ಹುಬ್ಬಳ್ಳಿಯಿಂದ ಸಿರಸಿಗೆ....
ಹುಬ್ಬಳ್ಳಿಯಲ್ಲಿ ಒಂದು ಸುತ್ತು ಹೊಡೆದು ಮರುದಿನ ಬೆಳಿಗ್ಗೆ ಸಿರಸಿಗೆ ಹೊರಡುವ ಯೋಚನೆಯಲ್ಲೇ ನಿದ್ರಾದೇವಿಗೆ ಶರಣಾದೆ. ಭಾನುವಾರ ಬೆಳಿಗ್ಗೆ ಬೇಗನೆ ಎದ್ದು ಆಚೆ ಬಂದರೆ ಮಳೆ ಇನ್ನೂ ಬಿಟ್ಟೆ ಇರಲಿಲ್ಲ. ಸಣ್ಣಗೆ ಜಿನುಗುತ್ತಿತ್ತು. ಸ್ನಾನ ಮಾಡಿ ಸಂಧ್ಯಾವಂದನೆ ಮಾಡಿ ತಿಂಡಿ ತಿಂದು ಹೊರಡಲು ಸಿದ್ಧವಾಗಿದ್ದೆ. ಉಳಿದವರು ಸಿದ್ಧರಾಗುತ್ತಿದ್ದರು. ಅಷ್ಟರಲ್ಲಿ ಮನೆಯ ಪಕ್ಕದಲ್ಲೇ ಇದ್ದ ರಾಯರ ಮಠದಿಂದ ಮುಂದಿನ ತಿಂಗಳ ರಾಯರ ಆರಾಧನೆ ಪ್ರಯುಕ್ತ ಆಹ್ವಾನಿಸಲು ರಾಯರ ಪಾದುಕೆಗಳ ಸಮೇತ ಮನೆಮನೆಗೆ ಪೂಜೆಗೆ ತರುತ್ತಿದ್ದಾರೆಂದು ತಿಳಿದು ಬಹಳ ಸಂತೋಷವಾಯಿತು. ಅವರು ಮನೆಗೆ ಬರುವ ವೇಳೆಗೆ ಎಲ್ಲರೂ ಸಿದ್ಧರಾಗಿದ್ದೆವು. ಅವರು ರಾಯರ ಪಾದುಕೆಗಳನ್ನು ಮನೆಗೆ ತಂದು ಪೂಜೆ ಮಾಡಲು ಹೇಳಿದರು. ನನ್ನ ಮಡದಿಯ ಭಾವನವರು ನನಗೇ ಆ ಅವಕಾಶವನ್ನು ಕೊಟ್ಟರು. ನಾನೇ ರಾಯರ ಪಾದುಕೆಗೆ ಪೂಜೆ ಮಾಡಿದೆ. ಅಂದಿನ ಪ್ರಯಾಣಕ್ಕೆ ಶುಭಾರಂಭ ದೊರೆಯಿತು. ಅವರು ಹೊರಟ ನಂತರ ನಾವು ನಮ್ಮ ಪ್ರಯಾಣ ಶುರುಮಾಡಿದೆವು.
ಸೋಂದಾ/ ಸೋಂದೆ/ಸ್ವಾದಿ
ಆ ತಂಪಾದ ವಾತಾವರಣದಲ್ಲಿ ಹುಬ್ಬಳ್ಳಿ ದಾಟಿ, ಕಲಘಟಗಿ, ಮಂಚಿಕೇರಿ, ಮಂಜುಗಣಿ ಮೂಲಕ ಹಾದು ಸೋಂದಾ ತಲುಪಿದಾಗ ಸರಿಯಾಗಿ ೧೦.೪೦ ಆಗಿತ್ತು. ದಾರಿಯುದ್ದಕ್ಕೂ ಎಡಬಿಡದೆ ಸುರಿಯುತ್ತಿದ್ದ ಮಳೆ ಸೋಂದಾ ದಲ್ಲೂ ಮುಂದುವರಿದಿತ್ತು. ಸೋಂದಾ ನನ್ನ ಅಚ್ಚುಮೆಚ್ಚಿನ ತಾಣ. ಸುತ್ತಲೂ ಹಸಿರು, ಹೆಚ್ಚು ಜನವಿರದ ಜಾಗ, ಮೊಬೈಲ್ ನೆಟ್ವರ್ಕ್ ಗಳು ಸರಿಯಾಗಿ ಸಿಗದ ಜಾಗ (ನೆಮ್ಮದಿಯಿಂದ ಇರಬಹುದಾದ ಜಾಗ). ಸೋಂದಾ ವಾದಿರಾಜ ಮಠದ ಹೆಬ್ಬಾಗಿಲ ಮುಂದೆ ಕೆರೆಯೊಂದಿದೆ. ಆ ಹೆಬ್ಬಾಗಿಲ ಮೂಲಕ ಹಾದು ಹೋದರೆ ಮೊದಲು ಕಾಣಸಿಗುವುದು ರಮಾ ತ್ರಿವಿಕ್ರಮ ದೇವರ ದೇವಸ್ಥಾನ. ಅಲ್ಲಿಂದ ಕೆಳಗಿಳಿದು ಹೋದರೆ ಸುಂದರ, ಶುಭ್ರ, ಸ್ವಚ್ಛ ಕಲ್ಯಾಣಿ ಕಾಣಸಿಗುವುದು. ಅಲ್ಲೇ ಪಕ್ಕದಲ್ಲೇ ವಾದಿರಾಜರ ಮೂಲ ಬೃಂದಾವನ, ಹಾಗೂ ಭೂತರಾಜರ ಸನ್ನಿಧಿ ಇದೆ. ಅಲ್ಲಿನ ಪದ್ಧತಿಯಂತೆ ಮೊದಲಿಗೆ ಭೂತರಾಜರಿಗೆ ತೆಂಗಿನ ಕಾಯಿ ಉರುಳಿಸಿ ನಂತರ ಕಲ್ಯಾಣಿಯಲ್ಲಿ ಸ್ನಾನ ಮುಗಿಸಿ ಬಂದು ನಮಸ್ಕಾರ ಹಾಕುವುದರೊಳಗೆ ಊಟದ ಸಮಯವಾಗಿತ್ತು. ಮತ್ತೆ ಮೇಲೇರಿ ಹೋಗಿ ತೀರ್ಥ ತೆಗೆದುಕೊಂಡು ಊಟಕ್ಕೆ ಕುಳಿತೆವು ಚಾತುರ್ಮಾಸವಾದ್ದರಿಂದ ಎಲ್ಲರಿಗೂ ವ್ರತದ ಅಡಿಗೆ. ಅಲ್ಲಿನ ಊಟದ ರುಚಿಯ ಬಗ್ಗೆ ಎರಡು ಮಾತಿಲ್ಲ. ವ್ರತದ ಅಡಿಗೆಯಾದರೂ ಅದ್ಭುತವಾಗಿತ್ತು. ಊಟ ಮುಗಿಸಿ ಆಚೆ ಬಂದು ಪಕ್ಕದಲ್ಲಿದ್ದ ಅಂಗಡಿಯಲ್ಲಿ ಮಿಡಿ ಉಪ್ಪಿನಕಾಯಿ, ಹಲಸಿನ ಹಪ್ಪಳ ತೆಗೆದುಕೊಂಡು ಮುಂದಿನ ಪ್ರಯಾಣಕ್ಕೆ ಸಿದ್ಧವಾದೆವು. (ಸೋಂದಾ ದೇವಸ್ಥಾನ, ಅಲ್ಲಿನ ಆಚಾರ , ಪದ್ಧತಿಯ ಬಗ್ಗೆ ಪ್ರತ್ಯೇಕ ಲೇಖನ ಬರೆಯುತ್ತೇನೆ)
ವೆಂಕಟರಮಣ ದೇವಸ್ಥಾನ
ಸೋಂದಾ ದಲ್ಲಿ ದರ್ಶನ ಮುಗಿಸಿಕೊಂಡು ಹೊರಟ ನಮ್ಮ ಮುಂದಿನ ಪಯಣ ಸಾಗಿದ್ದು ಶ್ರೀನಿವಾಸನ ದರ್ಶನಕ್ಕೆ. ನಾನು ಈ ಮುಂಚೆ ಸೊಂದಾಗೆ ಹೋದಾಗಲೆಲ್ಲ ಅಲ್ಲೇ ಪಕ್ಕದಲ್ಲಿದ್ದ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ಆಗಿರಲಿಲ್ಲ. ಈ ಬಾರಿ ಆ ಆಸೆ ಈಡೇರಿತು. ಸುತ್ತ, ಎತ್ತರೆತ್ತರ ಗಿಡಗಳು, ಪಕ್ಕದಲ್ಲಿ ಕೆರೆ, ಕಾಡಿನ ವಾತಾವರಣದಲ್ಲಿ ನೆಲೆಸಿದ್ದಾನೆ ವೆಂಕಟರಮಣ. ಅಲ್ಲಿನ ಇತಿಹಾಸ ಕೇಳೋಣ ಎಂದುಕೊಂಡರೆ ಅಲ್ಲಿ ಯಾರೊಬ್ಬರೂ ಇರಲಿಲ್ಲ. ಅಲ್ಲಿನ ದೇವಸ್ಥಾನ ನೋಡಿದರೆ ಬಹಳ ಪುರಾತನ ಎಂದು ಕೂಡಲೇ ಹೇಳಬಹುದಿತ್ತು. ಗರ್ಭಗುಡಿಯ ಒಳಗಡೆ ಸರಿಯಾದ ದೀಪದ ವ್ಯವಸ್ಥೆಯೂ ಇರಲಿಲ್ಲ. ಅಲ್ಲಿದ್ದ ಎಣ್ಣೆ ದೀಪದಲ್ಲೇ ಶ್ರೀನಿವಾಸನ ದರ್ಶನ ಮಾಡಿಕೊಂಡೆವು. ಬಹಳ ಸುಂದರವಾಗಿದ್ದ ಶ್ರೀನಿವಾಸ ದೇವರ ಫೋಟೋ ತೆಗೆಯೋಣ ಎಂದುಕೊಂಡರೆ ಅಲ್ಲಿ ದೀಪದ ಅಭಾವದಿಂದ ಸರಿಯಾಗಿ ಸೆರೆಯಾಗಲಿಲ್ಲ. ಅಲ್ಲಿ ಸ್ವಲ್ಪ ಹೊತ್ತು ಕಳೆದು ಮುಂದಿನ ಪಯಣಕ್ಕೆ ಹೊರಟೆವು.
ಹುಲೇಕಲ್ ಕುಂದಾಪುರ ವ್ಯಾಸರಾಜ ಮಠ
ಶ್ರೀನಿವಾಸನ ದರ್ಶನ ಮುಗಿಸಿ ನಂತರ ನಮ್ಮ ಕಾರು ಬಂದು ನಿಂತಿದ್ದು ಹುಲೇಕಲ್ ನಲ್ಲಿನ ಕುಂದಾಪುರ ವ್ಯಾಸರಾಜ ಮಠದ ಮುಂಭಾಗಕ್ಕೆ. ಮಳೆ ಎಡಬಿಡದೆ ಸುರಿಯುತ್ತಲೇ ಇತ್ತು. ಆ ಮಳೆಯಲ್ಲೇ ಕಾರಿಳಿದು ಮಠದ ಹೆಬ್ಬಾಗಿಲ ಬಳಿ ಬಂದಾಗ ಅನತಿ ದೂರದಲ್ಲಿ ನಿಂತಿದ್ದ ಮಠದ ಅರ್ಚಕರು ಅಲ್ಲಿಂದಲೇ ಕೂಗಿ ಹೇಳುತ್ತಿದ್ದರು. "ವಿಪರೀತ ಜಾರಿಕೆ ಇದೆ, ಅಲ್ಲಿ ಇಟ್ಟಿರುವ ಮೂಟೆಗಳ ಮೇಲೆ ಕಾಲಿಟ್ಟು ಬನ್ನಿ" ಎಂದು. ಅವರ ಸಲಹೆಯಂತೆ ಆ ಮೂಟೆಗಳ ಮೇಲೆ ಕಾಲಿಟ್ಟು ಮಠದ ಬಾಗಿಲ ಬಳಿ ಬಂದೆವು. ಒಂದೇ ಒಂದು ಹೆಜ್ಜೆ ಮೂಟೆಯ ಪಕ್ಕದಲ್ಲಿಟ್ಟ ನನ್ನ ನಾದಿನಿ ಜಾರಿ ಕೆಳಕ್ಕೆ ಬಿದ್ದಳು. ಅವಳನ್ನು ಎಬ್ಬಿಸಿಕೊಂಡು ಮುಂದೆ ಬಂದಾಗ ಅಲ್ಲಿದ್ದ ಅರ್ಚಕರು ಬಾಗಿಲ ಮೇಲ್ಭಾಗದಲ್ಲಿದ್ದ ಗಣೇಶನ ವಿಗ್ರಹವನ್ನು ತೋರಿಸಿ ಇದು "ತೋರಣ ಗಣಪತಿ" ಇದು ಬಹಳವಾದ ವಿಶೇಷ ಗಣಪತಿ ಎಂದು ವಿವರಿಸಿ ಮಂಗಳಾರತಿ ಮಾಡಿ ಕೊಟ್ಟರು. ಅಲ್ಲಿಂದ ಒಳಗಡೆ ಹೋದರೆ ಅದ್ಭುತವಾದ ಲಕ್ಷ್ಮಿನಾರಾಯಣ ದೇವರ ದರ್ಶನ. ಪಕ್ಕದಲ್ಲೇ ವ್ಯಾಸರಾಯರ ಮೃತ್ತಿಕಾ ಬೃಂದಾವನವಿದೆ. ಎಲ್ಲ ದರ್ಶನ ಮುಗಿಸಿ ಸಿರಸಿ ಕಡೆ ಪಯಣ ಬೆಳೆಸಿದೆವು.
ಸಿರಸಿ ಮಾರಿಕಾಂಬ ದೇವಸ್ಥಾನ
ಸಿರಸಿಗೆ ಈ ಮುಂಚೆ ಹಲವು ಬಾರಿ ಬಂದಿದ್ದೆನಾದರೂ ಕೇವಲ ಒಂದೇ ಒಂದು ಬಾರಿ ಮಾರಿಕಾಂಬ ದೇವಿಯ ದರ್ಶನ ಮಾಡಿದ್ದೆ. ಈಗ ಮತ್ತೊಮ್ಮೆ ಆ ಭಾಗ್ಯ ಬಂದೊದಗಿತು. ಸಿರಸಿ ಮಾರಿಕಾಂಬ ದೇವಸ್ಥಾನ ಹೊರಗಿನಿಂದ ನೋಡಿದರೆ ಅದು ದೇವಸ್ಥಾನ ಎನಿಸುವುದೇ ಇಲ್ಲ. ಹೊರಗಿನ ಗೋಡೆಗಳ ಮೇಲೆಲ್ಲಾ ಬಣ್ಣ ಬಣ್ಣದ ಚಿತ್ತಾರಗಳು ಮೂಡಿಸಿದ್ದಾರೆ. ಒಳಗೆ ಹೋದರೆ ವಿಶಾಲವಾದ ಸಭಾಂಗಣವಿದೆ. ಅದನ್ನು ದಾಟಿ ಮುಂದೆ ಹೋದರೆ ದೇವಿಯ ದರ್ಶನವಾಗುವುದು. ಆ ದೇವಿಯನ್ನು ನೋಡುತ್ತಿದ್ದರೆ ನೋಡುತ್ತಲೇ ಇರಬೇಕೆನ್ನಿಸುವುದು. ಅಷ್ಟು ಭಕ್ತಿ ಮೂಡಿ ಬರುತ್ತದೆ. ಅಲ್ಲಿ ದರ್ಶನ ಮುಗಿಸಿಕೊಂಡು ಸೀದಾ ನಮ್ಮ ಕಾರು ಸಾಗಿದ್ದು ಹುಬ್ಬಳ್ಳಿಗೆ. ಹುಬ್ಬಳ್ಳಿಗೆ ಬಂದು ಊಟ ಮುಗಿಸಿ ಬೆಂಗಳೂರು ಬಸ್ಸನ್ನು ಹತ್ತಿ ಎರಡು ದಿನದ ನೆನಪುಗಳನ್ನು ಮೆಲುಕು ಹಾಕುತ್ತ ನಿದ್ರೆಗೆ ಜಾರಿದೆನು.
Comments
ಉ: ಹುಬ್ಬಳ್ಳಿಯಿಂದ ಸಿರಸಿಗೆ....
ಉ: ಹುಬ್ಬಳ್ಳಿಯಿಂದ ಸಿರಸಿಗೆ....
ಉ: ಹುಬ್ಬಳ್ಳಿಯಿಂದ ಸಿರಸಿಗೆ....
In reply to ಉ: ಹುಬ್ಬಳ್ಳಿಯಿಂದ ಸಿರಸಿಗೆ.... by VeerendraC
ಉ: ಹುಬ್ಬಳ್ಳಿಯಿಂದ ಸಿರಸಿಗೆ....
ಉ: ಹುಬ್ಬಳ್ಳಿಯಿಂದ ಸಿರಸಿಗೆ....
In reply to ಉ: ಹುಬ್ಬಳ್ಳಿಯಿಂದ ಸಿರಸಿಗೆ.... by ಗಣೇಶ
ಉ: ಹುಬ್ಬಳ್ಳಿಯಿಂದ ಸಿರಸಿಗೆ....