ಹುಬ್ಬಳ್ಳಿಯಲ್ಲಿ ಒಂದು ದಿನ.....
ಶುಕ್ರವಾರ ರಾತ್ರಿ ಮೊದಲೇ ಕಾಯ್ದಿರಿಸಿದ್ದ ಬೆಂಗಳೂರು-ಹುಬ್ಬಳ್ಳಿ ೧೦.೧೩ ರ ರಾಜಹಂಸ ಬಸ್ಸಿಗೆ, ೦೯.೫೦ ಕ್ಕೆ ಬಸ್ ನಿಲ್ದಾಣಕ್ಕೆ ಬಂದು ನನ್ನ ಮಡದಿಗೆ ಫೋನ್ ಮಾಡಿದೆ. ಇನ್ನೇನು ಬಸ್ ಹೊರಡುತ್ತಿದೆ ಬೆಳಿಗ್ಗೆ ೬ ಗಂಟೆಗೆ ಹುಬ್ಬಳ್ಳಿಗೆ ಬರುತ್ತದೆ ನಿಮ್ಮ ಭಾವನವರನ್ನು ಆ ಸಮಯಕ್ಕೆ ಬಸ್ ನಿಲ್ದಾಣಕ್ಕೆ ಬರಲು ಹೇಳು ಎಂದು ಹೇಳಿ ನಾನು ಕಾಯ್ದಿರಿಸಿದ್ದ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತೆ. ಮೊದಲ ಬಾರಿಗೆ ಹುಬ್ಬಳ್ಳಿಗೆ ಹೋಗುತ್ತಿದ್ದೆನಾದ್ದರಿಂದ ಹುಬ್ಬಳ್ಳಿ ಹೇಗಿರುವುದೋ ಏನೋ, ಸಿಕ್ಕಾಪಟ್ಟೆ ಬಿಸಿಲು ಇರುತ್ತದೋ ಏನೋ ಎಂಬ ಆಲೋಚನೆಯಲ್ಲಿ ಮುಳುಗಿದ್ದೆ. ಅಷ್ಟರಲ್ಲಿ ಬಸ್ ಹೊರಟಿತು. ನೆಲಮಂಗಲದ ಮೇಲ್ಸೇತುವೆಯ ಮೇಲೆ ಸಾಗಿ ಕೆಳಗಿಳಿದು ಕಾಮತ್ (ಖಾ - ತಿನ್ನ, ಮತ್ - ಬೇಡಿ, ತಿನ್ನಬೇಡಿ ಹೋಟೆಲ್ (ಹಿರಣ್ಣಯ್ಯನವರ ಹಾಸ್ಯ) ) ನಲ್ಲಿ ಊಟಕ್ಕೆ ನಿಲ್ಲಿಸಿದರು. ಮನೆಯಲ್ಲೇ ಊಟ ಮಾಡಿ ಹೊರಟಿದ್ದರಿಂದ ಅಲ್ಲೇನೂ ತಿನ್ನದೇ ಹಾಗೆ ಕೆಳಗಿಳಿದು ಸ್ವಲ್ಪ ಹೊತ್ತು ಅಡ್ಡಾಡಿ ಮತ್ತೆ ಬಸ್ ಏರಿ ಕುಳಿತೆ. ನೆಲಮಂಗಲ ಬಿಡುತ್ತಿದ್ದ ಹಾಗೆ ಶುರುವಾಯಿತು ನೋಡಿ ಮಳೆ. ಅದೆಷ್ಟು ಹೊತ್ತು ಹಾಗೆ ಮಳೆ ನೋಡುತಾ ಕುಳಿತಿದ್ದೆನೋ ಗೊತ್ತಿಲ್ಲ ಹಾಗೆಯೇ ಕಣ್ಣುಮುಚ್ಚಿ ಮಲಗಿಬಿಟ್ಟಿದ್ದೆ. ೦೫.40 ರ ಸುಮಾರಿಗೆ ಮಡದಿ ಮಾಡಿದ ಫೋನ್ ಕರೆಗೆ ಎಚ್ಚರಗೊಂಡು ಎಲ್ಲಿದ್ದೀರಿ ಎಂದು ಕೇಳಿದ್ದಕ್ಕೆ ಹುಬ್ಬಳ್ಳಿ ಅಂತೂ ಇನ್ನೂ ಬಂದಿಲ್ಲ, ಅಷ್ಟುಮಾತ್ರ ಗೊತ್ತು ಏಕೆಂದರೆ ಹುಬ್ಬಳ್ಳಿ ಕೊನೆ ನಿಲ್ದಾಣ ಆದ್ದರಿಂದ ಎಂದು ಹೇಳುತ್ತಿದ್ದೆ ಅಷ್ಟರಲ್ಲಿ ಹುಬ್ಬಳ್ಳಿಗೆ ದಾರಿ ಎಂಬ ಸೂಚನಾ ಫಲಕ ಕಂಡು ಇನ್ನೊಂದು ೧೦ ನಿಮಿಷದಲ್ಲಿ ಹುಬ್ಬಳ್ಳಿಯಲ್ಲಿ ಇರುತ್ತೇನೆ ಎಂದು ಫೋನ್ ಕಟ್ ಮಾಡಿದೆ. ಮಳೆ ಇನ್ನೂ ಬಿಟ್ಟೆ ಇರಲಿಲ್ಲ. ಸರಿಯಾಗಿ ೦೫. ೫೦ಕ್ಕೆ ಹುಬ್ಬಳ್ಳಿ ಹಳೆ ಬಸ್ ಸ್ಟ್ಯಾಂಡ್ ಬಂದು ತಲುಪಿತು ನಮ್ಮ ಬಸ್. ತಣ್ಣನೆ ಹವೆಯಲ್ಲಿ ಜಿಟಿ ಜಿಟಿ ಮಳೆಹನಿ ಮುಖದ ಮೇಲೆ ಬೀಳುತ್ತಿದ್ದರೆ ಎಂಥಹ ನಿದ್ರೆ ಮಂಪರು ಸಹಾ ಕಳೆದು ಹೋಗುವುದು. ಅಲ್ಲೇ ಬಸ್ ಸ್ಟ್ಯಾಂಡ್ ಮುಂದೆ ಐದು ನಿಮಿಷ ಕಳೆಯುವಷ್ಟರಲ್ಲಿ ನನ್ನ ಮಡಡಿಯ ಭಾವ ಅಲ್ಲಿಗೆ ಬಂದು ಅವರ ಮನೆಗೆ ಕರೆದೊಯ್ದರು. ಹುಬ್ಬಳ್ಳಿಯ ವಾತಾವರಣಕ್ಕೆ ಭಯ ಪಟ್ಟು ಬಂದಿದ್ದ ನನಗೆ ಮಳೆರಾಯ ಕಾಪಾಡಿದ್ದ.ಸ್ನಾನ, ಸಂಧ್ಯಾವಂದನೆ ಮುಗಿಸಿ ತಿಂಡಿ ತಿಂದು ಸಿದ್ಧವಾಗಿ ಕುಳಿತೆ. ನನ್ನ ಮಡಡಿಯ ಭಾವನವರು ತಮ್ಮ ಬೈಕಿನ ಕೀಯನ್ನು ನನ್ನ ಕೈಗಿತ್ತು ಹುಬ್ಬಳ್ಳಿ ನೋಡಿಕೊಂಡು ಬನ್ನಿ ಎಂದು ಅವರ ಕೆಲಸಕ್ಕೆ ಹೊರಟರು. ನನ್ನ ಮಡದಿಗೆ ಹುಬ್ಬಳ್ಳಿಯ ಪರಿಚಯ ಸ್ವಲ್ಪ ಇದ್ದುದ್ದರಿಂದ ಇಬ್ಬರೂ ಬೈಕ್ ಏರಿ ಹೊರಟೆವು.
ನೃಪತುಂಗ ಬೆಟ್ಟ
ಮನೆಯಿಂದ ಕೇವಲ ಎರಡು ಕಿಮೀ ದೂರದಲ್ಲಿ ಈ ಬೆಟ್ಟ ಇದೆ. ನನ್ನ ಮಡದಿ ಹಲವು ಬಾರಿ ಹುಬ್ಬಳ್ಳಿಗೆ ಭೇಟಿ ಕೊಟ್ಟಿದ್ದರೂ ಈ ಬೆಟ್ಟವನ್ನು ನೋಡಿರಲಿಲ್ಲ. ಈ ಬಾರಿ ಆ ಬೆಟ್ಟಕ್ಕೆ ಹೋದೆವು. ಬೆಟ್ಟದ ತುದಿಯವರೆಗೂ ವಾಹನಗಳು ಹೋಗುತ್ತದೆ. ಅಲ್ಲಿ ಗಾಡಿ ನಿಲ್ಲಿಸಿ ಪ್ರವೇಶ ಧನ ಹತ್ತು ರೂ ನೀಡಿ ಒಳಗೆ ಆಡಿಯಿಟ್ಟೆವು. ಹನಿ ಹನಿ ಮಳೆ ತಣ್ಣಗೆ ಗಾಳಿ ಸುತ್ತಲೂ ಹಸಿರು ಅಲ್ಲಿಂದ ಕಾಣಿಸುತ್ತಿದ್ದ ಹುಬ್ಬಳ್ಳಿ ನಗರದ ವಿಹಂಗಮ ನೋಟ ಅದ್ಭುತವಾಗಿತ್ತು. ಅಲ್ಲಿನ ಪರಿಸರ ಕೂಡ ಅಷ್ಟೇ ಸ್ವಛವಾಗಿತ್ತು.ಎಲ್ಲಿಯೂ ಕಸ, ಗಲೀಜು ಇರಲಿಲ್ಲ. ಎತ್ತರೆತ್ತರ ಗಿಡಗಳು, ವ್ಯೂ ಪಾಯಿಂಟ್ ಗಳು, ಚಿಣ್ಣರಿಗೆ ಆಟದ ಮೈದಾನ , ಹಾಗೆ ಹಸಿರಿನ ಬಗ್ಗೆ ಫಲಕಗಳು ಎಲ್ಲವೂ ಸುಂದರವಾಗಿತ್ತು. ಆದರೆ ಅಲ್ಲಿನ ಸೌಂದರ್ಯವನ್ನು ಹಾಳು ಮಾಡುತ್ತಿರುವವರು ಅಲ್ಲಿನ ಯುವ ಪ್ರೇಮಿಗಳು. ಹೇಳಲು ಅಸಹ್ಯವಾಗುತ್ತದೆ. ಸುತ್ತಲೂ ಜನ ಓಡಾಡುತ್ತಿರುತ್ತಾರೆ ಎಂಬ ಪರಿವೆ ಇಲ್ಲದೇ ಅಸಭ್ಯವಾಗಿ ವರ್ತಿಸುತ್ತಿದ್ದರು. ಅಲ್ಲಿಗೆ ಬರುತ್ತಿದ್ದ ಬಹುಪಾಲು ಪ್ರೇಮಿಗಳು ಇಂತಹ ಹಾಳು ಕೆಲಸ ಮಾಡುತ್ತಿದ್ದರು. ಇನ್ನೂ ಬಹಳ ಹೊತ್ತು ಅಲ್ಲಿ ಕಳೆಯೋಣ ಎಂದುಕೊಂಡಿದ್ದ ನಾವು ಈ ದೃಶ್ಯಗಳನ್ನು ನೋಡಲಾಗದೇ ಅಲ್ಲಿಂದ ವಾಪಸಾದೆವು.
ಒಂಟಿ ಹನುಮಪ್ಪ ದೇವಸ್ಥಾನ
ಹುಬ್ಬಳ್ಳಿ ನಗರ ದಾಟಿ ಬೆಂಗಳೂರಿನ ಕಡೆ ಹೈವೇ ರಸ್ತೆಯಲ್ಲಿ ಒಂದು ಮೂರು ಕಿಮೀ ಬಂದರೆ ಸಿಗುವುದು ಈ ದೆವಸ್ಥಾನ. ರಸ್ತೆಯಿಂದ ಅರ್ಧ ಫಾರ್ಲಾಂಗ್ ನಷ್ಟು ದೂರ ಹೊಲಗದ್ದೆಗಳ ನಡುವೆ ಸಾಗಿ ರೈಲ್ವೇ ಹಳಿಯನ್ನು ದಾಟಿ ಮುಂದೆ ನಡೆದರೆ ಈ ದೇವಸ್ಥಾನ ಕಾಣಿಸುತ್ತದೆ. ಸುತ್ತ ಹೊಲಗಳ ಮಧ್ಯೆ ಒಂಟಿಯಾಗಿರುವುದರಿಂದ ಈ ದೇವರಿಗೆ ಒಂಟಿ ಹನುಮಪ್ಪ ಎಂದು ಕರೆಯುತ್ತಾರಂತೆ. ಅಲ್ಲಿನ ದೇವರು ಬಹಳ ಸತ್ಯ ಎಂದು ಹೇಳುತ್ತಾರೆ. ನಗರ ಪ್ರದೇಶದಿಂದ ಅಷ್ಟು ದೂರವಿದ್ದರೂ ಬಹಳಷ್ಟು ಜನ ಅಲ್ಲಿಗೆ ಬಂದು ದರ್ಶನ ಮಾಡುತ್ತಿದ್ದದ್ದೆ ಅದಕ್ಕೆ ಸಾಕ್ಷಿಯಂಬಂತಿತ್ತು. ಅಲ್ಲಿ ದರ್ಶನ ಮುಗಿಸಿ ವಾಪಸ್ ಮನೆಗೆ ಬರುವ ವೇಳೆಯಲ್ಲಿ ರಸ್ತೆಯಲ್ಲಿ ಬೃಹತ್ ಮರವೊಂದನ್ನು ಕಡಿಯುತ್ತಿದ್ದರು. ಬೆಟ್ಟದಲ್ಲಿ ಕಂಡಿದ್ದ "ಲೋ ಮೂಢ ಕಡಿಯಬೇಡವೋ ಮರ, ಕಡಿದರೆ ದೇಶದ ತುಂಬೆಲ್ಲ ಬರ" ಎಂಬ ಫಲಕ ನೆನಪಿಗೆ ಬಂದು ಅದು ಫಲಕಕ್ಕೆ ಮಾತ್ರ ಸೀಮಿತ ಎಂದೆನೆಸಿ ಸೀದಾ ಮನೆಗೆ ಬಂದೆವು. ಊಟ ಮಾಡಿ ಸಂಜೆಯ ಪ್ರಯಾಣದ ಬಗ್ಗೆ ಮಾತನಾಡುತ್ತಾ ಹಾಗೆ ಸ್ವಲ್ಪ ಹೊತ್ತು ಮಲಗಿದೆ.
ನುಗ್ಗೀಕೇರಿ ಹನುಮಪ್ಪ
ಸಂಜೆಯ ವೇಳೆ ನನ್ನ ಮಡಡಿಯ ಭಾವ ಕೆಲಸ ಮುಗಿಸಿ ಬಂದು ಬನ್ನಿ ನುಗ್ಗೀಕೇರಿ ಹನುಮಪ್ಪನ ದರ್ಶನ ಮಾಡಿಕೊಂಡು ಬರೋಣ ಎಂದರೂ. ಎಲ್ಲರೂ ಅವರ ಕಾರಿನಲ್ಲಿ ಹೊರಟೆವು. ಹುಬ್ಬಳ್ಳಿ ಹಾಗೂ ಧಾರವಾಡ ರಸ್ತೆಯಲ್ಲಿ ಈ ದೇವಸ್ಥಾನ ಇರುವುದು. ನಾವು ಅಲ್ಲಿಗೆ ತಲುಪುವ ವೇಳೆಗೆ ಸಂಜೆ ೭.೩೦ ಆಗಿತ್ತು. ಹಾಗೆ ವಿಪರೀತ ಮಳೆ ಬೀಳುತ್ತಿತ್ತು. ಈ ದೇವಸ್ಥಾನದಲ್ಲಿರುವ ಹನುಮಪ್ಪ ಕೆರೆಯಲ್ಲಿ ಸಿಕ್ಕ ವಿಗ್ರಹವಂತೆ. ಅಲ್ಲೇ ಕೆರೆ ಪಕ್ಕದಲ್ಲೇ ವ್ಯಾಸರಾಯರು ಇದನ್ನು ಪುನರ್ ಪ್ರತಿಷ್ಟಾಪಿಸಿದ್ದಾರೆ. ರಸ್ತೆಯಿಂದ ಪಕ್ಕಕ್ಕೆ ತಿರುಗಿ ಮಣ್ಣಿನ ರಸ್ತೆಯಲ್ಲಿ ಸ್ವಲ್ಪ ದೂರ ಬಂದು ನಂತರ ಕೆರೆ ಏರಿಯ ಮೇಲೆ ಸಾಗಿದರೆ ಈ ದೇವಸ್ಥಾನ ತಲುಪುತ್ತೇವೆ. ಅಂದು ಶನಿವಾರವಾದ್ದರಿಂದ ವಿಪರೀತ ಜನ. ಹುಬ್ಬಳ್ಳಿ ಹಾಗೂ ಧಾರವಾಡದಿಂದ ಜನ ಆಗಮಿಸುತ್ತಲೇ ಇದ್ದರು. ಇಲ್ಲೂ ಸಹ ಭಕ್ತರು ಹರಕೆಗಳನ್ನು ಹೊತ್ತುಕೊಂಡು ಅದನ್ನು ತೀರಿಸುತ್ತಾರೆ. ಅಲ್ಲಿನ ದೇವರು ಸಹ ಅದ್ಭುತವಾಗಿದೆ. ನೋಡಿದಷ್ಟು ಹೊತ್ತು ನೋಡುತ್ತಲೇ ಇರಬೇಕೆನಿಸುತ್ತದೆ. ಅಲ್ಲಿ ದರ್ಶನ ಮುಗಿಸಿ ವಾಪಸ್ ಬರುವಾಗ ಧಾರವಾಡದ ಶುಕ್ರವಾರ ಪೇಟೆಯಲ್ಲಿ ಶ್ರೀನಿವಾಸ ದೇವರ ದರ್ಶನ ಮಾಡಿ ವಾಪಸ್ ಹುಬ್ಬಳ್ಳಿಗೆ ಬಂದಾಗ ೯.೩೦. ಮರುದಿನ ಬೆಳಿಗ್ಗೆ ಸಿರ್ಸಿ ಗೆ ಹೋಗಬೇಕಾದ್ದರಿಂದ ಬೇಗನೆ ಊಟ ಮುಗಿಸಿ ನಿದ್ರಾದೇವಿಗೆ ಶರಣಾದೆನು
Comments
ಉ: ಹುಬ್ಬಳ್ಳಿಯಲ್ಲಿ ಒಂದು ದಿನ.....
In reply to ಉ: ಹುಬ್ಬಳ್ಳಿಯಲ್ಲಿ ಒಂದು ದಿನ..... by vani shetty
ಉ: ಹುಬ್ಬಳ್ಳಿಯಲ್ಲಿ ಒಂದು ದಿನ.....