ಹುಟ್ಟು ಸಾವಿನ ಗುಟ್ಟ ತಿಳಿಯಬೇಕು

ಹುಟ್ಟು ಸಾವಿನ ಗುಟ್ಟ ತಿಳಿಯಬೇಕು

 

 

ನಾನು ನಾನೆನ್ನದಿರು ಎಲೆಮಾನವ ಎಂಬ

ದಾಸರಾ ನುಡಿ ಕಿವಿಯೊಳನುರಣಿಸಿದೆ
ನನ್ಹೊರತು ಯಾರಿಲ್ಲ ನಾನೆ ಬಲ್ಲೆನು ಎಂದು
ಕಾಸರಿಕೆ ಕಮಲದೊಲು ಓಲಾಡಿದೆ
 
ಕಣ್ಮುಂದೆ ಹೆಣಬಿದ್ದು ನಮ್ಮೆದುರೆ ಮಣ್ಣಾದ್ರೂ
ಹೆಣ್ಣು ಹೊನ್ನಿನ ಹುಚ್ಚು ಬಿಡದಾಗಿದೆ
ಮಣ್ಣಲ್ಲಿ ಸೇರುವುದು ನನ್ನ ಜೀವನವೆಂದೋ
ಬಣ್ಣ ಕಳಕೊಳ್ಳುವುದು ವಿಧಿಯಾಗಿದೆ
 
ನನ್ನ ಇಷ್ಟರು ಮಿತ್ರರೆಲ್ಲ  ಎಲ್ಲಿಯೋ ಹೋದ್ರು
ಕಣ್ಣೀರ ಸುರಿಸಿ ದಿನ ಕಳೆದಾಯಿತು
ಮುನ್ನ ಮರೆತಿಹೆ ನಾನು ನನ್ನ ಬಾರಿಯು ಬರಲು
ಎನ್ನುಸಿರ ಮೃತ್ಯು ಪಾಶವು ಸೆಳೆವುದು
 
ಜೀವನದ ಗತಿಚಕ್ರ ಉರುಳುರುಳಿ ಸಾಗುತಿದೆ
ನಾನು ನೀನೆಂಬುದನು ಮರೆತು ಸಾಗು
ಇಂಬುಗೊಡದಿರು ಸ್ವಾರ್ಥ ಸೆಲೆಯೊಡೆಯೆ ಜೀವನದಿ
ಬಿಂಬವಿದು ಪ್ರತಿಬಿಂಬ ಅಂಬುಜಾಕ್ಷನದು
 
ಬರಹದಲಿ ತರಿಯುತಲಿ ಜನರ ಭಾವನೆಗಳನು
ಬರಹಗಾರನಾನೆಂಬ ಹಮ್ಮದೇಕೋ?
ಪರಹಿತವ ಬಯಸೆದೆಲೆ ರಿಕ್ತ ಜೀವನನಡೆಸಿ
ಅರುಹಿದರೆ ಅಧ್ಯಾತ್ಮ ಜಗಕೆ ಬೇಕೋ?
 
ನಾನೆ ವಿದ್ಯಾವಂತ ಬುದ್ಧಿವಂತನು ನಾನು
ನಾನೆ ಸಂಗೀತಜ್ಞ ವಿಜ್ಞಾನಿನಾ
ನಾನೆ ಶಿಕ್ಷಣ ತಜ್ಞ ಶಾಸ್ತ್ರಜ್ಞನೂ ನಾನೆ
ನಾನೇ ಪಂಡಿತನೆಂಬ ಹಮ್ಮದೇಕೋ
 
ಶಾಸ್ತ್ರವೇತ್ತರ ವಿನಯ ಶಾಲಿಗಳ ನಾಡಿದುವೆ
ಶಸ್ತ್ರ ಶಾಸ್ತ್ರಗಳ ಪರಿಣಿತರ ನೆಲೆವೀಡು 
ವಿಜ್ಞಾನಿ ಸುಜ್ಞಾನಿ ಪ್ರಜ್ಞಾನಿಗಳ ಬೀಡು
ತಜ್ಞ ತೇಜಸ್ವಿ ಬ್ರಹ್ಮರ್ಷಿಗಳ ನಾಡು
 
ಇಂಥ ನಾಡೊಳು ಜನಿಸಿ ಜೀವನದ ಅರ್ಥವನು
ತಿಳಿಯದೆಲೆ ನಾನು ನಾನೆಂದು ಸೆಣಸಿ
ಎಂಥ ಪಾಡನು ಪಟ್ಟೆ ನಿಯಮಗಳ ಮುರಿದಿಟ್ಟೆ
ಬದುಕನ್ನು ವ್ಯರ್ಥವೇ ಕಳೆದು ಬಿಟ್ಟೆ
 
ಬದುಕ ಮೌಲ್ಯಗಳನ್ನು ತಿಳಿದು ಬಾಳಲೆಬೇಕು
ಬದುಕಿನವಧಿಯನು ಸಾರ್ಥಕಗೊಳಿಸುತ
ಬದುಕ ಬದುಕುತ ಕಳೆದು ಬದುಕಿನರ್ಥವತಿಳಿದು
ಹುಟ್ಟು ಸಾವಿನ ಗುಟ್ಟ ತಿಳಿಯಬೇಕು
 
 
 
Rating
No votes yet

Comments