ಹೀಗೊ0ದು ಪ್ರಹಸನ !!!
ಪಟಕ್ಕ ಗೊತ್ತೊ ಇಲ್ಲೊ ಗೊತ್ತಿಲ್ಲ...ಅದ ಹಾರಾಕ ಸೂತ್ರಾನು ಬೇಕು ಸೂತ್ರಧಾರನೂ ಬೇಕು ಹಂಗ ಕಣ್ಣಿಗೆ ಕಾಣದ ಗಾಳಿಯೂ ಬೇಕು ಅಂತ. ಅದು ತನ್ನ ಮ್ಯಾಲ ಯಾವ ಭಾರಾನೂ ಇಲ್ಲಂತ ತಿಳಿದ್ರ ಅದರಂಥ ಮೂರ್ಖತನ ಯಾವುದು ಇಲ್ಲ, ಯಾಕಂದ್ರ ಎಲ್ಲೋ ಬಿದ್ದ ಬಿದರನ್ನು ತಂದು, ಇನ್ನೆಲ್ಲೋ ಹರದು ಹೊಂಟಿದ್ದ ಹಾಳೀನ ಆಯ್ಕೊಂಡು, ಮರದ ಒಳಗಿನ ಅಂಟೋ, ಮನುಷ್ಯಾ ಕರೆದ ಫಿವಿಕಾಲೋ, ಇಲ್ಲ ಅಂದ್ರ ನೆನಿಸಿಟ್ಟ ಅವಲಕ್ಕಿಯೋ, ಹಳಸಿದ ಅನ್ನಾನೋ ಏನೋ ಒಂದ ಬಳಸಿ, ಹುರಿ ಹರಿದು ಬಾಲಾ ಮಾಡಿ, ದಾರಾ ತಂದು ಸೂತ್ರಾ ಮಾಡಿದ ಆ ಸೂತ್ರ ಧಾರನ ಕನಸಿನ ರೆಕ್ಕೆ ತಾನು ಎಂಬ ಅರಿವ ಅದಕ್ಕ ಐತೋ ಇಲ್ಲೊ ಅದೂ ಗೊತ್ತಿಲ್ಲ, ಗೊತ್ತಿದ್ದದ್ದ ಆದ್ರ ಅದೂ ಮ್ಯಾಲೇನ ಹಾರತಿತ್ತು ಗಿಡ ಗಂಟಿ, ಲೈಟಿನ ಕಂಬಕ್ಕ ಸಿಕ್ಕ ಅಷ್ಟು ಸುಲಭವಾಗಿ ಹರಿದು ಹೋಗ್ತಿದ್ದಿಲ್ಲ;
ಬರೀ ಅದರದೂ ತಪ್ಪಿಲ್ಲ, ಅಷ್ಟಕೊಂದ ಕನಸ ಕಟ್ಟಕೊಂಡ ಸೂತ್ರಧಾರಿಗೂ ಅದ ಹಾರಬೇಕಂದ್ರ ಸ್ವಲ್ಪ ಅದರದ ಆದ ಖಾಲಿ ಜಾಗ ಬೇಕು, ಗಾಳಿ ಬೀಸಿದ ಕಡೆ ಹಾರಾಕ ತನ್ನ ಕೈ ಯೋಳಗಿರುವ ದಾರಾನ ಸಡ್ಲ ಮಾಡಬೇಕು ಅನ್ನೋ ಸಣ್ಣ ತಿಳುವಳೀಕೆನೂ ಇಲ್ಲ. ಹಿಂಗಾಗೇ ರೀ ನಮ್ಮ ದಿನದ ಬದುಕಿನಾಗ ಎಷ್ಟೋ ಪಟಾನೂ ಹರಿದದ್ದ ನೋಡೀವಿ, ಸೂತ್ರಧಾರೀ ನೂ ಸೋತಿದ್ದ ನೋಡೀವಿ, ಎಲ್ಲ ತಪ್ಪನ್ನ ಕಾಣದ, ಆದರ ಇರೋ ಆ ಗಾಳಿ ಮ್ಯಾಲೇ ಹಾಕಿ ಡಬ್ಬಾಕ್ಕೊಂಡು ಮಲಗೋ ದರಬೇಸಿಗಳನ್ನು ನೋಡೇವಿ! ಹಂಗ ಪಟಾ ಹಾರಸೋ ಮಂದಿನೂ ಹೆಚ್ಚೋದು ಏನೂ ಕಮ್ಮಿ ಆಗಿಲ್ಲ, ಎಲ್ಲೋ ಒಬ್ರು ಇಬ್ರು ಗೆಲ್ಲೋದೂ ನಿಂತಿಲ್ಲ.........
ಇತಿ ಈ ಪಟ ಪ್ರಹಸನ ಸಂಪೂರ್ಣಂ........ !!!!!!!!!!!