ಹೃಷಿದಾರ ಅನುಪಮ ದೃಶ್ಯಕಾವ್ಯಗಳ ಹೆಸರಿನ 'ಬಾವರ್ಚಿ'  !

ಹೃಷಿದಾರ ಅನುಪಮ ದೃಶ್ಯಕಾವ್ಯಗಳ ಹೆಸರಿನ 'ಬಾವರ್ಚಿ'  !

ಚಿತ್ರ

'ಸಿಲ್ವರ್ ಜ್ಯುಬಿಲಿ ಹೀರೊ' ಎಂಬುದಾಗಿ ಹಿಟ್ ಹಿಂದಿ ಚಿತ್ರಗಳಿಗೆ ಹೆಸರುವಾಸಿಯಾಗಿ ಸುಮಾರು  ೧೭ ಚಿತ್ರಗಳಲ್ಲಿ  ಅಭಿನಯಿಸಿದ ರಾಜೇಶ್ ಖನ್ನಾರನ್ನು ಆರಾಧಿಸುತ್ತಿದ್ದ ಲಲನಾ ಮಣಿಗಳ ಸಾಲಿನಲ್ಲಿ ಹಲವಾರು ಮಂದಿ ವಿವಾಹಿತ ಮಹಿಳೆಯರೂ  ನಿಂತಿರುತ್ತಿದ್ದರು, ಎನ್ನುವ ಮಾತುಗಳು ಮೀಡಿಯಾದಲ್ಲಿ ಕೇಳಿ ಬರುತ್ತಿತ್ತು. ಇದು ಸುಮಾರು ೫೦ ವರ್ಷಗಳ ಹಿಂದಿನ ಮಾತು.  (ಇದು ನನಗೆ ಹಾಗೂ ನನ್ನಂತಹ ಮಾನಸಿಕ ಸ್ಥಿತಿಯವರಿಗೆ  ಅರಗಿಸಿಕೊಳ್ಳಲು ಅಸಾಧ್ಯವಾದರೂ) ರಾಜೇಶ್ ಖನ್ನಾ  ಹೃಷಿಕೇಶ ಮುಖರ್ಜಿಯವರ ಅಚ್ಚುಮೆಚ್ಚಿನ ಶಿಷ್ಯನೆಂಬ ಹೆಗ್ಗಳಿಕೆ ಪಾತ್ರನಾಗಿದ್ದನಲ್ಲ  ; ಏನುಮಾಡೋದು ?

ನಿಜ ಹೇಳುವುದಾದರೆ,  ಒಮ್ಮೆ  'ರಾಜೇಶ್ ಖನ್ನಾ' ಅವರ  ನಟನೆಯ ಬಗ್ಗೆ  ಯೋಚಿಸಲು ಆರಂಭಿಸಿದ ನನಗೆ ಮನಸ್ಸಿನಲ್ಲಿ ಮೂಡುವ ಭಾವನೆಗಳೆಂದರೆ, ಯಾವುದೊ ನಾಯಕಿಯ ಜತೆ,  ಉದ್ಯಾನವನದ ಮರಗಳ ಸುತ್ತಲೂ ಉತ್ಸಾಹದಿಂದ ನೃತ್ಯ ಮಾಡುವುದನ್ನು ಮತ್ತು ರೈಲಿನಲ್ಲಿ 

ನಾಯಕಿ ನಟಿಯನ್ನು ನೋಡಿ ಹಾಡುವ ದೃಶ್ಯವಲ್ಲದೆ ಬೇರೇನೂ ಕಾಣಿಸದು !

ಗುಲಾಬಿ ಆಂಖೆ, ಜೋ ತೇರೀ ದೇಖೀ, 

ಶರಾಬಿ ಏಹ್ ದಿಲ್ ಹೋಗಯಾ  

ಸಂಭಾಲೋ ಮುಜಕೋ, ಓ ಮೇರೇ ಯಾರೋ 
ಸಂಭಾಲ್ನಾ ಮುಷ್ಕಿಲ್  ಹೋಗಯಾ 

ಆದರೆ,  ಇಲ್ಲಿನೋಡಿದರೆ ಆಶ್ಚರ್ಯವೋ ಆಶ್ಚರ್ಯ !

ಬೆಂಗಾಲಿಗಳೆಲ್ಲ ಪ್ರೀತಿಯಿಂದ ಕರೆಯುವ ಹೃಷಿದಾ (ಹೃಷಿಕೇಶಮುಖರ್ಜಿಯವರು) ೧೯೭೨ ರಲ್ಲಿ ನಿರ್ಮಿಸಿ, ನಿರ್ದೇಶಿಸಿದ  ಹಿಂದಿ ಹಾಸ್ಯ ಚಿತ್ರ 'ಬಾವರ್ಚಿ' ಯಲ್ಲೂ ಈ ಮಹಾಶಯ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ, ಸಿನಿ ರಸಿಕರೆಲ್ಲರ ಮನಸ್ಸನ್ನು ಗೆದ್ದಿದ್ದಾನೆ.  ಇದನ್ನು ಏನ್.  ಸಿ. ಸಿಪ್ಪಿ, ಮತ್ತು ರೋಮು ಸಿಪ್ಪಿಯವರ ಸಹಕಾರದಿಂದ ಹೃಷಿದಾ ನಿರ್ಮಿಸಿದರು  ರಾಜೇಶ್ ಖನ್ನಾ, ಜಯಾ ಭಾದುರಿ, ಆಸ್ರಾಣಿ, ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಎ. ಕೆ. ಹಂಗಲ್, ದುರ್ಗಾ ಖೋಟೆ, ಮನಿಶಾ, ಕಾಳಿ ಬ್ಯಾನರ್ಜಿ, ಉಷಾ ಕಿರಣ್ ಮತ್ತು ರಾಜು ಶ್ರೇಷ್ಠರು ನಟಿಸಿದ ಚಿತ್ರವಿದು. ವರ್ಷ ೧೯೭೨ ರ  ಎಂಟು ಅತಿ ಹೆಚ್ಚು ಗಳಿಕೆಯ ಚಲನಚಿತ್ರ ಎಂದು ಶ್ರೇಯಾಂಕವನ್ನೂ  ಪಡೆದಿದೆ.  ಚಿತ್ರವು ೧೯೬೬ ರ "ಗಲ್ಪೋ ಹೋಲಿಯೊ ಸತ್ತಿ" ಯ ಬೆಂಗಾಲಿ ಚಿತ್ರದ  ರಿಮೇಕ್ ಆಗಿತ್ತು. ತಪನ್ ಸಿನ್ಹಾ ರವರ ಪ್ರೊಡಕ್ಷನ್  ನಲ್ಲಿ  ಬಿ ಘೋಷ್ ಅಭಿನಯಿಸಿದ್ದರು.

ಸಂದರ್ಶನವೊಂದರಲ್ಲಿ ಹೇಳಿಕೆ ಕೊಡುತ್ತಾ, ರಾಜೇಶ್ ಖನ್ನಾ "ಬಾವಾರ್ಚಿ ಚಿತ್ರದಲ್ಲಿ,  ಮತ್ತು ಆನಂದ್ (೧೯೭೧) ಚಿತ್ರದಲ್ಲಿ  ಹೃಷಿದಾ ನನ್ನನ್ನು ಏನೇನು  ಮಾಡಲು ಹೇಳಿದ್ದರೋ ಅದಕ್ಕೆಲ್ಲಾ  ವಿರುದ್ಧವಾಗಿ  ಮಾಡಿಬಿಟ್ಟೆ. ಎಂದಿದ್ದಾರೆ. ಆದರೆ ಹೃಷಿದಾ ಅವರು ಸ್ವಲ್ಪವೂ ಬೇಸರಿಸಲಿಲ್ಲ. ಅವರು ನನಗೆ  ಪಾತ್ರದ ಎಲ್ಲಾ ಮಜಲುಗಳನ್ನೂ ಸನ್ನಿವೇಶಗಳನ್ನೂ  ಪಾತ್ರವನ್ನು ಅರ್ಥೈಸಿಕೊಂಡು ಮುಂದುವರೆಯಲು  ಅವಕಾಶ ನೀಡಿದರು. ಆಗ ನಾನು ಸ್ವಲ್ಪ ತಗ್ಗಿದ ದನಿಯಲ್ಲಿ, "ದಾದಾ ಈ ತರಹದ ಸಾಕಷ್ಟು ಪಾತ್ರಗಳನ್ನು ನಿರ್ವಹಿಸಿದ್ದೇನೆ. ನನಗೆ ಸ್ವತಂತ್ರವಾಗಿ ಕೆಲಸಮಾಡಲು ಬಿಡಿ" ಎಂದು ಹೇಳಿದಾಗ, ಅವರು  ಚಕಾರವೆತ್ತಲಿಲ್ಲ. ಬಹುಶಃ ನನ್ನ ನಟನೆ,  ಅವರಿಗೆ ಸಮಾಧಾನ ಕೊಟ್ಟಿರಬಹುದೇನೋ  ! 

ಹೀಗೆ ವಿಶಿಷ್ಟವಾದ ಶೈಲಿಯಲ್ಲಿ 'ಹೃಷಿದಾರ ಬಾವರ್ಚಿ ಚಿತ್ರ ಕತೆ' ಪ್ರಾರಂಭವಾಗುತ್ತದೆ. ಈ  ಚಲನಚಿತ್ರ ಯಾವುದೇ ಹಿಂಸಾಚಾರದ  ಸನ್ನಿವೇಶಗಳನ್ನು ಹೊಂದಿರುವುದಿಲ್ಲ. ಭಾರತೀಯ ಮಧ್ಯಮ-ವರ್ಗದ ಪರಿಸರದ ನಮ್ಮೆಲ್ಲರ ಜೀವನದಲ್ಲಿ ದೊಡ್ಡದೆಂದು ಭಾವಿಸಿಕೊಂಡಿರುವ ನಮ್ಮ ನಮ್ಮ ದೌರ್ಬಲ್ಯಗಳನ್ನು ಅರ್ಥಮಾಡಿಕೊಂಡು  (ಸಂಸ್ಕಾರಿ) ಮಾದರಿ ಅಡುಗೆಯವ ತನ್ನದೇ ರೀತಿಯನ್ನು  ಬದುಕಲು  ತಿಳಿಯ ಹೇಳಿ, ಸಂತೋಷ, ಸಂತೃಪ್ತಿಯನ್ನು ಮನೆಯವರಿಗೆ ತಂದುಕೊಡುವ  ಒಂದು ಸಂದೇಶವನ್ನು  ಹೃಷಿಕೇಶ ಮುಖರ್ಜಿಯವರು, ಚಿತ್ರದ ಮೂಲಕ ತಿಳಿಸಿದ್ದಾರೆ. 
 
ಬಾವರ್ಚಿ ಚಿತ್ರದಲ್ಲಿ ಬರುವ  ರಘುನಂದನ್ ಮಾಡುವುದಿಷ್ಟೇ.   ಜಾಯಿಂಟ್ ಫ್ಯಾಮಿಲಿಯೊಂದರಲ್ಲಿ  ಯಾವ ಸಹೋದರ ಮನೆಯ  ಬಾತ್ರೂಮ್ ನ್ನು ಮೊದಲು ಬಳಸುತ್ತಾನೆ, ಯಾರು ಬೆಳಗಿನ ಜಾವಕ್ಕೇ  ಬೇಗ ಎದ್ದು  ಚಹಾ  ಕುಡಿಯಲು ಹಾತೊರೆಯುತ್ತಾರೆ, ಎನ್ನುವ ಸಾಮಾನ್ಯ  ವಿಷಯಗಳನ್ನು ತಮ್ಮ ತಲೆಯಲ್ಲಿ ದಾಖಲಿಸಿಕೊಂಡು ತಮ್ಮ ಕೌಶಲ, ಹಾಗೂ ನಗುಮುಖದಿಂದ ಆ ಸಮಸ್ಯೆಗಳಿಗೆ ಸ್ಪಂದಿಸುವುದರಿಂದ ಮನೆಯವರಿಗೆಲ್ಲಾ  ಆಪ್ತರಾಗುತ್ತಾರೆ. ರಾಜೇಶ್ ಖನ್ನಾ ಈ ಚಿತ್ರದಲ್ಲಿ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. ಅವರ ಅಭಿನಯಕ್ಕಾಗಿ ಅತ್ಯುತ್ತಮ ನಟ (ಹಿಂದಿ) ಪ್ರಶಸ್ತಿ ಮುಡಿಗೇರಿಸಿದರು ಹಾಗೂ  ಎರಡನೇ BFJA ಪ್ರಶಸ್ತಿಗಳನ್ನೂ  ತಮ್ಮ ತೆಕ್ಕೆಗೆ ಸೇರಿಸಿಕೊಂಡರು.
ಜನಪ್ರಿಯತೆಯ ಶಿಖರವನ್ನು ತಲುಪಿದ ಹಿಂದಿ ಬಾವರ್ಚಿ  ಚಿತ್ರದ ತಮಿಳು ಅವತರಿಣಿಕೆಯನ್ನು  ಎಂ. ಕೆ. ಮುತ್ತು ಅವರೊಂದಿಗೆ 'ಸಮಯಕಾರನ್'ಎಂಬ ಹೆಸರಿನಲ್ಲಿ ರೀಮೇಕ್ ಮಾಡಿದ್ದಾರೆ.  ಕನ್ನಡದಲ್ಲಿ ಎರಡು ಬಾರಿ ರಿಮೇಕ್ ಆಗಿತ್ತು - ಮೊದಲು ಶಶಿಕುಮಾರ್ ನಟಿಸಿದ 'ಸಕಲ ಕಲಾ ವಲ್ಲಭ,' ಮತ್ತು ಎರಡನೆಯದು ಸುದೀಪ್ ಅವರೊಂದಿಗೆ 'ನಂ ೭೩, ಶಾಂತಿ ನಿವಾಸ'ವೆನ್ನುವ ಹೆಸರಿನ ಚಿತ್ರವೂ ಸೇರಿದಂತೆ  ಬಹುಶಃ ೧೯೯೭ ರಲ್ಲಿ ನಿರ್ಮಿತ  ಹಿಂದಿ ಚಲನಚಿತ್ರ 'ಹೀರೋ ನಂ. ೧' ಗೆ  ಉತ್ತಮ ಸ್ಫೂರ್ತಿಯಾಗಿ ಕಾರ್ಯ ನಿರ್ವಹಿಸಿತೆಂದು ಎಲವು ಸಿನಿ-ವೀಕ್ಷಕರ ಅಂಬೋಣ.  
ಕತೆಯನ್ನು ಸ್ಥೂಲವಾಗಿ ಹೇಳುವುದಾದರೆ  :
 
ಈಗಿನ ದಿನಗಳಲ್ಲಿ ಮನೆಯಲ್ಲಿ ಎಲ್ಲರೂ ನೌಕರಿ ಹಿಡಿದು ಜೀವನ ಮಾಡುವ ನಮ್ಮ ಸಾಮಾನ್ಯ ಮಧ್ಯಮ ವರ್ಗದಲ್ಲೂ ಇತರಹದ ಅಡುಗೆ ಭಟ್ಟನನ್ನು ನೇಮಿಸಿಕೊಳ್ಳುವುದು ಅವಶ್ಯಕವಾಗಿದೆ ಎನ್ನುವುದು ಅಕ್ಷರ ಸಹಿತ ನಿಜವಾಗುತ್ತಿದೆ.  ಸಿರಿವಂತ ಜಮೀನುದಾರರು, ಇಲ್ಲವೇ ಸರ್ಕಾರೀ ಪದವಿಯಲ್ಲಿ ಕೆಲಸಮಾಡುವ ಆಫೀಸರ್ ಗಳು ಮಾತ್ರ ಅಡುಗೆಯವನನ್ನು ನೇಮಿಸಿಕೊಳ್ಳುವುದನ್ನು ನಾವು ಕಾಣುತ್ತೇವೆ. ಆದರೆ ಬಂಗಾಳದಲ್ಲಿ ಜಮೀನುದಾರರು ಸಾಮಾನ್ಯವಾಗಿ ಮನೆತುಂಬ ನೌಕರ-ಚಾಕರನ್ನು ಹೊಂದಿರುತ್ತಾರೆ. ಎಲ್ಲ ಕೆಲಸಕ್ಕೂ ಒಬ್ಬ ನೌಕರ ಇದ್ದೇ ಇರುತ್ತಾನೆ. ಇನ್ನು ಅಡುಗೆಮಾಡಲು, ವ್ಯವಸ್ಥಿತವಾಗಿ ಬಡಿಸಲು,  ಅಡುಗೆ ಭಟ್ಟನಂತೂ ಬೇಕೇ ಬೇಕು. ಹಾಗೆ ನಾವು ಕರೆಯುವ ಅಡುಗೆ ಭಟ್ಟ  ಅಥವಾ ಬಾವರ್ಚಿ ಎನ್ನುವ ಪಾತ್ರಧಾರಿ ಮಾಡುವ ಹಲವಾರು ವಿದ್ಯಮಾನಗಳನ್ನು ಬಹಳ ಮನಸ್ಸಿಗೆ ನಾಟುವಂತೆ ಕತೆಯ ರೂಪದಲ್ಲಿ ಹೆಣೆದು ಅದಕ್ಕೆ ತಕ್ಕ ಸಂಭಾಷಣೆ, ಸಂಗೀತ ಮೊದಲಾದ ಅಗತ್ಯ ಪರಿಕರಗಳನ್ನು ಸಮಯೋಚಿತವಾಗಿ ಸೇರಿಸಿ, ಒಂದು ದೃಶ್ಯಕಾವ್ಯದಂತೆ ಪ್ರಸ್ತುತಪಡಿಸಿರುವ ರೀತಿ ಸಿನಿಮಾ ವೀಕ್ಷಕರಿಗೆ ಬಹಳ ಪ್ರಿಯವಾಗುತ್ತದೆ. ಕತೆಯಲ್ಲಿ ಬರುವ  ಮತ್ತೊಂದು ಬಹು-ಆಕ್ಷೇಪಿತ ಪಾತ್ರವೆಂದರೆ 'ದಾದು' ಎಂದು ಕರೆಯುವ ವಿಚಿತ್ರ ಸ್ವಭಾವದ ಅಜ್ಜನದು. 
 
ಬಾವರ್ಚಿ ಕತೆ, ಶಿವನಾಥ್ ಶರ್ಮ  ನೇತೃತ್ವದಲ್ಲಿ ಯಾರಜೊತೆಯಲ್ಲೂ ಹೊಂದಿಕೊಳ್ಳದೇ  ಜಗಳವಾಡುತ್ತಿರುವ  ಕುಟುಂಬದ ಸುತ್ತ ಕೇಂದ್ರೀಕೃತವಾಗಿದೆ, ದಾದೂ  ತನ್ನ ಮಗ, ಸೊಸೆ, ಮೊಮ್ಮಗಳು ಮೊದಲಾದ ಆಪ್ತಬಂದುಗಳನ್ನು  ಕೆಟ್ಟದಾಗಿ ನಡೆಸಿಕೊಳ್ಳುವುದರಿಂದ ಯಾವನೇ ಅಡುಗೆಯವನು ಬಂದು ಹೆಚ್ಚುಕಾಲ ಮನೆಯಪರಿಸರಕ್ಕೆ ಹೊಂದದೆ ಓಡಿಹೋಗುವ ರೀತಿಯದಾಗಿರುತ್ತದೆ. ಮನೆಯ ಯಜಮಾನ ದಾದೂ,  ಅಡುಗೆಯವನ ಜತೆ ಹೊಂದಾಣಿಕೆಯನ್ನು ಉಳಿಸಿಕೊಳ್ಳಲು ಅಸಮರ್ಥನಾಗಿ ಸಂಶಯಾಸ್ಪದ ಖ್ಯಾತಿಯನ್ನು ಹೊಂದಿದ್ದಾರೆ. ಪಕ್ಕದ ಮನೆಯವರಿಗೂ ಕುಟುಂಬದ ಅಪಖ್ಯಾತಿ ಎಷ್ಟರ ಮಟ್ಟಿಗೆ ಹರಡಿದೆಯೆಂದರೆ, ಶಾಂತಿ ನಿವಾಸ್ ಎಂಬ ಹೆಸರಿನ ತಮ್ಮ ಮನೆಯಲ್ಲಿ ಕೆಲಸದಾಳಾಗಿ ಇಲ್ಲವೇ ಅಡುಗೆಯವರಾಗಿ ಕೆಲಸ ಮಾಡಲು ಯಾವುದೇ ವ್ಯಕ್ತಿ ಬಯಸುವುದಿಲ್ಲ.
 
ಒಂದು ದಿನ ರಘು (ರಘುನಂದನ್) ಎಂಬ  ಯುವ-ಅಡುಗೆಯವನು  (ರಾಜೇಶ್ ಖನ್ನಾ)  ಬಂದು ಶಾಂತಿ ನಿವಾಸದ ಅಡುಗೆ ಮನೆಗೆ ಸೇರಿಕೊಳ್ಳುತ್ತಾನೆ. ಆತನಿಗೆ  ಶಾಂತಿ ನಿವಾಸ್‌ನ ಬಗ್ಗೆ ಅಲ್ಪ- ಸ್ವಲ್ಪ ಮಾಹಿತಿ ದೊರೆತಿರುತ್ತದೆ.  ಮನೆಯ  ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ವಿಶೇಷ ಆಸಕ್ತಿಗಳು ಗುಣಗಳಿರುವುದನ್ನು ಅವನು ಸೂಕ್ಷ್ಮವಾಗಿ ಗಮನಿಸುತ್ತಾರೆ.  ಆದರೆ ಈ ಬಾವರ್ಚಿ ಒಬ್ಬ ಮನಶಾಸ್ತ್ರ ನಿಪುಣ, ಮನೆಯ ವ್ಯಕ್ತಿಗಳ ಆಶಯಗಳನ್ನು ಸರಿಯಾಗಿ ಜ್ಞಾಪಕದಲ್ಲಿಟ್ಟುಕೊಂಡು ಎಲ್ಲರ ಆಸಕ್ತಿಗಳು, ಆದ್ಯತೆಗಳನ್ನು ಪೂರೈಸುವಲ್ಲಿ ತನ್ನ ಕೌಶಲವನ್ನು ತೋರಿಸುತ್ತಾನೆ. ಕೆಲವೇ ವಾರಗಳಲ್ಲಿ ಅವನು ಮನೆಯ ಒಬ್ಬ ಆಪ್ತ ಸದಸ್ಯನ ತರಹ ಎಲ್ಲರ ನಂಬಿಕೆಯನ್ನು  ಗಳಿಸುತ್ತಾನೆ. ಮನೆಯ ಸದಸ್ಯರ ಚಿಕ್ಕ-ಪುಟ್ಟ ಆಂತರಿಕ ಜಗಳಗಳನ್ನು ನಿವಾರಿಸುತ್ತಾನೆ ; ಮತ್ತು ಕುಟುಂಬವನ್ನು ಮತ್ತೆ ಒಂದುಗೂಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಾನೆ. 
 
ಈ ಚಿತ್ರದಲ್ಲಿ ಹೆಸರಾಂತ ನಾಯಕ ನಟ, ಅಮಿತಾಭ್ ಬಚ್ಚನ್  ಅಭಿನಯಿಸುವುದಿಲ್ಲ. ಬದಲಿಗೆ ಗಡಸು ಕಂಠದಲ್ಲಿ ಕತೆಯ ನಿರೂಪಕನಾಗಿ ಮಿಂಚುತ್ತಾರೆ.  ಅವರ ಪತ್ನಿ,  ಜಯ ಬಚ್ಚನ್ ಒಂದು ತರಹ ನಾಯಕಿ ಎನ್ನಬಹುದಾದ ಪಾತ್ರದಲ್ಲಿ ಎಲ್ಲರನ್ನು ಆಕರ್ಷಿಸುತ್ತಾಳೆ. ಅಮಿತಾಭ್ ತಮ್ಮ ವ್ಯಂಗ್ಯಭರಿತ ಧ್ವನಿಯಲ್ಲಿ  "ಶಾಂತಿ ನಿವಾಸ"  ನಲ್ಲಿ ಅಶಾಂತಿಯಿಂದ ಕೊರಗುತ್ತಿರುವ ಶಿವನಾಥ ಶರ್ಮ, ಅಥವಾ ದಾದೂಜೀ (ಹರಿಂದ್ರ ನಾಥ ಚಟ್ಟೋಪಾಧ್ಯಾಯ) ಕುಟುಂಬದ ಸದಸ್ಯರ ವಿವರಣೆ ಕೊಡುತ್ತಾರೆ. ಅದು-ಇದು ತಿಳಿಸಿದ ನಂತರ, ಮನೆಯ ಅತಿ ಮುಖ್ಯ ಅಡುಗೆ ಕೆಲಸ ನಿಭಾಯಿಸುವ ಅಡುಗೆ ಭಟ್ಟನನ್ನು ಮತ್ತು ಸೇವಕರನ್ನು  ತಮ್ಮ ಮನೆಯಲ್ಲೇ ಉಳಿಸಿಕೊಳ್ಳುವಲ್ಲಿ ಮನೆಯವರೆಲ್ಲ ಸೋಲುತ್ತಾರೆ. ಮುಂದುವರೆಯುತ್ತಾ ಅಮಿತಾಭ್ ಇದೊಂದು  ಪರಿಹರಿಸಲಾಗದ 'ಅಪಶ್ರುತಿ'ಎಂದು ಬಣ್ಣಿಸುತ್ತಾರೆ. 
 
ಶಿವನಾಥ  ಶರ್ಮ ಜೀವನದಲ್ಲಿ ನೊಂದ  ಅತೃಪ್ತ ವ್ಯಕ್ತಿ, ಮಾನಸಿಕಶಾಂತಿ  ಕಳೆದುಕೊಂಡಿದ್ದಾರೆ. ಹೆಂಡತಿ ಮರಣದ ಬಳಿಕವಂತೂ ಅವರ  ಧೋರಣೆಗಳು ಮತ್ತು ಮನಃಸ್ಥಿತಿ ಬಹಳ ಗೊಂದಲ ಮಯವಾಗಿದೆ. ಈ ವಿಷಯವನ್ನು ಮನೆಯವರೆಲ್ಲಾ ಬಲ್ಲರು.  ಮುಂಗೋಪಿಯಾದ  ಶರ್ಮ, ,ಯಾವಾಗಲೂ ತಮ್ಮ ಗಂಡುಮಕ್ಕಳು, ಸೊಸೆಯರು, ಮತ್ತು ಮಕ್ಕಳಿಗೆ ಬೆಳಿಗ್ಯೆ ಚಹಾ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ, ಎನ್ನುವ ದೂರನ್ನು ದೊಡ್ಡದಾಗಿ ಮಾಡಿಕೊಂಡು ದಿನವನ್ನೆಲ್ಲ ಬೇಸರದಿಂದ ಕಳೆಯುತ್ತಾರೆ.  ಅವರ ಎರಡನೆಯ ಮಗ-ಸೊಸೆ ಹಿಂದೆ ಒಂದು ಕಾರ್ ಅಪಘಾತದಲ್ಲಿ ಮರಣಹೊಂದಿದ್ದರು. ಅವರ ಅನಾಥ  ಮಗಳು ಕೃಷ್ಣಾ ಶರ್ಮ (ಜಯ ಭಾಧುರಿ) ಅವರ ಜೊತೆಯೇ ಇದ್ದಾಳೆ. ಈಕೆಯ ಯೋಗಕ್ಷೇಮದ ಬಗ್ಗೆ ಶರ್ಮರಿಗೆ ಯಾವಾಗಲೂ ತೀವ್ರವಾದ ಕಾಳಜಿ. ಕೃಷ್ಣಾ ಹಸನ್ಮುಖದ ಸರಳ ವ್ಯಕ್ತಿತ್ವದ  ಚೆಲುವೆ.  ಆದರೆ ತನ್ನದೇ ಆದ ಸ್ವತಂತ್ರ್ಯ ಸ್ವಭಾವವನ್ನು ಹೊಂದಿದ್ದಾಳೆ, ಸರಳವಾದ ಉಡುಪಿನಲ್ಲೂ  ಅವಳು ಲಕ್ಷಣವಾಗಿ ಕಾಣುತ್ತಾಳೆ ;  ಸದಾ ಮಂದಹಾಸದಲ್ಲಿರುವ ಆಕೆ,  ಕಡಿಮೆ ಗೊಂದಲದಲ್ಲಿಯೇ ಮನೆಯ ಮುಖ್ಯವಾದ ಕೆಲಸಗಳನ್ನೆಲ್ಲ ನಿಭಾಯಿಸಿಕೊಂಡು ಹೋಗುವುದು ಆಕೆಯ ವಿಶೇಷತೆ.   
ಇನ್ನು  ದಾದೂಜಿಯವರ ಹಿರಿಯ ಮಗ ರಾಮನಾಥ್ (ಎ.ಕೆ. ಹಂಗಲ್), ಮತ್ತು ಆತನ ಪತ್ನಿ ಸೀತಾ (ದುರ್ಗಾ ಖೋಟೆ) ಮತ್ತು ಅವರ ಮಗಳು ಮೀತಾ (ಮನೀಶಾ) ಇದ್ದಾರೆ. ರಾಮ್‌ನಾಥ್ ಒಂದು ಖಾಸಗಿ ಕಂಪೆನಿಯಲ್ಲಿ ಗುಮಾಸ್ತರಾಗಿದ್ದು, ಅವರ ಕುಟುಂಬ ಜೀವನವು ಅವರ ಕೆಲಸದ ಮೇಲೆ ಪ್ರಭಾವ ಬೀರುತ್ತಿದೆ. ವರಮಾನ ಕಡಿಮೆ. ಮನೆಯ ಖರ್ಚು ಜಾಸ್ತಿ.ಮನೆಯ ಖರ್ಚುಗಳನ್ನು ತೂಗಿಸಿಕೊಂಡು ಹೋಗುವುದು ಕಷ್ಟ. ಅದಕ್ಕಾಗಿ ಆಗಾಗ ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಹೆಂಡತಿ ಮತ್ತು ಮಗಳೊಂದಿಗೆ ಪ್ರೀತಿಯಿಂದ ವ್ಯವಹರಿಸುವುದು ಅವರ ವಿಶೇಷತೆಗಳಲ್ಲೊಂದು. 
 
ಸೀತಾ ರಮಾನಾಥ್ ರಿಗೆ ವಯಸ್ಸಾಗಿದೆ.  ಅವರನ್ನು ಸದಾ ಕಾಡುತ್ತಿರುವ ಸಂಧಿವಾತದ ಸಮಸ್ಯೆ ಬಗ್ಗೆ ಸದಾ ಗೊಣಗುವುದು ಅವರ ಸ್ವಭಾವ. ಮನೆ ಕೆಲಸಗಳಲ್ಲಿ ಸಹಾಯ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ, ಮಗಳು ಮೀತಾ  ಸೋಮಾರಿ.  ತನ್ನ ನೃತ್ಯ ಪಾಠಗಳು ಮತ್ತು ಪಾರ್ಟಿ ಭೇಟಿಗಳಿಗಾಗಿ ಬೆಳಗಿನಿಂದಲೇ ತಯಾರಿ ಮಾಡಿಕೊಂಡು ಮನೆಯಿಂದ ಹೊರಗೆ ಹೋಗುವುದೇ ಆಕೆಗೆ ದೊಡ್ಡ ಕೆಲಸಮಾಡಿದಷ್ಟು ಸಮಾಧಾನ.  ದಾದೂಜಿಯವರ ಮೂರನೆಯ ಮಗ ಕಾಶಿನಾಥ್ (ಕಾಳಿ ಬ್ಯಾನರ್ಜಿ) ಒಬ್ಬ ಆಡಂಬರದ ಶಾಲಾ ಶಿಕ್ಷಕ, ಅವರು ತನ್ನ ಹೆಂಡತಿ ಶೋಭಾ (ಉಷಾ ಕಿರಣ್) ಮತ್ತು ಅವರ ಚಿಕ್ಕ ಮಗ ಪಿಂಟೂ (ರಾಜು ಶ್ರೇಷ್ಠ) ಜೊತೆಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕುಟುಂಬದ ಕೊನೆಯ ಸದಸ್ಯ, ದಾದೂಜಿ ಅವರ ನಾಲ್ಕನೇ ಮಗ ವಿಶ್ವನಾಥ ಶರ್ಮಾ (ಅಸ್ರಾನಿ ), ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕ, ಅವರು ಇಂಗ್ಲಿಷ್ ಹಾಡುಗಳನ್ನು ನಕಲಿಸಿ,  ಹಿಂದಿ ಚಲನ ಚಿತ್ರದ ಸಾಹಿತ್ಯವನ್ನು ಸೇರಿಸುತ್ತಾರೆ. ಕೃಷ್ಣಬೆಹೆನ್  ಸರಿಯಾಗಿ ಲಯಬದ್ಧವಾಗಿ ಹಾಡಿದಾಗ ರೆಕಾರ್ಡ್ ಮಾಡುವುದರಲ್ಲಿ  ಸಹಕರಿಸುತ್ತಾರೆ. ಚಿತ್ರದ ಕೊನೆಯ ಎರಡು ಪಾತ್ರಗಳೆಂದರೆ ಗುರೂಜಿ (ಪೈಂಟಲ್), ಮೀತಾ ಅವರ ನೃತ್ಯ ಶಿಕ್ಷಕ,  ಯುವ-ಅರುಣ್, ಕೃಷ್ಣಬೆಹೆನ್ ಗೆ ಸಂಗೀತ  ಪಾಠಹೇಳಿಕೊಡುವ ಶಿಕ್ಷಕ. ಕೃಷ್ಣಾ ಬೆಹೆನ್ ಳನ್ನು ಪ್ರೀತಿಸುತ್ತಿರುತ್ತಾನೆ. 
 
'ಶಾಂತಿ ನಿವಾಸ'ದ  ಕೌಟುಂಬಿಕ ಮನಸ್ತಾಪಗಳು, ಕಾರಣಗಳು, ತಮ್ಮದೇ ಆದ ಸ್ವಾರ್ಥವನ್ನು ಆಧರಿಸಿವೆ. ಮನೆಯಿಂದ ಕೆಲಸ ಬಿಟ್ಟು ಹೋದ ಸೇವಕ, ಅಥವಾ ಬಾವರ್ಚಿಯರ ಬದಲಿಗೆ ಬೇರೆಯವರನ್ನು ಹುಡುಕಿ ನೇಮಿಸಿಕೊಳ್ಳುವ ಬಗ್ಗೆ ಯಾರಿಗೂ ಜವಾಬ್ದಾರಿಯಾಗಲೀ ಆಸಕ್ತಿಯೂ ಯಿಲ್ಲ.  ಇಂತಹ ಸಂದಿಘ್ದ ಪರಿಸ್ಥಿತಿಯ ಮನೆಗೆ, ರಘುನಂದನ್ ಹೊಸ ಅಡುಗೆಯವನಾಗಿ ಬಂದು ಸೇರಿಕೊಳ್ಳುತ್ತಾರೆ. ತಾವೇ ಬಾಗಿಲಿನಲ್ಲಿ  ಕಾಣಿಸಿಕೊಂಡು  ಕಡಿಮೆ ಸಂಬಳಕ್ಕೆ ಒತ್ತಾಯಿಸಿ, ಒಪ್ಪಿಕೊಂಡು ಎಲ್ಲರ ಇಷ್ಟದಂತೆ  ಅದ್ಭುತವಾದ ರುಚಿ-ರುಚಿಯಾದ  ಅಡುಗೆ ಮಾಡಿ, ತಮಾಷೆಯಾಗಿ ಮಾತಾಡಿಸುತ್ತಾ ಬಡಿಸಿ,  ರಘು ಎಲ್ಲರ ಪ್ರಾರ್ಥನೆಗೆ ಉತ್ತರವಾದಂತೆ ತೋರುತ್ತಾರೆ. ರಘುನಂದನ್, ಒಬ್ಬ ತತ್ವಜ್ಞಾನಿ, ಗಾಯಕ, ಸಂಗೀತ ಸಂಯೋಜಕ ಮತ್ತು ನೃತ್ಯ ಬೋಧಕರಾಗಿ ಪ್ರತಿಭೆಯನ್ನು ಹೊಂದಿದ್ದಾರೆ. ಗಮನಿಸಬೇಕಾದ ವಿಷಯವೆಂದರೆ, ದಾದೂಜಿಯ  ಮಂಚದ ಕೆಳಗೆ ಕಬ್ಬಿಣದ ಸರಪಳಿಯಿಂದ ಬಿಗಿಯಲಾದ  ದೊಡ್ಡ ಕಬ್ಬಿಣದ ಪೆಟ್ಟಿಗೆಯಲ್ಲಿ ರಘು ತನ್ನ ಆಸಕ್ತಿಯನ್ನು ತೋರಿಸುತ್ತಿರುತ್ತಾರೆ.  ಈ ದೊಡ್ಡ ಪೆಟ್ಟಿಗೆಯು ಕುಟುಂಬದ ಆಭರಣಗಳನ್ನು ಹೊಂದಿದ್ದು, ಸ್ವಲ್ಪ ಯಾಮಾರಿದರೂ ಆ ವಡವೆಗಳೆಲ್ಲಾ ಯಾರಾದರೂ ಕಳ್ಳನ ಕೈಸೇರುತ್ತವೆ ಎನ್ನುವುದು  ರಘುವಿನ  ನಿರ್ಧಾರ. 
 
ರಘುನಂದನ್ ಕೃಷ್ಣಾ ಬೆಹೆನ್ ಗೆ  ಸಂಗೀತ ಕಲಿಸುತ್ತಾರೆ.  ಮತ್ತು ನಾಚಿಕೆ ಸ್ವಭಾವದಿಂದ ಹೊರಗೆಲ್ಲೂ ಕಾಣಿಸಿಕೊಳ್ಳದ ಆಕೆಯ  ಪ್ರತಿಭೆಯನ್ನು ಮನೆಯವರೆಲ್ಲರ ಗಮನಕ್ಕೆ ತರುತ್ತಾರೆ. ಕುಟುಂಬ ಸದಸ್ಯರ ನಡುವಿನ ತಪ್ಪು ತಿಳುವಳಿಕೆಯನ್ನು ನಿವಾರಿಸಲು ತನ್ನ ಬುದ್ಧಿ ಶಕ್ತಿಯನ್ನೆಲ್ಲಾ ಮುಡಿಪಾಗಿಡುತ್ತಾರೆ.  ರಘು ನಿಜವಾಗಿಯೂ  ಒಬ್ಬ ದೇವದೂತನೆಂದು ದಾದೂಜಿ ಬಲವಾಗಿ ನಂಬುತ್ತಾರೆ. 
 
ಈತನ್ಮಧ್ಯೆ, ಕೃಷ್ಣಬೆಹೆನ್ ಮತ್ತು ಅರುಣ್‌ ಒಬ್ಬರನ್ನೊಬ್ಬರು  ಪ್ರೀತಿಸುತ್ತಿದ್ದಾರೆ  ಎಂದು ರಘು ಅರ್ಥಮಾಡಿಕೊಳ್ಳುತ್ತಾರೆ.  ಆದರೆ ಶಿವನಾಥ್ ಶರ್ಮರು, ಕೃಷ್ಣಾ ಬೆನ್  ಮತ್ತು ಅರುಣ್ ಒಟ್ಟಿಗೆ ಸೇರುವುದನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತಾರೆ. ಈ ತರಹದ ಎಲ್ಲಾ ಸಿಕ್ಕುಗಳ ನಡುವೆ, ಒಂದು ದಿನ,  ರಘು ಇದ್ದಕ್ಕಿದ್ದಂತೆ ಮನೆಯಿಂದ ಮಾಯವಾಗುತ್ತಾರೆ, ಆದರೆ ಆಭರಣದ ಪೆಟ್ಟಿಗೆಯೂ ಕಾಣೆಯಾಗಿದೆ ಎಂದು ತಿಳಿದ ಶರ್ಮರು ಬಹಳ  ಗಾಬರಿಯಾಗಿದ್ದಾರೆ. ಶರ್ಮ ಮನೆಯವರನ್ನೆಲ್ಲಾ ಕೂಗಿ ಕರೆದು ಮನೆಯಲ್ಲಿ ಕಳ್ಳತನವಾಗಿದೆ. ಒಡವೆ ಪೆಟ್ಟಿಗೆಯನ್ನು ಕಳ್ಳರು ಕದ್ದಿದ್ದಾರೆ, ಎಂದು ಗೋಳಿಟ್ಟಾಗ, ಕಳ್ಳ ಕನ್ನ ಹಾಕಿಲ್ಲ. ಬೀಗ ತೆಗೆದು ಕಳ್ಳತನ ಮಾಡಿದ್ದಾನೆ,  ಎಂದು ಮನದಟ್ಟಾಗುತ್ತದೆ. ಆತ ಮನೆಯವನೇ ಎಂದು ಖಚಿತವಾಗಿ, ರಘುವಿನಮೇಲೆ ಸಂಶಯ ಧೃಡವಾಗುತ್ತದೆ. ಮನೆಯ ಸದಸ್ಯರೆಲ್ಲ ತಾವು ಅತಿ ಹೆಚ್ಚಾಗಿ ರಘುನಂದನ್ ರನ್ನು ನಂಬಿದ್ದು ಇಷ್ಟು ಅನರ್ಥಕ್ಕೆ ಕಾರಣವಾಯಿತು ಎಂದು ಪೇಚಾಡಿ ಕೊಳ್ಳುತ್ತಾರೆ. 
 
ಆದರೆ ಇದೇ ಹೊತ್ತಿಗೆ  ಅರುಣ್  ಹೊರಗಡೆಯಿಂದ ಬಂದವನೇ,  ಆಭರಣ ಪೆಟ್ಟಿಗೆಯ ಜತೆ ಕಾಣಿಸಿಕೊಂಡು ಅದನ್ನು ದಾದೂರಿಗೆ ಒಪ್ಪಿಸುತ್ತಾನೆ.  ಇಂತಹ ವಿದ್ಯಮಾನವನ್ನು ನಂಬದ  ದಾದು ಏರಿದ ಧ್ವನಿಯಲ್ಲಿ ಅರುಣ್ ನ ಗುಣಗಾನ ಮಾಡುತ್ತಾರೆ. ಹಿಂದೆ ಯಾವುದೊ ಕಾರಣಕ್ಕೆ  ಅವನನ್ನು ಅವಮಾನಿಸಿದ ಬಗ್ಗೆ ನಾಚುಗೆ ವ್ಯಕ್ತಪಡಿಸುತ್ತಾರೆ. ರಘು ವನ್ನು ದೂಷಿಸಲು ಪ್ರಾರಂಭಿಸುತ್ತಾರೆ. 
ಆಭರಣದ ಪೆಟ್ಟಿಗೆ  ವಾಪಾಸ್ತ  ತರಲು ಸಾಧ್ಯವಾದದ್ದು ಹೇಗೆ ಎಂದು ವಿವರಿಸಲು ಅರುಣ್ ಪ್ರಯತ್ನಿಸುತ್ತಾನೆ. ನಾನು ರಾಘವನ್ನು ಕಂಡಾಗ ಅವರ ಬಳಿ ಈ ಪೆಟ್ಟಿಗೆ ಇತ್ತು. ಪೆಟ್ಟಿಗೆಯೊಂದಿಗೆ ಅನುಮಾನಾಸ್ಪದ ಸ್ಥಿತಿಯಲ್ಲಿ ಅವರು ನಡೆದುಕೊಂಡ ರೀತಿಯಲ್ಲಿ ನನಗೆ ಅನುಮಾನ ಬರತೊಡಗಿತು.  ರಘುವನ್ನು  ಪೆಟ್ಟಿಗೆಯ ಬಗ್ಗೆ  ವಿಚಾರಿಸಿದಾಗ, ಅವರು ಮುಖಕ್ಕೆ ಮುಖ ಕೊಟ್ಟು ಉತ್ತರಿಸದೆ ಓಡಿಹೋಗಲು ಪ್ರಯತ್ನಿಸಿದರು.  ಆಗ ನಾನು ರಘುವನ್ನು ತಡೆಯಲು ಪ್ರಯತ್ನಿಸಿದಾಗ, ನಮ್ಮಿಬ್ಬರ ನಡುವೆ ಗುದ್ದಾಟ ಶುರುವಾಯಿತು. (ಅರುಣ್ ಕುಸ್ತಿಪಟು), ಗಾಬರಿಗೊಂಡ  ರಘು  ಆಭರಣ ಪೆಟ್ಟಿಗೆಯನ್ನು ನೆಲದಮೇಲಿಟ್ಟು  ತಪ್ಪಿಸಿಕೊಂಡು ಹೋಗುವುದರಲ್ಲಿ ಯಶಸ್ವಿಯಾದರು.
 
ಈ ಕತೆಯನ್ನೆಲ್ಲಾ ನಂಬಿದ ಮನೆಯವರೆಲ್ಲಾ ರಘುವಿನ ಮೇಲೆ ಕೋಪಗೊಂಡು ಅವನನ್ನು  ಎಲ್ಲರೂ ಅತಿಯಾಗಿ ನಿಂದಿಸುತ್ತಿರುವುದನ್ನು  ಸಹಿಸಲಾರದ ಅರುಣ್ ನಿಜಸ್ಥಿತಿಯನ್ನು ಎಲ್ಲರಿಗೆ ನಿಧಾನವಾಗಿ  ವಿವರಿಸುತ್ತಾನೆ. ನಾನು ವ್ಯಾಯಾಮ ಶಾಲೆಯಲ್ಲಿ ಅಭ್ಯಾಸ  ಮಾಡುತ್ತಿದ್ದಾಗ ರಘು ಭಯ್ಯ ಬಂದು ನನ್ನ ಜತೆ ಕುಸ್ತಿ ಸೆಣೆಸಲು ಆಶಿಸಿದರು. ನಾವಿಬ್ಬರೂ ಒಂದೆರಡು ಪಟ್ಟು ಕುಸ್ತಿ ಆಡಿದೆವು. ಆದರೆ ರಘು ಭಯ್ಯ ಮಧ್ಯದಲ್ಲೇ ನನ್ನನ್ನು ತಡೆದು, ನೀನು ಇದಕ್ಕಿಂತ ದೊಡ್ಡ ಪಟ್ಟುಗಳನ್ನು ಎದುರಿಸಬೇಕಾಗುತ್ತದೆ, ಎಂದು ಹೇಳಿದಾಗ ನನಗೆ ಅರ್ಥವಾಗಲಿಲ್ಲ. ಆಗ ರಘುಭಯ್ಯ ನನ್ನನ್ನು ರೂಮಿನೊಳಗೆ ಕರೆದುಕೊಂಡು ಹೋದರು. ಅವರ ಕೈನಲ್ಲಿ ಒಂದು ಚಿಕ್ಕ ಪೆಟ್ಟಿಗೆ ಇತ್ತು. ಅದು ಆಭರಣಗಳ ಪೆಟ್ಟಿಗೆ ; ಇದನ್ನು ಜೋಪಾನವಾಗಿ ದಾದೂ ರವರ ಕೈಗೆ ಒಪ್ಪಿಸು ಎಂದು ಹೇಳಿ, ನಾನು ಕೊಟ್ಟೆ, ಎಂದು ಮಾತ್ರ ಹೇಳಬೇಡ ಎಂದು ನನ್ನ ಕೈಲಿ ವಾಗ್ದಾನ ಮಾಡಿಸಿಕೊಂಡರು. ಇದೇ ನಿಜವಾದ ಸಂಗತಿ. ದೇವರಂಥ ರಘುವನ್ನು ನಿಂದಿಸುವುದು ಬೇಡವೆಂದು ಹೇಳಿ ಕಣ್ಣೀರು ಸುರಿಸಿದಾಗ, ಮನೆಯಲ್ಲಿ ಎಲ್ಲರಿಗು ಗೊಂದಲ, ಭಯ, ಉದ್ವೇಗ ಪಾಪಪ್ರಜ್ಞೆ ಉತ್ಪನ್ನವಾಯಿತು. 
ಈ ಅನಿರೀಕ್ಷಿತ ಘಟನೆಯಿಂದ ದಿಗ್ಭ್ರಮೆಗೊಂಡ ಶರ್ಮರು ಅರುಣ್‌ನ ಬಗೆಗಿನ ಕೀಳು ಮನೋಭಾವವನ್ನು ಬದಲಾಯಿಸುತ್ತಾರೆ ; ಮತ್ತು ಅವರು ಕೃತಜ್ಞತೆಯಿಂದ ಕೃಷ್ಣಳನ್ನು ಮದುವೆಯಾಗಲು ಅರುಣ್ ನನ್ನು ಬೇಡುತ್ತಾರೆ. 
 
ಅಷ್ಟರಲ್ಲಿ, ಕೃಷ್ಣಾ ಬೆನ್, ಕಿಟಕಿಯಿಂದ ಬೇರೆಕಡೆ  ಓಡಿ ಹೋಗಲು ಹವಣಿಸುತ್ತಿರುವ  ರಘುವನ್ನು ನೋಡಿ ಅವನ ಬಳಿಗೆ ಓಡಿ ಬರುತ್ತಾಳೆ.  ರಘು ಭಯ್ಯ, ಇಷ್ಟೆಲ್ಲಾ ಏಕೆ  ಮಾಡಿದಿರಿ ? ಎಂದು ಕೇಳಿದಾಗ,  ರಘುನಂದನ್ ತಮ್ಮ  ನಿಜವಾದ ಪರಿಚಯವನ್ನು ಹೇಳುತ್ತಾ ಹೋಗುತ್ತಾರೆ.  ತನ್ನ ನಿಜವಾದ ಹೆಸರು "ಪ್ರೊಫೆಸರ್ ಪ್ರಭಾಕರ್" ಎಂದು ಬಹಿರಂಗಪಡಿಸುತ್ತಾರೆ.  ಪ್ರಭಾಕರ್  ಹೇಳುವಂತೆ, ಒಡೆಯುವ ಅಂಚಿನಲ್ಲಿರುವ ಶರ್ಮರಂತಹ ಅನೇಕ  ಸಂತಪ್ತ   ಕುಟುಂಬಗಳನ್ನು ನೋಡಿ ಅವರ ಮುಜುಗುರವನ್ನು ಕಣ್ಣಾರೆ ಕಂಡು ದುಃಖಿತನಾಗಿರುವುದರಿಂದ ತನ್ನಿಂದಾದ  ಕಿಂಚಿತ್ ಸೇವೆಯಿಂದ  ಅವರ ಕಣ್ಣೀರನ್ನು ಒರಸುವಲ್ಲಿ ನೆರವಾದರೆ ತನ್ನ ಜನ್ಮ ಸಾರ್ಥಕವೆಂದು ಭಾವಿಸಿ ಈ ತರಹದ ಕಾರ್ಯಕ್ಕೆ ಇಳಿಯಬೇಕಾಯಿತು ಎಂದು ಹೇಳುವಾಗ, ಎಲ್ಲರ ಮನಸ್ಸಿಗೂ ಒಂದು ತರಹ 'ಪಿಚ್' ಎನ್ನಿಸುತ್ತದೆ.  ಮನಸ್ಸಿನೊಳಗೆ ಅಪರಾಧ ಪ್ರಜ್ಞೆ ಆವರಿಸಿ ಅಂತಹ ಒಂದು ಚಿಕ್ಕ ಕೆಲಸವನ್ನೂ ನಾವು ಮಾಡಲಿಲ್ಲವಲ್ಲ ಎನ್ನುವ ನಮ್ಮ ಬಗ್ಗೆಯೇ ಕೀಳರಿಮೆ ಮೂಡುತ್ತದೆ. 
 
ನಾನು ರಘು ಎಂಬ ಹೆಸರಿನಲ್ಲಿ ಸೇವಕನಂತೆ ಎಲ್ಲರ ಹತ್ತಿರ ಪರಿಚಯಿಸಿಕೊಂಡು ಯಾರ ಯಾರೋ ಜನರ ಮನೆಯಲ್ಲಿ ತನ್ನ ಜೀವಿತವನ್ನು ಕಳೆಯಲು  ನಿರ್ಧರಿಸಿದೆ. ಈ ವಿಷಯ ತಿಳಿದಮೇಲೂ, ಜನ ತಮ್ಮ ಸಣ್ಣತನವನ್ನು ನಿಲ್ಲಿಸಲು ಸ್ವಲ್ಪವೂ ಪ್ರಯತ್ನಿಸಲಿಲ್ಲ, ಇದೇ ನನಗೆ ದುಃಖದ ಸಂಗತಿ.  ಇವೆಲ್ಲಾ ವಿದ್ಯಮಾನಗಳನ್ನು ತಮ್ಮ ಕಣ್ಣೆದುರಿಗೇ ನೋಡುತ್ತಾ  ಜೀರ್ಣಿಸಿಕೊಳ್ಳಲು ಅರಿಯದೆ  ದಿಗ್ಭ್ರಮೆಗೊಂಡ ಶರ್ಮಾ ಕುಟುಂಬವು ಶಾಂತಿ ನಿವಾಸ್‌ನಂತಹ ಹಲವಾರು ಮನೆಗಳನ್ನು ಉಳಿಸಲು ರಘು ತನ್ನ ಮಾರ್ಗವನ್ನು ತೆಗೆದುಕೊಂಡಿದ್ದಾರೆ,  ಎಂಬುದನ್ನು ಬಹಳ ಕಷ್ಟದಿಂದ ಒಪ್ಪಿಕೊಳ್ಳುತ್ತಿರುವಾಗಲೇ ಅವರು ಈಗಾಗಲೇ ಬೇರೆ ಮನೆಗೆ ಹೋಗಲು ನಿರ್ಧರಿಸಿರುವುದನ್ನು ಅರಿತು ದುಃಖ ಪಟ್ಟರು.  
 
ಕೃಷ್ಣಬೆಹೆನ್  ಪ್ರೀತಿ, ವಿಶ್ವಾಸಗಳು  ರಘುವನ್ನು ಬೇರೆಡೆ ಹೋಗದಂತೆ ತಡೆಯಲು ಯಶಸ್ವಿಯಾಗುವ ತರಹ ಕಾಣಿಸಿದರೂ,  ರಘು ಮಾತ್ರ ಗಟ್ಟಿ ಮನಸ್ಸಿನಿಂದ  ಇದು ತನ್ನ ಜೀವನದ ಪರಮೋದ್ದೇಶವಾಗಿದೆ  ಮತ್ತು ಅದಕ್ಕಾಗಿ  ತಾನು ಹೋಗಲೇಬೇಕು ಎಂದು ಧೃಡ ನಿರ್ಧಾರದಿಂದ ಹೇಳುವ ಮಾತುಗಳನ್ನು ಯಾರಿಗೂ ಕೇಳಲು ಇಷ್ಟವಾಗುವುದಿಲ್ಲ. 
 
ಎರಡೂವರೆ ಗಂಟೆಯಿಂದ ಚಲನ ಚಿತ್ರವನ್ನು ವೀಕ್ಷಿಸುತ್ತಿರುವ ಅಂಕಲ್, ಆಂಟಿ, ಹೆಣ್ಣು ಮಕ್ಕಳು ಯಾಕೆ ಹೋಗಬೇಕು ? ಎಂದು ಮಿಡುಕಾಡುವ ದೃಶ್ಯ ಬಹಳ ಮಾರ್ದವತೆಯಿಂದ ಕೂಡಿರುತ್ತದೆ. ಸಿನಿಮಾ ಹಾಲ್ ನಲ್ಲಿ  ಮಗುವೊಂದು, ಅಮ್ಮಾ ರಘು ಅಂಕಲ್ ಮನೆ ಬಿಟ್ಟು ಹೋಗ್ತಾರಾ, ಎಂದು ಕೇಳಿದ್ದಕ್ಕೆ ಉತ್ತರ ಕೊಡುವ ಹೊತ್ತಿಗೆ ಸಾಕು ಸಾಕಾಗುತ್ತದೆ.
 
ನಾನು ಐದು ದಶಕಗಳ ಹಿಂದೆ  ಇದೇ ಚಿತ್ರವನ್ನು ನೋಡಿದಾಗಲೂ ಹೀಗೆಯೇ ಮನಸ್ಸು ಹೊಯ್ದಾಡುತ್ತಿತ್ತು. ಈಗಲೂ ಹೊಸ ಪೀಳಿಗೆಯ ಜನರೂ ಲೊಚ್ ಲೊಚ್ ಎಂದು ಬಿಸಿಸುಯ್ಯುವುದನ್ನು ನೋಡಿ ನನಗೆ ಹೇಗನ್ನಿಸಬೇಡ ? ಹೃಷಿದಾ, ರಾಜೇಶ್ ಖನ್ನಾ, ಕೃಷ್ಣಾ ಬೆಹೆನ್ ನಮ್ಮೆಲ್ಲರ ಮೇಲೆ ಎಂಥಹ ಜಾದು ಮಾಡಿಬಿಟ್ಟರಲ್ಲ ಎಂದು ಹೇಳುವುದಷ್ಟೇ ನಮ್ಮೆಲ್ಲರಿಗೂ ತೋಚುವುದು !
 
ಈಗ  ಇನ್ನೇನು ಬಾವರ್ಚಿ ಚಲನಚಿತ್ರ ಮುಗಿಯುವ ಸ್ಥಿತಿ ತಲುಪಿದೆ.  ನಿಧಾನವಾಗಿ ಉದ್ಘೋಷಕ  ಅಮಿತಾಭ್ ತನ್ನ ನಡುಗುವ ಅನುಕಂಪ ಭರಿತ ಗಾಢವಾದ ಧ್ವನಿಯಲ್ಲಿ "ಇಗೋ ನೋಡಿ ರಘು ಮತ್ತೊಂದು ಅಶಾಂತಿ ಗೃಹವೊಂದನ್ನು ಹುಡುಕುವ ಪ್ರಯಾಣಕ್ಕೆ ಸಿದ್ಧನಾಗುತ್ತಿದ್ದಾನೆ ; ಬಹುಶಃ ಅದು ನಿಮ್ಮಮನೆಯಲ್ಲವೆಂದು ಭಾವಿಸಬಹುದೇ" ? ಎಂದು ಪ್ರಶ್ನಿಸುವ ಸಮಯಕ್ಕೆ ಚಿತ್ರ ಮುಗಿಯುತ್ತದೆ. ಭಾವುಕರಾಗಿ ಕರವಸ್ತ್ರದಲ್ಲಿ ತಮ್ಮ ಕಣ್ಣು ಮೂಗು ಒರೆಸಿಕೊಳ್ಳುತ್ತಾ ನಿಧಾನವಾಗಿ ತಮ್ಮ ತಮ್ಮ ಸೀಟಿನಿಂದ ಎದ್ದು ಹೊರಗೆ ಹೋಗುವ ದೃಶ್ಯಕ್ಕೆ ನಾವೂ  ಬದ್ಧರಾಗುತ್ತೇವೆ. 
 
ರಬಿ ಘೋಷ್ ನಟಿಸಿದ ಬೆಂಗಾಲಿ  ಚಿತ್ರ, ಗಲ್ಪೋ ಹೊಲೆ ಸತ್ತಿ (೧೯೬೬) ತಪನ್ ಸಿನ್ಹಾ ನಿರ್ಮಿತ. ೧೯೭೨ ರಲ್ಲಿ ೮  ಅತಿ ಹೆಚ್ಚು ಹಣಗಳಿಸಿದ ಚಿತ್ರಗಳಲ್ಲೊಂದಾಗಿತ್ತು.  ಇಂಟರ್ ವ್ಯೂ ಒಂದರಲ್ಲಿ ರಾಜೇಶ್ಬಾ ಖನ್ನಾ, ಬಾವರ್ಚಿ ಚಿತ್ರದಲ್ಲಿ ಹೃಷಿದಾ ಹೇಳಿದ್ದಕ್ಕೆ ವಿರುದ್ಧವಾಗಿ, ಹಾಗೂ ಆನಂದ್ಚಿತ್ರದಲ್ಲಿ (೧೯೭೧) ನನಗೆ ತೋಚಿದಂತೆ ಅಭಿನಯಿಸಲು ಸಲಹೆ ಬಂತು.  ಅಂತಹ ಸಂದಿಘ್ದ ಪರಿಸ್ಥಿತಿಯ ರೋಲ್ ಮಾಡುವ ಧರ್ಯವಹಿಸಿದೆ.  ಹಾಗಾಗಿ ನಿಜ ಹೇಳಬೇಕೆಂದರೆ, ಬಾವರ್ಚಿ ನನಗೆ ತೋಚಿದಂತೆ ನಟಿಸುವ ಸ್ವಾತಂತ್ರ್ಯವನ್ನು ಕೊಟ್ಟಿತೆಂದು ನನಗೆ ಅನ್ನಿಸಿ,  ನಾನೇ ನಿರ್ಧರಿಸಿರುವುದಾಗಿದೆ.   

ಪಾತ್ರಗಳನ್ನು ನಿರ್ವಹಿಸಿದ ಕಲಾಕಾರರು :

ರಾಜೇಶ್ ಖನ್ನಾ, :  ರಘು, ಪ್ರೊ. ಪ್ರಭಾಕರ್,

ಜಯಭಾದುರಿ  :  ಕೃಷ್ಣ ಶರ್ಮ,

ಅಸ್ರಾನಿ  : ವಿಶ್ವನಾಥ ಶರ್ಮ,

ಹರಿಂದ್ರ ನಾಥ್ ಚಟ್ಟೋಪಾಧ್ಯಾಯ್  : ಶಿವನಾಥ್ ಶರ್ಮ ದಾದೂಜಿ,

ಎ. ಕೆ. ಹಂಗಲ್  : ರಾಮನಾಥ್ ಶರ್ಮ,

ದುರ್ಗಾ ಕೋಟೆ  : ಸೀತಾ ಶರ್ಮ,

ಮನಿಷಾ :  ಮಿತಾ ಶರ್ಮ,

ಕಾಲಿ ಬ್ಯಾನರ್ಜಿ : ಕಾಶೀನಾಥ್ ಶರ್ಮ, 

ಉಷಾ ಕಿರಣ್ :  ಶೋಭಾ ಶರ್ಮ,

ರಾಜೂ ಶ್ರೇಷ್ಠ :  ಪಿಂಟು ಶರ್ಮ

ಪೈಂತಲ್  : ಗುರೂಜಿ, ಮೀತಳ  ಗುರು, 

ಸಿಮಾ ಕಪೂರ್, : ನೃತ್ಯ ಗುರು ೨, 

ನಿರ್ದೇಶಕ  : ಹೃಷಿದಾ, 

ನಿರ್ಮಾಪಕ :  ಹೃಷಿದಾ, ಏನ್. ಸಿ. ಸಿಪ್ಪಿ, ರೋಮು ಏನ್. ಸಿಪ್ಪಿ

ಪಟ್ಕಥೆ  : ಹೃಷಿದಾ, 

ಕತೆ  : ತಪನ್ ಸಿನ್ಹಾ

ಸಂಭಾಷಣೆ : ಗುಲ್ಜಾರ್, 

ಸಂಪಾದನೆ  : ದಾಸ್ ಧೈಮಡೆ, 

ಕ್ಯಾಮರಾ :  ಜಯವಂತ್ ಪಥಾರೆ, 

ಆರ್ಟ್ ನಿರ್ದೇಶಕ : ಅಜಿತ್ ಬ್ಯಾನರ್ಜಿ,

ಅನಿಮೇಷನ್ :  ನೈಕ್ ಸಟಮ್,

ಕೊರಿಯೋಗ್ರಫಿ :  ಗೋಪಿ ಕೃಷ್ಣಾ 

ಪ್ರಸ್ತುತಿ  : ಅಮಿತಾಭ್ ಬಚ್ಚನ್,  

ಗೀತರಚನೆ (ಸಾಹಿತ್ಯ) :  ಕೈಫಿ ಆಜ್ಮಿ 

ಹೇ ಗುಡ್ ಮಾರ್ನ್ಮಿಂಗ್ : ಗುಳ್ಝರ್ ಬರೆದರು.  

ಸಂಗೀತ : ಮದನ್ ಮೋಹನ್ 

ಗೀತೆಗಳು :

೧. ಬೋರ್ ಆಯಿ ಗಯಾ ಅಂಧಿಯರಾ :  ಕಿಶೋರ್ ಕುಮಾರ್, ಮನ್ನಾಡೆ, ನಿರ್ಮಲ ದೇವಿ, ಹರೀನ್ದ್ರನಾಥ ಚಟ್ಟೋಪಾಧ್ಯಾಯ್, ಲಕ್ಷ್ಮೀ ಶಂಕರ್, 

೨. ಕಾಹೇ ಕಾನ್ಹಾ ಕರತ್ ಬರ್ಜೋರಿ : ಲಕ್ಷ್ಮೀ ಶಂಕರ್,

೩. ಮಸ್ತ್  ಪವನ್, ಡೊಲೆ ರೇ  : ಲತಾ ಮಂಗೇಶ್ಕರ್,

೪. ಮೊರೆ ನೈನಾ ಬಹಾಯೆನ್ ನೀರ್  : ಲತಾ ಮಂಗೇಶ್ಕರ್ 

೫. ಪಹ್ಲೇ ಮನ್ನಣೆ , ಫಿರ್ ಸಿನಾಜೋರಿ : ಕುಮಾರಿ ಫಯಾಜ್, 

೬. ತುಮ್  ಬಿನ್ ಜೀವನ್ :  ಮನ್ನಾಡೇ,

೭. ಹೇ ಗುಡ್ ಮಾರ್ನ್ಮಿಂಗ್ : ಕಿಶೋರ್, ಆಶಾ, ಲಕ್ಷ್ಮಿ ಶಂಕರ್, ನಿರ್ಮಲ ದೇವಿ, ಹರೀನ್ದ್ರ ನಾಥ ಚಟ್ಟೋಪಾಧ್ಯಾಯ್  

ಪ್ರಶಸ್ತಿಗಳು :

 * ೧೯೭೩ ರಲ್ಲಿ ರಾಜೇಶ್ ಖನ್ನಾ -ಅತ್ಯುತ್ತಮ ನಟ BFJA ಪ್ರಶಸ್ತಿ 

 * ೧೯೭೩ : ಪೆಂಟಾಲ್- ಫಿಲಂಫೇರ್ ನ ಅತ್ಯುತ್ತಮ ಹಾಸ್ಯ ನಟನ ಪ್ರಶಸ್ತಿ 

ಆಭಾರ ಮನ್ನಣೆ : ವಿಕಿಪೀಡಿಯ, ಮತ್ತು ಅಂತರ್ಜಾಲದ ಕೆಲವು ಮಾಹಿತಿ ತಾಣಗಳು 

-ಎಚ್ಚಾರೆಲ್ 

Rating
Average: 4 (1 vote)