ಹೀಗೊಂದು ಹರಿಕಥೆ (ಭಾಗ 1)

ಹೀಗೊಂದು ಹರಿಕಥೆ (ಭಾಗ 1)

ಅದೊಂದು ಭಾನುವಾರ ಮಧ್ಯಾಹ್ನ. ಭಾರತ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಏಕದಿನ ಕ್ರಿಕೆಟ್ ಪಂದ್ಯ. ನಮ್ಮವರು ಸೋಲುವರೆಂಬ ಖಾತ್ರಿ ಇದ್ದರೂ, ಪಂದ್ಯ ನೋಡಲು ಅದೇನೋ ಉತ್ಸಾಹ. ಕ್ರೀಡಾ ಸ್ಪೂರ್ತಿ ಎಂದರೆ ತಪ್ಪಾದೀತು. ಏಕೆಂದರೆ, ನಮ್ಮ ತಂಡ ಚೆನ್ನಾಗಿ ಆಡದಿದ್ದರೂ, ಎದುರಾಳಿ ಪಾಳಯವೇ ಏನಾದರೂ ತಪ್ಪೆಸಗಿ, ಸೋಲಲಿ ಎಂಬ (ಅತಿ?)ಆಸೆ. ನಮ್ಮ ಕಪಿ ಸೈನ್ಯ "ಮೂರ್ಖರ ಪೆಟ್ಟಿಗೆ "ಯ ಮುಂದೆ ಕುಳಿತು "ಸಮಯ ಕೊಲ್ಲುವುದರಲ್ಲಿ " ನಿರತವಾಗಿತ್ತು. ಸೈನ್ಯದ "ನಾಯಕ ವಾನರ" ಇಲ್ಲದಿದ್ದುರಿಂದಲೋ ಏನೋ, ಸದ್ದು ಗದ್ದಲವಿಲ್ಲದೆ ಕುಳಿತಿದ್ದ ಗುಂಪಿನಲ್ಲಿ ಅದಾಗಲೇ ಇಬ್ಬರು ನಿದ್ರಾ ದೇವಿಗೆ ಶರಣಾಗಿದ್ದರು.

ಇದ್ದಕ್ಕಿದ್ದಂತೆ ಕಾಲಿಂಗ್ ಬೆಲ್ "ಡಿಂಗ್ ಡಾಂಗ್"  ಸದ್ದು ಮಾಡಿತು. ಹೋಗಿ ಬಾಗಿಲು ತೆರೆದರೆ, ಕಾಣೆಯಾಗಿದ್ದ ಕಪಿಸೈನ್ಯದ ನಾಯಕ "ಕೆಂಪ" ಪ್ರತ್ಯಕ್ಷನಾಗಿದ್ದ. ಸದಾ ನಗುಭರಿತ ಮುಖದಲ್ಲಿ ಇಂದೇಕೋ ಏನೋ ದುಗುಡ. " ಏನಾಯ್ತೋ ಕೆಂಪ?. ಹೊಸ ಹುಡುಗೀನೂ ಕೈಕೊಟ್ಲಾ?", ಪ್ರಶ್ನೆಯ ಬಾಣ ನನಗರಿವಿಲ್ಲದೆಯೇ ಆತನನ್ನು ಕೆಣಕಿತ್ತು. "ಸದಾಶಿವನಿಗೆ ಅದೇ ಧ್ಯಾನ " ಅದೇನೋ ಅಂತಾರಲ್ಲ ಹಂಗಾಯ್ತು ನಿನ್ನ ಕತೆ. ನಮ್ಮ ಕಷ್ಟ ನಮಗೆ ಎಂಬ ಉದಾಸೀನ ಭಾವದ ಕ್ಷೀಣ ಸ್ವರವೊಂದು ಕೆಂಪನಿಂದ ಹೊರಟಿತು. ಸುಮ್ಮನಿರೋ, ಪಾಪ ಏನೋ ಆಗಿರಬೇಕು, ಏನಾಯ್ತು ಕೇಳೋಣ, ಎಂದು ನಮ್ಮ ಸಂಪೂರ್ಣ ಸೈನ್ಯ ಆತನ ಬೆಂಬಲಕ್ಕೆ ನಿಂತಿತು.

ಅಂಥದ್ದೇನೂ ಇಲ್ಲ ಕಣ್ರೋ, ಆದ್ರೆ  ನಾಳೆಯಿಂದ ನಾನು ಮಾತ್ರ ಆ "ಜಿಮ್"ಗೆ ಹೋಗೋದಿಲ್ಲ ಎಂದುಲಿದ ಕೆಂಪ. ಅಂಥದ್ದೆನಾಯ್ತೋ? "ಯಾಕ  ಹೀಂಗ ಅದ್ಲಿಕ್ ಹತ್ತಿ?. ತಲಿ ಸಮ ಇಲ್ಲೇನು?. ದುಡ್ಡ ಹೆಚ್ಚಾತೆನಲೇ ಮಗ್ನ ನಿಂಗ?. ಇಲ್ಲಾಂದ್ರೆ ಹನ್ನೊಂದು ಸಾವ್ರ ಕೊಟ್ಟು  ಮೊನ್ನಿ ಮೊನ್ನಿ 'ಜಿಮ್' ಸೇರಿದಿ. ಇವತ್ ಬಿಡಾಕ್ ಹತ್ತಿ. ನೀ ಕೆಲ್ಸಾ ಮಾಡೋ ಕಂಪನಿ ಏನರ ನಿಂಗ್ ರೊಕ್ಕ ಪುಕ್ಶಟಿ  ಕೊಡ್ತೈತೇನು? ಕಟ್ಟಿ ದುಡ್ಯುಹಾಂಗ ದುಡಿಸ್ತಾರು, ಬಿಕ್ಷೆ ಕೊಟ್ಟಂಗ್ ಕಾಸ್ ಕೊಡ್ತಾರು. ಇಲ್ ನೋಡಿದ್ರ ನೀ ಮಂಗ್ಯಾ  ನನ್ ಮಗ ಅಡಿದಂಗ ಆಡಾಕ್ ಹತ್ತಿ. ೧೧ ಸಾವ್ರ ಅಂದ್ರೆ ಏನು ಕಡಮಿ ಅಂತೆ ತಿಲ್ದಿದ್ಯೇನೋ?" ಪಕ್ಕ ಉತ್ತರ ಕರ್ನಾಟಕ ಭಾಷೆಯಲ್ಲಿ ಕೆಂಪನನ್ನು ದಬಾಯಿಸಿದ ಸಂತ್ಯಾ.

ಏನಾಯ್ತು ನೀ ಹೇಳೋ ಮೊದ್ಲು. ಉಳ್ಡಿದೆಲ್ಲ ಆಮೇಲೆ, ಎಂದು ನಾನು ಕೆಂಪನನ್ನು ವಿಚಾರಿಸುತ್ತಿದ್ದಂತೆ, ಕೆಂಪನ ಕಥಾ ಪ್ರವಾಹ ಶುರುಗೊಂಡಿತು.

 
(ಮುಂದುವರಿಯುವುದು)
ಈಗ ತಾನೇ ಶುರುವಾಗಿದೆ, ಹಾಗಾಗಿ ಇನ್ನೂ  ಇದೆ :)
link to part 2(http://sampada.net/blog/%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81-%E0%B2%B9%E0%B2%B0%E0%B2%BF%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-2/27/04/2012/36518)
pics:(http://starsportscricket.blogspot.in/)


 

Rating
No votes yet