ್‌ ಓದುವ ನೆಪದಲ್ಲಿ ಆಕೆಗೆ ಮುಖ ಕೊಟ್ಟು ಮಾತನಾಡಲಿಲ್ಲ. ನಾನು ಖಿನ್ನಳಾಗಿದ್ದು ಅಪ್ಪನಿಗೆ ಗೊತ್ತಾಗಿರಬೇಕು. ಸುಮ್ಮನೇ ಹುಬ್ಬೇರಿಸಿದ. ಎಲ್ಲ ಬಲ್ಲ ಜಾಣ ಆತ. ಏನೂ ಇಲ್ಲ ಎಂಬಂತೆ ಮತ್ತೆ ಪೇಪರ್‌ನಲ್ಲಿ ಮಗ್ನಳಾದೆ. ಮುಖಪುಟದಲ್ಲಿ ಯಡಿಯೂರಪ್ಪ ನಗುತ್ತಿದ್ದಾರೆ. ನಗದೇ ಏನು ಮಾಡಿಯಾರು?

ಯಾವ್ಯಾವುದೋ ಹಾಡು ಕೇಳಿದೆ. ನನಗೆ ಕಾಫಿ ಇಷ್ಟ ಎಂದು ಅವ್ವ ಮೂರು ಸಾರಿ ಕಾಫಿ ಮಾಡಿಕೊಟ್ಟಳು. ಸೊಗಸಾಗಿತ್ತು ರುಚಿ. ಹದವಾಗಿತ್ತು ಬಿಸಿ. ಕಪ್ಪಿನಲ್ಲಿ ಒಂದು ಹನಿಯೂ ಇರದಂತೆ ಹೀರಿದರೂ ಖಿನ್ನತೆ ಅದೆಲ್ಲ ಖುಷಿ ಹೀರಿ ಗಹಗಹಿಸಿತು. ’ಇಲ್ಲ, ಇವತ್ತಿದು ನನ್ನನ್ನು ಬಿಡುವುದಿಲ್ಲ’ ಎಂದು ಅನ್ನಿಸಿದರೂ ಬಿಡದೇ ಕಂಪ್ಯೂಟರ್‌ ಓಪನ್‌ ಮಾಡಿದೆ. ಸಂಪದಕ್ಕೆ ಬಂದಾಗ, ಅಲ್ಲಿ ಚುಟುಕು ಬರೆಯುವ ಸ್ಪರ್ಧೆ. ಶುರು ಮಾಡಿದ್ದು ನಾನೇ. ಪ್ರತಿಕ್ರಿಯೆ ನೀಡುತ್ತ ಮರೆಯಲು ಯತ್ನಿಸಿದರೂ ಸುನೀಲ್‌ ಅವರ ಪ್ರತಿಕ್ರಿಯೆ ಏಕೋ ಮನಸ್ಸನ್ನು ಮತ್ತೆ ಘಾಸಿಗೊಳಿಸಿತು.

ಕಂಪ್ಯೂಟರ್‌ ಆಫ್‌ ಮಾಡಿ ಮತ್ತೆ ’ಓಲ್ಡ್‌ ಮ್ಯಾನ್‌...’ ಎತ್ತಿಕೊಂಡೆ. ಮೀನು ಮುದುಕನ ಜೊತೆ ಪ್ರಯಾಣ ಪ್ರಾರಂಭಿಸಿದೆ. ಅದು ಮುಗಿಯದ ಪಯಣ. ಇದು ಮುಗಿಯದ ಖಿನ್ನತೆ. ಮೊದಲ ಬಾರಿ ಒಂಟಿತನ ತೀವ್ರವಾಗಿ ಕಾಡಿತು.

ಅಷ್ಟರಲ್ಲಿ, ಅವ್ವ ಎರಡು ಸಾರಿ ಇಣುಕಿ ನೋಡಿ ಹೋಗಿದ್ದಳು. ಮಗಳು ಮೌನವಾಗಿದ್ದಾಳೆ ಎಂದರೆ ಆಕೆಗೇನೋ ಕಳವಳ. ’ಏನಾತು ಪಲ್ಲು’ ಎಂದು ಶುರು ಮಾಡುತ್ತಾಳೆ. ’ಏನೂ ಇಲ್ಲವ್ವ’ ಎಂದರೂ ಬಿಡುವುದಿಲ್ಲ. ಅದಕ್ಕೆಂದೇ ಆಕೆಯ ನೋಟಕ್ಕೆ ಪ್ರತಿನೋಟ ನೀಡದೇ ಮಾನಿಟರ್‌ ದಿಟ್ಟಿಸುತ್ತ, ಬ್ಲಾಗ್ ಬಂಧುಗಳ ಪ್ರತಿಕ್ರಿಯೆ ಓದುತ್ತ, ತಿಳಿದಂತೆ ಬರೆಯುತ್ತ ಕೂತೆ. ಹೊರಗೆ ಮೋಡ ಗುಡುಗಿತು. ಆದರೆ, ಯಾರೂ ಕೇರ್‌ ಮಾಡಲಿಲ್ಲ. ತೆಂಗಿನ ಮರಗಳು ನಿರ್ಲಕ್ಷ್ಯದಿಂದ ನಿಂತಿದ್ದವು. ಮಾವಿನ ಮರದಲ್ಲಿ ಇನ್ನೂ ಅಲ್ಲಲ್ಲಿ ಉಳಿದಿದ್ದ ಕಾಯಿಗಳು ಓಲಾಡಿ ಗೇಲಿ ಮಾಡಿದವು. ಯಾರ ಮೇಲಿನ ಸಿಟ್ಟೋ, ಏಕೆ ಉಕ್ಕಿ ಬಂತೋ, ಕಪ್ಪಗೆ ದಪ್ಪಗಿದ್ದ ಮೋಡ ರಪರಪ ಮಳೆ ಸುರಿಸಿತು. ಮರಗಳೆಲ್ಲ ಎಲೆಗಳ ಮೂಲಕ ಹನಿ ಹನಿ ಕಣ್ಣೀರು ಹಾಕತೊಡಗಿದವು.

ಎಷ್ಟೊಂದು ಇಷ್ಟಪಡುತ್ತಿದ್ದೆ ಇಂಥ ಮಳೆಯನ್ನು. ಆದರೆ, ಇವತ್ತು ಅದೆಲ್ಲ ಬೇಡವೆನ್ನಿಸುತ್ತಿದೆ. ಮಧ್ಯಾಹ್ನದ ಊಟದ ಹೊತ್ತಾಗಿತ್ತು. ಮತ್ತೆ ಅವ್ವನ ಮುಖ ಕಂಡಿತು. ಸುಮ್ಮನೇ ಎದ್ದು ಊಟದ ಶಾಸ್ತ್ರ ಮಾಡಿದೆ. ಮೊಬೈಲ್‌ ಮ್ಯೂಟ್‌ ಮಾಡಿದೆ. ಹಾಸಿಗೆ ಮೇಲೆ ಬಿದ್ದುಕೊಂಡು, ನಿರ್ಲಕ್ಷ್ಯದಿಂದ ಎತ್ತಿಕೊಂಡಾಗ ಕೈಗೆ ಸಿಕ್ಕ ಮ್ಯಾಗಝೀನ್‌ ’ಔಟ್‌ಲುಕ್‌’. ಮುಖಪುಟದಲ್ಲೇ ಮದ್ಯದ ಗ್ಲಾಸ್‌. ’ವುಮೆನ್‌ ಅಂಡ್‌ ಅಲ್ಕೋಹಾಲ್‌’ ಎಂಬ ಹೆಡ್ಡಿಂಗ್‌. ಅದನ್ನು ’ವುಮೆನ್‌ ಅಂಡ್‌ ಡಿಪ್ರೆಶನ್‌’ ಎಂದು ಬದಲಾಯಿಸಿ ಬರೆದರೆ ಹೇಗೆ ಎಂದು ಯೋಚಿಸುತ್ತ ನಿದ್ದೆಗೆ ಜಾರಿದೆ.

ಸ್ವಲ್ಪ ಹೊತ್ತಿಗೇ ಮತ್ತೆ ಎಚ್ಚರ. ಹೊರಗೆ ಮಂಕು ಬೆಳಕು. ಬೆಳಿಗ್ಗೆಯಾ ಸಂಜೆಯಾ ತಿಳಿಯದ ವಾತಾವರಣ. ಗಡಿಯಾರದಲ್ಲಿ ಮಾತ್ರ ಗಂಟೆ ನಾಲ್ಕು. ಅಷ್ಟೊತ್ತಿಗೆ ಭರಪೂರ ಖಿನ್ನತೆ ಆವರಿಸಿಕೊಂಡಿತ್ತು. ಒಳಗೆ ಅವ್ವ ಚಹ ಮಾಡುತ್ತಿದ್ದಳು. ತನ್ನ ಸ್ಟಡಿ ರೂಮಿನಲ್ಲಿ ಅಪ್ಪ ಏನೋ ಓದುತ್ತಿದ್ದ.

’ಅಪ್ಪಾ’ ಎಂದೆ. ತಲೆ ಎತ್ತಿ ನೋಡಿದ. ’ಅರ್ಥವಾಗುತ್ತಿದೆ ಹೇಳು ಮಗಳೇ’ ಎಂಬ ನೋಟ. ’ಒಂಚೂರು ಹೊರಗೆ ಹೋಗಿ ಬರೋಣಾ?’ ಎಂದು ಕೇಳಿದೆ. ಚಹ ಕುಡಿದ ಕೂಡಲೇ ಹೋಗೋಣ ಎಂದ. ನಾನು ರೆಡಿಯಾಗಿ ಬರುವ ಹೊತ್ತಿಗೆ ಬಿಸಿ ಬಿಸಿ ಚಹ ಹಾಗೂ ಅಪ್ಪ ಕಾಯುತ್ತಿದ್ದರು. ಐದೇ ನಿಮಿಷದಲ್ಲಿ ಚಹ ಮುಗಿಸಿ ಕಾರನ್ನು ಈಚೆಗೆ ತೆಗೆದ ಕೂಡಲೇ ಡ್ರೈವಿಂಗ್‌ ಸೀಟ್‌ನಿಂದ ಇಳಿದ ಅಪ್ಪ ಕೀಯನ್ನು ನನ್ನೆಡೆಗೆ ಚಾಚಿದ.

’ಇಲ್ಲ, ನೀನೇ ಓಡಿಸು. ವಾಲ್ಮಿ ಕಡೆ ಹೋಗೋಣ’ ಎನ್ನುತ್ತ ಮುಂದಿನ ಸೀಟಲ್ಲಿ ಕೂತೆ. ಅಪ್ಪ ಕಾರು ಶುರು ಮಾಡಿದ. ಬೀದಿಯ ತಿರುವು ದಾಟುತ್ತಿದ್ದಂತೆ, ’ನಾನಾಗಿ ಮಾತನಾಡುವವರೆಗೆ ನೀನು ಸುಮ್ಮನಿರಬೇಕು’ ಎಂದು ತಾಕೀತು ಮಾಡಿದೆ.

ಅಪ್ಪ ತಲೆಯಾಡಿಸಿದ. ಕಣ್ಣಲ್ಲೇ ನಗುತ್ತಿದ್ದನೇನೋ. ನನ್ನ ಮನಸ್ಸು ಮಳೆಯಿಂದ ನೆನೆದು ಕಳೆಕಳೆಯಾಗಿದ್ದ ಕಪ್ಪು ರಸ್ತೆಗಳನ್ನೇ ತುಂಬಿಕೊಳ್ಳುತ್ತಿತ್ತು. ದಾರಿಯುದ್ದಕ್ಕೂ ಹಸಿರೇ ಹಸಿರು. ಬೈಪಾಸ್‌ನೆಡೆಗೆ ಕಾರು ತಿರುಗಿದಾಗ ಸುತ್ತಮುತ್ತ ತುಂಬಿದ್ದ ಬಿತ್ತನೆಯಾಗದ ಹೊಲಗಳಿಂದ ಭೋರಿಡುವ ಸ್ವಚ್ಛ ಗಾಳಿ. ’ನನ್ನ ಖಿನ್ನತೆಯನ್ನು ಹಾರಿಸಿಕೊಂಡು ಹೋಗಿ’ ಎಂದು ಆರ್ತಳಾಗಿ, ಆದರೆ ಮೌನವಾಗಿ ಬೇಡಿಕೊಂಡೆ.

ನಿಧಾನವಾಗಿ ಕತ್ತಲಾಗುತ್ತಿತ್ತು. ವಾಲ್ಮಿಯ ಹೈಕೋರ್ಟ್‌ ಸಂಚಾರಿ ಪೀಠದ ಕಟ್ಟಡದ ಭವ್ಯತೆ ದಾಟಿ ಇನ್ನೂ ಮುಂದಕ್ಕೆ ಹೋದೆವು. ಅಲ್ಲಿ ಒಂದು ಕಡೆ ಕಾರು ನಿಲ್ಲಿಸುವಂತೆ ಹೇಳಿದೆ. ಸುಮ್ಮನೇ ನಿಲ್ಲಿಸಿದ ಅಪ್ಪ. ಕೆಳಗಿಳಿದು ಭೋರಿಡುವ ತಂಪು ಗಾಳಿಗೆ ಮೈಯೊಡ್ಡಿಕೊಂಡು ನಿಂತೆ. ಅಳಬೇಕೆನಿಸಿತು. ಅತ್ತರೆ ಅಪ್ಪ ಗಾಬರಿಯಾದಾನು ಎಂದು ಸುಮ್ಮನೆ ನಿಂತೆ. ಹೊಲದ ಕೆಲಸ ಮುಗಿಸಿ ಕೂಲಿಯಾಳುಗಳು ಹಿಂತಿರುಗುತ್ತಿದ್ದರು. ಚಕ್ಕಡಿಯ ಚಕ್ರಗಳ ಮೆದುವಾದ ಮೊರೆತ. ಎತ್ತಿನ ಕೊರಳೊಳಗಿನ ಗಂಟೆಗಳ ಕಿಣಿಕಿಣಿ ನಿನಾದ. ಮನೆಗೆ ಮರಳುತ್ತಿದ್ದ ತರಹೇವಾರಿ ಹಕ್ಕಿಗಳು. ಅವುಗಳತ್ತ ಗಮನ ಕೊಡದೆ ನಿರ್ಲಕ್ಷ್ಯದಿಂದ ಭರ್‍ ಎಂದು ಹರಿದು ಹೋಗುತ್ತಿದ್ದ ವಾಹನಗಳು.

ಏಕೆ ಬರುತ್ತದೆ ಖಿನ್ನತೆ? ಪುಟಿಯುತ್ತಿದ್ದ ಮನಸ್ಸನ್ನು ಮಣಿಸಿ, ಮೆತ್ತಗಾಗಿಸಿ, ಜೀವ ಸೆಲೆಯನ್ನೇ ಹೀರಿಬಿಡುತ್ತದೇಕೆ? ಯಾವ ಕಾರಣವೂ ಬೇಕಿಲ್ಲದ ಈ ಸಮಸ್ಯೆಗೆ ಪರಿಹಾರ ಇರಬಹುದು. ಹುಡುಕಿದರೆ ವೈದ್ಯರು ಕಾರಣವನ್ನೂ ಹೇಳಬಹುದು. ಆದರೂ, ಅದನ್ನು ಹೀಗ್ಹೀಗೇ ಗೆಲ್ಲುವ ಆಸೆ. ಈ ಮೋಡಗಳ ಕೆಳಗೆ, ಹಕ್ಕಿಗಳ ಕೆಳಗೆ, ಹಸಿರುಕ್ಕುವ ಹೊಲದ ಮುಂದೆ ನಿಂತು ಅದನ್ನು ಕಳೆದುಕೊಳ್ಳಬೇಕು. ಹಕ್ಕಿಗಳಂತೆ ಹಾರಲಾಗದಿದ್ದರೂ, ಮನಸ್ಸು ಹಕ್ಕಿಯಾಗಬೇಕು. ಮೋಡಗಳನ್ನು ದಾಟಲಾಗದಿದ್ದರೂ, ಮೋಡಗಳ ಕೆಳಗೆ ಮುಕ್ತವಾಗಿರಬೇಕು. ಆ ಎತ್ತುಗಳ ಕಿಂಕಿಣಿ ಗಂಟೆಯಂತೆ ಹೃದಯ ಹಾಡಬೇಕು. ಅವುಗಳ ಕೊರಳಿನ ಮೆದು ಜೀಕಿನಂತೆ ಮನಸ್ಸು ಓಲಾಡಬೇಕು.

ಗಾಳಿ ಭೋರಿಡುತ್ತಿತ್ತು. ’ಬಂದೆ ನೋಡು’ ಎಂಬಂತೆ ಮೋಡಗಳೊಳಗೆ ಅವಿತಿದ್ದ ಮಳೆ ಹೆದರಿಸುತ್ತಿತ್ತು. ನನ್ನ ಸುತ್ತಮುತ್ತ ಹರಡಿರುವ ಈ ದುಡ್ಡಿಲ್ಲದ ನೆಮ್ಮದಿಯ ನಡುವೆ ಖಿನ್ನತೆಗೇಕೆ ಪಾಲು ಅಂತ ಅಂದುಕೊಂಡೆ. ನನ್ನ ಅರಿವಿಗೆ ಬಾರದಂತೆ ಕ್ರಮೇಣ ಮನಸ್ಸು ತಿಳಿಯಾಗುತ್ತ ಬಂದಿತು. ಬೆಳಿಗ್ಗೆಯಿಂದ ಕಟ್ಟಿಕೊಂಡಿದ್ದ ಖಿನ್ನತೆಯ ಮೋಡ ಕರಗುತ್ತ ಹೋಯಿತು. ಮಳೆಯಾಗದೇ ನಿಧಾನವಾಗಿ ಹರಿದು ಹೋಯಿತು. ಎಲ್ಲಿಂದ ಬಂದಿತ್ತೋ ಅಲ್ಲಿಗೇ ವಾಪಸ್ಸಾಯಿತು.

ಎಷ್ಟೊತ್ತು ಹಾಗೆ ನಿಂತಿದ್ದೆನೋ, ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳಲ್ಲಿ ಕೆಲವು ಆಗಲೇ ದೀಪ ಹೊತ್ತಿಸಿಕೊಂಡಿದ್ದವು. ಕಾರಿನ ಬಾನೆಟ್‌ಗೆ ಒರಗಿ ನಿಂತಿದ್ದ ಅಪ್ಪ ಕೂಡ ಸಂಜೆಯ ಸೊಗಸಿಗೆ ಮರುಳಾದವನಂತಿದ್ದ. ನನ್ನ ಕಟ್ಟಳೆಯನ್ನು ಆತ ಮುರಿದಿರಲಿಲ್ಲ. ಮನೆ ಬಿಟ್ಟಾಗಿನಿಂದ ಇದುವರೆಗೆ ಒಂದೂ ಮಾತಾಡಿರಲಿಲ್ಲ. ಎಲ್ಲವನ್ನೂ ಬಾಯ್ಬಿಟ್ಟು ಕೇಳದೆಯೇ, ಹೇಳದೆಯೇ ಅರಿಯುವ ಜಾಣ ನನ್ನ ಅಪ್ಪ.

ತಿಳಿಯಾದ ಮನಸ್ಸಿನೊಂದಿಗೆ ಮತ್ತೆ ಕಾರು ಹತ್ತಿ ಕೂತೆ. ಆಗಲೂ ಅಪ್ಪ ಮಾತನಾಡಲಿಲ್ಲ. ದಾರಿಯುದ್ದಕ್ಕೂ ಭೋರಿಡುವ ಗಾಳಿಯ ಸದ್ದು ಕೇಳುತ್ತ, ಅದರಲ್ಲಿ ಕರಗಿದಂತಿದ್ದ ಎಂಜಿನ್‌ ಸದ್ದು ಆಲಿಸುತ್ತ ಮೌನವಾಗೇ ಇದ್ದ ಅಪ್ಪ. ಆದರೆ, ಆತನ ಮುಖವೂ ತಿಳಿಯಾದಂತಿತ್ತು. ಮೋಡ, ಗಾಳಿ, ಹೆದ್ದಾರಿ, ಚಕ್ಕಡಿ, ಎತ್ತು, ಗಂಟೆ- ಎಲ್ಲ ಆತನ ಮೇಲೂ ಪ್ರಭಾವ ಮಾಡಿರಬೇಕು. ನೆಮ್ಮದಿ ಮುಖದ ತುಂಬ ಹರಡಿತ್ತು.

ಮನೆ ತಲುಪಿದಾಗ, ದೀಪಗಳನ್ನೆಲ್ಲ ಉರಿಸಿಕೊಂಡು ಟಿ.ವಿ. ಮುಂದೆ ಕೂತಿದ್ದ ಅವ್ವ ಕಾರಿನ ಸದ್ದು ಕೇಳಿ ಹೊರ ಬಂದಳು. ಕಾರಿನಿಂದ ಇಳಿಯುವ ಮೊದಲು, ಅಪ್ಪನೆಡೆಗೆ ತಿರುಗಿ, ’ಥ್ಯಾಂಕ್ಸ್‌ ಅಪ್ಪಾ’ ಎಂದೆ.

ಆತ ಮುಗುಳ್ನಕ್ಕ. ಅದನ್ನು ಕಂಡು ಅವ್ವ ಮುಗುಳ್ನಕ್ಕಳು. ಅವರಿಬ್ಬರ ಪ್ರತಿಕ್ರಿಯೆ ಕಂಡು ನಾನೂ ಮುಗುಳ್ನಕ್ಕೆ. ಏಕೋ ನಾಚಿಕೆಯಾಯಿತು. ನಗುತ್ತ ಒಳಗೆ ಓಡಿ ಹೋಗಿ ಕಂಪ್ಯೂಟರ್‌ ಆನ್‌ ಮಾಡಿದೆ.

ಅಲ್ಲಿ, ’ಸಮುದಾಯ’ ತುಂಬಿಕೊಂಡಿದ್ದ ಚುಟುಕು ಕವಿಗಳು ಹರ್ಷೋದ್ಗಾರದಿಂದ ನನ್ನನ್ನು ಸ್ವಾಗತಿಸಿದರು.

- ಪಲ್ಲವಿ ಎಸ್‌.

Rating
No votes yet

Comments