ಹೀಗೊಂದು ಕಥೆಯ ಹೆಸರು- ಮರೀಚಿಕೆ

ಹೀಗೊಂದು ಕಥೆಯ ಹೆಸರು- ಮರೀಚಿಕೆ

ಊಹುಂ ಕಥೆ ಬರೆಯಲು ನಾನು ಒಲ್ಲೆ…. ಹಾಗಂದುಕೊಂಡೆ ಗೀಚಿದ ಕಥೆ ಅದು. ನನ್ನ ವಯಸ್ಸನ್ನು ಗುರುತಿಸಬಹುದಾದ ಕಥೆ. ಅದ್ಯಾಕೋ ಅದಕ್ಕೆ ಮರೀಚಿಕೆ ಅಂತಾ ಹೆಸರು ಕೊಡಬೇಕು ಅನ್ನಿಸಿತ್ತು. ಹಾಗೇ ಹೆಸರಿಟ್ಟಿದ್ದೆ. ಅದೊಂದು ಪತ್ರಿಕೆಯಲ್ಲಿ ಪ್ರಕಟವೂ ಆಯಿತು. ಕಥೆ ಮೆಚ್ಚಿ ಹಲವು ಪತ್ರಗಳು ಬಂತು.
ಮರೀಚಿಕೆಯ ಕಥೆ ಆರಂಭವಾಗುವುದೇ ಇಲ್ಲಿಂದ. ಅರೆ ಕಥೆ ಮುಗಿದ ಮೇಲೆ ಮತ್ತೆ ಆರಂಭ……? ಅಂತಾ ನೀವು ಕೇಳಬಹುದು. ಅದು ಕಥೆ. ಇದು….? ಅದರಲ್ಲಿ ಅವಳು ಬರೆದ ಪತ್ರವೂ ಒಂದಿತ್ತು. ಸಾರ್ ನಿಮ್ಮ ಕಥೆಯಲ್ಲಿನ ನಾಯಕಿ ನಾನೇಯೇನೋ ಅನ್ನಿಸುವ ಹಾಗೇ ನೀವು ಕಥೆ ಬರೆದ್ದಿದ್ದೀರಿ. ರೀಯಲಿ “ಐ ಲೈಕ್ ದಟ್ ಸ್ಟೋರಿ” ಅಂತಾ ಬರೆದಿದ್ದಳು. ಅವಳು ಬರೆದ ಈ ಸಾಲು ಯಾವ ಭಾಷೆಯದು ಅಂತಾ ನನಗೆ ನಿಜಕ್ಕೂ ಆವತ್ತು ಅರ್ಥವಾಗಿರಲಿಲ್ಲ! ಕೊನೆಗೊಂದು ದಿನ ಅದು ಇಂಗ್ಲೀಷು, ಅದರ ಅರ್ಥ ಹೀಗೆ ಅಂತಾ ಅವಳೇ ಹೇಳಿಕೊಟ್ಟಳು. ಆಮೇಲೆ ಗೊತ್ತಾಗಿದ್ದು ಆ ಪದದ ಅರ್ಥ!
ಅಂದು ಬರೆದಿದ್ದ ಮರೀಚಿಕೆ ಲವ್, ಫೀಲು ಏನೂ ಗೊತ್ತಿಲ್ಲದೇ ಬರೆದಿದ್ದ ಬಾಲಿಶ ಕಥೆಯಾಗಿತ್ತು. ಸಿನಿಮಾ ನೋಡಿ, ನಾಲ್ಕಾರು ಕಥೆ ಓದಿ ನನ್ನದೇ ಆದ ಒಂದು ಕಲ್ಪನೆಯಲ್ಲಿ ಬರೆದ ಸಿನಿಕತನದ ಕಥೆಯಾಗಿತ್ತು. ಅದು ಹೇಗೆ ಅವಳಿಗೆ ತನ್ನ ಬದುಕಿನ ಕಥೆ ಅನ್ನಿಸಿತೋ, ಅವಳಿಗ್ಯಾಕೆ ಈ ಕಥಾ ನಾಯಕಿ ತಾನೇ ಅನ್ನಿಸಿತೋ ನನಗಂತೂ ಅರ್ಥವಾಗಲಿಲ್ಲ. ಅದನ್ನೇ ವಿಧಿ ಅಂತಾರಂತೆ. ಹಾಗಂತ ಆಮೇಲೆ ಅವಳೇ ಹೇಳಿದ್ದು.
ಅವ ಮಲೆನಾಡಿನ ಮಾಣಿ. ಗೊಲ್ಲರ ಹುಡುಗ. ಜಾತಿಯಲ್ಲಿ ಬ್ರಾಹ್ಮಣನಾಗಿದ್ದರೂ, ಬದುಕಿನಲ್ಲಿ, ವೃತ್ತಿಯಲ್ಲಿ ಗೊಲ್ಲನಾಗಿದ್ದ. ಊರಿನ ದನ ಮೇಯಿಸಿಕೊಂಡು, ಊರುಮಂದಿ ಕೊಡುತ್ತಿದ್ದ ದೋಸೆ, ಜೋನಿ ಬೆಲ್ಲ ತಿಂದುಕೊಂಡು ಬದುಕುತಿದ್ದ. ಕಾಡು ಮೇಡು ಸುತ್ತುವುದು, ಚಿಟ್ಟೆ ಹಿಡಿಯುವುದು, ಜೇನಿನ ಗೂಡಿಗೆ ಕಲ್ಲು ಹೊಡೆಯುವುದು, ಊರಿನ ನಾಯಿಗೆ ಕಲ್ಲು ಬಿಸಾಡುವುದು, ಇಂತಹದ್ದೇ ದಿನಚರಿ ಆ ಮಾಣಿಯದ್ದು. ಯಾರ ಮನೆಯವರು ಯಾವ ಕೆಲಸ ಹೇಳಿದರೂ ಒಲ್ಲೆ ಅಂದ ಮಾಣಿ ಅವ ಅಲ್ಲ. ಹಾಗಾಗಿಯೇ ಊರಿನ ಹೆಂಗಸರಿಗೆಲ್ಲಾ ಅಂವ ಅಂದ್ರೆ ಇಷ್ಟ. ಆದ್ರೂ ಊರವರ ದೃಷ್ಟಿಯಲ್ಲಿ ಅವ ಒಂತರಹ ಕೆಲಸಕ್ಕೆ ಬಾರದವನಾಗಿದ್ದ! ಶಾಲೀ ಕಲಿತ ಮಾಣಿ ಅದಲ್ಲ. ಮಂತ್ರ ಕಲಿ ಅಂತಾ ಮಠಕ್ಕೆ ಬಿಟ್ಟು ಬಂದ್ರೆ ನಮ್ಮ ಮನೆ ಗೌರಿ ದನ ಮಠದಲ್ಲಿ ಇಲ್ಲ, ಅಂತಾ ಓಡಿಬಂದ ಮಾಣಿ ಅವ. ಅವ ಮರುಳ ಅಲ್ಲದೇ ಮತ್ತಿನೆಂತೂ? ಇದು ಅವನ ಕುರಿತಾಗಿ ಊರವರು ಹಿಂದಿನಿಂದ ಆಡುತ್ತಿದ್ದ ಮಾತು!
ಶಾಲೇ ಕಲಿತು, ನೌಕ್ರಿ ಹಿಡಿದು, ಕೊನೆಗೂ ಯಾವುದೂ ಬೇಡ ಅಂತಾ ಮನೆ ಸೇರಿ ಬೆಟ್ಟ ಸುತುತ್ತಾ ಬೇಜಾರಾದಗಲೆಲ್ಲಾ ಕಥೆ, ಕವನ ಗೀಚುತ್ತಾ ಬದುಕುತ್ತಿದ್ದವನು ನಾನು. ಚಿಟ್ಟೆ ಹಿಡಿಯುವುದು, ಪೀಟಿ ಹಿಡಿಯುವುದು ನಂಗೂ ಇಷ್ಟವಾಗಿದ್ದರೂ ನಾಯಿಗೆ, ಜೇನಿನ ಗೂಡಿಗೆ ಕಲ್ಲು ಹೊಡೆಯಬಾರದೆಂಬ ತಿಳುವಳಿಕೆಯಿತ್ತು. ಊರವರಿಗೆ ತಿಪ್ಪರಲಾಗ ಹಾಕಿದರೂ ಕೆಲಸ ಮಾಡಿಕೊಡಬಾರದು ಅಂತಾ ನಿರ್ಧರಿಸಿದ್ದ್ದೆ. ನನ್ನ ಬದುಕು ಹಳ್ಳಿ ಗುಗ್ಗು ತರಹದ್ದೆ. ನನ್ನನ್ನು ನೋಡಿ ಆಫೀಸ್‌ಲ್ಲಿ ಎಲ್ಲರೂ ಅಣಗಿಸುತ್ತಿದ್ದರು. ಬೋಳಿ ಮಕ್ಕಳಾ “ಕತ್ತೆ ಬಾಲ ಕುದುರೆ ಜುಟ್ಟು” ನಾನು ಬದುಕೋದೇ ಹೀಗೆ ಅಂತಾ ರೇಗಾಡಿಕೊಂಡು ಮನೆ ಸೇರಿದ ಪ್ರಾಣಿ. ಒಳ್ಳೇ ಮಾಣಿ ಪೇಪರಿಗೆಲ್ಲಾ ಬರೀತಾ ಅನ್ನುತ್ತಿದ್ದರು ಊರವರು ನನ್ನ ಕಂಡು!
ಹೀಗೆ ಬದುಕು ನಡೆಸುತ್ತಿದ್ದ ಅವನ ಕಣ್ಣು ಚುಚ್ಚಿದ್ದು ರಜೆಗೆ ಅಂತಾ ಅಜ್ಜನ ಊರಿಗೆ ಬಂದಿದ್ದ ತಿಮ್ಮಣ್ಣ ಭಟ್ಟರ ಮೊಮ್ಮಗಳು. ಪಾಪ ಅವ ಬಡಪಾಯಿಪೆದ್ದು . ಅವನಿಗೆಲ್ಲಿ ಗೊತ್ತು ಡಾಕ್ಟರ್‍ ಆದವರು ಡಾಕ್ಟರನ್ನೇ ಇಷ್ಟಪಡಬೇಕು, ರ್‍ಯಾಂಕ್ ಬರುವವರು ರ್‍ಯಾಂಕ್ ಬರುವವರನ್ನೇ ಇಷ್ಟಪಡಬೇಕು ಅನ್ನುವ ಇವತ್ತಿನ ಹೊಸ ರೂಲ್ಸು! ಅವ ಅವಳ ಹಿಂದೆ ಬಿದ್ದ…..ಕೊನೆಗೂ ಬಿದ್ದೇ ಹೋದ…..ಆ ಡಾಕ್ಟರಮ್ಮ ಸತ್ತ್ಲು ಅಂತಾ ಬಿಕ್ಕುತ್ತಾ ಗುಡ್ಡದ ಮೇಲೆ ಗೌರಿ, ಗಂಗೆಯನ್ನು ಮೇಯಿಸುತ್ತಾ ಕಣ್ಣೀರಿಡುತ್ತಲೇ ಸತ್ತ. ಅವ ಕಣ್ಣು ತೆರದಿದ್ದೇ ಒಂದು ಸಲವಾಗಿತ್ತು. ಅದನ್ನು ಅವಳು ಪೂರ್ಣವಾಗಿ ತೆರೆಸ ಬಹುದಿತ್ತು. ಆದರೆ ಅವಳು ಕಣ್ಣನ್ನು ಮಾತ್ರವಲ್ಲ, ಹೃದಯವನ್ನು ಮುಚ್ಚಿಸಿಬಿಟ್ಟಳು. ಹೀಗೆ ಆ ಕಥೆ ಎಂಡ್ ಮಾಡಿದ್ದೆ, ಅನ್ನೋದು ನೆನಪು. ನಾಲ್ಕಾರು ಸೀನಿನ ಕಥೆಯದು. ನಗು, ಅಳು ಎಲ್ಲ ಸನ್ನಿವೇಶವನ್ನು ಹಠಕ್ಕೆ ಬಿದ್ದು ಸೃಷ್ಟಿಸಿದ್ದೆ ಅನ್ನಿಸತ್ತೆ. ಅವ ಅವಳಿಗೋಸ್ಕರ ಕೆಲವು ದಿನ ಊರು ಬಿಟ್ಟು ಹೋಗಿದ್ದ. ಹಾಗಾಗಿಯೇ ಇರಬೇಕು ಅದಕ್ಕೆ ನಾನು ಮರೀಚಿಕೆ ಅಂತಾ ಹೆಸರಿಟ್ಟಿದ್ದು.
ಅರೆ ಅದೇ ಟೈಟಲ್ಲು ಮತ್ತಿಲ್ಯಾಕೆ? ಬೇರೆ ಯಾವ ಹೆಸರು ಸಿಗಲಿಲ್ಲವಾ? ಅಂತಾ ನೀವು ಪ್ರಶ್ನಿಸಬಹುದು. ಅದಕ್ಕೆ ಹೇಳಿದ್ದು ಕಥೆ ಮುಗಿದ ಮೇಲೆ ಆರಂಭವಾಗುವ ಕಥೆಯಿದು ಅಂತಾ! “ಎಲ್ಲಾ ಬಿಟ್ಟ ಮಗ ಭಂಗಿ ನೆಟ್ಟ” ಅನ್ನುವ ತರಹ ಬದುಕಲು ಅಣಿಯಾಗಿದ್ದ ನಾನು ಅವಳಿಗ್ಯಾಕೆ ಇಷ್ಟವಾದೆ? ಎಂದು ನನಗಂತೂ ಅರ್ಥವಾಗಲಿಲ್ಲ! ಅರ್ಥವಾಗದಿದ್ದರೂ ನಾನ್ಯಾಕೆ ತಿರುಗಿ ಅವಳ ಪತ್ರಕ್ಕೆ ಉತ್ತರ ಬರೆದೆ ಅನ್ನುವುದನ್ನೂ ಕೂಡಾ ಅರ್ಥೈಸಿಕೊಳ್ಳಲಾಗದಷ್ಟು ಹೆಡ್ಡ ನಾನು! ಅವಳನ್ನು ಕೇಳಿದ್ದರೆ ಇದನ್ನೂ ವಿಧಿಯಾಟ ಅನ್ನುತ್ತಿದ್ದಳು! ಒಟ್ಟಲ್ಲಿ ನಾನು ಅವಳಿಗೆ ಉತ್ತರ ಬರೆದೆ. ಅವಳು ನನ್ನ ಬೆನ್ನ ಹಿಂದೆ ಬಿದ್ದಳು. ನನ್ನನ್ನು ಪಡೆದೇ ಪಡೆಯುತ್ತೀನಿ ಅಂತಾ ಕೂತಳು. ಮೊದಮೊದಲು ನನಗೂ ಅವಳ ಹಠ ಮಜಾ ಅನ್ನಿಸುತ್ತಿತ್ತು. ನಾನು ಒಂಚೂರು ಅವಳನ್ನು ಬೆಂಬಲಿಸಿದೆ! ಕೊನೆಗೂ ನನ್ನ ದೃಷ್ಟಿ ಕಾಡು ಮೇಡಿನತ್ತ ತಿರುಗಿತು. ಪ್ರೀತಿ, ಪ್ರೇಮ ಎಲ್ಲಾ ಸುಳ್ಳೇ ಸುಳ್ಳು ಅನ್ನಿಸತೊಡಗಿತು. ನಾನು ಅಲ್ಲಿಗೆ ಈ ಕಥೆಯನ್ನು ಎಂಡ್ ಮಾಡಿದೆ.
ಊಹುಂ ಅವಳು ಬಿಡಲಿಲ್ಲ. ನಾನು ಸಿಗಲಿಲ್ಲ. ಮತ್ತದೇ ಕಥೆ….ಅವಳಿಗೂ ಅವನಿಗೂ ವ್ಯತ್ಯಾಸ ಅಂದ್ರೆ ಅವ ಗೊಲ್ಲ. ಇವಳು ಟೆಕ್ಕಿ. ಇಬ್ಬರೂ ಸೋತರು. ಮರೀಚಿಕೆಯಲ್ಲಿ ಇಬ್ಬರೂ ಸೋತರು. ಮರೀಚಿಕೆ ಬುದ್ದಿಯನ್ನು ಸೋಲಿಸಿತು. ಅಲ್ಲಲ್ಲ ಅವಳ ಭಾಷೆಯಲ್ಲೇ ಹೇಳುವುದಾದರೆ ಅದು ವಿಧಿ! ಆದ್ರೂ ಗೆದ್ದವ ನಾನಲ್ಲವೇ? ಹಾಗಂದುಕೊಂಡರೆ ನೀವು ಸೋತು ಬಿಡುತ್ತೀರಿ! ಹಾಗಾಗಿಯೇ ಅದನ್ನು ಈಗಲೂ ಮರೀಚಿಕೆ ಅಂತಲೇ ಕರೆದ್ದಿದ್ದು.

Rating
No votes yet