ಹುಣ್ಣಿಮೆ...

ಹುಣ್ಣಿಮೆ...

 

ಶಿಶಿರದ ರಾತ್ರಿ,

ಮೂಡುತ್ತಿತ್ತು ಬೆಳ್ಳಿಗಿಂಡಿ ಹೊಳೆಹೊಳೆದು,

ಕರೆಯುತ್ತಾ ಸುತ್ತಲು ತಾರೆ ಚಕೋರಿಗಳನ್ನು,

ನಡುನಡುವೆ ಏರುತ್ತಿತ್ತು ತಡೆತಡೆದು...

 

ಪಚ್ಚೆಹಸಿರು ಎಲೆಗಳ ಮಧ್ಯೆ ಮೊಗತೂರಿ

ಕಣ್ಣಿಟ್ಟು ನೋಡುತ್ತಿದ್ದಾನೆ ನೆಲಕ್ಕೆ,

ಇಳಿದಿಳಿದು ಕಾಲ್ತೊಟ್ಟು ಹರಿದಾಡುತ್ತಿದ್ದಾನೆ

ತಳಕ್ಕೆ, ಮರದ ಬುಡಕ್ಕೆ...

 

ಹಾಲು ಬೆಳಕು ಇಳಿಯಿತು ಭೂಗರ್ಭದೊಳಗೆ,

ತಂಪು ಮೈ ಒಳಒಳಗೆ ಬಿಸಿಯಾಯಿತು ಸ್ಪರ್ಶಕ್ಕೆ,

ಅಂಗುಲ, ಅಡಿ, ಇಡಿಇಡಿಯಾಗಿ ಆವರಿಸಿತು ಮೈತುಂಬ,

ಬುವಿಯಾಗಿತ್ತು ಪ್ರತಿಚಂದ್ರ ಕ್ಷೀರಸ್ನಾನಕ್ಕೆ...

 

ಗ್ರಹತಾರೆಗಳೆಲ್ಲವು ಭಣಗುಡುತ್ತಿದ್ದವು ತಂತಮ್ಮ ಕಾಂತಿಕಳೆದು,

ರೋಹಿಣಿ ಮಾತ್ರ ಮಿನಿಗುತ್ತಿದ್ದಳು ಶಶಿಯ ಕೈ ಹಿಡಿದು,

ತಿಂಗಳ ರಾತ್ರಿ ತಮ್ಮದೆಂದು, ಸಿಂಗರಿಸಿಕೊಂಡಿದ್ದಳವಳು ಬೀಗಿ,

ಹೌದು, ಮೆರೆಯುತ್ತಿದ್ದ ಕಾಮ ಅವರಿಬ್ಬರ ಕಣ್ಗಳಲ್ಲಿ ಕುಣಿದು...

 

ಯೋಚಿಸುತ್ತಿದ್ದೆ, ಪ್ರತಿ ತಿಂಗಳ ರಾತ್ರಿಯ ಬೆಳಕಿನ ಧಾರೆಯ ಗುಟ್ಟು...

ಬುವಿಯ ಸಾಗರದ ಕನ್ನಡಿಯಲಿ ತನ್ನ

ಪೂರ್ಣಬಿಂಬವ ಕಂಡು ನಕ್ಕು ಬಿಡುವ ಶಶಿ -

ರೋಹಿಣಿ ಅಂದಳು, ಅಂದು ಹುಣ್ಣಿಮೆಯಿತ್ತು...
Rating
No votes yet

Comments