ಹುಚ್ಚು ಹೊಳೆಯಲ್ಲಿ ತೇಲುತ್ತಾ ಮುಳುಗುತ್ತಾ.....

ಹುಚ್ಚು ಹೊಳೆಯಲ್ಲಿ ತೇಲುತ್ತಾ ಮುಳುಗುತ್ತಾ.....

ಹುಚ್ಚು ಹೊಳೆಯಲ್ಲಿ ತೇಲುತ್ತಾ ಮುಳುಗುತ್ತಾ.....

ಗೆಳೆಯ ಸುಗತಾ ಶ್ರೀನಿವಾಸರಾಜು ಬರೆದ 'ಬೆಂಗಳೂರೇಕೆ ಐ.ಟಿ. ಸಂಸ್ಕೃತಿಯನ್ನು ದ್ವೇಷಿಸುತ್ತದೆ?' ಎಂಬ ವರದಿಯೊಂದು ಹೋದ ವಾರದ 'ಔಟ್ಲುಕ್' ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ವರದಿಯಲ್ಲಿ ಮಾತಾಡಿರುವ ಬೆಂಗಳೂರಿನ ಹಿರಿಯ ನಾಗರೀಕರ ಹಾಗೂ ಅನ್ಯವೃತ್ತಿಗಳ ಜನರ ಅಭಿಪ್ರಾಯಗಳಲ್ಲಿ ಹೊಸದೇನಿಲ್ಲವಾದರೂ, ನಮ್ಮ ವಿವೇಕವನ್ನು ಉಳಿಸಿಕೊಂಡು ಜಾಗತೀಕರಣದ ಲಾಭ - ಪ್ರಯೋಜನಗಳನ್ನು ಪಡೆಡಯಲು ಮುಂದಾಗಬಾರದೇಕೆ ಎಂದು ಪ್ರಶ್ನಿಸುತ್ತಿರುವವರಿಗೆ ಇವುಗಳಲ್ಲಿ ಕೆಲವು ಉತ್ತರಗಳೂ, ಸೂಚನೆಗಳೂ ಇವೆ. ಮುಖ್ಯ ಸೂಚನೆ ಎಂದರೆ, ಒಂದು ಮಿತಿಯನ್ನು ಮೀರಿದ ಹಣದ ಹರಿವು ಎಲ್ಲ ವಿವೇಕವನ್ನೂ ಕೊಚ್ಚಿಕೊಂಡು ಹೋಗಬಲ್ಲುದು ಎಂಬುದು.

ಬೆಂಗಳೂರಿನ ಇಂದಿನ ದೊಡ್ಡ ಸಮಸ್ಯೆ ಎಂದರೆ, ಕೆಲವರಿಗೆ ತಮ್ಮ ಬಳಿ ಇದ್ದಕ್ಕಿದ್ದಂತೆ ಬಂದಿರುವ ಅಪಾರ ಹಣವನ್ನು ಹೇಗೆ ಖರ್ಚು ಮಾಡಬೇಕೆಂದು ಗೊತ್ತಾಗದ ದಿಗ್ಭ್ರಮೆಯಲ್ಲಿ ಎಲ್ಲ ವಿವೇಕ ಕಳೆದುಕೊಂಡಿರುವುದೇ ಆಗಿದೆ. ಇವರು 'ಔಟ್ಲುಕ್' ವರದಿ ಹೇಳುವಂತೆ ಬರೀ ಐ.ಟಿ. ಜನರಲ್ಲ. ಬೆಂಗಳೂರಿನ ಐ.ಟಿ.- ಬಿ.ಟಿ. ಆಸ್ಫೋಟದಿಂದ ಪ್ರಯೋಜನ ಪಡೆದುಕೊಂಡಿರುವ ಇತರೆಷ್ಟೋ ವೃತ್ತಿಗಳವರು ಇವರಲ್ಲಿ ಸೇರಿದ್ದಾರೆ. ಉದಾಹರಣರಗೆ ಭೂ-ವ್ಯವಹಾರ ಮಾಡುವವರು, ಕಟ್ಟಡ ಗುತ್ತಿಗೆದಾರರು, ಷೇರು ದಲ್ಲಾಳಿಗಳು, ಹೊಟೆಲ್ - ರೆಸಾರ್ಟ್‌ದಾರರು, ಮನರಂಜನಾ ಹಾಗೂ 'ಅಧ್ಯಾತ್ಮಿಕತೆ'ಯ ಉದ್ಯಮದವರು ಇತ್ಯಾದಿ. ಇವರೆಲ್ಲ ಸೇರಿ ಕಳೆದ ಐವ್ವತ್ತು ವರ್ಷಗಳಲ್ಲಿ ಬೆಂಗಳೂರನ್ನು ಸರಳ ಸುಂದರ ನಗರವನ್ನಾಗಿ ಸಂರಕ್ಷಿಸಿಕೊಂಡು ಬಂದಿದ್ದ ಬಡವರು ಮತ್ತು ಮಧ್ಯಮ ವರ್ಗದವರು ಇಂದು ಇಲ್ಲಿ ಮರ್ಯಾದೆಯಿಂದ ಬಾಳಲಾಗದ ಪರಿಸ್ಥಿತಿಯನ್ನು ನಿರ್ಮಿಸಿದ್ದಾರೆ. ಮರ್ಯಾದೆಯಿಂದ ಬಾಳುವುದು ಎನ್ನುವುದನ್ನು ಕೇವಲ ಜೀವನ ಮಟ್ಟದ ಮಾತನ್ನಾಗಿ ಮಾತ್ರವಲ್ಲ, ಜೀವನ ಶೈಲಿಯ ಮಾತನ್ನಾಗಿಯೂ ಅರ್ಥ ಮಾಡಿಕೊಳ್ಳಬೇಕಿದೆ. ಕಳೆದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರು ಒಂದೇ ರಾತ್ರಿಯಲ್ಲಿ ಕುಡಿದದ್ದು 15 ಕೋಟಿ ರೂಪಾಯಿಗಳ ಮದ್ಯವನ್ನು (ರಾಜ್ಯದ ಉಳಿದ ಭಾಗ ಬಳಸಿದ್ದು 10 ಕೋಟಿ ರೂಪಾಯಿಗಳ ಬೆಲೆಯ ಮದ್ಯವನ್ನು!) ಎಂದರೆ, ಬೆಂಗಳೂರು ಒಂದು ಸಂಸ್ಕೃತಿಯಾಗಿ ಎಂತಹ ಮತ್ತಿನಲ್ಲಿರಬೇಕು! ಈ ಮತ್ತಿನಲ್ಲಿ 'ವಿವೇಕ'ವೆಂಬುದು ಅರ್ಥಾ ಂತರಗೊಂಡಿದ್ದರೂ ಸಾಕು!

ಐ.ಟಿ. ಸಂಬಂಧಿತ ಉದ್ಯಮಗಳ ಪಾಳಿ ಕೆಲಸದ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಸದಾ ಪ್ರಾಣ ಭಯದಿಂದ ಕೆಲಸ ಮಾಡುವಂತಾಗಿರುವುದು - ಇತ್ತೀಚಿನ ದಿನಗಳಲ್ಲಿ ಕೊಲೆಗೆ ಈಡಾಗುತ್ತಿರುವುದೂ - ಆ ಉದ್ಯಮದ ಸ್ವರೂಪವೇ ಪ್ರೇರೇಪಿಸುವ ಜೀವನ ಶೈಲಿಯಿಂದಲೇ ಉದ್ಭವಿಸುವ ಅಪಾಯವಾಗಿದೆ ಎಂದು ಅವರ ಜೀವನ 'ಶೈಲಿ'ಗಳನ್ನು ಹತ್ತಿರದಿಂದ ಕಂಡವರ ಅಭಿಪ್ರಾಯವಾಗಿದೆ. ಇಂದು ಮೂಲ ಬೆಂಗಳೂರಿಗರು ಈ ಹೊಸ 'ಸಾಹುಕಾರ'ರನ್ನು ದ್ವೇಷಿಸಲು ಮುಖ್ಯ ಕಾರಣ; ಅವರು ಬೆಂಗಳೂರಿಗೆ ನಿಜವಾಗಿ ಏನನ್ನೂ ಕೊಡದೆ, ತಮ್ಮ ಜೀವನ ಶೈಲಿಗಳ ಒತ್ತಡಗಳು ಹಾಗೂ ಬೇಡಿಕೆಗಳ ಮೂಲಕ ಅದನ್ನು ನಾಶ ಮಾಡತೊಡಗಿರುವುದು. ಭೌತಿಕವಾಗಿ ಹಾಗೂ ಆತ್ಮಿಕವಾಗಿ - ಈ ಎರಡೂ ನೆಲೆಗಳಲ್ಲಿ. ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಇತ್ತೀಚೆಗೆ ಹೇಳಿರುವವರು ಭಾರತದ ಅತ್ಯಂತ ಶ್ರೇಷ್ಠ ವಿಜ್ಞಾನಿ ಎನಿಸಿರುವ ಡಾ|| ಸಿ.ಎನ್.ಆರ್.ರಾವ್ ಅವರು. ಅವರು 'ಔಟ್ಲುಕ್'ಗಾಗಿ ಸುಗತಾ ಅವರಿಗೆ
ಹೇಳಿರುವ ಮಾತುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ನೀಡುತ್ತಿರುವೆ:

'ನಾನೊಬ್ಬ ನಿಜವಾದ ಬೆಂಗಳೂರಿಗ. ಬಸವನಗುಡಿಯಲ್ಲಿ ಹುಟ್ಟಿ ಬೆಳೆದವನು. ಬೆಂಗಳೂರಿನ ದೊಡ್ಡ ಗುಣ ಎಂದರೆ, ಇಲ್ಲಿ ಸರಳ ಸಂತೋಷಕ್ಕೆ ಅವಕಾಶವಿತ್ತು. ವಿದ್ಯಾರ್ಥಿ ಭವನದಲ್ಲಿ ಒಂದು ಮಸಾಲೆ ದೋಸೆ ತಿಂದು ಕಾಫಿ ಕುಡಿದರೆ ಅದೇ ಒಂದು ದೊಡ್ಡ ಸಂತೋಷ. ಈಗ ಆ ಸಂತೋಷ ಬೆಂಗಳೂರಲ್ಲಿ ಕಾಣೆಯಾಗಿದೆ. ಈಗ ಇದೊಂದು ಭಯಂಕರ ನಗರವಾಗಿ ಬೇಳೆದಿದೆ. ಐ.ಟಿ. ಸ್ಫೋಟದ ಮುನ್ನ ಇಲ್ಲಿ ಕಾವ್ಯ ಹಾಗೂ ಸಂಗೀತ ಹೆಚ್ಚಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ನಗರ ಕೊಳೆತು ನಾರುತ್ತಿದೆ - ಐ.ಟಿ. ಕೈಗಾರಿಕೆಯವರು ತಂದು ಒಟ್ಟುತ್ತಿರುವ ಬೌದ್ಧಿಕ ಕಸವೂ ಸೇರಿದಂತೆ ಎಲ್ಲ ತರದ ಕಸ - ಕೊಳೆ ಊರು ತುಂಬಾ ಬಿದ್ದಿದೆ; ವಾತಾವರಣವನ್ನು ಮಲಿನಗೊಳಿಸಿದೆ. ಬೆಂಗಳೂರು ಒಂದು ಬೌದ್ಧಿಕ ನಗರವಾಗಿತ್ತು. ಇದನ್ನು ತೋಟಗಳ ನಗರ ಎಂದು ಕರೆಯಲಾಗುತ್ತಿತ್ತಾದರೂ, ಭಾರತದ ಇತರ ನಗರಗಳಿಗಿಂತ ಇಲ್ಲಿ ಹೆಚ್ಚು ವಿಜ್ಞಾನವಿತ್ತು. ಈಗ ಯಾರೂ ಈ ಬಗ್ಗೆ ಮಾತಾಡುವುದಿಲ್ಲ. ಇದು ಈಗ ಐ.ಟಿ. ನಗರ. ನಮ್ಮ ಹೆಚ್ಚೆಚ್ಚು ಯುವಜನರಿಗೆ ಒಳ್ಳೊಳ್ಳೆಯ ಸಂಬಳ ಸಿಗುವಂತಾಗುವುದು ಸಂತೋಷದ ವಿಷಯವೇ. ಆದರೆ ಅದು ಇತರ ವೃತ್ತಿಗಳ ಪ್ರಾಣವನ್ನೇ ಹೀರುವಂತಾಗಬಾರದು. ಕ್ಷಿಪ್ರ ಹಣದ ಹಿಂದೆ ಬಿದ್ದ ಬಹಳಷ್ಟು ಬುದ್ಧಿವಂತ ಯುವಜನರು ತಮ್ಮ ಬೌದ್ಧಿಕತೆಯ ಬಹು ಕಡಿಮೆ ಮಟ್ಟದ ವೃತ್ತಿಗಳಲ್ಲಿ, ಸಂಬಳದ ಮೇಲಿನ ಕೂಲಿಗಳಂತೆ ಕೆಲಸ ಮಾಡುತ್ತಿದ್ದಾರೆ. ಇದು ವಕ್ರ ಬೆಳವಣಿಗೆ. ಇದರಿಂದ ರಾಷ್ಟ್ರಕ್ಕೂ ಒಳ್ಳೆಯದಾಗದು. ಸಮಾಜದಲ್ಲಿ ಎಲ್ಲ ರೀತಿಯ ಸೃಜನ ಶಕ್ತಿಗಳ ಸಮತೋಲನವಿರಬೇಕು - ಒಳ್ಳೆಯ ಕವಿಗಳಿರಬೇಕು, ಒಳ್ಳೆಯ ಅರ್ಥಶಾಸ್ತ್ರಜ್ಞರಿರಬೇಕು, ಒಳ್ಳೆಯ ಇತಿಹಾಸಕಾರರಿರಬೇಕು, ಅತ್ಯುತ್ತಮ ವಿಜ್ಞಾನಿಗಳೂ, ಎಂಜಿನಿಯರ್‌ಗಳೂ ಇರಬೇಕು.

ಐ.ಟಿ.ಯಲ್ಲಿ ಜಗತ್ತಿನಲ್ಲೇ ಅಪೂರ್ವ ಸಾಧನೆ ಮಾಡಿರುವುದಾಗಿ ಹೇಳಿಕೊಳ್ಳುವ ನಮ್ಮ ದೇಶದಲ್ಲಿ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಏಕೆ ವರ್ಷಕ್ಕೆ ಕೇವಲ 25 ಪಿ.ಎಚ್.ಡಿ.ಗಳು ಮಾತ್ರ ಸಾಧ್ಯವಾಗುತ್ತಿದೆ? ಇದಕ್ಕೆ ಉತ್ತರ ಕೊಡುವರಾರು? ಕೆಲವರಿಗೆ ಅಪಾರ ಹಣ ತಂದು ಕೊಟ್ಟಿರುವುದರ ಹೊರತಾಗಿ ಐ.ಟಿ., ಇಲ್ಲಿ ಏನು ಸಾಧಿಸಿದೆ? ತನ್ನದೇ ಆದ ಒಂದು ಉತ್ತಮ ಗುಣಮಟ್ಟದ ವಿಶ್ವವಿದ್ಯಾಲಯವೊಂದನ್ನು ಕಟ್ಟಲು ಸಾಧ್ಯವಾಗಿದೆಯಾ ಅದಕ್ಕೆ? ನಮ್ಮ ಈ ಸಮಾಜ ಈ ನಗರದ ಮಾತ್ರವಲ್ಲ, ಇಡೀ ಭಾರತದ ಭವಿಷ್ಯವನ್ನು, ನಮ್ಮ ಮೌಲ್ಯ ವ್ಯವಸ್ಥೆಯನ್ನು ವಿಕೃತಗೊಳಿಸುತ್ತಿರುವ ಅನುಕರಣೆಯ ಮೂರ್ತಿಗಳನ್ನೂ, ಉದಾಹರಣೆಗಳನ್ನೂ ನಿರ್ಮಿಸುತ್ತಿದೆ. ನಮ್ಮ ಜನಕ್ಕೆ ಜ್ಞಾನ - ವಿಜ್ಞಾನಗಳ ಬಗ್ಗೆ ಗೌರವವೇ ಹೋಗಿಬಿಟ್ಟಿದೆ. ಹಣ ಹಾಗೂ ವಾಣಿಜ್ಯದ್ದೇ ಸಾಮ್ರಾಜ್ಯವೀಗ. ಐ.ಟಿ. ನಮ್ಮ ಆಧಾರ ಮೌಲ್ಯಗಳನ್ನೇ ನಾಶ ಮಾಡಹೊರಡುವುದಾದರೆ, ಬೆಂಗಳೂರಿಗೂ, ಐ.ಟಿ.ಗೂ ಒಟ್ಟಿಗೇ ಬೆಂಕಿ ಹಾಕಬಹುದು.'

ಸಿ.ಎನ್.ಆರ್. ರಾವ್ ಅವರ ಈ ಸಾತ್ವಿಕ ಕೋಪ ಸದ್ಯದ ಬೆಂಗಳೂರನ್ನು ಕುರಿತಾದದ್ದಾದರೂ, ಬೆಂಗಳೂರು ಐ.ಟಿ. ಲೋಕ ಪ್ರತಿನಿಧಿಸುವ ಕೆಳ ಮಟ್ಟದ ಬೌದ್ಧಿಕತೆಯೊಂದಿಗೆ ಬಹು ಮೇಲ್ಮಟ್ಟದ ಜೀವನ ಶೈಲಿ ಸಾಧ್ಯವಾಗಿರುವ ಬದುಕಿಗೊಂದು 'ಗೌರವಾನ್ವಿತತೆ' ಒದಗಿಸಿರುವ ಹೊಸ ಜೀವನ ಸಂಸ್ಕೃತಿಯನ್ನು ಕುರಿತಾದದ್ದೂ ಆಗಿದೆ ಎಂಬುದನ್ನೂ ನಾವು ಗಮನಿಸಬೇಕು. ದಿನೇ ದಿನೇ ಬಹು ಜನಪ್ರಿಯವಾಗುತ್ತಿರುವ ಅಂದರೆ ಈ 'ಗೌರವಾನ್ವಿತತೆ'ಗೆ ಪಾತ್ರವಾಗುವ ಹಂಬಲ ಇಟ್ಟುಕೊಂಡವರ - ಈ 'ಕು'ಸಂಸ್ಕೃತಿ ಉಂಟು ಮಾಡುತ್ತಿರುವ ಸಾಮಾಜಿಕ ಒತ್ತಡಗಳನ್ನು ಯಾರೂ ಅಷ್ಟು ಗಂಭೀರವಾಗಿ ಗಮನಿಸಿದಂತಿಲ್ಲ: ಮಕ್ಕಳು ಪೋಷಕರ ನಿರೀಕ್ಷೆ ಮುಟ್ಟಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿವೆ; ಹದಿ ಹರೆಯಕ್ಕೂ ಕಾಲಿಡದ ಹುಡುಗರು ಸುಪಾರಿ ಪಡೆದು ಕೊಲೆಗಳಿಗೆ ಕೈ ಹಾಕತೊಡಗಿದ್ದಾರೆ, ಉನ್ನತ ಮಟ್ಟದ ಶಾಲೆಗಳಲ್ಲಿ ಮಕ್ಕಳು ತಮ್ಮ ಬಾಲ ಜಗಳಗಳನ್ನು ಅಪ್ಪನ ಪಿಸ್ತೂಲನ್ನು ಬಳಸಿ ಪರಿಹರಿಸಕೊಳ್ಳತೊಡಗಿದ್ದಾರೆ; ಮಕ್ಕಳಿಗೆ ಉದಾಹರಣೆಗಳಾಗಬೇಕಾಗಿರುವ ಉಪಾಧ್ಯಾಯರುಗಳೇ ಪರೀಕ್ಷಾ ಉತ್ತರ ಪತ್ರಿಕೆಗಳನ್ನು ಬದಲಾಯಿಸುವುದನ್ನು ಒಂದು ದಂಧೆ ಮಾಡಕೊಳ್ಳತೊಡಗಿದ್ದಾರೆ; ವಿಶ್ವವಿದ್ಯಾಲಯಗಳ ಪ್ರಶ್ನೆ ಪತ್ರಿಕೆಗಳು ಯಾವುದೇ ಅಡೆತಡೆ ಇಲ್ಲದೆ ಒಂದಾದರ ಮೇಲೊಂದರಂತೆ ಬಯಲಾಗುತ್ತಲೇ ಇವೆ; ಕಣ್ಣೆದುರಿಗೇ ನೂರಾರು ಕಾರ್ಮಿಕರನ್ನೂ, ಯಂತ್ರಗಳನ್ನೂ ಬಳಸಿಕೊಂಡು ಸಾವಿರಾರು ಎಕರೆ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಪ್ರಭುತ್ವಕ್ಕೆ ಅದನ್ನು ಗಮನಿಸಲಾಗದಂತಹ ಕುರುಡು ಉಂಟಾಗಿದೆ;ಸರ್ಕಾರಿ ಖಜಾನೆಯನ್ನು ಲೂಟಿ ಹೊಡೆದು ಮೂಟೆಗಟ್ಟಲೆ ಹಣ ಸಂಗ್ರಹಿಸಿಟ್ಟುಕೊಂಡು, ಆದರೆ ಕಿಂಚಿತ್ತೂ ಸಂಕೋಚವಿಲ್ಲದೆ ರಾಷ್ಟ್ರ ನಿರ್ಮಾಣದ ಮೌಲ್ಯಗಳ ಬಗ್ಗೆ ಮಾತಾಡುವ ರಾಜಕಾರಣಿಗಳು ಹಾಗೂ ಅದಕ್ಕಿಂತ ಮುಖ್ಯವಾಗಿ, ಎಲ್ಲ ಗೊತ್ತಿದ್ದೂ ಅವರ ಮಾತುಗಳಿಗೆ ಮೆಚ್ಚುಗೆಯಿಂದ ಚಪ್ಪಾಳೆ ತಟ್ಟುವ - ಆತ್ಮಸಾಕ್ಷಿ ಕಳೆದುಕೊಂಡ - ದೊಡ್ಡ ಜನಸ್ತೋಮವೊಂದು ಇಂದು ಎದ್ದು ನಿಂತಿದೆ.

ಹೀಗೆ ಇಡೀ ವ್ಯವಸ್ಥೆ ಕುಸಿದು ಅರಾಜಕವಾಗುವ ಶೀಲ ಶಿಥಿಲತೆಯ ಭಯಾನಕ ಉದಾಹರಣೆಗಳು ಒಂದೊಂದೇ ಬೆಳಕಿಗೆ ಬರತೊಡಗಿದ್ದರೂ, ನಾವು - ಸಾಮಾನ್ಯ ಜನ - ಇದೆಲ್ಲ ಎಲ್ಲ ಕಾಲದಲ್ಲೂ ಇರುವಂತಹುದೇ ಎಂದು ಈ ಬಗ್ಗೆ ಒಂಚೂರೂ ವಿಚಲಿತರಾಗದೆ; ಲೋಕಾಭಿರಾಮವಾಗಿ, ಹೊಸ ಭೋಗವಾದದ ಏಣಿ ಹತ್ತಿ ಆಕಾಶ ಮುಟ್ಟುವ ರೋಮಾಂಚನದ ನಮ್ಮ ಅವಕಾಶಕ್ಕಾಗಿ ಸರತಿ ಸಾಲಿನಲ್ಲಿ ಕಾದು ನಿಂತಿದ್ದೇವೆ. ಅಷ್ಟು ಅಪ್ಯಾಯಮಾನವಾಗಿದೆ, ಅಮಲಿನಿಂದ ಕೂಡಿದೆ ಈ ಹೊಸ ಗ್ರಾಹಕ 'ಮಾಲ್' ಜಗತ್ತು. ಇಲ್ಲದಿದ್ದರೆ, ಎಲ್ಲ ದೇಶಗಳು ತಂತಮ್ಮ ಉತ್ಪಾದನಾ ಹಾಗೂ ಬಳಕೆದಾರಿಕೆಯ ಪದ್ಧತಿ ಹಾಗೂ ವಿನ್ಯಾಸಗಳನ್ನು ಬದಲಿಸಿಕೊಂಡು ವಿಷಕಾರಿ ಇಂಗಾಲದ ಅನಿಲಗಳನ್ನು ವಿಸರ್ಜನೆಯನ್ನು ಕ್ರಮೇಣ ಶೇ.25ರಿಂದ 45ರಷ್ಟು ಕಡಿಮೆ ಮಾಡಿಕೊಳ್ಳದಿದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಜಗತ್ತು ಪ್ರವಾಹಗಳಿಗೆ ಸಿಕ್ಕಿ ಮುಳುಗುವುದು; ಹಾಗೆ ಮುಳಗದೆ ಉಳಿದ ಜಗತ್ತು ಉಸಿರು ಕಟ್ಟಿ ಬೆಂದು ಸಾಯುವುದು ಎಂಬ ಪರಿಸರ ವಿಜ್ಞಾನಿಗಳ ಕಟು ಎಚ್ಚರಿಕೆಯ ಬಗ್ಗೆ ಮೊನ್ನೆ ಬಾಲಿಯಲ್ಲಿ ಮುಕ್ತಾಯಗೊಂಡ ಹವಾಮಾನ ಬದಲಾವಣೆ ಕುರಿತ ವಿಶ್ವ ಸಮ್ಮೇಳನ ಏಕೆ ಅಷ್ಟು ಲಘುವಾದ ನಡಾವಳಿಯನ್ನೇಕೆ ಅಳವಡಿಸಿಕೊಳ್ಳುತ್ತಿತ್ತ್ತು? ಭಾರತವೇನೋ, ಸ್ವಚ್ಛ ತಂತ್ರಜ್ಞಾನದ ವರ್ಗಾವಣೆಗೆ ಆಗ್ರಹದ ತನ್ನ ನಿಲುವು ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳುತ್ತಿದೆ.ಆದರೆ ಕ್ಯೋಟೋ ಒಪ್ಪಂದಂತೆ ಯಾವ ದೇಶವೂ ವಿಷಕಾರಿ ವಿಸರ್ಜನೆಯ ತನ್ನ ಗುರಿಗಳನ್ನು ಮುಟ್ಟಲಾಗದಿರುವ ಮತ್ತು ಸದ್ಯದ ಅತಿ ಗ್ರಾಹಕವಾದಿ ಅಪಾರ ಕಸೋತ್ಪತ್ತಿಯ ಹೊಸ ಜೀವನ ಶೈಲಿಯ ಹರಿಕಾರನಾದ ಅಮೆರಿಕಾದ ಮೇಲೆ ಮಾಲಿನ್ಯ ತಡೆಯ ನಿರ್ದಿಷ್ಟ ಗುರಿಗಳನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗದಿರುವ ದೌರ್ಬಲ್ಯ - ಅಸಹಾಯಕತೆಗಳೊಂದಿಗೆ ಈ ಸಮ್ಮೇಳನ ಮುಕ್ತಾಯಗೊಂಡಿದೆ. 2009ರ ಕೋಪನ್ ಹೇಗನ್ ಸಮ್ಮೇಳನದ ಹೊತ್ತಿಗೆ ಎಲ್ಲ ದೇಶಗಳೂ ಒಪ್ಪುವಂತಹ ನಿರ್ದಿಷ್ಟ ಗುರಿಗಳ ಒಪ್ಪಂದವನ್ನು ಸಿದ್ಧಪಡಿಸುವ ಆಶಯವನ್ನಷ್ಟೆ ಇದು ವ್ಯಕ್ತಪಡಿಸಿದೆ! ಜಗತ್ ವಿನಾಶಕವಾದ ಈ ದೌರ್ಬಲ್ಯಗಳಿಗೆ ಮುಖ್ಯ ಕಾರಣ, ಪ್ರತಿ ದೇಶವೂ ಹೊಸ ಕೈಗಾರಿಕೀಕರಣದ ಸ್ಪರ್ಧೆಯಲ್ಲಿದ್ದು, ಯಾವ ದೇಶಕ್ಕೂ ತನ್ನ 'ಪ್ರಗತಿ'ಯ ನೆಲೆಗಳನ್ನು ಬದಲಾಯಿಸಿಕೊಳ್ಳಬೇಕೆಂಬ ಅರಿವೇ ಉಂಟಾಗದಂತಹ ಹೊಸ ಜೀವನ ಶೈಲಿಯ ಅಮಲಿನಲ್ಲಿರುವುದು. ಹೀಗಾಗಿ ಜಗತ್ತಿನ 'ಅಮೆರಿಕನ್ನೀಕರಣ'ವೆಂಬ ಜಾಗತೀಕರಣ ಪ್ರಕ್ರಿಯೆ ಒಂದು ಜಾಗತಿಕ ರಾಜಕೀಯ ಕಾರ್ಯಕ್ರಮವಾಗಿ ಎಗ್ಗಿಲ್ಲದೆ ಸಾಗಿದೆ. ಬೆಂಗಳೂರೂ, ನಾವೂ, ನಮ್ಮ ಮಕ್ಕಳೂ ನಮ್ಮದೇ ರೀತಿಯ ಪ್ರತಿರೋಧಗಳ ನಡುವೆಯೂ ಇದಕ್ಕೆ ಹೊರತಾಗಲಾರದ ಪರಿಸ್ಥಿಗೆ ಸಿಕ್ಕಿ ಬಿದ್ದಿದ್ದೇವೆ. ಇದರ ಮಧ್ಯೆ ವಿವೇಕವನ್ನು ಹುಡುಕುವುದು ಕುರುಕ್ಷೇತ್ರದ ಮಧ್ಯೆ ಧರ್ಮವನ್ನು ಹುಡುಕಿದಂತೆಯೇ ಸರಿ. ಆದರೂ ಧರ್ಮ ಉಳಿದು ಕಾಣಿಸಿಕೊಳ್ಳಲೇ ಬೇಕಲ್ಲ! ಉಳಿಯದಿದ್ದರೆ ಅದು ಧರ್ಮವಾದರೂ ಹೇಗಾದೀತು? ಬಹುಶಃ ಈ ಆಸೆಯಲ್ಲೇ, ಈ ನಿರೀಕ್ಷೆಯಲ್ಲೇ ಸಿ.ಎನ್.ಆರ್.ರಾವ್ ಹಾಗೂ ಅವರಂತೆ ಯೋಚಿಸುವ ಜನ ಇನ್ನೂ ಭರವಸೆಯಿಂದ ಬದುಕಿರುವುದು!

ಅಂದ ಹಾಗೆ: ಇಪ್ಪತ್ತು ದಿನಗಳ ಹಿಂದೆ ದೆಹಲಿಯಲ್ಲಿ ಗೆದ್ದ ಟೆಸ್ಟ್ ಸಂಭ್ರಮವನ್ನು ಡ್ರಾ ಮಡಿಕೊಂಡ ಬೆಂಗಳೂರು ಟೆಸ್ಟ್ನಲ್ಲಿ ಮುಖ ಕಿವಿಚಿಕೊಂಡು ಆಚರಿಸುವುದೇ ಇಂದು ಕ್ರಿಕೆಟ್ ಸಂಭ್ರಮ ಎನ್ನಿಸಿಕೊಂಡಿದೆ! ಸರಣಿ ಉಳಿಸಿಕೊಳ್ಳುವ ಜಾಣತನದಿಂದಾಗಿ ತನ್ನೂರ ಜನರ ಹಾಗೂ ತನ್ನ ತಂಡದ ನಿಜವಾದ ಸಂಭ್ರಮಕ್ಕೆ ಕಾರಣವಾಗಬಹುದಾಗಿದ್ದ ಬೆಂಗಳೂರು ಟೆಸ್ಟ್ ಗೆಲುವಿನ ಸಾಧ್ಯತೆಯನ್ನೇ ಚಿವುಟಿ ಹಾಕಿದ ಕುಂಬ್ಳೆ ನಿಜವಾಗಿ ಒಳ್ಳೆಯ ನಾಯಕರೇ? ಕುಂಬ್ಳೆ ಬುದ್ಧಿವಂತರಿರಬಹುದು - ಅದನ್ನು ಅವರ ಬೌಲಿಂಗ್ ವೈವಿಧ್ಯತೆ ವಿಕಾಸವಾಗುತ್ತಿರುವ ರೀತಿ ನೀತಿಗಳಲ್ಲೇ ಗಮನಿಸಬಹುದು. ಆದರೆ, ತನ್ನ ತಂಡದ ಶಕ್ತಿಯ ಬಗ್ಗೆ ಖಚಿತ ಕಲ್ಪನೆ ಇರದ ಹಾಗೂ ಎದುರಾಳಿ ತಂಡದ ಶಕ್ತಿಯನ್ನು ಅಂದಾಜು ಮಾಡಲಾಗದವ ಒಳ್ಳೆಯ ನಾಯಕನೆನಿಸಿಕೊಳ್ಳಲಾರ. ಒಳ್ಳೆಯ ನಾಯಕನೆನಿಸಿಕೊಳ್ಳಲು ಬುದ್ಧಿವಂತಿಕೆಯ ಜೊತೆಗೆ ಕ್ರೀಡಾ ಮನೋಭಾವದ ಧೀರತೆಯೂ ಬೇಕು. ಬೆಂಗಳೂರು ಟೆಸ್ಟ್ ನ ಕೊನೆಯ ದಿನ ಭೋಜನ ವಿರಾಮದ ವೇಳೆಗೆ ಮುನ್ನೂರಕ್ಕೂ ಹೆಚ್ಚು ರನ್ನುಗಳ ಮುನ್ನಡೆಯಿದ್ದರೂ, ಪಾಳಿಯನ್ನು ಘೋಷಿಸಿಕೊಳ್ಳದೆ ಆತ್ಮವಿಶ್ವಾಸದ ಕೊರತೆಯನ್ನು ಪ್ರದರ್ಶಿಸಿದ ಕುಂಬ್ಳೆ, ಕ್ರಿಕೆಟ್ ಆಟ ಇರುವುದು ಜನರ ಸಂತೋಷಕ್ಕಲ್ಲ, ತಂಡಗಳ ವಾಣಿಜ್ಯ ಶ್ರೇಯಾಂಕ ನಿರ್ಧಾರಕ್ಕೆ ಎಂದು ಭಾವಿಸಿದಂತಿದೆ.

ಹಣ ಎಲ್ಲವನ್ನೂ, ಎಲ್ಲರನ್ನೂ ಹಾಳು ಮಾಡಿದೆ - ತನ್ನ ಸರಳ ಸಂತೋಷಕ್ಕಾಗಿ ಮನುಷ್ಯ ರೂಪಿಸಿಕೊಂಡ ಕ್ರೀಡೆಗಳ ಮೂಲ ನೆಲೆಗಳನ್ನೂ, ಅದನ್ನು ನಂಬಿ ಬಂದ ಮುಗ್ಧ ಯುವಜನರನ್ನೂ.

Rating
No votes yet