'ಹುತ್ತ ' ಕಾದಂಬರಿಯ ಒಂದು ಪುಟ

'ಹುತ್ತ ' ಕಾದಂಬರಿಯ ಒಂದು ಪುಟ

ಚಿತ್ರ

ಇದು ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ. ಅಥಣಿ ಭಾಗದ ಹಳ್ಳಿಯ ಜನರ ಕತೆ ಇದು.   ಅಲ್ಲಿಯ ಮಾತಿನ ರೀತಿ ಹಾಗೂ ಜೈನ ಧರ್ಮದ ಕುರಿತಾದ ತಿಳಿವಳಿಕೆ ನಮಗೆ ಆಗುತ್ತದೆ.  

 

ಅಲ್ಲಿ ನನಗೆ ಇಷ್ಟವಾದ ಒಂದು ಪುಟ - ಯಥಾವತ್ತಾಗಿ ಇಲ್ಲಿದೆ. (ಇದು ಒಂದು ಪ್ರವಚನದ ಭಾಗ)

 

"ನೋಡ್ರಿ ಜೀವನಾ ಹಿಂಗ ಏತಿಲಾ... ರಾಜಮತಿ ದೊಡ್ಡ ರಾಜಕುಮಾರಿ ಆಗಿದ್ದಳು. ರಾಜಕುಮಾರ ನೇಮಿನಾಥರ ಕೈ ಹಿಡಿದು ರಾಜ್ಯಭೋಗದ ಕನಸು ಅವಳಿಗಿತ್ತು. ಅದು ಅವಳ ಮದುವಿ ದಿನಾ ಕೈಯಲ್ಲಿ ಹೂವಿನ ಹಾರ, ಸುತ್ತಲೂ ದಾಸಿಯರು, ತಮ್ಮ ಅರಮನಿ ಗವಾಕ್ಷಿಯೊಳಗೆ ನಿಂತು ನೇಮಿನಾಥರು ಮೆರವಣಿಗೆ ಒಳಗ ಬರೂದನ್ನು ನೋಡಿ ಅವಳ ಮನಸ್ಸಿನ್ಯಾಗ ಅನಂದ ಅಂದ್ರ ಆನಂದ ತುಂಬಿ ಬಿಟ್ಟಿತ್ತು. ಅಂತಾ ರಾಜಕುಮಾರನ ಕೈಹಿಡಿಯೂ ಆನಂದ ಅದಲಾ... ಅದು ಬಾಳ ದುರ್ಲಭ ಐತಿ, ಹಂತಾ ಒಂದು ಅವಕಾಶ ರಾಜಮತಿ ಮಹಾರಾಣಿಗಿ ಈಗ ಬರೂದ ಇತ್ತು.. ಆದ್ರೆ ಯಾನಾತ್ರಿ... ಈ ವೈರಾಗ್ಯ ಹಿಂಗs ಏತಿಲಾ ಯಾವಾಗ ಮನಸ್ಸನ್ನ ಆಕ್ರಮಿಸಿಕೊಂಡ ಬಿಡತೈತಿ ಅನ್ನುದು ಹೇಗೆ ಬರೂದಿಲ್ಲ. ಅದು ಭಗವಾನರ ಸಂಕಲ್ಪದಿಂದ ಆಗೂವಂತಾದ್ದು.... ಸಕಲ ಮರ್ಯಾದಿ ವಾದ್ಯ ವೈಭೋಗದಿಂದ ಮೆರವಣಿಗೆ ಬರಾಕ ಹತ್ತಿತ್ತು... ಮಂದಿಯೆಲ್ಲಾ ಆ ಆನಂದದೊಳಗ ಮೈಮರತಿದ್ರ. ಆದ್ರ ಮನಸ್ಸು ಇದು ಜಾಗೃತ ಏತಿ, ನೇಮಿನಾಥರ ಕುಂತ ರಥದ ಗಾಲಿ ಕೆಳಗ ಒಂದು ಮಂಡೂಕಾ... ಯಾನ ಅಂತೀರಿ ಅದಕಾ ಕಪ್ಪಿ... ಹಾಂ ಕಪ್ಪಿ ಏತಿಲಾ ಅದು ಸಿಕ್ಕ ವಿಲಿವಿಲಿ ಒದ್ಯಾಡಿ ಸತ್ ಹೋತ ನೋಡ್ರಿ. ಆಗ ಯಾನಾತ್ರಿ? ಆ ಕಪ್ಪಿ ಸಾಯುವಾಗ ಒದ್ದಾಡಿ ಚೀರಾಡಿ ಸತ್ತ ಹೋತ್ರಿ, ಸಮ್ಯಕ್ ಜೀವ ಮಾತ್ರ ಶಾಂತವಾಗಿ ಪ್ರಾಣ ತ್ಯಾಗ ಮಾಡತಾವು. ಅದ್ರ ಅದು ತಿರ್ಯಂಚ ಸ್ಥಿತಿ ಒಳಗ ಇತ್ತು. ಹಿಂಗಾಗಿ ಅದರ ಜೀವ ಹರಣದ ನೈಮಿತ್ಯಕರು ಮುಂದ ಭಗವಾನರಾಗೂ ನೇಮಿನಾಥರು ಅಂಬೋದು ಆ ಜೀವಕ್ಕೆ ತಿಳಿಲಿಲ್ಲ, ಅದಕs ಅದು ಚೀರಿತು. ಆ ದನಿ ಯಾರಿಗೂ ಕೇಳಿಸಲಿಲ್ಲ... ಕೇಳಿಸಲಿಲ್ಲಾ... ಅದು ಹ್ಯಾಂಗ ಕೇಳಿಸತೈತ್ರಿ? ಸಂಸಾರ ಬಂಧದೊಳಗೆ ಸಿಕ್ಕಂತಾ ಜೀವಿಗಳಿಗೆ ಇನ್ನೊಂದರದ ಆರ್ತನಾದ ಕೇಳಿಸಿ ಬರುಲ್ಲ. ಆದ್ರೆ ನೋಡ್ರಿ, ಇದು ಹೆಂತಾ ವಿಚಿತ್ರ ಏತಿ ಅಂದ್ರ ಈ ಸಂಸಾರದಾಗಿನ ಭೇದಾಭೇದದ ಕಲ್ಪನಾ ಯಾರಿಗಿ ಆಗತೈತಿ ಅವರಿಗೆ ತನ್ನದಲ್ಲದ ದನೀನೂ ಕೇಳಿಸತೈತಿ. ಆ ದನಿ ನೇಮಿನಾಥರಿಗಿ ಕೇಳಿಸ್ತು ನೋಡ್ರಿ.... ಯಾಕ ಕೇಳಿಸ್ತು, ಯಾಕಂದ್ರ ಮುಂದ ಭಗವಾನರಾಗೂ ಜೀವಾತ್ಮ ಅದಾ. ಭೇದವಿಜ್ಞಾನದ ಸಂಸ್ಕಾರ ಆ ಮನಸ್ಸಿಗಿ ಇತ್ರಿ, ಅದಕ್ಕೆ ಕೇಳಿಸ್ತು. ಮನಸ್ಸು ನಿರ್ಜರಾ ಆಗಲಿಕ್ಕೆ...ವೈರಾಗದ ಅಂಕುರ ಆಗಲಿಕ್ಕೆ ಇಷ್ಟ ಸಾಕ ಆಯ್ತು ನೋಡ್ರಿ... ಇದು ಸಂಸಾರ ಮಿಥ್ಯ ಏತಿ. ಈ ಹೊರಗಿನ ಗದ್ದಲ ಐತಿ ಇದು ಬ್ರಮಾ ಏತಿ, ಅಂತ ನೇಮಿನಾಥ ರಾಜಕುಮಾರರಿಗೆ ಅನಿಸ್ತು ಆಗ ಅವರು ರಥದಿಂದ ಕೆಳಗೆ ಇಳಿದು... ಕಾಡಿಗೆ ಹೋಗಿ ನಿಗ್ರಂಥ ಮುನಿಗಳಾದ್ರು.... ಮುಂದ ತೀರ್ಥಂಕರ ಆದ್ರು . "

Rating
Average: 4 (1 vote)