ಹೀಗೊಂದು ಕವಿತಾ "ಜುಗಲ್ ಬಂಧಿ"

ಹೀಗೊಂದು ಕವಿತಾ "ಜುಗಲ್ ಬಂಧಿ"

ಜೀವನವೇ ಒಂದು ಜೋಕಾಲಿ
ಪ್ರೀತಿ ಕಣ್ಮರೆಯಾದಾಗ ಹೃದಯ ಖಾಲಿ ಖಾಲಿ
ಅವಳಿಲ್ಲದೆ ನೀ ಬದುಕುವುದ ಕಲಿ

ಕೈ ಕೊಟ್ಟು ಹೋದವಳ ಬಗ್ಗೆ ಚಿಂತಿಸದಿರು
ಮೂರೇ ಮೂರು ದಿನದ ಹುಸಿ ಪ್ರೀತಿಯ ನೆನೆಯದಿರು

ಪ್ರೀತಿಯ ಕೊಳದಲ್ಲಿ ಹೆಣ್ಣಿನ ಆಂತರ್ಯವ ಹುಡುಕದಿರು
ನೆನಪುಗಳ ಕೆದಕಿ ಕೆದಕಿ ಕೊರಗದಿರು ನೀ ಮರುಗದಿರು

ಹಗಲು ಇರುಳು ಅವಳ ನೆನಪಲ್ಲೇ ಕಾಲ ಕಳೆದೆ ಗೆಳೆಯ
ಆ ನೆನಪುಗಳ ಚಕ್ರವ್ಯೂಹದಿಂದ ಹೊರಗೆ ಬಾ ಆತ್ಮೀಯ

ನೀ ನೋಡಬೇಕಿರುವುದು ಸಾಕಷ್ಟಿದೆ ಕಣ್ತೆರೆದು ನೋಡೆಯ
ನೀ ಸಾಧಿಸಬೇಕಿರುವುದು ಬೇಕಾದಷ್ಟಿದೆ ಮನಸಿಟ್ಟು ಮಾಡೆಯ
- Vರ ( Venkatesha ರಂಗಯ್ಯ )

ಹೃದಯ ಖಾಲಿ ಖಾಲಿ ಎನ್ನುವೆ ನಿಜ ಗೆಳೆಯಾ
ಖಾಲಿ ಹೃದಯದೊಂದಿಗೆ ಬದುಕ ಕಲಿ ಎನ್ನುವೆಯಾ?

ಕೈಕೊಟ್ಟು ಹೋದವಳ ಬಗ್ಗೆ ಚಿಂತಿಸದಿರಬಹುದು
ಮನಸ ಕದ್ದು ಹೋದವಳ ಹೇಗೆ ಮರೆಯಬಹುದು

ಮೂರು ದಿನದ ಪ್ರೀತಿಯಾದರೂ ಅದು ಹುಸಿಯಲ್ಲ ನನಗೆ
ಮೂರು ದಿನಗಳಲೇ ಮೂರು ಜನ್ಮದ ಅನುಭವ ಆಯ್ತೆನಗೆ

ಪ್ರೀತಿಯ ಕೊಳದಲ್ಲಲ್ಲ ನನ್ನಂತರ್ಯದಲಿ ನಾನವಳ ಹುಡುಕುತಿರುವೆ
ಕೊರಗದಿರಲು ಮರುಗದಿರಲು ನಾನೀಗ ನಾನಾಗಿ ಎಲ್ಲಿ ಉಳಿದಿರುವೆ

ಕಣ್ತೆರೆದು ನೋಡಲು ನನಗೆ ಕಾಣುವುದು ಹಗಲಿರುಳು ಅವಳದೇ ರೂಪ
ಸಾಧಿಸಲು ಬಹಳಷ್ಟಿರಬಹುದು ಯಾರಿಗಾಗಿ ಸಾಧನೆ ಹೇಳು ನೀ ಸ್ವಲ್ಪ
-ಆಸು ಹೆಗ್ಡೆ

ಮೋಸ ಮಾಡಲೆಂದೇ ಪ್ರೀತಿಯ ನಾಟಕ ಆಡಿದಳಾಕೆ
ಹುಸಿ ಪ್ರೀತಿ ಕೊಟ್ಟವಳ ನೆನೆಯುವುದೇಕೆ
ನೆನೆದು ನೆನೆದು ಅವಳ ನೆನಪಲ್ಲೇ ಕೊರಗುವುದೇಕೆ

ಜನ್ಮ ಜನ್ಮದ ಗೆಳತಿ ಎಂದೆನೆಸಿ ಕೊಟ್ಟೆ ನಿನ್ನ ಮನಸು
ಕೈ ಕೊಟ್ಟಳೆಂದು ಅರಿತ ಮೇಲೆ ಬೇಕೇ ಅರ್ಥವಿಲ್ಲದ ಮುನಿಸು

ಅವಳ ಮೂರು ದಿನದ ಪ್ರೀತಿ ಮೂರು ಜನ್ಮಕ್ಕೆಂದು ಅರಿಯದಿರು
ಈ ಸುಳ್ಳು ಸುಳ್ಳು ಭ್ರಮೆಗೆ ತಲೆ ಬಾಗದೆ ಮುನ್ನುಗ್ಗುತಿರು

ಅವಳಿಂದಾಗಿ ನಿನ್ನ ಬಾಳ ನೌಕೆ ನಡೆಯುತಿರಲಿಲ್ಲ ಗೆಳೆಯ
ನಿನ್ನ ನೌಕೆಯಲ್ಲಿ ಅವಳು ಅಲ್ಪಕಾಲದ ಪ್ರಯಾಣಿಕಳು ಅಷ್ಟೇ ತಿಳಿಯ
- Vರ ( Venkatesha ರಂಗಯ್ಯ )

ಮೋಸದಾಟದ ಪ್ರೀತಿ ಅವಳದಾಗಿದ್ದಿರಬಹುದು ಬಿಡು
ನನ್ನ ಪ್ರೀತಿ ನಿಜವಾಗಿದ್ದಿರಲು ಹೇಗನ್ನಲಿ ಬಿಟ್ಟು ಬಿಡು

ಹುಸಿ ಪ್ರೀತಿ ಕೊಟ್ಟವಳ ನಾನು ಇಂದು ನೆನೆಯುವುದಲ್ಲ
ನಾ ಪ್ರೀತಿಸಿದ ನನ್ನವಳ ನನ್ನಿಂದ ಮರೆಯಲಾಗುವುದಿಲ್ಲ

ನೆನೆ ನೆನೆದು ಅವಳ ನೆನಪಲ್ಲೆ ನಾ ಕೊರಗುತಿರುವುದಲ್ಲ
ಪ್ರೀತಿಯ ಆ ಕ್ಷಣಗಳೇ ನನ್ನ ಎಡೆಬಿಡದೆ ಕಾಡುತಿಹುದಲ್ಲ

ಮನಸ ಕೊಡುವಾಗ ಏನೋಂದನೂ ನಾ ಎಣಿಸಿರಲೇ ಇಲ್ಲ
ಅಳೆದು ಎಣಿಸಿ ಕೊಡಲು ಅದು ವ್ಯಾಪಾರವಾಗಿರಲೇ ಇಲ್ಲ

ಮುನಿಸಿಲ್ಲ ನನ್ನ ಮನದಿ ಇಂದು ಇಹುದು ಬರಿದೆ ಪರಿತಾಪ
ನಿಸ್ವಾರ್ಥ ಪ್ರೀತಿಯ ಮರೆಯೆ ಆಕೆಗೆ ತಟ್ಟದಿಹುದೇ ಶಾಪ

ಅವಳಲ್ಲ ನಾನು ಅನುಭವಿಸಿದೆ ಮೂರು ಜನುಮದ ಪ್ರೀತಿ
ಭ್ರಮೆಯಲ್ಲ ನೋಡು ನನ್ನನ್ನು ಇಲ್ಲಿ ಚುಚ್ಚಿ ಕೊಲ್ಲುತಿಹ ರೀತಿ

ನನ್ನ ಬಾಳ ನೌಕೆಗೆ ಅವಳಲ್ಲ ನಾವಿಕಳು ನಿಜದಿ ನನಗೆ ಗೊತ್ತು
ಎಳೆಯ ಬಹುದಿತ್ತು ಜೀವನದಬಂಡಿ ಆಗಿ ನಾವು ಜೋಡಿ ಎತ್ತು
-ಆಸು ಹೆಗ್ಡೆ

ಕಳೆದುಕೊಂಡಿರುವ ಪ್ರೀತಿಯ ನೆನೆಯುವುದರಲಿ ಪ್ರತಿಫಲ ಇಲ್ಲ
ಎಷ್ಟೇ ಅತ್ತರು, ಎಷ್ಟೇ ನೊಂದರು ಅವಳೇನು ಮರಳಿ ಬರುವುದಿಲ್ಲವಲ್ಲ
ಅವಳ ನೆನಪಲ್ಲೇ ಕೊರಗುವುದರಲ್ಲಿ ಅರ್ಥವಿಲ್ಲ
- Vರ ( Venkatesha ರಂಗಯ್ಯ )

ನೆನೆಯುವುದು ನೆನೆಯದಿರುವುದು ಎರಡೂ ನಮ್ಮ ಕೈಯಲ್ಲಿಲ್ಲ
ಸಾಂತ್ವನದ ನುಡಿ ಬೇಕು, ಆದರೆ ಕಾಲವೇ ಮದ್ದು ಅದಕ್ಕೆಲ್ಲ
-ಆಸು ಹೆಗ್ಡೆ.

(http://sampada.net/blog/veeravenki/24/03/2009/18289) ಒಂದೇ ಕಡೆ ಇರಲಿ ಅಂತ ಇಲ್ಲಿ ತಂದೆ, ಅಷ್ಟೆ.

Rating
No votes yet